ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು ಕಾಂಗ್ರೆಸಿಗರ ಪರಿಪಾಠ. ಇವರು ನೂತನ ಪಾರ್ಲಿಮೆಂಟ್ ಉದ್ಘಾಟನೆ ಯನ್ನು ಬಹಿಷ್ಕರಿಸಿದ್ದರು, ಮಧ್ಯರಾತ್ರಿಯಲ್ಲಿ ಜಿಎಸ್‌ಟಿ ಜಾರಿಗೊಳಿಸುವ ಸಮಾರಂಭಕ್ಕೆ ಗೈರಾಗಿದ್ದರು, ಜಿ-೨೦ ಶೃಂಗಸಭೆಯ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ನೀಡಿದ ಔತಣಕೂಟವನ್ನು ಬಹಿಷ್ಕರಿಸಿದ್ದರು.
ಇದು ೨೦೧೭ರ ಘಟನೆ. ಆಗ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದ ಕಪಿಲ್ ಸಿಬಲ್ ಅವರು ಆ ವರ್ಷದ ಡಿಸೆಂಬರ್ ನಲ್ಲಿ, ರಾಮಜನ್ಮಭೂಮಿ ವಿವಾದದ ತೀರ್ಪನ್ನು ೨೦೧೯ರ ಲೋಕಸಭಾ ಚುನಾವಣೆಯ ತರುವಾಯ ನೀಡುವಂತೆ ಸುಪ್ರೀಂ ಕೋರ್ಟಿನ ಮುಂದೆ ಪ್ರಾರ್ಥಿಸಿದರು. ಈ ತೀರ್ಪು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅವರ ಕೊರಗಾಗಿತ್ತು.
೨೦೨೪ರ ಜನವರಿ. ‘ರಾಮಮಂದಿರ ಪೂರ್ಣ ವಾಗಿಲ್ಲ; ಆದ್ದರಿಂದ ಅದರ ಉದ್ಘಾಟನೆಯನ್ನು ಮುಂದೂಡಬೇಕು’ ಎನ್ನುವ ಮೂಲಕ ಕಾಂಗ್ರೆಸ್ ಪಾರ್ಟಿಯು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿತು. ಈಗಲೂ, ‘ಇದು ೨೦೨೪ರ ಲೋಕಸಭಾ ಚುನಾವಣೆಯಲ್ಲಿ
ಬಿಜೆಪಿಗೆ ಲಾಭವಾಗುತ್ತದೆ’ ಎಂಬುದೇ ಇವರ ಆತಂಕ!
ರಾಮಮಂದಿರದಲ್ಲಿನ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಟ್ರಸ್ಟ್‌ನವರಿಂದ ಕಾಂಗ್ರೆಸ್ ಮುಖಂಡರಿಗೆ ಕಳೆದ ಡಿಸೆಂಬರ್ ೨೧ರಂದು ಆಹ್ವಾನ
ನೀಡಲ್ಪಟ್ಟಿತು; ಆದರೆ ತಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಮೊನ್ನೆ ಜನವರಿ ೧೦ರಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದರು. ಆಹ್ವಾನದ ತಿರಸ್ಕಾರಕ್ಕೆ ಅವರು ಕೊಟ್ಟ ಕಾರಣ- ಇದು ಬಿಜೆಪಿ ಮತ್ತು ಆರೆಸ್ಸೆಸ್‌ನ ಒಂದು ಕಾರ್ಯಕ್ರಮವಾಗಿದೆ ಎಂಬುದು. ಶ್ರದ್ಧೆಗಿಂತ ರಾಜಕೀಯವೇ ಹೆಚ್ಚಿದೆ ಮತ್ತು ಮಂದಿರವು ಪೂರ್ಣ ಗೊಳ್ಳುವ ಮುನ್ನವೇ ಚುನಾವಣೆಯ ಕಾರಣಕ್ಕಾಗಿ ಪ್ರಧಾನ ಮಂತ್ರಿಗಳು ಆತುರಾತುರವಾಗಿ ಉದ್ಘಾ
ಟನೆ ಮಾಡುತ್ತಿದ್ದಾರೆ ಎಂಬಿತ್ಯಾದಿ ನೆಪವನ್ನು ನೀಡಿ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಆಹ್ವಾನ ಪತ್ರಿಕೆಯನ್ನು ಕಾಂಗ್ರೆಸ್‌ಗೆ ಕೊಟ್ಟಾಗಲೇ ಕಮ್ಯುನಿಸ್ಟ್ ಪಕ್ಷದವರಿಗೂ ನೀಡಲಾಗಿತ್ತು; ಆದರೆ ವಾರಗಳ ಹಿಂದೆಯೇ ಅವರು, ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು. ಶಂಕರಾಚಾರ್ಯ ಪರಂಪರೆಯ, ಪುರಿಯ ಶ್ರೀ ನಿಶ್ಚಲಾನಂದ ಸರಸ್ವತಿ ಮತ್ತು ಜ್ಯೋತಿರ್ಮಠದ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಗಳು ಕೂಡ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿ ಸುವುದಿಲ್ಲ ಎಂದು ಘೋಷಿಸಿದ್ದಾರೆ; ಶಾಸಕ್ಕನು ಗುಣವಾಗಿ ಕಾರ್ಯಕ್ರಮ ನಡೆಯುತ್ತಿಲ್ಲ ಮತ್ತು ಮಂದಿರ ಅಪೂರ್ಣವಾಗಿರುವುದರಿಂದ ಉದ್ಘಾಟನೆ
ಧರ್ಮಸಮ್ಮತವಲ್ಲ ಎಂಬುದು ಅವರ ಆರೋಪ.
ಈ ಪರಂಪರೆಯ ಮತ್ತಿಬ್ಬರು ಪೀಠಾಧೀಶರಾದ ದ್ವಾರಕ ಮತ್ತು ಶೃಂಗೇರಿ ಸ್ವಾಮಿಗಳು ಪ್ರಾಣ ಪ್ರತಿಷ್ಠಾಪನೆಯನ್ನು ಬೆಂಬಲಿಸಿ, ಈ ಕಾರ್ಯ
ಕ್ರಮದಲ್ಲಿ ಭಾಗವಹಿಸಲು ತಮ್ಮ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ ಹಾಗೂ ತಾವು ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ವಿರೋಧಿಸುವ
ಸಂದೇಶ ನೀಡಿಲ್ಲ, ಇದು ಕೆಲ ಧರ್ಮದ್ವೇಷಿಗಳು ಮಾಡುತ್ತಿರುವ ಮಿಥ್ಯಾಪ್ರಚಾರ ಎಂಬ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಭವ್ಯ-ದಿವ್ಯ ರಾಮಮಂದಿರದ ಉದ್ಘಾಟನೆಯ ಆಸುಪಾಸಿನಲ್ಲಿ ಹೀಗೆ ಗೊಂದಲ ಸೃಷ್ಟಿಸಿ ವಿವಾದ ಹುಟ್ಟುಹಾಕಿ, ಗಮನ ಬೇರೆಡೆಗೆ ಸೆಳೆಯುವ ತಂತ್ರಗಾರಿಕೆಯ ಭಾಗವಾಗಿ ಕಾಂಗ್ರೆಸ್‌ನವರು, ಪುರಿ ಮತ್ತು ಜ್ಯೋತಿರ್ಮಠ ಶಂಕರಾಚಾರ್ಯರ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡು, ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮಸಿ ಬಳಿಯುವ ವಿಫಲಯತ್ನ ನಡೆಸಿದ್ದಾರೆ.
ಕಾಕತಾಳೀಯವೆಂಬಂತೆ, ಈ ಇಬ್ಬರು ಸ್ವಾಮೀಜಿಗಳು ಪ್ರಾಣ ಪ್ರತಿಷ್ಠಾಪನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ ತರುವಾಯ ಕಾಂಗ್ರೆಸ್‌ನ ನಿಲುವು ಪ್ರಕಟವಾಗಿದ್ದು; ತದನಂತರ ಕಾಂಗ್ರೆಸ್‌ನ ಪ್ರತಿಯೊಬ್ಬ ನಾಯಕರು ಪಕ್ಷದ ನಿಲುವನ್ನು ಸಮರ್ಥಿಸಿಕೊಳ್ಳಲು ಈ ಇಬ್ಬರು ಸ್ವಾಮೀಜಿಗಳ ಹೇಳಿಕೆಯ ಹಿಂದೆ ಆಶ್ರಯ ಪಡೆದಿದ್ದಾರೆ. ಕಾಂಗ್ರೆಸ್ ವಕ್ತಾರ ಪವನ್ ಖೇರ ಅವರು, ‘ಪ್ರಾಣ ಪ್ರತಿಷ್ಠಾಪನಾ ವಿಧಿಗಳು ಶಂಕರಾಚಾರ್ಯ ಪರಂಪರೆಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯಬೇಕಿತ್ತು’ ಎಂದು ಹೇಳಿಕೆ ನೀಡುವ ಮೂಲಕ ಧಾರ್ಮಿಕ ಆಚರಣೆಯನ್ನು ಅರೆದು ಕುಡಿದವರಂತೆ ಮಾತಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರವು ಮೊದಲೂ ಇತ್ತು; ಅದರ ಪೂಜೆಯು ಶಾಸಪ್ರಕಾರ ಸಾಗುತ್ತಲೇ ಬಂದಿದ್ದು, ಈ ಸಂಪ್ರದಾಯವನ್ನು ಈಗಲೂ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರೈ ಸ್ಪಷ್ಟನೆ ನೀಡಿದ್ದಾರೆ. ತಿಳಿಯದ ವಿಷಯದಲ್ಲಿ ಮೂಗು ತೂರಿಸಿ ಅಪಹಾಸ್ಯಕ್ಕೆ ಈಡಾಗುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು! ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂಬುದು ಆಹ್ವಾನ ತಿರಸ್ಕಾರಕ್ಕೆ ಕಾಂಗ್ರೆಸ್ ನೀಡುತ್ತಿರುವ ಮತ್ತೊಂದು ಕಾರಣ. ೧೯೮೯ರಲ್ಲಿ ಪಾಲಂಪುರ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ರಾಮಜನ್ಮಭೂಮಿ ಸ್ಥಾನದಲ್ಲಿ ಮಂದಿರ ನಿರ್ಮಾಣ ವಾಗಬೇಕು ಎಂಬ ನಿರ್ಣಯ ಕೈಗೊಂಡ ತರುವಾಯ, ಅದನ್ನು ಸಾಕಾರಗೊಳಿಸಲು ನಡೆದ ಎಲ್ಲ ಹೋರಾಟಗಳಲ್ಲಿ ಬಿಜೆಪಿ ನಾಯಕರು ಮುಂಚೂಣಿಯಲ್ಲಿದ್ದರು.
ಆಡ್ವಾಣಿಯವರ ನೇತೃತ್ವದಲ್ಲಿ ೧೯೯೦ ರಲ್ಲಿ ನಡೆದ ರಾಮರಥ ಯಾತ್ರೆಯು, ರಾಮ ಮಂದಿರ ಹೋರಾಟವನ್ನು ಜನಾಂದೋಲನವಾಗಿ ಪರಿವರ್ತಿಸುವಲ್ಲಿ ಮಹತ್ತರ ಪಾತ್ರವಹಿಸಿತು. ೧೯೯೦ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಭಾಗಿಯಾ ಗಿದ್ದರು. ಅಂದು ಕರಸೇವೆಗೆ ಅಯೋಧ್ಯೆಗೆ ತೆರಳಲು ಮುಂದಾದ ಅಟಲ್ ಬಿಹಾರಿ ವಾಜಪೇಯಿಯವರನ್ನು ಲಖನೌ ವಿಮಾನ ನಿಲ್ದಾಣದಲ್ಲಿ ಬಂಧಿಸ
ಲಾಗಿತ್ತು. ೧೯೯೨ರಲ್ಲಿ ನಡೆದ ನಿರ್ಣಾಯಕ ಕರಸೇವೆ ಯಲ್ಲಿ, ವಿವಾದಿತ ಕಟ್ಟಡವು ನೆಲಸಮವಾದಾಗ ಬಿಜೆಪಿಯು ಬಹುದೊಡ್ಡ ಬೆಲೆಯನ್ನು ತೆರ
ಬೇಕಾಯಿತು. ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ಸರಕಾರಗಳನ್ನು ವಜಾ ಮಾಡಲಾಯಿತು.
ರಾಮ ಮಂದಿರ ನಿರ್ಮಾಣದ ಹೋರಾಟದ ನೇತೃತ್ವ ವಹಿಸಿದ್ದ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಪೊಲೀಸರ ಗುಂಡಿಗೆ ಬಲಿಯಾಗಿ
ಹುತಾತ್ಮರಾಗಿದ್ದಾರೆ. ಸಂಘ ಪರಿವಾರದ ಸದಸ್ಯರು ಮಂದಿರಕ್ಕಾಗಿ ಹೋರಾಟ ಮಾಡುವಾಗ ಅವರಿಗೆ ಕೋಮುವಾದಿಗಳು ಎಂಬ ಹಣೆಪಟ್ಟಿ ಕಟ್ಟಲಾಯಿತು, ರಾಮನ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ದೂಷಿಸಲಾಯಿತು. ಮಾತ್ರವಲ್ಲದೆ, ಹೋರಾಟಗಾರರನ್ನು ಬಂಧಿಸಿ ಹಲವಾರು ಮೊಕದ್ದಮೆಗಳನ್ನು ಹೂಡಿ ಕಿರುಕುಳ ನೀಡಲಾಯಿತು, ರಾಮಭಕ್ತರನ್ನು ರಾಜಕೀಯ ಅಸ್ಪೃಶ್ಯರನ್ನಾಗಿ ಕಾಣಲಾಯಿತು ಮತ್ತು ಆರೆಸ್ಸೆಸ್ ಮೇಲೆ ನಿಷೇಧ ಹೇರಲಾಯಿತು. ಇಂದು ರಾಮಮಂದಿರರ ಕನಸು ನನಸಾಗುತ್ತಿರು ವಾಗ, ‘ಮಂದಿರದ ಉದ್ಘಾಟನೆಗೆ ರಾಜಕೀಯದ ಲೇಪ ನೀಡಲಾಗಿದೆ’ ಎಂದು ಆರೋಪಿಸುವ ಧಾರ್ಷ್ಟ್ಯ ಇವರದ್ದು.
‘ರಾಮಮಂದಿರದ ವಿವಾದ ಬಗೆಹರಿದಿದ್ದು ನ್ಯಾಯಾಲಯದ ಮೂಲಕ, ಇದರಲ್ಲಿ ಬಿಜೆಪಿಯವರ ಪಾತ್ರವಿಲ್ಲ’ ಎಂದು ಈಗ ಕೂಗುತ್ತಿರುವ
ಕಾಂಗ್ರೆಸಿಗರು, ೨೦೦೪ರಿಂದ ೨೦೧೪ರವರೆಗೆ ಅಧಿಕಾರವಿದ್ದಾಗ ವಿವಾದವನ್ನು ಇತ್ಯರ್ಥಪಡಿಸಬೇಕಿತ್ತು. ಕೇಂದ್ರದಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಬಂದ ೫ ವರ್ಷದಲ್ಲೇ ಕೋರ್ಟ್ ಮೂಲಕ ಈ ವಿವಾದ ಇತ್ಯರ್ಥವಾಗಿದ್ದು ವಾಸ್ತವ ಸಂಗತಿ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದ ನಂತರವೂ,
ಅದರ ಶ್ರೇಯಸ್ಸು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ೧೯೭೧ರ ಯುದ್ಧದ ಗೆಲುವು ಸೈನ್ಯಕ್ಕೆ ಸಲ್ಲುವುದಕ್ಕಿಂತ ಹೆಚ್ಚಾಗಿ ಇಂದಿರಾ ಗಾಂಧಿಯವರಿಗೆ ಸಲ್ಲಬೇಕು.
ಆದರೆ ರಾಮಮಂದಿರ ನಿರ್ಮಾಣದ ಶ್ರೇಯಸ್ಸನ್ನು ಮಾತ್ರ ಬಿಜೆಪಿ ಅಥವಾ ಆರೆಸ್ಸೆಸ್ ನವರು ಪಡೆಯಬಾರದು ಎಂಬ ತರ್ಕರಹಿತ ವಾದ ಇವರದ್ದು.
‘ಮಂದಿರವು ಅಪೂರ್ಣ, ಉದ್ಘಾಟನೆಗೆ ಅರ್ಥವಿಲ್ಲ’ ಎಂದು ಹಲುಬುತ್ತಿರುವವರಿಗೆ, ಶ್ರೀರಾಮನು ವಿವಾದಿತ ಕಟ್ಟಡದಲ್ಲಿ ದಶಕಗಳಿಂದ ಸ್ಥಾಪಿತವಾಗಿ
ದ್ದಾಗ ಅದು ಅಪಮಾನಕರ ಎಂದು ನೋವಾಗಲೇ ಇಲ್ಲ. ವಿವಾದಿತ ಕಟ್ಟಡ ನೆಲಸಮವಾದ ತರುವಾಯ ತಾತ್ಕಾಲಿಕ ಚಾವಣಿಯಲ್ಲಿ ರಾಮಲಲ್ಲಾ ಸ್ಥಾಪಿತ ವಾದಾಗ, ಶಾಶ್ವತ ಕಟ್ಟಡ ನಿರ್ಮಿಸಿ ಹಿಂದೂಗಳ ಭಾವನೆಗೆ ಗೌರವ ನೀಡಲು ಇವರೆಂದೂ ಆಲೋಚಿಸಲೇ ಇಲ್ಲ. ಇದರ ಬಗ್ಗೆ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೃಂಗೇರಿ ಮಠದ ನಿರ್ವಹಣಾಧಿಕಾರಿ ಗೌರಿಶಂಕರ್ ಅವರು ‘ಗರ್ಭ ಗುಡಿಯು ಸಿದ್ಧವಾಗಿದೆ, ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲು ಯಾವ ಅಡ್ಡಿಯೂ ಇಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ.
ಧರ್ಮಸೂಕ್ಷ್ಮವನ್ನು ಅರಿತ ವಿದ್ವಾಂಸರು ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತವನ್ನು ನಿರ್ಧರಿಸಿರುವುದು. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ಉಡುಪಿಯ ಪೇಜಾವರ ಶ್ರೀಗಳೂ ಇದ್ದಾರೆ. ಅವರೆಲ್ಲರ ಸಮ್ಮತಿಯ ನಂತರವೇ ದಿನಾಂಕ ನಿಗದಿಯಾಗಿರುವುದು ಎಂಬ ಸಂಗತಿಯನ್ನು ಮರೆಯಬಾರದು. ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು ಕಳೆದ ೧೦ ವರ್ಷಗಳಲ್ಲಿ ಕಾಂಗ್ರೆಸಿಗರ ಪರಿಪಾಠವಾಗಿದೆ. ಇವರು ನೂತನ ಪಾರ್ಲಿ ಮೆಂಟ್ ಉದ್ಘಾಟನೆಯನ್ನು ಬಹಿಷ್ಕರಿಸಿದ್ದರು, ಮಧ್ಯರಾತ್ರಿಯಲ್ಲಿ ಜಿಎಸ್‌ಟಿ ಪದ್ಧತಿ ಜಾರಿಗೊಳಿಸುವ ಸಮಾರಂಭಕ್ಕೆ ಗೈರಾಗಿದ್ದರು, ಜಿ-೨೦ ಶೃಂಗಸಭೆಯ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ನೀಡಿದ ಔತಣಕೂಟವನ್ನು ಬಹಿಷ್ಕರಿಸಿದ್ದರು.
ರಾಮನಾಥ ಕೋವಿಂದ್‌ರವರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದಾಗಲೂ ಕಾಂಗ್ರೆಸ್ ಸದಸ್ಯರು ಚಕ್ಕರ್ ಹಾಕಿದ್ದರು. ಈಗ ಮತ್ತದೇ ಚಾಳಿಯನ್ನು ಮುಂದುವರಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ತಮಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು. ಆದರೆ, ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳನ್ನು ಹೊರತುಪಡಿಸಿ ಇತರರಿಗೆ ಆಹ್ವಾನ ನೀಡಿಲ್ಲ; ಭದ್ರತಾ ವ್ಯವಸ್ಥೆ ಮಾಡುವುದು ಕಷ್ಟಕರವಾಗಿರುವು ದರಿಂದ ಭದ್ರತಾ ಶಿಷ್ಟಾಚಾರವಿರುವ ಯಾರೂ ಬರಬೇಡಿ’ ಎಂದು ಟ್ರಸ್ಟ್‌ನವರೇ ಸ್ಪಷ್ಟಪಡಿಸಿದ್ದಾರೆ.
‘ದೇವಸ್ಥಾನಕ್ಕೆ ಹೋಗಲು ನಮಗೆ ಬಿಜೆಪಿಯ ಆಹ್ವಾನ ಬೇಕಿಲ್ಲ’ ಎಂಬುದು ಕೆಲ ಕಾಂಗ್ರೆಸಿಗರ ಮತ್ತೊಂದು ವರಸೆ. ಮಂದಿರಕ್ಕೆ ಹೋಗುವುದು ಅಥವಾ ಹೋಗದಿರುವುದು ನಮ್ಮ ಇಚ್ಛೆ, ಅದಕ್ಕಾಗಿ ಯಾರ ಆಹ್ವಾನವೂ ಬೇಡ. ೫೦೦ ವರ್ಷಗಳ ತರುವಾಯ ಶ್ರೀರಾಮನು ತನ್ನ ಜನ್ಮಸ್ಥಾನದಲ್ಲಿ ವಿರಾಜಮಾನ ನಾಗುತ್ತಿರುವ ಈ ವಿಶೇಷ ಸಂದರ್ಭದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವುದು ವ್ಯವಸ್ಥೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ. ವಿವಾದಿತ ಕಟ್ಟಡದಲ್ಲಿದ್ದು, ನಂತರ ಬಟ್ಟೆಯನ್ನು ಸುತ್ತಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಚಾವಣಿಯಡಿ ನೆಲೆಗೊಂಡಿದ್ದ ಶ್ರೀರಾಮಚಂದ್ರ, ಅಂತಿಮವಾಗಿ ತನ್ನ ವನವಾಸ ಮುಗಿಸಿ ಭವ್ಯವಾದ ಮಂದಿರವನ್ನು ಪ್ರವೇಶಿಸುತ್ತಿದ್ದಾನೆ.
ಅವನನ್ನು ಸಂಭ್ರಮದಿಂದ ಸ್ವಾಗತಿಸಲು ದೇಶದ ಜನರು ಕಾತುರದಿಂದ ಕಾಯು ತ್ತಿದ್ದಾರೆ. ಜನವರಿ ೨೨ರಂದು ಕಾಣಿಸಿಕೊಳ್ಳಲಿರುವ ರಾಮನ ಸುನಾಮಿಯು ಎಲ್ಲ ರಾಜಕೀಯ ಪ್ರೇರಿತ ವಿರೋಧವನ್ನು ಕೊಚ್ಚಿಕೊಂಡು ಹೋಗುವುದು ನಿಶ್ಚಿತ.
(ಲೇಖಕರು ಬಿಜೆಪಿಯ ಮಾಜಿ
ಮಾಧ್ಯಮ ಸಂಚಾಲಕರು)