Thursday, 12th December 2024

ಸಂವಹನ: ಕೈಹಿಡಿದರೆ ರುಚಿಕಟ್ಟು, ಕೈಕೊಟ್ಟರೆ ಎಡವಟ್ಟು !

ರಸದೌತಣ

ಯಗಟಿ ರಘು ನಾಡಿಗ್

ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು’, ‘ಮಾತೇ ಮುತ್ತು, ಮಾತೇ ಮೃತ್ಯು’, ‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’, ‘ಬಾಯಿಬಿಟ್ರೆ ಬಣ್ಣಗೇಡು- ಹೀಗೆ ಮಾತಿನ ಕುರಿತಾಗಿರುವ ಜಾಣನುಡಿಗಳನ್ನು ಪಟ್ಟಿಮಾಡುತ್ತಾ ಹೋದರೆ ಹೇರಳವಾಗಿ ಸಿಕ್ಕಾವು.

ನಿರ್ದಿಷ್ಟ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹೊಮ್ಮುವ ಸಕಾರಾತ್ಮಕ -ಲಶೃತಿ ಅಥವಾ ವ್ಯತಿರಿಕ್ತ ಪರಿಣಾಮಕ್ಕೆ ಮಾತೇ ಬಹುತೇಕ ಸಂದರ್ಭಗಳಲ್ಲಿ ಕಾರಣವಾಗಿರುತ್ತದೆ ಎಂಬುದೂ ಸತ್ಯವೇ. ‘ಅವನು ಬಿಡಪ್ಪಾ, ಮಾತಲ್ಲಿ ತುಂಬಾ ಚಾಲಾಕಿ. ಕಸವನ್ನು ಕೊಟ್ರೂ ಬಣ್ಣಬಣ್ಣದ ಮಾತು ಸೇರಿಸಿ ಅದನ್ನ ಮಾರಿಬಿಡ್ತಾನೆ’ ಎಂದು ಯಾರೋ ಒಬ್ಬನ ಕುರಿತಾಗಿ ಮತ್ತೊಬ್ಬರು ಮೆಚ್ಚುಗೆಯ ಮಾತಾಡುವುದನ್ನು ನೀವು ಕೇಳಿರಬಹುದು. ಕಸದಂಥ ತ್ಯಾಜ್ಯಕ್ಕೂ ‘ಮಾರಾಟವಾಗಬಲ್ಲ ಸಾಮರ್ಥ್ಯ’ ದಕ್ಕುವುದು ಪರಿಣಾಮಕಾರಿ ಮಾತುಗಾರಿಕೆಯಿಂದಲೇ ಎಂಬ ಗ್ರಹಿಕೆಗೆ ಇದು ಪುಷ್ಟಿ ನೀಡುತ್ತದೆಯಲ್ಲವೇ? ಮೊಘಲ್ ಸಾಮ್ರಾಟ ಅಕ್ಬರನ ಆಸ್ಥಾನದಲ್ಲಿದ್ದ ಚತುರಮಂತ್ರಿ ಬೀರ್‌ಬಲ, ತನ್ನ ಮಾತುಗಾರಿಕೆ, ಸಮಯಸೂರ್ತಿ, ಜಾಣತನಕ್ಕೆ ಹೆಸರಾಗಿದ್ದವ.

ಒಮ್ಮೆ ಅಕ್ಬರನ ಆಸ್ಥಾನಕ್ಕೆ ಪರದೇಶದ ಖ್ಯಾತ ಹಸ್ತಸಾಮುದ್ರಿಕಾ ಪಂಡಿತನೊಬ್ಬ ಬಂದ, ತನ್ನ ಪಾಂಡಿತ್ಯದ ಕುರಿತು ಇನ್ನಿಲ್ಲದಂತೆ ಜಂಬ ಕೊಚ್ಚಿಕೊಂಡ. ಕುತೂಹಲಗೊಂಡ ಅಕ್ಬರ್ ಆತನಿಗೆ ತನ್ನ ಹಸ್ತವನ್ನು ತೋರಿಸಿದಾಗ, ಕೆಲಕ್ಷಣ ಅವಲೋಕಿಸಿ ಲೆಕ್ಕಾಚಾರ ಹಾಕಿದ ಆ ಪಂಡಿತ, ‘ನಿಮ್ಮ
ಬಂಧುಗಳೆ ನಿಮ್ಮ ಕಣ್ಣೆದುರೇ ಮರಣ ಹೊಂದುತ್ತಾರೆ’ ಎಂದು ಭವಿಷ್ಯ ನುಡಿದ. ಇದನ್ನು ಕೇಳಿ ಕೋಪಗೊಂಡ ಅಕ್ಬರ್, ‘ಈ ಪಂಡಿತನ ಶಿರಚ್ಛೇದ
ಮಾಡಿ’ ಎಂದು ಭಟರಿಗೆ ಆಜ್ಞಾಪಿಸಿದ.

ಭಯದಿಂದ ಥರಗುಟ್ಟಿ ನಡುಗತೊಡಗಿದ ಆ ಪಂಡಿತನು ಸಹಾಯಕ್ಕೆ ಅಂಗಲಾಚುವವನಂತೆ ಬೀರ್‌ಬಲ ಕಡೆಗೆ ನೋಡಿದಾಗ, ಅವನ ನೆರವಿಗೆ ಧಾವಿಸುವ ಬೀರ್‌ಬಲ್, ಅಕ್ಬರ್‌ನನ್ನು ಉದ್ದೇಶಿಸಿ, ‘ಜಹಪನಾ, ಪಂಡಿತರು ಹೇಳಿ ದ್ದನ್ನು ನೀವು ಸರಿಯಾಗಿ ಗ್ರಹಿಸಲಿಲ್ಲ; ನಿಮ್ಮ ಬಂಧುಗಳೆಲ್ಲರಿಗಿಂತ ನೀವು ಹೆಚ್ಚು ಕಾಲ ಬದುಕುತ್ತೀರಿ ಅಂತ ಅವರು ಹೇಳಿದ್ದು…’ ಎಂದು ತೇಪೆ ಹಚ್ಚಿದ. ಪ್ರಸನ್ನಗೊಂಡ ಅಕ್ಬರ್ ಆ ಪಂಡಿತನನ್ನು ಸನ್ಮಾನಿಸಿ ಉಡುಗೊರೆ ನೀಡಿ ಕಳಿಸಿದ. ಪಂಡಿತ ಮೊದಲಿಗೆ ಹೇಳಿದ ಭವಿಷ್ಯವೂ ಅದೇ, ಬೀರ್‌ಬಲ ಅದಕ್ಕೆ ತೇಪೆಹಚ್ಚಿ ಹೇಳಿದ ರೂಪಾಂತರಿತ ಭವಿಷ್ಯದ ಅರ್ಥವೂ ಅದೇ!

ಉತ್ತಮ ಮಾತುಗಾರಿಕೆಗೆ, ಸಮಯಸ್ಪೂರ್ತಿಗೆ ಇದೊಂದು ಉದಾಹರಣೆ. ಉತ್ತಮ ಮಾತುಗಾರಿಕೆಗೆ ಅಗತ್ಯವಾಗುವ ಗುಣ- ವಿಶೇಷಗಳು, ಉತ್ತಮ ಬರಹಗಾರಿಕೆಗೂ ಬೇಕಾಗುತ್ತವೆ. ಒಟ್ಟಾರೆ ಹೇಳುವುದಾದರೆ, ಉತ್ತಮ ಮಾತು/ಬರಹವನ್ನು ಅವಿಭಾಜ್ಯ ಅಂಗವಾಗಿ ಹೊಂದಿರುವ ‘ಸಂವಹನಾ ಕಲೆ’
ವ್ಯಕ್ತಿಯೊಬ್ಬನ ಯಶಸ್ಸಿನಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಉತ್ತಮ ಮಾತುಗಾರರು ಕೇಳುಗರೊಂದಿಗೆ ಸಮರ್ಥವಾಗಿ ಸಂವಹಿಸಿ ಮನಗೆದ್ದು, ಹೇಳಬೇಕಾದುದನ್ನು ಪರಿಣಾಮಕಾರಿಯಾಗಿ ಹೇಳಿದರೆ, ಬರಹಗಾರಿಕೆಯನ್ನು ಅಸ್ತ್ರವಾಗಿ ಹೊಂದಿದವರು ಸಾಹಿತಿ, ಪತ್ರಕರ್ತ, ಅಂಕಣಕಾರ ರಾಗಿ, ಜಾಹೀರಾತು ಪ್ರಪಂಚದಲ್ಲಿನ ‘ಕಂಟೆಂಟ್ ರೈಟರ್’ ಗಳಾಗಿ ಮಿಂಚುತ್ತಾರೆ, ಓದುಗರ ಹೃದಯದಲ್ಲಿ ಚಿರಸ್ಥಾಯಿಯಾಗುತ್ತಾರೆ. ಉತ್ತಮ ಸಂವಹನೆ ದೈನಂದಿನ ಜೀವನಕ್ಕೂ ಅನ್ವಯ.

ಸಹೋದ್ಯೋಗಿಗಳೊಂದಿಗಿರಲಿ, ಸಂತೆಯಲ್ಲಿರಲಿ, ಸಾಮಾಜಿಕ ಚಟುವಟಿಕೆಯ ತೊಡಗಿಸಿಕೊಂಡಿರಲಿ, ‘ಸಂವಹನಾಕ್ರಮ’ ಚೆನ್ನಾಗಿದ್ದರೆ ಕಾರ್ಯಸಿದ್ಧಿ,  ಜೀವನವೂ ಸೊಗಸು. ನಿಗದಿತ ಗುರಿಗೆ ಅಥವಾ ಹಾಕಿಕೊಂಡ ಯೋಜನೆಗೆ ಯಶಸ್ಸು ದಕ್ಕಿಸಿಕೊಡುವ ‘ಅಗಾಧಶಕ್ತಿ’ ಅಥವಾ ಅವನ್ನು ಗಬ್ಬೆಬ್ಬಿಸಿ
ನಿರರ್ಥಕವಾಗಿಸುವ ‘ಕರಾಳಶಕ್ತಿ’ ಈ ಎರಡೂ ಸಂವಹನಾ ಕ್ರಮಕ್ಕಿದೆ ಎಂಬುದು ಬಲ್ಲವರ ಮಾತು. ಅದರಲ್ಲೂ, ನಿರ್ದಿಷ್ಟ ವಿಷಯವನ್ನು ಸಾವಿರಾರು
ಜನರಿಗೆ ಮುಟ್ಟಿಸುವಾಗ, ಅದರ ಆಳ-ವ್ಯಾಪ್ತಿ-ಪ್ರಾಮುಖ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಮುಂದುವರಿದರೆ, ಒಂದೋ ನಿರೀಕ್ಷಿತ ಫಲ ಸಿಗುವುದಿಲ್ಲ, ಇಲ್ಲವೇ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟಬುತ್ತಿ!

ಇನ್ನು ಕಚೇರಿಗಳಲ್ಲಿ, ಮೇಲಧಿಕಾರಿಗಳಿಂದ ಬಂದ ಲಿಖಿತ ಸಂದೇಶವನ್ನು ಅಧೀನ ಸಿಬ್ಬಂದಿಗೆ ಯಥಾವತ್ತಾಗಿ ವರ್ಗಾಯಿಸದೆ ಮತ್ತಷ್ಟು ‘ಇಂಪ್ರೂವೈಸ್’ ಮಾಡುವ ಭ್ರಮೆಯಲ್ಲಿ ಅದಕ್ಕೆ ತಮ್ಮದೊಂದಿಷ್ಟು ‘ರೆಕ್ಕೆ-ಪುಕ್ಕ’ ಜೋಡಿಸುವ, ಇಲ್ಲವೇ ಲಿಖಿತ ಆದೇಶದ ಸಾರಸಂಗ್ರಹ ರೂಪವನ್ನಷ್ಟೇ ಅಧೀನ ಸಿಬ್ಬಂದಿಗೆ ಕಳಿಸಿದರೆ ಸಾಕು ಎಂಬ ತೆವಲಿಗೆ ಬಿದ್ದು, ಮೂಲಬರಹಕ್ಕೆ ಬೇಕಾಬಿಟ್ಟಿಯಾಗಿ ಕತ್ತರಿಹಾಕುವ ‘ಅಧಿಕಾರಿಶಾಹಿ’ ಮನೋಭಾವದಿಂದಾಗಿ,
ಸದರಿ ಆದೇಶಗಳೇ ಎಷ್ಟೊಂದು ಆಘಾತಕಾರಿಯಾಗಿ ಪರಿಣಮಿಸಬಲ್ಲವು ಎಂಬುದನ್ನು ಸೂಚ್ಯವಾಗಿ ಹೇಳಲಿಕ್ಕೆ ಇಂದು ತಮಾಷೆಯ ಉದಾಹರಣೆ ಯನ್ನು ನೀಡಿರುವೆ.

ಇದು ಸುಮಾರು ೩೦ ವರ್ಷಗಳ ಹಿಂದೆ ರಸ್ತೆಬದಿಯ ಇಂಗ್ಲಿಷ್ ಪುಸ್ತಕವೊಂದರಲ್ಲಿ ನಾನು ಓದಿದ್ದ ಕೆಲವೇ ಸಾಲಿನ ಎಡವಟ್ಟಿನ ಪ್ರಸಂಗ. ಇದನ್ನು ‘ಸುತ್ತೋಲೆಯ ಸುತ್ತಾಟದ ಸಂಭ್ರಮ’ ಎಂಬ ಹೆಸರಿನಲ್ಲಿ ಕನ್ನಡದ ಸಂದರ್ಭಕ್ಕೆ ಬದಲಿಸಿ, ಇನ್ನಷ್ಟು ಉಪ್ಪು-ಹುಳಿ-ಖಾರ ಸೇರಿಸಿದ್ದೇನೆ. ಈಗಾಗಲೇ ಒಂದೆರಡು ವೇದಿಕೆಗಳಲ್ಲಿ ಇದನ್ನು ಉಲ್ಲೇಖಿಸಿ ರುವೆನಾದರೂ, ವಿಷಯದ ಪ್ರಸ್ತುತತೆಯ ಕಾರಣದಿಂದ ಮತ್ತೊಮ್ಮೆ ಇದರ ರುಚಿನೋಡಲು ಅಡ್ಡಿಯಿಲ್ಲ!

ಡೆಪ್ಯುಟಿ ಜನರಲ್ ಮ್ಯಾನೇಜರ್‌ರಿಂದ ಮ್ಯಾನೇಜರ್‌ಗೆ ಬಂದ ಸುತ್ತೋಲೆ

ಆತ್ಮೀಯರೇ, ಆಗ ೧೫ನೇ ತಾರೀಖು ಭಾರತೀಯರೆಲ್ಲರಿಗೂ ಮರೆಯಲಾಗದ ದಿನ. ಏಕೆಂದರೆ, ಅದು ನಮಗೆ ಸ್ವಾತಂತ್ರ್ಯ ಸಿಕ್ಕ ದಿನ. ಅದೇ ರೀತಿ, ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಅದು ಅತ್ಯಂತ ಮಹತ್ವದ ದಿನ. ಏಕೆಂದರೆ, ಅದು ನಮ್ಮ ಕಾರ್ಖಾನೆಯ ಸಂಸ್ಥಾಪನಾ ದಿನವೂ ಹೌದು. ಈ ಸಂತೋಷದ ಸಂದರ್ಭದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಸೂರ್ಯ ಅವರು ನಮ್ಮ ಕಾರ್ಖಾನೆಗೆ ಭೇಟಿ ನೀಡಿ, ಪ್ರತಿ ಸಿಬ್ಬಂದಿಯನ್ನೂ ವೈಯಕ್ತಿಕವಾಗಿ ಮಾತನಾಡಿಸಿ ಶುಭಾಶಯ ಕೋರಲಿದ್ದಾರೆ.

ಆದ ಕಾರಣ, ಪುರುಷ ಮತ್ತು ಮಹಿಳಾ ಸಿಬ್ಬಂದಿಯೆಲ್ಲರೂ ತಂತಮ್ಮ ಸಮವಸಗಳನ್ನು ಧರಿಸಿ, ಕಾರ್ಖಾನೆಯ ಕ್ಯಾಂಟೀನನ್ನೂ ಸಿಂಗರಿಸಿ, ಅ ಒಂದೆಡೆ ಸೇರಬೇಕೆಂದು ಈ ಮೂಲಕ ಕೋರಲಾಗಿದೆ. ಇದೇ ದಿನದಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದ್ದು, ೨೨ ನಿಮಿಷ ಅವಧಿಯ ಈ ವಿದ್ಯಮಾ ನವನ್ನು ನೋಡಲೆಂದು ಹಾಗೂ ಗ್ರಹಣದ ನಂತರ ಸೂರ್ಯ ಮೋಡಗಳಲ್ಲಿ ಮರೆಯಾಗುವ ಅಪೂರ್ವ ದೃಶ್ಯವನ್ನು ವೀಕ್ಷಿಸಲೆಂದು ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ವಿಶೇಷ ಟೆಲಿಸ್ಕೋಪ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಪರೂಪದ ಈ ವಿದ್ಯಮಾನ ಪ್ರತಿದಿನ ಸಂಭವಿಸುವುದಿಲ್ಲ ವಾದ್ದರಿಂದ, ಈ ಸದವಕಾಶ ಯಾವುದೇ ಕಾರಣಕ್ಕೆ ಕೈಜಾರಿ ಹೋಗದಂತೆ ಸದುಪಯೋಗಪಡಿಸಿಕೊಳ್ಳಬೇಕಾಗಿ ಮತ್ತೊಮ್ಮೆ ಕೋರಲಾಗಿದೆ. ಈ ಸಂದರ್ಭವನ್ನು ಇನ್ನೂ ಮಹತ್ವಪೂರ್ಣ ವಾಗಿಸಲು ಪ್ರದರ್ಶನವೊಂದನ್ನು ಏರ್ಪಡಿಸಲಾಗಿದ್ದು, ಆಗೊಮ್ಮೆ-ಈಗೊಮ್ಮೆ ನೀಲಿಬಣ್ಣದ ಮೊಟ್ಟೆಗಳ ನ್ನಿಡುವ ತಮ್ಮ ಕೋಳಿಯನ್ನು ಧಾರವಾಡದ ರೈತರೊಬ್ಬರು ಪ್ರದರ್ಶಿಸಲಿದ್ದಾರೆ. ಈ ಪ್ರದರ್ಶನದಲ್ಲಿ ಭಾಗವಹಿಸಿ, ಇಡೀ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಸಮಸ್ತ ಸಿಬ್ಬಂದಿಯನ್ನೂ ಈ ಮೂಲಕ ಕೋರಲಾಗಿದೆ.

ಮ್ಯಾನೇಜರ್‌ರಿಂದ ವರ್ಕ್ಸ್ ಮ್ಯಾನೇಜರ್‌ಗೆ ಬಂದ ಪರಿಷ್ಕೃತ ಸುತ್ತೋಲೆ ನಮ್ಮ ಕಾರ್ಖಾನೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ರವರ ಆದೇಶದಂತೆ ಆಗ ೧೫ ನಮ್ಮ ಸ್ವಾತಂತ್ರ್ಯದ ದಿನವಾಗಿರುತ್ತದೆ. ಈ ಮಹತ್ವದ ದಿನವು ನಮ್ಮ ಕಾರ್ಖಾನೆಯ ಸಂಸ್ಥಾಪನಾ ದಿನವೂ ಆಗಿರುವುದರಿಂದ, ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಸಂತೋಷದ ಸಂದರ್ಭದಲ್ಲಿ ನಮ್ಮ ಜನರಲ್ ಮ್ಯಾನೇಜರ್ ಸೂರ್ಯ ಅವರು ಪ್ರತಿಯೊಬ್ಬ ಸಿಬ್ಬಂದಿಯನ್ನೂ ಭೇಟಿಯಾಗಲಿದ್ದಾರೆ.

ಆದ ಕಾರಣ, ಸಮವಸ್ತ್ರಗಳಿಂದ ಕ್ಯಾಂಟೀನನ್ನು ಸಿಂಗರಿಸಲೆಂದು ಒಂದೆಡೆ ಸೇರಲು ಹಾಗೂ ೨೨ ನಿಮಿಷಗಳ ಗ್ರಹಣದ ನಂತರ ಜನರಲ್ ಮ್ಯಾನೇಜರ್ ಸೂರ್ಯ ಅವರು ವಿಶೇಷ ಟೆಲಿಸ್ಕೋಪ್ ಮೂಲಕ ಮೋಡಗಳಲ್ಲಿ ಮರೆಯಾಗುವ ಅಪೂರ್ವದೃಶ್ಯವನ್ನು ವೀಕ್ಷಿಸಲು ಪುರುಷ ಮತ್ತು ಮಹಿಳಾ ಸಿಬ್ಬಂ
ದಿಯನ್ನು ಈ ಮೂಲಕ ಕೋರಲಾಗಿದೆ. ಈ ಸಂತೋಷದ ಸಂದರ್ಭದಲ್ಲಿ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದ್ದು, ತಾವು ಆಗೊಮ್ಮೆ-ಈಗೊಮ್ಮೆ ನೀಲಿಬಣ್ಣದ ಮೊಟ್ಟೆಗಳನ್ನು ಇಡುವ ರೀತಿಯನ್ನು ಧಾರವಾಡದ ರೈತರೊಬ್ಬರು ಪ್ರದರ್ಶಿಸಲಿದ್ದಾರೆ. ಇದು ಪ್ರತಿದಿನ ನಡೆಯುವುದಿಲ್ಲವಾದ್ದರಿಂದ,
ತಾವು ಈ ಪ್ರದರ್ಶನದಲ್ಲಿ ಭಾಗವಹಿಸಿ, ಇಡೀ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ಅಸಿಸ್ಟೆಂಟ್ ಮ್ಯಾನೇಜರ್‌ಗೆ ಬಂತು ಪುನರ್-ಪರಿಷ್ಕೃತ ಸುತ್ತೋಲೆ

ನಮ್ಮ ಕಾರ್ಖಾನೆಯ ಸಂಸ್ಥಾಪನಾ ದಿನವಾಗಿರುವ ಆಗ ೧೫ರಂದು ನಮ್ಮ ಜನರಲ್ ಮ್ಯಾನೇಜರ್ ಸೂರ್ಯ ಅವರು ಕಾರ್ಖಾನೆಗೆ ಭೇಟಿನೀಡಲಿರುವು ದರಿಂದ, ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದು ನಮ್ಮ ಸ್ವಾತಂತ್ರ್ಯದ ದಿನವೂ ಆಗಿರುವುದರಿಂದ, ಪುರುಷ ಮತ್ತು ಮಹಿಳಾ ಸಿಬ್ಬಂದಿ ಕಾರ್ಖಾನೆಯಿಂದ ಸ್ವಾತಂತ್ರ್ಯವನ್ನು ಪಡೆಯುವ ಸಲುವಾಗಿ
ತಂತಮ್ಮ ಸಮವಸಗಳಿಂದ ಕಾರ್ಖಾನೆಯ ಕ್ಯಾಂಟೀನನ್ನು ಸಿಂಗರಿಸಿ, ಅ ‘ಪರಸ್ಪರ’ ಸೇರಬೇಕೆಂದು ಈ ಮೂಲಕ ಕೋರಲಾಗಿದೆ. ಪ್ರತಿ ಸಿಬ್ಬಂದಿಯನ್ನೂ ಭೇಟಿಯಾದ ನಂತರ ಜನರಲ್ ಮ್ಯಾನೇಜರ್ ಸೂರ್ಯ ಅವರು ವಿಶೇಷ ಟೆಲಿಸ್ಕೋಪ್‌ಗಳ ಮೂಲಕ ಕಣ್ಮರೆಯಾಗುವುದನ್ನು ನೀವೆ ನೋಡಬಹು ದಾಗಿದೆ.

ಈ ಘಟನೆ ಪ್ರತಿದಿನ ನಡೆಯುವುದಿಲ್ಲವಾದ್ದರಿಂದ, ಈ ಸಂತೋಷದ ಸಂದರ್ಭದಲ್ಲಿ ನೀಲಿಬಣ್ಣದ ಮೊಟ್ಟೆ ಇಡುವ ಪ್ರದರ್ಶನ ಏರ್ಪಡಿಸಲಾಗಿದ್ದು, ಪುರುಷ ಮತ್ತು ಮಹಿಳಾ ಸಿಬ್ಬಂದಿ ಇದರಲ್ಲಿ ಭಾಗವಹಿಸಿ ಇಡೀ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ಅ.ಮ್ಯಾನೇಜರ್‌ರಿಂದ ಫೋರ್‌ಮನ್‌ಗೆ ಬಂದ ಸಾರಸಂಗ್ರಹದ ಸುತ್ತೋಲೆ

ನಮ್ಮ ವರ್ಕ್ಸ್ ಮ್ಯಾನೇಜರ್ ಆಜ್ಞೆಯಂತೆ, ಸಮವಸ್ತ್ರದಿಂದ ಸಿಂಗರಿಸಿಕೊಂಡ ನಮ್ಮ ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಆಗ ೧೫ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ.

ಈ ಸಂದರ್ಭದಲ್ಲಿ ಪ್ರತಿ ಸಿಬ್ಬಂದಿಯನ್ನೂ ಭೇಟಿಯಾಗುತ್ತಿದ್ದಂತೆ ನಮ್ಮ ಜನರಲ್ ಮ್ಯಾನೇಜರ್ ಸೂರ್ಯ ನಮ್ಮಿಂದ ಕಣ್ಮರೆಯಾಗಲಿದ್ದಾರೆ. ಇಂಥ
ಸಂತೋಷದ ಸಂದರ್ಭವು ಪ್ರತಿದಿನ ನಡೆಯುವುದಿಲ್ಲವಾದ್ದರಿಂದ, ಪುರುಷ ಮತ್ತು ಮಹಿಳಾ ಸಿಬ್ಬಂದಿ ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ‘ಪರಸ್ಪರ’ ಸೇರಿ ನಲಿದು, ತರುವಾಯದಲ್ಲಿ ನೀಲಿಬಣ್ಣದ ಮೊಟ್ಟೆಗಳನ್ನು ಇಡಬೇಕೆಂದು ಈ ಮೂಲಕ ಕೋರಲಾಗಿದೆ.

***

ಉಪಸಂಹಾರ: ವಿಷಯಗ್ರಹಿಕೆಯಲ್ಲಿನ ಕೊರತೆಗೆ, ವಿಷಯವನ್ನು ಸಂಕ್ಷೇಪಿಸಿ ಮರುರೂಪಿಸುವಾಗಿನ ನಿರ್ಲಕ್ಷ್ಯಕ್ಕೆ ಮೇಲೆ ಉಲ್ಲೇಖಿಸಿರುವ ಎಡವಟ್ಟಿನ ಪ್ರಸಂಗ ಒಂದು ಉದಾಹರಣೆಯಾದೀತು. ಕೊನೇ ಕ್ಷಣದಲ್ಲಿ ವಿಷಯವನ್ನು ಸಿದ್ಧಪಡಿಸುವಾಗಿನ ಗಡಿಬಿಡಿಯಿಂದಾಗಿ ವಾಕ್ಯರಚನೆಯಲ್ಲಿ ಅಲ್ಪವಿರಾಮ, ಪೂರ್ಣವಿರಾಮದಂಥ ‘ವಿರಾಮಚಿಹ್ನೆ’ಗಳಿಗೇ ‘ವಿರಾಮ’ ನೀಡುವುದರಿಂದ ಅಥವಾ ಅವನ್ನು ಬೇಡದ ಸ್ಥಳದಲ್ಲಿ ಬಳಸುವುದರಿಂದಲೂ ಸಾಕಷ್ಟು ಅಧ್ವಾನಗಳಾಗುತ್ತವೆ, ಅವು ತಮಾಷೆಗೆ ಆಹಾರವಾಗುತ್ತವೆ. ಅಂಥ ಕೆಲ ನಿದರ್ಶನಗಳನ್ನು ಮುಂದೆ ನೋಡೋಣ.

s