Friday, 22nd November 2024

ಕಾಂಗ್ರೆಸ್-ಜೆಡಿಎಸ್‌-ಬಿಜೆಪಿ-ಯಡಿಯೂರಪ್ಪ !

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಶೀರ್ಷಿಕೆಯನ್ನು ವಿಪರೀತಾರ್ಥವೋ, ಅಪಾರ್ಥವೋ ಮಾಡಿಕೊಂಡು ಇದು ಉತ್ಪ್ರೇಕ್ಷೆಯಾಯಿತು ಎಂದುಕೊಳ್ಳಬೇಡಿ.

ನಿಜವಾದ ಅರ್ಥವಿದು: ಕಾಂಗ್ರೆಸ್, ಜೆಡಿಎಸ್, ಬಿಜೆಪಿ – ಈ ಮೂರೂ ಪಕ್ಷಗಳು ನಮ್ಮ ರಾಜ್ಯದಲ್ಲಿ ಬೆಳೆದುಬಂದ ಬಗೆಯನ್ನು, ಬೆಳೆದು ನಿಂತ ಪರಿಯನ್ನು, ಅದರ ಒಟ್ಟೂ ಅಸ್ತಿತ್ವವನ್ನು, ಅವುಗಳು ಕಂಡ ಏಳುಬೀಳುಗಳನ್ನು, ಅಸ್ಥಿರತೆಯನ್ನು, ಅಸ್ಮಿತೆ ಯನ್ನು ರಾಷ್ಟ್ರ ರಾಜಕಾರಣದೊಂದಿಗೆ ಅವುಗಳು ಹೊಂದಿರುವ ಸಂಬಂಧ, ಸಂಪರ್ಕವನ್ನು, ಅವುಗಳಿಂದ ಪಡೆದ ಪ್ರಭಾವ, ಸ್ಥಾನಮಾನ, ಅಧಿಕಾರವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಯಾವ ನೆಲೆಯಲ್ಲೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ಸಿಗಿಂತ ಜೆಡಿಎಸ್, ಜೆಡಿಎಸ್‌ಗಿಂತ ಬಿಜೆಪಿ, ಬಿಜೆಪಿಗಿಂತ ಯಡಿಯೂರಪ್ಪ ವಿಶಿಷ್ಟವಾಗಿಯೂ, ವಿಭಿನ್ನವಾಗಿಯೂ ಕಾಣುತ್ತಾರೆ.

ಮಾತ್ರವಲ್ಲ, ದೊಡ್ಡ ಮಟ್ಟದ ರಾಜಕಾರಣಿಯೆನಿಸುತ್ತಾರೆ. ಕಾರಣ, ರಾಜ್ಯ ರಾಜಕಾರಣದಲ್ಲಿ ಅವರು ತಾವು ಬೆಳೆಯುತ್ತ ಬಿಜೆಪಿಯನ್ನು ಬೆಳೆಸಿದವರು. ಅಥವಾ ಬಿಜೆಪಿಯನ್ನು ಬೆಳೆಸುತ್ತಲೇ ತಾವೂ ಬೆಳೆದವರು. ವ್ಯಕ್ತಿ ಮತ್ತು ಪಕ್ಷ – ಎರಡೂ ಮುಖಗಳಲ್ಲಿ ಹೀಗೆ ಏಳ್ಗತಿಯನ್ನು ಕಂಡ, ಅಥವಾ ಸಾಧನೆಯನ್ನು ಮಾಡಿದ, ನಮ್ಮೀ ಕಾಲಘಟ್ಟದಲ್ಲಿ ಕಂಡ ಮತ್ತೊಬ್ಬ ರಾಜಕಾರಣಿ ರಾಜ್ಯದಲ್ಲಿಲ್ಲ. ಹಾಗೆ ಮತ್ತೊಂದು ರಾಷ್ಟ್ರೀಯ ಪಕ್ಷವೂ ಇಲ್ಲ.

ಇದ್ದರೆ ಅದು ಯಡಿಯೂರಪ್ಪ ಮತ್ತು ಬಿಜೆಪಿ ಮಾತ್ರ! ರಾಜ್ಯ ರಾಜಕೀಯದಲ್ಲಿ ಬಿಜೆಪಿ ಅಂದಾಕ್ಷಣ ಮೊದಲು ನೆನಪಾಗುವುದು ಯಡಿಯೂರಪ್ಪನವರೇ! ಗ್ರಹಿಸಿ ನೋಡಿ: ಕಾಂಗ್ರೆಸ್ಸಿನ ಪರಂಪರೆ, ಇತಿಹಾಸ, ಚರ್ಯೆ, ಪ್ರಭಾವ, ದೇಶವ್ಯಾಪಿಯಿದ್ದ ಅದರ ಅಸ್ಮಿತೆ ಮತ್ತು ಸಂಚಲನ – ಎಲ್ಲವೂ ರಾಜ್ಯದಲ್ಲಿ ಕಾಂಗ್ರೆಸ್ಸಿನ ರಾಜಕಾರಣಕ್ಕೆ ಮೊದಲಿಂದಲೂ ಪೂರಕವಾಗೇ ಇದೆ. ವರವಾಗೇ ಪರಿಣಮಿಸಿದೆ. ಇಂಥವನೊಬ್ಬನಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಬೆಳೆದು ಬಂದಿದೆ ಅಥವಾ ಗಟ್ಟಿಯಾಗಿ ಬೇರೂರಿ ನಿಂತಿದೆ ಯೆಂದು ಒಬ್ಬನನ್ನೇ ಗುರುತಿಸಲು ಸಾಧ್ಯವಿಲ್ಲ.

ಯಾಕೆಂದರೆ ಕಾಂಗ್ರೆಸ್ಸಿನ ರಾಷ್ಟ್ರ ರಾಜಕಾರಣದ ಒಟ್ಟೂ ಚರ್ಯೆಯ ಪ್ರತಿ-ಲನ ಅದಾಗಲೇ ಉಳಿದ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಆಗಿತ್ತು, ತನ್ಮೂಲಕ ಪಕ್ಷ ಸದೃಢವಾಗಿ ಬೆಳೆದಿತ್ತು. ಹೇಳಿ ಕೇಳಿ ಸ್ವಾತಂತ್ರ್ಯ ಪಡೆದ ಸಂದರ್ಭವದು. ತಾನೇ ಪ್ರಧಾನಿಯಾಗಬೇಕೆಂಬ ಅತೀವ ವಾಂಛೆ ನೆಹರೂಗಿತ್ತು. ಅದಕ್ಕೆ ಪೂರಕವಾಗಿ ಗಾಂಧಿಯ ಬೆಂಬಲವೂ ನೆಹರೂಗೇ ಇತ್ತು. ಬಹುಕಾಲ ನೆಹರೂ ಪ್ರಧಾನಿಯಾಗೇ ಇದ್ದರು. ಅನಂತರ ಅವರ ಮಗಳು ಇಂದಿರಾ, ಮೊಮ್ಮಗ ರಾಜೀವ್ ಗಾಂಧಿ, ಅನಂತರದಲ್ಲಿ ಶಾಸಿಜೀ, ಗುಲ್ಜಾರಿಲಾಲ್ ಸೇರಿ ಮನಮೋಹನ ಸಿಂಗ್ ರವರೆಗೆ ಹಲವರು ಪ್ರಧಾನಿಯಾದರು.

ಎಲ್ಲರೂ ಕಾಂಗ್ರೆಸ್ಸಿಗರೇ: ಗೌಡರು, ವಿಪಿಸಿಂಗ್, ಚಂದ್ರಶೇಖರರನ್ನು ಹೊರತುಪಡಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಇದೆಯೆಂದರೆ ರಾಷ್ಟ್ರ ರಾಜಕಾರಣದಲ್ಲಿ ಅದು ಹೊಂದಿರುವ ಅಗಾಧವಾದ ತಾಕತ್ತಿನಿಂದಲೇ! ಅದರ ವಿಸ್ತಾರವಾದ ವ್ಯಾಪ್ತಿಯಿಂದಲೇ! ಹೆಚ್ಚು ಕಡಿಮೆ ಈಗಲೂ ಹಾಗೆಯೇ! ಆದರೆ ಜೆಡಿಎಸ್ ಹಾಗೆ ಬೆಳೆದು ನಿಂತ ಪಕ್ಷವಲ್ಲ. ಅದು ಈ ಪರಿ ಬೆಳೆದು ನಿಲ್ಲಲು ದೇವೇಗೌಡರು ಕಾರಣವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ, ಹಾಗಂತ ಗೌಡರು ಮಾತ್ರ ಕಾರಣವೆಂದು ನನ್ನ ಮಾತಿನ ಅರ್ಥವಲ್ಲ.

ಆ ಪಕ್ಷದಲ್ಲೂ ಒಳ್ಳೆಯ ಮುತ್ಸದ್ದಿ ಗಳಿದ್ದರು. ಈಗಲೂ ಇzರೆ. ಅವರೆಲ್ಲರ ಪ್ರಭೆ ಪಕ್ಷದ ಉನ್ನತಿಗೆ ಕಾರಣವಾಗಿದೆ ಎಂದರೆ
ಒಪ್ಪಲೇಬೇಕು. ಆದರೆ ರಾಜ್ಯ ಬಿಜೆಪಿಯ ಚರಿತ್ರೆಯಲ್ಲಿ ಯಡಿಯೂರಪ್ಪ ನವರ ಅಸ್ಮಿತೆಯನ್ನೂ ಇನ್ನೊಬ್ಬರಿಗೆ ಹೋಲಿಕೆ ಮಾಡಲು ಬಿಜೆಪಿಯ ನಿಜವಾಗಿ ಯಾರಿಗೂ ಸಾಧ್ಯವಿಲ್ಲ. ತಳಮಟ್ಟ ದಿಂದಲೇ ಬಿಜೆಪಿಯನ್ನು ಬೆಳೆಸುತ್ತ ಬಂದವರು ಯಡಿ ಯೂರಪ್ಪನವರು. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಅಷ್ಟೊಂದು ದೊಡ್ಡಮಟ್ಟದಲ್ಲಿ ಹೆಸರಿಲ್ಲದ ಸಂದರ್ಭದಲ್ಲೂ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪನವರು ಬೆಳೆಸಲು ಶತಾಯಗತಾಯ ಶ್ರಮಿಸಿದವರು.

ಬಿಜೆಪಿಯೇ ಪಡೆಯಬಹುದು ಎನ್ನಿಸುವ ಸಂದರ್ಭದಲ್ಲೂ, ಆದರೆ ಸಂಪೂರ್ಣ ಬಹುಮತವನ್ನು ಪಡೆಯಲಾರದೆ ಹೋದ ಸಂದರ್ಭದಲ್ಲೂ ಯಡಿಯೂರಪ್ಪ ಕ್ಷಣಿಕ ಹೊಂದಾಣಿಕೆಯನ್ನು ಸಾಧಿಸಿಕೊಂಡ ತಂತ್ರಗಾರಿಕೆಯನ್ನು ಮಾಡಿದ್ದಾರೆ. ಈ ಮೈತ್ರಿಯ ಸರಕಾರ ಎಂಬ ಪರಿಕಲ್ಪನೆ ಕೇಂದ್ರದ ಬಳುವಳಿಯೆಂದರೆ ತಪ್ಪಲ್ಲ. ರಾಜ್ಯಗಳಲ್ಲೂ ಇದು ಇದ್ದದ್ದೇ!

ಸ್ವಾತಂತ್ರ್ಯ ಪ್ರಾಪ್ತಿಯ ಭಾರತದಲ್ಲಿ ಇದು ಪಕ್ಷವೊಂದರ ಅಸ್ತಿತ್ವ ಮತ್ತು ಅಧಿಕಾರಕ್ಕೇರುವ ಮಾರ್ಗವೇ ಆಗಿರುವುದ ರಿಂದ ತಪ್ಪು ಎಂದು ಬಹುತ್ವದ ಭಾರತದಲ್ಲಿ ದೊಡ್ದದೆಂದೆನಿ ಸದು. ಬಹುಮತದ ಸಮೀಪಕ್ಕೆ ಬಂದು ಸರಕಾರ ರಚನೆಗೆ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಹೊರಗಿನ ಬಲವನ್ನು ಮೈತ್ರಿ ರೂಪದಲ್ಲಿ ಪಡೆಯುವುದಕ್ಕೆ ಮತ್ತು ಅರಾಜಕತೆ ಯನ್ನು ನೀಗಿಸಿಕೊಳ್ಳುವ ಹಾಗೂ ಬಹುಕಾಲದ ರಾಜಕಾರಣದಲ್ಲಿ ತಾನು ಗೆಲ್ಲಲೇಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವುದರಿಂದ ಯಡಿಯೂರಪ್ಪ ತುಳಿದ ಹಾದಿ ಪ್ರಶ್ನಾರ್ಹ ವಾಗಿ ಉಳಿದರೂ ರಾಜಕೀಯದಲ್ಲಿ ಯಾರೂ ತುಳಿಯದ ಹಾದಿಯಂತೂ ಅಲ್ಲವೇ ಅಲ್ಲ.

ಹಾಗೆ ಅವರು ತುಳಿದ ಕ್ರಮದಲ್ಲಿ ಪಕ್ಷವು ಅಧಿಕಾರವನ್ನು ಅನುಭವಿಸಿದೆ. ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಇಲ್ಲವೆ? ಹೌದು,
ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಇದ್ದವರೇ. ಜೈಲಿಗೂ ಹೋಗಿ ಬಂದವರೇ! ಆದರೆ, ಯಾರೂ ನಿಷ್ಪಾಪಿಯಾಗಿ ರಾಜಕಾರಣ
ಮಾಡಲಾರರು. ಭ್ರಷ್ಟಾಚಾರ ಯಾವ ರಾಜಕಾರಣಿಯನ್ನು ಬಿಟ್ಟಿದೆ ಅಥವಾ ಯಾವ ರಾಜಕಾರಣಿ ಭ್ರಷ್ಟಾಚಾರವನ್ನು ಬಿಟ್ಟು ರಾಜಕಾರಣ ಮಾಡಬಲ್ಲ? ನೋ ವೇ. ಸಾಧ್ಯವೇ ಇಲ್ಲ. ಒಬ್ಬ ರಾಜಕಾರಣಿ ಭ್ರಷ್ಟನಾಗುವುದು, ಅವನನ್ನು ಭ್ರಷ್ಟನನ್ನಾಗಿಸುವುದು ಜನತೆಯೇ ಹೊರತು ಬೇರೆ ಯಾರೂ ಅಲ್ಲ.

ಮೊನ್ನೆ ಪಂಚಾಯತ್ ಚುನಾವಣೆ ಆಯಿತು. ಓಟಿಗಾಗಿ ನೋಟು ಎಂದೇ ಜನಪ್ರಸಿದ್ಧಿಯನ್ನು ಪಡೆದ ಚುನಾವಣೆಯದು. ನೋಟು ತೆಗೆದುಕೊಳ್ಳದೆ ಎಷ್ಟು ಜನ ಓಟು ಮಾಡಿದ್ದಾರೆ ? ಓಟಿಗಾಗಿ ನೋಟು ಹಂಚದವ ಗೆಲ್ಲಲಾರ, ನೋಟು ತಗೊಳ್ಳದವ ಸಮಾಜದ ಮಂಗ ನಂತೆಯೇ ಅಥವಾ ಮೂರ್ಖ ನಂತೆಯೇ ನಗೆಪಾಟಲಿಗೆ ಒಳಗಾಗುತ್ತಾನೆ. ಆದ್ದರಿಂದ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ, ಜೈಲಿಗೂ ಹೋಗಿದ್ದಾರೆ. ಎಂಬ ವಿಚಾರದಲ್ಲಿ ಅದು ಸುಳ್ಳು ಎನ್ನಲು ಯಾವ ಕಾಲಕ್ಕೂ ಸಾಧ್ಯವೇ ಇಲ್ಲ.

Of course ಭ್ರಷ್ಟಾಚಾರ ಮಾಡಿದವರೆಲ್ಲ ಮಾಡಿದ ಭ್ರಷ್ಟಾಚಾರ ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ ಎಂದ ಮಾತ್ರಕ್ಕೆ ಅಥವಾ
ಸಾಬೀತಾಗಿಯೂ ಜೈಲಿಗೆ ಹೋಗಲಿಲ್ಲ ಎಂದ ಮಾತ್ರಕ್ಕೆ ಸರಿಹೊತ್ತಿನ ರಾಜಕಾರಣದಲ್ಲಿ ಎಲ್ಲರೂ ಸುಭಗರಲ್ಲ. ವ್ಯವಸ್ಥೆಯ ತುದಿಯಿಂದ ಬುಡದವರೆಗೆ ಹತ್ತು ಹಲವು ಬಗೆಯಲ್ಲಿ ಭ್ರಷ್ಟಾಚಾರ ಮಾಡುವವರನ್ನು ಹೊಂದಿರುವ ಈ ಕಾಲದಲ್ಲಿ ಒಬ್ಬ ಯಡಿಯೂರಪ್ಪರನ್ನು ಮಾತ್ರ ಬೊಟ್ಟು ಮಾಡುವುದು ಉಳಿದ ಭ್ರಷ್ಟಾಚಾರಿಗಳಿಗೆ ಸಮ್ಮಾನ ಮಾಡಿದಂತೆ!

ಕಪಟ, ವಂಚನೆ, ಚತುರೋಪಾಯ, ದಂಡನೆ, ಮಿಥ್ಯೆ, ಭೇದನೀತಿ ಎಲ್ಲವೂ ಇಂದಿನ ರಾಜಕಾರಣ ದಲ್ಲಿ ಸಹಜವೇ. ಅದಲ್ಲದೆ
ಹೋದರೆ ಶಾಸೀಯಂಥ ನೈತಿಕ ವ್ಯಕ್ತಿ ರಷಿಯಾದಲ್ಲಿ ಕೊಲೆಯಾಗುವಂಥ ದುರ್ಗತಿ ಭಾರತಕ್ಕೆ ಬಂದದ್ದೇಕೆ? ನಮ್ಮ ಹಲವು ನಾಯಕರ ಮರಣ ಇನ್ನೂ ನಿಗೂಢವಾಗೇ ಇದೆಯಲ್ಲವೆ? ರಾಜಧರ್ಮವೇ ಬೇರೆ. ರಾಜನೀತಿಯೇ ಬೇರೆ. ಎರಡೂ ಬಿಟ್ಟಿರಲಾರದ ಪರಿಕಲ್ಪನೆಗಳಾದರೂ ಸಾಧು ಸ್ವಭಾವದವನೊಬ್ಬ ರಾಜ ನಾಗಲಾರ. ಈ ಕಾಲಕ್ಕೆ ಮಂತ್ರಿಯಾಗಲಾರ. ಆದರೂ ಹೆಚ್ಚು ಕಾಲ
ಉಳಿಯಲಾರ, ಬದುಕಲಾರ. ಅವನು ರಾಜಕೀಯಕ್ಕೆ ನಾಲಾಯಕ್ಕೇ ಎನಿಸುತ್ತಾನೆ ಜನತೆಯ ಕಣ್ಣಲ್ಲಿ!

ಅಷ್ಟಕ್ಕೂ ಭ್ರಷ್ಟಾಚಾರ ಯಾವುದರಲ್ಲಿಲ್ಲ? ಯಾರಲ್ಲಿ ಇಲ್ಲ ಹೇಳಿ? ರಾಜಕಾರಣಿಗಳು ಮಾತ್ರ ಭಷ್ಟರೇ? ಸಮಾಜದಲ್ಲಿ ಭ್ರಷ್ಟತೆ ಯಿಲ್ಲ ಎನ್ನಲಾದೀತೆ? ಹಾಗೆ ನೋಡಿದರೆ ಸತ್ ಪರಂಪರೆಯ ರಾಜಕಾರಣ ಮೊದಲಿಂದಲೂ ನಮ್ಮಲ್ಲಿ ಕಡಿಮೆಯೇ! ಈಗ ಅಂಥ ಸ್ಥಿತಿಯಲ್ಲೂ ಭಾರತವಿಲ್ಲ. ಕೇಂದ್ರದಲ್ಲಿ ಕಳೆದ ಆರು ವರ್ಷ ಗಳಿಂದ ಯಾವುದೇ ಭ್ರಷ್ಟಾಚಾರದ ಕರಿನೆರಳು ಕಾಣುತ್ತಿಲ್ಲ. ಆ ಮಟ್ಟಿಗೆ ಕೇಂದ್ರದ ನಡೆ ಸಾರ್ವಕಾಲಿಕವಾಗಿ ಅನುಕರಣೀಯ, ಅನುಸರಣೀಯ ಎಂದರೆ ಎಲ್ಲರೂ ಒಪ್ಪಲೇಬೇಕು, ಮೆಚ್ಚಲೇಬೇಕು.

ಹಾಗಂತ ದೇಶದೆಡೆಯೂ ಅಧಿಕಾರ ರಾಜಕಾರಣವೇ ಮೈತುಂಬಿದೆಯೆಂಬುದೂ ಸತ್ಯವೇ! ಅದೊಂದು ಕಾಲವಿತ್ತು. ರಾಜಕಾರಣ ನೈತಿಕ ಕ್ಷೇತ್ರ ವಾಗಿದ್ದ ಕಾಲವದು. ರಾಜಕೀಯವೀಗ ನೈತಿಕ ಕ್ಷೇತ್ರವಾಗಿ ಉಳಿಯಲಿಲ್ಲವೋ ಅಥವಾ ನಾವೇ ಉಳಿಯಗೊಡಲಿಲ್ಲವೋ? ಚಿಂತಿಸಬೇಕಾದ ವಿಚಾರವಿದು. ಅಧಿಕಾರ ಪ್ರಾಪ್ತಿಗಾಗಿ ಯಾವ ಮಾರ್ಗವನ್ನೂ ಹಿಡಿಯುವ ಅಂದರೆ,
ಪದವಿ, ಸ್ಥಾನಮಾನಕ್ಕಾಗಿ ಲಾಭಿ, ಜಾತಿ ರಾಜಕೀಯ, ಗುಂಪುಗಾರಿಕೆ, ಬಂಡಾಯ, ಪಕ್ಷಾಂತರ, ಮತಾಂತರ, ತುಷ್ಟೀಕರಣ, ಅಪವಿತ್ರ ಮೈತ್ರಿಗಳು ಇವೇ ಇಂದು ರಾಜಕಾರಣದ ಮೌಲ್ಯಗಳಾಗಿವೆ.

ಇಂಥ ಹೊಲಸು ರಾಜಕೀಯದಿಂದಾಗಿ ಹೆಚ್ಚಿನ ಬಂಡಾಯಗಳು, ಹೋರಾಟಗಳು, ಪ್ರತಿಭಟನೆಗಳು ಹಾದಿಬಿಟ್ಟು ಮೌಲ್ಯವನ್ನು ಕಳೆದುಕೊಂಡದ್ದು ನಮ್ಮ ಕಾಲದ ದುರಂತ! ಯಾರನ್ನು ಆಕ್ಷೇಪಿಸಿ, ಆರೋಪಿಸಿ ಏನು ಪ್ರಯೋಜನ? ಎಲ್ಲರಲ್ಲೂ ಕೀಳು ಅಭಿರುಚಿಯ ರಾಜಕೀಯದ ಬುದ್ಧಿಯೇ ಇರುವಾಗ? ರಾಜಕೀಯದಲ್ಲಿ ನ್ಯಾಯವನ್ನು ಧರ್ಮವನ್ನು ನಿರೀಕ್ಷಿಸುವಂತೆಯೇ ಇಲ್ಲದ ವ್ಯವಸ್ಥೆ ಅವಸ್ಥೆಯಾಗಿ ಹುಟ್ಟಿ ಬೆಳೆದು ಹಲವು ವರ್ಷಗಳೇ ಸಂದಿವೆ.

ಯಾವ ಮಾರ್ಕ್ಸ್ ವಾದವೂ, ಲೋಹಿಯಾ ವಾದವೂ, ಜೆಪಿವಾದವೂ, ಹಿಂದುತ್ವದ ವಾದವೂ, ಸೆಕ್ಯುಲರ್ ವಾದವೂ ಇಂದಿನ ರಾಜಕಾರಣದಲ್ಲಿ ಬದುಕಲಾರದು. ಬದುಕುವುದು ಕೇವಲ ಪಕ್ಷ ರಾಜಕೀಯ, ಓಟಿಗಾಗಿ ತುಷ್ಟೀಕರಣ ಮತ್ತು ನೀತಿಗೆಟ್ಟ ಅಧಿಕಾರ ದುರಾಸೆಯ ವಿಕೃತ ಆಕೃತಿಗಳೇ! ಅಧಿಕಾರ ಪ್ರಾಪ್ತಿಗಾಗಿ ಪಕ್ಷದೊಳಗೇ ಇದ್ದುಕೊಂಡು ಬಂಡಾಯ ಏಳುವುದು, ಒಡಕಿನ
ದನಿಯೇರಿಸುವುದು, ಪಕ್ಷಾಂತರ ಮಾಡುವ, ಪಕ್ಷ ಬಿಡುವ ಧಮಕಿಯ ಕುಯುಕ್ತ ಬುದ್ಧಿಯ ಹೇಳಿಕೆ, ಹೈಕಮಾಂಡಿಗೆ ಸೆಡ್ಡು ಹೊಡೆಯುವುದು, ಗುಂಪುಗಾರಿಕೆ ಇವೆಲ್ಲ ನೀತಿಗೆಟ್ಟವರ ರಾಜಕೀಯ ಮೌಲ್ಯಗಳು.

ಸಂಸ್ಕೃತಿಹೀನರು, ಸಂಸ್ಕಾರಹೀನರು ರಾಜಕೀಯವನ್ನು ಸೇರಿ ಸಮಷ್ಟಿಯ ಹಿತವನ್ನು ಸ್ವಾರ್ಥಕ್ಕಾಗಿ ಕುಲಗೆಡಿಸುವ ಕಾಯಕಕ್ಕೆ ನಿತ್ಯವೂ ಶ್ರಮಿಸುತ್ತಾರೆ. ಇಂಥವರ ಮಧ್ಯೆ ಯಡಿಯೂರಪ್ಪ ಮಾತ್ರ ಭ್ರಷ್ಟಾಚಾರವನ್ನು ಮಾಡಿದವರೆಂದು ಬೊಟ್ಟು ಮಾಡುವುದು ಎಷ್ಟು ಉಚಿತವೆನಿಸುತ್ತದೆ? ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಕೊರಳುಬ್ಬಿಸಿ ಹೇಳುವಲ್ಲಿ ಯಡಿಯೂರಪ್ಪ ಮಾತ್ರ ಭ್ರಷ್ಟಾಚಾರಿಯೆಂದೂ, ಇತರರು ಭ್ರಷ್ಟಾಚಾರಿಗಳಲ್ಲವೆಂದೂ, ಅವರೆಲ್ಲ ಭ್ರಷ್ಟಾಚಾರ ಮಾಡಿಲ್ಲವೆಂದು ಸಾಬೀತಾ ಗುವುದಿಲ್ಲ. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ ದಿನದಿಂದಲೂ ಅವರನ್ನು ಕೆಳಗಿಳಿಸುವ ಮಾತೂ ಹಿಂದೆಯೂ
ಇತ್ತು, ಈಗಂತೂ ಮಿತಿಮೀರಿದೆ.

ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಈ ವಿಚಾರದಲ್ಲಿ ಭವಿಷ್ಯವನ್ನು ಹೇಳಿ ದೊಡ್ಡತನವನ್ನೂ, ದಡ್ಡತನವನ್ನೂ ಮೆರೆದಿದ್ಧಾರೆ. ಯತ್ನಾಳರಂತೂ ಮಕರ ಸಂಕ್ರಾತಿಗೆ ಸಿಎಂ ಬದಲಾವಣೆ ಯೆಂದಿದ್ದರು. ಈಗ ಯುಗಾದಿಗೆ ಅಂತ ಭವಿಷ್ಯ
ನುಡಿದಿದ್ಧಾರೆ. ಮುಹೂರ್ತ ಬದಲಾಗುತ್ತಲೇ ಇದೆ. ಪ್ರತಿಸಲದ ಬದಲಾವಣೆಯಲ್ಲೂ ಯಡಿಯೂರಪ್ಪ ಮತ್ತಷ್ಟು ಗಟ್ಟಿ ಯಾಗುತ್ತಲೇ ಹೋಗುತ್ತಿದ್ಧಾರೆ. ಯಾರು ಯಾವ ಮಟ್ಟದ ಲಾಬಿಯನ್ನು ಹೊಂದಿದ್ದರೂ ಯಡಿಯೂರಪ್ಪನವರನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಸಾಧ್ಯವಿಲ್ಲ.

ಯಾಕೆಂದರೆ ಯೂರಪ್ಪನವರಷ್ಟು  ರಾಜಕೀಯ ಮತ್ತು ರಾಜಕೀಯೇತರ ವಲಯದಲ್ಲಿ ಆರೋಪ, ಆಕ್ಷೇಪ, ವಿಮರ್ಶೆಗೊಳ ಪಟ್ಟವರು ಬೇರೆ ಯಾರೂ ಇಲ್ಲವೇನೋ! ಆದರೆ ಮೂರೂ ಪಕ್ಷಗಳ ನಾಯಕರನ್ನು ಅವಲೋಕಿಸಿದರೆ ಯಡಿಯೂರಪ್ಪ ನವರು ಕರ್ನಾಟಕದ ರಾಜಕಾರಣದಲ್ಲಿ ದೊಡ್ದ ಮಟ್ಟದ ಮಾಸ್ ಲೀಡರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಅವರಷ್ಟು ತಾಳ್ಮೆಯೂ ಉಳಿದವರಲ್ಲಿ ಕಾಣಿಸುವುದಿಲ್ಲ.

ಎಂಥಾ ಪರಿಸ್ಥಿತಿಯಲ್ಲೂ ಅವರು ತಾಳ್ಮೆಗೆಟ್ಟವರಲ್ಲ. ಅವರು ಅಧಿಕಾರ ಹಿಡಿದಾಗಲೆಲ್ಲ ಪ್ರಕೃತಿ ಮುನಿಸಿದೆ. ಬಂಡಾಯ ಎದ್ದಿದೆ. ನೆಲ, ಜಲ, ಭಾಷೆಯ ಗಲಾಟೆಗಳು ನಡೆದಿವೆ. ಎಲ್ಲವನ್ನೂ ಅವರು ಸಹನೆಯಿಂದ ಎದುರಿಸಿದ್ಧಾರೆ. ಕಾದುನೋಡುವ ತಪಸ್ಸು ಅವರಲ್ಲಿ ಢಾಳಾಗಿದೆ. ಆದ್ದರಿಂದ ಯಡಿಯೂರಪ್ಪನವರಿಗೆ ಪರ್ಯಾಯ ಯಾರೆಂಬುದನ್ನು ಬಿಜೆಪಿಯ ಹೈಕಮಾಂಡಿಗೆ ಬಿಡಿ ರಾಜ್ಯ ಬಿಜೆಪಿಗೂ ಸಾಧ್ಯವಿಲ್ಲವಾಗಿದೆ. ಬಿಜೆಪಿ ಮತದಾರರಿಗೂ ಇದು ಉತ್ತರವಿಲ್ಲದ ಪ್ರಶ್ನೆ!

ನಾಳೆಯ ದಿನ ಯಡಿಯೂರಪ್ಪನವರು ರಾಜಕೀಯ ಸಂನ್ಯಾಸವನ್ನೋ (ಹಾಗೆ ಆಗಲು ಸಾಧ್ಯವಿಲ್ಲ), ನಿವೃತ್ತಿಯನ್ನೋ ತೆಗೆದು ಕೊಂಡರೆ ಬದಲಿ ನಾಯಕನಾಗಿ ಬಂದವ ಅವರ ಸ್ಥಾನವನ್ನು ತುಂಬಬಹುದೇ ಹೊರತು ಯಡಿಯೂರಪ್ಪ ತುಂಬಿದ ವರ್ಚಸ್ಸನ್ನು ತುಂಬಲಾರ. ಒತ್ತಾಯದ ಮೂಲಕ ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದೇ ಆದರೆ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿ ಕಾಂಗ್ರೆಸ್ಸು ಅನುಭವಿಸಿದ ಪಾಡನ್ನು ಭವಿಷ್ಯದಲ್ಲಿ ಬಿಜೆಪಿ ಅನುಭವಿಸಬೇಕಾದೀತು!

ಸ್ವಯಂ ಶಕ್ತಿಯಿಂದ ಬಿಜೆಪಿಯ ಇಮೇಜನ್ನು ಹೆಚ್ಚಿಸಿಕೊಂಡ ಯಡಿಯೂರಪ್ಪನವರ ಒಪ್ಪಿಗೆಯಿಲ್ಲದೆ ಯಾವ ನಾಯಕನೂ ಯಡಿಯೂರಪ್ಪನವರ ಪರ್ಯಾಯವಾಗಲು ಸಾಧ್ಯವೇ ಇಲ್ಲ ಎಂಬುದು ಕೇಂದ್ರಕ್ಕೂ, ರಾಜ್ಯ ಬಿಜೆಪಿಯ ಅತಿರಥರಿಗೂ ಅರ್ಥ ವಾಗಿದೆ. ಯಡಿಯೂರಪ್ಪನವರ ಬೆಂಬಲದಿಂದಲೇ ಅವರ ಉತ್ತರಾಧಿಕಾರಿಯಾಗುವ ಮಹತ್ವಾಕಾಂಕ್ಷೆಯ ಬಾಲಬಡುಕರು ಈಗೀಗ ಬಿಜೆಪಿಯಲ್ಲಿ ಹೆಚ್ಚುತ್ತಿದ್ಧಾರೆ. ಇನ್ನು ಕೆಲವರು ಯಡಿಯೂರಪ್ಪನವರನ್ನು ಕೆಳಗಿಳಿಸಲು ಯಾವುದಾದರೂ ಹಗರಣದಲ್ಲಿ ಅವರು ಸಿಲುಕಲಿ ಎಂದು ಕೆಲವರು ಕಾಯುತ್ತಿದ್ಧಾರೆ.

ಅದಕ್ಕಾಗಿ ಆಶಿಸುತ್ತಿದ್ಧಾರೆ. ಇಂಥ ಸಂದರ್ಭಗಳು ಧುತ್ ಎಂದು ಎದುರಾದಾಗಲೆಲ್ಲ ಯಡಿಯೂರಪ್ಪನವರನ್ನು ಕಾಪಾಡಿದ ಘಟನೆಗಳು ರಾಜ್ಯ ರಾಜಕಾರಣದಲ್ಲಿ ನಡೆದುಹೋಗಿವೆ. ದಶಕಗಳಷ್ಟು ಕಾಲ ಹಗಲು ರಾತ್ರಿಯಿಡೀ ರಾಜಕೀಯದ ಜೀವನ ಸವೆಸಿದ ಯಡಿಯೂರಪ್ಪನವರನ್ನು ಇಂಥ ಬೆಳವಣಿಗೆಗಳು ಏನನ್ನೂ ಮಾಡಲಾರವು.

ನೆನಪಿಸಿಕೊಳ್ಳಿ: ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ ಯಡಿಯೂರಪ್ಪ ಬಿಜೆಪಿಯನ್ನು ಬಿಟ್ಟಿದ್ದೇ ಅಲ್ಲವೆ? ಕಾಂಗ್ರೆಸ್ಸು ಅಧಿಕಾರಕ್ಕೆ ಬರುವಂತಾಗಲೂ, ಜೆಡಿಎಸ್ಸು ಅಧಿಕಾರ ಪಡೆಯುವಂತಾಗಲೂ ಯಡಿಯೂರಪ್ಪ ಬೇಕೇ ಬೇಕು. ಯಡಿಯೂರಪ್ಪನವರ ರಾಜಕೀಯ ನಡೆಯ ಮೇಲೆಯೇ ಈ ಎರಡೂ ಪಕ್ಷಗಳ ಅಸ್ತಿತ್ವವಿದೆ.
ಈ ಹಿನ್ನೆಲೆಯ ಈಗ ಕುಮಾರಸ್ವಾಮಿಯವರು ಯಡಿಯೂರಪ್ಪನವರನ್ನು ಬೆಂಬಲಿಸಿದ್ದು. ಯಡಿಯೂರಪ್ಪ ಬಿಜೆಪಿಯಲ್ಲಿ ಇರುವಷ್ಟು ದಿನ ತಮ್ಮ ಪಕ್ಷ ಲಿಂಗಾಯತ ಓಟನ್ನು ಪಡೆಯುವುದು ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್ಸಿಗೆ ಎಂದೋ ಮನವರಿಕೆಯಾಗಿದೆ.

ಒಂದು ಕಾಲದಲ್ಲಿ ತಾನು ಹೊಂದಿದ್ದ ಪ್ರಭೆಯನ್ನು ಈಗ ರಾಜ್ಯ ರಾಜಕಾರಣದಲ್ಲಿ ಅದು ಹೊಂದಿಲ್ಲ. ಅಧಿಕಾರ ರಾಜಕೀಯ ಮಾಡುವ ಪಕ್ಷವಾದ ಜೆಡಿಎಸ್ ಅಧಿಕಾರಕ್ಕಾಗಿ ಕಾಂಗ್ರೆಸ್ಸಿನ ಬಾಲವನ್ನೋ, ಬಿಜೆಪಿಯ ಬಾಲವನ್ನೋ ಹಿಡಿಯುತ್ತಲೇ ಇರಬೇಕು. ಹಾಗೆ ಹಿಡಿದು ಪಡೆದ ಅನುಭವದಲ್ಲಿ ಅದಕ್ಕೆ ಯಡಿಯೂರಪ್ಪನವರೇ ಹಿತವೆಂದು ಅನಿಸಿದೆ. ಸಿದ್ರಾಮಯ್ಯ ಮತ್ತು ಡಿಕೆಶಿ ಬಣ ರಾಜಕೀಯದಿಂದ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ಅಂಥಾ ಪರಿಯಲ್ಲಿ ಜನಬೆಂಬಲ ಕಾಣುವುದಿಲ್ಲ.

ಬಿಜೆಪಿಗಂತೂ ಯಡಿಯೂರಪ್ಪನವರೇ ದೊಡ್ಡ ಶಕ್ತಿ. ಯಾವುದನ್ನೂ ಎದುರಿಸುವಾಗಲೂ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಾದ ಅಗತ್ಯವಷ್ಟೇ ಅಲ್ಲ, ಸಹಜವೂ ಆದ ಅಗತ್ಯವಾಗಿದೆ. ಆದ್ದರಿಂದ ಕಾಂಗ್ರೆಸ್ಸಿಗಿಂತ ಜೆಡಿಎಸ್, ಜೆಡಿಎಸ್ಸಿಗಿಂತ ಬಿಜೆಪಿ, ಬಿಜೆಪಿಗಿಂತ ಯಡಿಯೂರಪ್ಪ ವೈಯಕ್ತಿಕವಾದ ದೊಡ್ಡ ಇಮೇಜನ್ನು ದೊಡ್ಡ ಮಟ್ಟದಲ್ಲಿ ಹೊಂದಿದವರೆಂದು ಹೇಳಿದ್ದು.

ಕೊನೆಯ ಮಾತು: ಯಡಿಯೂರಪ್ಪನವರನ್ನು ಒಬ್ಬ ರಾಜಕಾರಣಿಯಾಗಿ ನೋಡುವುದು ಮಾತ್ರ ಸಾಧ್ಯವಾಗದೇ ಇದ್ಧಾಗ ಮಾತ್ರ ಅವರು ಭಾವುಕತನದ ಸಾತ್ವಿಕತೆಯನ್ನು ಗ್ರಹಿಸಲು ಸಾಧ್ಯವಿದೆ. ದೈವಭಕ್ತಿ, ಹಿರಿಯರಲ್ಲಿ ಶ್ರದ್ಧೆ, ಶ್ರಮಗೌರವ, ಪಕ್ಷನಿಷ್ಠೆ, ಗುಣಗ್ರಾಹಿತ್ವ, ವಿಶ್ವಾಸ, ಬದ್ಧತೆ, ಭರವಸೆಯನ್ನು ಉಳಿಸಿಕೊಳ್ಳುವ ಮನೋಧರ್ಮ, ರಾಜಕೀಯಕ್ಕೆ ಬೇಕಾದ ಉದಾಸೀನ ಭಾವ, ನಂಬಿದವರನ್ನು, ನಂಬಿ ಬಂದವರನ್ನು ಬಿಟ್ಟುಕೊಡದ ಹೃದಯವಂತಿಕೆ – ಇವೆಲ್ಲ ಯಡಿಯೂರಪ್ಪನವರಲ್ಲಿ ನಾಟಕೀಯವಾಗಿ ಇಲ್ಲವೆಂಬುದನ್ನು ನಾನು ಪರಿಭಾವಿಸಿದವನು.

ಜೀವನ ಸಂಧ್ಯೆಯಲ್ಲಿರುವ ಯಡಿಯೂರಪ್ಪ ನವರಂಥ ಹಿರಿಯ ನಾಯಕನನ್ನು ಒಂದು ಮಹತ್ತ್ವದ, ಮಹತ್ತಾದ ಸಂದರ್ಭದಲ್ಲಿ ಪಕ್ಷ ನಿಯಮಾನುಸಾರವಾಗಿ ಬೀಳ್ಕೊಡುವುದರಲ್ಲಿ ತುಂಬು ಅರ್ಥವಿದೆ. ಅಲ್ಲಿಯವರೆಗೆ ಅಷ್ಟೇ ಅಲ್ಲ, ಈ ಅವಧಿಯಲ್ಲಿ ಪೂರ್ಣಾವಽ ಸಿಎಂ ಆಗಿ ಅವರೇ ಇರುವಂತೆ ಪಕ್ಷ ಅವರನ್ನು ಗೌರವದಿಂದ ಉಳಿಸಿಕೊಂಡರೆ ಬಿಜೆಪಿ ತನ್ನ ಪಕ್ಷದ ಶಿಸ್ತು, ಸಂಸ್ಕೃತಿ, ಸಿದ್ಧಾಂತಗಳನ್ನು ಜನತೆಯೆದುರು ಅಭಿವ್ಯಕ್ತಿಸಿದಂತಾಗುತ್ತದೆ.

ಮೈಯೆಲ್ಲ ಬಂಗಾರ ಕಿವಿ ಮಾತ್ರ ಹಿತ್ತಾಳೆ ಎಂಬ ಮಾತು ರಾಜಕೀಯದಲ್ಲಿ ಯಡಿಯೂರಪ್ಪನವರಿಗೆ ಅನ್ವಯಿಸಿ ಹೇಳುವ ಮಾತೊಂದಿದೆ. ಅವರಿಗೇ ಮಾತ್ರವಲ್ಲ, ಅಧಿಕಾರದಲ್ಲಿರುವ ಎಲ್ಲರಿಗೂ ಈ ಮಾತು ಅನ್ವಯಿಸಬಹುದಾದದ್ದು. ಸ್ವಜನ ಪಕ್ಷಪಾತ,
ಪುತ್ರ ವ್ಯಾಮೋಹದಂಥ ಮನುಷ್ಯ ಸಹಜ ದೌರ್ಬಲ್ಯಗಳಿಂದ ಹೊರಬಂದು ಯಡಿಯೂರಪ್ಪನವರು ಉಳಿದ ಅವಧಿಯಲ್ಲಿ
ಸ್ವಚ್ಚಂದ ಮೇಲ್ಪಂಕ್ತಿಯ ಅಧಿಕಾರ ನಡೆಸಿದ್ದೇ ಆದರೆ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಅವರ ಹೆಸರು ಅಚ್ಚಳಿಯದೇ ಪ್ರಾತಃ
ಸ್ಮರಣೀಯವಾಗಿ ಉಳಿದೀತು! ಇಲ್ಲದಿದ್ದಲ್ಲೂ ಉಳಿದೀತು!