ರಕ್ತಚರಿತೆ
ಗಣೇಶ್ ಭಟ್ ವಾರಣಾಸಿ
ವರ್ತಮಾನದಲ್ಲಿ ಕಮ್ಯುನಿಸ್ಟ್ ಸರ್ವಾಧಿಕಾರಕ್ಕೆ ಜ್ವಲಂತ ಸಾಕ್ಷಿಯಾಗಿವೆ ಚೀನಾ, ಉತ್ತರ ಕೊರಿಯಾ, ಕ್ಯೂಬಾ. ಚೀನಿಯರು ಈಗಲೂ ಸರಕಾರದ ಕಪಿಮುಷ್ಟಿಯಲ್ಲೇ ಇದ್ದಾರೆ. ೧೯೮೯ರಲ್ಲಿ ತಿಯಾನ್ಮೆನ್ ಚೌಕದಲ್ಲಿ ಸರಕಾರದ ವಿರುದ್ಧ ಪ್ರತಿಭಟಿಸಿದ್ದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಟ್ಯಾಂಕ್ ಹರಿಸಿ ಕೊಲ್ಲಲಾಯಿತು.
ಜಗತ್ತಿನ ಇತಿಹಾಸದಲ್ಲಿ ವಿವಿಧ ಬಗೆಯ ಹತ್ಯಾಕಾಂಡಗಳು ನಡೆದಿವೆ. ಜರ್ಮನಿಯ ನಾಜಿ ಪ್ರತಿಪಾದಕ ಅಡಾಲ್ ಹಿಟ್ಲರ್, ‘ಹೋಲೋಕಾಸ್ಟ್’ ಹೆಸರಿನಲ್ಲಿ ಸಾಯಿಸಿದ ಯೆಹೂದಿ ಗಳ ಸಂಖ್ಯೆ ಸುಮಾರು ೨ ಕೋಟಿ. ಇಟಲಿಯ ಫ್ಯಾಸಿಸ್ಟ್ ನಾಯಕ ಬೆನಿಟೊ ಮುಸೊಲಿನಿ ಯಿಂದ ಸತ್ತವರು ೪.೫ ಲಕ್ಷ ಮಂದಿ. ಕಾಂಬೋಡಿಯಾದಲ್ಲಿ ಪೋಲ್ ಪಾಟ್ ಮತ್ತು ಖೆಮರ್ ರೂಜ್ಗಳ ದೌರ್ಜನ್ಯದಿಂದಾಗಿ ಸತ್ತವರು ಸುಮಾರು ೨೦ ಲಕ್ಷ ಜನ. ನಮ್ಮ ಪಠ್ಯಪುಸ್ತಕಗಳಲ್ಲಿ ಹಿಟ್ಲರ್, ಮುಸೊಲಿನಿ ಮತ್ತು ಪೋಲ್ ಪಾಟ್ಗಳು ನಡೆಸಿದ ಹತ್ಯೆಗಳ ಬಗ್ಗೆಯಷ್ಟೇ ಉಲ್ಲೇಖವಿದೆ.
ಆದರೆ ಜಗತ್ತಿನಲ್ಲಿ ಅತಿಹೆಚ್ಚು ರಕ್ತಪಾತ, ಹತ್ಯಾಕಾಂಡಗಳು ನಡೆದಿದ್ದು ಕಮ್ಯುನಿಸಂನ ಹೆಸರಲ್ಲಿ. ಇದು ಉತ್ಪ್ರೇಕ್ಷೆಯಲ್ಲ, ನಿಜ. ಕಮ್ಯುನಿಸಂನ ಜಾರಿಯ ನೆಪದಲ್ಲಿ ಜಗತ್ತಿನ ವಿವಿಧೆಡೆ ಸರ್ವಾಧಿಕಾರ ನಡೆಸಿದ ಕಮ್ಯುನಿಸ್ಟ್ ಮುಖಂಡರು ನಡೆಸಿದ ದೌರ್ಜನ್ಯ ಗಳಿಗೆ ಬಲಿಯಾದವರು ಸುಮಾರು ೧೦ ಕೋಟಿ ಮಂದಿ. ಇಂಥ ರಕ್ತಪಾತಗಳ ಬಗ್ಗೆ ನಮ್ಮ ಚರಿತ್ರೆಯಲ್ಲಿ ಉಲ್ಲೇಖಗಳು ಕಮ್ಮಿಯೇ; ಏಕೆಂದರೆ ಇವುಗಳ ಬಗ್ಗೆ ಬೆಳಕು ಚೆಲ್ಲಬೇಕಿದ್ದ ಬಹುತೇಕ ಚರಿತ್ರಕಾರರು, ಪತ್ರಕರ್ತರು ಮತ್ತು ‘ವಿದ್ವನ್ಮಂಡಲ’ದ ಸದಸ್ಯರು ಕಮ್ಯುನಿಸಂನಿಂದ ಪ್ರಭಾವಿತರಾದವರೇ!
ಇವರು ಕಮ್ಯುನಿಸ್ಟರ ದುರಾಚಾರದ ಬಗ್ಗೆ ಹೇಗೆ ದನಿಯೆತ್ತಿ ಯಾರು? ಹೀಗಾಗಿ ನಮ್ಮ ಮಾನವಿಕ ಶಾಸ್ತ್ರ ಮತ್ತು ಸಾಹಿತ್ಯದ ಪಠ್ಯಗಳಲ್ಲಿಂದು ಇದೇ ಕಮ್ಯುನಿಸಂ ಹಾಗೂ ಮಾರ್ಕ್ಸಿಸಂಗಳು ವೈಭವೀಕರಿಸಲ್ಪಟ್ಟಿವೆ. ಇದು ನಮ್ಮ ದುರದೃಷ್ಟ. ಕಮ್ಯುನಿಸ್ಟ್ ಸಿದ್ಧಾಂತದ ಮೂಲಪುರುಷ ಕಾರ್ಲ್ ಮಾರ್ಕ್ಸ್. ೧೮ನೇ ಶತಮಾನದಲ್ಲಿ ಜಗತ್ತು ಕೈಗಾರಿಕಾ ಕ್ರಾಂತಿಗೆ ಒಡ್ಡಿಕೊಂಡಿದ್ದ ಕಾಲದಲ್ಲಿ
‘ದಾಸ್ ಕ್ಯಾಪಿಟಲ್’ ಎಂಬ ಪುಸ್ತಕ ಬರೆದ ಈತ ತನ್ನ ಮಾರ್ಕ್ಸಿಸ್ಟ್ ವಾದವನ್ನು ಪ್ರತಿಪಾದಿಸಿದ.
ವರ್ಗಸಂಘರ್ಷವು ಈತನ ಪರಿಕಲ್ಪನೆಯಾಗಿದೆ. ‘ಹಳೆಯ ಊಳಿಗಮಾನ್ಯ ಪದ್ಧತಿಯು (ಫ್ಯೂಡಲ್ ಸಿಸ್ಟಮ್) ಬಂಡವಾಳ ಶಾಹಿತ್ವವಾಗಿ (ಕ್ಯಾಪಿಟಲಿಸಂ) ಬದಲಾಗಿದೆ’ ಎಂದು ಅಭಿಪ್ರಾಯಪಡುವ ಕಾರ್ಲ್ ಮಾರ್ಕ್ಸ್, ಅಂದಿನ ಸಮಾಜವನ್ನು ‘ಬೂರ್ಜ್ವಾ’ ಮತ್ತು ‘ಪ್ರೋಲಿಟೇರಿ ಯಟ್’ ಎಂದು ವರ್ಗೀಕರಿದ. ಬೂರ್ಜ್ವಾ ಗಳೆಂದರೆ ಉತ್ಪಾದನೆಯ ಮಾರ್ಗವನ್ನು ನಿಯಂ
ತ್ರಿಸುವ ಕೈಗಾರಿಕೆಗಳ ಬಂಡವಾಳಶಾಹಿ/ಖಾಸಗಿ ಮಾಲೀಕರು; ಪ್ರೋಲಿಟೇರಿಯಟ್ಗಳೆಂದರೆ ಕೈಗಾರಿಕೆಗಳಲ್ಲಿ ದುಡಿಯುವ ಶ್ರಮಿಕ ವರ್ಗದ ಬಡಜನರು. ಈ ಶ್ರಮಿಕ ಜನರು ತಮಗಲ್ಲದೆ ಮಾಲೀಕನ ಲಾಭಕ್ಕಾಗಿ ದುಡಿಯುತ್ತಾರೆ ಎಂಬುದು ಈತನ ಪ್ರತಿಪಾದನೆಯಾಗಿತ್ತು.
ಇದನ್ನಾತ ‘ಹೆಚ್ಚುವರಿ ಶ್ರಮ’ ಎಂದ. ಸಂಪತ್ತು ಮಾಲೀಕರಲ್ಲೇ ಕ್ರೋಡೀಕರಣಗೊಂಡಿರುವುದರಿಂದ ಶ್ರಮಿಕರು ಬಡವರಾಗೇ ಉಳಿದಿದ್ದಾರೆ ಎಂದು ವಾದಿಸಿದ. ‘ಎಲ್ಲಾ ಶ್ರಮಿಕರು ಒಂದು ದಿನ ಒಗ್ಗಟ್ಟಾಗಿ ಮಾಲೀಕರೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ; ಕೊನೆಗೆ ಮಾಲೀಕವರ್ಗವನ್ನು ನಾಶಮಾಡಿ ಅವರೇ ಕೈಗಾರಿಕೆಗಳ ಧಣಿಗಳಾಗುತ್ತಾರೆ. ತನ್ಮೂಲಕ ಸಂಪತ್ತು ಸಮಾನವಾಗಿ
ಹಂಚಲ್ಪಟ್ಟು ಸಮಾನ-ಸಮಾಜ ಸೃಷ್ಟಿಯಾಗುತ್ತದೆ’ ಎಂಬುದು ಕಾರ್ಲ್ ಮಾರ್ಕ್ಸ್ ಹರಿಯಬಿಟ್ಟ ಚಿಂತನೆ.
‘ಥೀಸಿಸ್ (ಶ್ರಮಿಕ ಬಡವರು) ಮತ್ತು ಆಂಟಿಥೀಸಿಸ್ (ಖಾಸಗಿ ಮಾಲೀಕರು) ನಡುವೆ ಸಂಘರ್ಷವೇರ್ಪಟ್ಟು ಕೊನೆಗೆ ಸಿಂಥೆಸಿಸ್ (ಶ್ರಮಿಕವರ್ಗದ ಕಮ್ಯುನಿಸ್ಟ್ ಸಮಾಜ) ರೂಪುಗೊಳ್ಳುತ್ತದೆ’ ಎಂದಿದ್ದ ಈತ ೧೮೪೮ರಲ್ಲಿ ಫ್ರೆಡರಿಕ್ ಏಂಜೆಲ್ಸ್ ಜತೆಗೂಡಿ, ಆಧುನಿಕ ಕಮ್ಯುನಿಸ್ಟ್ ಹೋರಾಟಕ್ಕೆ ಆಧಾರ ಒದಗಿಸುವ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ವನ್ನು ಬಿಡುಗಡೆ ಮಾಡಿದ. ‘ಬಂಡವಾಳಶಾಹಿತ್ವವು ಸ್ವಯಂನಾಶಗೊಂಡು, ಅಲ್ಲಿ ಸಮಾಜವಾದ ಮತ್ತು ಅಂತಿಮವಾಗಿ ಕಮ್ಯುನಿಸಂ ಪ್ರತಿಷ್ಠಾಪಿಸ ಲ್ಪಡುತ್ತದೆ’ ಎಂಬುದು ಕಮ್ಯುನಿಸ್ಟ್ ಮ್ಯಾನಿಫೆಸ್ಟೋದ ಪ್ರತಿಪಾದನೆ.
ಮಾರ್ಕ್ಸ್ನ ಕಮ್ಯುನಿಸ್ಟ್ ಸಿದ್ಧಾಂತ ಮೊದಲು ಜಾರಿಗೆ ಬಂದಿದ್ದು ರಷ್ಯಾದಲ್ಲಿ. ೧೫೪೭ರಿಂದ ರಷ್ಯಾ ಗದ್ದುಗೆಯಲ್ಲಿದ್ದ ಝಾರ್
ರಾಜವಂಶದ ನಿರಂಕುಶ ಆಡಳಿತದಿಂದಾಗಿ ಜನರು ಬೇಸತ್ತಿದ್ದರು (೧೮ ಮಂದಿ ಝಾರ್ ರೋಮನೋವ್ಗಳು ರಷ್ಯಾವನ್ನು ಆಳಿದ್ದಿದೆ). ಕೊನೆಯ ಝಾರ್ ದೊರೆ ೨ನೇ ನಿಕೋಲಸ್ ಅಂತೂ, ಪ್ರಜೆಗಳ ಮತ್ತು ಅಧಿಕಾರಿಗಳ ಭಾರಿ ಅಸಮಾಧಾನಕ್ಕೆ ತುತ್ತಾಗಿದ್ದ. ಹೀಗಾಗಿ ಒಂದಿಡೀ ರಷ್ಯಾದ ಜನ ರಾಜಸತ್ತೆಯ ವಿರುದ್ಧ ಭುಗಿಲೇಳಲು ಸನ್ನದ್ಧರಾಗಿದ್ದರು. ಈ ವೇಳೆ, ಮಾರ್ಕ್ಸಿಸ್ಟ್ ರಷ್ಯನ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯ ಭಾಗವಾಗಿದ್ದ ವ್ಲಾದಿಮಿರ್ ಲೆನಿನ್ ೧೯೦೩ರಲ್ಲಿ ಪ್ರತ್ಯೇಕಗೊಂಡು ಬೋಲ್ಷೆವಿಕ್ ಪಾರ್ಟಿಯನ್ನು ಕಟ್ಟಿದ. ಈ ಪಕ್ಷವು ಪ್ರಬಲಗೊಳ್ಳುತ್ತಾ ಹೋಯಿತು.
೧೯೧೭ರ ಅಕ್ಟೋಬರ್ನಲ್ಲಿ ನಡೆದ ಬೋಲ್ಷೆವಿಕ್ ಸಶಸ್ತ್ರ ಕ್ರಾಂತಿಯಿಂದಾಗಿ ಝಾರ್ ರಾಜಸತ್ತೆಯ ವೈಟ್ ಆರ್ಮಿಯು ಸೋತು, ನಿಕೋಲಸ್ ಮತ್ತು ಆತನ ಕುಟುಂಬದವರು ಬಂಧಿತರಾದರು ಮತ್ತು ರಷ್ಯಾದಲ್ಲಿ ಬೋಲ್ಷೆವಿಕ್ ಪಕ್ಷ ಅಧಿಕಾರಕ್ಕೆ ಬಂತು.
೧೯೧೮ರ ಜುಲೈ ೧೭ರಂದು ನಿಕೋಲಸ್, ಆತನ ಪತ್ನಿ ಅಲೆಗ್ಸಾಂಡ್ರಾ ಮತ್ತು ಮಕ್ಕಳು ಸೇರಿದಂತೆ ಒಟ್ಟು ೧೧ ಮಂದಿಯನ್ನು ಬೋಲ್ಷೆವಿಕ್ ಪಕ್ಷದವರು ಗುಂಡು ಹಾರಿಸಿ, ಬಂದೂಕಿನ ಬಾನೆಟ್ಟಿನಿಂದ ತಿವಿದು ಅಮಾನುಷವಾಗಿ ಕೊಂದರು. ಬೋಲ್ಷೆವಿಕ್ ಪಕ್ಷದ ಹೆಸರನ್ನು ‘ಆಲ್ ರಷ್ಯನ್ ಕಮ್ಯುನಿಸ್ಟ್ ಪಾರ್ಟಿ’ ಎಂದೂ, ರಷ್ಯಾದ ಹೆಸರನ್ನು ‘ಯುನೈಟೆಡ್ ಸ್ಟೇಟ್ ಆಫ್
ಸೋವಿಯತ್ ರಷ್ಯಾ’ ಎಂದು ಬದಲಿಸಿದ ವ್ಲಾದಿಮಿರ್ ಲೆನಿನ್.
ರಷ್ಯಾದಲ್ಲಿ ಕಮ್ಯುನಿಸ್ಟ್ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲಾ ಕೈಗಾರಿಕೆಗಳನ್ನು ಬಲವಂತವಾಗಿ ಸರಕಾರದ ವಶಕ್ಕೆ ಪಡೆದು ರಾಷ್ಟ್ರೀಕರಣಗೊಳಿಸಿತು. ಕುಲಕ್ಗಳೆಂದು ಕರೆಯಲ್ಪಡುತ್ತಿದ್ದ ಶ್ರೀಮಂತರ ವಶದಲ್ಲಿದ್ದ ಆಹಾರ ಧಾನ್ಯಗಳೂ ಸರಕಾರದ ವಶವಾದವು. ೧೦೦ ಕುಲಕ್ಗಳನ್ನು ಲೆನಿನ್ ಸಾರ್ವಜನಿಕವಾಗಿ ಗಲ್ಲಿಗೇರಿಸಿದ. ಹಿಂದಿನ ಝಾರ್ಗಳ ಅವಧಿಯಲ್ಲಿ ಆಯಕಟ್ಟಿನ
ಸ್ಥಾನಮಾನ ಪಡೆದಿದ್ದವರನ್ನು ‘ಚೇಕಾವು’ ಎಂಬ ಲೆನಿನ್ನ ರಹಸ್ಯ ಪೊಲೀಸ್ದಳವು ಶಿಕ್ಷೆಗೆ ಗುರಿಯಾಗಿಸಿತು. ಇಂಥ ಸುಮಾರು ೧.೪ ಲಕ್ಷ ಮಂದಿ ಚೇಕಾವುನಿಂದ ಹತರಾದರು ಎಂದು ಅಂದಾಜಿಸಲಾಗಿದೆ.
ತನ್ನ ಆಡಳಿತದ ವಿರೋಧಿಗಳು ಎಂಬ ಗುಮಾನಿಯ ಮೇಲೆ ಸುಮಾರು ೧೪,೦೦೦ ಆಥೋಡಾಕ್ಸ್ ಚರ್ಚ್ ಪಾದ್ರಿಗಳನ್ನು ಕೊಲ್ಲಿಸಿದ ಲೆನಿನ್, ರಾಜಕೀಯ ವಿರೋಧಿಗಳನ್ನು ಶಿಕ್ಷಿಸಲು, ಮನಃಪರಿವರ್ತಿಸಲು ಗುಲಾಗ್ ಗಳೆಂಬ ಕಾರ್ಮಿಕ ಶಿಬಿರಗಳ ವ್ಯವಸ್ಥೆಯನ್ನು ರೂಪಿಸಿದ. ಇಲ್ಲಿ ಲಕ್ಷಾಂತರ ಮಂದಿಯನ್ನು ಬಲವಂತವಾಗಿ ದುಡಿಸಿಕೊಳ್ಳಲಾಯಿತು. ಲೆನಿನ್ ತರುವಾಯ ಅಧಿಕಾರಕ್ಕೆ ಬಂದ ಜೋಸೆಫ್ ಸ್ಟಾಲಿನ್, ೧೯೨೪-೧೯೫೩ರ ಅವಧಿಯಲ್ಲಿ ಸರ್ವಾಧಿಕಾರಿಯಾಗಿ ಮೆರೆದ. ಈತ ಜಾರಿಗೆ ತಂದ ‘ಕಲೆಕ್ಟಿವೈಸೇಷನ್’ (ಅಂದರೆ ಕೃಷಿಕರ ಭೂಹಿಡುವಳಿಗಳನ್ನು ಸರಕಾರದ ವಶಕ್ಕೆ ಪಡೆದು ಒಟ್ಟಾಗಿ ಕೃಷಿ ಮಾಡುವಿಕೆ)
ಉಪಕ್ರಮದಡಿ ೨.೫ ಕೋಟಿ ರೈತರ ಕೃಷಿಭೂಮಿ ವಶಪಡಿಸಿಕೊಂಡು ಅವರನ್ನು ಬಲವಂತವಾಗಿ ಕೂಲಿಗಳಾಗಿಸಿ ದುಡಿಸಿಕೊಳ್ಳಲಾಯಿತು. ಈ ವೇಳೆ ಸರಕಾರದ ಕಠಿಣಶಿಕ್ಷೆ, ಮರಣದಂಡನೆಗಳಿಂದ ೧.೪೫ ಕೋಟಿ ರೈತರು ಸತ್ತರು.
ತನ್ನನ್ನು ಅಧಿಕಾರಕ್ಕೆ ತಂದ ಪಕ್ಷದ ಕಾರ್ಯಕರ್ತರನ್ನೂ ಬಿಡದ ಸ್ಟಾಲಿನ್, ೧೯೩೬ರಲ್ಲಿ ಪಕ್ಷದೊಳಗಿನ ಭಿನ್ನಮತ ಹತ್ತಿಕ್ಕಲು ನಡೆಸಿದ ‘ಗ್ರೇಟ್ ಪರ್ಜ್’ ಕಾರ್ಯಾಚರಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯರು, ವಿಜ್ಞಾನಿಗಳು ಮತ್ತು ಚಿಂತಕರು ಸೇರಿದಂತೆ ೧೨ ಲಕ್ಷ ಮಂದಿಯನ್ನು ಗುಲಾಗ್ ಗಳಲ್ಲಿ ಬಂಧಿಸಿಟ್ಟ. ಲೆನಿನ್-ಸ್ಟಾಲಿನ್ ಅವಧಿಯಲ್ಲಿ ಸತ್ತ ಒಟ್ಟು ೬.೧ ಕೋಟಿ ಮಂದಿಯಲ್ಲಿ
ಸ್ಟಾಲಿನ್ ಆಡಳಿತಾವಧಿಯೊಂದರಲ್ಲೇ ಸತ್ತವರು ೪.೩ ಕೋಟಿ!
ಸುಮಾರು ೩.೯ ಕೋಟಿ ರಷ್ಯನ್ನರು ಗುಲಾಲ್ಗಳ ಒಳಗೆ ಮರಣದಂಡನೆ, ಶಿಕ್ಷೆ, ರೋಗ-ರುಜಿನ, ಚಳಿ ಇತ್ಯಾದಿಗಳಿಂದ ಅಸು
ನೀಗಿದ್ದಾರೆ. ಇದು ರಷ್ಯನ್ ಕಮ್ಯುನಿಸ್ಟ್ ಸರಕಾರದ ಕ್ರೌರ್ಯ-ಸರ್ವಾಧಿಕಾರದ ಪರಿಯಾಗಿತ್ತು. ಕಮ್ಯುನಿಸ್ಟ್ ಪಕ್ಷವು ಚೀನಾದಲ್ಲಿ ೧೯೨೧ರಲ್ಲಿ ಅಸ್ತಿತ್ವಕ್ಕೆ ಬಂದ ತರುವಾಯದಲ್ಲಿ ನಾಗರಿಕ ಸಂಘರ್ಷಗಳು ನಡೆದವು. ಕೊನೆಗೆ ಮಾವೋ ಝೆಡಾಂಗ್ ನೇತೃತ್ವದ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ’ವು ಅಂತರ್ಯುದ್ಧದಲ್ಲಿ ಗೆದ್ದು ೧೯೪೯ರಲ್ಲಿ ಚೀನಾದ ಗದ್ದುಗೆ ಹಿಡಿಯಿತು.
ಚೀನಾದ ಎಲ್ಲಾ ಕೃಷಿಭೂಮಿಯನ್ನು ಸರಕಾರದ ಸ್ವಾಧೀನಕ್ಕೆ ಪಡೆದು ಒಟ್ಟಾಗಿಸಿ, ಕೃಷಿ ಕೈಗಾರಿಕೆಯನ್ನಾಗಿಸಲೆಂದು ‘ದ ಗ್ರೇಟ್ ಲೀಪ್ ಫಾರ್ವರ್ಡ್’ ಎಂಬ ಪಂಚವಾರ್ಷಿಕಯೋಜನೆಯನ್ನು ಮಾವೋ ಝೆಡಾಂಗ್ ಜಾರಿಗೆ ತಂದ. ಈ ವೇಳೆ ನಡೆದ ಸಂಘರ್ಷ, ಬಲವಂತದ ಕೆಲಸ, ಸಾಮೂಹಿಕ ಮರಣದಂಡನೆ ಮತ್ತು ಕ್ಷಾಮಗಳಿಂದಾಗಿ ಸುಮಾರು ೪ ಕೋಟಿ ಚೀನಿಯರು ಸತ್ತರು. ‘ಸಾಂಸ್ಕೃತಿಕ ಕ್ರಾಂತಿ’ ಎಂಬ ಮಾವೋನ ಕಲ್ಪನೆಯಡಿ ಬಂಡವಾಳಶಾಹಿಗಳು ಮತ್ತು ಸಂಪ್ರದಾಯವಾದಿಗಳನ್ನು ಹತ್ತಿಕ್ಕಿ ಕಮ್ಯು
ನಿಸಂ ಅನ್ನು ಬೆಳೆಸಲು ಒತ್ತುನೀಡಲಾಯಿತು. ಈ ವೇಳೆಯ ಹಿಂಸಾಚಾರ, ಶಿಕ್ಷೆಗಳಿಗೆ ಲಕ್ಷಾಂತರ ಚೀನಿಯರು ಬಲಿಯಾದರು.
೧೯೯೧ರಲ್ಲಿ ಸೋವಿಯತ್ ಒಕ್ಕೂಟ ಪತನಗೊಳ್ಳುವುದರೊಂದಿಗೆ ರಷ್ಯಾದ ಕಮ್ಯುನಿಸ್ಟ್ ಆಡಳಿತ ಕೊನೆಗೊಂಡಿತು. ಆದರೆ ವರ್ತಮಾನದಲ್ಲೂ ಕಮ್ಯುನಿಸ್ಟ್ ಸರ್ವಾಽಕಾರಕ್ಕೆ ಜ್ವಲಂತ ಸಾಕ್ಷಿಯಾಗಿ ಚೀನಾ, ಉತ್ತರ ಕೊರಿಯಾ, ಕ್ಯೂಬಾ ಉಳಿದುಕೊಂಡಿವೆ. ಚೀನಿಯರು ಈಗಲೂ ಸರಕಾರದ ಕಪಿಮುಷ್ಟಿಯಲ್ಲೇ ಇದ್ದಾರೆ. ೧೯೮೯ರಲ್ಲಿ ತಿಯಾನ್ಮೆನ್ ಚೌಕದಲ್ಲಿ ಸರಕಾರದ ವಿರುದ್ಧ
ಪ್ರತಿಭಟಿಸಿದ್ದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಟ್ಯಾಂಕ್ ಹರಿಸಿ ಕೊಲ್ಲಲಾಯಿತು. ಇಂದಿಗೂ ಚೀನಾದಲ್ಲಿ ಫೇಸ್ಬುಕ್, ವಾಟ್ಸಾಪ್, ಟ್ವಿಟರ್, ಯೂಟ್ಯೂಬ್ನಂಥ ಸಾಮಾಜಿಕ/ವಿದೇಶಿ ಮಾಧ್ಯಮಗಳಿಗೆ ಅವಕಾಶವಿಲ್ಲ. ಪ್ರಜೆಗಳ ಚಲನವಲನಗಳ ಮೇಲೆ ಕಣ್ಗಾವಲಿರಿಸಲು ಬರೋಬ್ಬರಿ ೭೦ ಕೋಟಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿರುವ ಸರಕಾರ, ಉಯಿಗರ್ ಮುಸ್ಲಿಮರಿಗೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯ ನೀಡದೆ ಹೆಚ್ಚಿನವರನ್ನು ಜೈಲಿನಲ್ಲಿರಿಸಿದೆ.
ಒಟ್ಟಾರೆಯಾಗಿ ಚೀನಾದಲ್ಲಿ ಮಾನವ ಹಕ್ಕುಗಳಿಗೆ ಬೆಲೆಯಿಲ್ಲ. ಚೀನಾದ ಈಗಿನ ಅಧ್ಯಕ್ಷ ಷಿ ಜಿನ್ಪಿಂಗ್ ತಮ್ಮ ಜೀವಿತಾವಧಿ ಯುದ್ದಕ್ಕೂ ಆ ಹುದ್ದೆಯಲ್ಲಿ ಮುಂದುವರಿಯುವ ಅವಕಾಶ ಕಲ್ಪಿಸಿಕೊಂಡಿದ್ದಾರೆ. ಇನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನ ದುರಾಡಳಿತವಿರುವ ಉತ್ತರ ಕೊರಿಯಾದ ಜನರ ದುರವಸ್ಥೆಯನ್ನು ಕೇಳುವವರೇ ಇಲ್ಲ. ಭಾರತದಲ್ಲೂ ರಕ್ತದಹೊಳೆ ಹರಿಸಿರುವ
ಕಮ್ಯುನಿಸ್ಟ್ ಪ್ರೇರಿತ ಮಾವೋವಾದಿ ನಕ್ಸಲರಿಗೆ ಸಶಸ್ತ್ರ ಕ್ರಾಂತಿಯಲ್ಲೇ ವಿಶ್ವಾಸ. ಕಳೆದ ೨೦ ವರ್ಷಗಳಲ್ಲಿ ಇವರ ಹಿಂಸಾಚಾರಕ್ಕೆ ಸುಮಾರು ೧೪,೦೦೦ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ.
ಆದರೆ ಇಂದಿಗೂ ಕೆಲ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಸರಕಾರೇತರ ಸಂಘಟನೆಗಳಿಂದ ನಕ್ಸಲರಿಗೆ ತಾತ್ವಿಕ ಬೆಂಬಲ ಸಿಗುತ್ತಿದೆ. ಭಾರತದಲ್ಲಿ ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಉದ್ದುದ್ದ ಭಾಷಣ ಬಿಗಿವ ಈ ಬುದ್ಧಿಜೀವಿಗಳು,
ರಷ್ಯಾದ ಕಮ್ಯುನಿಸ್ಟ್ ಆಡಳಿತಾವಧಿಯಲ್ಲಿ ನಡೆದಿದ್ದ ಕೋಟ್ಯಂತರ ಸಾವು-ನೋವು, ಚೀನಾದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ, ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಾರೆ!
ಜನರನ್ನು ಒಡೆದು ಆಳುವ ನೀತಿ, ಸಂಘರ್ಷ, ಸಶಸ್ತ್ರ ಕ್ರಾಂತಿಯನ್ನೇ ಉಸಿರಾಗಿಸಿಕೊಂಡ ಕಮ್ಯುನಿಸ್ಟ್ ಆಡಳಿತವಿರುವ ಯಾವ ದೇಶದಲ್ಲೂ ಪ್ರಜಾಪ್ರಭುತ್ವವಿಲ್ಲ; ಅಲ್ಲೆಲ್ಲ ಕಮ್ಯುನಿಸಂ ಹೆಸರಲ್ಲಿ ಸರ್ವಾಧಿಕಾರ ನಡೆಯುತ್ತಿದೆಯಷ್ಟೇ! ಇಂಥ ರಕ್ತಪಿಪಾಸು ಕಮ್ಯುನಿಸಂ ಅನ್ನು ಭಾರತದ ಪಠ್ಯಗಳಲ್ಲಿ ವೈಭವೀಕರಿಸಬೇಕಾದ ಅಗತ್ಯವಿಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)