Sunday, 13th October 2024

ಕಾಂಗ್ರೆಸ್‌ಗೆ ಲೀಡರ್‌ಗಳು ಬೇಕಾಗಿದ್ದಾರೆ

ಪ್ರಸ್ತುತ

ಮಾರುತೀಶ್ ಅಗ್ರಾರ

maruthishagrara@gmail.com

1947 ನಂತರ ದಶಕಗಳ ಕಾಲ ದೇಶದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ಗೆ ಈಗ ನಾಯಕತ್ವದ ಕೊರತೆ ಕಾಡುತ್ತಿದೆ. ಮಹಾತ್ಮ ಗಾಂಧಿ, ನೆಹರು, ಸರ್ದಾರ್ ಪಟೇಲ್, ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಎಂಥೆಂಥಾ ಮಹಾ ನಾಯಕ ರನ್ನು ಕಾಂಗ್ರೆಸ್ ಕಂಡಿದೆ. ಇಂಥ ಘಟಾನುಘಟಿ ನಾಯಕರು ಪ್ರತಿನಿಧಿಸಿದ್ದ ಪಕ್ಷ ಹಾಗೂ ದೇಶಕ್ಕೆ ಸ್ವಾತಂತ್ಯ ತಂದುಕೊಟ್ಟಿದ್ದೇ ನಾವು ಎಂದು ಬಡಾಯಿ ಕೊಚ್ಚಿಕೊಳ್ಳುವ ಈಗೀನ ಕಾಂಗ್ರೆಸ್ ಇಂದು ಅಧೋಗತಿಗೆ ಇಳಿದಿರುವುದು ದೌರ್ಭಾಗ್ಯವೇ ಸರಿ.

ವಿಪರ್ಯಾಸವೆಂದರೆ ಕಳೆದ ಕೆಲ ವರ್ಷಗಳಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೂ ಕಾಂಗ್ರೆಸ್ ಒದ್ದಾಡು ತ್ತಿದೆ. ಸೋನಿಯಾ ಮೈನೋ ನಿವಾಸದಲ್ಲಿ ಸಭೆ ಮೇಲೆ ಸಭೆಗಳು ನಡೆದಿವೆ. ಅಷ್ಟಾಗ್ಯೂ ಅಧ್ಯಕ್ಷ ಸ್ಥಾನದ ಇತ್ಯರ್ಥ ವಾಗಿಲ್ಲ. ಕುಟುಂಬೇತರ ವ್ಯಕ್ತಿಗಳನ್ನು ತಂದು ಅಧ್ಯಕ್ಷ ಸ್ಥಾನದಂತಹ ದೊಡ್ಡ ಹುದ್ದೆಯಲ್ಲಿ ಕೂರಿಸುವುದು ಸೋನಿಯಾಗೆ ಸುತರಾಂ ಇಷ್ಟವಿಲ್ಲ. ಯಾಕೆಂದರೆ ಪಕ್ಷದ ಹಿಡಿತ ಎಲ್ಲಿ ತಮ್ಮಿಂದ ಜಾರಿ ಹೋಗುತ್ತದೆ ಎನ್ನುವ ಭಯ ಅವರನ್ನು ಹಾಗೂ ಅವರ ಬಾಲಂಗೋಚಿ ನಾಯಕರನ್ನು ಕಾಡುತ್ತಿದೆ.

ಹೋಗಲಿ ಕುಟುಂಬದ ವ್ಯಕ್ತಿಯನ್ನೇ ಮತ್ತೊಮ್ಮೆ ಆ ಜಾಗದಲ್ಲಿ ಕೂರಿಸೋಣವೆಂದರೆ ಮಿಸ್ಟರ್ ಬೀನ್(ಜನರೇ ಹೇಳುತ್ತಿರು ವುದು)ತರಹ ಇರುವ ರಾಹುಲ್ ಅಧ್ಯಕ್ಷರಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಈ ಹಿಂದೆ ರಾಹುಲ್ ಅಧ್ಯಕ್ಷರಾಗಿ ಪಕ್ಷವನ್ನು ಮೋದಿ ಎದುರು ಗೆಲ್ಲಿಸಲಾಗದೆ ಅವಮಾನ ಅನುಭವಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಈಗ ಸಂಕಷ್ಟದಲ್ಲಿ ಸಿಲುಕಿ ಕೊಂಡಿದೆ. ಇಷ್ಟಕ್ಕೆಲ್ಲ ಕಾರಣ, ಕಾಂಗ್ರೆಸ್ ಅಸಹ್ಯ ಎನಿಸುವಷ್ಟು ಕುಟುಂಬ ರಾಜಕಾರಣಕ್ಕೆ ಒತ್ತುಕೊಟ್ಟಿದ್ದು.

ಇವತ್ತಿನ ಕಾಂಗ್ರೆಸ್‌ನ ಈ ದುಸ್ಥಿತಿಗೆ ಒಂದರ್ಥದಲ್ಲಿ ಗಾಂಽಜಿಯೂ ಕಾರಣಕರ್ತರೇ ಆಗಿದ್ದಾರೆ ಎಂದರೆ ತಪ್ಪಲ್ಲ! ಏಕೆಂದರೆ ಎಲ್ಲಾ ವಿಚಾರದಲ್ಲೂ ಜವಾಹರಲಾಲ್ ನೆಹರು ಅವರಿಗಿಂತ ಬುದ್ಧಿಮತ್ತೆ ಹೊಂದಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಂಥ ನಾಯಕರನ್ನು ಬದಿಗೆ ತಳ್ಳಿ ನೆಹರೂ ಕೈಗೆ ದೇಶದ ಚುಕ್ಕಾಣಿ ಕೊಟ್ಟ ಗಾಂಧೀಜಿ, ನೆಹರೂ ಅವರ ಮನಸ್ಥಿತಿಯನ್ನು ಅರ್ಥ ಮಾಡಿ ಕೊಳ್ಳುವುದರಲ್ಲಿ ಸೋತು ಬಿಟ್ಟರು.

ನೆಹರೂ ಪ್ರಧಾನಮಂತ್ರಿಯಾಗಿ ಪ್ರವರ್ಧಮಾನಕ್ಕೆ ಬಂದ ನಂತರ ಮೊದಲು ಮಾಡಿದ್ದೇ ಜನಮಾನಸಕ್ಕೆ ಹತ್ತಿರವಾಗಿದ್ದಂತಹ ನಾಯಕರನ್ನು ತಮ್ಮ ಆಪ್ತ ವಲಯದಿಂದ ದೂರ ಮಾಡಿ ಶೇಕ್ ಅಬ್ದು ಅವರಂಥ ಬಕೇಟು ಹಿಡಿಯುವ ರಾಜಕಾರಣಿಗಳನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಜೊತೆಗೆ ತಮ್ಮನ್ನು ಬಿಟ್ಟು ಬೇರೆಯವರು ಬೆಳೆಯದಂತೆಯೂ ನೋಡಿಕೊಂಡರು. ಪರಿಣಾಮ ನೆಹರೂ ಅವರ ಸಾವಿನ ನಂತರ ಸಮರ್ಥ ನಾಯಕರಿದ್ದರೂ ಕಾಂಗ್ರೆಸ್‌ನ ಮುಂದಿನ ಉತ್ತರಾಧಿಕಾರಿಯಾಗಿ ಇಂದಿರಾ
ಅವರು ರಾಷ್ಟ್ರ ರಾಜಕಾರಣಕ್ಕೆ ಬರಬೇಕಾಯಿತು.

ಇದಕ್ಕಾಗಿ ನೆಹರೂರವರು ತಮ್ಮ ಸಾವಿಗೂ ಮುಂಚೆಯೇ ತಮ್ಮ ಬಾಲಂಗೋಚಿಗಳನ್ನು ರೆಡಿ ಮಾಡಿದ್ದರು. ದುರ್ದೈವವೆಂದರೆ
ಆ ಕಾಲಘಟ್ಟದಲ್ಲಿ ಲಾಲ್ ಬಹಾದ್ದೂರ್ ಶಾಸಿ, ಗುಜರಿ ಲಾಲ್ ನಂದಾ ಅವರಂಥ ನಾಯಕರು ಕಾಂಗ್ರೆಸ್‌ನ ಹರಕೆಯ ಕುರಿ ಯಾದರು. ತದನಂತರ ಇಂದಿರಾಗಾಂಧಿ ಅವರಿಂದ ಆರಂಭವಾದ ಕಾಂಗ್ರೆಸ್ಸಿನ ಗಾಂಧಿ ಕುಟುಂಬ ರಾಜಕಾರಣ ಇಲ್ಲಿಯ ವರೆಗೂ ಆ ಕುಟುಂಬದ ಕೈಯಲ್ಲೇ ಇದೆ. ದುರ್ದೈವವೆಂದರೆ ಕಾಂಗ್ರೆಸ್ ಹೈಕಮಾಂಡ್ ಕುಟುಂಬೇತರ ಕಾಂಗ್ರೆಸ್ ಕಾರ್ಯಕರ್ತರನ್ನು ಲೀಡರ್‌ಗಳಾಗಿ ಬೆಳೆಸಲೇ ಇಲ್ಲ. ಪರಿಣಾಮ ರಾಷ್ಟ್ರ ಮಟ್ಟದಲ್ಲಿ ಗಾಂಧಿ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾವ
ಕಾಂಗ್ರೆಸ್ ನಾಯಕನೂ ಗಾಂಧಿ ಕುಟುಂಬೇತರ ವ್ಯಕ್ತಿಯಾಗಿ ಪಕ್ಷದಲ್ಲಿ ಜನಪ್ರಿಯತೆ ಪಡೆಯಲಿಲ್ಲ.

ಇತ್ತೀಚಿಗೆ ಪಂಚರಾಜ್ಯಗಳ ಸೋಲಿನ ನಂತರ ಸೋನಿಯಾ ನೇತೃತ್ವದಲ್ಲಿ ಸಭೆ ಸೇರಿದ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ
ಸೋನಿಯಾ ಮೈನೋ ಅವರು ಹೇಳಿದ್ದು, ‘ನಾಯಕತ್ವದ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಇನ್ನೂ ಮೂರು ತಿಂಗಳು ಕಾಯಬೇಕು’ ಎನ್ನುವ ಮೂಲಕ ಮತ್ತೊಮ್ಮೆ ಉತ್ತಮ ಅಧ್ಯಕ್ಷನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಕಥೆ ಇಂದು ನಿನ್ನೆಯದಲ್ಲ. ಕಳೆದ ಕೆಲ ವರ್ಷಗಳಿಂದಲೂ ಕಾಂಗ್ರೆಸ್ ಇದೇ ವರಸೆಯನ್ನು ತಾಳುತ್ತಿದೆ.

ಕಾಂಗ್ರೆಸ್ ಹೈಕಮಾಂಡ್‌ನ ಈ ನಡೆ ಅನೇಕ ಹಿರಿಯ ಕಾಂಗ್ರೆಸ್ ನಾಯಕರಿಗೆ ಕೋಪ ತರಿಸಿದೆ. ಇದರ ಜೊತೆಗೆ ಸತತ ಸೋಲು ಗಳಿಂದ ಈಗಾಗಲೇ ಪಕ್ಷ ಜರ್ಜರಿತವಾಗಿದೆ. ಇದರಿಂದಾಗಿ ಬಸವಳಿದಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರು ಈಗಾಗಲೇ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿzರೆ. ಸೋನಿಯಾ ಹಾಗೂ ರಾಹುಲ್ ಗಾಂಧಿ ಆಪ್ತರೂ, ಕಾಂಗ್ರೆಸ್ಸಿನ ಸಂಸದರೂ ಆಗಿರುವ ಶಶಿ ತರೂರ್ ಥರದವರು ಕೂಡ ಪಕ್ಷದ ನಾಯಕತ್ವದ ವಿರುದ್ಧ ಈಗ ಪ್ರಶ್ನೆ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ ಜಿ-23 ನಾಯಕರಿಗೆ ರಾಹುಲ್ ನಾಯಕತ್ವದ ಮೇಲೆ ವಿಶ್ವಾಸವಿಲ್ಲ ಹಾಗೂ ರಾಹುಲ್ ಮುಂದಿನ ದಿನಗಳದರೂ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂಬ ನಂಬಿಕೆಯೂ ಜಿ-23 ನಾಯಕರಿಗಿಲ್ಲ. ಹಾಗಾಗಿ ಅವರು ಕಾಂಗ್ರೆಸ್ ನಲ್ಲಿ ನೆಹರೂ
ಕುಟುಂಬೇತರ ನಾಯಕತ್ವಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಹೊಸ ತಲೆಮಾರಿನ ಕಾಂಗ್ರೆಸ್ ನಾಯಕರಿಗೆ ಹಾಗೂ ಇನ್ನು ಕೆಲವು ಹಿರಿಯ ನಾಯಕರಿಗೆ ಪಕ್ಷ ನಾಮಾವಶೇಷವಾದರೂ ಸರಿಯೇ ಗಾಂಧಿ ಕುಟುಂಬದ ಕೈಯ ಪಕ್ಷದ ಅಧಿಕಾರವಿರಬೇಕೆಂಬ ಗುಲಾಮಿ ಮಾನಸಿಕತೆ ಇನ್ನು ಹಾಗೆಯೇ ಇದೆ.

ಹಾಗಾಗಿ ಅವರಿಗೆ ಕುಟುಂಬದ ಸದಸ್ಯರೇ ಅಧ್ಯಕ್ಷರಾಗಿರಬೇಕು. ಪ್ರಸ್ತುತ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ನೋಡುವುದಾದರೆ ಈಗ ಕಾಂಗ್ರೆಸ್ ಪಕ್ಷ ಅಕ್ಷರಶಃ ಐಸಿಯುನಲ್ಲಿದೆ. ಸದ್ಯಕ್ಕೆ ದೇಶದಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರದಲ್ಲಿರುವುದು ಎರಡೇ ರಾಜ್ಯಗಳಲ್ಲಿ. ಒಂದು ರಾಜಸ್ಥಾನ. ಮತ್ತೊಂದು ಛತ್ತೀಸ್‌ಗಢ. ಪಂಜಾಬಿನಲ್ಲಿ ಅಧಿಕಾರದಲ್ಲಿ ದ್ದುಕೊಂಡೇ ಚುನಾವಣೆಗೆ ಹೋದ ಕಾಂಗ್ರೆಸ್ ತಮ್ಮ ಪಕ್ಷದ ನಾಯಕರ ಆಂತರಿಕ ಕಚ್ಚಾಟದಿಂದಲೇ ಕೈಯಲ್ಲಿದ್ದ ರಾಜ್ಯವನ್ನು ಬಿಟ್ಟು ಕೊಡಬೇಕಾಯಿತು. ಕಳೆದ ಏಳೆಂಟು ವರ್ಷಗಳಿಂದ ಕಾಂಗ್ರೆಸ್ ಚುನಾವಣೆ ಮೇಲೆ ಚುನಾವಣೆಗಳನ್ನು ಸೋಲುತ್ತ ಬಂದಿದೆ.

ಪ್ರತಿಬಾರಿ ಪಕ್ಷ ಸೋಲುಂಡ ಬಳಿಕ ಎಲ್ಲರೂ ಪಕ್ಷದ ನಾಯಕತ್ವದ ಬಗ್ಗೆ ದನಿ ಎತ್ತುತ್ತಾರೆಯೇ ವಿನ ಅದಕ್ಕೆ ಪರಿಹಾರ ಕಂಡು ಕೊಂಡು ಮುನ್ನುಗ್ಗುವ ಪ್ರವೃತ್ತಿಯನ್ನು ಕಾಂಗ್ರೆಸ್ ಇವತ್ತಿನವರೆಗೂ ಬೆಳೆಸಿಕೊಂಡಿಲ್ಲ. ನರೇಂದ್ರ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷದ ವರ್ಚಸ್ಸು ಮತ್ತು ಆ ಪಕ್ಷದ ನಾಯಕರ ಇಮೇಜ್ ಗಣನೀಯವಾಗಿ ಕುಗ್ಗಿದೆ. ರಾಹುಲ್ ಅವರನ್ನು
ಮೋದಿಗೆ ಸರಿಸಮನಾಗಿ ನಿಲ್ಲಿಸುವ ಹಾಗೂ ಕಾಂಗ್ರೆಸ್‌ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಮೋದಿಯವರ ಟ್ರಾನ್ಸ್ಪರೆಂಟ್ ರಾಜಕಾರಣದ ಮುಂದೆ ಡಲ್ ಹೊಡೆದರು.

ರಾಹುಲ್ ಗಾಂಧಿ ದೇಶದ ಜನರ ಮುಂದೆ ಮೋದಿಯನ್ನು ಎಷ್ಟೇ ಕಟುವಾಗಿ ಟೀಕಿಸಿದರೂ ಜನರು ಮಾತ್ರ ಮೋದಿಯನ್ನು ನಂಬಿಯೇ ಇದ್ದಾರೆ. ಒಂದಲ್ಲ ಎರಡೆರಡು(2014 ಮತ್ತು 2019)ಬಾರಿ ಮೋದಿ ವಿರುದ್ಧ ಸಮರಕ್ಕೆ ನಿಂತ ರಾಹುಲ್ ನಾಯಕತ್ವ
ತೀರಾ ಹೀನಾಯವಾಗಿ ನೆಲಕಚ್ಚಿತು. ಇತ್ತ ಮೋದಿಯ ಜನಪರ ಆಡಳಿತ, ಅಭಿವೃದ್ಧಿ ಕೆಲಸಗಳು ಹಾಗೂ ಅವರ ದೇಶಪ್ರೇಮ ಇಡೀ ದೇಶದ ಜನರ ಹೃದಯವನ್ನು ಗೆದ್ದು ಬಿಟ್ಟಿದೆ. ಈಗ ಕಾಂಗ್ರೆಸ್ ಎಷ್ಟೇ ತಿಣುಕಾಡಿದರೂ ಮೋದಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ಸಿನಲ್ಲಿ ಮೋದಿಗೆ ಸರಿಯಾಗಿ ಟಕ್ಕರ್ ಕೊಡುವ ಗಟ್ಟಿ ನಾಯಕತ್ವದ ಕೊರತೆ ಇದೆ.

ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೂಲಕ ಪ್ರಿಯಾಂಕಾ ವಾಡ್ರಾ ಅವರನ್ನು ಭವಿಷ್ಯದ ನಾಯಕಿಯಾಗಿ ಪ್ರಮೋಟ್ ಮಾಡುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಯಿತಾದರೂ ಅದು ಫಲ ಕೊಡಲಿಲ್ಲ. ಅಷ್ಟಕ್ಕೂ ಪ್ರಿಯಾಂಕಾಗೆ ನೆಹರೂ ಮುತ್ತಜ್ಜ, ಇಂದಿರಾ ಪ್ರಿಯದರ್ಶಿನಿ ಅವರ ಮೊಮ್ಮಗಳು, ರಾಜೀವ್-ಸೋನಿಯಾ ಮಗಳು ಎನ್ನುವ ಹಣೆಪಟ್ಟಿ ಬಿಟ್ಟರೆ ತಳಮಟ್ಟದ ರಾಜಕೀಯದ ಗಂಧಗಾಳಿಯೂ ಗೊತ್ತಿಲ್ಲ. ಆಕೆ ಇವತ್ತಿನವರೆಗೂ ಯಾವೊಂದು ಚುನಾವಣೆಯಲ್ಲೂ ಸ್ಪರ್ಧಿಸಿಲ್ಲ.

ಮನೆಯಲ್ಲಿ ಮಕ್ಕಳು ಸಂಸಾರ ಅಂತ ಹಾಯಾಗಿದ್ದ ಪ್ರಿಯಾಂಕರನ್ನ ಅಽಕೃತವಾಗಿ ರಾಜಕೀಯ ಮುನ್ನೆಲೆಗೆ ತಂದಿದ್ದೇ 2019ರ ನಂತರ. ಅಷ್ಟೋತ್ತಿಗಾಗಲೇ ರಾಹುಲ್ ತನ್ನ ಮೇಲೆ ಚುನಾವಣಾ ಸೋಲುಗಳ ಸರಮಾಲೆಯನ್ನೇ ಹೊದ್ದುಕೊಂಡು ಹೈರಾಣಾಗಿ ಹೋಗಿದ್ದರು. ಇಂಥ ಸಮಯದಲ್ಲಿ ಪ್ರಿಯಾಂಕಾ ಪಕ್ಷಕ್ಕೆ ಆಕ್ಸಿಜನ್ ಆಗಬಲ್ಲರು ಎಂದೇ ಎಲ್ಲರೂ ಭಾವಿಸಿದ್ದರು. ಯಾಕೆ ಗೊತ್ತಾ? ಅನೇಕ ಕಾಂಗ್ರೆಸ್ ನಾಯಕರು ಆಕೆಯನ್ನು ಅವರ ಅಜ್ಜಿ ಇಂದಿರಾ ಪ್ರಿಯದರ್ಶಿನಿ ಅವರ ಪ್ರತಿರೂಪವೆಂದೇ ಹೇಳಿ ರಾಜಕಾರಣಕ್ಕೆ ಕರೆತಂದರು.

ಆದರೆ ಆಕೆಯ ಮೇಲೆ ಕಾಂಗ್ರೆಸ್ ನಾಯಕರು ಇಟ್ಟಿದ್ದ ಭರವಸೆಯನ್ನು ಉತ್ತರಪ್ರದೇಶ ಚುನಾವಣಾ ಫಲಿತಾಂಶ ನಿರಾಸೆ ಮೂಡಿಸಿತು. ಉತ್ತರಪ್ರದೇಶ ಕಾಂಗ್ರೆಸ್‌ನ ಚುನಾವಣಾ ಜವಾಬ್ದಾರಿ ಹೊತ್ತು ಅಖಾಡಕ್ಕಿಳಿದಿದ್ದ ಪ್ರಿಯಾಂಕಾ ತಮ್ಮ ನಾಯಕತ್ವ ದಲ್ಲಿ ಗೆಲ್ಲಿಸಿದ್ದು ಎರಡು ಸೀಟುಗಳನ್ನೇ! ಸೋತಿದ್ದು ಬರೋಬ್ಬರಿ ೪೦೧ಕ್ಷೇತ್ರ! ಅಲ್ಲಿಗೆ ಪ್ರಿಯಾಂಕಾ ನಾಯಕತ್ವಕ್ಕೆ ಎಳ್ಳುನೀರು ಬಿಟ್ಟಂತಾಯಿತು.

ಇಷ್ಟೇ ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ಅನೇಕ ಯುವ ನಾಯಕರಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸರಿಯಾದ
ಸ್ಥಾನಮಾನ ಗಳನ್ನು ಕೊಡದೆ ಅವರನ್ನು ಕಡೆಗಣಿಸಿದ ಪರಿಣಾಮ ಜ್ಯೋತಿರಾದಿತ್ಯ ಸಿಂಧಿಯಾ, ಜತಿನ್ ಪ್ರಸಾದ್ ರಂತಹ ಯುವ ನಾಯಕರು ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದರು. ಈಗ ಕಾಂಗ್ರೆಸ್ ಕನ್ಹಯ್ಯಾ ಕುಮಾರ್‌ನಂತಹ ದೇಶದ್ರೋಹಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಈಗ ಮೋದಿಯವರ ರೀತಿ ಪಕ್ಷಕ್ಕೆ ಮತ ತಂದು ಕೊಡಬಲ್ಲ ನಾಯಕರಾರೂ ಕಾಂಗ್ರೆಸ್‌ನಲ್ಲಿ ಇಲ್ಲ. ಹಾಗಾಗಿ ಕಾಂಗ್ರೆಸ್ ಒಬ್ಬ ಸಮರ್ಥ ನಾಯಕನಿಗಾಗಿ ಹುಡುಕಾಡುತ್ತಿದೆ. ಆದರೆ ಅಂಥ ಸಮರ್ಥ ನಾಯಕ ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ?!