ವೀಕೆಂಡ್ ವಿತ್ ಮೋಹನ್
camohanbn@gmail.com
ರಷ್ಯಾ ದೇಶದ ಕಮ್ಯುನಿ ನಾಯಕ ‘ಲೆನಿನ್’ ಬೆಂಬಲಿತ ಶಸಸಜ್ಜಿತ ಬೋಲ್ಶೆವಿಕ್‌ಗಳು ಸುಮಾರು ೧೦೦ ವರ್ಷಗಳ ಹಿಂದೆ ಪೆಟ್ರೋಗ್ರಾಡ್‌ನಲ್ಲಿರುವ (ಈಗಿನ ಸೇಂಟ್ ಪೀಟರ‍್ಸ್‌ಬರ್ಗ್) ಚಳಿಗಾಲದ ಅರಮನೆಯನ್ನು ವಶಪಡಿಸಿಕೊಂಡರು ಮತ್ತು ರಷ್ಯಾದ ತಾತ್ಕಾಲಿಕ ಸರಕಾರದಲ್ಲಿದ್ದಂತಹ ಮಂತ್ರಿಗಳನ್ನು ಬಂಧಿಸಿದರು. ನಂತರ ಲಕ್ಷಾಂತರ ಜನರನ್ನು ಕೊಲ್ಲುವ ಮತ್ತು ಪಾಶ್ಚಿಮಾತ್ಯ ನಾಗರಿಕತೆಯನ್ನು ನಾಶಗೊಳಿಸುವ ಸಿದ್ಧಾಂತಕ್ಕೆ ಚಾಲನೆ ನೀಡಿದ್ದರು.
ರೈಲು ನಿಲ್ದಾಣಗಳು, ಅಂಚೆ ಕಚೇರಿ ಮತ್ತು ಟೆಲಿಗ್ರಾಫ್ ಗಳನ್ನು ರಾತ್ರೋ ರಾತ್ರಿ ಕಮ್ಯುನಿಸ್ಟರು ವಶಪಡಿಸಿಕೊಂಡರು. ರಷ್ಯಾದ ರಾಜಧಾನಿಯ ನಿವಾಸಿಗಳು ಬೆಳಗ್ಗೆ ಎಚ್ಚರಗೊಂಡಾಗ, ಅವರು ಬೇರೆ ಜಗತ್ತಿನಲ್ಲಿ ವಾಸಿಸುತ್ತಿರುವಂತೆ ಭಾಸವಾಗಿತ್ತು. ಬೊಲ್ಶೆವಿಕ್‌ಗಳು ಖಾಸಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಂಪೂರ್ಣವಾಗಿ ಖಾಸಗಿ ಆಸ್ತಿಯ ಕಲ್ಪನೆಯನ್ನೇ ನಿರ್ಮೂಲನೆ ಮಾಡಲು ಕರೆ ನೀಡಿ ದ್ದರು. ಮೊದಲ ಬಾರಿಗೆ, ನಾಸ್ತಿಕತೆಯ ಮೇಲೆ ಸ್ಪಷ್ಟವಾಗಿ ಆಧಾರಿತವಾದ ಮತ್ತು ದೋಷರಹಿತತೆಯನ್ನು ಪ್ರತಿಪಾದಿಸುವ ದೇಶವನ್ನು ರಚಿಸಲಾಯಿತು. ಬೋಲ್ಶೆವಿಕ್ ದಂಗೆಯು ಎರಡು ಪರಿಣಾಮಗಳನ್ನು ಬೀರಿತ್ತು, ಕಮ್ಯುನಿಸಂ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಬಂದ ದೇಶಗಳಲ್ಲಿ ಅದು ಅಲ್ಲಿನ ಸಮಾಜದ ನೈತಿಕ ತಿರುಳನ್ನು ಟೊಳ್ಳುಗೊಳಿಸಿತ್ತು.
ಕಮ್ಯುನಿಸ್ಟರು ತಮ್ಮ ಸಿದ್ಧಾಂತದ ವಿರುದ್ಧ ನಿಂತವರನ್ನು ಕೊಲೆ ಮಾಡಲು ಹಿಂಜರಿಯಲಿಲ್ಲ, ಬದುಕುಳಿದವರಲ್ಲಿದ್ದಂತಹ ವೈಯಕ್ತಿಕ ಆತ್ಮಸಾಕ್ಷಿಯನ್ನು ನಾಶಮಾಡುವುದು ಅವರ ಸ್ಪಷ್ಟ ಉದ್ದೇಶವಾಗಿತ್ತು. ಆದರೆ ಬೊಲ್ಶೆವಿಕ್‌ಗಳ ಪ್ರಭಾವ ಕೇವಲ ರಷ್ಯಾ ದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಪಶ್ಚಿಮದಲ್ಲಿ ಕಮ್ಯುನಿಸಂ ತಾನು ಅನುಸರಿಸುತ್ತಿದ್ದಂತಹ ಸಿದ್ಧಾಂತದ ಬಗ್ಗೆ ಸಮಾಜದಲ್ಲಿದ್ದಂತಹ ತಿಳುವಳಿಕೆಯನ್ನು ತಲೆಕೆಳಗು ಮಾಡಿತು.
೧೯೨೦ರಲ್ಲಿ ರಷ್ಯಾದಲ್ಲಿ ‘ಲೆನಿನ್’ ಮಾಡಿದ ಭಾಷಣದಲ್ಲಿ, ಹಳೆಯ ಶೋಷಣೆಯ ಸಮಾಜವನ್ನು ನಾಶ ಪಡಿಸಿ ಮತ್ತು ಹೊಸ ಕಮ್ಯುನಿ ಸಮಾಜವನ್ನು ನಿರ್ಮಿಸಬೇಕೆಂದು ಹೇಳಿದ್ದ. ೧೯೧೮ರಲ್ಲಿ ಕಮ್ಯುನಿಸ್ಟರ ಗುಂಪಿನಲ್ಲಿ ವಿಚಾರಣೆಗಾರರಿಗೆ ನೀಡಿದ್ದ ಸೂಚನೆಯಲ್ಲಿ ಲೆನಿನ್‌ನ ರಹಸ್ಯ ಪೊಲೀಸ್ ಅಧಿಕಾರಿ
ಮಾರ್ಟಿನ್ ಲಾಟ್ಸಿಸ್ ಹೀಗೆ ಬರೆದಿzನೆ: ‘ನಾವು ವ್ಯಕ್ತಿಗಳ ವಿರುದ್ಧ ಯುದ್ಧ ಮಾಡುತ್ತಿಲ್ಲ, ನಾವು ಬೂರ್ಜ್ವಾಸಿಗಳನ್ನು (ಮಧ್ಯಮ ವರ್ಗ) ನಿರ್ಣಾಮ ಮಾಡು ತ್ತಿದ್ದೇವೆ… ಆರೋಪಿಗಳು ಸೋವಿಯತ್ ಶಕ್ತಿಯ ವಿರುದ್ಧ ವರ್ತಿಸಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಹುಡುಕಬೇಡಿ, ಅವನು ಯಾವ ವರ್ಗಕ್ಕೆ ಸೇರಿದವನು ಎಂಬುದೇ ಮೊದಲ ಪ್ರಶ್ನೆ… ಇದು ಅವನ ಭವಿಷ್ಯವನ್ನು ನಿರ್ಧರಿಸಬೇಕು. ಪುರಾವೆಗಳನ್ನು ಪರಿಗಣಿಸದೇ, ಸಮಾಜವಾದದ ಹೆಸರಿನಲ್ಲಿ ಆಸ್ತಿ ಹೊಂದಿದ ಮಧ್ಯಮ ವರ್ಗದವರನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಿ’ ಕಮ್ಯುನಿ ನಾಯಕ ಲೆನಿನ್ ಗುರಿಯಾಗಿತ್ತೆಂಬುದಕ್ಕೆ ಇದಕ್ಕಿಂದ ಸಾಕ್ಷಿ ಬೇಕಿಲ್ಲ.
ಕಮ್ಯುನಿಸ್ಟರ ಈ ಸಿದ್ಧಾಂತ ದಶಕಗಳ ಕಾಲ ದೊಡ್ಡ ಮಟ್ಟದಲ್ಲಿ ಲಕ್ಷಾಂತರ ಜನರ ಮಾರಣ ಹೋಮಕ್ಕೆ ಸಾಕ್ಷಿಯಾಗಿತ್ತು. ಒಟ್ಟಾರೆಯಾಗಿ, ೨೦ ಮಿಲಿ
ಯನ್‌ಗಿಂತಲೂ ಅಧಿಕ ಸೋವಿಯತ್ ನಾಗರಿಕರು ಕಮ್ಯುನಿಸ್ಟರ ಧಮನಕಾರಿ ನೀತಿಗಳ ನೇರ ಪರಿಣಾಮ ಮತ್ತು ಅವರ ಆಡಳಿತದಿಂದ ರಷ್ಯಾದಲ್ಲಿ ಮರಣ ಹೊಂದಿದ್ದರು. ಯುದ್ಧ, ಸಾಂಕ್ರಾಮಿಕ ರೋಗ ಮತ್ತು ಕ್ಷಾಮಗಳಲ್ಲಿ ಸಾವನ್ನ ಪ್ಪಿದ ಲಕ್ಷಾಂತರ ಜನರನ್ನು ಸೇರಿಸಿದರೆ ಮರಣ ಹೊಂದಿದವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ, ಈ ಸಾವುಗಳು ಬೊಲ್ಶೆವಿಕ್ ನೀತಿಗಳಿಂದ ನೇರವಾಗಿ ಉಂಟಾಗದಿದ್ದರೂ ಅವರ ಆಡಳಿತದಿಂದ ಉಂಟಾದಂತಹ ಪರಿಣಾಮಗಳಿಂದಾಗಿವೆ.
ರೆಡ್ ಟೆರರ್ (೧೯೧೮-೨೨) ಸಮಯದಲ್ಲಿ ಸುಮಾರು ೨೦೦,೦೦೦ ಜನ ಸತ್ತರು, ೧೧ ಮಿಲಿಯನ್ ಜನರು ಕ್ಷಾಮ ಮತ್ತು ಡೆಕುಲಕೀಕರಣದಿಂದ (ಸೋವಿಯತ್ ಒಕ್ಕೂಟದಲ್ಲಿದ್ದ ಜನಸಂಖ್ಯೆಯ ವಿರುದ್ಧ ನಡೆಸಿದ ನರಮೇಧಗಳ ಸರಣಿಯ ಒಂದು ಭಾಗ) ಸತ್ತರು, ಗ್ರೇಟ್ ಟೆರರ್ (೧೯೩೭-೩೮)
ಸಮಯದಲ್ಲಿ ೭,೦೦,೦೦೦ ಜನರಿಗೆ ಮರಣದಂಡನೆ, ೧೯೨೯ ಮತ್ತು ೧೯೫೩ರ ನಡುವೆ ೪,೦೦,೦೦೦ ಹೆಚ್ಚು ಜನರಿಗೆ ಮರಣ ದಂಡನೆ, ಬಲವಂತದ ಜನಸಂಖ್ಯೆಯ ವರ್ಗಾವಣೆಯ ಸಮಯದಲ್ಲಿ ಸುಮಾರು ೧.೬ ಮಿಲಿಯನ್ ಜನ ಸತ್ತರು, ಕಾರ್ಮಿಕ ವಸಾಹತುಗಳು ಮತ್ತು ವಿಶೇಷ ವಸಾಹತುಗಳಲ್ಲಿ
ಕನಿಷ್ಠ ೨.೭ ಮಿಲಿಯನ್ ಜನ ಸತ್ತರೆಂದು ಹೇಳಲಾಗುತ್ತದೆ.
ಈ ಪಟ್ಟಿಗೆ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬಿಡುಗಡೆಯಾದ ಸುಮಾರು ಒಂದು ಮಿಲಿಯನ್ ‘ಗುಲಾಗ್’ ಕೈದಿಗಳನ್ನು ರೆಡ್ ಆರ್ಮಿ ದಂಡನೆ ಬೆಟಾಲಿಯ ನ್‌ಗಳಿಗೆ ಸೇರಿಸಲಾಗಿತ್ತು, ಬಹುತೇಕರು ಅಲ್ಲಿ ಸಾವನ್ನಪ್ಪಿದರು. ಉಕ್ರೇನ್ ಮತ್ತು ಬಾಲ್ಟಿಕ್‌ನಲ್ಲಿ ಸೋವಿಯತ್ ಆಳ್ವಿಕೆಯ ವಿರುದ್ಧ ಯುದ್ಧಾ ನಂತರದ ನಡೆದ ದಂಗೆಗಳಲ್ಲಿ ನಾಗರಿಕರು ಸತ್ತರು. ಪೂರ್ವ ಯುರೋಪ್, ಚೀನಾ, ಕೂಬಾ, ಉತ್ತರ ಕೊರಿಯಾ, ವಿಯೆಟ್ನಾಂ ಮತ್ತು ಕಾಂಬೋಡಿಯಾ ಸೇರಿದಂತೆ ಸೋವಿಯತ್ ಯೂನಿಯನ್ ರಚಿಸಿದ ಮತ್ತು ಬೆಂಬಲಿಸಿದ ಕಮ್ಯುನಿ ಆಡಳಿತಗಳಿಂದ ಉಂಟಾದ ಸಾವುಗಳನ್ನು ಈ ಪಟ್ಟಿಗೆ ಸೇರಿಸಿದರೆ ಒಟ್ಟಾರೆ ಸತ್ತವರ ಸಂಖ್ಯೆ ಸುಮಾರು ೧೦ ಕೋಟಿಯ ಹತ್ತಿರದಲ್ಲಿದೆ ಎಂದು ಹೇಳಲಾಗುತ್ತದೆ. ಇದರಿಂದ ಕಮ್ಯುನಿಸಂ ಸಿದ್ಧಾಂತ ಮಾನವ ಇತಿಹಾಸ ಕಂಡಂತಹ ಅತೀ ದೊಡ್ಡ ದುರಂತವೆಂಬುದು ತಿಳಿಯುತ್ತದೆ.
ಕಮ್ಯುನಿಸಂ ಸಿದ್ಧಾಂತದಡಿಯಲ್ಲಿ ಸೋವಿಯತ್ ರಷ್ಯಾದಲ್ಲಿ ನಡೆದ ಈ ಮಟ್ಟದ ಕೊಲೆಗಳು ಅಲ್ಲಿನ ನಾಗರೀಕರ ಮನಸ್ಥಿತಿಯನ್ನು ಬದಲಾಯಿಸುವ ತಂತ್ರಗಾರಿಕೆ ಯಾಗಿತ್ತೆಂದು ಅಲ್ಲಿನ ಕಮ್ಯುನಿ ನಾಯಕರು ಹೇಳಿದ್ದರು. ಸ್ಟಾಲಿನ್‌ಗ್ರಾಡ್ ದ್ಧದ ಸಮಯದಲ್ಲಿ, ರೆಡ್ ಆರ್ಮಿಯ ಕೆಲ ಸೈನಿಕರು ಯುದ್ದದಿಂದ ಪಲಾಯನ ಮಾಡಲು ಪ್ರಯತ್ನಿಸಿದಾಗ, ತಮ್ಮದೇ ಸಹ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿತ್ತು. ಸೋವಿಯತ್ ಪಡೆಗಳು ಜರ್ಮನ್ ಭಾಗದಲ್ಲಿ ಆಶ್ರಯ ಪಡೆದ ನಾಗರಿಕರನ್ನು ಕೊಂದವು, ವೋಲ್ಗಾದಲ್ಲಿ ಜರ್ಮನ್ ದೇಶದ ನೀರಿನ ಬಾಟಲಿಗಳನ್ನು ತುಂಬಿಕೊಂಡಿದ್ದ ಮಕ್ಕಳನ್ನು ಕೊಂದರು ಮತ್ತು ಜರ್ಮನ್ ಸೈನಿಕರ ದೇಹಗಳನ್ನು ವಶಪಡಿಸಿಕೊಳ್ಳಲು ಗನ್ಪಾಯಿಂಟ್‌ನಲ್ಲಿ ನಾಗರಿಕರನ್ನು ಒತ್ತಾಯಿಸಲಾಗಿತ್ತು.
ಸ್ಟಾಲಿನ್‌ಗ್ರಾಡ್‌ನಲ್ಲಿನ ಸೇನಾ ಕಮಾಂಡರ್ ಜನರಲ್ ವಾಸಿಲಿ ಚುಯಿಕೋವ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಸೋವಿಯತ್ ರೆಡ್ ಆರ್ಮಿಯ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾ ರೆ, ಸೋವಿಯತ್ ಪ್ರಜೆ ತನ್ನ ಸೋವಿಯತ್ ದೇಶವನ್ನು ಹೊರತುಪಡಿಸಿ ವಯಕ್ತಿಕ ಜೀವನದ ಬಗ್ಗೆ ಚಿಂತಿಸಬಾರದೆಂಬುದು ಅವರ ಸಿದ್ಧಾಂತವಾಗಿತ್ತು. ಸಮಾಜವಾದದ ಹೆಸರಿನಲ್ಲಿ ಕಮ್ಯುನಿಸ್ಟರು ಜಗತ್ತಿನಾದ್ಯಂತ ಕೋಟಿಗಟ್ಟಲೆ ನಾಗರಿಕರ ಸಾವಿಗೆ ಕಾರಣರಾದರು. ಬಂಡವಾಳಶಾಹಿವಾದ ಇಲ್ಲದೆ ಸಮಾಜವಾದವಿಲ್ಲವೆಂಬ ಕನಿಷ್ಠ eನವಿಲ್ಲದವರು ದಶಕಗಳ ಕಾಲ ಅಮಾಯಕರನ್ನು ಕೊಂದರು. ರಷ್ಯಾ ದೇಶದಲ್ಲಿ ಪ್ರಾರಂಭ ವಾದಂತಹ ಲೆನಿನ್ ವಾದ ಕಾಲಕ್ರಮೇಣ ಚೀನಾ ದೇಶವನ್ನು ತಲುಪಿತು, ಅಲ್ಲಿಯೂ ಸಹ ಕಮ್ಯುನಿಸಂ ಹೆಸರಿನಲ್ಲಿ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸಲಾಯಿತು.
ದಶಕಗಳ ಕಾಲ ಲಕ್ಷಾಂತರ ಜನರ ಮಾರಣಹೋಮವಾಯಿತು, ಕಮ್ಯುನಿಸಂ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಚೀನಾ ದೇಶದಲ್ಲಿ ಜಗತ್ತಿನ ಎರಡನೇ ಅತಿ ಹೆಚ್ಚಿನ ಬಿಲೇನಿಯರ್ ಬಂಡವಾಳಶಾಹಿಗಳಿzರೆ. ಸ್ವತಂತ್ರ ಪೂರ್ವದಿಂದಲೂ ರಷ್ಯಾ ದೇಶದ ಕಮ್ಯುನಿ ಸಿದ್ಧಾಂತಕ್ಕೆ ಜೋತು ಬಿದ್ದು, ಭಾರತದಲ್ಲಿಯೂ ಕಮ್ಯುನಿ ಸಿದ್ಧಾಂತವನ್ನು ಅನುಷ್ಠಾನಗೊಳಿಸಬೇಕೆಂಬ ಪ್ರಯತ್ನಗಳು ನಡೆಯುತ್ತಲೇ ಇದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ ಬ್ರಿಟಿಷರ ವಿರುದ್ದ ಗೆದ್ದರೆ ಕಮ್ಯುನಿ ಆಡಳಿತವನ್ನು ರಷ್ಯಾ ಮೂಲಕ ಭಾರತದಲ್ಲಿ ಜಾರಿಗೊಳಿಸಬಹುದೆಂಬ ಕನಸನ್ನು ಕಮ್ಯುನಿಸ್ಟ್ ನಾಯಕರು ಕಂಡಿದ್ದರು. ಎರಡನೇ ಮಹಾಯುದ್ಧದ
ಸಂದರ್ಭದಲ್ಲಿ ಬ್ರಿಟಿಷ್ ಸೈನ್ಯದ ಬಲವನ್ನು ಕುಗ್ಗಿಸಿ ರಷ್ಯಾ ಗೆಲ್ಲುವಂತೆ ಮಾಡಲು ಅವರ ಸೈನ್ಯದಲ್ಲಿ ಕೆಲಸ ಮಾಡಬಾರದೆಂದು, ಕಮ್ಯುನಿಸ್ಟರು ಬ್ರಿಟಿಷರ ವಿರುದ್ಧ ನಿಂತರೆ ಹೊರತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ.
ರಷ್ಯಾ ಸೋತ ನಂತರ ಭಾರತದಲ್ಲಿದ್ದಂತಹ ಕಮ್ಯುನಿಸ್ಟರ ದೇಶ ನಿಷ್ಠೆ ಬಯಲಾಗಿತ್ತು. ಯಥಾ ಪ್ರಕಾರ ದೇಶವಿರೋಧಿಗಳೊಂದಿಗೆ ನಿಲ್ಲುತ್ತಾ ಬಂದಿದ್ದಾರೆ.
ರಷ್ಯಾ ಮತ್ತು ಚೀನಾ ದೇಶದ ಕಮ್ಯುನಿ ಸಿದ್ಧಾಂತ ಕಾಲಕ್ರಮೇಣ ಭಾರತದ ಈಶಾನ್ಯ ಮತ್ತು ಪೂರ್ವ ರಾಜ್ಯಗಳಿಗೆ ಆವರಿಸಿತ್ತು, ಸ್ವಾತಂತ್ರ್ಯ ಹೋರಾಟದಲ್ಲಿ
ಮುಂಚೂಣಿಯಲ್ಲಿದ್ದ ಪಶ್ಚಿಮ ಬಂಗಾಳ ರಾಜ್ಯಕ್ಕೆ ಕಮ್ಯುನಿಸ್ಟರು ವಕ್ಕರಿಸಿದ್ದರ ಪರಿಣಾಮ ಸುಮಾರು ನಾಲ್ಕು ದಶಕಗಳ ಕಾಲ ಅಭಿವೃದ್ಧಿಯನ್ನೇ ಕಾಣದಂತಾ ಯಿತು. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ ಸಿದ್ಧಾಂತಕ್ಕೆ ಕಟ್ಟುಬಿದ್ದು ನಕ್ಸಲರ ಉಗಮವಾಯಿತು. ಅತ್ತ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋನ ಮೋಹ ಆವರಿಸಿಕೊಂಡು ಮಾವೋವಾದಿಗಳು ಹುಟ್ಟಿಕೊಂಡರು, ಸಮಾಜವಾದದ ಹೆಸರಿನಲ್ಲಿ ಶೋಷಿತರ ಪರವಾಗಿ ನಿಲ್ಲುತ್ತೇವೆಂದು ಹೇಳಿ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡರು.
ಛತ್ತೀಸ್‌ಗಡ ನಕ್ಸಲರು ಮತ್ತು ಮಾವೋವಾದಿಗಳ ಅಟ್ಟಹಾಸಕ್ಕೆ ದಶಕಗಳ ಕಾಲ ಬಲಿಯಾದ ಮತ್ತೊಂದು ರಾಜ್ಯ, ಪರಿಶಿಷ್ಟ ಪಂಗಡದವರೇ ಹೆಚ್ಚಾಗಿ ವಾಸಿಸುವ ಈ ರಾಜ್ಯದಲ್ಲಿ ಸಾವಿರಾರು ಅಮಾಯಕರ ಕೊಲೆ ನಡೆದವು. ಸಮಾಜವಾದವನ್ನು ಪ್ರತಿಪಾದಿಸುತ್ತೇವೆಂದು ಹೇಳಿ ನಕ್ಸಲರ ಹಾದಿ ತುಳಿದವರು ಕಾಡಿನಲ್ಲಿರುವ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗದಂತೆ ನೋಡಿಕೊಂಡರು. ಮಾವೋವಾದಿಗಳಿಗೆ ಹಳ್ಳಿಗಳಲ್ಲಿನ ಬಡವರಿಗೆ ಆಸ್ಪತ್ರೆಗಳು ಬೇಕಿಲ್ಲ, ಅಲ್ಲಿನ ಮಕ್ಕಳಿಗೆ ವಿಸ್ಯಾಭ್ಯಾಸ ನೀಡುವುದು ಬೇಕಿಲ್ಲ, ರಸ್ತೆಗಳ ಅಭಿವೃದ್ಧಿ ಬೇಕಿಲ್ಲ, ಮನೆಗಳ ನಿರ್ಮಾಣ ಬೇಕಿಲ್ಲ. ಬಡಜನರಿಗೆ ಬೇಕಿರುವ ಮೂಲಭೂತ
ಸೌಕರ್ಯಗಳ ಅಭಿವೃದ್ಧಿಯನ್ನು ವಿರೋಧಿಸುವವರು ಹೇಗೆ ತಾನೆ ಸಮಾಜವಾದಿಗಳಾಗಲು ಸಾಧ್ಯ? ಛತ್ತೀಸ್‌ಗಡದ ಬಸ್ತರ್ ಜಿಲ್ಲೆಯಲ್ಲಿ ದಾಂತೇವಾಡದಲ್ಲಿ ೮೫ ಕಿಲೋಮೀಟರು ರಸ್ತೆ ನಿರ್ಮಾಣ ಮಾಡಲು ನೂರಾರು ಯೋಧರನ್ನು ಕಳೆದುಕೊಳ್ಳಬೇಕಾಯಿತು.
೨೦೧೦ ರಲ್ಲಿ ದಾಂತೇವಾಡದಲ್ಲಿ ಸೈನಿಕರ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ೭೬ ಯೋಧರು ಮೃತಪಟ್ಟಿದ್ದರು, ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಸೈನಿಕರ ಸಾವನ್ನು ಎಡಚರ ವಿದ್ಯಾರ್ಥಿಗಳು ಸಂಭ್ರಮಿಸಿದ್ದರು. ಎಡಚರ ಪತ್ರಕರ್ತೆ ಅರುಂಧತಿ ರಾಯ ನಕ್ಸಲರನ್ನು ಅಮಾಯಕರೆಂದು ಹೇಳಿದ್ದಳು, ನಿರಂತರವಾಗಿ ಮಾವೋವಾದಿಗಳ ಜೊತೆ ಸಂಪರ್ಕ ಸಾಧಿಸಿ ಅವರಿಗೆ ಸರಕಾರದ ಕಾರ್ಯಾಚರಣೆಯ ಮಾಹಿತಿ ಕೊಡುತ್ತಿದ್ದರು. ಕರ್ನಾಟಕದಲ್ಲಿ ಪೋಲೀಸರ ಮೇಲೆ ನಕ್ಸಲರು ನಡೆಸಿದ್ದ ದಾಳಿಯ ಮಾಹಿತಿಯನ್ನು ನಗರ ನಕ್ಸಲರು ನೀಡಿದ್ದರೆಂಬ ಚರ್ಚೆ ಅಂದಿನಿಂದಲೂ ನಡೆಯುತ್ತಿದೆ. ಸರಕಾರಗಳು
ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡರೆ, ಸ್ಥಳೀಯ ಜನರನ್ನು ಹೆದರಿಸಿ ಅಭಿವೃದ್ಧಿಯನ್ನು ನಿಲ್ಲಿಸುತ್ತಾರೆ.
ನಕ್ಸಲ್ ಪೀಡಿತ ಹಳ್ಳಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದವನ ಕೈ ಕತ್ತರಿಸಿರುವ ಪ್ರಕರಣಗಳಿವೆ. ಬಸ್ಟರ್ ಜಿಯ ಅನೇಕ ಹಳ್ಳಿಗಳಲ್ಲಿ ೨೦೧೪ ರ ನಂತರ, ಆಗ ೧೫ ರಂದು ತ್ರಿವರ್ಣ ಧ್ವಜ ಹಾರಿಸಲಾಗಿದೆ, ಪೊಲೀಸರಿಗೆ ನಕ್ಸಲರ ಮಾಹಿತಿ ನೀಡುವವರನ್ನು ಅಮಾನುಷವಾಗಿ ಕೊಲ್ಲಲಾಗಿದೆ. ಬಂಡವಾಳಶಾಹಿಗಳ ಲಾಭದ ಬಗ್ಗೆ ಮಾತನಾಡುವ ಕಮ್ಯುನಿಸ್ಟರು, ಅವರು ಅನುಭವಿಸುವ ನಷ್ಟದ ಬಗ್ಗೆ ತುಟಿ ಬಿಚ್ಚುವುದಿಲ್ಲ.ನಷ್ಟವಾದಾಗ ತನಗೆ ವರ್ಷಗಳ ಕಾಲ ಸಂಬಳ ನೀಡಿದ ಮಾಲೀಕನ ಪರವಾಗಿ ನಿಲ್ಲುವ ಕಮ್ಯುನಿಸ್ಟ್ ಸಂಘಟನೆಗಳು ಬಹಳ ಕಡಿಮೆ, ಭಾರತದಲ್ಲಿ ತಮ್ಮದೇ ಆದಂತಹ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಂಡಿರುವ
ಕಮ್ಯುನಿಸ್ಟರು ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ಸಮಾಜದಲ್ಲಿ ವಿವಿಧ ನರೇಟಿವ್‌ಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿರುತ್ತಾರೆ.
ಹೋರಾಟದ ಹೆಸರಿನಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲುತ್ತಾರೆ; ಸೈನಿಕರಿಗೆ ಕಲ್ಲು ತೂರುವ ದೇಶವಿರೋಧಿಗಳ ಪರವಾಗಿ ನಿಲ್ಲುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂದಾಯವಾಗುವ ನೂರಾರು ಕೋಟಿ ಹಣದ ಆಸೆಗೆ ಭಾರತ ವಿರೋಽಗಳನ್ನು ಪ್ರಚರಿಸುತ್ತಾರೆ. ಬಡತನದ ಹೆಸರಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಲು ಬಿಡುವುದಿಲ್ಲ, ಅವರ ಉದ್ದೇಶ ಸ್ಪಷ್ಟ ಸಮಸ್ಯೆಗೆ ಪರಿಹಾರ ಸಿಗಬಾರದು ಬಡವರನ್ನು ಮುಂದಿಟ್ಟುಕೊಂಡು, ಅವರನ್ನು ಸಮಾಜದಲ್ಲಿ ಮೇಲೇಳಲು ಬಿಡದೆ, ಅವರ ಹೆಸರಿನಲ್ಲಿ ಮತ್ತಷ್ಟು ಹಿಂಸಾಚಾರ ನಡೆಸುವುದು.
ಜಗತ್ತಿನಲ್ಲಿ ಕಮ್ಯುನಿಸಂ ಹೆಸರಿನಲ್ಲಿ ಕಳೆದ ಒಂದು ಶತಮಾನ ದಲ್ಲಿ ನಡೆದ ರಾಜಕೀಯದಲ್ಲಿ ಅಭಿವೃದ್ಧಿ ಕಂಡಂತಹ ಉದಾಹರಣೆಯಿಲ್ಲ, ಬಹುತೇಕ ಸತ್ತುಹೋಗಿರುವ ಈ ಟೊಳ್ಳು ಸಿದ್ಧಾಂತದಡಿಯಲ್ಲಿ ನಡೆದ ದೌರ್ಜನ್ಯದಲ್ಲಿ, ಜಗತ್ತಿನಲ್ಲಿ ಕಳೆದ ೧೦೦ ವರ್ಷಗಳಲ್ಲಿ ಸತ್ತವರ ಸಂಖ್ಯೆ ೧೦ ಕೋಟಿ ಮೀರಿದೆಯೆಂದು ಹೇಳಲಾಗುತ್ತಿದೆ.