ವಿದೇಶವಾಸಿ
dhyapaa@gmail.com
ಒಮ್ಮೆಯೂ ಸ್ವತಃ ಸಚಿನ್ ತಾನು ದೇವರು ಎಂದಾಗಲಿ, ವಿರಾಟ್ ತಾನು ರಾಜ ಎಂದಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಬದಲಾಗಿ ಇಬ್ಬರೂ ಕ್ರಿಕೆಟ್ ಆಟದಲ್ಲಿ ದೇವರನ್ನು ಕಂಡವರು. ಇಬ್ಬರೂ ಕ್ರಿಕೆಟ್ ಆಟವನ್ನು ಪ್ರೀತಿಸಿದವರು, ಧ್ಯಾನಿಸಿದವರು, ಪೂಜಿಸಿದವರು, ಆರಾಧಿಸಿದವರು, ಅನುಭವಿಸಿದವರು, ಆನಂದಿಸಿ ದವರು.
‘ಗಣಪತಿ ಬಪ್ಪಾ ಮೋರಯಾ…!’ ಭಕ್ತರ ಹಣೆಬರಹವೇ ಇಷ್ಟು. ದೇವರ ವಿಷಯದಲ್ಲಾಗಲಿ, ಕ್ರಿಕೆಟ್ ವಿಷಯದಲ್ಲಾಗಲಿ, ಎಲ್ಲ ಭಕ್ತರದ್ದೂ (ನನ್ನನ್ನೂ
ಸೇರಿಸಿ) ಒಂದೇ ವರ್ಗ. ಗಣೇಶನ ಹಬ್ಬ ಬಂದಾಗ ಸಂತಸದಿಂದ ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ. ಅದೇ ವಿಸರ್ಜನೆಯ ಸಮಯ ಬಂದಾಗ ‘ಗಣಪತಿ
ಬಪ್ಪಾ ಮೋರಯಾ…’ ಎನ್ನುತ್ತ ಭಾವುಕರಾಗುತ್ತಾರೆ. ಕೆಲವರಂತೂ ದುಃಖತಪ್ತರಾಗಿ ಅಳುವುದೂ ಇದೆ.
ಇದು ಪ್ರತಿವರ್ಷ ನಡೆಯುವ ಸಂಗತಿಯಾದರೂ ಪ್ರತಿವರ್ಷವೂ ಅದೇ ಹಾಡು, ಅದೇ ಭಾವ, ಅದೇ ಶೋಕ. ಕ್ರಿಕೆಟ್ ಆಟವೂ ಹಾಗೆಯೇ. ಅದು ಏಕ ದಿನದ ವಿಶ್ವಕಪ್ ಪಂದ್ಯಾಟವೇ ಇರಲಿ, ಟಿ-ಟ್ವೆಂಟಿ ವಿಶ್ವಕಪ್ ಪಂದ್ಯಾಟವೇ ಆಗಲಿ, ಅಥವಾ ಐಪಿಎಲ್ ಪಂದ್ಯವೇ ಆಗಲಿ, ಕ್ರಿಕೆಟ್ ಆಡುವ ದೇಶಗಳಿಗೆ ಹಬ್ಬದ ಸಂಭ್ರಮ. ಭಾರತ, ಪಾಕಿಸ್ತಾನದಂಥ ದಕ್ಷಿಣ ಏಷ್ಯಾ ದೇಶಗಳಲ್ಲಿ ಸ್ವಲ್ಪ ಸ್ವಲ್ಪ ಹೆಚ್ಚು ಎನ್ನುವುದೂ ಸುಳ್ಳಲ್ಲ. ಅದಕ್ಕೇ ಈ ಪ್ರಾಂತ್ಯದಲ್ಲಿ ಕ್ರಿಕೆಟ್ ಒಂದು ಆಟವಾಗಿ ಮಾತ್ರ ಉಳಿಯದೇ, ಒಂದು ಧರ್ಮವಾಗಿದೆ.
ಪಂದ್ಯಾವಳಿ ಆರಂಭವಾಗುವಾಗುವಾಗ ಎಲ್ಲಿಲ್ಲದ ಸಡಗರ, ಆಟದ ಸಮಯದಲ್ಲಿ ಸಂಭ್ರಮ, ಪಂದ್ಯಾವಳಿ ಮುಗಿದ ನಂತರ ಬೇಜಾರು. ಅದರಲ್ಲೂ ನಮ್ಮ ತಂಡ ಸೋತರಂತೂ ಮುಗಿದೇ ಹೋಯಿತು, ಅಂದೇ ಲೋಕದ ಕೊನೆ ಎಂಬಷ್ಟರ ಮಟ್ಟಿಗೆ ಸಂಕಟ. ಒಂದೂವರೆ ತಿಂಗಳಿನಿಂದ ನಿರಂತರ ನಡೆದು ಬಂದ ಪಂದ್ಯಾವಳಿ ಮುಗಿದ ನಂತರ ‘ನಾಳೆಯಿಂದ ಏನು ಮಾಡುವುದು?’ ಎಂದು ಕಾಡುವ ‘ನಿರುದ್ಯೋಗ’ ಸಮಸ್ಯೆ. ಪ್ರವಾಹದ ನಂತರದ ನೀರವ ಮೌನ. ಅದರಲ್ಲೂ ನಮ್ಮ ತಂಡ
ಸೋತರಂತೂ ಕೇಳುವುದೇ ಬೇಡ. ಜೀವಮಾನದಲ್ಲಿ ಒಮ್ಮೆಯೂ ದಾಂಡು ಹಿಡಿಯದವನೂ, ಒಂದೇ ಒಂದು ಚೆಂಡು ಎಸೆಯದವನೂ, ಜೆಫ್ರಿ ಬಾಯ್ಕಾಟ್, ರಿಚಿ ಬೆನಾಡ್, ಇಯಾನ್ ಬಿಶಪ್, ಮೈಕಲ್ ಹೋಲ್ಡಿಂಗ್, ಟೋನಿ ಗ್ರೆಗ್ ರಂಥವರನ್ನೂ ಮೀರಿಸುವಷ್ಟು ಕ್ರಿಕೆಟ್ ಆಟದ ಬಗ್ಗೆ, ಆಟಗಾರರ ಬಗ್ಗೆ ಸಾಲುಸಾಲಾಗಿ
ಬೇಕಾದ, ಬೇಡವಾದ ವಿವರಣೆ, ಟಿಪ್ಪಣಿ, ವ್ಯಾಖ್ಯಾನ, ಅಭಿಪ್ರಾಯ, ಇನ್ನೂ ಏನೇನು ಇದೆಯೋ ಅದನ್ನೆಲ್ಲ ತಂದು ಸುರಿಯುತ್ತಾರೆ.
ಯಾರು ಕೇಳಿಸಿಕೊಳ್ಳಲಿ, ಬಿಡಲಿ, ನಮ್ಮದೂ ಒಂದು ಇರಲಿ, ನಮ್ಮದೂ ಒಂದಿಷ್ಟು ಇದೆ ಎನ್ನುವ ಸಮಾಧಾನ. ಮೊನ್ನೆ ಮೊನ್ನೆಯ ಉದಾಹರಣೆಯನ್ನೇ
ತೆಗೆದುಕೊಳ್ಳಿ, ಹತ್ತು ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ಜಯಿಸಿದ ಭಾರತದ ಶ್ರೇಯವೆಲ್ಲ ಅಂತಿಮ ಪಂದ್ಯದಲ್ಲಿ ಮುಳುಗಿಹೋಯಿತು. ಕೆಲವರಂತೂ ಭಾರತದ ತಂಡದ ಬಗ್ಗೆ ತಮ್ಮದೇ ಆದ ವಿವರಣೆ ನೀಡಲು ಮುಂದಾದರು. ‘ಈ ಸಲ ಕಪ್ ನಮ್ದೇ’ ಎಂದವರು ಬೇಜಾರುಪಟ್ಟುಕೊಂಡು ಮಾತಾಡಿದರು. ಯಾವ ಆಟಗಾರ ನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು, ಯಾವ ದಾಂಡಿಗನನ್ನು ಯಾವ ಸ್ಥಾನದಲ್ಲಿ ಆಡಿಸಬೇಕಿತ್ತು, ಯಾವ ಚೆಂಡೆಸೆತಗಾರನನ್ನು ಎಲ್ಲಿ ಬಳಸಿಕೊಳ್ಳ ಬೇಕಿತ್ತು, ಯಾರನ್ನು ಎಲ್ಲಿ ಕ್ಷೇತ್ರರಕ್ಷಣೆಗೆ ನಿಲ್ಲಿಸಬೇಕಿತ್ತು, ಇತ್ಯಾದಿ ತಮ್ಮದೇ ಆದ ಅಭಿಪ್ರಾಯ ಮಂಡಿಸಿದರು.
ಕೆಲವರಂತೂ ಮೈದಾನದಲ್ಲಿದ್ದ ತಂಡದ ನಾಯಕ ನೂರಾರು ಪಂದ್ಯ ಆಡಿದ ಅನುಭವ ಹೊಂದಿದವ, ಉಳಿದ ಆಟಗಾರರೂ ಹಲವು ವರ್ಷಗಳಿಂದ ಸಾಧನೆ
ಮಾಡಿ ಬಂದಿರುವವರು, ಮೈದಾನದಲ್ಲಿರುವ ಆಟಗಾರರಿಗೆ ಸಾಕಷ್ಟು ಪಂದ್ಯಗಳಲ್ಲಿ ಆಡಿದ ಅನುಭವವಿದೆ ಎನ್ನುವುದನ್ನೂ ಮರೆತು ಟೀಕಿಸಿದರು. ವಿಮರ್ಶೆ ಸರಿ, ಟೀಕೆಯೂ ಒಂದು ಹಂತದವರೆಗೆ ಒಪ್ಪಿಗೆ. ಆದರೆ ಅದು ಅತಿಯಾಗಬಾರದು. ಯಾವ ಆಟಗಾರನಿಗೂ ತಾನು ಸೋಲಬೇಕೆಂದಿರುವುದಿಲ್ಲ. ಅವರ ಜತೆ ಕೆಲಸ ಮಾಡುವ ವ್ಯವಸ್ಥಾಪಕ, ತರಬೇತುದಾರರಿಂದ ಹಿಡಿದು ನೀರು ತಂದು ಕೊಡುವವರು, ಚೀಲ ಹೊರುವವರವರೆಗೆ ಎಲ್ಲರಿಗೂ ತಮ್ಮ ತಂಡ ಗೆಲ್ಲಲಿ ಎಂದೇ ಇರುತ್ತದೆ.
ಏಕೋ ಏನೋ, ಅಂದಿನ ಅದೃಷ್ಟ ಚೆನ್ನಾಗಿರುವುದಿಲ್ಲ, ಅಥವಾ ಎದುರಾಳಿ ತಂಡ ಉತ್ತಮವಾದ ಆಟ ಆಡಿದ್ದರಿಂದ ಇನ್ನೊಂದು ತಂಡ ಸೋಲುತ್ತದೆ. ಒಂದು ದಿನದ ಅದೃಷ್ಟಕ್ಕಾಗಿ ಅಥವಾ ಒಂದು ದಿನದ ಆಟಕ್ಕಾಗಿ ನಾವು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಅಷ್ಟಕ್ಕೂ ನಮ್ಮ ಆಟಗಾರರು ನಮ್ಮ ಟೀಕೆಯ ಕಡೆ ಗಮನವನ್ನೂ ಹರಿಸುವುದಿಲ್ಲ, ಅದನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಒಂದು ವೇಳೆ ಅವರು ನಮ್ಮಂಥವರ ಟೀಕೆಯನ್ನು ಪರಿಗಣಿಸುವುದೇ ಆಗಿದ್ದರೆ, ವಿಶ್ವಕಪ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಸೆಣಸಿದ ಎರಡು ತಂಡಗಳು ಫಲಿತಾಂಶ ಬಂದ ಒಂದೇ ವಾರದಲ್ಲಿ ಮತ್ತೆ ಮುಖಾಮುಖಿ ಆಗುತ್ತಿರಲಿಲ್ಲ. ಒಂದು ವಾರದ ಒಳಗೆ ಗೆದ್ದ ತಂಡ ವಿಜಯೋತ್ಸವದ ಗುಂಗಿನಿಂದ ಹೊರಬಂದು, ಸೋತ ತಂಡ ಸೋಲಿನ ಶೋಕದಿಂದ ಹೊರಬಂದು, ಹೊಸ ಪಂದ್ಯಕ್ಕೆ ಸಜ್ಜಾಗಿವೆ ಎನ್ನುವುದು ಇದಕ್ಕೆ ಸಾಕ್ಷಿ. ಇದೆಲ್ಲ ಒಂದು ಕಡೆಯಾದರೆ ಇನ್ನೊಂದು ಕಡೆ ನೋಡಿ.
ವಿರಾಟ್ ಕೊಹ್ಲಿ ೫೦ ಶತಕ ಪೂರೈಸುತ್ತಿದ್ದಂತೆ ಕೆಲವರು ಅವನನ್ನು ಸಚಿನ್ ತೆಂಡೂಲ್ಕರ್ ಜತೆ ತುಲನೆ ಮಾಡಲು ಆರಂಭಿಸಿದರು. ಕೆಲವರಂತೂ ಕೊಹ್ಲಿ ತೆಂಡೂಲ್ಕರ್ನ ದಾಖಲೆ ಮುರಿಯುವುದನ್ನೇ ಕಾಯುತ್ತಿದ್ದರು. ಕೊಹ್ಲಿ ತೆಂಡೂಲ್ಕರ್ಗಿಂತ ಒಳ್ಳೆಯ ಆಟಗಾರ ಎಂಬ ಪ್ರಮಾಣಪತ್ರವನ್ನೂ ನೀಡಿದರು. ಕ್ರಿಕೆಟ್ ಪ್ರಪಂಚದಲ್ಲಿ ಸಚಿನ್ ತೆಂಡೂಲ್ಕರ್ನನ್ನು ದೇವರು ಎಂದೂ ವಿರಾಟ್ ಕೊಹ್ಲಿಯನ್ನು ದೊರೆ (ಇತ್ತೀಚೆಗೆ ಎರಡನೆಯ ದೇವರು) ಎಂದೂ ಕರೆಯುವುದಿದೆ. ಅದೆಲ್ಲ ನಮ್ಮ ನೆಚ್ಚಿನ ಆಟಗಾರರಿಗೆ ನಾವು ತೋರಿಸುವ ಪ್ರೀತಿಯೇ ವಿನಾ ಬೇರೇನೂ ಅಲ್ಲ.
ಏಕೆಂದರೆ ಒಮ್ಮೆಯೂ ಸ್ವತಃ ಸಚಿನ್ ತಾನು ದೇವರು ಎಂದಾಗಲಿ, ವಿರಾಟ್ ತಾನು ರಾಜ ಎಂದಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಬದಲಾಗಿ ಇಬ್ಬರೂ
ಕ್ರಿಕೆಟ್ ಆಟದಲ್ಲಿ ದೇವರನ್ನು ಕಂಡವರು. ಇಬ್ಬರೂ ಕ್ರಿಕೆಟ್ ಆಟವನ್ನು ಪ್ರೀತಿಸಿದವರು, ಧ್ಯಾನಿಸಿದವರು, ಪೂಜಿಸಿದವರು, ಆರಾಧಿಸಿದವರು, ಅನುಭವಿಸಿದವರು, ಆನಂದಿಸಿದವರು. ದೇವರು, ದೊರೆ ಎಂದು ಹೇಳಿದ ಮಾತ್ರಕ್ಕೆ ತೆಂಡೂಲ್ಕರ್ನನ್ನು ಗವಾಸ್ಕರ್ ಗೋ, ಬ್ರಿಯಾನ್ ಲಾರಾಗೋ ಹೋಲಿಸುವುದೂ ಸರಿಯಲ್ಲ, ವಿರಾಟ್ನನ್ನು ತೆಂಡೂಲ್ಕರ್ಗೋ, ಬಾಬರ್ ಆಜಮ್ಗೋ ಹೋಲಿಸುವುದೂ ಸರಿಯಲ್ಲ. ಇವರೆಲ್ಲರೂ ‘ಶ್ರೇಷ್ಠ ಆಟಗಾರರು’ ಅಷ್ಟೇ!
ಒಬ್ಬ ಆಟಗಾರನ ಅಂಕಿ-ಅಂಶಗಳೇ ಪ್ರಮುಖವಾಗಿದ್ದರೆ ಸುಮಾರು ೭ ವರ್ಷದ ಹಿಂದೆ ಮುಂಬೈನ ಶಾಲಾ ಕ್ರಿಕೆಟ್ ಪಂದ್ಯಾಟವೊಂದರಲ್ಲಿ ಆರೂವರೆ ಗಂಟೆಗಳ ಕಾಲ ಆಡಿ, ೩೨೭ ಚೆಂಡು ಎದುರಿಸಿ, ೫೯ ಸಿಕ್ಸರ್, ೧೨೯ ಬೌಂಡರಿ ಸಮೇತ ೧೦೦೯ ರನ್ ಬಾರಿಸಿ, ಔಟ್ ಆಗದೇ ಉಳಿದ ಪ್ರಣವ್ ಧನವಾಡೆಯನ್ನು ಇವರೆಲ್ಲರಿಗಿಂತ ಶ್ರೇಷ್ಠ ಆಟಗಾರ ಎಂದು ಪರಿಗಣಿಸಬೇಕಿತ್ತು. ೨೩ ವರ್ಷದ ಪ್ರಣವ್ಗೆ ಇದುವರೆಗೆ ರಾಷ್ಟ್ರೀಯ ತಂಡ ಬಿಡಿ, ರಾಜ್ಯ ತಂಡಕ್ಕೆ ರಣಜಿ ಆಡುವ ಭಾಗ್ಯವೂ ಒದಗಿ ಬರಲಿಲ್ಲ. ಹೋಲಿಕೆಗೆ ಎಂದಲ್ಲ, ಸುಮ್ಮನೆ ಅಂಕಿ-ಅಂಶಗಳ ಕಡೆ ಗಮನ ಹರಿಸೋಣ.
ಸಚಿನ್ ತೆಂಡೂಲ್ಕರ್ ಆಡಿದ ಒಟ್ಟೂ ಅಂತಾರಾಷ್ಟ್ರೀಯ ಪಂದ್ಯಗಳ ಸಂಖ್ಯೆ ೬೬೪. ವಿರಾಟ್ ಕೊಹ್ಲಿ ಆಡಿದ ಒಟ್ಟೂ ಪಂದ್ಯಗಳು ೫೧೮. ಸಚಿನ್ ಹೊಡೆದ ಒಟ್ಟೂ ರನ್ ೩೪ ಸಾವಿರ, ವಿರಾಟ್ ಇದುವರೆಗೆ ಹೊಡೆದದ್ದು ೨೬ ಸಾವಿರ. ಈಗ, ವಿರಾಟ್ ನಿವೃತ್ತನಾಗುವುದರ ಒಳಗೆ ೩೪ ಸಾವಿರ ರನ್ ಹೊಡೆಯಲಾಗದಿದ್ದರೆ ಆತನ ಸಾಧನೆಗೆ ಮನ್ನಣೆ ಕಮ್ಮಿಯೇ? ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ೨೦೦ ಪಂದ್ಯ ಆಡಿ, ೫೧ ಶತಕ, ೬೮ ಅರ್ಧಶತಕವೂ ಸೇರಿದಂತೆ ೧೫,೦೦೦ ರನ್ ಗಳಿಸಿದರೆ ವಿರಾಟ್ ೧೧೧ ಪಂದ್ಯದಲ್ಲಿ ತಲಾ ೨೯ ಶತಕ, ಅರ್ಧಶತಕ ಸೇರಿದ ೮,೦೦೦ ರನ್ ಗಳಿಸಿದ್ದಾನೆ.
ಸಚಿನ್ ಸರಾಸರಿ ೫೩, ವಿರಾಟ್ ಸರಾಸರಿ ೪೯. ವಿರಾಟ್ ಸ್ಟ್ರೈಕ್ ರೇಟ್ ೫೫, ಸಚಿನ್ನದ್ದು ೫೪. ಏಕದಿನದ ಆಟದಲ್ಲಿ ಸಚಿನ್ ೪೬೩ ಪಂದ್ಯದಲ್ಲಿ ೧೮
ಸಾವಿರ ರನ್, ವಿರಾಟ್ ೨೯೨ ಪಂದ್ಯದಲ್ಲಿ ೧೩ ಸಾವಿರ ರನ್ ಹೊಡೆದಿದ್ದಾರೆ. ವಿರಾಟ್ ೫೦ ಶತಕ, ೭೨ ಅರ್ಧಶತಕ ಬಾರಿಸಿದರೆ ಸಚಿನ್ ೪೯ ಶತಕ, ೯೬ ಅರ್ಧಶತಕ ಬಾರಿಸಿದ್ದಾನೆ. ಸರಾಸರಿ, ಸ್ಟ್ರೈಕ್ರೇಟ್ ಎರಡರಲ್ಲೂ ವಿರಾಟ್ ಸಚಿನ್ಗಿಂತ ಮುಂದಿದ್ದಾನೆ. ಇನ್ನು ಟಿ-೨೦ ಪಂದ್ಯದಲ್ಲಿ ೧೧೫ ಪಂದ್ಯದಲ್ಲಿ ಆಡಿದ ಕೊಹ್ಲಿ ೪೦೦೦ ರನ್ ಸೇರಿಸಿದರೆ, ಆಡಿದ ಒಂದೇ ಪಂದ್ಯದಲ್ಲಿ ಸಚಿನ್ ೧೦ ರನ್ ಮಾತ್ರ ಹೊಡೆದಿದ್ದಾನೆ.
ಇಲ್ಲಿ ಒಂದು ವಿಷಯ ಗಮನಿಸಬೇಕು. ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಹೆಚ್ಚು ಆಡುತ್ತಿದ್ದರು. ಇತ್ತೀಚೆಗೆ ಅದು ಕಡಿಮೆಯಾಗಿ ಏಕದಿನದ ಮತ್ತು ಟಿ-೨೦ ಪಂದ್ಯಗಳು ಹೆಚ್ಚಾಗಿವೆ. ಹಾಗಾದರೆ ಸಚಿನ್ ಗಿಂತ ಕಡಿಮೆ ಟೆಸ್ಟ್ ಪಂದ್ಯ ಆಡಿದ ವಿರಾಟ್ ಕಮ್ಮಿ, ಹೆಚ್ಚು ಪಂದ್ಯ ಆಡಿದ ಸಚಿನ್ ಹೆಚ್ಚು ಎಂದಾಗುತ್ತದೆಯೇ? ಇಬ್ಬರೂ ವಿಜ್ಞಾನದ ಕ್ಷೇತ್ರದವರೇ ಆದರೂ ಐನ್ಸ್ಟೀನ್ ಮತ್ತು ಬಿಲ್ ಗೇಟ್ಸ್ ನಡುವೆ ಹೋಲಿಕೆ ಸರಿಯೇ? ಆಯಾ ಕಾಲಘಟ್ಟದಲ್ಲಿ ಇಬ್ಬರೂ ಉತ್ತಮರೇ. ಆಟದಲ್ಲಿ ಅವರವರ ಆಟಗಾರಿಕೆಯ ತಂತ್ರ ಅವರವರಿಗೆ, ಅವರವರ ಕೀರ್ತಿಯೂ ಅವರವರಿಗೇ.
ಯಾರು ಎಷ್ಟೇ ಒಳ್ಳೆಯ ಆಟ ಆಡಿದರೂ, ಸಾಕಷ್ಟು ದಾಖಲೆಯ ಮಿನಾರು ಮುರಿದು ಹೊಸ ದಾಖಲೆಯ ಗೋಪುರವನ್ನೇ ಕಟ್ಟಿದರೂ, ಅವರು ಇನ್ನೊಬ್ಬರಿಗೆ ಪರ್ಯಾಯವಾಗಲಿ, ಸರಿಸಮಾನರಾಗಲಿ ಅಥವಾ ಇನ್ನೊಬ್ಬರಿಗಿಂತ ಶ್ರೇಷ್ಠರಾಗಲಿ ಆಗಲು ಸಾಧ್ಯವಿಲ್ಲ. ಹ್ಞಾಂ, ಆತ ಇನ್ನೊಬ್ಬ ಶ್ರೇಷ್ಠ ಆಟಗಾರನಾಗುತ್ತಾನೆ. ಇಲ್ಲವಾದರೆ ಇನ್ನೊಬ್ಬ ಮಹಾತ್ಮ ಗಾಂಽ, ಸುಭಾಶ್ಚಂದ್ರ ಬೋಸ್, ಪೃಥ್ವಿರಾಜ್ ಕಪೂರ್, ಮೀನಾಕುಮಾರಿ, ಧ್ಯಾನ್ಚಂದ್ ಆಗಿ ಹೋಗಬೇಕಿತ್ತು. ಇನ್ನೊಬ್ಬ ಇಂದಿರಾ ಗಾಂಧಿಯೋ, ವಾಜಪೇಯಿಯೋ ಹುಟ್ಟಿಕೊಳ್ಳಬೇಕಾಗಿತ್ತು. ಇನ್ನೊಬ್ಬ ಅಮಿತಾಭ್ ಬಚ್ಚನ್, ರಜನಿ ಕಾಂತ್, ಮಧುಬಾಲಾ, ಶ್ರೀದೇವಿ ಜನ್ಮತಾಳಬೇಕಿತ್ತು. ಈ ಲೋಕದಲ್ಲಿ ಒಳ್ಳೆಯ ಕ್ರೀಡಾಪಟುಗಳು, ಕಲಾವಿದರು, ಬುದ್ಧಿವಂತರು, ಶ್ರೀಮಂತರು, ಸುರದ್ರೂಪಿಗಳು, ಜನಪ್ರಿಯರು ಹಿಂದೆಯೂ ಇದ್ದರು,
ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅವರಲ್ಲಿ ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಸಲು ಸಾಧ್ಯವಿಲ್ಲ, ಹೋಲಿಸಲೂಬಾರದು. ಅಸಲಿಗೆ
ಇವರೆಲ್ಲ ಮನುಷ್ಯರೇ ವಿನಾ ವಸ್ತುವಲ್ಲ. ವಸ್ತುವನ್ನಾದರೆ ಹೋಲಿಸಬಹುದು. ಮನುಷ್ಯರನ್ನು ಹೇಗೆ ಹೋಲಿಸುವುದು? ಈಗ ಕ್ರೀಡೆಯಲ್ಲೇ ತೆಗೆದುಕೊಳ್ಳಿ, ಅಂಕಿ-ಅಂಶದಲ್ಲಿ ಯಾರು ಕಡಿಮೆ, ಯಾರು ಹೆಚ್ಚು ಎಂದು ಒಂದು ಹಂತದವರೆಗೆ ಹೇಳಬಹುದು. ಅಲ್ಲಿಯೂ ಅವರು ಆಡುತ್ತಿದ್ದ ಪರಿಸ್ಥಿತಿ, ವಾತಾವರಣ, ವಯಸ್ಸು, ಆ ಕಾಲದಲ್ಲಿದ್ದ ನಿಯಮ, ತಂತ್ರಜ್ಞಾನ ಇದನ್ನೆಲ್ಲ ಅಂಕಿ-ಅಂಶಗಳು ಹೇಳುವುದಿಲ್ಲ. ಇನ್ನು, ಸೌಂದರ್ಯ, ಅಭಿನಯವನ್ನೆಲ್ಲ ಅಳೆಯುವ ಮಾಪನ ಇದುವರೆಗೆ ಈ ಲೋಕದಲ್ಲಿ ಬರಲಿಲ್ಲ. ಅದಕ್ಕಾಗಿಯೇ ಒಬ್ಬ ನಟನ ಅಭಿನಯವನ್ನು ಒಬ್ಬರು ಇಷ್ಟಪಟ್ಟರೆ ಇನ್ನೊಬ್ಬರು ಇಷ್ಟಪಡದಿರಬಹುದು. ಒಂದು ಹೆಣ್ಣಿನ ಸೌಂದ
ರ್ಯವನ್ನು ಕೆಲವರು ಇಷ್ಟಪಟ್ಟರೆ ಇನ್ನು ಕೆಲವರು ಇಷ್ಟಪಡದೆ ಇರಬಹುದು. ಇಷ್ಟಪಡುವುದು ಬಿಡುವುದು ಅವರವರ ವೈಯಕ್ತಿಕ. ಆದರೆ ಒಬ್ಬರನ್ನು ಇನ್ನೊಬ್ಬ ರೊಂದಿಗೆ ಹೋಲಿಸುವುದು ಸರಿಯಲ್ಲ.
ಅದೆಲ್ಲ ಹೋಗಲಿ, ಅನೇಕ ಬಾರಿ ನಾವು ಮೊದಲು ಇಷ್ಟಪಡುತ್ತಿದ್ದವರನ್ನೇ ದ್ವೇಷಿಸಲು ಆರಂಭಿಸುತ್ತೇವೆ, ಎಷ್ಟೋ ಸಲ ಮೊದಲು ದ್ವೇಷಿಸುತ್ತಿದ್ದವರನ್ನೇ ಕ್ರಮೇಣ ಇಷ್ಟಪಡಲು ಆರಂಭಿಸುತ್ತೇವೆ. ಅಂದರೆ ಅಂಕಿ-ಅಂಶ, ಪ್ರೀತಿ, ಅಭಿಮಾನ ಎಲ್ಲ ಯಾವ ತಿಪ್ಪೆ ಸೇರಿತು? ಅದೆಲ್ಲ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದಾಯಿತಲ್ಲ? ಹಾಗಾದರೆ ಅಲ್ಲಿ ಬದಲಾದದ್ದು ನಮ್ಮ ನೋಟವೇ ವಿನಾ ಅಂಕಿ- ಅಂಶವಲ್ಲ. ಅಂಕಿ-ಅಂಶಕ್ಕಾದರೆ ಒಂದು ಮಾಪನವೋ, ದಾಖಲೆಯೋ ಇರುತ್ತದೆ. ನಮ್ಮ ನೋಟಕ್ಕೆ, ಅಭಿಪ್ರಾಯಕ್ಕೆ ಯಾವ ಮಾಪನವಿದೆ? ಯಾವ ದಾಖಲೆಯಿದೆ? ಯಾವ ಪ್ರಮಾಣಪತ್ರವಿದೆ? ಅಷ್ಟಕ್ಕೂ ಮಾವಿನ ಹಣ್ಣಿಗೂ ಹಲಸಿನ ಹಣ್ಣಿಗೂ ಹೋಲಿಕೆ ಬೇಕೆ? ಕೇದಗೆ ಹೂವಿಗೂ ಮಲ್ಲಿಗೆ ಹೂವಿಗೂ ತುಲನೆ ಯಾಕೆ? ಮಾವಿನ ಸಿಹಿ ಮಾವಿಗೆ, ಹಲಸಿನ ಸಿಹಿ ಹಲಸಿಗೆ. ಮಲ್ಲಿಗೆಯ ಪರಿಮಳ
ಮಲ್ಲಿಗೆಗೆ, ಕೇದಗೆಯ ಸುಗಂಧ ಕೇದಗೆಗೆ. ಒಂದೇ ಹಿತ್ತಲಲ್ಲಿ ಬಿಟ್ಟ ಹಲಸಿನ ಹಣ್ಣು ಗಾತ್ರದಲ್ಲಿ ದೊಡ್ದದು ಎಂಬ ಕಾರಣಕ್ಕೆ ಮಾವಿನ ಹಣ್ಣಿಗಿಂತ ಹಿರಿದಾಗುವುದಿಲ್ಲ.
ಹೋಗಲಿ, ಒಂದೇ ಮರದಲ್ಲಿ ಬಿಟ್ಟ ಹಲಸಿನ ಹಣ್ಣಿನ ತೂಕದಲ್ಲಿ, ಗಾತ್ರದಲ್ಲಿಯೇ ವ್ಯತ್ಯಾಸ ಇರುವಾಗ, ಒಂದು ಗಿಡದಿಂದ ಇನ್ನೊಂದು ಗಿಡದಲ್ಲಿ ಬಿಡುವ ಹೂವಿನ ಸಂಖ್ಯೆಯಲ್ಲಿಯೇ ಅಂತರ ಇರುವಾಗ, ಇನ್ನು ಮನುಷ್ಯ ಮನುಷ್ಯರ ನಡುವೆ ತುಲನೆ ಸಾಧ್ಯವೇ? ಈ ತುಲನೆಯ ಮೇಲಾಟದಲ್ಲಿ ಒಂದು ಕ್ಷಣದ ಸಂತೋಷವನ್ನು
ಅನುಭವಿಸಬಹುದು, ಅದರೆ ನಿಜ ಸ್ವಾದ, ದೀರ್ಘ ಆನಂದವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ, ಬರೀ ಕ್ರೀಡಾಪಟು, ಕಲಾವಿದ ಎಂದಲ್ಲ, ಮನುಷ್ಯ ಮನುಷ್ಯನ ನಡುವಿನ ಹೋಲಿಕೆ ಬಿಟ್ಟು, ಅವರ ಗುಣ, ಸಾಧನೆಯನ್ನು ಆನಂದಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ.