Thursday, 12th December 2024

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಯಾವಾಗ ?

ಅವಲೋಕನ

ಚಂದ್ರಶೇಖರ ಬೇರಿಕೆ

On a demand being made in that behalf the President may, if he is satisfied that a substantial proportion of the population of a State desire the use of any language spoken by them to be recognized throughout that State or any part thereof for such purpose as he may specify’.

ಇದು ಯಾವುದೇ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಅಂಗೀಕರಿಸುವುದಕ್ಕೆ ಸಂಬಂಧಪಟ್ಟಂತೆ ಸಂವಿಧಾನದ 347ನೇ ವಿಧಿಯ ವ್ಯಾಖ್ಯಾನ ವಾಗಿದೆ. ತುಳು ಕರ್ನಾಟಕದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳ ಜನರ ಮಾತೃಭಾಷೆಯಾಗಿದ್ದು, ಈ ಭಾಷೆಯು ವಿಶಾಲ ಪ್ರದೇಶದಲ್ಲಿ ವ್ಯಾಪಿಸಿ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತಿಹಾಸವನ್ನು ಹೊಂದಿದ್ದರೂ ಈ ಭಾಷೆಗೆ ಸಿಗಬೇಕಾದ ಸೂಕ್ತ ಪ್ರಾತಿನಿಧ್ಯ, ಸ್ಥಾನಮಾನ ಇನ್ನೂ ಸಿಗದಿರುವುದು ವಿಪರ್ಯಾಸ.

ಆದಾಗ್ಯೂ ಇದಕ್ಕಾಗಿ ನ್ಯಾಯಬದ್ಧ ಹೋರಾಟಗಳು, ಹಕ್ಕೋತ್ತಾಯಗಳು ನಡೆಯುತ್ತಲೇ ಇದೆ. ಹೌದು, ‘ಮೃದು’ ಎಂಬರ್ಥದ ‘ತುಳು’ವಿಗೆ ಸೂಕ್ತ ಸ್ಥಾನಮಾನ, ಮಾನ್ಯತೆ ಯಾಕೆ ಸಿಗಬೇಕೆಂಬುದಕ್ಕೆ ಕಾರಣಗಳು, ಸಮರ್ಥನೆಗಳು, ಪುರಾವೆಗಳು ಹಲವಾರು.
ತುಳು ಭಾಷೆ ಜಾತಿ, ಧರ್ಮದ ಎಲ್ಲೆಯನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಭಾಷೆಯಾಗಿದೆ. ಈ ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಸ್ಥಾನಮಾನಕ್ಕಾಗಿ ತುಳುವರು ಕಳೆದ 50 ವರ್ಷಗಳಿಂದ ಬೇಡಿಕೆ ಇಟ್ಟು ‘ಮೃದು’ ಹೋರಾಟ ನಡೆಸುತ್ತಿದ್ದರೂ ಆ ಬೇಡಿಕೆಯನ್ನು ಕಡೆಗಣಿಸಿಕೊಂಡೇ ಬರಲಾಗಿದೆ.

2011ರ ಜನಗಣತಿ ಪ್ರಕಾರ ಸುಮಾರು 18.5 ಲಕ್ಷ ತುಳು ಭಾಷಿಕರು ಈ ಮೂರೂ ಜಿಲ್ಲೆಗಳಲ್ಲಿ ನೆಲೆಸಿದ್ದು, ಚಾರಿತ್ರಿಕವಾಗಿ ಈ ಪ್ರದೇಶವನ್ನು ತುಳುನಾಡು ಎಂದೇ ಕರೆಯಲಾಗುತ್ತದೆ. ರಷ್ಯನ್ ಭಾಷಾ ವಿಜ್ಞಾನಿ ಎಂ.ಎಸ್.ಆಂಡ್ರೋನೋವ್ ಅವರ ಪ್ರಕಾರ ತುಳು ಭಾಷೆಯು ಸುಮಾರು 2000 ವರ್ಷಗಳಷ್ಟು ಪ್ರಾಚೀನವಾದುದು. ಇದನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು,
ಚರಿತ್ರೆಗಳು, ಸಂಶೋಧನಾ ಸತ್ಯಗಳು ಪುಷ್ಠೀಕರಿಸಿವೆ. ಈಗ ಉಡುಪಿ ಜಿಲ್ಲೆಗೆ ಸೇರಿದ ಬಾರ್ಕೂರು ಪ್ರಾಚೀನ ತುಳುನಾಡಿನ
ರಾಜಧಾನಿಯಾಗಿತ್ತು.

ತುಳುನಾಡಿನ ಪ್ರದೇಶಗಳ ಹೊರತಾಗಿ ಬೆಂಗಳೂರು, ಮಹಾರಾಷ್ಟ್ರದ ಮುಂಬಯಿ, ಥಾಣೆ, ಗುಜರಾತ್‌ನ ಕೆಲವು ಭಾಗಗಳಲ್ಲಿ ಹಾಗೂ ವಿದೇಶಗಳಲ್ಲೂ ತುಳು ಭಾಷಿಕರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದು, ಎನ್ಸೆಕ್ಲೋಪೀಡಿಯಾ ಆಫ್ ಬ್ರಿಟಾನಿಕಾದ ಪ್ರಕಾರ
ಜಗತ್ತಿನಾದ್ಯಂತದ ತುಳು ಭಾಷಿಕರ ಒಟ್ಟು ಸಂಖ್ಯೆ ಸುಮಾರು 1 ಕೋಟಿಗಿಂತಲೂ ಅಧಿಕ. ಕರ್ನಾಟಕ ರಾಜ್ಯಕ್ಕೆ ಸಂಬಂಧ ಪಟ್ಟಂತೆ ಆಡಳಿತ ಮತ್ತು ರಾಜ್ಯ ಭಾಷೆ ಕನ್ನಡವಾದರೂ ತುಳು ಪ್ರದೇಶದ ಸರಕಾರಿ ಕಚೇರಿಗಳು, ಬ್ಯಾಂಕುಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳಲ್ಲೂ ತುಳು ಭಾಷೆಯೇ ಸಂವಹನ ಭಾಷೆ ಯಾಗಿ ಬಳಕೆಯಲ್ಲಿದೆ.

ಈ ಪ್ರದೇಶಗಳಲ್ಲಿ ತುಳು ಹೊರತಾದ ಭಾಷೆ ಗಳನ್ನು ಮಾತನಾಡುವ ಜನ ಇದ್ದರೂ ಅವರೂ ತಮ್ಮ ಸಂವಹನಕ್ಕೆ ತುಳು ಭಾಷೆಯನ್ನೇ ನೆಚ್ಚಿಕೊಂಡಿದ್ದಾರೆ. ತುಳುವಿನಲ್ಲಿ ಹೇರಳ ಜನಪದ ಕಾವ್ಯಗಳು ಲಭ್ಯವಿದ್ದು, ಭೂತಾರಾಧನೆಯ ಉದ್ದೇಶಕ್ಕಾಗಿ ಹುಟ್ಟಿಕೊಂಡ ನೂರಾರು ಪಾಡ್ದನಗಳು, ವ್ಯವಸಾಯದ ವೈವಿಧ್ಯಮಯ ಹಾಡುಗಳು (ಓಬೇಲೆ ಪದಗಳು) ಹಾಗೂ ಇನ್ನಿತರ ಮನೋರಂಜನೆಯ ಗೀತೆಗಳು ತುಳು ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.

ತುಳು ಭಾಷೆಯ ಪ್ರಾಚೀನತೆಯ ವಿಶ್ಲೇಷಣೆಗೆ ತುಳು ಭಾಷೆ, ಆಚಾರ ವಿಚಾರ, ಸಂಸ್ಕೃತಿಯ ಬಗ್ಗೆ ಉಲ್ಲೇಖವಿರುವ ಹಲವು ಗ್ರಂಥಗಳನ್ನು ಹೆಸರಿಸ ಬಹುದಾಗಿದ್ದು, ಇವುಗಳು ತುಳು ಎಷ್ಟು ಪ್ರಾಚೀನತೆಯನ್ನು ಹೊಂದಿರಬಹುದು ಎಂಬುದನ್ನು ಊಹಿಸಲು ಸಹಕಾರಿಯಾಗಬಲ್ಲುದು. ಇದಕ್ಕೆ ಪೂರಕವಾಗಿ ಹಲವು ಸಂಶೋಧನೆಗಳನ್ನು ಮಾಡಲಾಗಿದೆ. ಕೆಲವು ಗ್ರಾಂಥಿಕ, ಐತಿಹಾಸಿಕ, ವೈಜ್ಞಾನಿಕ ಪುರಾವೆಗಳು ಲಭ್ಯವಾಗಿವೆ. ಅವುಗಳ ಪೈಕಿ, ‘ದೇವಿ ಮಹಾತ್ಮೆ’ ಎಂಬ ತುಳು ಕೃತಿ ಪ್ರಾಚೀನ ಕಾವ್ಯವಾಗಿದ್ದು, ಈ ಕೃತಿಯ ಕತೃವಿನ ಕಾಲವನ್ನು 12ನೇ ಶತಮಾನ ಎಂದು ಅಂದಾಜಿಸಲಾಗಿದೆ.

ಹರಿಯಪ್ಪ ಎಂಬ ಕವಿಯಿಂದ ರಚಿತವಾದ ತುಳು ‘ಕರ್ಣಪರ್ವೊ’ ಎಂಬ ಕಾವ್ಯದ ಕಾಲಘಟ್ಟ 13ನೇ ಶತಮಾನ ಎಂದು ಅಂದಾಜಿಸ ಲಾಗಿದೆ. ‘ಮಹಾಭಾರತೊ’ ಎಂಬ ತುಳು ಕಾವ್ಯದ ಕತೃ ಉಡುಪಿಯ ಕೊಡವೂರಿನ ಅರುಣಾಬ್ಜ ಎಂಬ ಕವಿಯಾ ಗಿದ್ದು, ಇವನು 14ನೇ ಶತಮಾನದ ಉತ್ತರಾರ್ಧ ದಲ್ಲಿದ್ದ ಎಂದು ತಿಳಿದು ಬರುತ್ತದೆ. 17ನೇ ಶತಮಾನದ ಪೂರ್ವಾರ್ಧ ದಲ್ಲಿ ಹೇರೂರಿನ ವಿಷ್ಣುತುಂಗ ಎಂಬುವವನಿಂದ ರಚಿತವಾದ ಇನ್ನೊಂದು ಗ್ರಂಥವೇ ‘ಶ್ರೀಭಾಗವತೋ’. ಹಾಗೆಯೇ ಕಾವೇರಿ ನದಿಯ ವರ್ಣನೆ ಯನ್ನೊಳಗೊಂಡ ಕಾವೇರಿ’ ಎಂಬ ಕಾವ್ಯದ ಕಾಲವನ್ನು ಸುಮಾರು 17ನೇ ಶತಮಾನದ ಕೊನೆಯ ಭಾಗ ಎಂದು ಭಾವಿಸಲಾಗಿದೆ.

ಇನ್ನು ಶಾಸನಗಳ ಬಗ್ಗೆ ಉಲ್ಲೇಖಿಸುವುದಾದರೆ, ವಿಟ್ಲ ಸಮೀಪದ ಮಾಮೇಶ್ವರದ ಶ್ರೀ ಉಮಾಮಹೇಶ್ವರ ದೇವಾಲಯದ ಪರಿಸರದಲ್ಲಿ 10ನೇ ಶತಮಾನದ ತುಳು ಶಾಸನ ಪತ್ತೆಯಾಗಿದೆ. ಉಡುಪಿ ಜಿಯ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಶ್ರೀವಿಷ್ಣು ಮೂರ್ತಿ ದೇವಸ್ಥಾನದಲ್ಲಿ 12ನೇ ಶತಮಾನದ ತುಳು ಲಿಪಿ ಶಾಸನ ಪತ್ತೆಯಾಗಿದ್ದು, ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಹಿಂಭಾಗದ ನಾಗಬನದ ಬಳಿ ದೊರೆತ ತುಳುನಾಡಿನ ನಾಗಾರಾಧನೆಯ ಬಗ್ಗೆ ಉಲ್ಲೇಖ ವಿರುವ ತುಳು ಲಿಪಿ ಶಾಸನ 12-13ನೇ ಶತಮಾನಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.

ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ಶ್ರೀದುರ್ಗಾ ದೇವಸ್ಥಾನದ ಮುಂಭಾಗದಲ್ಲಿ 13ನೇ ಶತಮಾನದ ತುಳು ಲಿಪಿ ಶಾಸನ ದೊರೆತಿದೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ರೆಂಜಾಳ ಎಂಬಲ್ಲಿ 15ನೇ ಶತಮಾನದ ತುಳು ಲಿಪಿ ಶಾಸನ
ಪತ್ತೆಯಾದರೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಇಚ್ಚೂರು ಶ್ರೀಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ 16ನೇ
ಶತಮಾನದ ತುಳು ಲಿಪಿ ಶಾಸನ ದೊರೆತಿದೆ.

ಇದೆಲ್ಲವೂ ಕೇವಲ ಉದಾಹರಣೆಗಳಿಗಾಗಿನ ಶಾಸನಗಳಷ್ಟೇ. ಆದರೆ ಇಂತಹ 50ಕ್ಕೂ ಹೆಚ್ಚು ಶಾಸನಗಳು ಪತ್ತೆಯಾಗಿದ್ದು, ಇದಕ್ಕೆ ಪೂರಕವಾಗಿ ಹಲವು ಸಂಶೋಧಕರು ಕ್ಷೇತ್ರ ಕಾರ್ಯಗಳನ್ನು ನಡೆಸಿ ಪೂರಕ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಹೀಗಾಗಿ
ತುಳು ಭಾಷೆಯು ಭಾರತದ ಪ್ರಾಚೀನ ಭಾಷೆಗಳಂದು ಎಂಬುದು ನಿಸ್ಸಂದೇಹ. ತುಳು ಭಾಷೆಯನ್ನು ಕನ್ನಡ, ತಮಿಳು, ತೆಲುಗು,
ಮಲಯಾಳಂ ಭಾಷೆಗಳ ಜತೆ ಸೇರಿಸಿ ರಾಬರ್ಟ್ ಕಾಲ್ಡ್ವೆಲ್ ಎಂಬಾತ ಪಂಚ ದ್ರಾವಿಡ ಭಾಷೆಗಳು ಎಂದು 1965ರಲ್ಲಿ
ಉಲ್ಲೇಖಿಸಿದ.

ಪಂಚ ದ್ರಾವಿಡ ಭಾಷೆಗಳ ಪೈಕಿ ನಾಲ್ಕು ಭಾಷೆಗಳಿಗೆ ಲಿಪಿಗಳಿದ್ದು, ತುಳು ಭಾಷೆಗೆ ಲಿಪಿಯಿರಲಿಲ್ಲ. ಹಾಗಾಗಿ ತುಳು ಭಾಷೆಯನ್ನು ಬರೆಯಲು ಕನ್ನಡ ಲಿಪಿ ಯನ್ನು ಬಳಸಲಾಗಿತ್ತು. ಸುಮಾರು 10ನೇ ಶತಮಾನದಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ಉಪಯೋಗಿಸುತ್ತಿದರು. ಕೇವಲ ತುಳುವರು
ನೆಲೆಸಿರುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ತಿಗಳಾರಿ ಲಿಪಿಯೇ ತುಳು ಲಿಪಿಯಾಗಿದ್ದು, ಇದು ಮಲೆಯಾಳಂ ಲಿಪಿಯನ್ನು ಹೋಲುತ್ತದೆ. ತುಳು ಕೇವಲ ಮೌಖಿಕ ಭಾಷೆ, ಅದಕ್ಕೆ ಯಾವುದೇ ಲಿಪಿಯಾಗಲೀ ಅಥವಾ ಐತಿಹಾಸಿಕ ಆಧಾರವಾಗಲೀ ಇಲ್ಲ ಎಂಬ ಅಪಪ್ರಚಾರ ತೀರಾ ಇತ್ತೀಚಿನವರೆಗೂ ಇತ್ತು. ಆದರೆ ಈ ಮೇಲಿನ ಎಲ್ಲಾ ಶಾಸನಗಳು, ಪುರಾವೆಗಳು ಅಂತವರ ವಾದವನ್ನು ಸುಳ್ಳಾಗಿಸಿದೆ.

ತುಳು ಭಾಷೆಗೆ ಲಿಪಿಯಿಲ್ಲ ಎಂಬ ಅಪವಾದವನ್ನು ತೊಡೆದುಹಾಕಲು ಮಾಡಿದ ತುಳು ಲಿಪಿಯ ಪುನರುಜ್ಜೀವನ ಪ್ರಯತ್ನ ಈಗ ಸಫಲತೆಯನ್ನು ಕಂಡಿದೆ. ಕಳೆದ ಕೆಲವು ವರ್ಷಗಳಿಂದ ತುಳು ಲಿಪಿಗಳನ್ನು ಕಲಿಸಲಾಗುತ್ತಿದ್ದು, ಕೆಲವು ಸಂಸ್ಥೆ, ಸಂಘಟನೆಗಳು ತುಳು ಲಿಪಿ ಕಲಿಸುವ ಅಭಿಯಾನಗಳನ್ನು ಹಮ್ಮಿಕೊಂಡಿದೆ. 2016ರ ಆಗಸ್ಟ್ ನಲ್ಲಿ ತುಳು ವಿಕಿಪೀಡಿಯಾ ಅನಾವರಣ ಗೊಂಡಿದೆ. ತುಳು ಭಾಷೆಯ ಕನ್ನಡ ರೂಪದ ಕೃತಿಗಳು, ಕಾದಂಬರಿ, ಕತೆ, ಕಾವ್ಯಗಳು, ಜಾನಪದ ಗೀತೆಗಳು ಮುಂತಾದವುಗಳನ್ನು ತುಳು ಲಿಪಿಯ ಟೈಪಿಂಗ್ ಮಾಡಿಸಿ ಹೊರತರಲು ‘ತುಳು ಬರವು’ ಎಂಬ ಯೂನಿಕೋಡ್ ಮಾದರಿಯ ತಂತ್ರಾಂಶ ವನ್ನು ಅಭಿವೃದ್ಧಿಪಡಿಸಿ ತುಳು ಸಾಹಿತ್ಯ ಅಕಾಡೆಮಿಯು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಉಡುಪಿಯ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರು 1928ರಲ್ಲಿ ತುಳು ಚಳುವಳಿಯನ್ನು ಆರಂಭಿಸಿ ‘ತುಳುವ ಮಹಾಸಭೆ’ ಎಂಬ ಸಂಸ್ಥೆಯನ್ನು ಕಟ್ಟಿದರು. ಜನವರಿ 41970ರಲ್ಲಿ ಎಸ್.ಆರ್.ಹೆಗ್ಡೆಯವರು ‘ಮಂಗಳೂರು ತುಳುಕೂಟ’ವನ್ನು
ಸ್ಥಾಪಿಸಿದ್ದು, ಇದರ ವತಿಯಿಂದ 1994ರಲ್ಲಿ ಮೂಲ್ಕಿಯಲ್ಲಿ ಪ್ರಥಮ ವಿಶ್ವ ತುಳು ಸಮ್ಮೇಳನ ಪ್ರೊ.ಅಮೃತ ಸೋಮೇಶ್ವರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರದ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯನ್ನು ಸ್ಥಾಪಿಸುವಂತೆ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಈ ವಿಶ್ವ ತುಳು ಸಮ್ಮೇಳನದಲ್ಲಿ ಕೈಗೊಂಡು ಹೋರಾಟ ಮುಂದುವರಿಸಿದ ಫಲವಾಗಿ 1994ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು.

1887ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರಿಂದ ರಚಿತವಾದ ಪಂಚವಟಿ-ವಾಲಿ ಸುಗ್ರೀವೆರೆ ಕಾಳಗೊ ಎಂಬುದು ತುಳು ಭಾಷೆಯ ಮೊದಲ ಯಕ್ಷಗಾನ ಪ್ರಸಂಗ ಎಂಬ ಉಲ್ಲೇಖವಿದೆ. ಆ ಬಳಿಕ ತುಳುವರು ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿದ್ದರ ಪರಿಣಾಮವಾಗಿ ಜಾನಪದ, ಐತಿಹಾಸಿಕ, ಕಾಲ್ಪನಿಕ ಪ್ರಸಂಗಗಳ ತಿರುಗಾಟ ಮೇಳಗಳು ಆರಂಭಗೊಂಡವು.

1971ರಲ್ಲಿ ಆಗಿನ ಪ್ರಧಾನ ಮಂತ್ರಿ ಯಾಗಿದ್ದ ಇಂದಿರಾ ಗಾಂಧಿಯವರಿಗೆ ಹಾಗೂ ತುಳು ಅಕಾಡೆಮಿ ವತಿಯಿಂದ 2007ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಒಂದು ಮನವಿ ಸಲ್ಲಿಸಲಾಗಿತ್ತು. 1971ನೇ ಇಸವಿಯಲ್ಲಿ ತುಳು ಸಿನಿಮಾ ಲೋಕ ಉದಯವಾಯಿತು. ಸ್ಥಳೀಯ ಮತ್ತು ವಿದೇಶಿ ಅಧ್ಯಯನಕಾರರಿಗೆ ಪ್ರಮುಖ ಅಧ್ಯಯನ, ಮಾಹಿತಿ ಹಾಗೂ ಕರ್ನಾಟಕ ಮತ್ತು ಇತರ ರಾಜ್ಯದ ಸಂಶೋಧನಾಕಾರರಿಗೆ ಹಾಗೂ ಜಾನಪದ ವಿದ್ಯಾರ್ಥಿಗಳಿಗೆ ನೆರವಾಗಲು ಅಲ್ಲದೇ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ತುಳುನಾಡಿನ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಶೇಷತೆ ಗಳನ್ನು ಪ್ರಚುರ ಪಡಿಸಲು ಮತ್ತು ಭಾಷಾ ಸಂಬಂಧಿ ಉದ್ದೇಶಗಳಿಗಾಗಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ 1992ರಲ್ಲಿ ತುಳು ಪೀಠ ಸ್ಥಾಪನೆಯಾಯಿತು.

2010ರಲ್ಲಿ ಪ್ರಾಥಮಿಕ ಹಂತದಲ್ಲಿ ತುಳು ಸೇರ್ಪಡೆಯಾಗಿದ್ದು, 2014-15 ನೇ ಸಾಲಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ತುಳು ಪಠ್ಯವನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸ ಲಾಯಿತು. ಆದರೆ ಶಿಕ್ಷಕರ ವೇತನ ಪಾವತಿಗೆ
ಸರಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ತುಳು ಸಾಹಿತ್ಯ ಅಕಾಡೆಮಿಗೆ ನೀಡುತ್ತಿರುವ ಅನುದಾನದಲ್ಲಿ ಅಕಾಡೆಮಿಯು
ತುಳು ಶಿಕ್ಷಕರಿಗೆ ವೇತನ ಪಾವತಿಸುತ್ತಿದೆ. ಈಗ ಪದವಿ, ಸ್ನಾತಕೋತ್ತರ ಪದವಿ ತರಗತಿಗಳಲ್ಲಿಯೂ ಈ ಭಾಷೆಗೆ ಅವಕಾಶ ನೀಡಲಾಗಿದೆ.

ತುಳು ಸಾಹಿತ್ಯ ಮತ್ತು ಭಾಷೆಗೆ ಕೊಡುಗೆ ನೀಡಿರುವವರನ್ನು ಗುರುತಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈಗ ತುಳುನಾಡಿನಾದ್ಯಂತ ತುಳು ನಾಮಫಲಕಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಮತ್ತು ತುಳುವನ್ನು ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅಧಿಕೃತ ಭಾಷೆಯನ್ನಾಗಿ ಅಂಗೀಕರಿಸುವಂತೆ ಒತ್ತಾಯಿಸುವ ಸಲುವಾಗಿ TuluTo8thSchedule ಮತ್ತು
#TuluOfficialInKA_KL ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ 2019ರ ಸೆಪ್ಟೆಂಬರ್ 8ರಂದು ನಡೆಸಲಾದ ಟ್ವಿಟರ್ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಟ್ವೀಟ್‌ಗಳು ದಾಖಲಾದವು.

ತುಳು ಭಾಷೆಯ ಪರವಾಗಿ ಅತ್ತ ಕೇರಳದಲ್ಲೂ ಹೋರಾಟಗಳು ನಡೆಯುತ್ತಲೇ ಇದೆ. ವಿಪರ್ಯಾಸವೆಂದರೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಗುರುತಿಸಿದ ಭಾರತೀಯ ಭಾಷೆಗಳ ಪೈಕಿ ಸಿಂಧಿ ಮಾತನಾಡುವವರ ಸಂಖ್ಯೆ 27 ಲಕ್ಷವಾದರೆ ಡೋಗ್ರಿ ಮಾತ ನಾಡುವವರ ಸಂಖ್ಯೆ 26 ಲಕ್ಷ. ಹಾಗೆಯೇ ಮಣಿಪುರಿ ಮಾತನಾಡುವವರ ಸಂಖ್ಯೆ 18 ಲಕ್ಷವಾದರೆ ಬೋಡೊ ಭಾಷೆ ಯನ್ನು ಮಾತನಾಡುವವರ ಸಂಖ್ಯೆ 15 ಲಕ್ಷ.

ವಿಸ್ತೀರ್ಣದಲ್ಲಿ ದಕ್ಷಿಣ ಕನ್ನಡದಷ್ಟೂ ವಿಸ್ತಾರವಿಲ್ಲದ ಸಿಕ್ಕಿಂ ರಾಜ್ಯದಲ್ಲಿ 11 ಭಾಷೆಗಳನ್ನು ಆ ರಾಜ್ಯದ ಅಧಿಕೃತ ಭಾಷೆಗಳು ಎಂದು ಅಂಗೀಕರಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಂಗಾಳಿಯ ಜತೆಗೆ ಬೇರೆ ಬೇರೆ ಭಾಷೆ ಗಳನ್ನಾಡುವ ನಿರ್ದಿಷ್ಟ ಪ್ರದೇಶಗಳಲ್ಲಿ ನೇಪಾಳಿ, ಹಿಂದಿ, ಕುರುಖ್, ಉರ್ದು ಭಾಷೆಗಳನ್ನು ಎರಡನೆಯ ಅಧಿಕೃತ ಭಾಷೆ ಗಳೆಂದು ಮನ್ನಣೆ ನೀಡಲಾಗಿದೆ. ಹಿಂದಿ, ಉರ್ದು, ಕಾಶ್ಮೀರಿ, ಡೋಗ್ರಿ ಮತ್ತು ಇಂಗ್ಲಿಷ್ ಭಾಷೆ ಗಳನ್ನು ಜಮ್ಮು ಮತ್ತು ಕಾಶ್ಮೀರದ ಅಧಿಕೃತ ಭಾಷೆಗಳನ್ನಾಗಿ ಮಾಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಮಧ್ಯೆ ‘ತುಳು ಭಾಷೆ’ಯನ್ನೂ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು 2019ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ
ಒತ್ತಾಯಿಸಿ ದ್ದರು.

ಕಾಸರಗೋಡು ಮತ್ತು ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಹೆಚ್ಚಿನ ಜನರ ಮಾತೃಭಾಷೆ ಯಾಗಿದೆ. 2011ರ ಜನಗಣತಿಯಂತೆ 1846427 ಮಂದಿ ತುಳು ಮಾತನಾಡುತ್ತಿದ್ದಾರೆ.  ಆದರೆ 8ನೇ ಪರಿಚ್ಛೇದದಲ್ಲಿ ಸೇರಿರುವ ಮಣಿಪುರಿ ಭಾಷೆ ಮಾತನಾಡುವವರು 1761079 ಮಂದಿ ಮಾತ್ರ ಇದ್ದಾರೆ ಎಂದು ಕೇಂದ್ರ ಸರಕಾರದ ಗಮನ ಸೆಳೆದರು. ಪ್ರಥಮ ತುಳು ಸಮ್ಮೇಳನವು 2009ರ ಡಿಸೆಂಬರ್ 10 ರಿಂದ 13ರವರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಧರ್ಮಸ್ಥಳದ ಉಜಿರೆಯಲ್ಲಿ ನಡೆದಿತ್ತು. ಈ ಕಾರ್ಯಕ್ರಮವನ್ನು ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರು = ಉದ್ಘಾಟಿಸಿ ಮಾತನಾಡುತ್ತಾ, ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಹಾಗೂ ತುಳು ಕರ್ನಾಟಕದ ಭಾಷೆಗಳಂದು ಎಂದು ಘೋಷಿಸುವುದಕ್ಕೆ ನಮ್ಮ ಸರಕಾರ ಸಿದ್ಧವಿದೆ’ ಎಂದು ಭರವಸೆ ನೀಡಿದ್ದರು.

ಕಾಕತಾಳೀಯ ಎಂಬಂತೆ ಅವರೇ ಈಗ ಮತ್ತೆ ಈ ರಾಜ್ಯದ ಮುಖ್ಯಮಂತ್ರಿ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ 2021ರ ಜನವರಿ 5ರಂದು ಪುನಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರನ್ನು ಭೇಟಿ ಮಾಡಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಸೂಕ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.

ಇಷ್ಟೆ ಗ್ರಾಂಥಿಕ, ಐತಿಹಾಸಿಕ, ವೈಜ್ಞಾನಿಕ ಪುರಾವೆಗಳು, ನಾನಾ ರೂಪದ ಹೋರಾಟಗಳು, ಒತ್ತಾಯಗಳಿಗಿಂತಲೂ ಮುಖ್ಯವಾಗಿ ಗೌರವಿಸಲ್ಪಡಬೇಕಾದದ್ದು ಜನರ ಭಾವನೆಗಳು. ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ಮತ್ತು ಸಂವಿಧಾನದ 8ನೇ
ಪರಿಚ್ಛೇದಕ್ಕೆ ಸೇರ್ಪಡೆಗಾಗಿನ ಅಪಾರ ತುಳು ಭಾಷಿಕರ ಹೋರಾಟ ನ್ಯಾಯೋಚಿತವಲ್ಲವೇ?