ವಿಶ್ಲೇಷಣೆ
ಡಾ.ಸುಧಾಕರ ಹೊಸಳ್ಳಿ
ಅಕ್ಟೋಬರ್ 8ರಂದು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲ ಅರ್ಥ ಕಳೆದುಕೊಂಡು ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿ ಬಂತು. 370ನೇ ವಿಧಿ ರದ್ದತಿ ನಂತರದ ಈ ಚುನಾವಣೆ ರಕ್ತಪಾತಕ್ಕೆ ಸಾಕ್ಷಿಯಾಗಬಹುದೆಂಬ ಲೆಕ್ಕಾಚಾರಗಳೆಲ್ಲ ಬುಡಮೇಲಾಗಿ ಬಹುಪಾಲು ಶಾಂತಿಯುತವಾಗಿ ಮತದಾನ ನಡೆಯಿತು. ಜಮ್ಮು- ಕಾಶ್ಮೀರ ನ್ಯಾಷನಲ್ ಕಾನರೆನ್ಸ್ (ಜೆಕೆಎನ್ಸಿ) ಪಕ್ಷದ ನೇತೃತ್ವದ ಸರಕಾರದ ರಚನೆಯೂ ಆಯಿತು.
ಹಿಂದೂಗಳೇ ಹೆಚ್ಚಿರುವ ಜಮ್ಮುವಿನಲ್ಲಿ ಬಿಜೆಪಿ, ಮುಸ್ಲಿಮರೇ ಹೆಚ್ಚಿರುವ ಕಾಶ್ಮೀರದಲ್ಲಿ ಜೆಕೆಎನ್ಸಿ-ಕಾಂಗ್ರೆಸ್ ಮೈತ್ರಿಕೂಟ ಸಹಜವಾಗಿಯೇ ಗೆದ್ದಿವೆ. “370ನೇ ವಿಧಿಯ ರದ್ದತಿಯಿಂದಾಗಿ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ, ಶಾಂತಿ ಸ್ಥಾಪನೆಯಾಗಿದೆ, ಭಯೋತ್ಪಾದಕರ ಗುಂಡುಗಳ ಸದ್ದಡಗಿದೆ, ಸಂವಿಧಾನ ತನ್ನ ಮಹತ್ವವನ್ನು ಸಾರಿದೆ. ಹಾಗಾಗಿ ನಾವು ಜಮ್ಮು ಮಾತ್ರವಲ್ಲದೆ ಕಾಶ್ಮೀರದಲ್ಲೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ” ಎಂಬ ಭ್ರಮೆಯಲ್ಲಿದ್ದ ಬಿಜೆಪಿಗೆ ಈಗ ಎಚ್ಚರವಾದಂತಿದೆ.
ಅದೇ ರೀತಿ, “ಮುಸ್ಲಿಮರ ವೋಟುಗಳ ಜತೆಗೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ನೊಂದಿಗೆ ಮೈತ್ರಿ
ಇರುವುದರಿಂದ ಜಮ್ಮುವಿನಲ್ಲೂ ಹೆಚ್ಚು ಸ್ಥಾನ ಗಳಿಸುತ್ತೇವೆ” ಎಂದು ಬೊಬ್ಬೆ ಹಾಕಿದ್ದ ಜೆಕೆಎನ್ಸಿ ತನ್ನ ನಂಬುಗೆಗೆ ಬೆನ್ನು ತೋರಿಸುವಂತಾಗಿದೆ. ಹಾಗಾದರೆ, ಪ್ರಜ್ಞಾವಂತ ಪ್ರಜಾವಲಯಕ್ಕೆ ಈ ಚುನಾವಣೆ ಕಟ್ಟಿಕೊಟ್ಟ ಸಂದೇಶ ವಾದರೂ ಏನು? 370ನೇ ವಿಧಿಯ ರದ್ದತಿಯು ಮುಸ್ಲಿಮರಲ್ಲಿ ಸಂವಿಧಾನದ ಮೇಲೆ ಪ್ರೀತಿಯನ್ನು ಹುಟ್ಟು
ಹಾಕಿದೆಯೇ? ‘ಜೈ ಭೀಮ್-ಜೈ ಮೀಮ್’ ಘೋಷಣೆಯ ನೈಜತೆಯೇನು? ಜಮ್ಮು-ಕಾಶ್ಮೀರದ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವೇ? ಈ ಚುನಾವಣೆಯು ಸಾಮಾಜಿಕ ನ್ಯಾಯವನ್ನು ಯಾವ ಪರಿಯಲ್ಲಿಟ್ಟಿದೆ? ಮುಂತಾದ ವಿಷಯಗಳ ಕುರಿತು ಈಗ ಅವಲೋಕಿಸಬೇಕಿದೆ.
ಕಾಶ್ಮೀರ ಭಾಗದಲ್ಲಿದ್ದ ಒಟ್ಟು 47 ಮತಕ್ಷೇತ್ರಗಳ ಪೈಕಿ 41ರಲ್ಲಿ ‘ಇಂಡಿಯ’ ಮೈತ್ರಿಕೂಟ ಜಯಗಳಿಸಿದರೆ, ೩ರಲ್ಲಿ ಜೆಕೆಪಿಡಿಪಿ ಹಾಗೂ ೩ರಲ್ಲಿ ಪಕ್ಷೇತರರ ಗೆಲುವಾಗಿದೆ. ಇಲ್ಲಿ ಬಿಜೆಪಿಯ ಸಾಧನೆ ಶೂನ್ಯ. ಅಂದ ಮೇಲೆ ಇಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಗೆದ್ದಿದ್ದು ಹೇಗೆ? ಶೇ.97ರಷ್ಟು ಮುಸ್ಲಿಮರಿರುವ
ಕಾಶ್ಮೀರದಲ್ಲಿ ಮತ್ತೆ ಗೆದ್ದಿರುವುದು ಇಸ್ಲಾಂ ಮತ, ಷರಿಯತ್ ಕಾನೂನು. ಜಗತ್ತೇ ಹೌಹಾರಿದ ಭಯೋತ್ಪಾದಕ ದಾಳಿಯನ್ನು ಸ್ವತಃ ಅನುಭವಿಸಿದ ಪುಲ್ವಾಮದ ೪ ಜಿಲ್ಲೆಗಳಲ್ಲಿ ಎರಡು ಕ್ಷೇತ್ರವನ್ನು ಜೆಕೆಎನ್ಸಿ ಮತ್ತು ಮಿಕ್ಕೆರಡನ್ನು ಇನ್ನೊದು ಮುಸ್ಲಿಂ ಬೆಂಬಲಿತ ಪಕ್ಷ ಜೆಕೆಪಿಡಿಪಿ ಗೆದ್ದುಕೊಂಡಿವೆ.
ಹಾಗಾಗಿ ಇಲ್ಲಿ ಭಯೋತ್ಪಾದಕ ನಡಾವಳಿ ಮತ್ತೊಮ್ಮೆ ಸ್ವೀಕೃತವಾಗಿದೆ, ಸಂವಿಧಾನ ಸೋತಿದೆ. ಸಂವಿಧಾನಕ್ಕಿಂತ
ಷರಿಯತ್ ಕಾನೂನೇ ಅಂತಿಮ ಎಂಬುದನ್ನು ಮುಸ್ಲಿಮರು ದೃಢಪಡಿಸಿರುವ ಮತ್ತೊಂದು ಉದಾಹರಣೆಯನ್ನು ನೋಡೋಣ. ಈ ಹಿಂದೆ ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದ ಜೆಕೆಪಿಡಿಪಿ ಪಕ್ಷವು ಬಿಜೆಪಿಯ ಜತೆಗೆ ಅಧಿಕಾರವನ್ನು ಹಂಚಿಕೊಂಡಿತ್ತು ಎಂಬ ಏಕೈಕ ಕಾರಣಕ್ಕಾಗಿ ಮೂರು ಸ್ಥಾನಗಳಲ್ಲಿ ಮಾತ್ರ ಗೆಲುವನ್ನು
ಸಾಧಿಸಲು ಅದಕ್ಕೆ ಸಾಧ್ಯವಾಗಿದೆ. ಇದು ಸಂವಿಧಾನವನ್ನು ಬೆಂಬಲಿಸುವ ಪಕ್ಷದ ಜತೆಗೆ ಗುರುತಿಸಿಕೊಂಡಿದ್ದಕ್ಕಾಗಿ ಷರಿಯತ್ನಿಂದ ಜೆಕೆಪಿಡಿಪಿಗೆ ಒದಗಿದ ಒತ್ತಡದ ದ್ಯೋತಕ.
ಅಟಲ್ ಬಿಹಾರಿ ವಾಜಪೇಯಿ ಅವರನ್ನೊಳಗೊಂಡಂತೆ ಕೆಲವು ರಾಜಕೀಯ ಮುತ್ಸದ್ದಿಗಳ ವಿಶೇಷ ಪ್ರಯತ್ನ ದಿಂದಾಗಿ ಕಾಶ್ಮೀರದಲ್ಲಿ 1996ರಿಂದ ಮೀಸಲಾತಿಯ ಹುಟ್ಟು ಸಾಧ್ಯವಾಗಿತ್ತು. ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿದ್ದ 370ನೇ ವಿಧಿಯನ್ನು 2019ರಲ್ಲಿ ರದ್ದು ಮಾಡಿದ ನಂತರ, ಕೇಂದ್ರ ಸರಕಾರವು ಸಾಮಾಜಿಕ ನ್ಯಾಯದ ಮರುಸ್ಥಾಪನೆಗಾಗಿ ಜಮ್ಮು-ಕಾಶ್ಮೀರದಲ್ಲಿ 9 ಎಸ್ಟಿ ಮೀಸಲು ಕ್ಷೇತ್ರಗಳನ್ನು ಸಾಂವಿಧಾನಿಕವಾಗಿ ನಿಗದಿ ಮಾಡಿತ್ತು.
ಕಾಶ್ಮೀರದಲ್ಲೂ ಸಾಮಾಜಿಕ ನ್ಯಾಯದ ಪ್ರಭೆ ಪಸರಿಸುವುದಕ್ಕೆ ಈ ನಡೆ ಮುನ್ನುಡಿಯಾಗಲಿದೆ ಎಂದೇ ವ್ಯಾಖ್ಯಾನಿಸ ಲಾಗಿತ್ತು. ಆದರೆ, ಕಾಶ್ಮೀರ ಭಾಗದಲ್ಲೇ ಮೀಸಲಾಗಿದ್ದ 9 ಕ್ಷೇತ್ರಗಳಲ್ಲಿ ಬಿಜೆಪಿಯದ್ದು ಮತ್ತೆ ‘ಶೂನ್ಯಸಾಧನೆ’ ಯಾಗಿದೆ. ಅಲ್ಲಿನ ‘ಪ್ರಕೃತಿ-ಆರಾಧಕ’ ಬುಡಕಟ್ಟು ಜನಗಳಿಗೆ 7 ದಶಕಗಳಿಂದಲೂ ರಾಜಕೀಯ ಪ್ರಾತಿನಿಧ್ಯವೇ ಇರಲಿಲ್ಲ. ಇಂಥ ಜನರೂ ಅಧಿಕಾರದ ಭಾಗವಾಗಬೇಕೆಂದು ಕೇಂದ್ರ ಸರಕಾರವು ಪ್ರಯತ್ನ ಪಟ್ಟ ಮೇಲೂ, ಯಾರು ಇಲ್ಲಿಯವರೆಗೆ ತಮ್ಮನ್ನು ಅಧಿಕಾರದಿಂದ ದೂರವಿಟ್ಟಿದ್ದರೋ ಅವರನ್ನೇ ಆ ಜನರು ಗೆಲ್ಲಿಸಿದ್ದಾರೆ.
ತನ್ಮೂಲಕ ಇಲ್ಲಿಯೂ ಸಂವಿಧಾನ ಮತ್ತು ಮೀಸಲಾತಿ ಎರಡಕ್ಕೂ ಸೋಲಾಗಿದೆ. ಅದೇ, ಹಿಂದೂ ಬಹು ಸಂಖ್ಯಾತರಿರುವ ಜಮ್ಮುವಿನಲ್ಲಿ 43 ಸ್ಥಾನಗಳ ಪೈಕಿ 28ನ್ನು ಬಿಜೆಪಿ ಗೆದ್ದು ಮುನ್ನಡೆ ಕಾಯ್ದುಕೊಂಡಿದ್ದರೆ, 8 ಸ್ಥಾನಗಳಲ್ಲಿ ಜೆಕೆಎನ್ಸಿ ಮತ್ತು 6 ಸ್ಥಾನಗಳಲ್ಲಿ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದನ್ನು
ಸೂಕ್ಷ್ಮವಾಗಿ ಅವಲೋಕಿಸಿದರೆ, ಹಿಂದುಗಳ/ಹಿಂದುತ್ವದ ಬಹುಮತ ವಿರುವಲ್ಲಿ ‘ಬಹುತ್ವ’ಕ್ಕೆ ಅವಕಾಶ ವಿರುವುದು ಅರಿವಾಗುತ್ತದೆ.
ಜಮ್ಮು-ಕಾಶ್ಮೀರದ ಚುನಾವಣಾ ಫಲಿತಾಂಶದ ಅಂಕಿ-ಅಂಶಗಳು ಇದನ್ನು ದೃಢಪಡಿಸುತ್ತವೆ. ದೇಶದ ಬಹುಪಾಲು ಚುನಾವಣಾ ಇತಿಹಾಸವೂ ಇದನ್ನೇ ಸಮರ್ಥಿಸುತ್ತದೆ. ಹಿಂದೂಗಳೇ ಹೆಚ್ಚಿರುವ ಭಾರತದಲ್ಲಿ ಮುಸ್ಲಿಮರು ರಾಷ್ಟ್ರಪತಿ ಗಳಾಗಿದ್ದಾರೆ, ಮುಖ್ಯಮಂತ್ರಿಗಳಾಗಿದ್ದಾರೆ, ಅಷ್ಟೇಕೆ, ಕೇಂದ್ರ ಶಿಕ್ಷಣ ಸಚಿವರೂ, ಉಪರಾಷ್ಟ್ರಪತಿಗಳೂ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೂ ಆಗಿದ್ದಾರೆ. ಇದು ಕೇವಲ ಬಹುತ್ವದ ಸೂಚಕವಲ್ಲ.
‘ಹಿಂದುತ್ವ’ ಎಂಬುದರಲ್ಲಿ ಎಲ್ಲರನ್ನೂ ಮತ್ತು ಎಲ್ಲವನ್ನೂ ಒಳಗೊಳ್ಳುವ ಮೂಲಗುಣ ಅಂತರ್ಗತವಾಗಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಎಸ್ ಟಿಗಳಿಗೆ ಮೀಸಲಾಗಿದ್ದ ಕ್ಷೇತ್ರಗಳಲ್ಲಿ ಆಯ್ಕೆಯಾದ ೯ ಅಭ್ಯರ್ಥಿಗಳೂ ಮುಸ್ಲಿಮರೇ; 70 ವರ್ಷಗಳವರೆಗೆ ತಮ್ಮನ್ನು ಅಸ್ಪೃಶ್ಯರಂತೆ ಇಟ್ಟಿದ್ದ ಷರಿಯತ್ ಪಾಲಕರಾದ ಷಿಯಾ ಸುನ್ನಿ ಬೆಂಬಲಿತ ಪಕ್ಷಕ್ಕೆ ಇಲ್ಲಿನ ಜನರು ಬೆಂಬಲ ನೀಡಿದ್ದಾರೆಯೇ ಹೊರತು, ಸಂವಿಧಾನಕ್ಕೂ ಅಲ್ಲ, ಪ್ರಜಾಪ್ರಭುತ್ವಕ್ಕೂ ಅಲ್ಲ ಎಂಬುದು ನಿಚ್ಚಳ ಸತ್ಯ. ಅಂದರೆ, ನಗರ ಪ್ರದೇಶದಲ್ಲಿರಲಿ, ಹಳ್ಳಿಗಳಲ್ಲಿರಲಿ, ಕಾಡಿನಲ್ಲಿರಲಿ ಅಥವಾ ಬುಡಕಟ್ಟು ಪ್ರದೇಶಗಳಲ್ಲಿರಲಿ ಮುಸಲ್ಮಾನರು ಷರಿಯತ್ ಮೀರಿ ಸಂವಿಧಾನವನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾದಂತಾಯಿತು.
ಜಮ್ಮುವಿನಲ್ಲಿ ಎಸ್ಸಿ ಸಮುದಾಯಕ್ಕೆ ನಿಗದಿಯಾಗಿದ್ದ ೭ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಎಸ್ಸಿ ಮತದಾರ ರೆಲ್ಲರೂ ಧರ್ಮದ ಆಧಾರದ ಮೇಲೆ ಮತದಾನ ಮಾಡಿದ್ದಾರೆ ಎಂಬುದನ್ನು ಅಂಕಿ-ಅಂಶಗಳು ಸಾಬೀತು
ಮಾಡುವುದಿಲ್ಲ; ಬದಲಾಗಿ ಇಸ್ಲಾಂನ ‘ಕಾಫಿರ ಪದ್ಧತಿ’ ಎಂಬ ಮನುಕುಲದ ವಿನಾಶಕಾರಿ ಆಯ್ಕೆಯೂ, ದಲಿತರು ಮುಸ್ಲಿಮರಲ್ಲದವರಿಗೆ ಮತದಾನ ಮಾಡುವಂತೆ ಪ್ರೇರೇಪಿಸಿದೆ (ಮುಸ್ಲಿಮರಲ್ಲದವರು ಬದುಕಲು ಅರ್ಹರೇ ಅಲ್ಲ ಎಂಬುದೇ ‘ಕಾಫಿರ ಪದ್ಧತಿ’).
ಚುನಾವಣೆ ಗೆದ್ದು ಮುಖ್ಯಮಂತ್ರಿ ಗಾದಿಗೆ ನಿಯೋಜಿತರಾದ ವ್ಯಕ್ತಿಯು, ಜಮ್ಮು-ಕಾಶ್ಮೀರ ಸಂವಿಧಾನದ ಹೆಸರಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ತಪ್ಪಿ, ಭಾರತ ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಂತಾಗಿದ್ದು ಮಾತ್ರ ಸ್ವೀಕೃತ ನಡಾವಳಿ. ಸಂವಿಧಾನ ರಚನೆಯ ಪ್ರಾರಂಭದಲ್ಲೇ, “ಅಸಮಾನತೆ
ಯನ್ನು ಒಪ್ಪುವ, ಸಾಮಾಜಿಕ ನ್ಯಾಯವನ್ನು ಬಗ್ಗುಬಡಿಯುವ 370ನೇ ವಿಧಿಯನ್ನು ಸಂವಿಧಾನದ ಭಾಗವನ್ನಾಗಿ ಮಾಡಲಾರೆ” ಎಂದು ರಾಷ್ಟ್ರೀಯವಾದಿ ಅಂಬೇಡ್ಕರ್ ಅವರು ಘಂಟಾಘೋಷವಾಗಿ ಹೇಳಿದ್ದೇಕೆ ಎಂಬುದರ ಹಿಂದಿನ ಸತ್ಯತೆ ಇಂದಿನ ಯುವಜನತೆಗೆ ಮನದಟ್ಟಾಗಬೇಕಿದೆ.
ಸಂವಿಧಾನ, ಜಾತ್ಯತೀತತೆ ಕುರಿತು ಉದ್ದುದ್ದ ಬೋಧಿಸುವ ಪ್ರಗತಿಪರರು ಮತ್ತು ಸ್ವಘೋಷಿತ ಬುದ್ಧಿಜೀವಿಗಳು, ಸಂವಿಧಾನವನ್ನು ಸೋಲಿಸುವ ನಡೆಗೆ ಹೆಗಲು ಕೊಡುವುದನ್ನು ಜಮ್ಮು-ಕಾಶ್ಮೀರ ಚುನಾವಣೆಯ ಫಲಿತಾಂಶ ವಾದರೂ ನಿಲ್ಲಿಸುವಂತಾಗಲಿ ಎಂಬುದೇ ಸಹೃದಯಿಗಳ ಆಶಯ.
(ಲೇಖಕರು ಸಂವಿಧಾನ ತಜ್ಞರು)
ಇದನ್ನೂ ಓದಿ: Dr Sudhakar Hosalli Column: ಇವರು ಕೂಡ ಗುಲಾಮರೇ, ಗುಲಾಮರಂತೆ ಇದ್ದಾರಷ್ಟೇ !