Tuesday, 10th December 2024

ಶತಮಾನದ ದುರಂತ: ಆರೋಗ್ಯ- ಆರ್ಥಿಕ ಆತಂಕಗಳು

ಅವಲೋಕನ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಶತಮಾನದ ಮಹಾದುರಂತವೆಂದೇ ಕರೆಯಲ್ಪಡುತ್ತಿರುವ ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟವು ಹಲವು ಜನರ ಕನಸು ಗಳನ್ನು ಛಿದ್ರಗೊಳಿಸಿದೆ. ಮನುಕುಲವನ್ನೇ ಬೆಚ್ಚಿಬೀಳಿಸಿದ ವೈರಸ್ ಜೀವ ಮತ್ತು ಜೀವನ ಎರಡನ್ನೂ ಕಸಿದುಕೊಂಡಿದೆ.

ಸೋಂಕೊಂದು ಸಮಸ್ಯೆ ಸಾವಿರಾರು. ಈ ಕೋವಿಡ್ ಸಮಯದಲ್ಲಿ ರಾಷ್ಟ್ರ ನಾಯಕರೇ ಇರಲಿ, ಸಾಮಾನ್ಯ ಜನರೇ ಇರಲಿ,
ಬಡವ, ಶ್ರೀಮಂತರೇ ಇರಲಿ ಎಲ್ಲಾ ವರ್ಗದ ಜನರೂ ಅತ್ಯಂತ ಕೆಟ್ಟ ದಿನಗಳನ್ನು ಅನುಭವಿಸುತ್ತಿರುವುದು ಸಹಜ. ಆದರೆ ಇದಕ್ಕಿಂದ ಕೆಟ್ಟದ್ದು ಆರ್ಥಿಕ ಸಂಕಷ್ಟ, ಕರೋನಾ ಸೋಂಕು ಇಂದಲ್ಲ ನಾಳೆ ಕಡಿಮೆ ಯಾಗುತ್ತದೆ. ಈ ಸಂಕಷ್ಟದ ಸಮಯ ಸರಿದು ಹೋಗುತ್ತದೆ. ಆದರೆ ಆರ್ಥಿಕ ಸಂಕಷ್ಟ ಸುಲಭವಾಗಿ ಬಗೆಹರಿಯುವುದಿಲ್ಲ.

ಇದಕ್ಕೆ ದೇಶವು ಸುದೀರ್ಘ ಕಾಲ ಹಸಿವು ಮತ್ತು ಬಡತನವನ್ನು ಎದುರಿಸಬೇಕಾಗುತ್ತದೆ. ದೇಶದಲ್ಲಿ ಉದ್ಯೋಗ ನಷ್ಟ, ಕೂಲಿ
ನಷ್ಟ, ಉಳಿತಾಯ ನಷ್ಟ, ಬಂಡವಾಳ ಹೂಡಿಕೆ ಕಡಿತ, ನೆಲೆಯಿಲ್ಲದ ಬದುಕು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆಯಾಗಿ ಪುನರ್‌ನಿರ್ಮಾಣ ಅನಿಶ್ಚಿತತೆಯತ್ತ ಮುಖ ಮಾಡಿದೆ ಮತ್ತು ಆರ್ಥಿಕತೆಯನ್ನು
ಹಾಳುಗೆಡವಿದೆ, ಕೋವಿಡ್‌ನಿಂದಾದ ಅನಾಹುತ ದಿಂದ ಸಾಯುವವರು ಬರಿಯ ಸಂಖ್ಯೆಯಲ್ಲ, ಅವರ ಕುಟುಂಬ, ಬಂಧುಗಳು, ಸ್ನೇಹಿತರು ಎಲ್ಲರೂ ಕಣ್ಣ ಮುಂದೆ ಬರುತ್ತಾರೆ.

ಇಂಥ ಗೊಂದಲದ ಪರಿಸ್ಥಿತಿಯಲ್ಲಿ ಆರ್ಥಿಕ ಚೇತರಿಕೆ ಊಹೆಗೆ ನಿಲುಕದ್ದು. ಕೋವಿಡ್ ಎರಡನೆಯ ಅಲೆಯ ಆರ್ಭಟಕ್ಕೆ
ತತ್ತರಿಸಿದ ಜನಜೀವನ ಮತ್ತು ಆರ್ಥಿಕತೆಗಳೆರಡೂ ಸಮಾನ ಅನುಪಾತದಲ್ಲಿ ಮುಗ್ಗರಿಸುತ್ತಿವೆಯೆಂದರೆ ತಪ್ಪಿಲ್ಲ. ಮೊದಲ ಅಲೆ ಮತ್ತು ಲಾಕ್‌ಡೌನ್ ಪರಿಣಾಮ ಸುಮಾರು ಮೂರು ನಾಲ್ಕು ದಶಕಗಳಷ್ಟು ಹಿಂದೆ ಸರಿದಿದ್ದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬಂದಿತ್ತು.

ಸತತ 7 ತಿಂಗಳು ರು. ಒಂದು ಲಕ್ಷ ಕೋಟಿ ಸಂಗ್ರಹವಾದ ಜಿಎಸ್‌ಟಿ ಮತ್ತು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕ್ರಮವಾಗಿ ರು. 1.24 ಲಕ್ಷ ಕೋಟಿ ಮತ್ತು ರು. 1.41 ಲಕ್ಷ ಕೋಟಿ ದಾಟಿದ್ದು ಸಾರ್ವಕಾಲಿಕ ದಾಖಲೆಯಾಗಿ ವೇಗವನ್ನು ಪಡೆದುಕೊಂಡಿತ್ತು. ಆದರೆ
ಬರಸಿಡಿಲಿನಂತೆ ಅಪ್ಪಳಿಸಿದ ಎರಡನೆಯ ಅಲೆಗೆ ಇಡೀ ದೇಶವೇ ದಿಗ್ಭ್ರಾಂತವಾಗಿರುವುದು ಮಾತ್ರವಲ್ಲ ಈ ಅಲೆಯು ಕೆಲವು ಕೊರತೆಗಳನ್ನು ಸೃಷ್ಟಿಸಿದೆ. ಜನರು ಪ್ರತಿದಿನ ಸಾವಿನ ಭೀತಿಯಲ್ಲಿ ಬದುಕುವಂತಾಗಿದೆ.

ಸೋಂಕಿತ ರಲ್ಲಿನ ಸಾವಿನ ಪ್ರಮಾಣ ಶೇ.2ಕ್ಕೆ ತಲುಪುತ್ತಿದೆ ಮತ್ತು ಗುಣಮುಖರಾದವರ ಮರಣವೂ ಹೆಚ್ಚುತ್ತಿದೆ. ರೋಗಲಕ್ಷಣ ಗಳಿಲ್ಲದಿದ್ದರೂ ಜನ ಪರಿತಪಿಸುವ ಸ್ಥಿತಿಗೆ ತಲುಪಬೇಕಾಗಿದೆ. ಜನತೆಯ ಉತ್ತಮ ಆರೋಗ್ಯವು ಸಮಗ್ರ ಅಭಿವೃದ್ಧಿಯ ಸಾಧನ.
ಸಾರ್ವತ್ರಿಕ ಆರೋಗ್ಯ ರಕ್ಷಣೆಯಿಂದ ಸ್ವಚ್ಛ, ಸ್ವಸ್ಥ ಭಾರತವನ್ನು ಕಟ್ಟಲು ಸಾಧ್ಯ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ವೇಗ ಮತ್ತು ಜನಜೀವನದ ಗುಣಮಟ್ಟವು ಉತ್ತಮ ಆರೋಗ್ಯ ಸೇವೆಗಳ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಇದೀಗ 2025ರೊಳಗೆ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಜಿಡಿಪಿಯು ಶೇ. 2.5ಕ್ಕೆ ಶಿಫಾರಸು ಮಾಡಿರುವುದು ನಮ್ಮ ಆರ್ಥಿಕ ಇತಿಮಿತಿ ಗಳೊಳಗಿನ ತೃಪ್ತಿಕರ ನಿರ್ಧಾರ.

‘ಬೆಲೆಯೇರಿಕೆ ಮತ್ತು ಹಣದುಬ್ಬರ’: ದೇಶದಲ್ಲಿ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯಾದಾಗ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುವ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತದೆ.
ಲಾಕ್‌ಡೌನ್ ಸಮಯದ ಬೇಡಿಕೆ ಮತ್ತು ಪೂರಕೈ ನಡುವಿನ ಅಂತರ ಹೆಚ್ಚಾಗಿ ದರ ಮತ್ತಷ್ಟು ಗಗನ ಮುಖಿಯಾಗಿದೆ. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಇಂಧನ ಬೆಲೆಯನ್ನು ಕಡಿಮೆ ಮಾಡಲೇ ಬೇಕು. ಯಾವುದೇ ಬೆಲೆ ತೆತ್ತಾದರೂ ಗಣನೀಯ ಪ್ರಮಾಣದಲ್ಲಿ ಬೆಲೆ ಇಳಿಕೆ ಮಾಡಲು ತೆರಿಗೆಯನ್ನು ಕಡಿಮೆಗೊಳಿಸಲೇ ಬೇಕಾಗಿದೆ.

ತೈಲೋತ್ಪಾದನೆಯ ಬೆಲೆ ಕಡಿಮೆ ಯಾಗದಿದ್ದರೆ ಹಣದುಬ್ಬರ ನಿಯಂತ್ರಣಕ್ಕೆ ಬರುವುದಿಲ್ಲ. ಆರ್.ಬಿ.ಐ. ಹಣಕಾಸು ನೀತಿ ಇದನ್ನು ವ್ಯಕ್ತಪಡಿಸಿದೆ. ಆರ್‌ಬಿಐ ತನ್ನ ಪರಿಧಿಯಲ್ಲಿರುವ ಎಲ್ಲಾ ಪ್ರಯತ್ನವನ್ನು ಮಾಡಿದೆ. ಆಡಳಿತಾರೂಢರು ತೈಲಬೆಲೆ ಯನ್ನು ತಗ್ಗಿಸಿ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐಗೆ ನೆರವಾಗಬೇಕಾಗಿದೆ.

ದುಡಿಯುವ ವರ್ಗದ ಜನ ಆದಾಯದ ಮೂಲ ಕಳೆದುಕೊಂಡು ಕಂಗಾಲಾಗಿದ್ದಾರೆ. ಬದುಕು ದುಸ್ತರವಾಗಿದೆ. ಇಂಧನ ಬೆಲೆ ಏರಿಕೆಯಿಂದ ದಿನಸಿ, ತರಕಾರಿ, ನಿತ್ಯೋಪಯೋಗಿ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಆದಾಯವಿಲ್ಲ, ಖರ್ಚು ಹೆಚ್ಚಾಗಿ ಅಸಹನೀಯ ಬದುಕು ಬದುಕುತ್ತಿದ್ದಾರೆ. ಹಣದುಬ್ಬರಕ್ಕೆ ಸರಕಾರವನ್ನು ಬದಲಿಸುವ ಶಕ್ತಿಯಿದೆ. ಜನಸಾಮಾನ್ಯರಿಗೆ
ಜಿಡಿಪಿ ಕಥೆ ಹೇಳಿದರೆ ಪ್ರಯೋಜನವಾಗಲಾರದು.

‘ತೈಲ ಬೆಲೆ ಮತ್ತು ತೆರಿಗೆ’: ತೈಲಬೆಲೆ ತಗ್ಗಿಸುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಇನ್ನೂ ಸಹಮತ ಏರ್ಪಡಲಿಲ್ಲ. ಇದೀಗ ಸಾರ್ವಜನಿಕ ವಲಯದ ತೈಲ ಕಂಪನಿಗಳು ಲಾಭಾಂಶ ಕಡಿಮೆಗೊಳಿಸಬೇಕು. ಸರಕಾರಗಳು ಅಬಕಾರಿ ಸುಂಕ ಮತ್ತು ವ್ಯಾಟ್ ಇಳಿಸಿ ಇಂಧನ ಬೆಲೆ ಕಡಿಮೆಗೊಳಿಸಲೇ ಬೇಕಾಗಿದೆ. ಹಣದುಬ್ಬರ ದರವು ಮೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ಶೇ. 12.94ಕ್ಕೆ ತಲುಪಿದೆ.

ಚಿಲ್ಲರೆ ಹಣದುಬ್ಬರ ದರ. ಶೇ.6.3ಕ್ಕೆ ತಲುಪಿದೆ. ಹಣದುಬ್ಬರ ದರವು ನಿಯಂತ್ರಣ ತಪ್ಪಿದೆ. ಇಂಧನ ಬೆಲೆ ಏರಿಕೆ ಚಿಲ್ಲರೆ ಹಣದುಬ್ಬರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ತೆರಿಗೆ ದೇಶದಲ್ಲಿ ಯಾವುದೇ ಸರಕು ಮತ್ತು ಸಾಮಗ್ರಿಗೆ ಶೇ. 35 ಮೂಲ ಬೆಲೆ ಮತ್ತು ಶೇ.65 ತೆರಿಗೆ ಎಂಬ ವಿಚಿತ್ರ ಸನ್ನಿವೇಶವಿಲ್ಲ. ಪ್ರಾಯಶಃ ಯಾವ ದೇಶದಲ್ಲಿಯೂ ಈ ಪರಿಸ್ಥಿತಿ ಇಲ್ಲ. ನಾವು
ನೀಡುತ್ತಿರುವ ರು. 100ರಲ್ಲಿ ರು. 35 ಮೂಲಬೆಲೆ, ರಾಜ್ಯ ಬೆಲೆ, ರಾಜ್ಯ ತೆರೆಗೆ ರು.25 ಮತ್ತು ಕೇಂದ್ರ ತೆರಿಗೆ ರು. 34.

ಮೂಲಬೆಲೆಗಿಂತ ತೆರಿಗೆಗಳು ಆತಾರ್ಕಿಕ ವಿಚಾರವಲ್ಲವೇ? ಇದೀಗ ಬರಿದಾದ ಸರಕಾರದ ಬೊಕ್ಕಸಗಳಿಗೆ ಪೆಟ್ರೋಲಿಯಂ ತೆರಿಗೆ
ಮೂಲಾಧಾರವಾಗಿದೆ. ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳ ತಿಜೋರಿಗೆ ತೈಲ ಮತ್ತು ಅಬಕಾರಿ ತೆರಿಗೆಗಳು ಪ್ರಮುಖ ಆದಾಯಗಳು. ಜಿಎಸ್‌ಟಿ ವ್ಯಾಪ್ತಿಯೊಳಗೆ ಇಂಧನ ಬೆಲೆಯನ್ನು ತರುವುದು ಕಷ್ಟ.

ಮೇ, ಜೂನ್ ಮಾಸಿಕದ ಜಿಎಸ್‌ಟಿ ಸಂಗ್ರಹ ಮತ್ತು ಜೂನ್ ತ್ರೈಮಾಸಿಕದ ಜಿಡಿಪಿ ಇಳಿಮುಖವಾಗುವುದರಲ್ಲಿ ಸಂದೇಹವಿಲ್ಲ. ಇದೇ ಸಂದರ್ಭದಲ್ಲಿ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾದುದೇನೋ ನಿಜ. ಆದರೆ ಇದುಕಳೆದ ವರ್ಷದಿಂದುಂಟಾದ ಪೂರೈಕೆಯಲ್ಲಿನ ವ್ಯತ್ಯಯ, ಹಣದುಬ್ಬರ ನೆಲೆ, ಬೆಲೆ ಏರಿಕೆಯ ಪರಿಣಾಮ ಹಾಗೂ ಜಿಎಸ್‌ಟಿ ಸುಧಾರಣೆ ಯಾಗದಿರುವುದು ಎಂದು ವಿಶ್ಲೇಷಿಸಬೇಕಾಗುತ್ತದೆ.

ಇದು ಸಂಪೂರ್ಣವಾಗಿ ಆರ್ಥಿಕ ಚಟುವಟಿಕೆಗಳಿಂದಲ್ಲ ಮತ್ತು ಆರ್ಥಿಕತೆ ಸಹಜ ಸ್ಥಿತಿಗೆ ಮರಳಿದೆ ಎಂದು ಬಿಂಬಿಸಲಾಗದು. (ಕಚ್ಚಾ ವಸ್ತುಗಳು, ತೈಲ, ಉಕ್ಕು, ಸಿಮೆಂಟ್ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆ ಮತ್ತು ಶೇ. 12.94ರಷ್ಟು ತಲುಪಿದ
ಸಗಟು ಹಣದುಬ್ಬರದ ಅನುಪಾತಕ್ಕನುಗುಣವಾಗಿ ಜಿಎಸ್‌ಟಿ ಸಂಗ್ರಹ ಏರಿಕೆಯಾಗಿದೆ ಎಂದರೆ ತಪ್ಪಿಲ್ಲ. ಸರಕುಗಳ ಬೆಲೆಯು ಸಾಂಕ್ರಾಮಿಕದ ಮೊದಲ ಅವಧಿಗಿಂತ ಗಣನೀಯವಾಗಿ ಏರಿದೆ.) ಇದೀಗ ಕೋವಿಡ್ ತಡೆಯಲು ಹೇರಿರುವ ನಿರ್ಬಂಧಗಳು
ಮಾರುಕಟ್ಟೆಯ ಬಾಗಿಲನ್ನು ಮುಚ್ಚಿ ಅರ್ಥ ವ್ಯವಸ್ಥೆಯ ಬಂಡಿ ಸುಗಮವಾಗಿ ಚಲಿಸದಂತೆ ಮಾಡಿದೆ.

ಪ್ರಮುಖ ರೇಟಿಂಗ್ ಸಂಸ್ಥೆಗಳು ಜಿಡಿಪಿ ಬೆಳವಣಿಗೆಯ ಪ್ರಮಾಣದ ಅಂದಾಜನ್ನು ತಗ್ಗಿಸಿವೆ. ಈಗ ಬೇಡಿಕೆ ಮತ್ತು ಉತ್ಪಾದನೆ ಗಳೆರಡೂ ತಗ್ಗಿವೆ. ಸ್ವದೇಶಿ ಉತ್ಪನ್ನದ ಪ್ರಮಾಣ ಕುಸಿದಿದೆ. ದೇಶವು ಬಿಕ್ಕಟ್ಟಿನ ನಂತರದ ಸಂದರ್ಭದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹೂಡಿಕೆಗಿಂತಲೂ ಮಿಗಿಲಾದುದು ಬೇಡಿಕೆ. ಆದರೆ ಆರ್ಥಿಕ ಸುಸ್ಥಿತಿಗೆ ಹೂಡಿಕೆ ಯಿಂದಾಗುವ ಹೆಚ್ಚಳವು ದೃಢವಾಗಿ ಸ್ಥಿರತೆ ಯನ್ನು ಕಾಪಾಡಿ ಬೇಡಿಕೆ ಹೆಚ್ಚಾಗುವುದು ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗುತ್ತದೆ.

ಇದೀಗ ನಿರುದ್ಯೋಗ ಪ್ರಮಾಣವು ಶೇ.14.73ಕ್ಕೆ ತಲುಪಿರುವುದು ಹೊಸ ಸವಾಲಾಗಿದೆ. ಆರ್‌ಬಿಐ ಬೇಡಿಕೆಯ ಮಹತ್ವ ಮತ್ತು ಆರ್ಥಿಕ ಪುನಶ್ಚೇತನದತ್ತ ಮುಖಮಾಡಬೇಕು ಎಂದಿದೆ. ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವ ಮತ್ತು ಕೈಗಾರಿಕೆಗಳ ಉತ್ಪಾದನೆ ಹೆಚ್ಚಿಸುವ ಎರಡೂ ಕೆಲಸಗಳು ಏಕಕಾಲದಲ್ಲಿ ವೇಗವರ್ಧನೆ ಪಡಕೊಳ್ಳಬೇಕು.

ತೈಲಬೆಲೆಯನ್ನು ಹಿತಕರ ಮಟ್ಟದಲ್ಲಿಟ್ಟು, ಹಣದುಬ್ಬರ ನಿಯಂತ್ರಿಸುವುದು ಹಾಗೂ ಕಾರ್ಮಿಕ, ಉದ್ಯಮ, ಕೃಷಿ, ವರ್ತಕ ವರ್ಗದ ವಿಶ್ವಾಸ ಮೂಡಿಸುವುದು ಆದ್ಯತೆ ಯಾಗಬೇಕಾಗಿದೆ. ಇದು ಕರೋನಾ ಅಲೆ ಚಲಿಸುವ ದಾರಿ, ರೂಪಾಂತರ ಮತ್ತು ನಿಯಂತ್ರಣಕ್ಕೆ ಅನುಗುಣವಾಗಿರುತ್ತದೆ. ಕರೋನಾ ಶಿಷ್ಠಾಚಾರದ ಬಗ್ಗೆ ಜನತೆ ಪ್ರದರ್ಶಿಸುವ ಸೌಜನ್ಯ, ಕಾರ್ಯತತ್ಪರತೆ ಮತ್ತು
ದಕ್ಷತೆ ಹಾಗೂ ಪ್ರಮುಖವಾಗಿ ಸರಕಾರದನಿಲುವುಗಳನ್ನು ಅವಲಂಬಿಸಿದೆ.

ದೇಶದ ವ್ಯಾಪಾರ ವ್ಯವಹಾರ ಮತ್ತು ಸೇವೆಗಳು 2021ರ ತ್ರೈಮಾಸಿಕದಲ್ಲಿ ಶೇ. 0.16 ಚೇತರಿಕೆಯಾಗಿದೆ. ಕರೋನಾ ಮೊದಲ ಅಲೆ ಮತ್ತು ಲಾಕ್ ಡೌನ್‌ನಿಂದ 2020-21ರಲ್ಲಿ ಒಟ್ಟಾರೆ ಜಿಡಿಪಿ ಶೇ (-) 7.3 ಕುಸಿತವಾಯಿತು. 2021-22ಕ್ಕೆ ಆಶಾದಾಯಕ
ಬೆಳವಣಿಗೆ ನಿರೀಕ್ಷಿಸಿದರೂ ಎರಡನೆಯ ಅಲೆಯಿಂದ ಸನ್ನಿವೇಶ ಪ್ರತಿಕೂಲವಾಗಿದೆ. 2021-2022ರ ಜಿಡಿಪಿ ಬೆಳವಣಿಗೆ ಇದೇ ರೀತಿ ಇರುವ ಆಶಾಭಾವನೆ ವ್ಯಕ್ತಪಡಿಸಿದರೂ ಸನ್ನಿವೇಶವು ಪ್ರತಿಕೂಲವಾಗಿದೆ.

ಆರ್ಥಿಕತೆಗೆ 2019ರಲ್ಲಿ 2.8 ಲಕ್ಷ ಕೋಟಿ ನಷ್ಟವಾಗಿದೆ. 2021ರಲ್ಲಿ 11 ಲಕ್ಷ ಕೋಟಿ ನಷ್ಟ. ತುಲನಾತ್ಮಕವಾಗಿ ಲೆಕ್ಕಚಾರ ಹಾಕಿದರೆ ಈ ಮೂರು ವರ್ಷಗಳಲ್ಲಿ ಒಟ್ಟು 20 ಲಕ್ಷ ಕೋಟಿ ನಷ್ಟವಾಗುತ್ತಿದೆ. ಜಿಡಿಪಿ 2016-17ರಲ್ಲಿ ಶೇ. 8.3, 2017-18 ರಲ್ಲಿ ಶೇ.7, 2018-19ರಲ್ಲಿ ಶೇ. 6.1, 2019-20ರಲ್ಲಿ ಶೇ. 4 ಮತ್ತು 2020-21ರಲ್ಲಿ ಶೇ. (-)7.30 ದಾಖಲಾಗಿದೆ.

ಹಾಲಿ ವರ್ಷದಲ್ಲಿ ದೇಶದ ಜಿಡಿಪಿ ಎಷ್ಟು ಬೆಳವಣಿಗೆ ಸಾಧಿಸಬಹುದೆಂಬ ಅಂದಾಜನ್ನು ಆರ್‌ಬಿಐ ಪರಿಷ್ಕರಿಸಿ ಅಂದಾಜು ಬೆಳವಣಿಗೆ ಶೇ. 9.3ರಷ್ಟಿರ ಬಹುದು ಎಂಬ ವ್ಯಾಖ್ಯಾನ ಮತ್ತು ವರದಿಗೆ ಹಲವು ರೇಟಿಂಗ್ ಏಜೆನ್ಸಿಗಳು ಸಹಮತ ವ್ಯಕ್ತಪಡಿಸಿವೆ. ಮೊದಲ ಕೋವಿಡ್ ಅಲೆಗೆ ಹೋಲಿಸಿದರೆ ಎರಡನೆಯ ಅಲೆ ಅಂಥ ಪರಿಣಾಮ ಬೀರಿಲ್ಲ ವಾದರೂ ಎರಡಂಕಿ ತಲುಪುದು ಅನುಮಾನ. ಒಟ್ಟಾರೆಯಾಗಿ ಇಲ್ಲಿ 2020ರಲ್ಲಿ ಕಂಡಿದ್ದ ತೀವ್ರ ಕಡಿತವೇ ಕಾರಣವಾಗಿದೆ.

ಅದಲ್ಲದೆ ಗಮನಿಸಬೇಕಾದ ವಿಚಾರವೆಂದರೆ ಈಗಲೂ ಸಹ ನಾವು ಮಾತ್ರವಲ್ಲ ವಿಶ್ವದ ಬೃಹತ್ ಆರ್ಥಿಕತೆಗಳು 2019ರ ಪರಿಸ್ಥಿತಿಗಿಂತ ಕುಸಿತ ದಾಖಲಿಸಿವೆ. 2019ರಲ್ಲಿ ಭಾರತದ ಜಿಡಿಪಿ 2.87 ಟ್ರಿಲಿಯನ್ ಡಾಲರ್. 2021ಕ್ಕೆ 2.71 ಟ್ರಿಲಿಯನ್ ಡಾಲರ್‌ಗೆ ಇಳಿದಿದೆ. ಇದೇ ಸಂದರ್ಭದಲ್ಲಿ ದೇಶದ ಪ್ರಸಕ್ತ ವಿದೇಶಿ ವಿನಿಮಯ ಮೀಸಲು 684 ಲಕ್ಷ ಕೋಟಿ ಡಾಲರ್‌ನಷ್ಟು ಗರಿಷ್ಠ ಮಟ್ಟದಲ್ಲಿದೆ. ಇದು ಪ್ರೋತ್ಸಾಹದಾಯಕ ವಿಚಾರ.

1991ರಲ್ಲಿ ಇದು ಕನಿಷ್ಠ 5.8 ಶತಕೋಟಿ ಡಾಲರ್‌ಗೆ ಕುಸಿದು ದೇಶಕ್ಕೆ ಮೂರು ವಾರಕ್ಕಾಗುವ ಆಮದು ಖರ್ಚಿಗೆ ಸಮವಾಗಿತ್ತು.
ಪ್ರಸಕ್ತ ಸನ್ನಿವೇಶದಲ್ಲಿ ಲಸಿಕೆ ಅಭಿಯಾನದ ವೇಗವು ಆರ್ಥಿಕತೆಗೆ ಪೂರಕವಾಗುತ್ತದೆ. ಲಸಿಕೆಯ ವಿಚಾರದಲ್ಲಿ ದೇಶಕ್ಕೆ ಲಸಿಕೆ ನೀಡುವ ಸಾಮರ್ಥ್ಯವಿದ್ದರೂ ಸಾಧಿಸಲಾಗಲಿಲ್ಲ. ದೇಶ ಔಷಧ ಮತ್ತು ತಯಾರಿಕೆಯ ಮುಂಚೂಣಿ ರಾಷ್ಟ್ರ ಕೇಂದ್ರ ಬಿಂದು ಎಂದು ಗುರುತಿಸಿಕೊಂಡು ವಿಶ್ವಕ್ಕೇ ಔಷಧ ಮತ್ತು ಲಸಿಕೆಯನ್ನು ಪೂರೈಸಿರುವ ನಮ್ಮ ದೇಶ ‘ವಸುದೈವ ಕುಟುಂಬಕಂ’ ನೀತಿ ಪಾಲಿಸಲು ಹೊರಟರೂ ಕೆಲವೊಂದು ದೇಶಗಳು ನಮ್ಮ ಸಂಕಷ್ಟ ಕಾಲದಲ್ಲಿ ಸಹಕಾರ ನೀಡುವುದಕ್ಕಿಂತಲೂ ನಿರ್ಬಂಧಗಳನ್ನು ಹೇರಿರುವುದು ದುರಂತ.

ದೇಶದ ಶೇ.80ರಷ್ಟು ಜನರಿಗೆ ಲಸಿಕೆ ನೀಡಬೇಕಾದರೂ ನಮಗೆ ಕನಿಷ್ಠ 180 ಕೋಟಿ ಡೋಸ್ ಬೇಕು. ಪ್ರಸಕ್ತ ಲಸಿಕೆ ತಯಾರಕ ರನ್ನು ಅವಲಂಬಿಸಿದರೆ ಲಸಿಕೆ ಅಭಿಯಾನಕ್ಕೆ ಹಿನ್ನಡೆ ಯಾಗುವ ಸಾಧ್ಯತೆ ಇದೆ. ಜಾಗತಿಕ ಉತ್ಪಾದಕರಿಂದ ಲಸಿಕೆ ಖರೀದಿ ಸುಲಭವಲ್ಲ. ಕಂಪನಿಗಳು ತಮ್ಮ ತಮ್ಮ ದೇಶಗಳಿಗೆ ಮೊದಲ ಆದ್ಯತೆ ನೀಡುತ್ತವೆ. ಇತರ ದೇಶಗಳೊಂದಿಗೆ ಹೋಲಿಕೆ ಸಲ್ಲದು.

ಅಮೆರಿಕ ಜನಸಂಖ್ಯೆ 33.2 ಕೋಟಿ ಯುರೋಪ್ ಮತ್ತು ಇತರ ದೇಶಗಳಲ್ಲಿ ಸೋಂಕು ಹತೋಟಿಗೆ ಬಂದಿರಬಹುದು. ಅಲ್ಲಿ ಜನಸಂಖ್ಯೆ ಮತ್ತು ಸಾಂದ್ರತೆ ತುಂಬಾ ಕಡಿಮೆ. ಅದಲ್ಲದೆ ಅಲ್ಲಿ ಸೌಜನ್ಯ, ಪಾರದರ್ಶಕತೆ ಮತ್ತು ದಕ್ಷತೆಯಿದೆ. ಆರೋಗ್ಯ
ಸೇವೆಯಲ್ಲಿಯೂ ಮುಂಚೂಣಿ ರಾಷ್ಟ್ರಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಒಂದು ಸಾವಿರ ಜನರಿಗೆ ಒಬ್ಬ ವೈದ್ಯ, ಮೂರು ಹಾಸಿಗೆಗಳು ಮತ್ತು ಮೂವರು ದಾದಿಯರು ಇರಬೇಕಾಗುತ್ತದೆ. ಆದರೆ ಭಾರತದಲ್ಲಿ ಒಂದು ಸಾವಿರ
ಜನರಿಗೆ 0.66 ವೈದ್ಯರು, 1.5 ರಷ್ಟು ದಾದಿಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.

ಇಲ್ಲಿ ತೀವ್ರ ನಿಗಾ ಘಟಕ ಲಕ್ಷ ಮಂದಿಗೆ 2.3. ಐಸಿಯು ಹಾಸಿಗೆಗಳ ಸಂಖ್ಯೆ ಜರ್ಮನಿಯಲ್ಲಿ 34, ಅಮೆರಿಕದಲ್ಲಿ 26, ಫ್ರಾನ್ಸ್‌ ನಲ್ಲಿ 16, ಯು.ಕೆ.ಯಲ್ಲಿ 10.5 ಆದ್ದರಿಂದ ಹೋಲಿಕೆ ಸಲ್ಲದು. ಅಂತೂ ನಾವೀಗ ಸ್ವಸ್ಥ ಆರ್ಥಿಕತೆಗೆ ಸ್ವಸ್ಥ ಆರೋಗ್ಯದ ಕಟುಸತ್ಯ ವನ್ನು ಮನಗಂಡಿದ್ದೇವೆ ಎಂದರೆ ತಪ್ಪಿಲ್ಲ. ಒಟ್ಟಾರೆ ಆರೋಗ್ಯದ ಸವಾಲು ನಿರ್ಣಾಯಕ ಘಟ್ಟ ತಲುಪುವವರೆಗೆ ಆರ್ಥಿಕತೆಯಲ್ಲಿಯೂ ಅನಿಶ್ಚಿತತೆ ಇರದೇ ಇರಲಾರದು.