ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಮನುಷ್ಯ ತನ್ನ ಬುದ್ಧಿಯನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಅವಿಷ್ಕಾರವೇ ಕೃತಕ ಬುದ್ಧಿಮತ್ತೆ (AI-Artificial intelligence). ಈ ತಂತ್ರಜ್ಞಾನಕ್ಕೆ ಅರ್ಧ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಕಂಪ್ಯೂಟರ್ ಅವಿಷ್ಕಾರ ಗೊಂಡಾಗಲೇ ಎ.ಐ. ಅದರ ಗರ್ಭಾಶಯದಲ್ಲಿ ಮೊಳಕೆಯೊಡೆದಿತ್ತು. ಗೂಗಲ್‌ನ ಸಹಾಯ ಬಳಸಿ ಅದರ ಇತಿಮಿತಿಗಳನ್ನು ಅರಿತಿರುವವರಿಗೆ ಈ ಕೃತಕ ಬುದ್ಧಿಮತ್ತೆ ಚಾಟ್ ಜಿಪಿಟಿಯ ಬರಹದ ಕೆಲಸ ಹೆಚ್ಚೇನೂ ಆಶ್ಚರ್ಯಕರವಾಗಿ ಕಾಣುವುದಿಲ್ಲ.
ಟೆಕ್ ಪರಿಣತರಿಗೆ ಇದೊಂದು ದೊಡ್ಡ ವಿಷಯವೇ ಅಲ್ಲ. ಆದರೆ ಸಾಲು ಸಾಲು ಕಾರಣಗಳಿಗೆ ಸುದ್ಧಿಯಾಗಿರುವ ಕೃತಕ ಬುದ್ಧಿಮತ್ತೆ ಎಐ ಚಾಟ್ ಜಿಪಿಟಿ ಈಗ ಟ್ರೆಂಡ್‌ನಲ್ಲಿ ಇದೆ. ಇದೀಗ ಈ ಎಐ ಸಾಪ್ಟ್‌ವೇರ್ ಪ್ರಪಂಚದಲ್ಲಿ ಹರಿದಾಡುತ್ತಿರುವ ಪ್ರಮುಖ ಸುದ್ದಿಯಾಗಿದೆ. ಈ ಎಐ ತಾಣ ಚಾಟ್ ಮೂಲಕ ನಾವು ಕೊಡುವ ಇನ್ ಪುಟ್ ಕಮಾಂಡ್‌ಗೆ ಕೆಲವೇ ಸೆಕೆಂಡ್‌ಗಳಲ್ಲಿ ನಮಗೆ ಏನು ಬೇಕೋ, ಯಾವ ಸ್ವರೂಪದಲ್ಲಿ ಬೇಕೋ ಅದನ್ನು ಬರೆದು ಕೊಡುತ್ತದೆ. ನಾಲ್ಕು ಪಾರಾ ಪದ್ಯದಿಂದ ಹಿಡಿದು ನೂರಾರು ಪದಗಳ ಲೇಖನ, ಸಣ್ಣ ಕಥೆಗಳು, ಯಾವುದೇ ಬ್ಯುಸಿನೆಸ್ ವೆಂಚರ್ ಬಗೆಗಿನ ಕೂಲಂಕಶ ಮಾಹಿತಿ
ಯನ್ನು ಫಟಾಫಟ್ ಬರೆದು ಬಿಸಾಕುತ್ತದೆ.
ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ವಿಷಯ ಹೇಳಿದರೆ ಅದರ ಬಗ್ಗೆ ಬರೆದುಕೊಡುವ ಈ ತಾಣವು ಬರಹ ಹಾಗೂ ಬರಹದ ಸುತ್ತ ಕೆಲಸ ಮಾಡು ವವರಿಗೆ ಸ್ವಲ್ಪ ಅಭದ್ರತೆಯನ್ನು ಹುಟ್ಟು ಹಾಕುತ್ತಿದೆ. ಇತ್ತೀಚೆಗೆ ಮಾರುಕಟ್ಟೆ ಸೃಷ್ಠಿಸಿ ಕೊಳ್ಳುತ್ತಿರುವ ಕಂಟೆಂಟ್ ಬರೆಯುವ ವಲಯದಲ್ಲಿ ಉದ್ಯೋಗಿ ಗಳಿಗೆ ಇದು ಕೆಲ ದಿನಗಳಲ್ಲೇ ಹೊಡೆತ ನೀಡುವುದರ ಬಗ್ಗೆ ತಲ್ಲಣ ಸೃಷ್ಟಿ ಮಾಡಿದೆ. ಇತ್ತೀಚೆಗೆ ಹಲವಾರು ಮಾದ್ಯಮಗಳಲ್ಲಿ ಪ್ರಕಟವಾದ ಒಂದು ವಿಷಯವೇನೆಂದರೆ “The world may face greatest threat, irreperable and unprecedented situation, either through nuclear weapon, natural disaster or through artificial inteligence”.. ಇದೀಗ ವಿಶ್ವದೆಲ್ಲೆಡೆ ಆರ್ಥಿಕ ಹಿಂಜರಿತದಿಂದ ನಿರುದ್ಯೋಗ ಸೃಷ್ಟಿಯಾಗುತ್ತಿರುವುದು ಒಂದೆಡೆ ಅದಕ್ಕೆ ಪೂರಕವಾಗಿ ಸಂಚಲನ ಮೂಡಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಅದಕ್ಕೆ ಸಂಬಂಧಿಸಿದ ಹೊಚ್ಚ ಹೊಸ ಸಾಧನ ಚಾಟ್ ಜಿಪಿಟಿ ಮತ್ತು ಅದರಂತಹ ತಂತ್ರಜ್ಞಾನಗಳು ಇನ್ನು ಕೆಲವೇ ವರ್ಷಗಳಲ್ಲಿ ಉಂಟು ಮಾಡಬಹುದಾದ ನೈತಿಕ, ಸಾಮಾಜಿಕ, ಆರ್ಥಿಕ ತಲ್ಲಣಗಳು ಕೆಲ ದಶಕಗಳಲ್ಲಿ ತಂತ್ರಜ್ಞಾನವು ಮನುಕುಲದ ಮೇಲೆಯೇ ಸವಾರಿ ಮಾಡಬಹುದು ಅನ್ನುವ ಆತಂಕವನ್ನು ಗಟ್ಟಿಗೊಳಿಸುವಂತಿದೆ ಈ ‘ಚಾಟ್ ಜಿಪಿಟಿ.’
ಸರಳವಾಗಿ ಹೇಳಬೇಕೆಂದರೆ ಈ ಚಾಟ್ ಜಿಪಿಟಿ ಅನ್ನುವುದು ಬಳಸುವವರು ಕೇಳುವ ಪ್ರಶ್ನೆಗಳಿಗೆ ಕ್ಷಣದಲ್ಲಿಯೇ ಪಠ್ಯ ರೂಪದಲ್ಲಿ ಮನುಷ್ಯರ ಭಾಷೆ ಯಲ್ಲಿ ಉತ್ತರ ಕೊಡುವ ಒಂದು ಎ.ಐ. ತಂತ್ರಜ್ಞಾನ. ಇದೊಂದು ಜಾಲತಾಣ ರೂಪದಲ್ಲಿದೆ. ಗೂಗಲ್‌ನಲ್ಲಿ ನಮ್ಮ ಹುಡುಕಾಟಕ್ಕೆ ಸಾವಿರಾರು ಲಕ್ಷಾಂತರ ತಾಣಗಳನ್ನು ಸೂಚಿಸಬಹುದು. ಅಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಅರಸಿ ಆಯ್ದುಕೊಳ್ಳುವುದು ನಮ್ಮ ಕೆಲಸ. ಆದರೆ ಚಾಟ್ ಜಿಪಿಟಿಯಲ್ಲಿ ಒಬ್ಬ ಪರ್ಸನಲ್ ಅಸಿಸ್ಟೆಂಟ್ ಜೊತೆ ಕೂತು ಮಾತನಾಡುವ ಅನುಭವವನ್ನು ನೀಡುತ್ತದೆ.
ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಕ್ಷಣದಲ್ಲಿಯೇ ಉತ್ತರ ಸಿಗುತ್ತದೆ. ಸಿಕ್ಕ ಉತ್ತರದ ಮೇಲೆ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದು ಒಂದು ಆಪ್ತ ಮಾತುಕತೆ, ಚರ್ಚೆಯ ರೂಪದಲ್ಲಿ ಉತ್ತರಿಸುತ್ತಾ ಹೋಗುತ್ತದೆ. ನಾವು ಕೇಳುವ ಪ್ರಶ್ನೆಗಳಿಗೆ, ನಮ್ಮ ಅಗತ್ಯಗಳಿಗೆ, ತೊಂದರೆಗಳಿಗೆ ಒಬ್ಬ ಕೌನ್ಸಿಲರ್ ಬಳಿಯೋ, ವಕೀಲರ ಬಳಿಯೋ, ಡಾಕ್ಟರ್‌ರ ಬಳಿಯೋ, ಮಾರ್ಕೆಟಿಂಗ್ ಪರಿಣಿತರ ಬಳಿಯೋ ಹೇಳಿಕೊಂಡು ಪರಿಹಾರ ಪಡೆಯುವ ರೂಪದಲ್ಲಿರುತ್ತದೆ.
ಸ್ಮಾರ್ಟ್ ಫೋನ್‌ಗಳು ಹೆಚ್ಚಾಗಿರುವ ಈ ಕಾಲದಲ್ಲಿ ಎಐ ಬಳಕೆ ಹೊಸದೇನಲ್ಲ. ಮನೆಯ ಸ್ಮಾರ್ಟ್ ಮಂದಿಯಿಂದ ಹಿಡಿದು ಎಐ ಅಂದರೆ ಏನು ಎಂದು
ಗೊತ್ತಿಲ್ಲದೆಯೂ ಗೂಗಲ್ ಮ್ಯಾಪ್ ಬಳಸುವ ಜನರವರೆಗೂ ಇದೀಗ ಸರ್ವಾಂತರ್ಯಾಮಿ. ರೋಬೋಟೆಕ್ ಎಂದು ಕರೆಯುವ ಯಾವೆಲ್ಲಾ ಉಪಕರಣ ಸೇವೆಗಳನ್ನು ನಾವಿಂದು ಬಳಸುತ್ತಿದ್ದೇವೆಯೋ ಅಲ್ಲೆಲ್ಲಾ ಈಗಾಗಲೇ ಎಐ ನಮಗರಿವಿಲ್ಲದೆಯೇ ಕೆಲಸ ಮಾಡುತ್ತಿದೆ. ನಮ್ಮ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದೆ ಎಂದಾದರೆ ನಾವೂ ಅದರ ಫಲಾನುಭವಿಗಳೇ.
ಗೂಗಲ್ ಅಥವಾ ಮೆಟಾ ಮೊದಲಾದ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಚಾಟ್ ಜಿಪಿಟಿಯಂತಹ ತಂತ್ರಜ್ಞಾನಗಳು, ಅವುಗಳಲ್ಲಿರುವ ಸೌಲಭ್ಯಗಳು, ಬಳಸುತ್ತಿರುವ ಉದ್ದೇಶಗಳ ವಿವರಗಳು, ಲಭ್ಯವಿದ್ದಂತೆ ಕಾಣುತ್ತಿಲ್ಲ. ಇಂತಹ ತಂತ್ರಜ್ಞಾನಗಳನ್ನು ಸಾರ್ವಜನಿಕರ ಬಳಕೆಗೆ ಈ ಸಂಸ್ಥೆಗಳು ನೀಡುವ ಖಾತ್ರಿಯಿಲ್ಲ. ಚಾಟ್ ಜಿಪಿಟಿಯನ್ನು ಅಭಿವೃದ್ಧಿಗೊಳಿಸಿ, ಸಾರ್ವಜನಿಕರ ಬಳಕೆಗಾಗಿ ಬಿಡುಗಡೆ ಮಾಡಿದ ಓಪನ್ ಎಐ ಸಂಸ್ಥೆಯಲ್ಲಿ ಮೈಕ್ರೋಸಾಪ್ಟ್ ಮೊದಲಾಗಿ ಕೆಲವು ಸಂಸ್ಥೆಗಳು ಸಾವಿರಾರು ಕೋಟಿ ಡಾಲರ್‌ಗಳ ಬಂಡವಾಳ ಹೂಡಿಕೆ ಮಾಡಲು ಮುಂದಾಗಿರುವುದು ವಾಸ್ತವ.
ಚಾಟ್ ಜಿಪಿಟಿಯ ಮಾಸಿಕ ನಿರ್ವಹಣೆಯ ವೆಚ್ಚ ೩೦ ಲಕ್ಷ ಡಾಲರ್‌ಗೂ ಅಧಿಕವೆಂದು ಅಂದಾಜುಗಳು ಮತ್ತು ಮಾಹಿತಿಗಳು ಇವೆ. ಈ ಕಾರಣದಿಂದ ಓಪನ್ ಎಐ ಸಂಸ್ಥೆ ಚಾಟ್ ಜಿಪಿಟಿ ಸೌಲಭ್ಯ ಬಳಸುವವರಿಗೆ ೪೨ ಡಾಲರ್ ನಂತೆ ಶುಲ್ಕ ವಿಧಿಸಲು ಪ್ರಾರಂಭಿಸಿವೆ. ಇದೇ ಸಂದರ್ಭದಲ್ಲಿ ಚಾಟ್ ಜಿಪಿಟಿಯನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ದಾಳಿ ಮಾಡುವ ಆತಂಕ ಹೆಚ್ಚಾಗಬಹುದು. ಬ್ಯಾಂಕ್‌ಗಳು, ವಾಣಿಜ್ಯ ಸಂಸ್ಥೆಗಳು, ಉದ್ಯಮಗಳು, ಸರಕಾರಿ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು ಸೈಬರ್ ಅಪರಾಧ ತಡೆಯಲು ಮಾಡಿಕೊಂಡ ಸುರಕ್ಷಾ ವ್ಯವಸ್ಥೆಗಳನ್ನು ಬೇಧಿಸಿ, ದೊಡ್ಡ ಪ್ರಮಾಣದಲ್ಲಿ ಸೈಬರ್ ದಾಳಿ ಮಾಡಲು ಸೈಬರ್ ಅಪರಾಧಿ ಸಂಘಟನೆಗಳು ಪ್ರಯತ್ನ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗದೇ ಇರಲಾರದು.
ಹಿಂಸಾಚಾರ, ಕೋಮುಗಲಭೆ, ಆತಂಕ ಸೃಷ್ಠಿಸಲು ಗಣ್ಯರ ಚಾರಿತ್ರ್ಯವಧೆ ಮಾಡಲು ನಕಲಿ ಸುದ್ಧಿ, ಫೋಟೊ, ವಿಡಿಯೋ ಮತ್ತು ಆಡಿಯೋ, ಸೃಷ್ಟಿಸು ತ್ತಿರುವ ಸೈಬರ್ ಭಯೋತ್ಪಾದಕರು ಮುಂಬರುವ ದಿನಗಳಲ್ಲಿ ಚಾಟ್ ಜಿಪಿಟಿಯಂತಹ ತಂತ್ರಾಂಶಗಳನ್ನು ಬಳಸಲು ಪ್ರಾರಂಭಿಸಿದರೆ ವಿಶ್ವದಾದ್ಯಂತ ಸೈಬರ್ ಭಯೋತ್ಪಾದನೆಯ ಕೃತ್ಯಗಳು ಅನೇಕ ಪಟ್ಟು ಹೆಚ್ಚಾಗಬಹುದು. ಇದೀಗ ಚಾಚ್ ಜಿಪಿಟಿ ದುರ್ಬಳಕೆಯನ್ನು ತಡೆಯಲು ಜಿಪಿಟಿ ಜೀರೊ ಎನ್ನುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.