Saturday, 14th December 2024

ಈ ಸ್ಥಿತಿಯಿಂದ ಹೊರಬರಲು ಕಾಂಗ್ರೆಸ್ ಏನು ಮಾಡಬಹುದು ?

ಪ್ರಸ್ತುತ

ಪ್ರೊ.ಆರ್‌.ಜಿ.ಹೆಗಡೆ

ramhegde62@gmail.com

ಕಾಂಗ್ರೆಸ್ ಬಹುಶಃ ಈಗ ಆಮ್ ಆದ್ಮಿಯಿಂದ ಕಲಿತುಕೊಳ್ಳಬೇಕು. ಆಮ್ ಆದ್ಮಿ ಪಕ್ಷ ಬಿ.ಜೆ.ಪಿಯ ವಿರುದ್ಧ ಸೈದ್ಧಾಂತಿಕ ವಿಷಯ ಗಳ ಕುರಿತು ಮಾತನಾಡುವುದೇ ಇಲ್ಲ. ಅದರ ಫೋಕಸ್ ಇರುವುದು ಬರೇ ಒಳ್ಳೆಯ ಅಡಳಿತ ನೀಡುವುದರತ್ತ. ಅದು ಮಾಡು ತ್ತಿರುವುದು ಜನರಿಗೆ ಹತ್ತಿರವಾಗುವ ರೀತಿಯಲ್ಲಿ ಅವರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು.

ಕಾಂಗ್ರೆಸ್ ಕಳವಳಪಡಬೇಕಾದುದು ಉತ್ತರ ಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಸೋತ ಅಸಾಧಾರಣ ರೀತಿಗೆ ಮತ್ತು ಕಾರಣಗಳಿಗೆ. ಉತ್ತರ ಪ್ರದೇಶ ಏಕೆ ಮಹತ್ವದ್ದು ಎನ್ನುವುದು ಗೊತ್ತಿರುವ ವಿಷಯ. ಪಾರ್ಲಿಮೆಂಟರಿ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಹೊಂದಿದ ರಾಜ್ಯ ಅದು. ಅಲ್ಲಿ ಯಾರು ಗೆಲ್ಲುತ್ತಾರೋ ಅವರು ಉತ್ತರ ಭಾರತವನ್ನು ಗೆಲ್ಲುತ್ತಾರೆ. ಮತ್ತೆ ಉತ್ತರ ಭಾರತವನ್ನು ಯಾರು ಗೆಲ್ಲುತ್ತಾರೋ ಅವರು ದೇಶವನ್ನು ಗೆಲ್ಲುತ್ತಾರೆ.

ಇಂತಹ ರಾಜ್ಯದಲ್ಲಿ ಕಾಂಗ್ರೆಸ್ ಸೋತಿರುವ ರೀತಿ ಪಕ್ಷ ಶಾಕ್ ಆಗುವಂತಹುದು. ವಿಧಾನ ಸಭೆಯ ೪೦೩ ಸೀಟುಗಳಲ್ಲಿ ಪಕ್ಷ ಕೇವಲ ಎರಡನ್ನು ಗೆದ್ದಿದೆ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರ ಇಂದಿರಾ ಗಾಂಧಿಯವರದೇ ಭದ್ರಕೋಟೆಯಾಗಿದ್ದ ರಾಯ್ ಬರೇಲಿಯಲ್ಲಿ ಅದು ಒಂದೂ ಸ್ಥಾನಗಳಿಸಿಲ್ಲ. ಭಾರೀ ದೊಡ್ಡ ಸಂಖ್ಯೆಯಲ್ಲಿ ಶೇ.97 ರಷ್ಟು ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಏನೆಂದರೆ ಬಹುಸಂಖ್ಯಾತ ಸಮಾಜ ಅಲ್ಲಿ ಸದ್ಯಕ್ಕಂತೂ ಪೂರ್ತಿಯಾಗಿ ಪಕ್ಷದ ಕೈ ಬಿಟ್ಟಿದೆ. ಅಷ್ಟೇ ಅಲ್ಲ. ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಕೂಡ ದೂರ ಸರಿದುಬಿಟ್ಟಿವೆ. ಅಂದರೆ ಇಂದಿನ ದಿನಗ ಳಲ್ಲಿ ಅಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸುವವರೇ ಇಲ್ಲ.

ಮತ್ತೆ ಪಂಜಾಬ್ ಶಾಕ್ ನೀಡುವ ಇನ್ನೊಂದು ವಿಷಯವನ್ನು ಹೇಳಿದೆ. ಏನೆಂದರೆ ಬಿ.ಜೆ.ಪಿ. ಬೇಡವೇ ಬೇಡವಾದವರಿಗೂ ಕೂಡ ಕಾಂಗ್ರೆಸ್ ಬೇಡ. ಅಂದರೆ ಹಿಂದುತ್ವ ರಾಜಕೀಯವನ್ನು ಮೆಚ್ಚಿಕೊಳ್ಳದ ಉಪ ಸಂಸ್ಕ್ರತಿಗಳು, ಪ್ರಾದೇಶಿಕ ಸಂಸ್ಕ್ರತಿಗಳಿಗೂ ಕೂಡ ಕಾಂಗ್ರೆಸ್ ಕುರಿತು ಒಲವಿಲ್ಲ. ಹೀಗಾಗಿ ಪಂಜಾಬ್ ಮೂರನೆಯ ಪಕ್ಷವೊಂದಕ್ಕೆ ಮತ ನೀಡಿದ್ದು. ಅಂದರೆ ಅಂತಹ ಸಂಸ್ಕೃತಿಗಳು ಬಲವಾಗಿರುವ ಪಶ್ಚಿಮ ಬಂಗಾಳ, ತಮಿಳು ನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಕೂಡ ಬಿಜೆಪಿ ಸೋತರೂ ಕಾಂಗ್ರೆಸ್ ಕುರಿತು ಜನರಿಗೆ ಆಸಕ್ತಿಯಿಲ್ಲ. ಪ್ರೀತಿಯಿಲ್ಲ.

ಅಂದರೆ ಕಾಂಗ್ರೆಸ್ ಸಂಪೂರ್ಣವಾಗಿ ಬಿದ್ದುಹೋಗುವ ಹಂತದಲ್ಲಿದೆ. ನೆಹರೂ ಗಾಂಧಿ ಕುಟುಂಬದ ಕೊನೆಯ ಅಸ್ತ್ರ ಪ್ರಿಯಾಂಕ ಕೂಡ ಕ್ಲಿಕ್ ಆಗುತ್ತಿಲ್ಲ. ಜನರಿಗೆ ಮತ್ತು ಪಕ್ಷಕ್ಕೆ ಸಂವಹನ ಬಿದ್ದುಹೋಗಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ನಲವತ್ತು ಸ್ಥಾನಗಳಿಗಿಂತಲೂ ಕೆಳಗೆ ಪಕ್ಷ ಇಳಿದರೂ ಆಶ್ಚರ್ಯವಿಲ್ಲ. ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಠಿಣ ದಿನಗಳನ್ನು ಅದು ಈಗ ಎದುರಿಸುತ್ತಿದೆ ಎಂದೇ ಹೇಳಬೇಕು.

ಇಂತಹ ಹಿನ್ನೆಲೆಯಲ್ಲಿ ಮಹತ್ವದ ಅಕಾಡೆಮಿಕ್ ಪ್ರಶ್ನೆ: ದೀರ್ಘ ಇತಿಹಾಸ ಹೊಂದಿರುವ, ದೇಶವನ್ನು ಐವತ್ತು ವರ್ಷ ಗಳಿಗಿಂತಲೂ ಹೆಚ್ಚಿನ ಕಾಲ ಆಳಿದ ಪಕ್ಷಕ್ಕೆ ಇಂತಹ ಸ್ಥಿತಿ ಏಕೆ ಬಂತು? ಮತ್ತು ಕಠಿಣ ಪರಿಸ್ಥಿತಿಯಿಂದ ಹೊರಬರಲು ಅದು ಏನು ಮಾಡಬಹುದು? ಮೊದಲನೆಯ ಪ್ರಶ್ನೆ ಅಸಾಧಾರಣ ಹಿನ್ನೆಡೆ ಏಕೆ ಬಂತು ಎನ್ನುವುದಕ್ಕೆ ಕಾರಣಗಳು ಸ್ಪಷ್ಟವಾಗಿಯೇ ಇವೆ. ಒಂದಯದು ಬಹುಶಃ 1984 ರ ಈಚೆಗಿನ ಪಕ್ಷದ ಸೈದ್ದಾಂತಿಕ ಗೊಂದಲ. ಎರಡನೆಯದು ಪಕ್ಷಕ್ಕಿರುವ, ನಾಯಕತ್ವದ,
ಸಂಘಟನಾತ್ಮಕ ಸಮಸ್ಯೆಗಳು. ಮೂರನೆಯದು ಪಕ್ಷದ ಹೊರಗೆ ಮತ್ತು ಒಳಗೆ ಸಂವಹನದ ಸಮಸ್ಯೆ.

ಎಂಭತ್ತರ ದಶಕದ ಮಧ್ಯಭಾಗದ ತನಕವೂ ಕಾಂಗ್ರೆಸ್ ಸ್ಪಷ್ಟ ಸಿದ್ಧಾಂತವನ್ನು ಹೊಂದಿತ್ತು. ಸಮಾಜವಾದ, ಜಾತ್ಯತೀತತೆ ಮತ್ತು ಸಮಾಜವಾದಿ ಆರ್ಥಿಕ ನೀತಿ ಇವು ಪಕ್ಷದ ಸಿದ್ಧಾಂತದ ಭಾಗಗಳಾಗಿದ್ದವು. ಕಾಂಗ್ರೆಸ್‌ಗೆ ಸಮಸ್ಯೆ ಆರಂಭವಾಗಿದ್ದು ಆರ್ಥಿಕ ಉದಾರೀಕರಣದ ಗಾಳಿ ಭಾರತಕ್ಕೆ ತಾಗಿದಂದಿನಿಂದ. ಮುಕ್ತ ಆರ್ಥಿಕ ನೀತಿಯ ಅನಿವಾರ್ಯತೆ ದೇಶಕ್ಕೆ ಇದ್ದುದನ್ನು ಗಮನಿಸಿದ್ದ ರಾಜೀವ್ ಗಾಂಧಿ ಪಕ್ಷವನ್ನು ಆ ದಾರಿಯಲ್ಲಿ ಕೊಂಡೊಯ್ದವರು. ಈ ಆರ್ಥಿಕ ನೀತಿಯಲ್ಲಿದ್ದ ಜಾಗತೀಕರಣ, ಉದಾರೀಕರಣ,
ಖಾಸಗೀಕರಣ ಹಿನ್ನೆಲೆಯಲ್ಲಿ ಪಕ್ಷ ಆರಂಭಿಸಿದ ಕ್ರಮಗಳಿಂದಾಗಿ ದೇಶಕ್ಕೆ ಒಳಿತಾಯಿತು.

ರಾಜೀವ್ ತುಳಿದಿದ್ದ ಉದಾರೀಕರಣದ ನೀತಿಗೆ ನರಸಿಂಹರಾವ್ ಬಲವಾದ ಬೆಂಬಲಕೊಟ್ಟರು. ಹೊಸ ಆರ್ಥಿಕ ನೀತಿಗೆ ರೂಪು ಕೊಟ್ಟ ಅವರು ಮತ್ತು ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಆಗ ದೇಶದ ಮಧ್ಯಮ ವರ್ಗದ ಹೀರೋಗಳಾಗಿ ಬಿಟ್ಟರು. ಇದರಿಂದ ಬಂದ ಜನಪ್ರಿಯತೆಯಿಂದಾಗಿಯೇ ಮನಮೋಹನ್‌ಸಿಂಗ್ ನಂತರ ಪ್ರಧಾನಿಯಾಗಿದ್ದು.

ಈಗ ಕಾಂಗ್ರೆಸ್ ಏಕಾಏಕಿಯಾಗಿ ತನ್ನ ಆರ್ಥಿಕ ನೀತಿಯಲ್ಲಿ ಉಲ್ಟಾ ಹೊಡೆದು ಮತ್ತೆ ಸಮಾಜವಾದದ ಮಾತನಾಡಲಾ ರಂಭಿಸಿತು. ಆರ್ಥಿಕ ನೀತಿಯಲ್ಲಿ ಗೊಂದಲಕ್ಕೆ ಬಿದ್ದುಬಿಟ್ಟಿತು. ಬಹುಶಃ ಗೊಂದಲದಿಂದಾಗಿ ಹಿಂದುಳಿದ ವರ್ಗಗಳು ಹಾಗೆಯೇ ನವಮಧ್ಯಮ ವರ್ಗ ಕಾಂಗ್ರೆಸ್ ಮೇಲೆ ವಿಶ್ವಾಸ ಕಳೆದುಕೊಂಡು ಬಿಟ್ಟವು. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಪ್ರಾದೇಶಿಕ ಪಕ್ಷಗಳನ್ನು ಹುಡುಕಿಕೊಂಡು ಹೋದವು. ಮಧ್ಯಮ ವರ್ಗ ಮತ್ತು ಉದ್ಯಮ ವರ್ಗ ಬಿ.ಜೆ.ಪಿ. ಜತೆ ಭದ್ರವಾಗಿ
ನಿಂತು ಬಿಟ್ಟವು. ಕಾಂಗ್ರೆಸ್ ಗೊಂದಲದಲ್ಲಿ ಬಿದ್ದಿದ್ದು ಹಿಂದುತ್ವದ ವಿಷಯದಲ್ಲಿ ಕೂಡ.

ರಾಮಮಂದಿರದ ಬಾಗಿಲು ತೆಗೆದವರು ರಾಜೀವ್ ಗಾಂಧಿ. ನಂತರ ಬಿ.ಜೆ.ಪಿ. ಮಂದಿರವನ್ನು ತನ್ನ ಅಜೆಂಡಾದಲ್ಲಿ ಸೇರಿಸಿ ಬೃಹತ್
ಆಂದೋಲನ ಆರಂಭಿಸಿದ ನಂತರ, ಬಹುಶಃ ಕಾಂಗ್ರೆಸ್ ಇಲ್ಲಿಯೂ ಉಲ್ಟಾ ತಿರುಗಿಬಿಟ್ಟಿತು. ಅಂದರೆ ಆಂದೋಲನದ ವಿರೋಧಿ ಯಾಗಿ ಗುರುತಿಸಿಕೊಂಡು ಬಿಟ್ಟಿತು. ಮತ್ತೆ ಬಾಬರಿ ಮಸೀದಿ ಧ್ವಂಸ ಗೊಂಡಿದ್ದು ಕಾಂಗ್ರೆಸ್ ಅಧಿಕಾರಾವಧಿಯಲ್ಲೇ. ಇಂತಹ ’ವಿಶ್ವಾಸ ದ್ರೋಹವನ್ನು’ ಮೈನಾರಿಟಿಗಳು ಉತ್ತರ ಭಾರತದಲ್ಲಿ ಮರೆಯಲೇ ಇಲ್ಲ.

ಮುಂದೆಯೂ ಗೊಂದಲದಲ್ಲೇ ಮುಂದುವರಿದ ಪಕ್ಷ ಬಹುಶಃ ಖುಷಿ ಪಡಿಸುವ ರಾಜಕೀಯಕ್ಕೆ ಇಳಿದುಬಿಟ್ಟಿತು. ಅಷ್ಟೇ ಅಲ್ಲ. ಹೀಗಾಗಿ ಬಹುಶಃ ಒಂದು ಕಡೆಯಿಂದ ಹಿಂದೂ ಸಮಾಜ ಮತ್ತು ಇನ್ನೊಂದು ಕಡೆಯಿಂದ ಮುಸ್ಲಿಂ ಸಮಾಜ ಇವೆರಡೂ ಕಾಂಗ್ರೆಸ್ ಮೇಲೆ ವಿಶ್ವಾಸ ಕಳೆದುಕೊಂಡುಬಿಟ್ಟವು. ಪ್ರಾದೇಶಿಕ ಪಕ್ಷಗಳು ಮುಸ್ಲಿಮ್ ಮತಗಳನ್ನು ಕಾಂಗ್ರೆಸ್‌ನಿಂದ ಕಿತ್ತು ಕೊಂಡವು.’ ಈಗ ಪಕ್ಷ ಸೋತಿದು ಬಹುಶಃ ಸೈದ್ದಾಂತಿಕ ಗೊಂದಲದಿಂದಾಗಿಯೇ. ಮುಕ್ತ ಆರ್ಥಿಕ ನೀತಿಯನ್ನು ಬಳಸಿ ಹಿಂದೆ ಕಾಂಗ್ರೆಸ್‌ಗೆ ಹೆಸರು ತಂದಿದ್ದ ಹಿರಿಯ ನಾಯಕರು ಈಗ ಮೌನವಾಗಿಬಿಟ್ಟರು.

ಕೆಲವರು ಖುಷಿ ಪಡಿಸುವ ರಾಜಕೀಯದಲ್ಲಿ ತೊಡಗಿಕೊಂಡರು. ಸಾಫ್ಟ್ ಹಿಂದುತ್ವದಲ್ಲಿ ತೊಡಗಿದರು. ಹೀಗೆ ಪಕ್ಷ ಏಕಕಾಲಕ್ಕೆ ಹಲವು ಧ್ವನಿಗಳಲ್ಲಿ ಮಾತನಾ ಡಲಾರಂಭಿಸಿತು. ಬಹುಶಃ ಪಕ್ಷದ ’ಉನ್ನತ’ ನಾಯಕತ್ವವೂ ತಾನು ’ನಾಯಕತ್ವ’ ವಹಿಸಬೇಕೇ
ಬೇಡವೇ, ರಾಜಕೀಯದಲ್ಲಿ ತೊಡಗಿಕೊಳ್ಳಬೇಕೇ ಬೇಡವೇ, ಯಾರನ್ನು ನಂಬುವುದು, ಯಾರನ್ನು ಬಿಡುವುದು ಇತ್ಯಾದಿ
ಗೊಂದಲಗಳಲ್ಲಿ ಸಿಕ್ಕಿಬಿದ್ದು ನಾಯಕತ್ವವೇ ಗಂಭೀರವಾಗಿಲ್ಲ ಎನ್ನುವ ಭಾವನೆ ಬಹುಶಃ ಕಾರ್ಯಕರ್ತರಲ್ಲಿ ಮೂಡಿ ಹೋಯಿತು.

ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಕಾಂಗ್ರೆಸ್‌ನ ಅಸಾಧಾರಣ ಪರಾಭವದ ಕಾರಣ ಇದು. ಸಮಸ್ಯೆ ಎಂದರೆ ಕೋರ್ ಸಿದ್ದಾಂತವನ್ನು ಗುರುತಿಸಿಕೊಳ್ಳುವುದು ಪಕ್ಷಕ್ಕೆ ಸುಲಭವೇನೂ ಅಲ್ಲ. ಹಿಂದುತ್ವವನ್ನು ಬೆಂಬಲಿಸಬೇಕೋ ಬೇಡವೋ ಅಗ್ರಸ್ಸಿವ್ ರಾಷ್ಟ್ರೀಯತೆಯನ್ನು ಬೆಂಬಲಿಸಬೇಕೋ ಬಿಡಬೇಕೋ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಕಾಂಗ್ರೆಸ್‌ಗೆ ಕೆಲವು ಐತಿಹಾಸಿಕ ಶಕ್ತಿಗಳಿವೆ. ದೇಶದ ಪ್ರತಿಯೊಂದು ವ್ಯಕ್ತಿಗೂ ಕಾಂಗ್ರೆಸ್ ಗೊತ್ತಿದೆ. ಹಾಗಾಗಿ ಪಕ್ಷವನ್ನು ಹೊಸದಾಗಿ ಪರಿಚಯಿಸುವ ಸಮಸ್ಯೆ ಇಲ್ಲ. ಪಕ್ಷಕ್ಕೆ ದೇಶಾದ್ಯಂತ ಕಾರ್ಯಕರ್ತರಿದ್ದಾರೆ.

ನೂರಾರು ಒಳ್ಳೆಯ ನಾಯಕರುಗಳೂ ಇದ್ದಾರೆ. ಮಾನವ ಸಂಪನ್ಮೂಲ ಇದೆ. ಇನ್ನೊಂದು ವಿಷಯ. ದೇಶದ ಜನ ಪರಂಪರಾ ಗತವಾಗಿ ಬೆನಿಫಿಟ್ ಆಫ್ ಡೌಟ್‌ಅನ್ನು ನೀಡುವುದು ಕಾಂಗ್ರೆಸ್‌ಗೆ. ಅಂದರೆ ಎಲ್ಲ ಪಕ್ಷಗಳ ಕುರಿತು ಬೇಸರವಿದ್ದರೆ ಜನ ವೋಟ್ ಹಾಕುವುದು ಕಾಂಗ್ರೆಸ್ ಪಕ್ಷಕ್ಕೆ. ಎಂಬತ್ತರ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ, 2004 ರ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೀಗೆ. ಕಾಂಗ್ರೆಸ್ ಸರಿಯಾಗಿರಬೇಕೆಂದೇನೂ ಇಲ್ಲ. ಬೇರೆ ಪಕ್ಷಗಳು ತಪ್ಪು ಮಾಡಿದರೂ ಕಾಂಗ್ರೆಸ್ ಗೆಲ್ಲುತ್ತದೆ. ನಕಾರಾ ತ್ಮಕ ಮತಗಳ ಪ್ರಯೋಜನ ಕಾಂಗ್ರೆಸ್‌ಗೆ ಸಿಗುವಷ್ಟು ಬೇರೆ ಯಾವ ಪಕ್ಷಕ್ಕೂ ಸಿಗುವುದಿಲ್ಲ.

ಬಿಜೆಪಿ ಗೆಲ್ಲುವುದು ಸಕಾರಾತ್ಮಕ ಮತ ಅಂದರೆ ಜನರ ಎಚ್ಚರದ ನಿರ್ಧಾರದಿಂದಲೇ. ಕಾಂಗ್ರೆಸ್‌ಗೆ ಹಾಗಿಲ್ಲ. ಬಿಜೆಪಿ ತಪ್ಪು
ಮಾಡಿ ಬಿಟ್ಟರೆ ಲಾಭ ಕಾಂಗ್ರೆಸ್‌ಗೆ ಹೋಗಿ ಬಿಡುತ್ತದೆ. ಕಳೆದ ವರ್ಷ ನಡೆದ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ನಂತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದ್ದ ಕಾರಣ ಇದು. ಅಲ್ಲಿಯ ಬಿಜೆಪಿ ಸರಕಾರಗಳ ಸಾಧನೆಗಳ ಕುರಿತು ಸಮಾಧಾನವಿರದಿದ್ದ ಜನ ಕಾಂಗ್ರೆಸ್‌ಗೆ ಮತ ಹಾಕಿಬಿಟ್ಟರು. ಸಾಧಾರಣವಾಗಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಸೀನಿಯರ್ ಸಿಟಿಜನ್ಸ್ ಮತ ಹಾಕುವುದು ಕಾಂಗ್ರೆಸ್‌ಗೆ.

ಪಕ್ಷ ಬಹುಶಃ ಈಗ ಆಮ್ ಆದ್ಮಿ ಪಕ್ಷದಿಂದ ಕಲಿತುಕೊಳ್ಳ ಬೇಕು. ಆಮ್ ಆದ್ಮಿ ಪಕ್ಷ ಬಿ.ಜೆ. ಪಿ ಯ ವಿರುದ್ಧ ಸೈದ್ಧಾಂತಿಕ ವಿಷಯ ಗಳ ಕುರಿತು ಮಾತನಾಡುವುದೇ ಇಲ್ಲ. ಅದರ ಫೋಕಸ್ ಇರುವುದು ಬರೇ ಒಳ್ಳೆಯ ಅಡಳಿತ ನೀಡುವುದರತ್ತ. ಅತ್ಯಂತ ಸಮರ್ಥ ಆಡಳಿತವನ್ನು, ದೇಶಕ್ಕೇ ಮಾದರಿಯಾಗಬಲ್ಲ ಆಡಳಿತವನ್ನು ನೀಡುವುದು. ಆಮ್ ಆದ್ಮಿ ಪಕ್ಷ ನಿಧಾನವಾಗಿ ದೇಶದಲ್ಲಿ ಹಬ್ಬುತ್ತಿರುವುದು ಇದಕ್ಕೆ. ಅಂದರೆ ಸಿದ್ದಾಂತಗಳನ್ನು ಅಪ್ರಸ್ತುತವಾಗಿಸುವ ದಿನನಿತ್ಯದ ಜನಜೀವನಕ್ಕೆ ಸ್ಪಂದಿಸುವ ಆಡಳಿತಕ್ಕೆ.
ಸರಕಾರಿ ಕಚೇರಿಗಳ ಗೋಳಿನಿಂದ, ಕೆಟ್ಡ ಶಾಲೆಗಳು, ಆಸ್ಪತ್ರೆ ರಸ್ತೆಗಳು, ಇಂತಹ ನಿತ್ಯ ಜೀವನದ ಜಂಜಾಟದಿಂದ ಬೇಸತ್ತಿರುವ ಜನರಿಗೆ ಒಳ್ಳೆಯ ಆಡಳಿತ ಸಿಗುವುದೂ ದೊಡ್ಡ ವಿಷಯವೇ. ಅದಕ್ಕೆ ಮಧ್ಯಮವರ್ಗದ ಭಾರಿ ಬೆಂಬಲವಿದೆ.

ಕಾಂಗ್ರೆಸ್‌ಗೆ ಅಧಿಕಾರಕ್ಕೆ ಮರಳಲು ಇಂದು ಬೇಕಿರುವುದು ಮಧ್ಯಮ ವರ್ಗದ ಬೆಂಬಲ. ಅದರ ಜತೆ ಬಿ.ಜೆ.ಪಿ. ವಿರೋಧಿ ವರ್ಗಗಳು
ಸೇರಿಕೊಂಡರೆ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ. ಆಮ್ ಆದ್ನಿ ಗೆಲ್ಲುತ್ತಿರುವ ಕಾರಣ ಇದು. ಗಮನಿಸಬೇಕು, ಬಿಜೆಪಿ ಕೇಂದ್ರಕ್ಕೆ ಮರಳಿದ ಕಾರಣ ಗುಜರಾತ್‌ನಲ್ಲಿ ಮೋದಿ ನೀಡಿದ ಅತ್ಯುತ್ತಮ ಆಡಳಿತ. ಒಂದು ರಾಜ್ಯವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ದಿಪಡಿಸಿರುವುದರಿಂದ ಅವರು ಕೇಂದ್ರಕ್ಕೆ ಬಂದರು. ಹಾಗಾಗಿ ಈಗ ಕಾಂಗ್ರೆಸ್ ಗೆ ಇರುವ ಉಪಾಯ ಒಂದೇ.

ಏನೆಂದರೆ ತನ್ನ ಆಳ್ವಿಕೆಯ ರಾಜ್ಯದಲ್ಲಿ ಸೈದ್ದಾಂತಿಕ ಗೋಜಿಗೆ ಹೋಗದೆ ಮೌನವಾಗಿ ಅಸಾಧಾರಣ ಕೆಲಸ ಮಾಡಿ ಗಮನ ಸೆಳೆಯುವುದು. ಹಾಗೆಯೇ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಏನೆಂದರೆ ಈಗ ಬಿ.ಜೆ.ಪಿ ಯ ಸಮಯ. ಈಗ ದಿನ ನಿತ್ಯ ಬೊಬ್ಬೆ
ಹೊಡೆದರೂ ಬಿ.ಜೆ.ಪಿ. ಯನ್ನು ಸೋಲಿಸಲಾಗುವುದಿಲ್ಲ. ಅಂತಹ ಪ್ರಯತ್ನ ಮತ್ತೆ ಕಾಂಗ್ರೆಸ್ ತಲೆಯ ಮೇಲೆಯೇ ತಿರುಗಿ ಬೀಳುತ್ತದೆ. ಹಾಗಾಗಿ ಈಗ ಅದು ಕಡಿಮೆ ಮಾತನಾಡಿದಷ್ಟು ಒಳ್ಳೆಯದು. ಅದು ಬಿ.ಜೆ.ಪಿ. ತಪ್ಪು ಮಾಡುವುದಕ್ಕೆ ಕಾಯಬೇಕು.