ಅಶ್ವತ್ಥಕಟ್ಟೆ
ranjith.hoskere@gmail.com
ಮೂರು ವರ್ಷಗಳಿಂದ ಸಂಕಷ್ಟ ಕಾಲದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಡೆದಿರುವ ಡಿ.ಕೆ. ಶಿವಕುಮಾರ್ ಅವರನ್ನೂ ಅಲ್ಲಗಳೆಯುವಂತಿಲ್ಲ. ಮೊದಲಿಗೆ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಾದವರಿಗೆ ಮುಖ್ಯಮಂತ್ರಿ ಹುದ್ದೆಯ ಎನ್ನುವ ಅಲಿಖಿತ ನಿಯಮ ಇದೀಗ ಡಿಕೆಗಿರುವ ಬಹುದೊಡ್ಡ ಪ್ಲಸ್ ಪಾಯಿಂಟ್.
ಇಡೀ ದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದೆ ಎನ್ನುವ ಸಮಯದಲ್ಲಿ ದೇಶದ ದೊಡ್ಡ ರಾಜ್ಯಗಳಲ್ಲೊಂದಾಗಿರುವ ಕರ್ನಾಟಕದಲ್ಲಿ ‘ದಿಗ್ವಿಜಯ’ ಸಾಧಿಸುವ ಮೂಲಕ ಬಹುದೊಡ್ಡ ಬೂಸ್ಟರ್ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗಿದ್ದ ಏಕೈಕ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬಾರದಂತೆ ಕಾಂಗ್ರೆಸ್ ನೋಡಿಕೊಂಡಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಬೆಂಬಲ ಸಿಕ್ಕರೂ, ಮುಖ್ಯಮಂತ್ರಿ ಯಾರೆಂಬ ಗೊಂದಲ ಕಾಂಗ್ರೆಸ್ನಲ್ಲಿ ಜಟಿಲವಾಗಿದೆ.
ಕಳೆದೊಂದು ವರ್ಷದಿಂದಲೂ ಬಿಜೆಪಿ ಸರಕಾರದ ವಿರುದ್ಧ ಕರ್ನಾಟಕದಲ್ಲಿ ಆಡಳಿತ ವಿರೋಧಿಯಿದೆ ಎನ್ನುವುದು ಪ್ರತಿಯೊಬ್ಬ ರಿಗೂ ತಿಳಿದಿತ್ತು. ಆದರೆ ಈ ಆಡಳಿತ ವಿರೋಧಿ ಅಲೆ ಈ ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋಗಲಿದೆ ಎನ್ನುವ ಪರಿಕಲ್ಪನೆ ಯಾವೊಬ್ಬರಿಗೂ ಇರಲಿಲ್ಲ. ೧೯೮೯ರಲ್ಲಿ ವೀರೇಂದ್ರ ಪಾಟೀಲ್ ಸಾರಥ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದ ೧೭೮ ಕ್ಷೇತ್ರಗಳ ಬಳಿಕ ಅತಿದೊಡ್ಡ ವಿಜಯ ಗಳಿಸಿದ್ದು ಈ ಚುನಾವಣೆಯಲ್ಲಿಯೇ. ೧೩೫ ಸ್ಥಾನ ಬರುತ್ತಿದ್ದಂತೆಯೇ ಅಧಿಕಾರಯುತವಾಗಿ ಸರಕಾರ ರಚಿಸಲು ಕಾಂಗ್ರೆಸ್ ಸಜ್ಜಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎನ್ನುವ ಹೊತ್ತಿನಲ್ಲಿ ಈಗ ಎದ್ದಿರುವ ಬಹುದೊಡ್ಡ ಪ್ರಶ್ನೆ, ‘ಮುಂದಿನ ಮುಖ್ಯಮಂತ್ರಿ ಯಾರು’ ಎಂಬುದು.
ಚುನಾವಣೆಗೆ ಮುಂಚಿನಿಂದಲೂ ಈ ಪ್ರಶ್ನೆ ಕೇಳಿ ಬರುತ್ತಿದ್ದರೂ, ಆಗೆಲ್ಲ ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಬಳಿಕ ಯಾರೆಂಬುದನ್ನು ತೀರ್ಮಾನಿಸಿದರಾಯಿತು ಎಂದು ಸಮಾಧಾನ ಹೇಳಲಾಗಿತ್ತು. ಆದರೀಗ ಪಕ್ಷಕ್ಕೆ ಬಹುಮತವೂ ಬಂದಾಗಿದೆ, ಅಽಕಾರ ಸ್ವೀಕರಿಸಬೇಕಾದ ಸಮಯವೂ ಬಂದಾಗಿದೆ. ಸಹಜವಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರಿಬ್ಬರ ಪೈಪೋಟಿ ಮುನ್ನಲೆಗೆ ಬಂದಿದೆ. ಆದರೆ ಈ ಇಬ್ಬರಲ್ಲಿ ಆಯ್ಕೆ ಸಾಕಷ್ಟು ಸಂಗತಿಗಳ ಮೇಲೆ ನಿಂತಿದೆ.
ಪ್ರಾರಂಭದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಆ ಸಮಯದಲ್ಲಿ ಪಕ್ಷದ ಹೈಕಮಾಂಡ್ ಸೂಚಿಸಿದಂತೆ ಅಧಿಕಾರ
ಹಂಚಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಧಿಕಾರ ಹಂಚಿಕೆಯೇ ಬಹುದೊಡ್ಡ ತಲೆಬಿಸಿ ಯಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಅವರದ್ದೇ ಆದ ಪಾಸಿಟಿವ್-ನೆಗೆಟಿವ್ ಅಂಶಗಳಿವೆ. ಇಬ್ಬರೂ ತಮ್ಮದೇ ರೀತಿಯಲ್ಲಿ ಅವಿರತ ಹೋರಾಟ ನಡೆಸಿ ಪಕ್ಷಕ್ಕೆ ಬಹುಮತ ಸಿಗುವಂತೆ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಲ್ಲಿರುವ ಪಾಸಿಟಿವ್, ನೆಗೆಟಿವ್ ಅಂಶಗಳನ್ನು ನೋಡಿದರೆ, ಇಬ್ಬರಿಗೂ ತಮ್ಮದೇ ಸಮಸ್ಯೆಗಳಿವೆ. ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಚರ್ಚಿಸುವ ಮೊದಲು ಸಿದ್ದರಾಮಯ್ಯ ಅವರದ್ದು ನೋಡುವುದಾದರೆ, ಈಗಾಗಲೇ ಒಂದು ಅವಽಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ‘ಕಳಂಕ ರಹಿತ’ ಸರಕಾರ ನೀಡಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಧರ್ಮ ವಿಭಜನೆ, ಜಾತಿ ಗಣತಿ, ಸದಾಶಿವ ವರದಿ ಹೊರತುಪಡಿಸಿ, ಇನ್ಯಾವುದು ಅವರ ಸರಕಾರದ ಸಮಯದಲ್ಲಿ ಹೇಳಿಕೊಳ್ಳುವ ನೆಗೆಟಿವ್ ಫ್ಯಾಕ್ಟರ್ ಗಳಿಲ್ಲ. ಆ ಮಟ್ಟಿಗೆ ಕ್ಲೀನ್ ಇಮೇಜ್ ಅವರದ್ದು. ಅದಾದ ಬಳಿಕ ಬಿಜೆಪಿ ಸರಕಾರದ ಅವಧಿಯಲ್ಲಿ ಈವರೆಗೆ ಪ್ರತಿಪಕ್ಷದ ನಾಯಕರಾಗಿದ್ದುಕೊಂಡು, ಸದನದೊಳಕ್ಕೆ ಸರಕಾರವನ್ನು ಸಮರ್ಥವಾಗಿ ವಿರೋಧಿಸಿ ಕೊಂಡೇ ಬಂದಿದ್ದಾರೆ. ಈ ಎಲ್ಲಕ್ಕಿಂತ ಮುಖ್ಯವಾಗಿ ‘ಅಹಿಂದ’ ನಾಯಕನಾಗಿದ್ದುಕೊಂಡು, ಕರ್ನಾಟಕ ರಾಜಕೀಯದಲ್ಲಿ ಮಾಸ್ ನಾಯಕತ್ವದ ಗುಣವನ್ನು ಹೊಂದಿರುವುದರಿಂದ ಇಡೀ ರಾಜ್ಯದಲ್ಲಿ ಪಕ್ಷ ಮೀರಿದ ತಮ್ಮದೇ ಆದ ಜನ ಬೆಂಬಲ ಹಾಗೂ ಜನಪ್ರತಿನಿಧಿಗಳ ಬೆಂಬಲವನ್ನು ದಕ್ಕಿಸಿಕೊಂಡಿದ್ದಾರೆ.
ಹೀಗಿರುವಾಗ, ಒಂದೊಮ್ಮೆ ಸಿಎಂ ಸ್ಥಾನ ಕೊಡಲಿಲ್ಲವೆಂದು ಸಿದ್ದರಾಮಯ್ಯ ‘ನ್ಯೂಟ್ರಲ್’ ಆದರೆ ಸರಕಾರ ನಡೆಸುವುದಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿದೆ ಎನ್ನುವ ಆತಂಕ ಪಕ್ಷದ ಹೈಕಮಾಂಡ್ ಗೂ ಇದೆ. ಆದರೆ ಅವರು ‘ಫಂಡಿಂಗ್’ ವಿಷಯದಲ್ಲಿ ಹಿಂದೆ ಬೀಳುವ ಸಾಧ್ಯತೆಯಿರುತ್ತದೆ. ಕೇಂದ್ರೀಯ ನಾಯಕರಿಗೆ ‘ಸಂಪನ್ಮೂಲ’ ಒದಗಿಸುವ ಕೆಲವೇ ಕೆಲ ರಾಜ್ಯದಲ್ಲಿ ಕರ್ನಾಟಕ ಒಂದಾಗಿರುವುದರಿಂದ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ನಿರೀಕ್ಷೆ ಮಾಡುವಷ್ಟು
ಫಂಡ್ ಒದಗಿಸುವುದು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ‘ಭಾರ’ ಎನಿಸಬಹುದು. ಆದರೆ ತಮ್ಮ ಆಪ್ತರ ಮೂಲಕ ಈ ಕೆಲಸವನ್ನು ಮಾಡಿಸುವಷ್ಟು ಛಾತಿಯಿದ್ದರೂ, ಅದು ನಿರೀಕ್ಷಿತ ಮಟ್ಟದಲ್ಲಿ ಆಗುವುದೇ ಎನ್ನುವುದು ಹಲವರಲ್ಲಿರುವ ಅಳಕು. ಆದರೆ ಲೋಕಸಭಾ ಚುನಾವಣೆಯಲ್ಲಿ ಕೇವಲ ಫಂಡಿಂಗ್ ಒಂದೇ ಮುಖ್ಯವಾಗುವುದಿಲ್ಲ.
ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಎದುರಿಸಿ, ಸೀಟುಗಳನ್ನು ಗೆಲ್ಲಬೇಕಾದ ಅನಿವಾರ್ಯ ಕಾಂಗ್ರೆಸ್ಗಿದೆ.
ಏಕೆಂದರೆ ಕರ್ನಾಟಕದ ಚುನಾವಣೆಯೇ ಬೇರೆ, ‘ಮತ್ತೊಮ್ಮೆ ಮೋದಿ’ ಆಯ್ಕೆಯ ಚುನಾವಣೆಯೇ ಬೇರೆ. ಇದನ್ನು ನಿಭಾಯಿಸ ಬಲ್ಲ ವ್ಯಕ್ತಿತ್ವ ಸಿದ್ದರಾಮಯ್ಯ ಅವರಿಗಿರುವುದೇ ಅವರ ಪ್ಲಸ್ ಎಂದರೆ ತಪ್ಪಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ, ಕಳೆದ ಮೂರು ವರ್ಷಗಳಿಂದ ಸಂಕಷ್ಟ ಕಾಲದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಡೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೂ ಅಲ್ಲಗಳೆಯುವಂತಿಲ್ಲ. ಮೊದಲಿಗೆ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಾದವರಿಗೆ ಮುಖ್ಯಮಂತ್ರಿ ಹುದ್ದೆಯ ಎನ್ನುವ
ಅಲಿಖಿತ ನಿಯಮ ಇದೀಗ ಡಿಕೆಗಿರುವ ಬಹುದೊಡ್ಡ ಪ್ಲಸ್ ಪಾಯಿಂಟ್.
ಇದರೊಂದಿಗೆ ಕಳೆದ ಮೂರು ವರ್ಷದಿಂದ ಪಕ್ಷ ಸಂಘಟನೆಗೆ ಹತ್ತು ಹಲವು ರೀತಿಯಲ್ಲಿ ಸಂಪನ್ಮೂಲಗಳನ್ನು ಹೊಂದಿಸಿರು ವುದು ಡಿಕೆಶಿ. ಭಾರತ್ ಜೋಡೋ ಯಾತ್ರೆ, ಮೇಕೆದಾಟು ಸೇರಿದಂತೆ ಕಾಂಗ್ರೆಸ್ನಿಂದ ಎಲ್ಲ ಸಮಾವೇಶಗಳಲ್ಲಿ ‘ಫಂಡಿಂಗ್’ ಮಾಡಿರುವುದು ಶಿವಕುಮಾರ್ ಎನ್ನುವುದು ಓಪನ್ ಸೀಕ್ರೆಟ್. ಇದಿಷ್ಟೇ ಅಲ್ಲದೇ ಮೊನ್ನೆ ನಡೆದ ವಿಧಾನಸಭಾ ಚುನಾವಣೆ ಯಲ್ಲಿಯೂ ಹಲವು ಶಾಸಕರಿಗೆ ಡಿಕೆ ‘ತನು-ಮನ-ಧನ’ದ ಸಹಾಯವನ್ನು ನೇರ ಅಥವಾ ಪರೋಕ್ಷವಾಗಿ ಮಾಡಿದ್ದಾರೆ.
ಹಾಗೆ ನೋಡಿದರೆ, ಸದನದೊಳಗೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಡಿದ ಹತ್ತರಷ್ಟು ಕೆಲಸವನ್ನು ಸದನದ
ಹೊರಗೆ ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ಅವರೇ ಹೇಳಿದ್ದಂತೆ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಕೈಚೆಲ್ಲಿದ
ಪರಿಸ್ಥಿತಿಯಲ್ಲಿ ಪಕ್ಷದ ನೊಗ ಹೊತ್ತ ಡಿಕೆ, ಸಂಘಟನೆಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರಿಗಿರುವ ಬಹುದೊಡ್ಡ ನೆಗೆಟಿವ್ ಎಂದರೆ, ಅವರ ವಿರುದ್ಧವಿರುವ ಹತ್ತು ಹಲವು ಪ್ರಕರಣಗಳು.
ಮುಖ್ಯಮಂತ್ರಿಯಾಗುತ್ತಿದ್ದಂತೆ, ಈ ಕೇಸ್ಗಳಲ್ಲಿ ಕೇಂದ್ರ ಸರಕಾರ ಸಮನ್ಸ್ ಜಾರಿ ಮಾಡಿದರೆ ಪಕ್ಷಕ್ಕೆ ಬಹುದೊಡ್ಡ ಮುಜುಗರ ಎನ್ನುವುದು ಕಾಂಗ್ರೆಸ್ ನಾಯಕರ ಮಾತಾಗಿದೆ. ಇದರೊಂದಿಗೆ ಫಂಡಿಂಗ್ ವಿಷಯದಲ್ಲಿ ಡಿಕೆ ಮುಂದಿದ್ದರೂ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ
‘ಹಿಡಿತ’ವಿನ್ನೂ ಸಾಽಸಿಲ್ಲ. ಇದರೊಂದಿಗೆ ಮುಖ್ಯಮಂತ್ರಿಯಾದ ಬಳಿಕ ‘ಎಲ್ಲರನ್ನು ನಿಭಾಯಿಸುವ’ ಡಿಪ್ಲೊಮಸಿಯ ಕೊರತೆ ಯೂ ಮೇಲ್ನೋಟಕ್ಕೆ ಕಾಣುತ್ತದೆ. ಈ ಎರಡರೊಂದಿಗೆ ಕಾಂಗ್ರೆಸ್ ನೀಡಿರುವ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸುವು ದಕ್ಕೆ ಇರುವ ಆರ್ಥಿಕ ಇತಿಮಿತಿಗಳನ್ನು ಮೀರಿ ಆಡಳಿತ ನಡೆಸುವಷ್ಟು ‘ಪಳಗಿಲ್ಲ’ ಎನ್ನುವುದು ಹಲವರ ಮಾತು.
ಈ ರೀತಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಅವರದ್ದೇ ಆದ ‘ಪಾಸಿಟಿವ್-ನೆಗೆಟಿವ್’ ಅಂಶಗಳಿವೆ. ಆದರೆ ಪಕ್ಷಕ್ಕೆ ಇಬ್ಬರೂ ಅನಿವಾರ್ಯವಾಗಿರುವುದರಿಂದ ಇಬ್ಬರಲ್ಲಿ ಯಾರಿಗೆ ಸ್ಥಾನ ನೀಡಿ, ಯಾರನ್ನು ಸಮಾಧಾನ ಪಡಿಸಬೇಕು ಎನ್ನುವುದನ್ನು ಬಹುಶಃ ಈ ಅಂಕಣ ಓದುವ ಹೊತ್ತಿಗೆ ಹೈಕಮಾಂಡ್ ನಿರ್ಧರಿಸುವ ಲಕ್ಷಣಗಳಿವೆ. ಹಾಗೆಂದು ೫೦;೫೦ ಫಾರ್ಮುಲಾವನ್ನು ನಿಗದಿಪಡಿಸಲು ಹೈಕಮಾಂಡ್ ಯೋಚಿಸಿದ್ದೂ ಸುಳ್ಳಲ್ಲ. ಆದರೆ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಇಬ್ಬರಲ್ಲಿ ಯಾರಿಗೇ ಮೊದಲು ಮುಖ್ಯಮಂತ್ರಿಯಾಗಲು ಅವಕಾಶ ನೀಡಿದರೂ, ೨.೫ ವರ್ಷದ ಬಳಿಕ ಅಽಕಾರವನ್ನು ಮರಳಿ ಅಧಿಕಾರವನ್ನು ಇನ್ನೊಬ್ಬರಿಗೆ ಹಸ್ತಾಂತರಿಸಿಯೇ ಬಿಡುತ್ತಾರೆ ಎನ್ನುವ ವಿಶ್ವಾಸ ಒಬ್ಬರ ಮೇಲೆ ಇನ್ನೊಬ್ಬರಿಗಿಲ್ಲ.
ಇದಿಷ್ಟೇ ಅಲ್ಲದೇ, ಕರ್ನಾಟಕ ಚುನಾವಣೆಯನ್ನು ಗಮನಿಸಿರುವ ಇಬ್ಬರೂ ನಾಯಕರಿಗೂ, ಒಮ್ಮೆ ಅಧಿಕಾರಕ್ಕೆ ಬಂದರೆ ಇನ್ನೊಮ್ಮೆ ಆಯ್ಕೆಯಾಗುವುದು ಸಾಧ್ಯವಿಲ್ಲ ಎನ್ನುವ ಅರಿವಿದೆ. ಇಬ್ಬರಿಗೂ ವಯಸ್ಸಿನ ಕಾರಣದಿಂದ ನೋಡುವುದಾದರೆ,
೨೦೩೩ರ ವೇಳೆಗೆ ಮುಖ್ಯಮಂತ್ರಿಯಾಗುವ ಅವಕಾಶಗಳು ಇರುವುದಿಲ್ಲ. ಆದ್ದರಿಂದ ಇಬ್ಬರೂ ತಮಗೇ ಮುಖ್ಯಮಂತ್ರಿ
ಹುದ್ದೆ ಬೇಕೆಂದು ಗಟ್ಟಿ ಹಿಡಿದಿದ್ದಾರೆ. ಈ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭವಾಗುವ ಸಾಧ್ಯತೆ ಇಲ್ಲವೇ ಇಲ್ಲ!
ಸಿದ್ದರಾಮಯ್ಯನವರ ವರ್ಚಸ್ಸು, ಡಿಕೆ ಶಿವಕುಮಾರ್ ಅವರ ಸಂಘಟನೆ ಛಾತಿ ಎರಡು ಮಾತ್ರವಲ್ಲ, ಕಾಂಗ್ರೆಸ್ ಈ
ಪ್ರಮಾಣದಲ್ಲಿ ಸೀಟು ಗೆಲ್ಲಲು, ಲೋಕಸಭಾ ಚುನಾವಣೆಗೂ ಮೊದಲು ಕರ್ನಾಟಕದಲ್ಲಿ ಸರಕಾರ ರಚಿಸಲು ಸಾಧ್ಯವಾಗಿದ್ದು ‘ಗ್ಯಾರಂಟಿ’ಯಿಂದ. ಚುನಾವಣೆಗೆ ಮೊದಲು ಈ ಇಬ್ಬರು ‘ಜೋಡೆತ್ತಿನಂತೆ’ ಕಾರ್ಯನಿರ್ವಹಿಸಿದಂತೆಯೇ ಗ್ಯಾರಂಟಿಗಳ ಜಾರಿಯಲ್ಲೂ ಆಗಬೇಕಾದ ಅನಿವಾರ್ಯವಿದೆ. ಆದರೆ ಮುಖ್ಯಮಂತ್ರಿ ಖುರ್ಚಿಯಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಕೂರಲು ಸಾಧ್ಯವಿರುವುದರಿಂದ ಯಾರಾದರೂ ಒಬ್ಬರೂ ಸೋಲಲೇಬೇಕು. ಈ ಸೋಲಿನಿಂದ ಸರಕಾರದ ಚುಕ್ಕಾಣಿ ಹಿಡಿಯದಿದ್ದರೂ, ಮುಂದಿನ ದಿನದಲ್ಲಿ ಪಕ್ಷದಲ್ಲಿ ‘ದೊಡ್ಡವರಾಗುವುದಂತೂ’ ಸುಳ್ಳಲ್ಲ. ಆದರೆ ಭವಿಷ್ಯದ ಲಾಭಕ್ಕಾಗಿ, ಕಣ್ಮುಂದಿರುವ ‘ಹುದ್ದೆ’ ಯನ್ನು ಬಿಟ್ಟುಕೊಡುವುದಕ್ಕೆ ಸಿದ್ಧರಾಗುವ ಉದಾರ ಮನೋಭಾವದ ಹಿಂದೆ ಹಲವು ಚೌಕಾಶಿಗಳು ನಡೆಯುವುದಂತೂ ನಿಶ್ಚಿತ.