ಅಶ್ವತ್ಥಕಟ್ಟೆ
ranjith.hoskere@gmail.com
ಬಿಜೆಪಿ ನಾಯಕರು ವೋಟುಗಳನ್ನು ಕ್ರೋಡೀಕರಿಸಲು ಹಿಂದುತ್ವದ ಅಲೆಯನ್ನು ಬೀಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಮ್ಮ ಪ್ರಮುಖ ವೋಟ್ಬ್ಯಾಂಕ್ ಆಗಿರುವ ಮುಸ್ಲಿಮರ ಓಲೈಕೆಯ ಬದಲಿಗೆ, ‘ಸಾಫ್ಟ್ ಹಿಂದುತ್ವ’ದ ಮೊರೆ ಹೋಗಿದೆ.
‘ಕೊಟ್ಟ ಕುದುರೆ ಏರದವನು ವೀರನೂ ಅಲ್ಲ.. ಶೂರನೂ ಅಲ್ಲ..’ ಈ ಮಾತು ಪದೇಪದೆ ಕಾಂಗ್ರೆಸ್ ನಾಯಕರು ಬಳಸುತ್ತಾರೆ. ಅದರದಲ್ಲಿಯೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಾರಕ್ಕೊಮ್ಮೆಯಾದರೂ ಈ ಮಾತು ಬಳಸಿ ಕುಟುಕುತ್ತಾರೆ. ಆದರೆ ವಾಸ್ತವದಲ್ಲಿ ಈ ಮಾತು ಬಿಜೆಪಿ ನಾಯಕರಿಗೆ ಮಾತ್ರವಲ್ಲದೇ, ಪ್ರತಿಪಕ್ಷದಲ್ಲಿ ಕೂತಿರುವ ಕಾಂಗ್ರೆಸ್ಗೂ ಅನ್ವಯ.
ಇತ್ತೀಚಿನ ದಿನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ವರ್ತನೆ, ಪ್ರತಿಪಕ್ಷವಾಗಿ ಆಡಳಿತರೂಢ ಬಿಜೆಪಿ ವಿರುದ್ಧ ಕೈಗೆತ್ತಿಕೊಳ್ಳಬೇಕಿದ್ದ ಅಸಗಳ ಬದಲಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಇದು ನಿಜವೆನಿಸದೇ ಇರುವುದಿಲ್ಲ. ಇದು ಕೇವಲ ಸಾರ್ವಜನಿಕರ ಅಭಿಪ್ರಾಯವಲ್ಲ. ಬದಲಿಗೆ ಹಲವು ಕಾಂಗ್ರೆಸ್ ನಾಯಕರೂ ಈ ಮಾತನ್ನು ‘ಅನುಮೋದಿಸುತ್ತಾರೆ’.
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗಿ ನಿಂದ, ಬಿಜೆಪಿ ಸರಕಾರದ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿದೆ. ಇದರಲ್ಲಿ ಹಲವು ಆರೋಪಗಳನ್ನು ಮೊದಲು ಎತ್ತಿಕೊಂಡಿದ್ದೂ ಕಾಂಗ್ರೆಸ್ ನಾಯಕರು ಎನ್ನುವುದು ಗಮನಾರ್ಹ. ಸರಕಾರದ ವಿರುದ್ಧ ಕಳೆದ ಒಂದುವರೆ ವರ್ಷದಲ್ಲಿ ಕೇಳಿಬಂದ ಪ್ರಮುಖ ಆರೋಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಖ್ಯಮಂತ್ರಿ ಅಥವಾ ಸಚಿವರು ರಾಜೀನಾಮೆ ನೀಡುವುದು ನಿಶ್ಚಿತ ಎನ್ನುವಷ್ಟರ ಮಟ್ಟಿಗಿದ್ದವು. ಆದರೆ, ಈಶ್ವರಪ್ಪ ಅವರ ವಿರುದ್ಧ ಕೇಳಿಬಂದ ಆರೋಪವನ್ನು ಹೊರತು ಪಡಿಸಿದರೆ, ಇನ್ಯಾವ ಆರೋಪಗಳಿಗೂ ತಲೆದಂಡವಾಗಲಿಲ್ಲ. (ಈಶ್ವರಪ್ಪ ವಿರುದ್ಧ ಕೇಳಿಬಂದ ಆರೋಪದಲ್ಲಿ, ಕಾಂಗ್ರೆಸ್ಗಿಂತ ಹೆಚ್ಚಾಗಿ, ಆತ್ಮಹತ್ಯೆ
ಮಾಡಿಕೊಂಡ ಸಂತೋಷ್ ಡೆತ್ನೋಟ್ನಲ್ಲಿ ಹೆಸರು ಬರೆದಿದ್ದು ಸಮಸ್ಯೆಗೆ ಕಾರಣ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ).
ಕಾಂಗ್ರೆಸ್ನವರು ಈಶ್ವರಪ್ಪ ವಿರುದ್ಧ ಕೇಳಿಬಂದಿದ್ದ ಆರೋಪವನ್ನು ಸರಿಯಾದ ರೀತಿಯಲ್ಲಿ ಹ್ಯಾಂಡಲ್ ಮಾಡಲಿಲ್ಲ ಎನ್ನುವ ಮಾತುಗಳಿವೆ ಎನ್ನು ವುದು ಬೇರೆ ಮಾತು. ಬಿಜೆಪಿ ಸರಕಾರದ ವಿರುದ್ಧ ಕಳೆದ ಮೂರು ವರ್ಷದಲ್ಲಿ ಪ್ರಮುಖವಾಗಿ ಕೇಳಿಬಂದ ಆರೋಪಗಳೆಂದರೆ, ಕರೋನಾ ಹೆಸರಲ್ಲಿ ಆರೋಗ್ಯ ಇಲಾಖೆಯಲ್ಲಿ ಅಕ್ರಮ, ಗುತ್ತಿಗೆದಾರರ ಸಂಘದಿಂದ ಶೇ.40ರಷ್ಟು ಕಮಿಷನ್ ಆರೋಪ, ಪಿಎಸ್ಐ ನೇಮಕದಲ್ಲಿ 50 ಲಕ್ಷದ ವರೆಗೆ ಲಂಚ ಪಡೆದು ನೇಮಕ ಮಾಡಿರುವ ಆರೋಪ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ, ಕಂಕುಂಬಿಯಲ್ಲಿ ರಫ್ತಿನಲ್ಲಿ ಅಬಕಾರಿ ಇಲಾಖೆಯಿಂದ ಅಕ್ರಮ ತೀರಾ ಇತ್ತೀಚಿಗೆ ಹಾಲಿ ಶಾಸಕ ಹಾಗೂ ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರು.ಗಳನ್ನು ತಂದೆಯ ಪರವಾಗಿ ಪಡೆಯುತ್ತಿರುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು. ಇದನ್ನು ಹೊರತುಪಡಿಸಿ, ಕಾಂಗ್ರೆಸ್ನವರೇ ಪೇ ಸಿಎಂ ಎನ್ನುವ ಅಭಿಯಾನ ಸೇರಿದಂತೆ ಬಿಜೆಪಿ ಸರಕಾರದ ವಿರುದ್ಧ ಸಾಲು ಸಾಲು ಅಭಿಯಾನವನ್ನು ಆರಂಭಿಸಿತ್ತು.
ಹಾಗೇ ನೋಡಿದರೆ ಪ್ರತಿಪಕ್ಷವಾಗಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳಿಗೂ ಕ್ಷಣಾರ್ಧ ದಲ್ಲಿಯೇ ಪ್ರತಿಕ್ರಿಯಿಸಿದೆ. ಇದರೊಂದಿಗೆ, ಅದಕ್ಕೆ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಬಳಿಕ ಪ್ರತಿಭಟನೆಗಳನ್ನು ನಡೆಸಿದೆ. ಆದರೆ ಈ ಎಲ್ಲವಾದರೂ, ಯಶಸ್ಸು ಸಿಗದಿರಲು ಪ್ರಮುಖ ಕಾರಣ, ಪ್ರತಿ ಆರೋಪ ಕೇಳಿಬಂದಾಗಲೂ ಆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ‘ಕನೆಕ್ಟ್’ ಮಾಡುವುದರಿಂದ. ಬಿಜೆಪಿಯ ವರಿಷ್ಠರಾಗಿ, ಸರಕಾರಕ್ಕೆ ಮಾರ್ಗದರ್ಶನವನ್ನು ಈ ಇಬ್ಬರು ಮಾಡುತ್ತಿದ್ದಾರೆ.
ಹಾಗೆಂದ ಮಾತ್ರಕ್ಕೆ, ಪ್ರತಿಹಂತದಲ್ಲಿಯೂ ಅವರನ್ನೇ ಹೊಣೆ ಮಾಡಲು ಪ್ರಯತ್ನಿಸುವುದು ಜನ ಸಾಮಾನ್ಯರಿಗೂ ‘ಅತಿರೇಕ’ ಎನಿಸದೇ ಇರುವು ದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಧ್ಯಮದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಸೇರಿದಂತೆ ಬಹುತೇಕ ನಾಯಕರು, ರಾಜ್ಯದಲ್ಲಿನ ಈ ಎಲ್ಲ ಘಟನೆಗಳ ಬಗ್ಗೆ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ವಿಚಾರಗಳ ಬಗ್ಗೆ ಮಾತನಾಡದೇ, ಮೋದಿ, ಶಾ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ.
ಇದರಿಂದ ರಾಜ್ಯ ಜನರಿಗೂ, ‘ಇಲ್ಲಾಗುವ ಘಟನೆಗಳಿಗೂ ಮೋದಿ, ಶಾಗೂ ಏನು ಸಂಬಂಧ’ ಎನ್ನುವ ಯೋಜನೆಯನ್ನು ಮಾಡುತ್ತಿದ್ದಾರೆ. ಇದರಿಂದಾಗಿ, ಕಾಂಗ್ರೆಸ್ನ ಎಲ್ಲ ಪ್ರತಿಭಟನೆಯ ಯೋಜನೆಗಳೂ ‘ತಾರ್ತಿಕ ಅಂತ್ಯ’ ಕಾಣದೇ, ಬಂದಷ್ಟೇ ವೇಗವಾಗಿ ವಾಪಸು ಹಿಂದಕ್ಕೆ ಹೋಗುವಂತಾಗಿದೆ. ಹಾಗೆಂದು ಕಾಂಗ್ರೆಸ್ ಕೈಯಲ್ಲಿ ಅಸಗಳಿಲ್ಲ ಎಂದಲ್ಲ. ಹಲವು ಅಸ್ತ್ರಗಳಿವೆ. ಆದರೆ ಆ ಅಸ್ತ್ರಗಳನ್ನು ಪ್ರಯೋಗಿಸುತ್ತಿರುವ ‘ಟಾರ್ಗೆಟ್’ ಸರಿಯಿಲ್ಲ ಎನ್ನುವುದಷ್ಟೇ ಹಲವರ ಆರೋಪವಾಗಿದೆ.
ಎಲ್ಲವನ್ನು ಮೋದಿ ಕಡೆ ಬೊಟ್ಟು ಮಾಡುವುದರಿಂದ ಕರ್ನಾಟಕದ ಜನರಿಗೆ ‘ರೀಚ್’ ಆಗುವುದಿಲ್ಲ. ಆದ್ದರಿಂದ ಕರ್ನಾಟಕ ಸರಕಾರಗಳ ವೈಫಲ್ಯ,
ಭ್ರಷ್ಟಾಚಾರವಿದ್ದರೆ ಅದರ ವಿರುದ್ಧ ಸ್ಥಳೀಯ ನಾಯಕರ ವಿರುದ್ಧ ಟೀಕೆ-ಟಿಪ್ಪಣಿಗಳನ್ನು ಮಾಡಬೇಕು. ಕರ್ನಾಟಕದಲ್ಲಿರುವ ಆಡಳಿತ ವಿರೋಧಿ ಅಲೆಯ ಅಸ್ತ್ರವನ್ನು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಳಸಿಕೊಳ್ಳಬೇಕೇ ಹೊರತು, ರಾಷ್ಟ್ರೀಯ ಬಿಜೆಪಿಯ ವಿರುದ್ಧವಲ್ಲ ಎನ್ನುವುದುಕಾಂಗ್ರೆಸ್ ನಾಯಕರೇ ಹೇಳುವ ಮಾತು.
ಈ ರೀತಿ ಆರೋಪ ಮಾಡುವುದು ಒಂದು ಸಮಸ್ಯೆಯಾದರೆ, ಕಾಂಗ್ರೆಸ್ ಕಾಡುತ್ತಿರುವ ಮತ್ತೊಂದು ಹಿನ್ನಡೆಯೆಂದರೆ ‘ಧರ್ಮ ರಾಜಕೀಯ’. ಬಿಜೆಪಿ ನಾಯಕರು ವೋಟುಗಳನ್ನು ಕ್ರೋಡೀಕರಿಸಲು ಹಿಂದುತ್ವದ ಅಲೆಯನ್ನು ಬೀಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಬಿಜೆಪಿಯತ್ತ ಹಿಂದೂಗಳ ಮತಗಳು ಸೇರುವುದರಿಂದ ಹೆಚ್ಚು ಲಾಭವಾಗುತ್ತದೆ ಎನ್ನುವುದು ಬಿಜೆಪಿ ವಾದ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಮ್ಮ ಪ್ರಮುಖ ವೋಟ್ಬ್ಯಾಂಕ್ ಆಗಿರುವ ಮುಸ್ಲಿಮರ ಓಲೈಕೆಯ ಬದಲಿಗೆ, ‘ಸಾಫ್ಟ್ ಹಿಂದುತ್ವ’ದ ಮೊರೆ ಹೋಗಿದೆ. ಇದರಿಂದಾಗಿ, ಸಾಂಪ್ರದಾಯಿಕವಾಗಿ ಬಿಜೆಪಿಯೊಂದಿಗೆ ಹಿಂದುತ್ವದ ವೋಟುಗಳು ಭದ್ರವಾಗುತ್ತಿದೆ. ಆದರೆ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳಾಗಿರುವ ಮುಸ್ಲಿಮರು, ಎಸ್ಡಿಪಿಐ, ಓವೈಸಿ ಪಕ್ಷದತ್ತ
ವಾಲುತ್ತಿದೆ. ಈ ರೀತಿ ವಾಲುವ ಪ್ರಮಾಣ ಪ್ರತಿಕ್ಷೇತ್ರದಲ್ಲಿ ಐದತ್ತು ಸಾವಿರವಾದರೂ ಬಿಜೆಪಿಗೆ ಇದು ಬಹುದೊಡ್ಡ ಮುನ್ನಡೆಯೇ ಆಗಲಿದೆ.
ಬಿಜೆಪಿಯ ಈ ತಂತ್ರವನ್ನು ಯೋಚಿಸದ ಕಾಂಗ್ರೆಸಿಗರು ಮುಸ್ಲಿಮರು ಸದಾ ನಮ್ಮೊಂದಿಗೆ ಇರುತ್ತಾರೆ ಎನ್ನುವ ಭಾವನೆಯಲ್ಲಿ ಈ ಹಿಂದೆ ‘ಸಾಫ್ಟ್ ಹಿಂದುತ್ವ’ದ ಸ್ಮರಣೆ ಮಾಡಿದ್ದರು. ಅದರಿಂದ ಇದೀಗ ಮುಸ್ಲಿಮರು ತಮ್ಮ ಪರವಾಗಿ ಕಾಂಗ್ರೆಸ್ ಉಳಿದಿಲ್ಲ ಎನ್ನುವ ಆತಂಕದೊಂದಿಗೆ ಅನ್ಯಪಕ್ಷದ ಮೊರೆ ಹೋಗುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ಗುಜರಾತ್ನಲ್ಲಿ ನಡೆದ ಚುನಾವಣೆಯಲ್ಲಿಯೂ ಇದೇ ಎಡವಟ್ಟಿನಿಂದ ಬಿಜೆಪಿಗೆ ಬಹುದೊಡ್ಡ ಐತಿಹಾಸಿಕ ಗೆಲುವು ಉಡುಗೊರೆಯ ಸ್ವರೂಪದಲ್ಲಿ ಸಿಕ್ಕಿತ್ತು.
ಇದಕ್ಕೆ ಓವೈಸಿ, ಆಮ್ ಆದ್ಮಿ ಪಕ್ಷಗಳು ಸಾಥ್ ನೀಡಿದ್ದವು. ಇದರ ಹೊಡೆತ ದಿಂದ ಎಚ್ಚೆತ್ತ ರಾಜ್ಯ ಕಾಂಗ್ರೆಸ್, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ‘ಪ್ರೋ ಮುಸ್ಲಿಂ’ ಮಾಡಲು ಹೊರಟಿದ್ದಾರೆ. ಇದರಿಂದ ಕ್ಷೇತ್ರದಲ್ಲಿರುವ ಹಿಂದೂಗಳೆಲ್ಲ ಒಂದಾಗಿದ್ದು, ಅನಿವಾರ್ಯವಾಗಿ ಬಿಜೆಪಿಯತ್ತ ವಾಲುತ್ತಿದ್ದಾರೆ.
ಆದ್ದರಿಂದ ಆರಂಭದಲ್ಲಿ ಕಾಂಗ್ರೆಸ್ ಮಾಡಿದ ಒಂದು ಎಡವಟ್ಟಿನ ನಿರ್ಧಾರ ಇಂದು ‘ಅತ್ತ ಧರಿ, ಇತ್ತ ಪುಲಿ’ ಎನ್ನುವ ಪರಿಸ್ಥಿತಿಗೆ ಪಕ್ಷ ತಲುಪಿದೆ.
ಆಡಳಿತ ಪಕ್ಷವಾಗಿ ಬಿಜೆಪಿ ಮುಸ್ಲಿಮರ ವಿಷಯದಲ್ಲಿ ಹಲವು ವಿವಾದಾತ್ಮಕ ತೀರ್ಮಾನಗಳನ್ನು ಕೈಗೊಂಡರು. ಈ ಎಲ್ಲ ಸಮಯದಲ್ಲಿ, ಅವರ ಪರವಾಗಿ ಒಂದು ಗಟ್ಟಿ ಧ್ವನಿಯನ್ನು ಕಾಂಗ್ರೆಸ್ ಎತ್ತಲಿಲ್ಲ.
ಕಾಂಗ್ರೆಸ್ನಲ್ಲಿಯೇ ಇರುವ ಮುಸ್ಲಿಂ ನಾಯಕರೂ, ಯಾರೂ ಗಟ್ಟಿಯಾಗಿ ಸಮುದಾಯದ ಪರವಾಗಿ ನಿಲ್ಲಲಿಲ್ಲ. ಈ ಕಾರಣಕ್ಕಾಗಿಯೇ, ಬಿಜೆ
ಪಿಯಿಂದ ಹಲವು ಸಮಯದಲ್ಲಿ ಆಗಿರುವ ಎಡವಟ್ಟುಗಳು ‘ಮುಚ್ಚಿ ಹೋಗಿವೆ’ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕಾಂಗ್ರೆಸ್ ಪ್ರತಿಪಕ್ಷಕ್ಕಿಂತ ಹೆಚ್ಚು ಸಮಯ ಆಡಳಿತ ಪಕ್ಷದಲ್ಲಿಯೇ ಅಧಿಕಾರಿ ನಡೆಸಿರುವ ಕಾರಣಕ್ಕೋ ಏನೋ, ಪ್ರತಿಪಕ್ಷವಾಗಿ ಆಡಳಿತ ಪಕ್ಷವನ್ನು ಕಟ್ಟಿಹಾಕುವುದರಲ್ಲಿ ಸದಾ
ಎಡವುತ್ತದೆ.
ವಿಧಾನಸಭಾ ಚುನಾವಣೆಯ ಸಮಯದಲ್ಲಿಯೂ, ಇದೇ ರೀತಿಯ ನಡೆಯಿಂದ ಪಕ್ಷಕ್ಕೆ ಆಗಬಹುದಾದ ‘ಲಾಭ’ವನ್ನು ಬಿಟ್ಟುಕೊಡುತ್ತಿರುವುದು, ಫಲಿತಾಂಶದ ಸಮಯದಲ್ಲಿ ಸಮಸ್ಯೆಯಾದರೂ ಅಚ್ಚರಿಯಿಲ್ಲ. ಆದ್ದರಿಂದ ಇನ್ನಾದರೂ, ಕಾಂಗ್ರೆಸ್ ನಾಯಕರು ಮಾತೆತ್ತಿದರೆ ಮೋದಿ, ಶಾ ಬೈಯುವ ಬದಲು ರಾಜ್ಯ ಸರಕಾರ ಮಾಡಿರುವ ಲೋಪಗಳೇನು? ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದ ಯೋಜನೆಗಳೇನು ಎನ್ನುವು
ದನಷ್ಟೇ ಮುಂದಿಟ್ಟುಕೊಂಡು ಮಾತನಾಡಬೇಕು. ಯಾವುದೇ ಆರೋಪಗಳನ್ನು ತಾರ್ತಿಕ ಅಂತ್ಯ ಕಾಣುವಂತೆ ನೋಡಿಕೊಳ್ಳದೇ, ‘ಹಿಟ್ ಆಂಡ್ ರನ್’ ಮಾಡಿದರೆ ಅದರಿಂದ, ಕಾಂಗ್ರೆಸ್ಗಿಂತ ಬಿಜೆಪಿಗೆ ಹೆಚ್ಚು ಲಾಭ ಎನ್ನುವದರಲ್ಲಿ ಅನುಮಾನವಿಲ್ಲ.