Thursday, 12th December 2024

ಹಿಂದೂ ಹೇಳಿಕೆಗೂ ಸಾಫ್ಟ್ ಆದ ಕಾಂಗ್ರೆಸ್

ಅಶ್ವತ್ಥಕಟ್ಟೆ

ranjith.hoskere@gmail.com

ಹಿಂದೂ ಧರ್ಮದ ವಿರುದ್ಧ ಕಟು ಟೀಕೆ ಮಾಡಿದ ಮಾತ್ರಕ್ಕೆ ಅವರು ದೊಡ್ಡವರಾಗುತ್ತಾರೆ. ಅವರನ್ನು ಅನೇಕರು ಬೆಂಬಲಿಸು ತ್ತಾರೆ ಎನ್ನುವ ‘ಭ್ರಮೆ’ಯಲ್ಲಿ ಅನೇಕರಲ್ಲಿದ್ದಾರೆ. ‘ಜಾತಿ’ ಆಧಾರಿತ ವಿಭಜನೆಯನ್ನೇ ಮುಂದಿಟ್ಟುಕೊಂಡು ಮಾಡಿದರೆ ತಾವು ‘ರಕ್ಷಣೆ’ ಪಡೆಯಬಹುದು ಎನ್ನುವುದು ಅನೇಕರ ನಂಬಿಕೆ.

ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ ಎನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ನಾಯಕರ ಹೇಳಿಕೆಗಳೇ ಸ್ಪಷ್ಟ ಸಾಕ್ಷಿ. ಅದರಲ್ಲಿಯೂ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ‘ಧರ್ಮ’ದ ವಿಷಯದಲ್ಲಿ ನಡೆಯುತ್ತಿರುವ ವಾಕ್ಸಮರಗಳು, ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿವೆ. ಆದರೆ ಈ ಎಲ್ಲದರ ನಡುವೆ ಕಳೆದ ವಾರ ಕಾಂಗ್ರೆಸ್ ನಾಯಕರೊಬ್ಬರು ‘ಹಿಂದೂ’ ಹೆಸರಿನಲ್ಲಿ ನೀಡಿದ ಹೇಳಿಕೆ ಇಡೀ ರಾಜ್ಯ ರಾಜಕೀಯದಲ್ಲೇ ಭಾರಿ ಚರ್ಚೆಗೆ ನಾಂದಿ ಹಾಡಿತ್ತು.

ಹೌದು, ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ‘ಹಿಂದೂ’ ಪದದ ಅರ್ಥದ ಬಗ್ಗೆ ‘ಜಾತ್ಯತೀತ’ ಎನಿಸಿಕೊಂಡಿರುವ ಒಂದು ಸಮಾವೇಶದಲ್ಲಿ ತಮ್ಮದೇ ಆದ ಒಂದು ವ್ಯಾಖ್ಯಾನವನ್ನು ನೀಡುವ ನೆಪದಲ್ಲಿ ಆ ಕಾರ್ಯಕ್ರದಲ್ಲಿ ನಾಲಿಗೆ ಹರಿಬಿಟ್ಟಿದ್ದರು. ವಿಕಿಪೀಡಿಯಾದಲ್ಲಿರುವ ಯಾವುದೋ ಒಂದು ಉಲ್ಲೇಖವನ್ನು ಹೇಳಿ ‘ಹಿಂದೂ’ ಪದಕ್ಕೆ ಪರ್ಷಿಯನ್‌ನಲ್ಲಿ ‘ಗುಲಾಮ’ ಎನ್ನುವ ಅರ್ಥವಿದೆ ಎನ್ನುವ ಹೇಳಿಕೆಯನ್ನು ನೀಡಿದ್ದು ಮಾತ್ರವಲ್ಲದೇ, ಅದನ್ನು ಸಮರ್ಥಿಸಿಕೊಳ್ಳುವ ಕಾರ್ಯದಲ್ಲಿಯೂ ಮುಳುಗಿದ್ದರು. ಈ ರೀತಿಯ ಹೇಳಿಕೆ ನೀಡುತ್ತಿದ್ದಂತೆ ಸ್ವಾಭಾವಿಕವಾಗಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಸತೀಶ್ ಜಾರಕಿಹೊಳಿ ವಿರುದ್ಧ ಕಟು ಟೀಕೆ ಮಾಡಿದ್ದರು.

ಇಷ್ಟೇ ಆಗಿದ್ದ ಸತೀಶ್ ಜಾರಕಿಹೊಳಿ ಜಯಿಸಿಕೊಂಡು, ತಾನೊಬ್ಬ ‘ಪ್ರಗತಿಪರ ಚಿಂತಕ’, ‘ಬುದ್ಧಿಜೀವಿ’, ಆದ್ದರಿಂದ ಸತ್ಯ ಶೋಧನೆ ಮಾಡಿದ್ದೇನೆ ಎನ್ನುವ ಸಮರ್ಥನೆಯಲ್ಲಿಯೇ ಕೆಲ ದಿನ ಕಳೆಯುತ್ತಿದ್ದರು. ಅಷ್ಟೊತ್ತಿಗೆ ಟೀಕೆ-ಪ್ರತಿಟೀಕೆ ಬರುತ್ತಿತ್ತು. ಅದಾದ ಬಳಿಕ ಮತ್ತೊಂದು ವಿಷಯ ಬರುತ್ತಿದ್ದಂತೆ ಹಿಂದೂಗಳು ಸತೀಶ್ ಹೇಳಿಕೆಯನ್ನು ಮರೆಯುತ್ತಿದ್ದರು. ಆದರೆ ದಾಖಲೆ ಗಳಲ್ಲಿ ಮಾತ್ರ ಹಾಗೆಯೇ ಉಳಿಯುತ್ತಿತ್ತು. ಆದರೆ ಈ ಬಾರಿ ಆಗಿದ್ದೇ ಬೇರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ವಿಷಯಕ್ಕೆ ಪ್ರತಿಕ್ರಿಯಿಸುವ ಮೊದಲೇ ಕಾಂಗ್ರೆಸ್ ಹೈಕಮಾಂಡ್‌ನ ಆಪ್ತವಲಯದಲ್ಲಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವರಿ ಯಾಗಿರುವ ರಂದೀಪ್ ಸುರ್ಜೇವಾಲ ಪ್ರತಿಕ್ರಿಯಿಸಿ, ‘ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ’ ಎನ್ನುವ ಕಠಿಣ ಮಾತುಗಳನ್ನು ಹೇಳಿದರು.

ಹೈಕಮಾಂಡ್ ನಿಂದ ‘ನೆರವಿಲ್ಲ’ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಹಿಂದಕ್ಕೆ ಸರಿದರು. ‘ಸತೀಶ್ ಹೇಳಿಕೆ ವೈಯಕ್ತಿಕ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ’ ಎನ್ನುವ ತೀರ್ಮಾನಕ್ಕೆ ಬಂದಿತ್ತು. ಯಾವಾಗ ಪಕ್ಷದ ನೆರವು ಜಾರಕಿಹೊಳಿ ಅವರಿಲ್ಲ ಎನ್ನುವುದು ಖಾತ್ರಿಯಾಯಿತೋ, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಹೋರಾಟ ಇನ್ನಷ್ಟು ಹೆಚ್ಚಿತ್ತು. ಕೊನೆಗೆ ಪಕ್ಷದ ವರಿಷ್ಠರು ‘ಹೇಳಿಕೆ ಹಿಂಪಡೆಯಿರಿ’ ಎನ್ನುವ ಖಡಕ್ ಸಂದೇಶವನ್ನು ರವಾನಿಸುತ್ತಿದ್ದಂತೆ ಅನಿವಾರ್ಯವಾಗಿ ಸತೀಶ್ ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದೆ.

ಆದರೆ ಅದನ್ನು ಅಲ್ಲಿಗೆ ನಿಲ್ಲಿಸದೇ, ಹಿಂದೂ ಪದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಕಾರದ ವತಿಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎನ್ನುವ ಒತ್ತಡವನ್ನು ಹೇರಿದರು. ಹಾಗೇ ನೋಡಿದರೆ ಹಿಂದೂ ಧರ್ಮದ ಬಗ್ಗೆ, ಹಿಂದೂ ಧಾರ್ಮಿಕ ಆಚರಣೆ, ನಂಬಿಕೆಗಳ ಬಗ್ಗೆ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ ಅಥವಾ ಸತೀಶ್ ಜಾರಕಿಹೊಳಿ ಅವರೊಬ್ಬರೇ ಅಲ್ಲವೇ ಅಲ್ಲ.

‘ಪ್ರಗತಿಪರ’, ‘ಬುದ್ಧಿಜೀವಿ’ ಎನ್ನುವ ಬಿರುದು ಪಡೆಯುವುದಕ್ಕೆ ಇರುವ ಏಕೈಕ ಸುಲಭ ಮಾರ್ಗವೆಂದರೆ, ಈ ರೀತಿ ಹಿಂದೂ ಗಳಾಗಿದ್ದವರೇ ಧರ್ಮದ ವಿರುದ್ಧ ಮಾತನಾಡುವುದರಿಂದಾಗಿ ಎನ್ನುವುದು ದಶಕಗಳಿಂದ ಇರುವ ಮಾತಾಗಿದೆ. ಇದೇ ಕಾರಣಕ್ಕೆ ಅನೇಕರು ಧರ್ಮದ ವಿರುದ್ಧ ಮಾತನಾಡುತ್ತಾ ಬಂದಿದ್ದಾರೆ. ಅದಕ್ಕೆ ಸೂಕ್ತ ಪುರಾವೆಗಳಿರಬೇಕು ಎಂದೇನು ಇಲ್ಲ. ಏಕೆಂದರೆ ಹಿಂದೂ ಧರ್ಮದ ಬಗ್ಗೆ ಮಾತನಾಡುವುದರಿಂದ ‘ಮತ’ಗಳಿಗೆ ಸಮಸ್ಯೆಯಾಗುವುದಿಲ್ಲ. ಆದರೆ ಒಂದು ವೇಳೆ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಮಾತನಾಡಿದರೆ ‘ಗೇಯ್ನ್’ ಎನ್ನುವುದು ಪರಿಸ್ಥಿತಿಯಿತ್ತು.

ಇಂದು ಅವಹೇಳನದಿಂದ ಮತ ಸಿಗುತ್ತದೆ ಎನ್ನುವ ಪರಿಸ್ಥಿತಿ ಇಲ್ಲದಿದ್ದರೂ, ಮತ ಕಳೆದುಕೊಳ್ಳುವುದಿಲ್ಲ ಎನ್ನುವ ವಿಶ್ವಾಸ ವನ್ನು ನಾಯಕರಲ್ಲಿದೆ. ಆ ಕಾರಣಕ್ಕಾಗಿಯೇ ಈ ರೀತಿಯ ಹೇಳಿಕೆಗಳು ಬರುತ್ತವೆ. ನಿಜವಾಗಿ ಹೇಳಬೇಕು ಎಂದರೆ ಹಿಂದೂ ಧರ್ಮಕ್ಕೆ ತನ್ನದೇ ಆದ ಸ್ಥಾನವಿದೆ. ಹಿಂದೂ ಎನ್ನುವುದು ‘ಸಿಂಧು’ವಿನಿಂದ ಬಂದಿದೆ. ಸಿಂಧುವಿನಿಂದ ಹಿಂದೂ ಎನ್ನುವ ಮಾತು ಈಗಲೂ ಜಗಜನಿತ. ಇಡೀ ವಿಶ್ವದಲ್ಲಿಯೇ ಮೊದಲ ನಾಗರಿಕತೆ ಎಂದರೆ ಅದು ಸಿಂಧೂ ನಾಗರೀಕತೆ.

ಸಿಂಧು ನದಿಯ ತಟದಲ್ಲಿಯೇ ಆ ನಾಗರೀಕತೆ ಆರಂಭವಾಯಿತು ಎನ್ನುವ ಇತಿಹಾಸವಿದೆ. ಅಂತಹ ಇತಿಹಾಸವಿರುವ ಹಿಂದೂ ಶಬ್ದಕ್ಕೆ ಅಪಮಾನ ಮಾಡುವುದು ಒಪ್ಪಿತವಲ್ಲ. ಇನ್ನು ಸತೀಶ್ ಜಾರಕಿಹೊಳಿ ಅವರು ಈ ಹೇಳಿಕೆ ನೀಡಿದ್ದು ‘ಮಾನವತವಾದಿ’ ಎನ್ನುವ ತಾವೇ ಹುಟ್ಟಿಹಾಕಿರುವ ಸಂಸ್ಥೆಯ ಕಾರ್ಯಕ್ರಮದಲ್ಲಿ. ಈ ಹಿಂದೆ ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದು, ಸ್ಮಶಾನದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ನಾಗರಪಂಚಮಿಗೆ ನಾಗರನಿಗೆ ಹಾಲು ಎರೆಯುವ ಬದಲು, ಬಡ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಇದೇ ವೇದಿಕೆಯನ್ನು ಮಾಡಿಕೊಂಡು ಬಂದಿದ್ದಾರೆ.

ಮೌಢ್ಯದ ವಿರುದ್ಧದ ಅವರ ಈ ಕಾರ್ಯಗಳಿಗೆ ಜನ ಬೆಂಬಲವೂ ಸಿಕ್ಕಿತ್ತು. ಆದರೆ ಅದೇ ಕಾರಣಕ್ಕೆ, ಹಿಂದೂ ಎಂದರೆ ‘ಗುಲಾಮ’ ಎನ್ನುವ ಹೇಳಿಕೆ ನೀಡಿದ್ದು, ಒಪ್ಪಿತವಲ್ಲ. ಅದಕ್ಕಿಂತ ಹೆಚ್ಚಾಗಿ ಈ ರೀತಿ ಹೇಳಿಕೆ ನೀಡಲು ಅವರು ಬಳಸಿ ಕೊಂಡಿರುವ ಅಥವಾ ಸಂಪನ್ಮೂಲವನ್ನು ನೋಡಬೇಕಾಗುತ್ತದೆ. ಅವರು ‘ವಿಕಿಪೀಡಿಯಾ’ದಲ್ಲಿ ನೋಡಿಕೊಂಡು ಹೇಳಿದ್ದೇನೆ ಎನ್ನುವ ಸಮರ್ಥನೆಯನ್ನು ನೀಡಿದ್ದರು.

ಆದರೆ ಅದೇ ವಿಕಿಪೀಡಿಯಾದಲ್ಲಿ ಹಿಂದೂ ಎಂದರೆ ‘ಹಿಂದೂ ಧರ್ಮವೆಂದರೆ ಮಾನವ ಧರ್ಮ. ವಿಶ್ವದ ಪುರಾತನ ಧರ್ಮ. ಭಾರತ ಉಪಖಂಡದ ಪ್ರಧಾನ ಧರ್ಮ’ ಎನ್ನುವ ಉಲ್ಲೇಖವೂ ಇದೆ. ಆದರೆ ಅದನ್ನು ಹೇಳದೇ ಇದನ್ನು ಏಕೆ ಹೇಳಬೇಕು? ಹಿಂದೂ ಧರ್ಮದ ಏನೇ ಮಾತನಾಡಿದರೂ ಎಲ್ಲಿಯೂ ಪ್ರತಿಭಟನೆಗಳು ಆಗುವುದಿಲ್ಲ. ವಿರೋಧವಾಗುವುದಿಲ್ಲ. ಒಂದು ರೀತಿ
‘ಟೇಕನ್ ಫಾರ್ ಗ್ರಾಟೆಂಡ್’ ಎನ್ನುವ ಮನಸ್ಥಿತಿ ಬಹುತೇಕ ಸೋ ಕಾಲ್ಡ್ ಪ್ರಗತಿಪರರಲ್ಲಿ ಇರುವುದೇ ಈ ಸಮಸ್ಯೆಗೆ ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಇನ್ನು ವಿಕಿಪೀಡಿಯಾದಲ್ಲಿ ಬಂದಿರುವುದನ್ನು ಎಲ್ಲ ಒಪ್ಪಲು ಸಾಧ್ಯವೇ? ಅದು ಒಂದು ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಇಂತಹ ಮಾತುಗಳನ್ನು ಆಡುವುದರ ಹಿಂದೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವು ದಲ್ಲದೇ ಬೇರೇನು ಇಲ್ಲ ಎನ್ನುವುದು ಗೊತ್ತಿರದ ಸಂಗತಿಯೇನಲ್ಲ. ಅನೇಕರು ಹಿಂದೂ ಧರ್ಮದ ವಿರುದ್ಧ ಕಟು ಟೀಕೆ ಮಾಡಿದ ಮಾತ್ರಕ್ಕೆ ಅವರು ದೊಡ್ಡವರಾಗುತ್ತಾರೆ.

ಅವರನ್ನು ಅನೇಕರು ಬೆಂಬಲಿಸುತ್ತಾರೆ ಎನ್ನುವ ‘ಭ್ರಮೆ’ಯಲ್ಲಿ ಅನೇಕರಲ್ಲಿದ್ದಾರೆ. ಹಿಂದೂ ಧರ್ಮದಲ್ಲಿರುವ ‘ಜಾತಿ’ ಆಧಾರಿತ ವಿಭಜನೆಯನ್ನೇ ಮುಂದಿಟ್ಟುಕೊಂಡು ಈ ರೀತಿಯ ಪ್ರಯತ್ನ ಮಾಡಿದರೆ ತಾವು ‘ರಕ್ಷಣೆ’ ಪಡೆಯಬಹುದು ಎನ್ನುವುದು ಅನೇಕರ ನಂಬಿಕೆ. ಆದರೆ ಇತ್ತೀಚಿನ ದಿನದಲ್ಲಿ ಈ ರೀತಿಯ ಪ್ರಯತ್ನಕ್ಕೆ ಅನೇಕರು ಸೊಪ್ಪು ಹಾಕುತ್ತಿಲ್ಲ ಎನ್ನುವುದು ಬೇರೆ ಮಾತು. ಹಾಗೇ ನೋಡಿದರೆ ಇತ್ತೀಚಿಗೆ ಕಾಂಗ್ರೆಸ್ ನಾಯಕರು ‘ಸಾಫ್ಟ್ ಹಿಂದೂತ್ವ’ದ ಮೊರೆ ಹೋಗಿದ್ದಾರೆ. ಈ ರೀತಿ
ಆಗದಿದ್ದರೆ ಮುಂದಿನ ಚುನಾವಣೆಯಲ್ಲಿ ಹೊಡೆತ ಬೀಳಲಿದೆ ಎನ್ನುವ ಸ್ಪಷ್ಟ ಎಚ್ಚರಿಕೆಯನ್ನು ಪಕ್ಷದ ವರಿಷ್ಠರಿಗೆ ಹಾಗೂ ರಾಜ್ಯ ನಾಯಕರಿಗೆ ತಂತ್ರಗಾರಿಕಾ ತಂಡದಿಂದ ಹೋಗಿದ್ದರಿಂದ ಹಿಬಾಜ್, ಹಲಾಲ್ ಸೇರಿದಂತೆ ಹಲವು ವಿಷಯದಲ್ಲಿ ಕಾಂಗ್ರೆಸ್
ತಟಸ್ಥ ನಿಲುವು ತಾಳಿತ್ತು.

ಅದೇ ಕಾರಣಕ್ಕಾಗಿಯೇ ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಂತೆ, ಡಿಕೆಶಿ ಹೇಳಿಕೆ ಹಿಂಪಡೆಯುವಂತೆ ಸೂಚನೆ ನೀಡಿದ್ದು. ಆದರೆ ಈಗಲೂ ‘ಹಿಂದೂ’ ವಿರುದ್ಧ ಹೇಳಿಕೆ ನೀಡುವುದು, ಹೀಯಾಳಿಸಿ ಮಾತನಾಡುವವರು ಧರ್ಮ ದಲ್ಲಿರುವ ಕೆಲವು ಮೌಢ್ಯಗಳ ಬಗ್ಗೆ ಮಾತನಾಡುತ್ತೇವೆ. ಅದರಲ್ಲಿ ತಪ್ಪೇನಿದೆ ಎನ್ನುವ ವಾದವನ್ನು ಮಾಡುತ್ತಾರೆ. ಆದರೆ ಇದೇ ಮೌಢ್ಯಗಳು ಇತರ ಧರ್ಮದಲ್ಲಿಯೂ ಇರುತ್ತದೆ. ಆದರೆ ಆ ವಿಷಯಗಳ ಬಗ್ಗೆ ಮಾತನಾಡುವುದಕ್ಕೆ ಮಾತ್ರ ಬಹುತೇಕ ‘ಪ್ರಗತಿಪರರ’ ಆಲೋಚನೆಗಳು ಸ್ಥಗಿತವಾಗುತ್ತದೆ.

ಇದಕ್ಕೆಲ್ಲ ಕಾರಣ, ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ‘ಚಲ್ತಾ ಹೇ’ ಎನ್ನುವ ಮನಸ್ಥಿತಿಯೇ ಕಾರಣ. ಏನೇ ಆಗಲಿ ಈ ರೀತಿಯ ವಿಷಯಗಳಿಂದ ಹಿಂದೂ ಮತಗಳು ಕೈಬಿಟ್ಟು ಹೋಗುವುದು ಹಾಗೂ ಇನ್ನೊಂದು ವಾರದಲ್ಲಿ ಇಡೀ ಪ್ರಕರಣವನ್ನೇ ಮರೆಯುವುದು ಹಿಂದೂಗಳು ಈ ಹಿಂದಿನಿಂದಲೂ ನಡೆಸಿರುವ ಪದ್ಧತಿಯಲ್ಲವೇ?