Monday, 14th October 2024

ಕರೋನಾ ಎದುರಿಸಲು ಒಂದಾಗಿ

ಪ್ರಚಲಿತ

ವಾಣಿ ಹುಗ್ಗಿ

ಬೆಂಬಿಡದೆ ಕಾಡುತ್ತಿರುವ ಈ ಕರೋನಾದ ಕರಿನೆರಳು ಭಯ ಹುಟ್ಟಿಸುತ್ತಿದೆ. ಇದು ಜನಸಂಖ್ಯೆ ಕಡಿಮೆ ಮಾಡಲು ಯಕಾರಕನೇ ಮಾಡಿದ ಉಪಾಯವೇನೋ ಎನ್ನಿಸುವಂತಾಗಿದೆ.

ಪ್ರಕೃತಿಯನ್ನು ಎಗ್ಗಿಲ್ಲದೆ ಬಳಸಿಕೊಂಡದ್ದಕ್ಕಾಗಿ ಭೂತಾಯಿ ಮುನಿದು ಬಿಟ್ಟಳೆ ? ಮಾನವ ಆವಿಷ್ಕಾರ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಿರುವ ಅನಾಚಾರಗಳಿಗೆ ನಿಸರ್ಗ ವಿರಾಮ ಬೇಕು ಎಂದು ಸೂಚಿಸುತ್ತಿದಿಯೆ? ಏನೂ ತಿಳಿಯದು.
ಕರೋನಾವೇ ಇಲ್ಲವೆಂಬ ಉಡಾಫೆ.. ಯಾರಿಗಾದರೂ ಕರೆ ಮಾಡುವಾಗ ಕೇಳಿಸುವ ಕರೋನಾ ಟ್ಯೂನ್ ಕೇಳಿಸಿಕೊಳ್ಳದೆ ಒತ್ತುವವರು ನಾವು.

ಮಾಸ್ಕ್ ಹಾಕಬೇಕು, ದೈಹಿಕ ಅಂತರ ಕಾಪಾಡಬೇಕೆಂಬ ಸರಕಾರದ ನಿಯಮಗಳನ್ನು ಯಾರೂ ಪಾಲಿಸುವುದಿಲ್ಲ ಇಷ್ಟಕ್ಕೂ ಸರಕಾರವೇಕೆ ನಮಗೆ ನಿರ್ಬಂಧ ಹಾಕಬೇಕು ? ನಾವೇನು ಸರಕಾರದ ಗುಲಾಮರೇ? ನಿಯಮಗಳನ್ನು ಗಾಳಿಗೆ ತೂರಿ ನಮ್ಟಿಷ್ಟದ ಹಾಗೆ ನಡೆದುಕೊಳ್ಳುವುದೇ ಸ್ವಾತಂತ್ರ್ಯವೆಂದು ನಂಬಿರುವ ನಮ್ಮ ಮೂರ್ಖತನಕ್ಕೆ ಬೆಲೆ ತೆರೆಬೇಕಾದಗಳಿಗೆ ಬಂದೇ ಬಿಟ್ಟಿದೆ.

ಉದ್ಯಾನ ನಗರಿ, ರಾಜಧಾನಿ, ಐಟಿ ನಗರ ಎಂದೇ ಹೆಸರಾಗಿದ್ದ ಬೆಂಗಳೂರು ಕೋವಿಡ್ ಊರಾಗಿದೆ. ಪ್ರತಿ ಮನೆಯಲ್ಲೂ +ve ಗಳಿದ್ದಾರೆ. ಹೊರಗಡೆ ಹೋಗದೆ ಮನೆಯಲ್ಲೆ ಉಳಿದವರಿಗೂ ಕರೋನ ಬಂದಿದೆ. ಈ +ve ಪದವೆ ಭಯ ಹುಟ್ಟಿಸುತ್ತಿದೆ. ಸರಕಾರದ ನಿಯಮಗಳನ್ನು ನಿರ್ಲಕ್ಷಿಸಿ ಬೆಂಗಳೂರು ಬಿಟ್ಟು ತಮ್ಮ ಸ್ವಂತ ಊರುಗಳಿಗೆ ಮರಳುತ್ತಿದ್ದಾರೆ. ಬದುಕು ಕಟ್ಟಿ ಕೊಳ್ಳಲು, ಶೋಕಿ ಮಾಡಲು ಬೇಕಾಗಿದ್ದ ಬೆಂಗಳೂರು ಈಗ ಬೇಡವಾಗಿದೆ.

ಊರಿಗೆ ಮರಳಿದವರು ಪ್ರತ್ಯೇಕವಾಗಿಯೂ ಉಳಿಯದೆ ಮನೆಯವರಿಗೆ, ಊರಿನವರಿಗೆ ಕೋವಿಡ್ ಹಂಚುತ್ತಾರೆ. ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಯಾರೂ ಸಿದ್ಧರಿಲ್ಲ. ವಿಜ್ಞಾನಿಗಳು, ವೈದ್ಯರು ತಯಾರಿಸಿದ ಲಸಿಕೆಯ ಮೇಲೆ ಭರವಸೆ ಇಲ್ಲದೆ ಯಾರೋ ಅಪಾಪೋಲಿಗಳು ಹೇಳಿದ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆ, ಸಾಯುತ್ತಾರೆಂಬ ಸುಳ್ಳನ್ನೆ ನಂಬುತ್ತೇವೆ.
ಪರಿಣಾಮವಿಲ್ಲದಿದ್ದರೆ ಅದು ಲಸಿಕೆ ಹೇಗಾಗುತ್ತದೆ? ಬರಿ ಡಿಸ್ಟಿಲ್ಢ್ ವಾಟರ್ ಆಗತ್ತದೆಯೇನೋ? ನಮ್ಮ ಮೆದುಳಿಗೆ ಕೆಲಸವನ್ನು ಕೊಡದೆ ಮತ್ತೊಬ್ಬರ ಮಾತನ್ನು ಕೇಳುವುದೇ ಆಯಿತು. ಸುಳ್ಳು ಹೇಳಿ ಪುಣ್ಯಾತ್ಮರು ಮಾಡಿದ ಸಾಧನೆಯನ್ನು ಆ ದೇವರೂ ಮೆಚ್ಚಲಾರ.

ಕುಟುಂಬದಲ್ಲಿ ಕರೋದಿಂದ ಬಾಧಿತರಾದವರಿಗೆ ಮಾತ್ರ ಗೊತ್ತು ಈ ಕರೋನಾದ ಭೀಕರತೆ. ಅಲ್ಲಿವರೆಗೂ ಬೇರೆಯವರಿಗೆ ಇದು ತಿಳಿಯೊಲ್ಲ. ಮುಷ್ಕರ, ಧರಣಿ, ಸಮಾವೇಶ ಅಂತೆಲ್ಲ ಮಾಡಿ ಬೆಂಗಳೂರನ್ನು ಹಾಳುಗೆಡವಿಬಿಟ್ಟರಲ್ಲಾ! ಇವರಿಗೆ ಶಿಕ್ಷೆ ಇಲ್ಲವೆ? ಕಾರ್ಯಕ್ರಮಗಳು ಮುಗಿದ ಮೇಲಾದರೂ ಸ್ಯಾನಿಟೈಸರ್ ಸಿಂಪಡಿಸಬೇಕಿತ್ತಲ್ಲವೆ? ವೈರಸ್ ವಾಪಾಸ್ ಚೀನಾಕ್ಕೆ ಹೋಗಿದೆ ಅನ್ನೊ ರೀತಿ ಚುನಾವಣೆ ಪ್ರಚಾರ ಮಾಡುವ ಜನರು! ಕರೋನಾ ಹೆಸರಿನಲ್ಲಿ ವಿಡಿಯೊ ಮಾಡಿ ಮಜ ಮಾಡೊದೆ ಆಯಿತು.

ಜೀವನ ಮೌಲ್ಯವನ್ನು ಕಲಿಸುವಲ್ಲಿ ಕರೋನಾವೂ ಸೋತು ಹೋಯಿತೆ? ಯುರೋಪಿನಲ್ಲಿ ಕರೋನಾ ಕೇಕೆ ಹಾಕಲು 5ಜಿ ತರಂಗಾಂತರಗಳು ಕಾರಣ ಅದಕ್ಕೆ ಅವರ ರಕ್ತ ಹೆಪ್ಪುಗಟ್ಟಿ ಸಾವಿಗೀಡಾಗುತ್ತಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡು ತ್ತಿತ್ತು. ಇದು ನಿಜವೋ ಸುಳ್ಳೊ ಎಂದು ವಿಜ್ಞಾನಿಗಳು ಜನರಿಗೆ ತಿಳಿಸಬೇಕು. ಒಂದು ವೇಳೆ ನಿಜವೇ ಆಗಿದ್ದಲ್ಲಿ ನಮ್ಮ ಜೀವನ ಪದ್ಧತಿ ’ಮರಳಿ ಮಣ್ಣಿಗೆ” ಹಿಂತಿರುಗಬೇಕೆಂಬ ಸಂದೇಶವನ್ನು ಭೂಮಿ ನೀಡುತ್ತಿದೆಯಲ್ಲವೇ? ಪರಿಸರದೊಂದಿಗೆ ಬದುಕು ನಡೆಸುವ ನೀತಿಯನ್ನು ಅಳವಡಿಸಿಕೊಳ್ಳಲೇಕಾದ ಸಮಯ ಇದಾಗಿದೆ.

ನಾನು ಎಂಬ ಅಂತಃಸ್ಥೈರ್ಯವೊ, ಅಹಂ ಕೋವಿಡ್ ವಿರುದ್ಧ ಹೋರಾಡಿ ಗೆಲ್ಲಬೇಕಾಗಿದೆ ’ನಾನು’ ಎಂಬುದೇ ಸತ್ಯ ಉಳಿದೆಲ್ಲವೂ ಮಿಥ್ಯವಾಗಿ ಕಾಣುತ್ತಿದೆ. ಯಾರಿಗೆ ಯಾವಾಗ ಏನು ಆಗುತ್ತದೊ ತಿಳಿಯದೆ ಅಭದ್ರತೆ ಕಾಡುತ್ತಿದೆ. ಜೀವನ ನಿರ್ವಹಣೆಗಾಗಿ ಮತ್ತು ಜೀವನೋಲ್ಲಾಸಕ್ಕಾಗಿ ಹೊರಗಡೆ ಹೋಗುವಾಗ ಕಾಳಜಿ ಇರಲಿ. ಸಾಮಾಜಿಕ ಪ್ರಜ್ಞೆಯಿಂದ ಕೆಲಸ ಮಾಡುವಂತಾಗಲಿ. ದೈಹಿಕ ಅಂತರ ಕಾದುಕೊಂಡು ವ್ಯವಹರಿಸಿ. ಕಾಯಿಲೆ ಬರದಂತೆ ತಡೆಯಲು ಲಸಿಕೆ ಪಡೆಯಿರಿ. ಆದಷ್ಟು ಬೇಗ ಮೊದಲಿನ ಸಹಜ ಸ್ಥಿತಿ
ಬರುವಂತಾಗಲಿ. ಆರೋಗ್ಯವೇ ಭಾಗ್ಯ ಎಂದು ಮತ್ತೆ ಸಾಬೀತಾಗಿದೆ.