ಅಭಿಪ್ರಾಯ
ಪವನ್ ವಶಿಷ್ಠ
ನಿಜಕ್ಕೂ ಕೊಲೆಯಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಲೇಬೇಕು ಎಂದು ಜನಪ್ರತಿನಿಧಿಗಳು ಬಯಸುವುದಾದರೆ ಕೊಲೆ ಮಾಡಿದ
ವ್ಯಕ್ತಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಅದರಿಂದ ಬರುವ ಹಣವನ್ನ ಪರಿಹಾರ ರೂಪದಲ್ಲಿ ಆ ಕುಟುಂಬಗಳಿಗೆ ನೀಡಿ.
ಈ ಬಾರಿಯ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ನಡೆದ ಒಂದು ಚರ್ಚೆ ನಿಜಕ್ಕೂ ಅಚ್ಚರಿ ಎಂದೆನಿಸಿತು. ಕಲಾಪದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಮಾತನಾಡಿ ಹರ್ಷ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಿದ್ದೀರಿ ಅದಕ್ಕೆ ನಮ್ಮ ದೇನೂ ತಕರಾರಿಲ್ಲ. ಆದರೆ ಅದೇ ರೀತಿ ಕೊಲೆಯಾದ ದಲಿತ ವ್ಯಕ್ತಿ ದಿನೇಶ್ ಕೂಡ ಕೊಲೆಯಾದ. ಆತನಿಗೇಕೆ 25 ಲಕ್ಷ ರು. ಪರಿಹಾರ ನೀಡಲಿಲ್ಲ? ಆತ ಕಾಂಗ್ರೆಸ್ ವ್ಯಕ್ತಿ ಅಂತ ನೀಡಲಿಲ್ಲವೇ?? ಅಥವಾ ಆತ ಭಜರಂಗದಳಕ್ಕೆ ಸೇರಿದವನಲ್ಲ ಎಂದು ಕೊಡ ಲಿಲ್ಲವವೇ? ಅಥವಾ ಆತ ದಲಿತ ಎಂಬ ಕಾರಣಕ್ಕೆ ಕೊಡಲಿಲ್ಲವೇ? ಅದೇ ರೀತಿ, ಸಮೀರ್ ಸುಭಾನ್ ಸಾಬ್ ಕೂಡ ಕೊಲೆಯಾದ.
ಅವನ ಜೊತೆಯಲ್ಲೇ ಇದ್ದ ಸಂಶೀರ್ ಖಾನ್ ಪಠಾಣ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವನ ಕೊಲೆ ಹಿಂದೆ ಸಂಘ ಪರಿವಾರದವರ ಚಿತಾವಣೆ ಇದೆ. ಕಾನೂನು ಎಲ್ಲರಿಗೂ ಒಂದೇ ಆದ್ದರಿಂದ ಇವರ ಕುಟುಂಬಕ್ಕೂ ಸರಕಾರ 25 ಲಕ್ಷ ಪರಿಹಾರ ನೀಡಬೇಕು. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್ಥಾಫ್ ಅಹ್ಮದ್ ಹಿಮ ಪಾತಕ್ಕೆ ಸಿಲುಕಿ ಸಾವನ್ನಪ್ಪಿರುತ್ತಾನೆ ಆತನ ಕುಟುಂಬಕ್ಕೂ ಸಹ ಸರಕಾರ 25 ಲಕ್ಷ ಪರಿಹಾರ ನೀಡಬೇಕು.
ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಯಾವುದೇ ಸೈನಿಕರು ವೀರ ಮರಣ ಹೊಂದಿದಾಗ 25 ಲಕ್ಷ ರು. ಪರಿಹಾರ ಮೊತ್ತ ನೀಡುತ್ತಿದ್ದೆವು. ಆದರೆ ಇಲ್ಲಿ ವೀರ ಯೋಧ ಸತ್ತರೂ ಪರಿಹಾರ ಕೊಟ್ಟಿಲ್ಲ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಸದನದಲ್ಲಿ ಸರಕಾರಕ್ಕೆ ಬೇಡಿಕೆ ಇಟ್ಟು ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗಕ್ಕೆ ಸದನ ಸಾಕ್ಷಿಯಾಯಿತು. ಸಿದ್ದರಾಮಯ್ಯರ ಈ ಬೇಡಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯಕ್, ಪರೇಶ್ ಮೇಸ್ತಾ ಕೊಲೆಯಾದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು. ಆ ಸಮಯದಲ್ಲಿ ಅದೇ ಜಿಲ್ಲೆಗೆ ಆಗಮಿಸಿ ಮೂರು ದಿನಗಳ ಕಾಲ ತಂಗಿದ್ದರು.
ಪರೇಶ್ ಮೇಸ್ತಾ ಕೊಲೆ ವಿಚಾರ ಆಗಲೇ ತಿಳಿದಿದ್ದರೂ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದರು. ಆ ಸಮಯದಲ್ಲಿ ನಿಮ್ಮ ಸರಕಾರ ಪರೇಶ್ ಕುಟುಂಬಕ್ಕೆ ಏನು ಮಾಡಿತು? ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು. ಅದೇನೇ ಇರಲಿ, ಸಿದ್ದರಾಮಯ್ಯನವರ ಈ ರೀತಿಯ ಬೇಡಿಕೆಗಳನ್ನ ನಿರೀಕ್ಷೆಯೇ ಮಾಡದ ಮಾನ್ಯ ಗೃಹಮಂತ್ರಿಗಳು ಈ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರು ಇದಕ್ಕೆ ಸಕಾರಾತ್ಮಕವಾಗಿದ್ದು ಅವರೊಂದಿಗೆ ಮಾತನಾಡಿ ಈ ಬೇಡಿಕೆಯನ್ನ ಪರಿಗಣಿಸುವಂತೆ ವಿಶೇಷ ಪ್ರಯತ್ನ ಮಾಡುತ್ತೇನೆ ಎಂದು ಉಚ್ಚರಿಸಿದರು.
ಸದನದ ಕಡತದಲ್ಲಿ ಈಗ ಇದು ದಾಖಲಾಗಿದೆ. ಸರಕಾರ ಇದಕ್ಕೆ ಮಾರ್ಗ ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇವರುಗಳ ರಾಜಕೀಯ ಲಾಭ ಮತ್ತು ತೀಟೆ ತೀರಿಸಿಕೊಳ್ಳುವ ಕುತಂತ್ರಕ್ಕೆ ಸಾರ್ವಜನಿಕರ ಹಣ ಪೋಲು ಮಾಡುವ ಅಗತ್ಯ ಇದೆಯಾ?? ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದು ಸರಕಾರದ ಹೊಣೆ, ಹರ್ಷನ ವಿಚಾರದಲ್ಲಿ ಇದು ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ನೈತಿಕ ಹೊಣೆ ಹೊತ್ತೋ ಅಥವಾ ಸಾರ್ವಜನಿಕರ ಒತ್ತಡಕ್ಕೆ ಮಣಿದೋ ಅಥವಾ ಬೇರೆ ಇನ್ಯಾವ ಕಾರಣಕ್ಕೆ 25 ಲಕ್ಷ ರು. ಪರಿಹಾರ ಮೊತ್ತ ಹರ್ಷನ ಕುಟುಂಬಕ್ಕೆ ನೀಡಿದ್ದಾರೆ ಎಂಬುದು ಸರಕಾರ ಉತ್ತರಿಸಲೇಬೇಕು.
ಕುಟುಂಬ ನಡೆಸಲಿಕ್ಕೆ, ಮಾನವೀಯತೆ ದೃಷ್ಠಿಯಿಂದ ನೀಡಿದ್ದೇವೆ ಎಂದರೆ ಅದು ನಿಜಕ್ಕೂ ಒಪ್ಪುವಂತದಲ್ಲ. ಒಂದು ವೇಳೆ ಸರಕಾರ
ಕುಟುಂಬ ನಡೆಸಲಿಕ್ಕೆ, ಮಾನವೀಯತೆ ಆಧಾರದಲ್ಲಿ ಕೊಟ್ಡಿದ್ದೇವೆ ಎನ್ನುವುದಾದರೇ ರಾಜ್ಯದಲ್ಲಿ ನಡೆಯುವ ಕೊಲೆಗಳು ಮಾತ್ರವಲ್ಲದೇ, ನೀವು ಬೆಂಗಳೂರನ್ನು ಸಿಂಗಾಪುರ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ರಸ್ತೆ ತುಂಬೆಲ್ಲಾ ಕಾಣುವ ಗುಂಡಿಯಿಂದ ಮೃತ ಪಟ್ಟ ವಾಹನ ಚಾಲಕ ಮತ್ತು ಸವಾರರಿಗೂ ಅಷ್ಟೇ ಮೊತ್ತದ ಪರಿಹಾರ ನೀಡಬೇಕಾಗುತ್ತದೆ.
ಸಿದ್ದರಾಮಯ್ಯನವರೇ, ಕೊಲೆಯಾದ ಕುಟುಂಬದವರು ಬಡತನದ ಹಿನ್ನೆಲೆಯುಳ್ಳವರು, ಹೆಂಡತಿ ಮಕ್ಕಳ ಜೀವನ ಸಾಗಿಸಲಿಕ್ಕೆ ಆ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ನೀವು ಸದನದಲ್ಲಿ ಹೇಳುವುದಾದರೆ, ಹದೆಗೆಟ್ಟ ರಸ್ತೆ ಗಳಿಂದ ಮೃತ ಪಟ್ಟ ವ್ಯಕ್ತಿಗಳು ಬಡ ಕುಟುಂಬದ ಹಿನ್ನೆಲೆಯವರೇ, ಆ ಕುಟುಂಬಕ್ಕೂ ಪರಿಹಾರ ನೀಡಬೇಕು ಎಂಬ ಬೇಡಿಕೆ ಸರಕಾರದ ಮುಂದೆ ಇಡಬೇಕಿತ್ತಲ್ಲವೇ?
ಹರ್ಷನ ಕೊಲೆ ನಿಜಕ್ಕೂ ಯಾರು ಒಪ್ಪುವಂತದಲ್ಲ. ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಕೊಲೆ ವೈಯಕ್ತಿಕ ದ್ವೇಷದಿಂದ ಮಾತ್ರ ವಲ್ಲದೇ, ಅವರುಗಳು ನಂಬಿರುವ ಸಿದ್ಧಾಂತವನ್ನು ಒಪ್ಪದ ಕಾರಣ ಕೊಲೆಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
ಯಾವುದೇ ಸರಕಾರವಾಗಲಿ ಎಂತಹದ್ದೇ ಒತ್ತಡ ಬಂದರೂ ಕೊಲೆಗಡುಕರನ್ನ ಕಾನೂನಿನ ಮುಷ್ಠಿಯಿಂದ ಬಿಡಿಸಿಕೊಳ್ಳದ ಹಾಗೆ ನೋಡಿಕೊಳ್ಳಬೇಕು ಎಂಬುದು ಎಲ್ಲರ ಆಶಯ. ಆದರೆ ಇಲ್ಲಿ ವಿಶೇಷವಾಗಿ ಹರ್ಷನ ಕೊಲೆ ಮಾಡಿದ ಕೊಲೆಗಡುಕರು ಕೇವಲ ಮುಖ ವಾಡಗಳು ಮಾತ್ರ. ಕೊಲೆಗಳ ಹಿಂದಿನ ನೈಜ ಮುಖಗಳು ದೇಶ ವಿರೋಧಿ ಸಂಘಟನೆಗಳ ಕುಮ್ಮಕ್ಕಿನ್ನಿಂದ ಆಗುತ್ತಿರುವುದು ಎಂದು ಬಹುತೇಕರ ವಾದ ಅದಕ್ಕೆ ಪುಷ್ಠಿ ನೀಡುವಂತೆ ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಸಹ ಕಾಣದ ಕೈಗಳು ಅಡಗಿವೆ ಎಂದು ಅನುಮಾನ ಮತ್ತು ಅಸಮಾಧಾನವನ್ನ ಹೊರ ಹಾಕಿತ್ತು.
ಹಾಗಾಗಿ ಬೇರೆಲ್ಲರ ಕೊಲೆಗಳನ್ನ ಹರ್ಷನ ಕೊಲೆಯಂತೆ ಪರಿಗಣಿಸುವುದು ಅಥವಾ ಸಾಮಾನ್ಯೀಕರಿಸುವುದು ಸೂಕ್ತವಲ್ಲ. ಜಾತಿ-ಧರ್ಮ ಎಲ್ಲವನ್ನೂ ಮೀರಿ ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೆ ಯಾರು ತಕರಾರು ಮಾಡುವುದಿಲ್ಲ. ಆದರೆ ಅದೇ ಯಾರ್ಡ್ ಸ್ಟಿಕ್ ಜಾತಿ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಕೊಲೆಯಾದ ವ್ಯಕ್ತಿಗಳಿಗೂ ವಿಸ್ತರಿಸಬೇಕು ಎಂಬ ನಿಮ್ಮ ವಾದ ಒಪ್ಪು ವಂತದಲ್ಲ. ಹಾಗೇ ನೋಡಿದರೆ ಸಿದ್ದರಾಮಯ್ಯನವರೇ ನಿಮ್ಮ ಆಡಳಿತಾವಽಯಲ್ಲಿ ಕೊಲೆಯಾದ ಹಿಂದೂ ಕುಟುಂಬಗಳಿಗೆ ಎಷ್ಟು ಮೊತ್ತದ ಪರಿಹಾರ ನೀಡಿದ್ದೀರಿ??
ನಿಜಕ್ಕೂ ಕೊಲೆಯಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಲೇ ಬೇಕು ಎಂದು ಜನಪ್ರತಿನಿಧಿಗಳು ಬಯಸುವುದಾದರೆ ಕೊಲೆ ಮಾಡಿದ ವ್ಯಕ್ತಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಅದರಿಂದ ಬರುವ ಹಣವನ್ನ ಪರಿಹಾರ ರೂಪದಲ್ಲಿ ಆ ಕುಟುಂಬಗಳಿಗೆ ನೀಡಿ. ಒಂದು ವೇಳೆ ಆತನ ಬಳಿ ಆಸ್ತಿಯೇ ಇಲ್ಲದಿದ್ದರೆ ಆತನಿಗೆ ಚಿತಾವಣೆ ನೀಡಿದ ವ್ಯಕ್ತಿಯೋ ಅಥವಾ ಸಂಘಟನೆ ಮುಖ್ಯಸ್ಥರ ಆಸ್ತಿಯನ್ನಾದರೂ ಮುಟ್ಟು ಗೋಲು ಹಾಕಿಕೊಂಡು ಪರಿಹಾರ ನೀಡಿ. ಅದು ಬಿಟ್ಟು ನಿಮ್ಮ ರಾಜಕೀಯ ತೀಟೆಗೆ ಸಾರ್ವಜನಿಕರ ದುಡ್ಡು ಪೋಲು ಮಾಡಬೇಡಿ.
ಸಿದ್ಧರಾಮಯ್ಯನವರೇ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ಕಾರಣ ಕೊನೇ ಪಕ್ಷ ಹರ್ಷನ ಕೊಲೆ ವಿಷಯ ಶಿವಮೊಗ್ಗ ದಾಟಲು ಸಾಧ್ಯ ವಾಯಿತು. ಇಲ್ಲದಿದ್ದರೇ ಇದು ಕೂಡ ನಿಮ್ಮ ಅವಽಯಲ್ಲಿ ಕೊಲೆಯಾದ ಹಿಂದೂಗಳಿಗೆ ವೈಯಕ್ತಿಕ ದ್ವೇಷವೇ ಕಾರಣ ಎಂಬ ದಾಟಿಯಲ್ಲೇ ವರದಿ ನೀಡಿ ಹರ್ಷನ ಕೊಲೆಯ ಹಿಂದಿನ ಸತ್ಯವೂ ಅವನ ಜೊತೆಯೇ ಮಣ್ಣಾಗುತ್ತಿತ್ತೋ ಏನೋ?? ಅಷ್ಟರ ಮಟ್ಟಿಗೆ ನೀವು ಆಡಳಿತ ರೂಢ ಬಿಜೆಪಿಗೆ ಧನ್ಯವಾದ ಹೇಳಲೇ ಬೇಕು.
ಹಾಗೆಯೇ ಕೊಲೆಯಾದ ಕುಟುಂಬಗಳಿಗೆ ಯಾವುದೇ ಮಾನದಂಡಗಳಿಲ್ಲದೇ ಮನಸೋ ಇಚ್ಛೆ ಪರಿಹಾರ ನೀಡುವ ಸಂಪ್ರದಾಯವನ್ನ ಎಲ್ಲಾ ಸರಕಾರಗಳು ಬಿಡಬೇಕು.