Saturday, 7th September 2024

ಗೆಲ್ಲುವ ಹುಮ್ಮಸ್ಸಿಗೆ ಗೊಂದಲ, ಭಿನ್ನಮತಗಳೇ ಅಡ್ಡಿ

ವರ್ತಮಾನ

maapala@gmail.com

ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೋಬ್ಯಾಕ್ ಶೋಭಾ ಅಭಿಯಾನ, ಪುತ್ತಿಲ ಪರಿವಾರದ ಬೆದರಿಕೆ, ಹಾಲಿ ಸಂಸದ-ಸಚಿವರಿಗೆ ಟಿಕೆಟ್ ನೀಡದಂತೆ ಒತ್ತಾಯ, ಮಂಡ್ಯದಲ್ಲಿ ಮೈತ್ರಿ ಗೊಂದಲ… ಹೀಗೆ ಹಲವೊಂದು ವಿಘ್ನಗಳು ಎದುರಾಗು ತ್ತಿರುವುದು ಮೊಸರಲ್ಲು ಕಲ್ಲು ಸಿಕ್ಕಿದಂತಾಗಿದೆ.

ಕಳೆದೆರಡು ಚುನಾವಣೆಗಳಂತೆ ಈ ಬಾರಿಯೂ ಬಿಜೆಪಿ ಲೋಕಸಭೆ ಚುನಾವಣೆ ಎದುರಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ. ದೇಶದಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನಗಳ ಮೇಲೆ ಕಣ್ಣಿಟ್ಟು, ರಾಜ್ಯದಲ್ಲಿ ೨೮ಕ್ಕೆ ೨೮ ಸ್ಥಾನಗಳನ್ನು ಗೆಲ್ಲಬೇಕು ಎಂದು ಶ್ರಮಿಸುತ್ತಿರುವ ಸಂದರ್ಭದಲ್ಲಿ
ದೇಶಾದ್ಯಂತ ಬಿಜೆಪಿ ೪೦೦ ಗುರಿ ಮುಟ್ಟದೇ ಇದ್ದರೂ ತನ್ನ ಸ್ಥಾನ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹೊಂದಿದೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ೨೮ಕ್ಕೆ ೨೮ ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಹಠ ತೊಟ್ಟು ಕೆಲಸ ಮಾಡುತ್ತಿರುವ ಮಿತ್ರಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಬಿಜೆಪಿಗೆ ಸ್ವಪಕ್ಷದಲ್ಲೇ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವುದು ಅಸಾಧ್ಯವಲ್ಲವಾದರೂ ಕಷ್ಟದ ಕೆಲಸವಾಗಿದೆ.

ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿಯಲ್ಲೇ ಗೊಂದಲಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳ ಮಧ್ಯೆ ಇನ್ನೂ ಸ್ಥಾನ ಹೊಂದಾಣಿಕೆ ಅಂತಿಮ ಗೊಳ್ಳದೇ ಇರಲು ಮಂಡ್ಯದ ಈ ಗೊಂದಲವೂ ಕಾರಣವಾಗಿದೆ. ಆದರೆ, ಅದಕ್ಕಿಂತ ಹೆಚ್ಚು ಬಿಜೆಪಿಗೆ ತಲೆತಿನ್ನುವಂತೆ ಮಾಡಿರುವುದು ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಗೋಬ್ಯಾಕ್ ಶೋಭಾ ಅಭಿಯಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಲ ಪರಿವಾರದ ಕಾಟ.

ಈ ಎರಡೂ ಪ್ರಕರಣಗಳು ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇನ್ನೂ ದೂರವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಎಚ್ಚರಿಕೆ ಮಧ್ಯೆಯೂ ತಣ್ಣಗಾಗದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಗೋಬ್ಯಾಕ್ ಶೋಭಾ ಅಭಿಯಾನ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಗೋಬ್ಯಾಕ್ ಶೋಭಾ ಅಭಿಯಾನದ ಹಿಂದೆ ಇರುವ ಶಕ್ತಿಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿವೆ. ಆದರೂ ಈ ರೀತಿ ಅಭಿಯಾನದ ಮೂಲಕ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾರೆ ಎಂದರೆ ಅದರ ಹಿಂದೆ ಅದೇ ಪಕ್ಷದ ಪ್ರಬಲ ನಾಯಕರ ಕೈವಾಡ ಇದೆ ಎನ್ನುವುದು ಸ್ಪಷ್ಟ.

ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಸಚಿವೆಯಾಗಿದ್ದಾರೆ. ಹೀಗಾಗಿ ಅವರು ಕ್ಷೇತ್ರಕ್ಕೆ ಹೆಚ್ಚು ಬಾರಿ ಬಾರದೇ ಇರುವುದು ಸಹಜ. ಕೇವಲ ಸಂಸದೆಯಾಗಿ ಅವರನ್ನು ಗಮನಿಸಿದಾಗ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ ಎಂಬಂತೆ ಕಂಡುಬರುತ್ತದೆಯಾದರೂ ಕೇಂದ್ರ ಸಚಿವೆಯಾಗಿ ನೋಡಿದಾಗ ಕ್ಷೇತ್ರವೊಂದನ್ನೇ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಆದರೆ, ಅವರ ವಿರುದ್ಧ ಅಭಿಯಾನದಲ್ಲಿ ತೊಡಗಿರುವವರು ಶೋಭಾ
ಕರಂದ್ಲಾಜೆ ಕೇಂದ್ರ ಸಚಿವೆ ಎಂಬುದನ್ನು ಮರೆತಂತೆ ಕಾಣಿಸುತ್ತಿದೆ. ಏಕೆಂದರೆ, ಸಚಿವೆಯಾಗಿದ್ದುಕೊಂಡು ಕ್ಷೇತ್ರದಲ್ಲೇ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಮೇಲಾಗಿ ಅವರು ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿಲ್ಲ. ಸ್ಥಳೀಯ ಲಾಬಿಗಳಿಗೆ ಅವರು ಮಣಿಯುತ್ತಿಲ್ಲ, ಅವರ ಮಾತುಗಳನ್ನು ಕೇಳುತ್ತಿಲ್ಲ ಎಂಬುದನ್ನು ಹೊರತು ಪಡಿಸಿ ಕೇಂದ್ರದಿಂದ ಕ್ಷೇತ್ರಕ್ಕೆ ತಲುಪಬೇಕಾದ ಯೋಜನೆ, ಕಾರ್ಯಕ್ರಮಗಳನ್ನು ತಲುಪಿಸಿದ್ದಾರೆ. ಒಬ್ಬ ಸಚಿವೆಯಾಗಿ ತಮ್ಮ ಪ್ರಭಾವ ಬೀರಿ ಕ್ಷೇತ್ರಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿಲ್ಲ ಎಂಬುದು ನಿಜವಾದರೂ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ ಎನ್ನಲು ಸಾಧ್ಯವೇ ಇಲ್ಲ. ಹೀಗಾಗಿ ಗೋ ಬ್ಯಾಕ್ ಶೋಭಾ ಅಭಿಯಾನದ ಹಿಂದೆ ಭಿನ್ನಮತೀಯ ಗುಂಪುಗಳಿರುವುದು ಎದ್ದು ಕಾಣುತ್ತದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಘೋಷಣೆಯ ಹಿಂದೆಯೂ ಇದೇ ಸ್ಥಳೀಯ ರಾಜಕಾರಣ ಎದ್ದು ಕಾಣುತ್ತಿದೆ. ಪುತ್ತೂರು ಮಂಡಲದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಲೋಕಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಲೇಬೇಕು ಎಂಬ ಉದ್ದೇಶ ಇದ್ದಂತೆ ಕಂಡುಬರುತ್ತಿಲ್ಲ. ಆದರೆ, ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷರನ್ನಾಗಿ ಪುತ್ತಿಲ ಅವರನ್ನು ಆಯ್ಕೆ ಮಾಡಲು ಕ್ಷೇತ್ರದ ಮಾಜಿ ಶಾಸಕರು ಮತ್ತು ಅವರ ಬೆನ್ನಿಗೆ ನಿಂತಿರುವ ಕೆಲವು ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ.

ಇದು ಪುತ್ತಿಲ ಪರಿವಾರದವನ್ನು ಕೆರಳಿಸಿದ್ದು, ಹೇಗಾದರೂ ಮಾಡಿ ಬಿಜೆಪಿಯಲ್ಲಿ ಸ್ಥಾನಮಾನ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಏಕೆಂದರೆ,
ವಿಧಾನಸಭೆ ಚುನಾವಣೆಯಲ್ಲಿದ್ದ ಪುತ್ತಿಲ ಪರಿವಾರದ ಬಲ ಕುಂಠಿತವಾಗಿದೆ. ಆ ವೇಳೆ ಅವರ ಜತೆ ಗುರುತಿಸಿಕೊಂಡಿದ್ದವರ ಪೈಕಿ ಅನೇಕರು ದೂರ ಸರಿದಿದ್ದಾರೆ. ಇನ್ನು ಕೆಲವರು ತಟಸ್ಥರಾಗಿದ್ದಾರೆ. ಏಕೆಂದರೆ, ಪುತ್ತಿಲ ಪರಿವಾರದಲ್ಲಿದ್ದ ಬಹುತೇಕರಿಗೆ ರಾಜ್ಯ ಬಿಜೆಪಿ ಮೇಲೆ ಆಕ್ರೋಶ ಇದ್ದರೂ ಅವರ ಗುರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು.

ಅದಕ್ಕಾಗಿ ದಕ್ಷಿಣ ಕನ್ನಡದಲ್ಲೂ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳುವುದು. ಒಂದೊಮ್ಮೆ ಅರುಣ್‌ಕುಮಾರ್ ಪುತ್ತಿಲ ಲೋಕಸಭೆ ಚುನಾವಣೆಗೆ ನಿಂತರೂ ಪ್ರಧಾನಿ ಮೋದಿ ಕಾರಣಕ್ಕೆ ಬಹುತೇಕರು ತಟಸ್ಥರಾಗಿ ಉಳಿದು ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕುತ್ತಾರೆ. ಇದು ತಿಳಿದೇ ಇದೀಗ ಪುತ್ತಿಲ ಪರಿವಾರದವರು ಬಿಜೆಪಿಯಲ್ಲಾದರೂ ಅವರಿಗೆ ಸೂಕ್ತ ಸ್ಥಾನಮಾನ ಕೊಡಿಸಬೇಕೆಂಬ ಕಾರಣಕ್ಕೆ ಬ್ಲ್ಯಾಕ್‌ಮೇಲ್ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಪುತ್ತಿಲ ಪರಿವಾರದ ಬೇಡಿಕೆಗೆ ಅಡ್ಡಿಯಾಗಿರುವವರನ್ನು ಲೆಕ್ಕಿಸದೆ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿದರೆ ಇಡೀ ಪರಿವಾರ ಬಿಜೆಪಿ ಜತೆ ಬರುತ್ತದೆ.

ಇದನ್ನು ಪಕ್ಷದ ರಾಜ್ಯ ನಾಯಕರು ಅರ್ಥ ಮಾಡಿಕೊಂಡು ಮುಂದುವರಿದರೆ ಸಮಸ್ಯೆ ಬಗೆಹರಿಯುತ್ತದೆ. ಅದನ್ನು ಬಿಟ್ಟು ಪುತ್ತಿಲ ಪರಿವಾರದವರು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಲು ಇಷ್ಟೆಲ್ಲಾ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳನ್ನು ನಂಬಿ ಕುಳಿತರೆ ಲೋಕಸಭೆ ಚುನಾವಣೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರ ಜತೆಗೆ ರಾಜ್ಯದ ನಾಲ್ಕೈದು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು ಎಂಬ
ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಕಾರಣ ಸಂಸದರು ಮತ್ತು ಸ್ಥಳೀಯ ಮುಖಂಡರ ನಡುವಿನ ಮುನಿಸು. ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಸ್ಥಳೀಯ ಶಾಸಕರೇ ತಿರುಗಿ ಬಿದ್ದಿದ್ದಾರೆ. ಅದು ಎಲ್ಲಿಯವರೆಗೆ ಬಂದಿದೆ ಎಂದರೆ ಭಗವಂತ ಖೂಬಾ ತಮ್ಮ ಹತ್ಯೆಗೆ ಸಂಚು ರೂಪಿಸಿ ದ್ದಾರೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡುವಷ್ಟವರೆಗೆ ಬೆಳೆದುನಿಂತಿದೆ.

ಭಗವಂತ ಖೂಬಾ ನಮ್ಮನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ ಎಂಬುದಷ್ಟೇ ಇದರ ಹಿಂದಿರುವ ಕಾರಣ. ಇದರ ಹೊರತಾಗಿ ಅಲ್ಲಿ ಭಿನ್ನಮತಕ್ಕೆ ಗಂಭೀರ ಕಾರಣಗಳೇ ಇಲ್ಲ. ಆದರೆ, ಬಣ ರಾಜಕಾರಣದ ಫಲವಾಗಿ ಇದಕ್ಕೆ ರಾಜ್ಯದ ಕೆಲ ನಾಯಕರ
ಬೆಂಬಲವೂ ಇರುವುದರಿಂದ ಗಲಾಟೆ ಜೋರಾಗುತ್ತಿದ್ದು, ಪಕ್ಷಕ್ಕೆ ಹಾನಿ ಮಾಡುವಷ್ಟರ ಮಟ್ಟಿಗೆ ಬೆಳೆಯುತ್ತಿದೆ. ಆರಂಭದಲ್ಲಿ ಈ ಬೆಂಕಿಗೆ ತುಪ್ಪ ಸುರಿದು ಬೆಳೆಸಿದ ವರು ಇದೀಗ ಆರಿಸಲಾಗದಂತೆ ಪರದಾಡುವಂತಾಗಿದೆ. ಆದರೆ, ಇದೆಲ್ಲಕ್ಕಿಂತ ಹೆಚ್ಚು ಬಿಜೆಪಿಗೆ ತಲೆನೋವಾಗಿರುವುದು ಮಂಡ್ಯ ಲೋಕಸಭಾ ಕ್ಷೇತ್ರ. ಈ ಕ್ಷೇತ್ರದ ಟಿಕೆಟ್‌ಗಾಗಿ ನಡೆಯುತ್ತಿರುವ ಅಂತರ್ಯುದ್ಧ ಬಿಜೆಪಿ – ಜೆಡಿಎಸ್ ಮೈತ್ರಿಗೆ ಆತಂಕ ತಂದೊಡ್ಡುವ ಸಾಧ್ಯತೆಗಳನ್ನು ಅಲ್ಲಗಳೆಯು ವಂತಿಲ್ಲ.

ಸದ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅನಿವಾರ್ಯವಾಗಿರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಎರಡೂ ಪಕ್ಷದವರು ಒಪ್ಪಿಕೊಳ್ಳಬಹುದಾದರೂ ಅದು ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕೇವಲ ಮಂಡ್ಯ ಮಾತ್ರವಲ್ಲ, ಮೈತ್ರಿ ಮಾಡಿಕೊಂಡಿರುವ ಇತರೆ ಕ್ಷೇತ್ರಗಳಿಗೂ ಈ ಗೊಂದಲ ವ್ಯಾಪಿಸಿದರೆ ೨೮ ಕ್ಷೇತ್ರಗಳನ್ನೂ ಗೆಲ್ಲುವ ಪ್ರಯತ್ನದ ಬುಡಕ್ಕೆ ಕೊಡಲಿ ಪೆಟ್ಟು ನೀಡುತ್ತದೆ. ಮಂಡ್ಯದಲ್ಲೀಗ ಬಿಜೆಪಿ-ಜೆಡಿಎಸ್ ಎಂಬುದಕ್ಕಿಂತ ಹಾಲಿ ಸಂಸದೆ ಸುಮಲತಾ ವರ್ಸಸ್ ಜೆಡಿಎಸ್ ಎನ್ನುವಂತಾಗಿದೆ. ಜೆಡಿಎಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯ ಕ್ಷೇತ್ರವನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಬಿಜೆಪಿ ಬೆಂಬಲದೊಂದಿಗೆ ತಮ್ಮ
ತೆಕ್ಕೆಗೆ ಸೆಳೆದುಕೊಂಡಿದ್ದರು.

ಬಳಿಕ ಬಿಜೆಪಿಗೆ ಬೆಂಬಲ ನೀಡಿದ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಆದರೆ, ತಮ್ಮ ಪ್ರಬಲ ಕೋಟೆಯನ್ನು ಬಿಟ್ಟುಕೊಡಲು ಜೆಡಿಎಸ್ ಒಪ್ಪುತ್ತಿಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಮಂಡ್ಯದಿಂದ ಸ್ಪರ್ಧಿಸಲು ಗಂಭೀರ ಯೋಚನೆ ಮಾಡುತ್ತಿದ್ದಾರೆ. ಆದರೆ, ಈ ಕ್ಷೇತ್ರ ತನಗೇ ಬೇಕು ಎಂದು ಪಟ್ಟು ಹಿಡಿದಿರುವ ಸುಮಲತಾ, ಬಿಜೆಪಿ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು
ಮುಂದಾಗಿದ್ದಾರೆ. ಅಲ್ಲಿ ಕಾಂಗ್ರೆಸ್ ಬೆಂಬಲ ನೀಡದಿದ್ದರೆ ಸುಮಲತಾ ಅವರನ್ನು ಸೋಲಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದು ಬಿಜೆಪಿ ಮತ್ತು ಜೆಡಿಎಸ್‌ಗೆ ಕಷ್ಟದ ಕೆಲಸವಲ್ಲ. ಆದರೆ, ಮೈತ್ರಿ ವಿರುದ್ಧ ಸುಮಲತಾ ಜತೆ ಕಾಂಗ್ರೆಸ್ ಕೈಜೋಡಿಸಿದರೆ ಸಮಸ್ಯೆಯಾಗುವುದು ಖಂಡಿತ. ಈ ಗೊಂದಲ ಅಕ್ಕಪಕ್ಕದ ಕ್ಷೇತ್ರಗಳಿಗೂ ಹಬ್ಬಿದರೆ ಆಗ ಇನ್ನಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅಪಾಯಕ್ಕೆ ಸಿಲುಕಬಹುದು. ಈ ಅಂಶವೇ ಮಿತ್ರಪಕ್ಷಗಳಿಗೆ ತಲೆನೋವಾಗಿರು ವುದು.

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ೨೮ಕ್ಕೆ ೨೮ ಕ್ಷೇತ್ರ ಗೆಲ್ಲಲು ಸಾಧ್ಯವಾಗದೇ ಇದ್ದರೂ ೨೫ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗುವ ವಾತಾವರಣ ಇದ್ದರೂ ಈ ಎಲ್ಲಾ ಅಂಶಗಳು ಬಿಜೆಪಿಯನ್ನು ಅಂತಕಕ್ಕೆ ತಳ್ಳಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಿಧಾನಸಭೆ ಸೋಲಿನ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಮಿತ್ರಪಕ್ಷಗಳಿಗೆ ಪಕ್ಷದೊಳಗಿನ ಚಟುವಟಿಕೆಗಳೇ ತಿರುಗುಬಾಣವಾಗುವ ಆತಂಕ ತಂದೊಡ್ಡಿದೆ. ಇದರಿಂದಾಗಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಸಮೀಪಿಸುತ್ತಿದ್ದರೂ ಸ್ಥಾನ ಹೊಂದಾಣಿಕೆ ಅಂತಿಗೊಳಿಸಲು ಸಾಧ್ಯವಾಗಿಲ್ಲ.

ಮತ್ತೊಂದೆಡೆ ಲೋಕಸಭೆ ಚುನಾವಣೆಗೆ ಸ್ಪಽಸುವುದಿಲ್ಲ ಎಂದು ಹೇಳುತ್ತಿದ್ದ ವರೂ ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಇನ್ನೊಂದು ಬಾರಿ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಹೀಗಾಗಿ ಆ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಬೇಸರ ಗೊಂಡಿದ್ದಾರೆ. ಈವರೆಗೆ ಟಿಕೆಟ್ ಬೇಡ ಎನ್ನುತ್ತಿದ್ದವರಿಗೆ ಮತ್ತೆ ಟಿಕೆಟ್ ನೀಡಿದರೆ ಇತರೆ ಆಕಾಂಕ್ಷಿಗಳು ತಟಸ್ಥ ರಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಈ ಕಾರಣಕ್ಕಾಗಿಯೇ ರಾಜ್ಯ ಬಿಜೆಪಿ ನಾಯಕರು ಜೆಡಿಎಸ್ ಜತೆ ಸ್ಥಾನ ಹೊಂದಾಣಿಕೆ ಮತ್ತು ಅಭ್ಯರ್ಥಿ ಗಳ ಆಯ್ಕೆಯನ್ನು ಅದಷ್ಟು ಬೇಗ ಅಂತಿಮಗೊಳಿಸುವಂತೆ ವರಿಷ್ಠರನ್ನು ಒತ್ತಾಯಿಸುತ್ತಿದ್ದಾರೆ.

ಏಕೆಂದರೆ, ಈ ರೀತಿ ಗೊಂದಲಗಳಿರುವಾಗ ಕೊನೇ ಕ್ಷಣದಲ್ಲಿ ಟಿಕೆಟ್ ಅಂತಿಮಗೊಳಿಸಿದರೆ ಏನಾಗುತ್ತದೆ ಎಂಬುದಕ್ಕೆ ವಿಧಾನಸಭೆ ಫಲಿತಾಂಶ ಕಣ್ಣಮುಂದಿದೆ. ಹೀಗಾಗಿ ಈಗಲೇ ಟಿಕೆಟ್ ಯಾರಿಗೆ ಎಂದು ಹೇಳಿದರೆ ಉಂಟಾಗುವ ಭಿನ್ನಮತ, ಗೊಂದಲ ಬಗೆಹರಿಸಲು ಸಮಯ ಸಿಗುತ್ತದೆ. ಸದ್ಯ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದರಿಂದ ಬಿ.ಎಸ್. ಯಡಿಯೂರಪ್ಪ ಅವರೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬಹುದು. ಆದರೆ, ವರಿಷ್ಠರು ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ರಾಜ್ಯ ಬಿಜೆಪಿಯಲ್ಲಿರುವ ಸಮಸ್ಯೆಗಳು ಮತ್ತು ಮೈತ್ರಿ ಗೊಂದಲಗಳಿಗೆ ತೆರೆ ಎಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಲಾಸ್ಟ್ ಸಿಪ್: ವಿಳಂಬವಾದಷ್ಟೂ ಪೆಟ್ಟು ಬೀಳುವುದು ಜಾಸ್ತಿಯಾಗುತ್ತದೆ ಎಂದು ಗೊತ್ತಿದ್ದರೂ ತಡ ಮಾಡುವುದು ಎಂದರೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ.

Leave a Reply

Your email address will not be published. Required fields are marked *

error: Content is protected !!