Wednesday, 9th October 2024

ಸರಕಾರದಲ್ಲೇ ಇದ್ದಾರೆ ವಿವಾದ ಸೃಷ್ಟಿಸುವವರು

ವರ್ತಮಾನ

maapala@gmail.com

ಆಡಳಿತಗಾರರು ಆಡುವ ಸಣ್ಣ ಮಾತುಗಳು, ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೆಲವೊಮ್ಮೆ ಸುಳ್ಳು ಹೇಳದಿದ್ದರೂ ಕಹಿ ಸತ್ಯವನ್ನು ಬಹಿರಂಗಪಡಿಸಬಾರದು. ಇಲ್ಲವಾದಲ್ಲಿ ಸರಕಾರ ವಿವಾದ, ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ.

ಚುನಾವಣೆ ವೇಳೆ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಮೂರು ಯೋಜನೆಗಳನ್ನು ಜಾರಿಗೊಳಿಸಿ ಇನ್ನೊಂದಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡೂವರೆ ತಿಂಗಳಲ್ಲಿ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಗ್ಯಾರಂಟಿಗಳಿಗೆ ಅನುದಾನ ಹೊಂದಾಣಿಕೆ, ಅವುಗಳ ಸಮರ್ಪಕ ಜಾರಿಯಲ್ಲೇ ಇಷ್ಟು ದಿನ ಕಾಲ ಕಳೆದ ಸರಕಾರಕ್ಕೆ ಇದೀಗ ನಿಜವಾದ ಸವಾಲು ಎದುರಾಗಿದೆ.

ಆಡಳಿತಕ್ಕೆ ಚುರುಕು ಮುಟ್ಟಿಸುವುದರ ಜತೆಗೆ ಅಭಿವೃದ್ಧಿ ಯೋಜನೆಗಳನ್ನು ಜನ ಮೆಚ್ಚುವ ರೀತಿ ಜಾರಿಗೆ ತರಬೇಕಾಗಿದೆ. ಏಕೆಂದರೆ, ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಗ್ಯಾರಂಟಿಗಳ ಜತೆಗೆ ಇತರೆ ಅಭಿವೃದ್ಧಿ ಕೆಲಸಗಳನ್ನೂ ತಕ್ಕಮಟ್ಟಿಗೆ ಜಾರಿಗೊಳಿಸದೇ ಇದ್ದರೆ ಅದು ಪಕ್ಷದ ಮೇಲೆ ಪರಿಣಾಮ ಬೀರಬಹುದು. ಇದರಿಂದ ರಾಜ್ಯ ಸರಕಾರಕ್ಕೆ ಅಪಾಯವೇನೂ ಎದುರಾಗದೇ ಇದ್ದರೂ ಹೈಕಮಾಂಡ್ ಮಟ್ಟದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್‌ನ ಆಡಳಿತದ ಬಗ್ಗೆ ಅಸಮಾಧಾನ ಹೆಚ್ಚಾಗ ಬಹುದು. ಹೀಗಾಗಿ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆ ಯಿಂದ ಇಡಬೇಕಾದ ಪರಿಸ್ಥಿತಿ ಕಾಂಗ್ರೆಸ್ ಸರಕಾರಕ್ಕಿದೆ.

ಈ ನಿಟ್ಟಿನಲ್ಲಿ ಸರಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆಯಾದರೂ ಕೆಲವೊಂದು ಕ್ಷುಲ್ಲಕ ಹೇಳಿಕೆಗಳು, ನಿರ್ಧಾರಗಳು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಉದಾಹರಣೆಗೆ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆ ಇಟ್ಟು ವಿದ್ಯಾರ್ಥಿನಿಯರ ವೀಡಿಯೋ ಮಾಡಿದ ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆ. ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಉಡುಪಿಯಲ್ಲಿ ನಡೆದ ಈ ಪ್ರಕರಣದಲ್ಲಿ ಸಂತ್ರಸ್ತೆ ಹಿಂದೂ ವಿದ್ಯಾರ್ಥಿನಿಯಾಗಿದ್ದರೆ, ವೀಡಿಯೋ ಮಾಡಿದ ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಈ ಕಾರಣಕ್ಕಾಗಿಯೇ ಆ ಘಟನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದು ಸಣ್ಣ ಘಟನೆ, ಮಕ್ಕಳಾಟವೇ ಆಗಿದ್ದಿರಬಹುದು. ಆದರೆ, ವಿವಾದ ತೀವ್ರ ಸ್ವರೂಪ ಪಡೆದಾಗ ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರು ಈ ಕುರಿತು ಗಂಭೀರತೆಯಿಂದ ಮತ್ತು ಜವಾಬ್ದಾರಿ ಯುತವಾಗಿ ಮಾತನಾಡಬೇಕಿತ್ತು. ಪ್ರಕರಣದ ಕುರಿತು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರೂ
ಸಾಕಿತ್ತು. ಆದರೆ, ಇದೊಂದು ಸಣ್ಣ ಘಟನೆ, ಮಕ್ಕಳಾಟ. ಹಿಂದೆಲ್ಲಾ ಕಾಲೇಜುಗಳಲ್ಲಿ ಇದೆಲ್ಲಾ ನಡೆಯುತ್ತಿರಲಿಲ್ಲವೇ ಎನ್ನುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದರು.

ಉಗುರಲ್ಲಿ ಹೋಗಬೇಕಾಗಿದ್ದಕ್ಕೆ ಕೊಡಲಿ ತೆಗೆದುಕೊಳ್ಳುವಂತೆ ಮಾಡಿದರು. ಅಂದು ಗೃಹ ಸಚಿವರು ಆಡಿದ ಆ ಒಂದು ಮಾತು ಇಂದಿಗೂ ವಿವಾದವನ್ನು ದೊಡ್ಡದು ಮಾಡುತ್ತಲೇ ಇದೆ. ಗೃಹ ಸಚಿವರಿಂದ ಇಂತಹ ಹೇಳಿಕೆ ಬಂದಿದ್ದೇ ತಡ. ಪೊಲೀಸರು ಉಡುಪಿ ಪ್ರಕರಣದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಭಾಗಿಯಾಗಿ ದ್ದಾರೆ. ಆ ಕಾರಣಕ್ಕೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ ಯುವತಿಯೊಬ್ಬಳ ಮನೆಗೆ ತೆರಳಿ ಪೋಷಕರನ್ನು ವಿಚಾರಣೆಗೊಳಪಡಿಸಿದರು. ಇದು ಮತ್ತೊಂದು ವಿವಾದಕ್ಕೆ ಕಾರಣವಾಯಿತು.

ಬಿಜೆಪಿ ಕಾರ್ಯಕರ್ತೆಯೊಬ್ಬರು ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಕುಟುಂಬವನ್ನೂ ಎಳೆತಂದು ಬಂಧನಕ್ಕೊಳಗಾದರು. ಉಡುಪಿ ಪ್ರಕರಣದ ಕುರಿತು ಎಸ್‌ಐಟಿ ತನಿಖೆ, ಸಿಬಿಐ ತನಿಖೆ ಆಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈಗಲೂ ಉಡುಪಿ ಜಿಲ್ಲೆಯಲ್ಲಿ ಈ ಕುರಿತು ಹೋರಾಟ ನಡೆಯುತ್ತಲೇ ಇದೆ.
ಇದಕ್ಕೂ ಮೊದಲು ಬೆಂಗಳೂರಿನ ಸಿಸಿಬಿ ಪೊಲೀಸರು ನಾಲ್ವರು ಶಂಕಿತ ಉಗ್ರರರನ್ನು ಬಂಽಸಿದಾಗ, ಬಂಧಿತರನ್ನು ಈಗಲೇ ಉಗ್ರರೆನ್ನಲು ಸಾಧ್ಯವಿಲ್ಲ. ವಿಚಾರಣೆ ನಡೆಸಿ ಉಗ್ರರ ಸಂಪರ್ಕ ಇದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದಿದ್ದರು.

ಮತ್ತೊಂದೆಡೆ ಶಾಸಕರೊಬ್ಬರ ಪತ್ರ ಪರಿಗಣಿಸಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ, ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸೇರಿದಂತೆ ಅಲ್ಲಿ ನಡೆದ ಗಲಭೆಗಳು, ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಒಳಾಡಳಿತ ಇಲಾಖೆಗೆ ಪತ್ರ ಬರೆದಿದ್ದರು. ಈ ಮೂರು ಪ್ರಕರಣಗಳನ್ನು  ಮುಂದಿಟ್ಟುಕೊಂಡೇ ಪ್ರತಿಪಕ್ಷ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಕಾಂಗ್ರೆಸ್ ಸರಕಾರವನ್ನು ಹಿಂದೂಗಳ ವಿರೋಧಿ, ಮುಸ್ಲಿಂ ತುಷ್ಠೀಕರಣ ಮಾಡುತ್ತಿದೆ ಎಂದು ಆರೋಪಿಸಲಾರಂಭಿಸಿದವು. ಆ ಮೂಲಕ ಬಿಜೆಪಿ ಸರಕಾರದ ಅವಧಿಯಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಮೂವರು ಮುಸ್ಲಿಮರ ಜತೆಗೆ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಎಂಬುವರಿಗೆ ಕಾಂಗ್ರೆಸ್ ಸರಕಾರ ೨೫ ಲಕ್ಷ ರು. ಪರಿಹಾರ ನೀಡುವ ಮೂಲಕ ಜಾತಿ, ಧರ್ಮ ಮೀರಿ ಕೈಗೊಂಡ ಮಹತ್ವದ ನಿರ್ಧಾರ ಮೂಲೆಗುಂಪಾಯಿತು.

ಸರಕಾರದ ಗ್ಯಾರಂಟಿ ಯೋಜನೆಗಳಿಗೆ ವಿಶೇಷ ಘಟಕ (ಎಸ್‌ಸಿಪಿ) ಮತ್ತು ಬುಡಕಟ್ಟು ಉಪಯೋಜನೆ (ಟಿಎಸ್‌ಪಿ) ಅನುದಾನ ಬಳಕೆ ವಿಚಾರದಲ್ಲೂ ಅದೇ ಆಯಿತು. ಸತ್ಯ ಹೇಳಲು ಹೋಗಿ ಸಿಕ್ಕಿಬಿದ್ದು ಸರಕಾರ ದಲಿತ ವಿರೋಧಿ ಎಂಬ ಆರೋಪಕ್ಕೆ ಒಳಗಾಗಬೇಕಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿ ಗಾಗಿಯೇ ಇರುವ ಈ ವಿಶೇಷ ಘಟಕ ಯೋಜನೆಯಡಿ ೨೦೨೩-೨೪ನೇ ಸಾಲಿಗೆ ೩೪,೩೦೦ ಕೋಟಿ ರು. ಮೊತ್ತದ ಕ್ರಿಯಾ ಯೋಜನೆಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಪರಿಶಿಷ್ಟ ಜಾತಿ/ ಪಂಗಡದ ರಾಜ್ಯ ಅಭಿವೃದ್ಧ ಪರಿಷತ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ೩೪,೩೦೦ ಕೋಟಿ ರು. ಪೈಕಿ ೧೧,೦೦೦ ಕೋಟಿ ರು. ಅನ್ನು ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಬಳಸಿಕೊಳ್ಳಲಾಯಿತು.

ಈ ವಿಚಾರದಲ್ಲಿ ಸರಕಾರ ಕೈಗೊಂಡ ನಿರ್ಧಾರ ತಪ್ಪೇನೂ ಅಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರೂ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆದುಕೊಳ್ಳು ತ್ತಿರುವುದರಿಂದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಸಿಕೊಳ್ಳಲು ಅವಕಾಶವಿದೆ. ಈ ಹಿಂದೆ ಇದೇ ಕಾಂಗ್ರೆಸ್ ಸರಕಾರ (೨೦೧೩-೧೮) ಎಸ್ ಸಿಪಿ-ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂಬ ಕಾಯಿದೆ ಜಾರಿಗೊಳಿಸಿದ್ದರೂ ಬಳಿಕ ಅನುದಾನ ಇತರೆ ಉದ್ದೇಶಗಳಿಗೆ ಬಳಸಿದ ಅದೆಷ್ಟೋ ಉದಾ
ಹರಣೆಗಳಿವೆ. ಇದೀಗ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಸುತ್ತಿರುವುದರ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ ಅಧೀಕಾರದಲ್ಲಿದ್ದಾಗಲೂ ಈ ಅನುದಾನ ದುರ್ಬಳಕೆ ಆಗಿದೆ. ಸಾಕಷ್ಟು ಅನುದಾನವನ್ನು ಆಯಾ ವರ್ಷಾಂತ್ಯದಲ್ಲಿ ಬಳಕೆಯಾಗದೆ ಉಳಿದಿದ್ದೂ ಇದೆ.

ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಾಣಿಕೆ ಮಾಡುವ ಉದ್ದೇಶದಿಂದ ಮತ್ತು ಹಿಂದಿನ ವರ್ಷಗಳಂತೆ ಈ ಹಣ ಬಳಕೆಯಾಗದೆ ಉಳಿಯ ಬಾರದು ಎಂಬ ಕಾರಣಕ್ಕೆ ಸರಕಾರ ಆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನದಿಂದ ೧೧,೦೦೦ ಕೋಟಿ ರು. ಬಳಸಿಕೊಳ್ಳಲಾಗುತ್ತಿದೆ ಎಂಬ ಸತ್ಯ ಹೇಳುವ ಮೂಲಕ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಈ ವಿಷಯ ವಿವಾದ ಕ್ಕೀಡಾಗಲು ಕಾರಣರಾಗಿದ್ದಾರೆ. ಒಂದೊಮ್ಮೆ ಅವರು ಈ ಸತ್ಯ ಹೇಳದೇ ಇದ್ದಿದ್ದರೆ ಪ್ರಕರಣ ಮುಕ್ತಾಯವಾಗುತ್ತಿತ್ತು.

ಆದರೆ, ಸಚಿವರು ಹೇಳಿದ ಕಹಿ ಸತ್ಯ ಇದೀಗ ವಿವಾದಕ್ಕೆ ಕಾರಣವಾಗಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ಮುಗಿಬೀಳುವಂತಾಗಿದೆ. ಕಾಂಗ್ರೆಸ್ ದಲಿತ ವಿರೋಧಿ ಎಂದು ಆರೋಪಿಸುವಂತಾಗಿದೆ. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯನ್ನು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕೆಂಬ ನಿಯಮವಿದ್ದರೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಎದುರಿಸುವಂತಾಗಿದೆ. ಗ್ಯಾರಂಟಿ ಯೋಜನೆಗಳ ಅನುಕೂಲವನ್ನು ಈ ಸಮುದಾಯದವರು ಬಳಸಿಕೊಳ್ಳುತ್ತಿದ್ದರೂ ಆ ಸತ್ಯ ಮರೆಮಾಚಿದಂತಾಗಿದೆ.

ಈ ವಿಚಾರದಲ್ಲಿ ಕಾಂಗ್ರೆಸ್‌ನ ಶಾಸಕರೂ ಹೊರತಾಗಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಸರಕಾರ ಪರದಾಡುತ್ತಿರುವುದನ್ನು ತಿಳಿದೂ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ, ಸಚಿವರು ಸ್ಪಂದಿಸುತ್ತಿಲ್ಲ ಎಂಬ ಆರೋಪಗಳನ್ನು ಬಹಿರಂಗವಾಗಿ ಮಾಡುವ ಮೂಲಕ ಸರಕಾರವನ್ನು ಪ್ರತಿಪಕ್ಷ ಗಳಿಗಿಂತಲೂ ಹೆಚ್ಚು ಮುಜುಗರ ಕ್ಕೀಡುಮಾಡುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಪ್ರತಿಪಕ್ಷ ಗಳು ಸರಕಾರವನ್ನು ಟೀಕಿಸುವಂತಾಗಿದೆ. ಕಳೆದ ವಿಧಾನಸಭೆಯಲ್ಲಿ ತಮ್ಮನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಅಸಗಳಿಗಾಗಿ ಬಕಪಕ್ಷಿಗಳಂತೆ ಕಾಯುತ್ತಿರುವ ಪ್ರತಿಪಕ್ಷಗಳಿಗೆ
ಇಂತಹ ಹೇಳಿಕೆಗಳೇ ಬ್ರಹ್ಮಾಸ್ತ್ರವಾಗುತ್ತಿವೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಇಂತಹ ವಿಚಾರಗಳನ್ನೇ ದೊಡ್ಡದು ಮಾಡಿ ಈಗಿನಿಂದಲೇ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಇಂತಹ ಯಾವುದೇ ವಿಚಾರಗಳನ್ನು ಬಿಡುವುದಿಲ್ಲ ಎಂದು ಗೊತ್ತಿದ್ದರೂ ಪದೇಪದೆ ಎಡವಿ ಅವರ ಬಾಯಿಗೆ ಸರಕಾರ ವನ್ನು ಆಹಾರವಾಗಿಸಲಾಗುತ್ತಿದೆ. ಒಟ್ಟಿನಲ್ಲಿ ಒಂದು ದಾರಿಯಲ್ಲಿ ಸಾಗುತ್ತಿರುವ ಸರಕಾರವನ್ನು ಹೇಳಿಕೆಗಳ ಮೂಲಕವೇ ದಾರಿ ತಪ್ಪಿಸುವವರಿಂದಾಗಿ ಪ್ರತಿಪಕ್ಷ ಗಳು ಖುಷಿಯಿಂದ ಕುಣಿಯುವಂತಾಗಿದೆ.

ಲಾಸ್ಟ್ ಸಿಪ್: ದಾರಿ ತೋರಿಸದಿದ್ದರೂ, ಸಾಗುತ್ತಿರುವ ಸರಿ ದಾರಿಯನ್ನು ತಪ್ಪಿಸುವವರೇ ಹೆಚ್ಚು ಅಪಾಯಕಾರಿಗಳು.