Saturday, 14th December 2024

ವೈಯಕ್ತಿಕ ಹಿತಾಸಕ್ತಿ ಕೈ ಬಿಟ್ಟರೆ ಲಾಭ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಯಾವುದೇ ಯುದ್ಧದಲ್ಲಿ ಗೆಲ್ಲಬೇಕಾದರೆ ಶಸ್ತ್ರ, ಸೈನಿಕರ ಸಂಖ್ಯೆಗಿಂತ ಹೆಚ್ಚಾಗಿ ಸೈನ್ಯವನ್ನು ಮುನ್ನಡೆಸುವ ನಾಯಕರ ನಡುವಿನ ಸಮನ್ವಯತೆ, ಯುದ್ಧಕ್ಕೆ ಹೋಗುವಾಗ ಗೆಲವೊಂದೇ ಮಾನದಂಡ ಎನ್ನುವ ಮನಃಸ್ಥಿತಿ ಅತಿ ಮುಖ್ಯ.

ಇದು ಯುದ್ಧ ಮಾತ್ರವಲ್ಲ, ಚುನಾವಣಾ ರಾಜಕೀಯದಲ್ಲಿಯೂ ಅತಿ ಮುಖ್ಯ. ಇವ ನಮ್ಮವ ಅದಕ್ಕಾಗಿ ಇವನಿಗೆ ಟಿಕೆಟ್ ಕೊಡಿ. ಇವನು ಗೆಲ್ಲುವುದು ಖಚಿತ, ಆದರೂ ನನ್ನ ಮಾತು ಕೇಳಲ್ಲವೆಂದು ಟಿಕೆಟ್‌ಗೆ ಅಡ್ಡಗಾಲು ಹಾಕುವುದು ಮಾಡುವುದರಿಂದ ಆಗುವ ಅನಾಹುತ ಗಳನ್ನು ಹಲವು ಚುನಾವಣೆಯಲ್ಲಿ ನೋಡಿದ್ದೇವೆ. ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿರುವ ಕಾಂಗ್ರೆಸ್, ಮತ್ತೊಮ್ಮೆ ಈ ಎಡವಟ್ಟು ಮಾಡಿ ಕೊಳ್ಳದಿದ್ದರೆ ಅರ್ಧ ಚುನಾವಣೆ ಗೆದ್ದಂತೆ ಎನ್ನುವುದು ಸ್ಪಷ್ಟ.

ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಎದುರಾಗಲಿರುವ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಸೇರಿದಂತೆ ಮೂರು ಪಕ್ಷಗಳೂ ಸಿದ್ಧತೆ ಆರಂಭಿಸಿವೆ. ದೇಶದ ಬಹುತೇಕ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿರುವ ಕಾಂಗ್ರೆಸ್, ಕರ್ನಾಟಕದಿಂದ ಮತ್ತೆ ರಾಜಕೀಯ ಮರುಹುಟ್ಟಿನ ಆಲೋಚನೆಯಲ್ಲಿದ್ದು, ಕಾಂಗ್ರೆಸ್‌ನ ನಾಯಕರು ಇದೇ ದಾಟಿಯಲ್ಲಿ ವೀರಾವೇಶದ ಮಾತುಗಳನ್ನು ಆಡುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ‘ಟಾರ್ಗೆಟ್ 150’ ಅನ್ನು ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ನೀಡಿದ್ದಾರೆ. ಈ ಟಾರ್ಗೆಟ್ ನೀಡುವುದಷ್ಟೇ ಅಲ್ಲ, ಈ ಟಾರ್ಗೆಟ್‌ನಲ್ಲಿ ಒಂದೇ ಒಂದು ಸೀಟು ಸಹ ಆಚೀಚೆ ಆಗಬಾರದು ಎನ್ನುವ ಎಚ್ಚರಿಕೆ ಬೇರೆ ನೀಡಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿರುವ ನಾಯಕರ ದಂಡು ನೋಡಿ, ಈ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೋ ಅಥವಾ ಇನ್ಯಾವ ಕಾರಣಕ್ಕೆ ಈ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೋ ಎನ್ನುವುದು ಬೇರೆ ಮಾತು. ಆದರೆ ಈ ಟಾರ್ಗೆಟ್ ರೀಚ್ ಆಗುವುದಕ್ಕೆ ಸಾಮೂಹಿಕ ನಾಯಕತ್ವಕ್ಕೆ ಮಣೆ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿರುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ, ಎಂ.ಬಿ. ಪಾಟೀಲ್ ಅವರಂತಹ ನಾಯಕರನ್ನು ನಿಭಾಯಿಸಲು ಹಾಗೂ ಎಲ್ಲರ ಮೇಲೆ ನಿಗಾ ವಹಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲ ಅವರನ್ನು ಚುನಾವಣೆ ಮುಗಿಯುವ ತನಕ ರಾಜ್ಯದಲ್ಲಿ ಬಿಡುವ ಮಾತನ್ನು ಆಡಿದ್ದಾರೆ.

ಚುನಾವಣೆ ಮುಗಿಯುವ ತನಕ ಸುರ್ಜೇವಾಲ ಅವರು ತಿಂಗಳ ೧೫ ದಿನಗಳ ಕಾಲ ಕರ್ನಾಟಕದಲ್ಲಿಯೇ ಬೀಡುಬಿಟ್ಟು, ಸಂಘಟನೆಯ ಬಗ್ಗೆ ಎಚ್ಚರವಹಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಕೆಲ ಕಾಂಗ್ರೆಸಿಗರ ಪ್ರಕಾರ ನಿಜವಾದ ಸಮಸ್ಯೆ ಇರುವುದು ಇಲ್ಲೇ ಅಂತೆ. ಹೌದು, ಈ ಮಾತು ಕೆಲವರಿಗೆ ಅಚ್ಚರಿ ಎನಿಸಬಹುದು. ಪ್ರಧಾನ ಕಾರ್ಯದರ್ಶಿಯೊಬ್ಬರು, ಅದರಲ್ಲಿಯೂ ರಾಹುಲ್ ಗಾಂಧಿ ಅವರ ಆತ್ಯಾಪ್ತ ವಲಯದಲ್ಲಿರುವ ಒಬ್ಬರು ರಾಜ್ಯದಲ್ಲಿಯೇ ಠಿಕಾಣಿ ಹೂಡಿ, ಚುನಾವಣೆ ತಯಾರಿಯ ಉಸ್ತುವಾರಿ ನೋಡಿಕೊಂಡರೆ ಆಗುವ ಸಮಸ್ಯೆ
ಯಾದರೂ ಏನು? ಸಂಘಟನೆಗೆ ಇನ್ನಷ್ಟು ಬಲ ಬರುವುದಿಲ್ಲವೇ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ.

ಆದರೆ ಉಸ್ತುವಾರಿಯ ನೆಪದಲ್ಲಿ ಸುರ್ಜೇವಾಲ ಅವರು ಕರ್ನಾಟಕಕ್ಕೆ ಬಂದಿಳಿದು, ‘ತಮಗೆ’ ಬೇಕಾದ ರೀತಿಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಥವಾ ವರದಿಗಳನ್ನು ಸಿದ್ಧಪಡಿಸುವುದರಿಂದ ಪಕ್ಷದಲ್ಲಿ ಗೊಂದಲಗಳು ಮೂಡುತ್ತವೆ. ಈ ಹಿಂದಿನ ಹಲವು ಚುನಾವಣೆಯಲ್ಲಿ, ಹಲವು ರಾಜ್ಯಗಳನ್ನು ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ಆದರೆ ಈ ಹಿಂದಿನ ಕೆಟ್ಟ ಅನುಭವಗಳ
ಬಳಿಕವೂ, ರಾಹುಲ್ ಗಾಂಽ ಅವರು ಪಾಠ ಕಲಿತಿಲ್ಲ. ಇದೀಗ ಕರ್ನಾಟಕದಲ್ಲಿಯೂ ಅದೇ ಪರಿಸ್ಥಿತಿ ಮುಂದುವರಿದರೆ, ಇರುವ ಒಂದು ರಾಜ್ಯವನ್ನು ಬಿಟ್ಟುಕೊಡಬೇಕಾಗುತ್ತದೆ ಎನ್ನುವ ಆತಂಕದಲ್ಲಿ ಕೆಲವರಿದ್ದಾರೆ.

ಅಷ್ಟಕ್ಕೂ ಕಾಂಗ್ರೆಸ್ ಹಿಡಿತ ಸೋನಿಯಾ ಗಾಂಧಿ ಅವರಿಂದ ರಾಹುಲ್‌ಗೆ ಬಂದಾಗಿನಿಂದ ಅವರ ಎಡ-ಬಲದಲ್ಲಿ ನಿಂತಿರುವುದು ರಂದೀಪ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್. ಈಗಲೂ ಈ ಇಬ್ಬರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಆಡಳಿತಾತ್ಮಕ ನಿರ್ಧಾರವನ್ನು ಇವರೇ ತಗೆದುಕೊಳ್ಳುತ್ತಿದ್ದಾರೆ. ಈ ಇಬ್ಬರು ರಾಹುಲ್ ಗಾಂಧಿ ಅವರಿಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಪಕ್ಷದ ಹಿರಿಯ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿಲ್ಲ.

ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ‘ಜಿ-23’ ನಾಯಕರ ಅಸಮಾಧಾನ ಕೂಡ, ಇದೇ ಸುರ್ಜೇವಾಲ ಹಾಗೂ ವೇಣು ಗೋಪಾಲ್ ವಿರುದ್ಧ. ಹಾಗೇ ನೋಡಿದರೆ, ರಾಹುಲ್ ಗಾಂಧಿ ಅವರ ಆತ್ಮೀಯ ವಲಯದಲ್ಲಿ ಕಾಣಿಸಿಕೊಂಡಿದ್ದ ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹತ್ತಾರು ನಾಯಕರು ದೂರವಾಗಲೂ ಈ ಇಬ್ಬರೊಂದಿಗಿನ ‘ಅತಿಯಾದ ಆತ್ಮೀಯತೆ’ಯೇ ಕಾರಣ ಎನ್ನುವುದು ಕಾಂಗ್ರೆಸ್ ಒಳಗಿನ ಮಾತಾಗಿದೆ.

ಈ ಆತ್ಮೀಯತೆಯಿಂದ ಈ ಇಬ್ಬರೂ, ಕಾಂಗ್ರೆಸ್‌ನಲ್ಲಾಗುವ ಹಲವು ವಿಚಾರಗಳನ್ನು ಏಕಪಕ್ಷೀಯವಾಗಿ ತೀರ್ಮಾನ ತಗೆದುಕೊಳ್ಳುತ್ತಿದ್ದು, ಇದು ಪಕ್ಷದ ಸಂಘಟನೆಗೆ ಮಾರಕವಾಗುತ್ತಿದೆ. ಇದನ್ನು ರಾಹುಲ್ ಗಾಂಽ ಅವರ ಗಮನಕ್ಕೆ ಹಲವು ಬಾರಿ, ಕಾಂಗ್ರೆಸ್ ನಿಷ್ಠರು ತಂದರೂ ಅದನ್ನು ‘ಕಿವಿ’ಗೆ ಹಾಕಿಕೊಳ್ಳದೇ ಇರುವುದು ಈ ಎಲ್ಲ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಸುರ್ಜೇವಾಲ ಹಾಗೂ ವೇಣುಗೋಪಾಲ್ ಅವರ ವಿರುದ್ಧ ಇರುವ ಗಂಭೀರ ಆರೋಪವೆಂದರೆ, ಈ ಇಬ್ಬರು ತಗೆದುಕೊಳ್ಳುವ ಬಹುತೇಕ ತೀರ್ಮಾನಗಳ ಪಕ್ಷದ ಹಿತದೃಷ್ಟಿಗಿಂತ ಹೆಚ್ಚಾಗಿ, ವೈಯಕ್ತಿಕ ಹಿತದೃಷ್ಟಿಯ ಮೇಲಿರುತ್ತದೆ ಎನ್ನುವುದಾಗಿದೆ.

ವೈಯಕ್ತಿಕವಾಗಿ ಈ ಇಬ್ಬರೊಂದಿಗೆ ಆತ್ಮೀಯವಾಗಿದ್ದರೆ, ಅನರ್ಹನಿಗೂ ಸ್ಥಾನ ಸಿಗುವಂತೆ ನೋಡಿಕೊಳ್ಳುತ್ತಾರೆ. ಇದರಿಂದಾಗಿ ಪಕ್ಷದಲ್ಲಿ ಹಲವು ಸಮಸ್ಯೆಗಳಾಗುತ್ತವೆ ಎನ್ನುವುದಾಗಿದೆ. ಇನ್ನು ರಾಹುಲ್ ಗಾಂಽ ಅವರು, ಈ ಇಬ್ಬರು ನೀಡುವ ವರದಿಗಳನ್ನೇ ಅಂತಿಮ ಎನ್ನುವಂತೆ ನೋಡಿ ತೀರ್ಮಾನ ಕೈಗೊಳ್ಳುವುದರಿಂದ, ಪಕ್ಷಕ್ಕೆ ಹಲವು ಬಾರಿ ಡ್ಯಾಮೇಜ್ ಆಗಿರುವ ಉದಾಹರಣೆಗಳಿವೆ. ಇನ್ನು ಕರ್ನಾಟಕ ವಿಷಯದಲ್ಲಿ ಈ ಇಬ್ಬರ ನಡವಳಿಕೆ ನೋಡಿದರೆ, ಸುರ್ಜೇವಾಲ ಹಾಗೂ ವೇಣುಗೋಪಾಲ್ ಅವರು ರಾಜ್ಯದ ಎಲ್ಲ ನಾಯಕ ರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರೂ, ಸಿದ್ದರಾಮಯ್ಯ ಅವರೊಂದಿಗೆ ಕೆ.ಸಿ.ವೇಣುಗೋಪಾಲ್ ಹಾಗೂ ಡಿ.ಕೆ.ಶಿವ ಕುಮಾರ್ ಅವರೊಂದಿಗೆ ರಂದೀಪ್ ಸುರ್ಜೇವಾಲ ಹೆಚ್ಚು ಆತ್ಮೀಯತೆಯಿದೆ.

ಈಗಾಗಲೇ ರಾಜ್ಯ ಕಾಂಗ್ರೆಸ್ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಂದ ಎರಡು ಶಕ್ತಿಕೇಂದ್ರಗಳು ಸೃಷ್ಟಿಯಾಗಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಇದೀಗ ರಾಷ್ಟ್ರೀಯ ಮಟ್ಟದಲ್ಲಿಯೂ, ಇದೇ ರೀತಿ ಎರೆಡೆರೆಡು ಅಭಿಪ್ರಾಯ ಸಂಗ್ರಹಣೆಯಾದರೆ ಪಕ್ಷದಲ್ಲಿ ಭಾರಿ ಸಮಸ್ಯೆ ಸೃಷ್ಟಿಯಾಗಲಿದೆ ಎನ್ನುವ ಆತಂಕ ರಾಜ್ಯ ನಾಯಕರಿಗಿದೆ. ಹಾಗೇ ನೋಡಿದರೆ ಕರ್ನಾಟಕದ ಉಸ್ತುವಾರಿ ಸುರ್ಜೇವಾಲ ಅವರಾಗಿರುವು ದರಿಂದ ಅವರ ಮಾತು ನಡೆಯುತ್ತದೆ. ಆದರೆ ದೆಹಲಿ ಮಟ್ಟದಲ್ಲಿ ಸುರ್ಜೇವಾಲ ಅವರಷ್ಟೇ ಪ್ರಭಾವವನ್ನು ವೇಣುಗೋಪಾಲ್ ಹೊಂದಿ ರುವುದರಿಂದ, ವೇಣು ಮಾತನ್ನು ಸುಲಭಕ್ಕೆ ತಗೆದು ಹಾಕುವುದಿಲ್ಲ. ಇದರಿಂದಾಗಿ ಗೊಂದಲಗಳು ಹೆಚ್ಚಾಗುತ್ತವೆ.

ಇನ್ನು ಕರ್ನಾಟಕದ ರಾಜಕೀಯ, ಇಲ್ಲಿನ ಚುನಾವಣಾ ತಂತ್ರಗಾರಿಕೆ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಉತ್ತರ ಭಾರತದ ರೀತಿಯಲ್ಲಿ ಮಾಡುವುದರಿಂದ ಯಾವುದೇ ಲಾಭವಿಲ್ಲ. ರಾಹುಲ್ ಗಾಂಧಿ ಅವರಿಗೆ ಇಲ್ಲಿನ ಸ್ಥಳೀಯ ಚುನಾವಣಾ ತಂತ್ರಗಾರಿಕೆ ಬಗ್ಗೆ ಸರಿಯಾದ ಮಾಹಿತಿ ನೀಡದೇ, ಈ ಹಿಂದಿನ ಚುನಾವಣೆಗಳ ರೀತಿಯಲ್ಲಿ ಎಡವಟ್ಟು ಮಾಡಿಕೊಂಡರೆ ಭರವಸೆಯಿರುವ ಒಂದು ರಾಜ್ಯವನ್ನು
ಕಳೆದುಕೊಳ್ಳುವ ಸ್ಥಿತಿ ತಂದುಕೊಳ್ಳಬೇಕಾಗುತ್ತದೆ. ಈ ಬಾರಿ ರಾಜ್ಯಕ್ಕೆ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದಾಗ ಕೆಲ ನಾಯಕರು ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಬೇಕು ಎನ್ನುವ ಮನವಿಯನ್ನು ರಾಹುಲ್ ಮುಂದಿಟ್ಟಿದ್ದಾರೆ.

ಇದರೊಂದಿಗೆ ಸುರ್ಜೇವಾಲ ನೇತೃತ್ವದಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಸಂದರ್ಶನವನ್ನು ನಡೆಸುವ ಲೆಕ್ಕಾಚಾರವನ್ನು ಇಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟನೆಯಿಲ್ಲ. ಆದರೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಣೆ ಸೂಕ್ತ ಎನ್ನುವ ಮಾತನ್ನು ಈ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ತಲೆಯಾಡಿಸಿದ್ದಾರೆ. ಇದರಿಂದ ಪಕ್ಷದ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಕೊಳ್ಳಲು, ಮತದಾರರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲು ಸಹಾಯವಾಗುತ್ತದೆ ಎನ್ನುವುದು ಇವರ ವಾದ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸಿಯಾಗುತ್ತದೆ ಎನ್ನುವ ಗೊಂದಲದಲ್ಲಿಯೂ ಅನೇಕರಿದ್ದಾರೆ.

ಏಕೆಂದರೆ, ಸಾಮಾನ್ಯವಾಗಿ ಕೆಲ ಕ್ಷೇತ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಟವೆಲ್ ಹಾಕಿರುತ್ತಾರೆ. ಈ ರೀತಿ ಟವೆಲ್ ಹಾಕಿರುವ ಕೆಲವರು, ಇಲ್ಲಿ ಟಿಕೆಟ್ ಸಿಗದಿದ್ದರೆ ಬಿಜೆಪಿ ಅಥವಾ ಜೆಡಿಎಸ್‌ಗೆ ಹೋಗುವ ಯೋಚನೆಯಲ್ಲಿಯೂ ಇರುತ್ತಾರೆ. ಅದರಲ್ಲಿಯೂ ಈ ಬಾರಿ ಜೆಡಿಎಸ್ ಪಕ್ಷ ಕಾಂಗ್ರೆಸ್‌ನ ಹಲವರನ್ನು ಸೆಳೆಯುವ ಲೆಕ್ಕಾಚಾರದಲ್ಲಿರುವುದರಿಂದ, ಇಲ್ಲಿ ಟಿಕೆಟ್ ಸಿಗದಿದ್ದರೆ ಅಲ್ಲಿಗೆ ಹೋಗುವ ಮನಸ್ಥಿತಿಯಲ್ಲಿರುತ್ತಾರೆ. ಒಂದು ವೇಳೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೆ, ಬಹುತೇಕ ‘ನಾಯಕರು’ ಇನ್ನೊಂದು ಪಕ್ಷಕ್ಕೆ ಟಿಕೆಟ್ ಅರಸಿ ಹೋಗುವುದಕ್ಕೆ ಸಮಯಾವಕಾಶ ನೀಡಿದಂತಾಗುತ್ತದೆ.

ಇದರಿಂದ, ಅವರೊಂದಿಗೆ ವೋಟುಗಳು ಹೋಗುವ ಆತಂಕವಿದೆ. ಇದನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದಕ್ಕೆ ಸುರ್ಜೇವಾಲ ಅಥವಾ ವೇಣುಗೋಪಾಲ್ ಇಬ್ಬರ ಬಳಿಯೂ, ‘ಸಮರ್ಥ ಉತ್ತರವಿಲ್ಲ’. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇರುವ ಉತ್ತಮ ಅವಕಾಶವನ್ನು
ಬಳಸಿಕೊಂಡು, ಸೋಲಿನ ಸರಪಳಿಯಿಂದ ಹೊರಬರುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಈ ವಿಷಯದಲ್ಲಿ ಎಚ್ಚರವಹಿಸಬೇಕಿದೆ. ರಾಹುಲ್ ಗಾಂಧಿ ಅವರು ಕೇವಲ ಸುರ್ಜೇವಾಲ ಅಥವಾ ವೇಣುಗೋಪಾಲ್ ಅವರ ವರದಿಯ ಮೇಲೆಯೇ ಎಲ್ಲವನ್ನು ನಿರ್ಧರಿಸುವ ಬದಲು, ‘ಬದಲಿ’ ಸಲಹೆಗಳ ಮೇಲೆಯೂ ಹೆಚ್ಚು ನಿಗಾವಹಿಸಬೇಕಿದೆ.

ಇದರೊಂದಿಗೆ ಎಲ್ಲ ನಾಯಕರು ತಮ್ಮ ‘ಹಿತಾಸಕ್ತಿ’ಗೆ ಹೆಚ್ಚು ಮಹತ್ವ ನೀಡುವ ಬದಲು, ಮೊದಲು ಪಕ್ಷ ಅಧಿಕಾರಕ್ಕೆ ಬರಲಿ ಬಳಿಕ ಯಾವ ಸ್ಥಾನಮಾನ ಏನು ಎನ್ನುವುದನ್ನು ನೋಡಿಕೊಳ್ಳೋಣ ಎನ್ನುವ ಮನಃಸ್ಥಿತಿಯಲ್ಲಿ ಚುನಾವಣೆಗೆ ತಯಾರಿ ನಡೆಸಿದರೆ ಗೆಲುವಿನ ರುಚಿ ಸಿಕ್ಕರೂ ಸಿಗಬಹುದು.