Saturday, 14th December 2024

ಕೃತಿಸ್ವಾಮ್ಯ ಉಲ್ಲಂಘನೆ ಹಾಗೂ ಸುದ್ದಿ ಪ್ರಕಾಶಕರು

ವಿಚಾರ ವೇದಿಕೆ

ಎ.ಎಸ್.ಬಾಲಸುಬ್ರಮಣ್ಯ

ಅಂತರ್ಜಾಲದ ಆಗಮನದಿಂದ ಮಾಹಿತಿಯ ಮಹಾಪೂರವೇ ಸೃಷ್ಟಿಯಾಗಿದೆ. ಯಾವ ಮೂಲಗಳಿಂದ ಮಾಹಿತಿ ಹರಿದುಬರುತ್ತಿದೆ, ಅದರ ಹಿಂದೆ ಇರುವ ಶಕ್ತಿಗಳು ಯಾರು ಮತ್ತು ಅವರ ಉದ್ದೇಶಗಳೇನು ಎಂಬುದನ್ನು ತಿಳಿಯುವುದು ಸವಾಲಿನ ಕೆಲಸ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಈ ಕ್ಷೇತ್ರಕ್ಕೆ ಇನ್ನಷ್ಟು ಸ್ಪರ್ಧೆ ಒಡ್ಡಿದೆ. ಕಳೆದ ಮೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಚಾಟ್ ಜಿಪಿಟಿ ಹಾಗೂ ಇತರೆ ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ತಂತ್ರಜ್ಞಾನ ಭವಿಷ್ಯದಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ ಎನ್ನುವ ಗುಂಗು ಎಲ್ಲರನ್ನೂ ಭಯಭೀತರನ್ನಾಗಿಸಿದೆ.

ಇದಕ್ಕೆ ಸೇರ್ಪಡೆಯಾಗಿರುವ ಹೊಸ ಗೊಂದಲವೇನೆಂದರೆ, ಈ ಯಾಂಬು ತಂತ್ರಜ್ಞಾನ ಸಾರ್ವಜನಿಕವಾಗಿ ಲಭ್ಯವಿರುವ ವಸ್ತು-ವಿಷಯಗಳನ್ನು ತನ್ನ ತರಬೇತಿಗಾಗಿ ಬಳಸುವಾಗ ಉಂಟಾಗುತ್ತಿರುವ ಕೃತಿಸ್ವಾಮ್ಯ ಕಾಯಿದೆಗಳ ಉಲ್ಲಂಘನೆ. ಮೈಕ್ರೋಸಾಫ್ಟ್ ಮತ್ತು ಓಪನ್ ಎಐ ತಮ್ಮ ಉತ್ಪಾದಕ ಕೃತಕ ಬುದ್ಧಿಮತ್ತೆ ಉಪಕರಣಗಳ ಮೂಲಕ ಕೃತಿಸ್ವಾಮ್ಯ ಉಲ್ಲಂಘನೆಯನ್ನು ಮಾಡುತ್ತಿವೆ ಎಂದು ಅಮೆರಿಕೆಯ ಹೆಸರಾಂತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್
ನ್ಯಾಯಾಲದಲ್ಲಿ ಮೊಕದ್ದಮೆ ದಾಖಲಿಸಿದೆ. ಯಾಂಬುಪರಿಕರಗಳಿಗೆ ತರಬೇತಿ ನೀಡಲು, ತಮ್ಮ ಪತ್ರಿಕೆಯ ಪುಟಗಳಿಂದ ಲಕ್ಷಾಂತರ ಕೃತಿಸ್ವಾಮ್ಯ ತುಣುಕುಗಳನ್ನು ಬಳಸಿದೆ.

ಇದು ನಮ್ಮ ಕೃತಿಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂಬುದು ಪತ್ರಿಕೆಯ ಆರೋಪ. ಇದು ದೀರ್ಘಕಾಲೀನ ಅವಧಿಯಲ್ಲಿ ಪತ್ರಿಕೆಯ ಚಂದಾ ದಾರಿಕೆ, ಪರವಾನಗಿ, ಜಾಹೀರಾತು ಮತ್ತು ಅಂಗಸಂಸ್ಥೆಗಳ ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಪತ್ರಿಕೆ ತನ್ನ ದೂರಿನಲ್ಲಿ ದಾಖಲಿ ಸಿದೆ. ಪತ್ರಿಕೆಗಳಲ್ಲಿ ವೈವಿಧ್ಯಮಯ ವರದಿಗಳು, ಸಂದರ್ಶನ ಗಳು, ಹಿನ್ನೆಲೆ ವಿವರಣೆಗಳು, ಸಂಪಾದಕೀಯಗಳು ಮತ್ತು ಲೇಖನಗಳು ಪ್ರತಿದಿನ ಪ್ರಕಟ ವಾಗು ತ್ತವೆ. ಈ ಎಲ್ಲ ಮಾಹಿತಿಗಳನ್ನು ಓದುಗರ ಅಗತ್ಯತೆಗಳನ್ನು ಗಮನಿಸಿ ಸಂಗ್ರಹಿಸಲಾಗುತ್ತದೆ. ಅವುಗಳಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕ್ರಮಬದ್ಧವಾಗಿ ಮತ್ತು ಆಕರ್ಷಕವಾಗಿ ಓದುಗರಿಗೆ ನೀಡಲಾಗುತ್ತದೆ.

ಈ ಎಲ್ಲ ಪರಿಷ್ಕರಣೆಗಳಲ್ಲಿ ಪತ್ರಕರ್ತರ ಪರಿಶ್ರಮವಿರುತ್ತದೆ. ಇದು ಪತ್ರಿಕೆಯ ಉನ್ನತಿಗೆ ಮತ್ತು ಆದಾಯಕ್ಕೆ ಸಹ ನೆರವಾಗುತ್ತದೆ. ಇಷ್ಟು ಶ್ರಮವಹಿಸಿ ಪ್ರಕಟಿಸಲಾಗುವ ಪತ್ರಿಕೆಯ ಹೂರಣವನ್ನು ಇನ್ನೊಬ್ಬರು ಸುಲಭವಾಗಿ ಬಳಸಿ ಇತರರಿಗೆ ಉದಾಹರಣೆ ರೂಪದಲ್ಲಿ ನೀಡಬಹುದೇ ಎಂಬುದು ಈಗ
ತೀರ್ಮಾನವಾಗಬೇಕಾಗಿದೆ. ‘ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ಹಲವಾರು ಲೇಖನಗಳನ್ನು ನಕಲಿಸಿ ಪತ್ರಿಕೆಯ ಬರವಣಿಗೆ ಧಾಟಿಯಲ್ಲೇ ಸಾರಾಂಶ ಗಳನ್ನು ಪ್ರಕಟಿಸಿರುವ ಯಾಂಬು ಕಂಪನಿ ಗಳು, ನಮಗೆ ಅನ್ಯಾಯವೆಸಗುತ್ತಿವೆ. ಹಲವೆಡೆ ಯಥಾ ವತ್ತಾಗಿ ನಕಲಿಸಿವೆ. ನಮ್ಮ ಪತ್ರಿಕೆ ಮತ್ತು ಜಾಲತಾಣ ಗಳಲ್ಲಿ ಪ್ರಕಟವಾಗುವ ವಿಶೇಷ ಸುದ್ದಿ ಮತ್ತು ಲೇಖನಗಳನ್ನು ಇವು ನಕಲಿಸುವುದಾದರೆ, ನಮ್ಮ ವ್ಯವಹಾರಕ್ಕೆ ಧಕ್ಕೆಯಾಗಲಿದೆ.

ಏಕೆಂದರೆ ನಮ್ಮ ಆನ್‌ಲೈನ್ ಓದುಗರು ಕ್ರಮೇಣ ಯಾಂಬು ಕಂಪನಿಗಳತ್ತ ವಾಲುವ ಸಾಧ್ಯತೆಗಳಿವೆ. ಹಲ ವಾರು ವರ್ಷಗಳ ಪ್ರಯತ್ನಗಳಿಂದ ನಾವು ಆನ್‌ಲೈನ್ ಓದುಗರನ್ನು ಆಕರ್ಷಿಸಿ ಚಂದಾದಾರರನ್ನಾಗಿ ಮಾಡಿ ದ್ದೇವೆ. ಅವರನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ’ ಎಂದು ಟೈಮ್ಸ್ ಪತ್ರಿಕೆ
ಆರೋಪಿಸಿದೆ. ಯಾಂಬು ಟ್ರ್ಯಾಕರ್‌ಗಳು ಮುಕ್ತವಾಗಿ ಲಭ್ಯವಿರುವ ಜಾಲತಾಣಗಳಿಂದ ಬಹು ಸುಲಭವಾಗಿ ಮಾಹಿತಿ ಇಲ್ಲವೇ ಮಾದರಿಗಳನ್ನು ಆಯ್ದು ಲಿಖಿತ ರೂಪದಲ್ಲಿ ಕೇಳುಗರಿಗೆ ನೀಡುತ್ತವೆ. ಕೃತಿಸ್ವಾಮ್ಯ ಕಾನೂನಿನಲ್ಲಿ ಯಾವುದೇ ಮೂಲಕೃತಿಯಲ್ಲಿನ ವಸ್ತು-ವಿಷಯಗಳ ಮಿತಬಳಕೆಗೆ ಅವಕಾಶ ವಿದೆ. ಇದರ ದುರುಪಯೋಗ ಆಗಬಾರದು ಎನ್ನುವುದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವಾದವಾಗಿದೆ.

ನ್ಯಾಯೋಚಿತ ಬಳಕೆಯ (ಊZಜ್ಟಿ oಛಿ) ತತ್ವದ ಅನುಸಾರ, ಯಾವುದೇ ಮೂಲಕೃತಿಗಳಿಂದ ಆಯ್ದ ಕೆಲ ಭಾಗಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಕೃತಿಸ್ವಾಮ್ಯ ಕಾನೂನು ಅನುಮತಿ ನೀಡುತ್ತದೆ. ಆದರೆ ಯಾಂಬು ತಂತ್ರಜ್ಞಾನ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲು ಉತ್ತಮ ಮಾದರಿಗಳನ್ನು ಕ್ಷಣಮಾತ್ರದಲ್ಲಿ ಆಯ್ದು ಕೇಳುಗರಿಗೆ ನೀಡುತ್ತದೆ. ಇದರ ಇನ್ನೊಂದು ಚಮತ್ಕಾರವೆಂದರೆ ಆಯ್ಕೆಯಾದ ಮಾದರಿಗಳನ್ನು ತನ್ನದೇ ಆದ ಭಾಷೆಯಲ್ಲಿ
ವಿವರಿಸುತ್ತದೆ. ಏಕೆಂದರೆ ಯಾಂಬು ತಂತ್ರಜ್ಞಾನ ಭಾಷಾ ಮಾದರಿಗಳಲ್ಲಿ ತರಬೇತಿಯನ್ನು ಪಡೆದಿರುತ್ತದೆ. ಈ ಬೃಹತ್ ಭಾಷಾ ಮಾದರಿಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಎಲ್ಲ ಪ್ರಕಟಿತ ಶೈಕ್ಷಣಿಕ ಬರಹ, ಪತ್ರಿಕೆಗಳ ಸುದ್ದಿ, ಲೇಖನಗಳು, ಪುಸ್ತಿಕೆಗಳು ಮತ್ತು ಡಿಜಿಟಲ್ ಪ್ರಕಟಣೆಗಳನ್ನು ಹೆಕ್ಕಿ ಶೋಽಸಿ, ಉತ್ತಮ ಮಾದರಿಯ ಮಾಹಿತಿ ಜತೆಗೆ ಕ್ರಮಬದ್ಧ ವ್ಯಾಕರಣ ರೂಪದಲ್ಲಿ ಚಾಟ್ ಬಾಟ್‌ಗಳ ಮೂಲಕ ಮಾಹಿತಿ ನೀಡುತ್ತವೆ. ಆದರೆ ಯಾಂಬು ಮೂಲಕ ದೊರೆಯುತ್ತಿರುವ ಎಲ್ಲ ಮಾಹಿತಿ ಸಮರ್ಪಕ ಎಂದು ಹೇಳಲಾಗದು.

ಈ ತಂತ್ರಜ್ಞಾನ ಇನ್ನೂ ಶೈಶವಾವಸ್ಥೆಯಲ್ಲಿ ಇರುವುದರಿಂದ ಅನೇಕ ಸಲ ತಪ್ಪು ಮಾಹಿತಿಗಳನ್ನು ಸಹ ಇವು ಸೂಚಿಸುತ್ತವೆ. ಉದಾಹರಣೆಗೆ ಚಾಟ್ ಜಿಪಿಟಿ ಒಂದು ಉತ್ಪನ್ನ ಕುರಿತಾದ ಶಿಫಾರಸನ್ನು ತಪ್ಪಾಗಿ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವೈರ್ ಕಟ್ಟರ್ ಎಂಬ ಉತ್ಪನ್ನಗಳ ಸಮೀಕ್ಷಾ ಜಾಲತಾ ಣದ್ದು ಎಂದು ಸೂಚಿಸಿತ್ತು. ಇದರಿಂದ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಪತ್ರಿಕೆ ದೂರಿದೆ. ಯಾಂಬು ತಂತ್ರಜ್ಞಾನ ಹಲವಾರು ರೀತಿಯಲ್ಲಿ
ಕ್ರಾಂತಿಕಾರಕ ತಂತ್ರಜ್ಞಾನ ಎಂದು ಬಣ್ಣಿಸಲ್ಪಟ್ಟಿದೆ. ಇದರ ಅಗಾಧ ಪ್ರಭಾವವನ್ನು ಅರಿಯುತ್ತಿದ್ದಂತೆ, ಈ ತಂತ್ರಜ್ಞಾನದ ವಿರುದ್ಧ ಹಲವಾರು ಮೊಕದ್ದಮೆಗಳು ದಾಖಲಾಗಿವೆ.

ಅಮೆರಿಕೆಯ ನಾಲ್ಕು ಸಾವಿರಕ್ಕೂ ಅಧಿಕ ಲೇಖಕರು, ತಮ್ಮ ಕೃತಿಗಳ ಶೈಲಿ ಮತ್ತು ಹೂರಣಗಳನ್ನು ತಮಗೆ ಅರಿವಿಲ್ಲದಂತೆ ಮತ್ತು ಅನುಮತಿ ಪಡೆಯದೆ ಯಾಂಬು ತಂತ್ರಜ್ಞಾನದ ಮೂಲಕ ಬಳಸಲಾಗುತ್ತಿದೆ ಎಂದು ದೂರಿದ್ದಾರೆ. ಈ ತಂತ್ರಜ್ಞಾನ ಬಳಕೆಯ ಬಗ್ಗೆ ಅನೇಕ ದೂರುಗಳು ಸಾರ್ವಜನಿಕ ವಲಯದಿಂದ ಸಹ ದಾಖಲಾಗಿವೆ. ಹೀಗಾಗಿ ಇದನ್ನು ಮುಕ್ತವಾಗಿ ಬಳಸಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಸುದ್ದಿ ಮಾಧ್ಯಮ ಸಂಸ್ಥೆಗಳು ಯಾಂಬು ತಂತ್ರಜ್ಞಾನ ಅಳವಡಿಕೆಗೆ ಸಂಶಯ ವ್ಯಕ್ತಪಡಿಸುತ್ತಿವೆ.

ಈ ಹಿನ್ನೆಲೆಯಲ್ಲಿ ನಮ್ಮ ದೇಶದ ೯ ಪತ್ರಿಕಾಸಂಸ್ಥೆಗಳು/ ಸುದ್ದಿ ಸಂಸ್ಥೆಗಳು ಯಾಂಬು ಟ್ರ್ಯಾಕರ್‌ಗಳ ಪರಿವೀಕ್ಷಣೆಯಿಂದ ಹೊರಗುಳಿದಿವೆ. ಅಂದರೆ ಈ ಟ್ರ್ಯಾಕರ್‌ಗಳು ಆ ಸಂಸ್ಥೆಗಳ ಜಾಲತಾಣಗಳನ್ನು ಪ್ರವೇಶಿಸುವಂತಿಲ್ಲ. ಇದ ಲ್ಲದೆ ವಿಶ್ವದ ಅರ್ಧದಷ್ಟು ಸುದ್ದಿ ಪ್ರಕಾಶಕರು ತಮ್ಮ ಜಾಲತಾಣಗಳ ಪ್ರವೇಶಕ್ಕೆ ಯಾಂಬು ವೇದಿಕೆಗಳಿಗೆ ಅನುಮತಿ ಯನ್ನು ನಿರಾಕರಿಸಿದ್ದಾರೆ. ಕಾರಣವಿಷ್ಟೇ, ಸುದ್ದಿ ಮಾಧ್ಯಮ ಸಂಸ್ಥೆಗಳಿಗೆ ಈ ತಂತ್ರಜ್ಞಾನ ತಮಗೆ ಮುಳುವಾಗಬಹುದೆಂಬ ಆತಂಕಗಳಿವೆ. ಏಕೆಂದರೆ ನೀವು ಯಾವುದೇ ವಿಷಯ ಸೂಚಿಸಿದರೂ ಅದನ್ನು ಕುರಿತು ತಕ್ಷಣವೇ ನಿಯಮಿತ ಪದಗಳಲ್ಲಿ ಲೇಖನ/ಹಿನ್ನೆಲೆ ವರದಿಗಳು, ಸಂಪಾದಕೀಯ/ ಪ್ರಬಂಧಗಳನ್ನು ಯಾಂಬು ರಚಿಸಿಬಿಡುತ್ತದೆ.

ನೀವು ಬರೆದಿರುವ ವರದಿಗಳನ್ನು ಮತ್ತಷ್ಟು ಆಕರ್ಷಕವಾಗಿ ಪುನರ್ ರಚಿಸಿಕೊಡುತ್ತದೆ. ಉತ್ತಮ ತಲೆಬರಹಗಳನ್ನು ಸೂಚಿಸುತ್ತದೆ. ಆಂಗ್ಲಭಾಷೆ
ಸೇರಿದಂತೆ ವಿಶ್ವದ ಪ್ರಮುಖ ಭಾಷೆಗಳಲ್ಲಿ ಈ ಸೇವೆ ಈಗಾಗಲೇ ಲಭ್ಯವಿದೆ. ಹೀಗಾದರೆ ಪತ್ರಕರ್ತರ ಗತಿಯೇನು? ಪತ್ರಿಕೆಗಳ ಮಹತ್ವವನ್ನು ಇದು ಚಿವುಟಿ
ಹಾಕುತ್ತದೆ ಎಂಬ ಶಂಕೆ ಸುದ್ದಿ ಪ್ರಕಾಶಕರಿಗಿದೆ. ಜಾಹೀರಾತು ಆದಾಯ ಮತ್ತು ತಮ್ಮ ವೇದಿಕೆಗಳಿಗೆ ಪ್ರೇಕ್ಷಕರು/ಓದುಗರನ್ನು ಆಕರ್ಷಿಸುವ ಭರದಲ್ಲಿ
ಗೂಗಲ್, ಮೈಕ್ರೋಸಾ- ಮುಂತಾದ ಬೃಹತ್ ತಂತ್ರಜ್ಞಾನ ಕಂಪನಿಗಳು ಮತ್ತು ಸುದ್ದಿ ಪ್ರಕಾಶನ ಸಂಸ್ಥೆಗಳ ನಡುವೆ ತೀವ್ರವಾದ ಭಿನ್ನಮತಗಳಿವೆ. ಫೇಸ್‌ಬುಕ್, ಯುಟ್ಯೂಬ್ ವೇದಿಕೆಗಳು ಈಗಾಗಲೇ ಅಪಾರವಾದ ಜಾಹೀರಾತು ಹಣವನ್ನು ದೋಚುತ್ತಿವೆ.

ಇವುಗಳ ವಿರುದ್ಧ ಪ್ರಪಂಚದಾದ್ಯಂತ ಸುದ್ದಿ ಪ್ರಕಾಶನ ಸಂಸ್ಥೆಗಳು ಕಾನೂನಾತ್ಮಕ ಹೋರಾಟವನ್ನು ನಡೆಸುತ್ತಿವೆ. ಈ ಬೃಹತ್ ತಂತ್ರಜ್ಞಾನ ವೇದಿಕೆಗಳು ವಿಶ್ವದ ಎಲ್ಲ ಭಾಗಗಳಲ್ಲಿ ಲಭ್ಯವಿವೆ. ತಮ್ಮ ಪ್ರಬಲ ಸ್ಥಾನಮಾನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಗೂಗಲ್ ವಿರುದ್ಧ ಭಾರತೀಯ ಸುದ್ದಿ ಮಾಧ್ಯಮದವರು ಸಹ ದೂರುಗಳನ್ನು ದಾಖಲಿಸಿದ್ದಾರೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಿಗೆ ತರಬೇತಿ ನೀಡಲು ಪ್ರಕಟಿತ ವಿಷಯದ ಅನುಮೋದಿತ ಬಳಕೆಯ ಸುತ್ತಲಿನ ಕಾನೂನು ಸಂಘರ್ಷದಲ್ಲಿ ಹೊಸ ಅಧ್ಯಾಯವನ್ನು ನ್ಯೂಯಾರ್ಕ್ ಟೈಮ್ಸ್ ಮೊಕದ್ದಮೆ ಗುರುತಿಸಿದೆ. ಒಂದು ವೇಳೆ ಪತ್ರಿಕೆಯ ವಾದವನ್ನು ನ್ಯಾಯಾಲಯ ಒಪ್ಪಿಕೊಂಡರೆ ಲಕ್ಷಾಂತರ ಡಾಲರ್‌ಗಳನ್ನು ಯಾಂಬು ಕಂಪನಿಗಳು ನೀಡಬೇಕಾಗುತ್ತವೆ.

ಇದಲ್ಲದೆ, ಟೈಮ್ಸ್ ಪತ್ರಿಕೆಯಿಂದ ನಕಲಿಸಲಾದ ಹಕ್ಕುಸ್ವಾಮ್ಯದ ವಸ್ತು-ವಿಷಯಗಳಿಂದ ಪಡೆದ ಯಾವುದೇ ಚಾಟ್ ಬಾಟ್ ಮಾದರಿಗಳು ಮತ್ತು ತರಬೇತಿ ಅಂಕಿ-ಅಂಶಗಳನ್ನು ತೆಗೆದುಹಾಕಲು ಯಾಂಬು ಕಂಪನಿಗಳನ್ನು ಇದು ಒತ್ತಾಯಿಸುತ್ತದೆ. ತನ್ನ ಅನುಮತಿಯಿಲ್ಲದೆ ಪತ್ರಿಕೆಯ ಓದುಸಾಮಗ್ರಿಗಳನ್ನು
ಬಳಸುತ್ತಿರುವ ಬಗ್ಗೆ ಮೈಕ್ರೋಸಾ- ಮತ್ತು ಓಪನ್ ಎಐ ಜತೆ ಬಹುದಿನಗಳಿಂದ ನಡೆಯುತ್ತಿರುವ ಮಾತುಕತೆಗಳು ವಿಫಲವಾಗಿರುವುದರಿಂದ, ಕಾನೂನು ಹೋರಾಟ ಅನಿವಾರ್ಯವಾಗಿದೆ ಎಂದು ಟೈಮ್ಸ್ ಪತ್ರಿಕೆ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

ಕೃತಿಸ್ವಾಮ್ಯ ರಕ್ಷಣೆಯ ವಿಷಯದಲ್ಲಿ ಟೈಮ್ಸ್ ಪತ್ರಿಕೆಯ ಕಾನೂನು ಹೋರಾಟವನ್ನು ಹಲವಾರು ಪತ್ರಿಕೆಗಳು ಅಭಿನಂದಿಸಿವೆ. ಭವಿಷ್ಯದಲ್ಲಿ ಯಾಂಬು ತಂತ್ರಜ್ಞಾನಕ್ಕೆ ಉತ್ತಮ ಬೇಡಿಕೆ ಬರುವುದೆಂದು ತಿಳಿದು, ಈ ತಂತ್ರಜ್ಞಾನ ದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳಲ್ಲಿ ಕೋಟ್ಯಂತರ ಹಣವನ್ನು ಹೂಡಲಾಗಿದೆ. ಓಪನ್ ಎಐ ಸಂಸ್ಥೆಯಲ್ಲಿ ಮೈಕ್ರೋಸಾಫ್ಟ್ ಕಂಪನಿ ಈಗಾಗಲೇ ೧೩ ಬಿಲಿಯನ್ ಡಾಲರ್ ತೊಡಗಿಸಿದೆ. ಮಾರುಕಟ್ಟೆಯಲ್ಲಿ ಓಪನ್ ಎಐ
ಸಂಸ್ಥೆಯ ಮೌಲ್ಯ ೮೦ ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಕೃತಿಸ್ವಾಮ್ಯ ಉಲ್ಲಂಘನೆ ಮತ್ತು ಈ ಅತ್ಯಾಧುನಿಕ ತಂತ್ರಜ್ಞಾನಗಳ ಪಾತ್ರ ವನ್ನು ಅಮೆರಿಕೆಯ ನ್ಯಾಯಾಲಯಗಳು ಕೆಲ ವರ್ಷಗಳಲ್ಲಿ ತೀರ್ಮಾನಿಸಲಿವೆ.

ಜಗತ್ತಿನ ಅತ್ಯಂತ ಯಶಸ್ವಿ ಪತ್ರಿಕೆಗಳಲ್ಲಿ ಒಂದಾದ ನ್ಯೂಯಾರ್ಕ್ ಟೈಮ್ಸ್, ಒಂದು ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿರುವ ಏಕೈಕ ಪತ್ರಿಕೆ ಯಾಗಿದೆ. ಇವರಲ್ಲಿ ೯೪ ಲಕ್ಷ ಚಂದಾದಾರರು ಪತ್ರಿಕೆಯ ಡಿಜಿಟಲ್ ಸೇವೆಗಳನ್ನು ಪಡೆಯುತ್ತಾರೆ, ಅಂದರೆ ಸುದ್ದಿ, ಪದಬಂಧ, ಅಡುಗೆ ಸುದ್ದಿಗಳು, ಗೇಮ್ಸ್, ಆಡಿಯೋ, ಉತ್ಪನ್ನಗಳ ವಿಶ್ಲೇಷಣೆ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ಒಟ್ಟು ಸೇವೆ ಗಳನ್ನು ಪಡೆಯುವ ಬೃಹತ್ ಡಿಜಿಟಲ್ ಚಂದಾದಾರರನ್ನು
ವಿಶ್ವದಾದ್ಯಂತ ಅದು ಹೊಂದಿದೆ. ೨೦೨೭ರ ಹೊತ್ತಿಗೆ ೧.೫ ಕೋಟಿ ಚಂದಾದಾರರನ್ನು ಹೊಂದುವ ಗುರಿ ಪತ್ರಿಕೆಗಿದೆ. ಮುದ್ರಿತ ಪತ್ರಿಕೆಯ ಚಂದಾ ದಾರರರು ಕ್ಷೀಣಿಸುತ್ತಿರುವ ಈ ದಿನಗಳಲ್ಲಿ, ಡಿಜಿಟಲ್ ಚಂದಾದಾರಿಕೆಯನ್ನು ಬಹುಯಶಸ್ವಿಯಾಗಿ ವಿಸ್ತರಿಸಿದ ಏಕೈಕ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್. ಆದುದರಿಂದಲೇ ಡಿಜಿಟಲ್ ಓದುಗರನ್ನು ಹಿಡಿದಿಟ್ಟುಕೊಳ್ಳಲು ಪತ್ರಿಕೆ ಶ್ರಮಿಸುತ್ತಿದೆ.

(ಲೇಖಕರು ವಿಶ್ರಾಂತ ಪತ್ರಿಕೋದ್ಯಮ
ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)