Friday, 13th December 2024

ಲೀಗ್ ಬಾರದ ಮಾತ್ರಕ್ಕೆ ಭಾರತ ಸಂವಿಧಾನ ವಂಚಿತವಾಗಬೇಕೆ ?

ಅಭಿಮತ

ಸುಧಾಕರ ಹೊಸಳ್ಳಿ

ಭಾರತಕ್ಕೊಂದು ಸ್ವಂತ ಸಂವಿಧಾನ ರಚನೆ ಆಗಬೇಕೆಂಬ ಸದುದ್ದೇಶದಿಂದ ಡಿಸೆಂಬರ್ ೯, ೧೯೪೬ರಲ್ಲಿ ಸಂವಿಧಾನ ರಚನಾ ಸಭೆಯು ತನ್ನ ಕಾರ್ಯ ಆರಂಭ ಮಾಡಿದಾಗ ಡಿಸೆಂಬರ್ ೧೩, ೧೯೪೬ಕ್ಕೆ ನೆಹರುರವರು ಭಾರತ ಸಂವಿಧಾನದ ಚೌಕಟ್ಟು ಹೇಗಿರಬೇಕು ಎಂಬುದರ ಕುರಿತು ಗಣರಾಜ್ಯ
ನಿರ್ಣಯವನ್ನು ಮಂಡಿಸುತ್ತಾರೆ. ಆ ನಿರ್ಣಯವನ್ನು ಮುಸ್ಲಿಂ ಲೀಗ್ ಸಭೆಗೆ ಹಾಜರಾಗುವವರೆಗೂ ಮುಂದೂಡಬೇಕೆಂದು ಜಯ್ಕರ್ ತಿದ್ದುಪಡಿ ಮಂಡಿಸಿದಾಗ, ಆ ನಿರ್ಣಯ ಮುಂದೂಡಬೇಕೆಂಬ ತಿದ್ದುಪಡಿಯ ಕುರಿತು ಮಾತನಾಡಲು ನಿಂತ ಶ್ಯಾಮ್ ಪ್ರಸಾದ್ ಮುಖರ್ಜಿ ಮುಸ್ಲಿಂ ಲೀಗ್
ಬರಲಿಲ್ಲ ಎಂಬ ಕಾರಣಕ್ಕಾಗಿ ಸಂವಿಧಾನ ರಚನೆ ನಿಲ್ಲಿಸಲು ಸಾಧ್ಯವಿಲ್ಲ.

ಭಾರತ ತನ್ನೊಡಲಿನ ಪರಂಪರೆಯ ಆಧಾರ ಗಳನ್ನು ಇಟ್ಟು ಸಂವಿಧಾನ ರಚಿಸಿಯೇ ತೀರಬೇಕು. ಬಾರದವರಿಗಾಗಿ ಭಾರತಾಂಬೆಯ ಕಾರ್ಯ ನಿಲ್ಲುವು ದಿಲ್ಲ ಎಂದು ಗುಡುಗಿದ್ದರು. ಮುಖರ್ಜಿಯವರನ್ನು ಕೇವಲ ರಾಜಕೀಯ ನೆಲೆಯಲ್ಲಿ ನಿಂತು ನೋಡಲು ಸಾಧ್ಯವಿಲ್ಲ. ಈ ನೆಲಮೂಲದ ಸಂಸ್ಕೃತಿಯ ಪ್ರತೀಕವಾಗಿ ಸಂವಿಧಾನ ರಚಿತವಾಗಬೇಕು. ಪರಕೀಯತೆಯ ಯಾವ ಸೊಗಡು ಮತ್ತು ಯಾವುದೇ ಮುಲಾಜು ಸಂವಿಧಾನದ ಭಾಗವಾಗದೆಂದು ಆಗ್ರಹಿಸಿದ್ದ ಧೀಮಂತ.

ಜೂನ್ ೨೩ರ ಮುಖರ್ಜಿ ಹುತಾತ್ಮತೆಯ ದಿವಸವನ್ನು ದಾಸ್ಯದ ಸಂವಿಧಾನ ಸೃಷ್ಟಿ ತಡೆಗಟ್ಟಿದ ಐತಿಹಾಸಿಕ ಕೊಡುಗೆಯ ದಿವಸವಾಗಿಯೂ ಸ್ಮರಿಸ ಬಹುದು. ಈ ನಿರ್ಣಯಕ್ಕೆ ತನ್ನದೇ ಆದ ಮಹತ್ವವಿದೆ. ಅಷ್ಟಕ್ಕೂ ನಾವು ಇಲ್ಲಿ ಕುಳಿತಿರುವುದು ನಮ್ಮ ವೈಯಕ್ತಿಕ ಬಲದಿಂದಲ್ಲ. ನಾವು ಈ ಮಹಾನ್ ದೇಶದ ಜನರನ್ನು ಪ್ರತಿನಿಽಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ನಮ್ಮ ಮಂಜೂರಾತಿಯು ಬ್ರಿಟಿಷ್ ಸಂಸತ್ತು ಅಲ್ಲ: ನಮ್ಮ ಮಂಜೂರಾತಿಯು ಬ್ರಿಟಿಷ್ ಸರಕಾರವಲ್ಲ, ನಮ್ಮ ಮಂಜೂರಾತಿಯೂ ಭಾರತದ ಜನ ಸಮುದಾಯ. ಕೆಲವು ನಿಯಮ ನಿಬಂಧನೆ ಗಳನ್ನು ರಚಿಸುವುದಷ್ಟೇ ಅಲ್ಲ. ನಾವು ಇಲ್ಲಿ ೯ನೇ ಡಿಸೆಂಬರ್ ೧೯೪೬ ರಲ್ಲಿ ಏಕೆ ಸಭೆ ಸೇರಿದ್ದೇವೆ ಎನ್ನುವುದನ್ನು ಕುರಿತು ಭಾರತದ ಜನತೆಗೆ ಮೂರ್ತರೂಪದಲ್ಲಿ ಏನಾದರು ಹೇಳಬೇಕಾಗುತ್ತದೆ.

ಡಾ.ಜಯಕರ್ ಅವರು ಹೇಳಿದ್ದೇ ಸರಿಯಾದ ನಿಲುವಾಗಿದ್ದರೆ, ಆಗ ಈ ಸಂವಿಧಾನ ರಚನಾಸಭೆಯನ್ನು ಕರೆಯಬೇಕಾದ ಅಗತ್ಯವೇ ಇರಲಿಲ್ಲ. ದಿಟದಲ್ಲಿ ಡಾ.ಜಯಕರ್ ಅವರು ಹಾಜರಾಗಬೇಕಾದ ಅವಶ್ಯಕತೆಯೇ ಇರಲಿಲ್ಲ. ಅವರು ಗವರ್ನರ್ ಜನರಲ್‌ಗೆ ತಿಳಿಸಬೇಕಾಗಿತ್ತು. ‘ಮುಸ್ಲೀಂ ಲೀಗ್ ಮತ್ತು ಭಾರತದ ರಾಜ್ಯಗಳು ಹಾಜರಾಗದೇ ಇರುವುದರಿಂದ ಸಂವಿಧಾನ ರಚನಾಸಭೆ ಸಭೆಯನ್ನು ಕರೆಯುವಲ್ಲಿ ನೀವು ತಪ್ಪುಮಾಡುತ್ತಿದ್ದೀರಿ ಎಂದು ನಾನು ಭಾವಿಸಿರುವುದರಿಂದ ನಿಮ್ಮ ಆಹ್ವಾನ ಅಂಗೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ.

ಆದರೆ ಇಲ್ಲಿಗೆ ಬಂದು ಈ ವಿವಾದಾಂಶವನ್ನು ನಾವು ಎತ್ತುವುದೆಂದರೆ ಬಹುಮಟ್ಟಿಗೆ ಮುಸ್ಲಿಮ್ ಲೀಗ್‌ನ ಬೋನಿನೊಳಗೆ ನುಗ್ಗಿದಂತೆ ಸರಿ. ಆದು ಗ್ರೇಟ್ ಬ್ರಿಟನ್‌ನಲ್ಲಿರುವ ಪ್ರತಿಗಾಮಿಗಳ ಕೈಗಳನ್ನು ಬಲಪಡಿಸಿದಂತಾಗುತ್ತದೆ. ಆ ಕೆಲಸವನ್ನು ಮಾಡುವಲ್ಲಿ ಡಾ. ಜಯಕರ್ ಕೊನೆಯ ವ್ಯಕ್ತಿ ಎಂದು ನನಗೆ
ಗೊತ್ತು. ನಾನು ಅವರ ಮತ್ತು ನಿಶ್ಚಿತಾಭಿಪ್ರಾಯವನ್ನು ಮೆಚ್ಚುತ್ತೇನೆ. ವಾಸ್ತವದಲ್ಲಿ ಏನಾದರೊಂದನ್ನು ಮಾಡಬೇಕೆಂದು ಬಯಸಿದವರು ಮುಂದೆ ಬಂದು, ತಮ್ಮ ದೃಷ್ಟಿಕೋನವನ್ನು ಮಂಡಿಸಲು ಸಮರ್ಥರಾಗಬೇಕು.

ಆದರೆ ಈ ಸದನದಲ್ಲಿ ಮಂಡಿಸಲಾದ ಮುಗ್ಧವೆಂಬಂತೆ ತೋರುವ ತಿದ್ದುಪಡಿಯಲ್ಲಿ ಅಡಗಿರುವ ಮಹಾನ್ ಅಪಾಯ ಡಾ.ಜಯಕರ್ ಅವರಿಗೆ ಗೌರವಪೂರ್ಣವಾಗಿ ತೋರಿಸಿಯೂ ಕೊಡಬಹುದು. ಕಾಲಕ್ರಮದಲ್ಲಿ ಸಂದರ್ಭ ಬಂದಾಗ ಅವರು ಈ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ.

ಈ ಪ್ರಶ್ನೆಯ ಇನ್ನೊಂದು ಅಂಶವನ್ನು ಕುರಿತು ನಾನು ಕೆಲವು ಮಾತುಗಳನ್ನು ಆಡಲು ಇಷ್ಟಪಡುವ ನಿರ್ಣಯವೇನೋ ಇದೆ, ಆದರೆ ಅದನ್ನು ನಾವು ಹೇಗೆ ಅನುಷ್ಠಾನಗೊಳಿಸುತ್ತೇವೆ? ಈ ನಿರ್ಣಯ ಜಾರಿಗೆ ಬರುವಂತೆ ಮಾಡುವ ನಮ್ಮ ಪ್ರಯತ್ನವನ್ನು ತಡೆಯುವ, ನಾವು ಈಗಾಗಲೇ ನೋಡಿರುವ ಅಡೆ- ತಡೆ ಯಾವುವು? ಸಹಜವಾಗಿಯೇ ಮೊದಲನೆಯ ಅಡಚಣೆಯೆಂದರೆ ಸಂವಿಧಾನ ರಚನಾಸಭೆಯಲ್ಲಿ – ಲೀಗ್‌ನ ಅನುಪಸ್ಥಿತಿ. ನಿನ್ನೆ ಡಾ. ಜಯಕರ್ ಅವರು ಒಂದು ಭೋಜನಕೂಟದ ಸಾದೃಶ್ಯವನ್ನು ಅ ಅವರು ಹೇಳಿದರು. ಅತಿಥಿಗಳನ್ನು ಆಹ್ವಾನಿಸಿದಾಗ ಕೆಲವು ಅತಿಥಿಗಳು ಬರದಿದ್ದರೆ? ಆಗ ಕೂಟವನ್ನು ಹೇಗೆ ನಡೆಸುತ್ತೀರಿ? ಆದರೆ ಈಗಾಗಲೇ ಬಂದಿರುವ ಅತಿಥಿಗಳ ಪಾಡೇನು ಎಂದು ಅವರು ಮರೆತಿದ್ದಾರೆ.

ಒಂದು ಪಕ್ಷ ಅವರೇ ಆತಿಥೇಯರಾಗಿದ್ದು, ಆರು ಜನ ಅತಿಥಿಗಳನ್ನು ಆಹ ಅವರಲ್ಲಿ ಐವರು ಬಂದು ಒಬ್ಬರು ಗೈರುಹಾಜರಾಗಿದ್ದಾರೆ ಎಂದುಕೊಳ್ಳೋಣ. ಆ ಐದು ಜನರನ್ನು ಉಪವಾಸ ಕೆಡವುತ್ತಾರೆಯೆ? ಆರನೆಯವರು ಬಂದಿಲ್ಲ, ಆದ್ದರಿಂದ ನಿಮಗೂ ಊಟ ದೊರೆಯುವುದಿಲ್ಲ ಎಂದು ಹೇಳುತ್ತಾರೆಯೆ? ಖಂಡಿತವಾಗಿಯೂ ಇಲ್ಲ. ಇಲ್ಲೂ ಕೂಡ ಬಂದಿರುವವರ ಸ್ವಾತಂತ್ರ್ಯದ ಹಸಿವನ್ನು ತಣಿಸಬೇಕು. ಚರ್ಚಿಲ್ ಹೇಳಿರುವುದೇನೆಂದರೆ, ಸಂವಿಧಾನ ರಚನಾಸಭೆ ಯಲ್ಲಿ ಮುಸ್ಲಿಮ್ ಲೀಗ್‌ನ ಗೈರುಹಾಜರಿಯು ಚರ್ಚಿನಲ್ಲಿ ಮದುವೆಯನ್ನು ಏರ್ಪಡಿಸಿzಗ ವಧುವು ನಾಪತ್ತೆಯಾದಂತೆ. ಭಾರತದ ರಾಜ್ಯಗಳು ಮತ್ತು ಮುಸ್ಲಿಮ್ ಲೀಗ್ ಕೂಡ ಯಾವಾಗ ಒಳಗೆ ಬರುತ್ತವೆಯೋ, ಮತ್ತು ಅಂತಿಮವಾಗಿ ಸಂವಿಧಾನ ರಚನಾಸಭೆಯು ಎಷ್ಟು ಜನ ವಧುಗಳನ್ನು
ಪಡೆಯುತ್ತದೆಯೋ ನನಗೆ ಗೊತ್ತಿಲ್ಲ.

ಏನೇ ಆಗಲಿ, ಅದು ಚರ್ಚಿಲ್ ಅವರ ಅಭಿಪ್ರಾಯವಾಗಿದ್ದರೆ, ಅವರು ಅತ್ಯಾಚಾರಿಯ ಪಾತ್ರವನ್ನು ವಹಿಸಬಾರದು. ಅವರು ಜಿನ್ನಾ ಅವರಿಗೆ ಭಾರತಕ್ಕೆ ಮರಳಿ ಹೋಗಿ ಸಂವಿಧಾನ ರಚನಾಸಭೆಯಲ್ಲಿ ಸೇರಿಕೊಂಡು ಭಾರತದ ಜನಸಮುದಾಯದ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ ಹೇಳ
ಬೇಕಾಗಿತ್ತು. ಮುಸ್ಲಿಮ್ ಲೀಗ್ ಬರಬಾರದು ಎಂದು ಯಾರೂ ಹೇಳಿಲ್ಲ. ದಿಟದಲ್ಲಿ, ಮುಸ್ಲಿಮ್ ಲೀಗ್ ಬರಬೇಕು ಮತ್ತು ಅದರಿಂದ ನಾವು ಮುಖಾಮುಖಿ ನೋಡಲು ಸಾಧ್ಯವಾಗುತ್ತದೆ ಎನ್ನುವುದು ನಮ್ಮ ಇಚ್ಛೆ, ಕಷ್ಟಗಳು ಇದ್ದರೆ, ಅಭಿಪ್ರಾಯಭೇದಗಳು ಇದ್ದರೆ, ಅವನ್ನು ಕೇವಲ ಬಹುಮತದಿಂದಲೇ ಅಂಗೀಕರಿಸಬೇಕು ಎಂದು ನಾವು ಬಯಸುವುದಿಲ್ಲ.

ಅಂತಿಮ ಉಪಾಯವಾಗಿ ಅದನ್ನು ಮಾಡಬೇಕಾಗಿಬರಬಹುದು. ಆದರೆ ಭಾರತದ ಭಾವೀ ಸಂವಿಧಾನಕ್ಕೆ ಸಂಬಂಧಿಸಿದಂತೆ ಒಂದು ಒಪ್ಪಂದಕ್ಕೆ ಬರಲು ಪ್ರತಿಯೊಂದು ಪ್ರಯತ್ನವನ್ನೂ ಖಂಡಿತವಾಗಿಯೂ ಮಾಡಲಾಗುವುದು. ಆದರೆ ಮುಸ್ಲಿಮ್ ಲೀಗ್ ಅನ್ನು ಬರದಂತೆ ಏಕೆ ತಡೆಯ ಲಾಗುತ್ತಿದೆ, ನನ್ನ ಆರೋಪವೇನೆಂದರೆ ಬ್ರಿಟಿಷರ ನಿಲುವಿನಿಂದ ಮುಸ್ಲಿಮ್ ಲೀಗ್ ಪ್ರೋತ್ಸಾಹವನ್ನು ಪಡೆಯುತ್ತಿರುವುದರಿಂದ ಅದು ಬರುತ್ತಿಲ್ಲ. ಅದು ಬರೆದಿದ್ದರೆ
ಸಂವಿಧಾನ ರಚನಾಸಭೆಯ ಅಂತಿಮ ತೀರ್ಮಾನವನ್ನು ಕುರಿತು ಅದು ನಿರಾಕರಣಾಧಿಕಾರವನ್ನು (ವೀಟೋ) ಚಲಾಯಿಸಬಹುದು ಎಂದು ಭಾವಿಸಿ ಕೊಳ್ಳುವಂತೆ ಮುಸ್ಲಿಮ್ ಲೀಗ್‌ಗೆ ಪ್ರೋತ್ಸಾಹವನ್ನು ಕೊಡಲಾಗುತ್ತಿದೆ.

ವೀಟೋ ಅಧಿಕಾರವನ್ನು ಮುಸ್ಲಿಮ್ ಲೀಗ್‌ನ ಕೈಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಕೊಡಲಾಗುತ್ತಿದೆ. ಈ ಮಹಾನ್ ಸಭೆಯ ಭಾವೀ ಚಟುವಟಿಕೆ ಗಳಿಗೆ ಬೆದರಿಕೆಯೊಡ್ಡುತ್ತಿರುವ ಅಪಾಯ ಇದಾಗಿದೆ. ಮಾನ್ಯರೆ, ನಾನು ವಿವರವಾಗಿ ಚರ್ಚಿಸಲು ಹೋಗುವುದಿಲ್ಲ. ಏಕೆಂದರೆ ಬ್ರಿಟಿಷ್ ಹೇಳಿಕೆಗಳ ವಿವಿಧ ಉಪಬಂಧಿಗಳನ್ನು ಕುರಿತು ನಾನು ಚರ್ಚಿಸಲು ಇದು ಸಮಯವೂ ಅಲ್ಲ ಅಥವಾ ಸಂದರ್ಭವೂ ಅಲ್ಲ. ಆದರೆ ಖಂಡಿತವಾಗಿಯೂ ನಾನು ಇಷ್ಟನ್ನು ಹೇಳುತ್ತೇನೆ: ಸದ್ಯದ ಸಮಯದಲ್ಲಿ ಈ ಸಂವಿಧಾನ ರಚನಾಸಭೆಯು ಬ್ರಿಟಿಷರ ಒಂದು ಸೃಷ್ಟಿಯಾಗಿದ್ದರೂ, ಒಂದು ಸಲ ಅದು ಅಸ್ತಿತ್ವಕ್ಕೆ ಬಂದಿತೆಂದರೆ ಅದಕ್ಕೆ ಸಂಕಲ್ಪವಿದ್ದರೆ, ತನ್ನ ಹಕ್ಕನ್ನು ದೃಢವಾಗಿ ಹೇಳುವ ಅಧಿಕಾರವನ್ನು ಹೊಂದಿರುತ್ತದೆ.

ಜಾತಿ, ಮತ, ಪಂಥ ಅಥವಾ ಸಮುದಾಯ ಏನೇ ಆಗಿರಲಿ ಭಾರತದ ಜನರ ಹಿತಕ್ಕಾಗಿ, ಭಾರತದ ಸ್ವಾತಂತ್ರ್ಯವನ್ನು ಗಳಿಸಲು ಯಾವುದು ಉತ್ತಮವೋ ಮತ್ತು ಯುಕ್ತವೋ ಅದನ್ನು ಮಾಡುತ್ತದೆ.

(ಲೇಖಕರು: ಹವ್ಯಾಸಿ ಬರಹಗಾರರು)