Tuesday, 10th December 2024

ಕಾಂಗ್ರೆಸ್‌ನೊಳಗೆ ಕೆಸಿಆರ್‌ ಸಿಡಿಸಿದ ಗರ್ನಲ್ಲು

ಮೂರ್ತಿ ಪೂಜೆ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ಐನೂರು ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂಬ ಗರ್ನಂದು ಮೊನ್ನೆ ಸಿಡಿಯಿತು. ದೊಡ್ಡ ಸೈಜಿನ ಈ ಗರ್ನಲ್ಲು ಹಾರಿಸಿದವರು ತೆಲಂಗಾಣದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರೇವಂತ ರೆಡ್ಡಿ.

ಅವರ ಪ್ರಕಾರ, ಕರ್ನಾಟಕದ ೨೫ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಆ ಮೂಲಕ ಕೈ ಪಾಳೆಯದ ಮತಗಳು ವಿಭಜನೆಯಾಗುವಂತೆ ಮಾಡಬೇಕು ಅಂತ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರಿಗೆ ಕೆಸಿಆರ್ ಹೇಳಿದ್ದಾರೆ. ಇದಕ್ಕಾಗಿ ಐನೂರು ಕೋಟಿ ಸುಪಾರಿ ಕೊಟ್ಟಿದ್ದಾರೆ. ಹಾಗಂತ ಅವರು ಗರ್ನಲ್ಲು ಹಾರಿಸಿದ ಕೂಡಲೇ ಕರ್ನಾಟಕದ ರಾಜಕಾರಣದಲ್ಲಿ ಅದು ದೊಡ್ಡ ಸೌಂಡು ಮಾಡಿತು, ಅದರ ಹಿಂದೆಯೇ ಸಿದ್ದರಾಮಯ್ಯ ಆಪ್ತರಾದ ಶಾಸಕ ಜಮೀರ್ ಅಹ್ಮದ್ ಅವರ ಹೆಸರು ಕೇಳಿ ಬರತೊಡಗಿತು. ಅಂದ ಹಾಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ಅವರಿಗೆ ಕರ್ನಾಟಕದ ನೆಲೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬ ಆಸೆ ಇರುವುದು ನಿಜ.

ಅದಕ್ಕಾಗಿ ಜೆಡಿಎಸ್ ಕೈಗೆ ಅವರು ಶಕ್ತಿ ತುಂಬಲು ಹೊರಟಿರುವುದೂ ನಿಜ. ಈ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಜತೆಗಿರುವ ಮುಸ್ಲಿಂ ಮತ ಬ್ಯಾಂಕ್ ವಿಭಜನೆಯಾದರೆ ಹಳೆ ಮೈಸೂರು ಭಾಗದಲ್ಲಿ ಅದು ಜೆಡಿಎಸ್‌ಗೆ ಒಂದು ಮಟ್ಟದಲ್ಲಿ ಲಾಭ ತಂದು ಕೊಡುವುದೂ ನಿಜ. ಯಾಕೆಂದರೆ ಹಳೆ ಮೈಸೂರಿನ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಹೀಗಾಗಿ ಕಾಂಗ್ರೆಸ್ ಹಿಂದಿರುವ ಮುಸ್ಲಿಂ ಮತಗಳು ವಿಭಜನೆಯಾದರೆ ಅದು ಜೆಡಿಎಸ್ ಗೆ ಪ್ಲಸ್ ಆಗುವುದು ನಿಜ. ಹೀಗೆ ಜೆಡಿಎಸ್ ಬಲ ಹೆಚ್ಚಾಗಿ ಅದು ಗೆಲ್ಲುವ ಸೀಟುಗಳ ಸಂಖ್ಯೆ ಐವತ್ತರ ಗಡಿಗೆ ತಲುಪಿದರೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯ ಸಾಧ್ಯತೆ ಹೆಚ್ಚಾಗುತ್ತದೆ.

ಅತಂತ್ರ ವಿಧಾನಸಭೆ ಅನಿವಾರ್ಯವಾದರೆ ಜೆಡಿಎಸ್ ಕಿಂಗ್ ಮೇಕರ್ ಆಗಿ ವಿಜೃಂಭಿಸುತ್ತದೆ. ರೇವಂತರೆಡ್ಡಿ ಹೇಳುವುದು ನಿಜವೇ ಆದರೆ ಅವರ ಸುಪಾರಿ ಕತೆಗೆ ಒಂದಷ್ಟು ರೆಕ್ಕೆ ಪುಕ್ಕ ಸಿಕ್ಕಂತಾಗುತ್ತದೆ. ಆದರೆ ಈ ಎಪಿಸೋಡಿಗೆ ಇನ್ನೂ ಕೆಲ ಟ್ವಿಸ್ಟುಗಳಿವೆ. ಯಾಕೆಂದರೆ ಕರ್ನಾಟಕದಲ್ಲಿ ಮುಸ್ಲಿಂ
ಮತಗಳು ವಿಭಜನೆಯಾಗಬೇಕು ಅಂತ ಬಹುದೊಡ್ಡ ಕನಸು ಕಾಣುತ್ತಿರುವುದು ಬಿಜೆಪಿ. ಎಷ್ಟು ಸಾಧ್ಯವೋ? ಅಷ್ಟರ ಮಟ್ಟಿಗೆ ಮುಸ್ಲಿಂ ಮತಗಳು ವಿಭಜನೆಯಾಗಬೇಕು ಎಂಬುದು ಅದರ ರಣತಂತ್ರ.

ಹೀಗಾಗಿ ಮುಸ್ಲಿಮರ ಮತಗಳು ವಿಭಜನೆಯಾದರೆ ರಾಜ್ಯದ ಕೆಲವು ಭಾಗಗಳಲ್ಲಿ ಜೆಡಿಎಸ್ ಹೇಗೆ ಲಾಭ ಪಡೆಯುತ್ತದೋ?ಬಿಜೆಪಿ ಕೂಡಾ ಲಾಭ ಪಡೆಯುತ್ತದೆ. ಇದು ಕೆಸಿಆರ್‌ಗೆ ಗೊತ್ತಿರದ ಸಂಗತಿ ಏನಲ್ಲ. ಹೀಗೆ ಗೊತ್ತಿದ್ದರೂ ಅವರು ಸುಪಾರಿ ಕೊಟ್ಟರೇ? ಯಾಕೆಂದರೆ ಕೆಸಿಆರ್ ಅವರಿಗೆ ಕಾಂಗ್ರೆಸ್ ಮಿತ್ರನೇನಲ್ಲ. ಆದರೆ ಬಿಜೆಪಿ ಮಾತ್ರ ಹೇಳಿ ಕೇಳಿ ಶತ್ರು. ನರೇಂದ್ರಮೋದಿ-ಅಮಿತ್ ಶಾ ಹೆಸರನ್ನು ಕೇಳಿದರೆ ಇವತ್ತಿಗೂ ಕೆಸಿಆರ್ ಕುದಿಯುತ್ತಾರೆ. ಅಷ್ಟೇ ಅಲ್ಲ, ಬಿಜೆಪಿಯ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಶಕ್ತಿ ಕ್ರೋಢೀಕರಿಸುತ್ತಿದ್ದಾರೆ.

ಅಂತವರು ಗೊತ್ತಿದ್ದೂ ಗೊತ್ತಿದ್ದು ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲವಾಗುವ ತಂತ್ರ ಹೆಣೆಯುತ್ತಾರಾ? ಎಂಬುದು ಹಲವರ ಅನುಮಾನ. ಅದೇ ರೀತಿ ಜಮೀರ್ ಅಹ್ಮದ್ ಕೆಸಿಆರ್ ಕೈಲಿ ಸುಪಾರಿ ಪಡೆಯುವಷ್ಟು ಪ್ರಬಲ ನಾಯಕರಾ? ಎಂಬುದು ಮತ್ತೊಂದು ಅನುಮಾನ. ಎಲ್ಲಕ್ಕಿಂತ ಮುಖ್ಯ ವಾಗಿ ಅವರು ಸನ್ನೆ ಮಾಡಿದ ತಕ್ಷಣ ಕಾಂಗ್ರೆಸ್ ವಿರುದ್ದ ತಿರುಗಿ ಬೀಳಲು ಕರ್ನಾಟಕದ ಮುಸ್ಲಿಮರು ಸಜ್ಜಾಗುತ್ತಾರಾ? ಎಂಬುದು ಮಗದೊಂದು ಅನುಮಾನ. ಈ ಎಲ್ಲದರ ನಡುವೆ ಜಮೀರ್ ಅಹ್ಮದ್ ನಿಂತಿರುವ ನೆಲೆ ಅಲುಗಾಡುತ್ತಿದೆ. ಅವರ ಸುತ್ತ ಅದಾಗಲೇ ಇ.ಡಿ ಯ ಕರಿನೆರಳು ಆವರಿಸಿಕೊಂಡಿದೆ.

ಹೀಗೆ ಆವರಿಸಿಕೊಂಡ ನೆರಳು ಅವರನ್ನು ಬಿಜೆಪಿಯ ಕೈಗೊಂಬೆ ಮಾಡುವ ಸಾಧ್ಯತೆ ಹೆಚ್ಚೇ ಹೊರತು ಕೆಸಿಆರ್ ಅವರ ಸುಪಾರಿ ಮ್ಯಾನ್ ಮಾಡುವುದು ಕಷ್ಟ. ಇಷ್ಟಾದರೂ ಇಂತಹ ಆರೋಪ ಕೇಳಿ ಬರುತ್ತಿದೆ ಎಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಹಣಿಯಲು ಬಿಜೆಪಿಯ ಕೇಂದ್ರ ನಾಯಕರು ಬೇರೆ ಬೇರೆ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ ಎಂದೇ ಅರ್ಥ.  ಅದೇನೇ ಇದ್ದರೂ ಇವತ್ತಿನ ಸ್ಥಿತಿಯಲ್ಲಿ ರೇವಂತರೆಡ್ಡಿ ಅವರ ಆರೋಪವನ್ನು ಸಾರಾಸಗಟಾಗಿ ನಂಬುವುದು ಕಷ್ಟ. ಆದರೆ ಈ ಎಪಿಸೋಡಿನ ಮೂಲಕ ಅಽಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ಸನ್ನು ಬಡಿಯುವ ಯತ್ನ ನಡೆದಿರುವುದು ಮಾತ್ರ ನೂರಕ್ಕೆ ನೂರು ನಿಜ.

ಅದೇನೇ ಇರಲಿ, ರೇವಂತರೆಡ್ಡಿ ಅವರ ಆರೋಪವನ್ನು ಪುಷ್ಟೀಕರಿಸುವ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಜಮೀರ್ ಅಹ್ಮದ್ ಅವರನ್ನು ಅನುಮಾನದ ಕಣ್ಣುಗಳಿಂದ ನೋಡುವವರು ಮಾತ್ರ ನಿಶ್ಚಿತವಾಗಿ ಹೆಚ್ಚಾಗಲಿದ್ದಾರೆ. ಯಾಕೆಂದರೆ ರಾಜ್ಯ ಕಾಂಗ್ರೆಸ್ ನಲ್ಲಿ ಜಮೀರ್ ಅಹ್ಮದ್ ಅವರನ್ನು ವಿರೋಧಿ ಸುವವರ ಸಂಖ್ಯೆ ದೊಡ್ಡದು. ಈಗ ಕೇಳಿ ಬಂದಿರುವ ಆರೋಪದ ಬೆಂಕಿಗೆ ಅವರು ಗಾಳಿ ಹಾಕಿ ಉರಿ ಹೆಚ್ಚಿಸುವುದು ಸಹಜ.

ಸಿದ್ದು ತಲೆಗೆ ಬಿತ್ತು ಅನುಮಾನದ ಬೀಜ

ಕುತೂಹಲಕಾರಿ ಸಂಗತಿ ಎಂದರೆ ಈ ಸುಪಾರಿ ಎಪಿಸೋಡು ಸಿಡಿಯುವ ಕಾಲಕ್ಕೆ ಸರಿಯಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತಲೆಗೆ ಅನುಮಾನದ ಬೀಜವೊಂದು ಬಿದ್ದಿದೆ. ಅದೆಂದರೆ, ಕರ್ನಾಟಕದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಮೋದಿ-ಅಮಿತ್ ಶಾ ಜೋಡಿ ಇದಕ್ಕಾಗಿ ರಾಜ್ಯ ಕಾಂಗ್ರೆಸ್ ನಲ್ಲಿರುವ ಒಡಕನ್ನು ಹಿಗ್ಗಿಸಲು ಬಯಸಿದೆಯಂತೆ. ಈ ಒಡಕು ಯಾವುದು? ಎಂಬುದು ರಹಸ್ಯವೇನಲ್ಲ.

ಚುನಾವಣೆಯಲ್ಲಿ ಪಕ್ಷ ಗೆದ್ದರೆ ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಸಿದ್ಧರಾಮಯ್ಯ, ಡಿಕೆಶಿಯ ಮನ:ಸ್ಥಿತಿಯೇ ಈ ಒಡಕು. ದಿನ ಕಳೆದಂತೆ ಇದು ಈ ಒಡಕಿನ ಕಂದರ ಹಿಗ್ಗಬೇಕು. ಚುನಾವಣೆಯ ಟಿಕೆಟ್ಟಿಗಾಗಿ ಕೈ ಪಾಳೆಯದಲ್ಲಿ ಮಾರಾಮಾರಿ ಆಗಬೇಕು. ಈ ಮಾರಾಮಾರಿ ಅತಿಯಾದರೆ ಟಿಕೆಟ್ಟು ಸಿಗದ ಆಕಾಂಕ್ಷಿಗಳು ಬೇರೆ ಕಡೆ ವಲಸೆ ಹೋಗಬೇಕು. ಹೀಗೆ ಹೋದವರು ಕಾಂಗ್ರೆಸ್ಸಿನ ಮತಗಳನ್ನು ಒಡೆದರೆ ಬಿಜೆಪಿಗೆ ದೊಡ್ಡ ಗೆಲುವು ದಕ್ಕಲು ಸಾಧ್ಯ.

ಇದು ಸಾಧ್ಯವಾಗಬೇಕಾದರೆ ಕೈ ಪಾಳೆಯದಲ್ಲಿ ಡಿಕೆಶಿ ಬಲ ಹೆಚ್ಚಬೇಕು. ಒಂದು ವೇಳೆ ಐಟಿ, ಸಿಬಿಐ ಕಿರುಕುಳ ಅತಿಯಾದರೆ ಏನಾಗುತ್ತದೆ? ಸಹಜವಾಗಿಯೇ ಸಿದ್ಧರಾಮಯ್ಯ ಪವರ್ ಫುಲ್ ಆಗುತ್ತಾ ಹೋಗುತ್ತಾರೆ. ಹಾಗೇನಾದರೂ ಆಗಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಸಿಎಂ ಕ್ಯಾಂಡಿ
ಡೇಟ್ ಎಂಬುದು ನಿಕ್ಕಿಯಾದರೆ ಕಾಂಗ್ರೆಸ್ ಪಕ್ಷದ ಶಕ್ತಿ ಹೆಚ್ಚಬಹುದು. ಮತ್ತು ಅದು ಅಧಿಕಾರ ಹಿಡಿಯುವ ಲೆವೆಲ್ಲಿಗೆ ತಲುಪಬಹುದು. ಹಾಗಾಗ ಬಾರದು ಎಂದರೆ ಕೈ ಪಾಳೆಯದಲ್ಲಿ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಪ್ರಬಲ ಎದುರಾಳಿ ಆಗಿರಲೇಬೇಕು. ಹೀಗಾಗಿ ಐಟಿ, ಸಿಬಿಐ ಮೂಲಕ ಡಿಕೆಶಿಗೆ
ಕಿರುಕುಳ ಆಗಬಾರದು ಅಂತ ಮೋದಿ-ಅಮಿತ್ ಶಾ ನಿರ್ಧರಿಸಿದ್ದಾರೆ ಎಂಬುದು ಸಿದ್ಧರಾಮಯ್ಯ ಅವರ ಖಾಸಾ ಪಡೆ ತಂದಿರುವ ವರ್ತಮಾನ.

ಸಹಜವಾಗಿಯೇ ಇದು ಸಿದ್ಧರಾಮಯ್ಯ ಅವರ ತಲೆಯಲ್ಲಿ ಅನುಮಾನದ ಬೀಜ ಬಿತ್ತಿದೆ.

೮೫ ಸೀಟಿಗೆ ನಡೆಯಲಿದೆ ಯುದ್ಧ

ಈ ಮಧ್ಯೆ ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಕುತೂಹಲಕಾರಿ ಸರ್ವೆ ರಿಪೋರ್ಟು ಕಾಂಗ್ರೆಸ್ ನಾಯಕರಿಗೆ ತಲುಪಿದೆ. ಅದರ ಪ್ರಕಾರ, ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳ ಪೈಕಿ ೧೩೯ ಕ್ಷೇತ್ರಗಳ ಫಲಿತಾಂಶ ನಿಕ್ಕಿಯಾಗಿದೆಯಂತೆ. ಅರ್ಥಾತ್,ಈ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುವವರು ಯಾರು? ಎಂಬುದು ಖಚಿತವಾಗಿದೆ. ಅದರ ಪ್ರಕಾರ, ಕಾಂಗ್ರೆಸ್ ಪಕ್ಷ ೫೮ ಕ್ಷೇತ್ರಗಳಲ್ಲಿ, ಆಡಳಿತಾರೂಢ ಬಿಜೆಪಿ ೫೬ ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ ೨೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಪಕ್ಕಾ.

ಹೀಗಾಗಿ ಉಳಿದ ೮೫ ಕ್ಷೇತ್ರಗಳಲ್ಲಿ ಗೆಲುವು ಪಡೆಯುವವರು ಯಾರು? ಎಂಬುದು ತೀರ್ಮಾನವಾಗಬೇಕು. ಹೀಗಾಗಿ ರಾಜಕೀಯ ಪಕ್ಷಗಳು
ಕಣಕ್ಕಿಳಿಸುವ ಅಭ್ಯರ್ಥಿಗಳು ಯಾರು? ಅವರು ರೂಪಿಸುವ ಯುದ್ದ ತಂತ್ರಗಳೇನು? ಆಯಾ ಕ್ಷೇತ್ರದಲ್ಲಿ ರೂಪುಗೊಳ್ಳುವ ಹವಾ ಹೇಗಿರುತ್ತದೆ? ಎಂಬುದು ಗೆಲುವಿಗೆ ಮುಖ್ಯ ವಾಗಲಿದೆ. ಮತ್ತು ಮುಂದಿನ ಬಾರಿ ಅಽಕಾರಕ್ಕೆ ಬರುವವರು ಯಾರು? ಅಂತ ನಿರ್ಧರಿಸುತ್ತದೆ ಎಂಬುದು ಈ ಸರ್ವೆ
ರಿಪೋರ್ಟಿನ ವಿವರ.

ಅರ್ಥಾತ್, ಕರ್ನಾಟಕದಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ವಿಶ್ವಾಸ ಯಾವ ರಾಜಕೀಯ ಪಕ್ಷಗಳಲ್ಲೂ ಇಲ್ಲ. ಆದರೆ ಇಂತಹ ಅನಿಶ್ಚಿತ ವಾತಾವರಣ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿಯವರ ಮುಖಕ್ಕೆ ಹೊಳಪು ನೀಡುತ್ತಿರುವುದು ನಿಜ.

ಯೋಗಿಗೆ ದಿಲ್ಲಿ ಕನಸು
ಅಂದ ಹಾಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂಬುದು ದಿನ ಕಳೆದಂತೆ ತೋಳ ಬಂತು ತೋಳ ಕತೆಯಂತೆ ಭಾಸವಾಗುತ್ತಿದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸಕ್ತಿ ತೋರಿದರೂ ಸಂಪುಟ ವಿಸ್ತರಣೆಯ ಡೇಟು ಮುಂದು ಮುಂದಕ್ಕೆ ಹೋಗುತ್ತಿದೆ. ಏನೇ ಆಗಲಿ,
ಜನವರಿ ಹದಿನಾರು ಇಲ್ಲವೇ ಹದಿನೆಂಟಕ್ಕೆ ವಿಸ್ತರಣೆ ಗ್ಯಾರಂಟಿ ಅಂತ ಬೊಮ್ಮಾಯಿ ಆಪ್ತರ ಮುಂದೆ ಹೇಳಿಕೊಂಡಿದ್ದರಾದರೂ ಅದೀಗ ೨೩ ಇಲ್ಲವೇ ೨೫ರ ಡೇಟಿಗೆ ಮುಂದೂಡಲ್ಪಟ್ಟಿದೆ.

ಅಷ್ಟೇ ಅಲ್ಲ, ಹಿರಿಯ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರನ್ನು ಹೊರತು ಪಡಿಸಿದರೆ ಬೇರೆಯವರಿಗೆ ನಂಬಿಕೆಯೇ ಹೊರಟು ಹೋಗಿದೆ. ಎಷ್ಟೇ ಆದರೂ ಇದು ಈಶ್ವರಪ್ಪ ಅವರಿಗೆ ಪ್ರತಿಷ್ಟೆಯ ಪ್ರಶ್ನೆ. ಹೀಗಾಗಿ ಮಂತ್ರಿ ಮಂಡಲಕ್ಕೆ ಸೇರುವ ಅವರ ಕನಸು ಗಟ್ಟಿಯಾಗಿಯೇ ಇದೆ. ಈ ಮಧ್ಯೆ ಮಂತ್ರಿಗಿರಿಯ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಬೊಮ್ಮಾಯಿ ಕ್ಯಾಬಿನೆಟ್ಟಿನ ಕನಸು ಮರೆತು ನರೇಂದ್ರ ಮೋದಿ ನೇತೃತ್ವದ ಸೆಂಟ್ರಲ್ ಕ್ಯಾಬಿನೆಟ್ಟಿನ ಕನಸು ಕಾಣತೊಡಗಿದ್ದಾರೆ.

ಅವರ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಚನ್ನಪಟ್ಟಣ ಕ್ಷೇತ್ರದಿಂದ ಸ್ಪಽಸಿದರೂ ಗೆಲುವು ಸಿಗುತ್ತದೆ ಎಂಬುದು ಗ್ಯಾರಂಟಿ ಇಲ್ಲ. ಹೀಗಾಗಿ ೨೦೨೪ರ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅವರ ಯೋಚನೆ. ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಪ್ರತಿನಿಽಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ತಾವು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದು ಯೋಗಿಯ ಯೋಚನೆ. ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗ ಬಿಜೆಪಿಯ ಗ್ರಾಫ್ ಏರುತ್ತಿದೆ.

ಈ ಮಧ್ಯೆ ಡಿ.ಕೆ. ಸುರೇಶ್ ಅವರನ್ನು ಸೋಲಿಸಲೇಬೇಕು ಎಂಬ ಹಟಕ್ಕೆ ಜೆಡಿಎಸ್‌ನಲ್ಲಿ ಇಲ್ಲವಾದರೂ ಡಿಕೆ ಬ್ರದರ್ಸ್ ವಿರುದ್ಧ ನಿಂತಿರುವ ಸಚಿವ ಡಾ. ಅಶ್ವಥ್ಥನಾರಾಯಣ ಅವರಿಗೆ ಬಿಜೆಪಿಯನ್ನು ಗೆಲ್ಲಿಸಬೇಕೆಂಬ ಹಟವಿದೆ. ಇದೇ ಕಾರಣಕ್ಕಾಗಿ ರಾಮನಗರವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ರೂಪಿ
ಸಲು ಹೊರಟಿರುವ ಅಶ್ವತ್ಥನಾರಾಯಣ್ ಸದ್ಯವೇ ’ರಾಮರಾಜ್ಯ’ ಸಮಾವೇಶ ನಡೆಸಲು ಸಿದ್ದತೆ ನಡೆಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸಿ ರಾಮರಾಜ್ಯ ಸಮಾವೇಶ ನಡೆಸಲಿರುವ ಅಶ್ವತ್ಥನಾರಾಯಣ್ ಜಿಯಲ್ಲಿ ಬಿಜೆಪಿ ಹವಾ ಹೆಚ್ಚಿಸಲು
ಸತತ ಕಸರತ್ತು ನಡೆಸುತ್ತಿzರೆ. ಅವರ ಕಸರತ್ತು ಮತ್ತು ಉಳಿದ ಕ್ಷೇತ್ರಗಳಲ್ಲಿರುವ ಬಿಜೆಪಿ ಶಕ್ತಿ ಸೇರಿದರೆ ತಾವು ಸಂಸತ್ತಿಗೆ ಹೋಗುವುದು ಪಕ್ಕಾ ಎಂಬುದು ಯೋಗೀಶ್ವರ್ ಯೋಚನೆ.

ಹೀಗೆ ತಮ್ಮ ಕನಸು ಈಡೇರಿದರೆ ೨೦೨೪ ರಲ್ಲಿ ಸೆಂಟ್ರಲ್ ಮಿನಿಸ್ಟರ್ ಆಗುವುದು ಗ್ಯಾರಂಟಿ ಎಂಬುದು ಅವರ ವಿಶ್ವಾಸ. ತಮ್ಮ ಈ ನಂಬಿಕೆಗೆ ಸಂಘ ಪರಿವಾರದ ನಾಯಕ ಬಿ.ಎಲ್. ಸಂತೋಷ್ ಪುಷ್ಟಿ ನೀಡುತ್ತಾರೆ ಎಂದವರು ನಂಬಿದ್ದಾರೆ.

Read E-Paper click here