Sunday, 15th December 2024

ರಾಜ್ಯದಿಂದಲೇ ಪಾಠ ಕಲಿತ ಕರ-ಕಮಲ

ಅಶ್ವತ್ಥಕಟ್ಟೆ

ranjith.hoskere@gmail.com

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ತಪ್ಪು ಹೆಜ್ಜೆಗಳಿಂದ ಎಚ್ಚೆತ್ತ ಬಿಜೆಪಿ ವರಿಷ್ಠರು, ಪಂಚರಾಜ್ಯ ಚುನಾವಣೆ ವೇಳೆ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಿದ್ದರು. ಇದರ ಅಂಗವಾಗಿ, ‘೭೦ ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ’ ಎನ್ನುವ ಸಂಪ ದಾಯಕ್ಕೆ ಇತಿಶೀ ಹಾಡಿ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಎಂದು ತೀರ್ಮಾನಿಸಿದ್ದರು.

ಭಾರಿ ನಿರೀಕ್ಷೆಯ ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ನಿರೀಕ್ಷಿತ- ಅನಿರೀಕ್ಷಿತ ಮಿಶ್ರಣದಲ್ಲಿ ಬಂದಿರುವ ಫಲಿತಾಂಶದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಕಾರಣಗಳಿಗೆ ಖುಷಿಯಾಗಿವೆ. ದಕ್ಷಿಣ ಭಾರತದಲ್ಲಿ ತಾನು ಪ್ರಬಲ ಎನ್ನುವ ಸಂದೇಶವನ್ನು ಕಾಂಗ್ರೆಸ್ ರವಾನಿಸಿದರೆ, ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಡಿತವನ್ನು ಈಗಲೂ ಸಡಿಲಿಸಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ. ಈ ಮೂಲಕ, ಇನ್ನಾರು ತಿಂಗಳಲ್ಲಿ ಎದುರಾಗಲಿರುವ
ಲೋಕಸಭಾ ಚುನಾವಣೆಗೆ ಎರಡೂ ಪಕ್ಷಗಳು ಫಲಿತಾಂಶದ ಬೂಸ್ಟರ್‌ನೊಂದಿಗೆ ಸಿದ್ಧತೆ ಆರಂಭಿಸಿವೆ.

ಲೋಕಸಭಾ ಚುನಾವಣೆಯ ದಿಕ್ಸೂಚಿಯೆಂದೇ ಬಿಂಬಿತವಾಗಿದ್ದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಅಲೆ, ಬಿಜೆಪಿಯ ಮೋದಿ ಅಲೆ ಸೇರಿದಂತೆ ಹಲವು ವಿಷಯಗಳನ್ನು ಪರೀಕ್ಷೆಗೆ ಒಡ್ಡಲಾಗಿತ್ತು. ಬಹುತೇಕ ರಾಜ್ಯ ಗಳಲ್ಲಿದ್ದ ‘ಆಡಳಿತ ವಿರೋಧಿ’ ಅಲೆಯ ನಡುವೆ ಅಧಿಕಾರದ ಗದ್ದುಗೆ ಏರುವ ಮೂಲಕ ಮುಂದಿನ ಲೋಕಸಭೆಗೆ ‘ಭರ್ಜರಿ’ ಸಿದ್ಧತೆ ನಡೆಸಿಕೊಳ್ಳುವ ತವಕದಲ್ಲಿದ್ದ ಕಾಂಗ್ರೆಸ್‌ಗೆ ತೆಲಂಗಾಣದ ವಿಜಯ ಉತ್ಸಾಹ ಕೊಟ್ಟಿದ್ದರೆ, ಛತ್ತೀಸ್ ಗಢದಲ್ಲಿ ಅಚ್ಚರಿಯ ಸೋಲು ಆತಂಕಕ್ಕೆ ಕಾರಣವಾಗಿದೆ.

ಮುಳುಗುವರಿಗೆ ಹುಲ್ಲುಕಡ್ಡಿಯು ನೆರವಾಗುವ ರೀತಿಯಲ್ಲಿ ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ದಕ್ಷಿಣ ಭಾರತದ ೨ ಪ್ರಬಲ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಲೋಕಸಭಾ ಚುನಾವಣೆಗೆ ಮೊದಲು ನಡೆಯುವ ಪಂಚರಾಜ್ಯ ಚುನಾವಣೆಯನ್ನು ಬಹುತೇಕವಾಗಿ ಸೆಮಿಫೈನಲ್ ಎಂದೇ ಹೇಳಲಾಗಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ದಲ್ಲಿದ್ದರೆ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿತ್ತು. ಇನ್ನುಳಿದಂತೆ ತೆಲಂಗಾಣ ಹಾಗೂ ಮಿಜೋರಾಂ ನಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದವು. ಇದೀಗ ಬಿಜೆಪಿ ಮಧ್ಯಪ್ರದೇಶವನ್ನು ವಾಪಸು ತನ್ನ ತೆಕ್ಕೆಗೆ ತೆಗೆದುಕೊಳ್ಳುವು ದರೊಂದಿಗೆ, ರಾಜಸ್ಥಾನವನ್ನು ನಿರೀಕ್ಷೆಯಂತೆ ಪಡೆದುಕೊಂಡಿದೆ ಮತ್ತು ಛತ್ತೀಸ್‌ಗಢವನ್ನು ಮಾತ್ರ ಅಚ್ಚರಿಯ ರೀತಿಯಲ್ಲಿ ಗೆದ್ದುಕೊಂಡಿದೆ.

ಆದರೆ ಚುನಾವಣೆಗೆ ಮೊದಲು ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಕರ್ನಾಟಕದ ಮಾದರಿಯಲ್ಲಿಯೇ, ಪಂಚರಾಜ್ಯದಲ್ಲಿ ‘ಗ್ಯಾರಂಟಿ’ ಭರವಸೆ ನೀಡಿದ್ದ ಕಾಂಗ್ರೆಸ್‌ಗೆ ತೆಲಂಗಾಣ ಹೊರತಾಗಿ ಇನ್ನುಳಿದ ರಾಜ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ ಎನ್ನುವುದು ಸ್ಪಷ್ಟ. ಇನ್ನು ನಾಲ್ಕು ರಾಜ್ಯಗಳ ಫಲಿತಾಂಶವನ್ನು
ಸೂಕ್ಷ್ಮವಾಗಿ ಗಮನಿಸಿದರೆ, ತೆಲಂಗಾಣದ ಗೆಲುವಿಗೆ ಕರ್ನಾಟಕದ ಪಾತ್ರ ಹೆಚ್ಚಿದ್ದರೆ, ರಾಜಸ್ಥಾನದಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತವೇ ಕಾಂಗ್ರೆಸ್‌ಗೆ ಕೈಕೊಟ್ಟಿದೆ. ಇನ್ನುಳಿ ದಂತೆ ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿಯ ಗೇಮ್‌ಪ್ಲಾನ್ ಅರಿಯುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿರುವುದು ಸ್ಪಷ್ಟ.

ಪಂಚರಾಜ್ಯ ಚುನಾವಣೆಗೆ ಮೊದಲು ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಭರ್ಜರಿ ಗೆಲುವಿನಿಂದ ಕಾಂಗ್ರೆಸ್ ನಾಯಕರಿಗೆ ವಿಶ್ವಾಸ ಹೆಚ್ಚಾಗಿತ್ತು. ಅದರಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಯು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು ಎನ್ನುವ ಕಾರಣಕ್ಕೆ, ಕರ್ನಾಟಕದ ಮಾದರಿಯಲ್ಲಿಯೇ ಎಲ್ಲ ರಾಜ್ಯಗಳಲ್ಲಿಯೂ ಗ್ಯಾರಂಟಿ ಮೂಲಕವೇ ಮತದಾರರನ್ನು ಆಕರ್ಷಿಸುವ ಭರ್ಜರಿ ಗ್ಯಾರಂಟಿಗಳನ್ನು ಅದು ನೀಡಿತ್ತು. ಆದರೆ ತೆಲಂ
ಗಾಣದ ಹೊರತಾಗಿ ಮಿಕ್ಕ ಯಾವ ರಾಜ್ಯದಲ್ಲೂ ಗ್ಯಾರಂಟಿ ಗಳು ಹೇಳಿಕೊಳ್ಳುವಷ್ಟು ಜನರಿಗೆ ರೀಚ್ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಗ್ಯಾರಂಟಿ ಭರವಸೆ ವರ್ಕ್‌ಔಟ್ ಆಗಲು ಹಲವು ವಿಷಯ ಗಳಿದ್ದವು. ಇದರೊಂದಿಗೆ ಕಾಂಗ್ರೆಸ್‌ನ ಭರ್ಜರಿ ಗೆಲುವಿಗೆ ಬಿಜೆಪಿಯ ಆಂತರಿಕ ಸಮಸ್ಯೆಯೂ ಬಹುದೊಡ್ಡ ಕೊಡುಗೆ ನೀಡಿತ್ತು ಎನ್ನುವುದು ಸ್ಪಷ್ಟ.

ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಹೋಗಿ ಬಿಜೆಪಿಯು ಅಧಿಕಾರದ ಗದ್ದುಗೆ ಹಿಡಿದಾಗ ಇದ್ದ ಉತ್ಸಾಹ ೨೦೨೩ರ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ ವರಿಷ್ಠರಿಗೆ ಉಳಿದಿರಲಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಿದ್ದಂತೆ, ಕಾರ್ಯಕರ್ತರು ಒಂದು ಹಂತದಲ್ಲಿ ಭ್ರಮನಿರಸನರಾಗಿದ್ದರು. ಲಿಂಗಾಯತರ ಮಾಸ್‌ಲೀಡರ್ ಆಗಿದ್ದ ಯಡಿಯೂರಪ್ಪ ಅವರನ್ನು ಕೆಳಗಿಸಿ
ಮತ್ತೊಬ್ಬ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ದ್ದರೂ, ಬಿಜೆಪಿಯ ವರಿಷ್ಠರ ನಡೆಯಿಂದ ಲಿಂಗಾಯತರು ಪಕ್ಷದಿಂದ ದೂರಾಗಿದ್ದರು. ಇದರೊಂದಿಗೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ಹಾಕಿದ್ದ ಹಲವು ಷರತ್ತುಗಳಿಂದಾಗಿ ಕನಿಷ್ಠ ೧೦ರಿಂದ ೧೫ ಕ್ಷೇತ್ರದಲ್ಲಿ ಚುನಾವಣೆಗೆ ಮೊದಲೇ ಸೋಲೊಪ್ಪಿಕೊಳ್ಳುವಂಥ ಪರಿಸ್ಥಿತಿಯಿತ್ತು. ಈ ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ರಾಜಕೀಯ ಸ್ಥಿತಿಗತಿಯನ್ನು ದೆಹಲಿಗೆ ಮುಟ್ಟಿಸುತ್ತಿದ್ದ ‘ಜೀ’ ಪಡೆ, ಹಲವು ತಪ್ಪು ಮಾಹಿತಿ ರವಾನಿಸಿ
ದ್ದರಿಂದ ಬಹುದೊಡ್ಡ ಹೊಡೆತವನ್ನು ನೀಡಿತ್ತು.

ಬಿಜೆಪಿಯ ಈ ಎಲ್ಲ ನಡೆಗಳಿಗೆ ತದ್ವಿರುದ್ಧ ಎನ್ನುವಂತೆ ಕರ್ನಾಟಕ ಕಾಂಗ್ರೆಸ್ ಚುನಾವಣೆಗೆ ಒಂದು ವರ್ಷದ ಮೊದಲೇ, ಭರ್ಜರಿ ಸಿದ್ಧತೆಯನ್ನು ನಡೆಸಿಕೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ, ತಮ್ಮದೇ ಆದ ವರ್ಚಸ್ಸಿನ ಮೂಲಕ ಜನರಲ್ಲಿ ‘ಸರಕಾರಿ ವಿರೋಧಿ’ ಮನಸ್ಥಿತಿಯನ್ನು ಚುನಾವಣಾ ಘೋಷಣೆಗೂ ಮೊದಲೇ ರೂಪಿಸುವಲ್ಲಿ ಯಶ ಕಂಡಿದ್ದರು. ಈ ಎಲ್ಲಕ್ಕೂ ಕಳಶವಿಟ್ಟಂತೆ ‘ಪಂಚ ಗ್ಯಾರಂಟಿ’ ನೀಡುವ ಮೂಲಕ ಕರ್ನಾಟಕದಲ್ಲಿ ಗೆಲುವಿನ ಮುದ್ರೆಯನ್ನು ಒತ್ತಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ತಪ್ಪು ಹೆಜ್ಜೆಗಳಿಂದ ಎಚ್ಚೆತ್ತ ಬಿಜೆಪಿ ವರಿಷ್ಠರು, ಪಂಚರಾಜ್ಯ ಚುನಾವಣೆಯ ಪ್ರತಿಹಂತದಲ್ಲಿಯೂ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇದರ ಮೊದಲ ಭಾಗವಾಗಿಯೇ, ೭೦ ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎನ್ನುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಈ ಕಾರಣಕ್ಕಾಗಿಯೇ ರಾಜಸ್ಥಾನದಲ್ಲಿ ವಸುಂಧರಾ ರಾಜೆ, ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್ ಚೌಹಾಣ್ ಸೇರಿ ಹಲವು ಹಿರಿಯ ನಾಯಕ ರಿಗೆ ಮತ್ತೊಂದು ಅವಕಾಶ ನೀಡಲಾಯಿತು. ಇದರೊಂದಿಗೆ, ಪಕ್ಷದ ಸಂಸದರು ಮತ್ತು ಕೇಂದ್ರ ಸರಕಾರದಲ್ಲಿ ಸಚಿವರಾಗಿರುವ, ಗೆಲ್ಲುವ ಕುದುರೆಗಳು ಎನಿಸಿಕೊಂಡ ಹಲವರಿಗೂ ಟಿಕೆಟ್ ನೀಡುವ ಪ್ರಯೋಗಕ್ಕೆ ಹೈಕಮಾಂಡ್ ಕೈಹಾಕಿತ್ತು.

ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಖಡಾಖಂಡಿತವಾಗಿದ್ದ ವಿರೋಧಿಸಿದ್ದ ಬಿಜೆಪಿಗರು, ಪಂಚರಾಜ್ಯದಲ್ಲಿ ಗ್ಯಾರಂಟಿ ಗಳನ್ನು ಘೋಷಿಸುವುದ ರೊಂದಿಗೆ ‘ಮೋದಿಯೇ ಗ್ಯಾರಂಟಿ’ ಎನ್ನುವ ಘೋಷಣೆ ಯೊಂದಿಗೆ ಚುನಾವಣೆಗೆ ಹೋದರು. ಹಾಗೆ ನೋಡಿದರೆ, ಬಿಜೆಪಿ ಗೆದ್ದಿರುವ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ‘ಬಿಜೆಪಿ ಗದ್ದುಗೆ ಹಿಡಿಯಲಿದೆ’ ಎಂದು ಹಲವು ಸಮೀಕ್ಷೆಗಳು ಹೇಳಿದ್ದವು. ಆದರೆ ಬಿಜೆಪಿಗರಿಗೆ ನಿಜವಾದ ಅಚ್ಚರಿಯೆಂದರೆ ಛತ್ತೀಸ್‌ಗಢದಲ್ಲಿ ಸ್ಪಷ್ಟ ಬಹುಮತ ಬಂದಿರುವುದು. ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಛತ್ತೀಸ್‌ಗಢವನ್ನು ಬಿಜೆಪಿ ವರಿಷ್ಠರು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ರಮಣ್‌ಸಿಂಗ್, ಅರುಣ್‌ಕುಮಾರ್ ಸಾವೋ ಸೇರಿದಂತೆ ಹಲವು ನಾಯಕರಿದ್ದರೂ, ವರ್ಚಸ್ಸು ಕುಸಿತವಾಗಿದ್ದರಿಂದ ಹೆಚ್ಚು ನಿರೀಕ್ಷೆಯಿರಲಿಲ್ಲ. ಆದರೂ ಭಾರಿ ಬಹುಮತಕ್ಕೆ ಕಾರಣವೇನು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಕ್ಸಲ್ ನಿರ್ಮೂಲನೆಯ ಮಂತ್ರವೇ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ.

ಕಳೆದ ಒಂದೂವರೆ ವರ್ಷದಲ್ಲಿ ಪದೇಪದೆ ಛತ್ತೀಸ್‌ಗಢಕ್ಕೆ ಭೇಟಿ ನೀಡುತ್ತಿದ್ದ ಗೃಹ ಸಚಿವ ಅಮಿತ್ ಶಾ ತಮ್ಮ ಪ್ರತಿ ಭಾಷಣದಲ್ಲಿಯೂ ನಕ್ಸಲ್ ನಿರ್ಮೂಲನೆ ಬಿಜೆಪಿಯ ಆದ್ಯತೆ ಎನ್ನುವ ಸ್ಪಷ್ಟ ಸಂದೇಶ ವನ್ನು ನೀಡಿದ್ದರು. ಇದರೊಂದಿಗೆ ಐದು ವರ್ಷ ಆಡಳಿತ ನಡೆಸಿದ್ದ ಭೂಪೇಶ್ ಬಘೇಲ್ ಅಧಿಕಾರಕ್ಕೆ ಬರು ವಾಗ
ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸದೇ, ಈ ಬಾರಿಯೂ ಅದೇ ಭರವಸೆ ನೀಡಿದ್ದರಿಂದ ಸರಕಾರ ವಿರೋಧಿ ಅಲೆ ಬಹಿರಂಗವಾಗಿ ಕಾಣಿಸಿಕೊಳ್ಳದಿದ್ದರೂ ‘ಅಂಡರ್ ಕರೆಂಟ್’ ರೀತಿಯಲ್ಲಿತ್ತು ಎನ್ನುವುದು ಫಲಿತಾಂಶದಲ್ಲಿ ಸ್ಪಷ್ಟ ವಾಗಿದೆ. ಛತ್ತೀಸ್‌ಗಢದ ರೀತಿಯಲ್ಲಿ ಬಿಜೆಪಿ ಮತ್ತೊಂದು
ಅಚ್ಚರಿ ಕೊಟ್ಟ ಅಥವಾ ಹೆಚ್ಚು ಖುಷಿ ಕೊಟ್ಟಿರುವ ರಾಜ್ಯ ತೆಲಂಗಾಣ ಎಂದರೆ ತಪ್ಪಿಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತಾಗಿ ಇನ್ಯಾವ ರಾಜ್ಯದಲ್ಲಿಯೂ ಅಸ್ತಿತ್ವವಿಲ್ಲದ ಬಿಜೆಪಿಗೆ ಇದೇ ಮೊದಲ ಬಾರಿಗೆ ಎಂಟು ಸ್ಥಾನಗಳಲ್ಲಿ ಗೆಲ್ಲಿಸಿಕೊಡುವ ಮೂಲಕ ತೆಲಂಗಾಣವು ದಕ್ಷಿಣ ಭಾರತದಲ್ಲಿ ‘ಕಮಲ’ಕ್ಕೆ ನೆಲೆ ಸಿಗಬಹುದಾದ ಮತ್ತೊಂದು ರಾಜ್ಯವಾಗಿ ಹೊರಹೊಮ್ಮಿದೆ. ಕಳೆದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಬಿಜೆಪಿಗೆ ಈ ಬಾರಿ ಎಂಟು
ಸ್ಥಾನ ಸಿಕ್ಕಿರುವು ದರಿಂದ, ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಒಂದೆ ರಡು ಸೀಟನ್ನು ತೆಲಂಗಾಣದಿಂದ ದಕ್ಕಿಸಿ ಕೊಡುವ ಭರವಸೆ ಯನ್ನು ಅಲ್ಲಿನ ರಾಜ್ಯ ನಾಯಕರು ಬಿಜೆಪಿ ವರಿಷ್ಠರಿಗೆ ನೀಡಿದ್ದಾರೆ.

ಈ ಚುನಾವಣೆಯ ಬಳಿಕ ಎದುರಾಗಲಿರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ‘ಲಾಭ’ವಾಗಿದೆ. ಅದರಲ್ಲಿಯೂ ಹಿಂದಿ ಬಾಹುಳ್ಯವಿರುವ ಮಧ್ಯ
ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿರುವುದು ಬಿಜೆಪಿ ಪಾಲಿಗೆ ಕೊಂಚ ನೆಮ್ಮದಿ ತಂದಿದೆ. ಅತಿಹೆಚ್ಚು ಲೋಕಸಭಾ ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶ, ಗುಜರಾತ್‌ನೊಂದಿಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿಯೂ ಸರಕಾರ ರಚಿಸುವ ಮೂಲಕ ೨೦೨೪ರಲ್ಲಿ ಬಹುಮತದ ಗುರಿ ತಲುಪಲು ಶಕ್ತಿ ಹೆಚ್ಚಿಸಿ ಕೊಂಡಿದೆ. ಏಕೆಂದರೆ, ಈ ನಾಲ್ಕು ರಾಜ್ಯಗಳಿಂದಲೇ ೧೬೦ ಸಂಸದರು ಆಯ್ಕೆಯಾಗಲಿದ್ದಾರೆ. ಈ ನಾಲ್ಕು ರಾಜ್ಯದಲ್ಲಿ
ಈಗಲೂ ಮೋದಿ ಅಲೆಯಿದೆ ಎನ್ನುವುದು ಸ್ಪಷ್ಟವಾಗಿರುವುದರಿಂದ ೧೬೦ರಲ್ಲಿ ಅತಿಹೆಚ್ಚು ಸೀಟು ಗೆಲ್ಲುವ ಮೂಲಕ ಲೋಕಸಭೆಯ ಮ್ಯಾಜಿಕ್ ನಂಬರ್ ಆಗಿರುವ ೨೭೨ ಪಡೆಯಲು ಸದ್ದಿಲ್ಲದೇ ಸಿದ್ಧತೆ ನಡೆಸಿಕೊಂಡಿದೆ ಬಿಜೆಪಿ.

ಪಂಚರಾಜ್ಯ ಚುನಾವಣೆಯ ಫಲಿತಾಂಶದ ಮೂಲಕ, ಮುಂದಿನ ದಿನದಲ್ಲಿ ಮೈತ್ರಿಗಳ ಬಗ್ಗೆಯೂ ಕೆಲ ಬದಲಾವಣೆಗಳಾಗುವ ಸಾಧ್ಯತೆಯಿದೆ. ಗ್ಯಾರಂಟಿ ಗಳಿಂದಲೇ ಚುನಾ ವಣೆ ಗೆಲ್ಲಬಹುದು ಎನ್ನುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ಅಧಿಕಾರ ಸಿಕ್ಕಿರುವುದು ಖುಷಿಯಾಗಿದ್ದರೂ, ಎರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ಹಿನ್ನಡೆಯಾಗಿದೆ. ಕರ್ನಾಟಕದಿಂದ ಆರಂಭಗೊಂಡಿರುವ ಉಚಿತ ಗ್ಯಾರಂಟಿಗಳ ಪರ್ವ, ಮುಂದಿನ ಲೋಕಸಭಾ ಚುನಾವಣೆ ಯಲ್ಲಿಯೂ ಮುಂದುವರಿಯುವುದು ಬಹು ತೇಕ ನಿಶ್ಚಿತ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷ ಗಳಿಗೂ ಕರ್ನಾಟಕವೇ ಮಾದರಿ ಎನ್ನುವುದು ಸ್ಪಷ್ಟ.