Sunday, 15th December 2024

ಕರೋನಾ ಮತ್ತು ಹೆದರಿಕೆಯ ಭಯಾಗ್ರಫಿ

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಮೊನ್ನೆ ಶಾಪಿಂಗ್ ಮಾಡುತ್ತಿರುವಾಗ ಸಿಕ್ಕ ಆಕೆಯ ಹೆಸರು ಮೇಗನ್. ಹಣ್ಣು ಹಣ್ಣು ಮುದುಕಿ. ವಯಸ್ಸು ೯೭. ಇನ್ನು ಮೂರೂ ವರ್ಷವಾದರೆ ಶತಕ ಬಾರಿಸುವವಳಿದ್ದಾಳೆ ಮೇಗನ್. ಅಂಗಡಿಯ ಶಾಪಿಂಗ್ ಕಾರ್ಟ್ ಅನ್ನು ದೂಡಿಕೊಂಡು ಓಡಾಡುತ್ತಿದ್ದ ಗೂನು ಬೆನ್ನಿನ ಅಜ್ಜಿ.

ನಾನು ಕೂಡ ಏನೋ ಒಂದು ಸಾಮಾನನ್ನು ತರಲು ಅಂಗಡಿಗೆ ಹೋಗಿದ್ದೆ. ಈಗ ಕರೋನಾ ಬಂದ ಮೇಲಂತೂ ಸುಮ್ಮನೆ ವಿಂಡೋ ಶಾಪಿಂಗ್ ಮಾಡುವುದು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ಅಂಗಡಿಗೆ ಹೋಗುವ ಮೊದಲೇ ಎಲ್ಲಿ ಯಾವ ಯಾವ ಸಾಮಾನು ಸಿಗುತ್ತದೆ ಎಂದು ನೆನಪಿಸಿಕೊಂಡು ಅದರ ಪ್ರಕಾರ ಸಾಮಾನು ಚೀಟಿ ಮಾಡಿಕೊಂಡು ಹೋಗು ವುದು. ಅಂತೆಯೇ ಮನಸ್ಸಿನ ಒಂದು ನಕ್ಷೆ ಹಾಕಿಕೊಂಡು, ಆ ನಕ್ಷೆಯ ಪ್ರಕಾರ ಸಾಮಾನುಗಳನ್ನು ಎತ್ತಿಕೊಂಡು, ಬಿಲ್ ಮಾಡಿಸಿ ಆದಷ್ಟು ಬೇಗ ಅಂಗಡಿಯಿಂದ ಹೊರ ಬಂದು ಬಿಡಬೇಕು. ಈಗ ಹೆಚ್ಚಿನವರು ಶಾಪಿಂಗ್ ಮಾಡುವ ವಿಧಾನವೇ ಈ ರೀತಿ ಯzಗಿದೆ. ಅದಲ್ಲದೇ ಉಸಿರು ಗಟ್ಟಿಸುವ ಮಾಸ್ಕ್ ಧರಿಸಿ ಹೆಚ್ಚು ಹೊತ್ತು ಅಂಗಡಿಯಲ್ಲಿ ಸುತ್ತುವುದೂ ಕಷ್ಟ. ಆದರೆ ಅಜ್ಜಿ ಮೇಗನ್ ಮಾತ್ರ ಯಾವುದೇ ಗಡಿಬಿಡಿ ತೋರದೇ ಆಹಾರ ಸಾಮಗ್ರಿಗಳ ಹಿಂದೆ ಬರೆದ ವಿವರಣೆಗಳನ್ನು ಓದುತ್ತ, ತೀರಾ ಆರಾಮಾಗಿ ಶಾಪಿಂಗ್
ಮಾಡುತ್ತಿದ್ದಳು.

ಮನಸ್ಸಿನ ಈ ಮುದುಕರಿಗೆಲ್ಲ ಏನಾಗಿದೆ, ಕರೋನಾ ಬಂದರೆ ಶಿವಾಯ್ ಎನ್ನುವ ವಯಸ್ಸು – ಇವರಿಗೆಲ್ಲ ಸುಮ್ಮನೆ ಮನೆಯ ಇರಲಾಗದೇ, ಅಮೆರಿಕಾದಲ್ಲಿ ಪ್ರತಿಯೊಂದು ಅಂಗಡಿಯೂ ಆನ್ಲೆ ನ್‌ನ ಮೂಲಕ ಖರೀದಿ ಮಾಡಿ ಮನೆ ಬಾಗಿಲಿಗೆ ತಂದು ಕೊಡುವ ವ್ಯವಸ್ಥೆ ಇದೆ. ಸ್ವಲ್ಪ ಸಮಾಧಾನದಲ್ಲಿ ಆನ್ಲೆ ನ್ ಆರ್ಡರ್ ಮಾಡಿ ಆರಾಮಾಗಿ ಮತ್ತು ಸುರಕ್ಷಿತವಾಗಿ ಮನೆಯಲ್ಲಿಯೇ ಇರಬಾರದೇ ಎಂಬಿತ್ಯಾದಿ ವಿಚಾರ ಮಾಡುತ್ತಿದ್ದಾಗ ಮೇಗನ್ ನನ್ನ ಪಕ್ಕದ ಬಂದು ನಿಂತಿದ್ದಳು.

ಆಕೆ ನನ್ನನ್ನು ನೋಡು ಮಾಸ್ಕ್‌ನ ಹಿಂದೆಯೇ ಮುಗುಳ್ನಕ್ಕಿದ್ದು ಆಕೆಯ ಕಣ್ಣನ್ನು ನೋಡಿಯೇ ತಿಳಿಯಿತು. ‘ಹೇಗಿದ್ದೀರಾ?’ ಎಂದು ಕೇಳಿದೆ. ಆಕೆ ಹತ್ತಿರಕ್ಕೆ ಬಂದು “I am simply awesome, I am living the dream.’  ಎಂದಳು. ಸುಮಾರಾಗಿ ಅಪರಿಚಿತ
ವ್ಯಕ್ತಿಗಳನ್ನು ಮಾತನಾಡಿಸುವಾಗ “How are you?’  ಎಂದು ಕೇಳುವುದು ಅದಕ್ಕವರು “I am good, how are you?’ ಎಂದು
ಮರುಪ್ರಶ್ನೆ ಹಾಕುವುದು, ಅದಕ್ಕುತ್ತರವಾಗಿ “I am good, thank you.’  ಎಂದು ಹೇಳುವುದು, ಮತ್ತು ಆ ಕುಶಲೋಪರಿಯನ್ನು
ಅಲ್ಲಿಗೇ ಮುಗಿಸಿ ತಮ್ಮ ತಮ್ಮ ಕೆಲಸದಲ್ಲಿ ಮುಂದುವರಿಯುವುದು ಇಲ್ಲಿನ ಸಾಮಾನ್ಯ ರೂಢಿ. ಆಕೆಯ ಉತ್ತರ ಒಂದಿಷ್ಟು ಮಾತಿಗೆ ಆಹ್ವಾನ ನೀಡಿದಂತಿತ್ತು.

ನಿಮಗೆ ಇಷ್ಟು ವಯಸ್ಸಾಗಿದೆ, ಕರೋನಾ ಎಡೆ ಹರಡುತ್ತಿದೆ. ನೀವು ಸುಮ್ಮನೆ ಮನೆಯಲ್ಲಿಯೇ ಇರುವುದು ಸುರಕ್ಷಿತವಲ್ಲವೇ? ಏಕೆ ಅಂಗಡಿಯಲ್ಲಿ ತಿರುಗಾಡುತ್ತೀರಿ?’ ನೇರವಾಗಿ ಆಕೆಯನ್ನು ಕೇಳಿಯೇ ಬಿಟ್ಟೆ. ಮೇಗನ್ ಮಾತಿಗೆ ಇಳಿದಳು. ನನ್ನ ವಯಸ್ಸು ೯೭. ನಾನು ಈಗಾಗಲೇ ನನ್ನ ಬದುಕನ್ನು ಪೂರ್ಣವಾಗಿ ಬದುಕಿ ಆಗಿದೆ. ನನ್ನ ಮೊಮ್ಮಕ್ಕಳು ಮದುವೆ ಆಗಿzರೆ, ಮರಿ ಮಕ್ಕಳನ್ನು ಆಡಿಸಿ ಕೂಡ ಆಗಿದೆ. ಬದುಕಿನಲ್ಲಿ ಇಂಥzಂದನ್ನು ಮಾಡಿಲ್ಲ ಎನ್ನುವ ಯಾವುದೇ ಭಾವನೆ, ಬೇಸರ, ಅತೃಪ್ತಿ ನನ್ನಲ್ಲಿ ಇಲ್ಲ. ಇಷ್ಟು ವಯಸ್ಸಾದರೂ ಓಡಾಡುವ ಶಕ್ತಿ ಇದೆ.

ಹೀಗಿರುವಾಗ ನನ್ನ ಮಟ್ಟಿಗೆ ಇನ್ನು ಬದುಕುವ ಪ್ರತೀ ದಿನ ಕೂಡ ಬಹಳ ಮೌಲ್ಯಯುತವಾದದ್ದು. ನಾನು ಯಾವುದೇ ದಿನವನ್ನು
ಸುಮ್ಮನೆ ಮನೆಯಲ್ಲಿ ಕೂತು ಕಳೆದರೆ ಅದು ನನಗೆ ನಾನು ಮಾಡಿಕೊಳ್ಳುವ ಲುಕ್ಸಾನು. ಕರೋನಾ ಬರಬಹುದು, ನನ್ನ ಜೊತೆ
ನನ್ನ ಪತಿ ಇರುತ್ತಾರೆ. ಅವರಿಗೆ ಕೂಡ ನನ್ನದೇ ವಯಸ್ಸು. ಕರೋನಾ ಬಂದರೆ ಅವರಿಗೆ ಕೂಡ ಬರಬಹುದು. ನಾವಿಬ್ಬರೂ
ಸಾಯಬಹುದು. ಹಾಗಂತ ನಾನು ಮನೆಯಲ್ಲಿ ಕೂತುಕೊಂಡಿದ್ದರೆ ಅನಾರೋಗ್ಯ ಅದರಿಂದಲೇ ಬರಬಹುದು. ಅತ್ಯಂತ ಮೌಲ್ಯ ಯುತವಾದ ಒಂದೊಂದು ದಿನವನ್ನೂ ನಾನು ಬದುಕಲೇ ಬೇಕು. ಹಾಗಾಗಿಯೇ ನನ್ನ ಅತ್ಯಂತ ಪ್ರೀತಿಯ ಶಾಪಿಂಗ್ ನಾನು
ಬಿಟ್ಟಿಲ್ಲ, ಬಿಡುವುದೂ ಇಲ್ಲ.

I have already packed, ready and waiting for my flight’ ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿದಳು. ಅಜ್ಜಿ ಮೇಗನ್ ಹೇಳಿದ್ದು ಅದೆಷ್ಟು ಸತ್ಯ. ಒಂದು ಕ್ಷಣ ನಾವೆ ಅನವಶ್ಯಕ ಭಯದಲ್ಲಿಯೇ ಬದುಕುತ್ತಿದ್ದೇವೆ ಮತ್ತು ನಮ್ಮ ಆಯಸ್ಸಿನ ಅತ್ಯ ಮೂಲ್ಯ ದಿನಗಳನ್ನು ಹೆದರಿಕೆಗೆ ಬಲಿಕೊಡುತ್ತಿದ್ದೇವೆ ಎಂದೆನಿಸಿತು. ಆಕೆ ಅಷ್ಟು ವರ್ಷ ಬದುಕಿದ ಸಾರ್ಥಕ ಭಾವದ ಮುಂದೆ ಕರೋನಾ ಭಯದಿಂದ, ರೋಗವೊಂದು ಬರಬಹುದೆಂಬ ಹೆದರಿಕೆಯಿಂದ ಬದುಕುವುದನ್ನು ಬಿಡುವುದು ಸರಿಯೇ? ಸಾಂಕ್ರಾ ಮಿಕದ ನೆಪದಲ್ಲಿ ಮನೆಯ ಕೂತು ಇನ್ನುಳಿದ ತ್ಯಮೂಲ್ಯ ದಿನಗಳನ್ನು ಕಳೆಯಬೇಕೆ? ಅಥವಾ ಈ ರೀತಿ ಆಕೆಯ ಎಲ್ಲ ಮುಗಿದಿದೆ, ಇನ್ನು ಸತ್ತರೂ ತೊಂದರೆಯಿಲ್ಲ ಎನ್ನುವ ವಿಚಾರ ಸರಿಯೇ? ಆಕೆಗೆ ಯಾವುದೇ ಹೆದರಿಕೆ ಇರಲಿಲ್ಲ. ಆಕೆಗೆ ಹೆದರುವ
ಕಾರಣ ಮತ್ತು ಅವಶ್ಯಕತೆ ಅಲ್ಲಿರಲಿಲ್ಲ.

ಈಗ ಬದುಕಿರುವ ಬಹುತೇಕರಿಗೆ ಸಾಂಕ್ರಾಮಿಕ ಹೊಸತು. ಸಾಂಕ್ರಾಮಿಕದ ಸುತ್ತ ಹುಟ್ಟಿಕೊಂಡಿರುವ ಭಯ, ಆತಂಕ,
ಬದಲಾವಣೆ ಎಲ್ಲವೂ ಹೊಸತು. ಯಾರೊಬ್ಬರಿಗೂ ರೋಗ ಹೊಸತಲ್ಲ. ಮಾರಣಾಂತಿಕ – ಸಾವನ್ನು ತರುವ ರೋಗ ಕೂಡ
ಹೊಸತಲ್ಲ. ಕುಟುಂಬದಲ್ಲಿ, ಬೀದಿಯಲ್ಲಿ, ಊರಿನಲ್ಲಿ ಒಂದಿಂದು ಮಾರಣಾಂತಿಕ ರೋಗ ಜೀವವನ್ನು ತೆಗೆದದ್ದು ಆಗೀಗ ಅನುಭವಕ್ಕೆ ಬರುವ ಘಟನೆಯೇ. ಆದರೂ ಸಾಂಕ್ರಾಮಿಕದ ರೋಗ ಅದರಲ್ಲಿಯೂ ಈ ಯುಗದಲ್ಲಿ ಕಂಡು ಕೇಳರಿಯದ ರೀತಿ ಯಲ್ಲಿ ಹರಡುವ ಸಾಂಕ್ರಾಮಿಕ, ಅದರ ಸುತ್ತ ಬರುವ ಸುದ್ದಿಗಳು ಎಲ್ಲವೂ ಹೊಸತೇ. ಕರೋನಾದಂಥ ಮಹಾ ಸಾಂಕ್ರಾಮಿಕ ನಾವ್ಯಾರೂ ಹಿಂದೆ ನೋಡಿಲ್ಲ.

ಇಡೀ ಸಾಂಕ್ರಾಮಿಕ ಮನುಷ್ಯ ಕುಲವನ್ನು ಹೆದರಿಸಿದ ಪರಿ ಎಲ್ಲವೂ ಈಗ ಬದುಕಿರುವವರಿಗೆ ಹೊಸತೇ. ಕರೋನಾಕ್ಕೆ ಹೆದರಬೇಕು ಎನ್ನುವ ಒಂದು ವರ್ಗ – ಕರೋನಾಕ್ಕೆ ಹೆದರುವ ಅವಶ್ಯಕತೆಯೇ ಇಲ್ಲ ಎನ್ನುವ ಇನ್ನೊಂದು ವರ್ಗ. ಹೆದರಬೇಕೋ ಅಥವಾ ಹೆದರಬಾರದೋ ಎಂದು ತ್ರಿಶಂಕು ಸ್ಥಿತಿಯಲ್ಲಿರುವ ವರ್ಗ ಈ ಎರಡು ವರ್ಗಕ್ಕಿಂತ ದೊಡ್ಡದು. ಕರೋನಾ ಚೀನಾದಲ್ಲಿ
ಹರಡುತ್ತಿzಗ ಜಗತ್ತು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಇದೂ ಕೂಡ ಉಳಿದ -ಗಳಂತೆ ಇರಬಹುದು ಎಂದೇ ಬಹಳಷ್ಟು
ದೇಶಗಳು ಸಮಾಧಾನದಲ್ಲಿದ್ದವು.

ಅಸಲಿ ರೂಪ ಗೊತ್ತಾಗಿದ್ದೇ ಅಮೆರಿಕಾದ ನ್ಯೂಯಾರ್ಕ್‌ಗೆ ಕರೋನಾ ಬಂದು ಅಪ್ಪಳಿಸಿದಾಗ. ಅಲ್ಲಿಂದ ಇಲ್ಲಿಯ ವರೆಗಿನ ಸುದ್ದಿಗಳನ್ನು, ಬೆಳವಣಿಗೆಗಳನ್ನು ನೀವು ಗ್ರಹಿಸಿರುತ್ತೀರಿ. ಆದರೂ ಕೊನೆಯಲ್ಲಿ ಇದೆಲ್ಲದಕ್ಕೆ ಹೆದರಿ ಮನೆಯ ಕೂತು ಬದುಕಬೇಕೆ ಅಥವಾ ಹೆದರಿದ್ದು ಜಾಸ್ತಿಯಾಯಿತೇ ಎನ್ನುವ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ. ಜಗತ್ತಿನಲ್ಲಿ ಹೆದರಿಕೆ ಇಲ್ಲದ ಪ್ರಾಣಿಯೇ ಇಲ್ಲ.

ಮೆದುಳಿದೆಯೆಂದರೆ ಹೆದರಿಕೆಯಿದೆ ಎಂದೇ ಅರ್ಥ. ಮನುಷ್ಯನ ಹುಟ್ಟಿನ ಜೊತೆಯ ಹೆದರಿಕೆ ಕೂಡ ಹುಟ್ಟುತ್ತದೆ. ಆದಾಗ ತಾನೇ
ಹುಟ್ಟಿದ ಮಗುವಿಗೆ ಘಕ್ ಎಂದು ಹೆದರಿಸಿದರೆ ಆ ಮಗು ಚೀರುತ್ತದೆ. ಮಗು ನಡೆಯಲು ಕಲಿಯುವಾಗ ಮೊದಮೊದಲು ಬೀಳುವ ಹೆದರಿಕೆ. ನಂತರ ಸೈಕಲ್ ಕಲಿಯುವಾಗ, ಆಟವಾಡುವಾಗ ಎಲ್ಲ ಸಂದರ್ಭದಲ್ಲಿಯೂ ಬೆಳವಣಿಗೆಯ ಜೊತೆ ಜೊತೆ ಹೆದರಿಕೆ ಯನ್ನು ಹಿಮ್ಮೆಟ್ಟಿಯೇ ಮನುಷ್ಯ ದೊಡ್ಡವ ನಾಗುವುದು.

ಅದೆಂಥಹ ಧೈರ್ಯವಂತನಿಗೂ ಯಾವತ್ತೂ ಭಯ ಶೂನ್ಯವಾಗುವುದಿಲ್ಲ. ಕೆಲವರು ಹುಂಬತನದಿಂದ ನನಗೆ ಯಾವ ಹೆದರಿಕೆ ಇಲ್ಲವೆಂದರೂ ಅದೊಂದು ಬೊಗಳೆಯೇ. ಭಯ ಸಾರ್ವತ್ರಿಕ. ಹಾಗೆ ನೋಡಿದರೆ ಭಯ ಮನುಷ್ಯನ, ಪ್ರಾಣಿಯ ತೀರಾ ಅವಶ್ಯಕ ಮತ್ತು ಪ್ರಕೃತಿದತ್ತ ಸ್ವಾಭಾವಿಕ ಸ್ವಭಾವ. ಕೆಲವೊಂದು ಹೆದರಿಕೆ ಸಹಜವಾಗಿ ನಮಗೆ ಬಂದುಬಿಡುತ್ತದೆ. ಅದು ಡಿಎನ್‌ಎ
ಮೂಲಕ ಹರಿದು ಬರುವ ಹೆದರಿಕೆ. ಬೆಂಕಿ ಸುಡುತ್ತದೆ ಎಂದು ಅರಿವಾದಾಗ ಸಹಜವಾಗಿ ಬೆಂಕಿಯತ್ತ ಹೆದರಿಕೆಯುಂಟಾಗುತ್ತದೆ.

ಹರಿತವಾದ ವಸ್ತುವನ್ನು ಮುಟ್ಟುವಾಗ ಜಾಗರೂಕ ವಾಗಿರುವಂತೆ ಮಾಡುವುದು ಕೂಡ ಇದೇ ಸ್ವಭಾವತಃ ಹೆದರಿಕೆ. ಹಾವು, ವಿಷಕಾರಿ ಅಥವಾ ಅಪಾಯಕಾರಿ ಪ್ರಾಣಿಗಳೆಡೆಗಿನ ಹೆದರಿಕೆ ಕೂಡ ಸಹಜ ತಾರ್ಕಿಕ ಭಯದ ಉದಾಹರಣೆಗಳು. ಜಿರಳೆ ಕಚ್ಚುವು ದಿಲ್ಲ, ನಿರುಪದ್ರವಿ ಎಂದು ತಿಳಿದಿದ್ದರೂ ಆಗುವ ಹೆದರಿಕೆ ಅತಾರ್ಕಿಕ ಹೆದರಿಕೆಗೆ ಉದಾಹರಣೆ. ಇನ್ನು ಕೆಲವೊಂದು ಘಟನೆಗಳು
ಹೆದರಿಕೆಯನ್ನು ಹುಟ್ಟಿಹಾಕುತ್ತವೆ. ಅದೇ ರೀತಿಯ ಘಟನೆ ಇನ್ನೊಮ್ಮೆ ನಡೆದಾಗ ಅಥವಾ ನಡೆಯಬಹುದೇನೋ ಎಂದು
ನಮಗೆ ಗುಮಾನಿ ಬಂದಾಗ ಈ ಹೆದರಿಕೆ ಮತ್ತೆ ಎದುರಿಗೆ ಬರುತ್ತದೆ.

ಇನ್ನೊಂದು ವರ್ಗದ ಹೆದರಿಕೆಯೆಂದರೆ ಸಮೂಹ ಹೆದರಿಕೆ. ನಾವು ಹಾರರ್ ಸಿನಿಮಾ ನೋಡಿದರೆ ಭೂತ ಬರುವುದಕ್ಕಿಂತ
ಮೊದಲಿನ ಸನ್ನಿವೇಶ ನಮ್ಮ ಸುತ್ತಲೂ ನಿರ್ಮಾಣವಾದರೆ ಆಗ ಹುಟ್ಟುವ ಭಯವದು. ಇದು ನಮ್ಮ ಮನಸ್ಸಿನ ಒಂದಕ್ಕೊಂದು
ಥಳಕು ಹಾಕುವ ಶಕ್ತಿಯಿಂದ ಉಂಟಾಗುವ ಭಯ. ಇಂಗ್ಲೆಂಡಿನಲ್ಲಿ ಈಗ ಕೆಲವು ವರ್ಷಗಳ ಹಿಂದೆ ಕ್ಲೌನ್(ಜೋಕರ್ ವೇಷ ಧರಿಸಿ)
ಬರುವ ದೆವ್ವದ ಚಲನಚಿತ್ರವೊಂದು ಬಹಳ ಪ್ರಸಿದ್ಧವಾಯಿತು.

ಅಲ್ಲಿಂದೀಚೆ ಇದೇ ಜೋಕರ್ ವೇಷ ಧರಿಸಿ ಬರುವ ದೆವ್ವದ ಹತ್ತಾರು ಚಲನಚಿತ್ರಗಳು ನಿರ್ಮಾಣವಾದವು. ನಂತರದ ವರ್ಷ ಗಳಲ್ಲಿ ಹಾಸ್ಯಕ್ಕೆ ಹೆಸರುವಾಸಿಯಾಗಿದ್ದ ಜೋಕರ್ ವೇಷವನ್ನು ನೋಡಿದರೆ ಜನರು ಹೆದರಲು ಶುರುಮಾಡಿದರು. ಇಂದಿಗೂ ಯುಕೆ ಮತ್ತು ಅಮೆರಿಕಾದಲ್ಲಿ ಕ್ಲೌನ್ ವೇಷ ಧರಿಸಿ ಬಂದರೆ ಹೆದರುವ ಒಂದು ದೊಡ್ಡ ವರ್ಗವೇ ಇದೆ. ಮನಸ್ಸು ಕ್ಲೌನ್ ಧರಿಸಿದ ವ್ಯಕ್ತಿಯನ್ನು ನೋಡಿದಾಕ್ಷಣ ಆ ಚಲನಚಿತ್ರಗಳಿಗೆ, ಅಲ್ಲಿನ ಘಟನೆಗಳಿಗೆ ಕನೆಕ್ಟ್ ಆಗುವುದು ಈ ಹೆದರಿಕೆಗೆ ಕಾರಣ. ಅಲ್ಲದೇ ಈ ಚಿತ್ರಗಳನ್ನು ನೋಡಿಯೇ ಇರದವರು ಕೂಡ ಕ್ರಮೇಣ ಕ್ಲೌನ್ ಅನ್ನು ನೋಡಿ ಹೆದರಲು ಶುರುಮಾಡಿದರು. ಇದಕ್ಕೆ ಕಾರಣ ಸಮೂಹ ಹೆದರಿಕೆ.

ಇನ್ನೊಬ್ಬರು ಹೆದರಿದರೆ ನಾವು ಹೆದರಬೇಕು ಎನ್ನುವ ಪ್ರಾಣಿ ಸಹಜ ಸ್ವಭಾವ ಇದಕ್ಕೆ ಕಾರಣ. ನೀವು ನಿಮ್ಮೆದುರಿಗೆ ಮಾತನಾಡು ತ್ತಿರುವವರು ಒಮ್ಮೆಲೇ ಹೆದರಿದರೆ ಅವರ ಮುಖ ಭಾವವನ್ನು ನೋಡಿಯೇ ಏನಾಗಿದೆ ಎಂದು ತಿಳಿಯುವ ಮೊದಲೇ ಹೆದರಲು
ಕೂಡ ಇದೇ ಕಾರಣ.

ಹೆದರಿಕೆ ಎಷ್ಟು ಸಹಜವೊ ಅಷ್ಟೇ ಅವಶ್ಯಕ ಕೂಡ ಹೌದು. ಹಾವಿನ ಹೆದರಿಕೆ, ಕತ್ತಲಲ್ಲಿ – ಬೆಳಕಿಲ್ಲದೇ ಹೋಗದಂತೆ ಮಾಡು ತ್ತದೆ. ಎತ್ತರದ ಸ್ಥಳದಲ್ಲಿರುವಾಗ ಜಾಗರೂಕತೆಯಿಂದಿರುವಂತೆ ಮಾಡುವುದು ಬೀಳುತ್ತೇನೆ ಎಂಬ ಹೆದರಿಕೆ. ಭಯ ನಮ್ಮನ್ನು ಹೆಚ್ಚು ಸುರಕ್ಷಿತವಾಗಿಡುತ್ತದೆ. ಹೆದರಿಕೆ ಯಾವತ್ತೂ ಒಂದು ಕ್ರಿಯೆಗೆ ಪ್ರಚೋದನೆ ನೀಡುತ್ತದೆ. ಭಯ ಏನೋ ಒಂದು ಕೆಲಸ ವನ್ನು ಮಾಡುವಂತೆ – ಮುಂದಾಗುವ ಹಾನಿಯನ್ನು ತಪ್ಪಿಸುವಂತೆ ನಡೆಯುವಂತೆ ಪ್ರೇರೇಪಿಸುತ್ತದೆ. ಇದು ಬಹಳ ಮುಖ್ಯ ವಾದದ್ದು.

ಭಯ ಅದೇ ಕಾರಣಕ್ಕೆ ಒಳ್ಳೆಯದೆಂದದ್ದು. ಭಯ ಒಂದು ತರ್ಕಬದ್ಧ ವಿವೇಚನೆ ಮತ್ತು ಕ್ರಿಯೆಗೆ ಪ್ರಚೋದನೆ ನೀಡಬೇಕು.
ಕರೋನಾ ಬರಬಹುದೆನ್ನುವ ಭಯವಿದೆಯಲ್ಲ ಅದು ಕೈ ತೊಳೆಯುವಂತೆ ಜಾಗ್ರತೆಯನ್ನು ಹುಟ್ಟಿಸಬೇಕು, ಮಾಸ್ಕ್ ಧರಿಸುವಂತೆ ಪ್ರೇರೇಪಣೆ ಕೊಡಬೇಕು. ಕರೋನಾ ಭಯವಿಲ್ಲದಿದ್ದರೆ ಮೊಂಡುತನ, ಅನವಶ್ಯಕ ಹುಂಬತನ ಹುಟ್ಟಿಕೊಳ್ಳುತ್ತದೆ. ಮಾಸ್ಕ್ ಧರಿಸು ವುದು, ಕೈ ತೊಳೆಯುವುದು, ಜಾಗ್ರತೆಯಿಂದ ಇರುವುದು ಇವು ತರ್ಕಬದ್ಧ ಕ್ರಿಯೆ. ಇನ್ನು ಭಯ ಕೆಲವು ಯಡವಟ್ಟನ್ನು ವಿವೇಚ ನೆಯ ಆಚೆ ಹುಟ್ಟಿ ಹಾಕುತ್ತದೆ. ಅದು ಭಯದ ಅಡ್ಡ ಪರಿಣಾಮ. ಕರೋನಾ ಭಯದಿಂದ ಜನರ ಅತಿರೇಕ ನಡವಳಿಕೆ ಇದಕ್ಕೆ ಉದಾಹರಣೆ. ಕೆಲವರು ಹ್ಯಾಂಡ್ ಸ್ಯಾನಿಟೈಜರ್ ಅನ್ನು ಕುಡಿದರು, ಕೆಲವರು ಸೋಪ್ ನೀರಿನಲ್ಲಿ ಬಾಯಿ ಮುಕ್ಕಳಿಸಿದರು ಎನ್ನುವ ಸುದ್ದಿ ಕೇಳಿರುತ್ತೇವೆ.

ಇದು ಅತಾರ್ಕಿಕ ಕ್ರಿಯೆ. ಭಯ ಹೇಗೆ ಜಾಗ್ರತೆಯನ್ನು ಮೂಡಿಸುತ್ತದೆಯೋ ಅದೇ ರೀತಿ ಯಡವಟ್ಟು ಕ್ರಿಯೆಯಲ್ಲಿ ತೊಡಗು ವಂತೆ ಕೂಡ ಮಾಡುತ್ತದೆ. ಇದಕ್ಕೆ ಕಾರಣ ಅತಾರ್ಕಿಕ ಜ್ಞಾನ. ಯಾವಾಗ ಭಯದಿಂದ ಮನುಷ್ಯ ಅತಾರ್ಕಿಕ ಕ್ರಿಯೆಯಲ್ಲಿ
ತೊಡಗುತ್ತಾನೋ, ಎಡಬಿಡಂಗಿ ಕೆಲಸಕ್ಕೆ ಕೈ ಹಾಕುತ್ತಾನೋ ಆಗ ಭಯ ಒಳ್ಳೆಯದಲ್ಲ ಎಂದೆನಿಸಲು ಶುರುವಾಗು ತ್ತದೆ. ಟಿವಿ,
ಪತ್ರಿಕೆಯಲ್ಲಿ ಕರೋನಾ ಸಂಬಂಧಿ ಸುದ್ದಿಗಳನ್ನು ತಿಳಿಯುತ್ತೇವೆ. ಈ ರೀತಿಯ ಸುದ್ದಿಗಳು ಒಂದು ಸಹಜ ಹೆದರಿಕೆಯನ್ನು ಸಮಾಜದಲ್ಲಿ ಹುಟ್ಟಿಹಾಕಬೇಕು.

ಅದರಿಂದ ಜನರು ಸದಾ ಹೆಚ್ಚು ಜಾಗ್ರತವಾಗುವಂತೆ ಪ್ರೇರೇಪಿಸಬೇಕು. ಇವೆಲ್ಲ ತೀರಾ ನೆಗೆಟಿವ್ ಸುದ್ದಿಗಳು, ಅದನ್ನು ನೋಡಲೇ ಬಾರದು ಎಂದು ಟಿವಿ ನೋಡುವುದನ್ನೇ ನಿಲ್ಲಿಸುವುದು, ಪತ್ರಿಕೆ ಓದುವುದನ್ನೇ ಬಿಡುವುದು ಸರಿಯಲ್ಲ. ಟಿವಿ ಬಂದ್ ಮಾಡಿದರೆ ಕರೋನಾ ಹೋಗುತ್ತದೆ ಎನ್ನುವುದು ಹಾಸ್ಯಕ್ಕೇನೂ ಸರಿ ಆದರೆ ಸಮಸ್ಯೆಯೊಂದರಿಂದ ವಿಮುಖವಾಗಿ ಹೋಗುವುದು ಮತ್ತು ಭಯಕ್ಕೆ ಭಯಪಡುವುದು, ಸತ್ಯವನ್ನು ನೆಗ್ಲೆಕ್ಟ್ ಮಾಡುವುದು ಸರಿಯಲ್ಲ.

ಇಂಗ್ಲೆಂಡಿನ ಕ್ಲೌನ್ ಹೆದರಿಕೆಯನ್ನು ಹೋಗಲಾಡಿಸಲು ಅಲ್ಲಿನ ವಿಜ್ಞಾನಿಗಳು ಸುಮಾರು ಇಪ್ಪತ್ತೈದು ಕ್ಲೌನ್ ಕಂಡರೆ ಹೆದರುವ ಜನರನ್ನು ಆಯ್ದು ಒಂದು ಪ್ರಯೋಗ ಮಾಡಿದರು. ಅವರನ್ನು ಕ್ಲೌನ್ ತುಂಬಿದ ಕೋಣೆಯೊಳಗೆ ಅರ್ಧ ಗಂಟೆ ಬಿಡಲಾಯಿತು. ಮೊದಮೊದಲು ಇವರೆಲ್ಲ ಹೆದರಿದರೂ ಕ್ರಮೇಣ ಸ್ವಲ್ಪ ಸಮಯದ ನಂತರ ಅವರೆಲ್ಲರ ಹೆದರಿಕೆ ಕಡಿಮೆಯಾಗತೊಡಗಿತು. ಇದೇ ಪ್ರಯೋಗ ಪ್ರತೀ ದಿನ ಮಾಡಿದಾಗ ವಾರ ಕಳೆಯುವುದರೊಳಗೆ ಅವರ ಕ್ಲೌನ್ ಬಗೆಗಿನ ಹೆದರಿಕೆ ಕಡಿಮೆಯಾಯಿತು, ಕೆಲವರಿಗೆ ಹೊರಟುಹೋಯಿತು. ಹೆದರಿಕೆಯ ವಿಶೇಷತೆಯೇ ಅದು. ಕ್ರಮೇಣ ನಮ್ಮ ಮನಸ್ಸು ಹೆದರಿಕೆಯನ್ನು ನಿರ್ಲಕ್ಷಿಸಲು ಶುರುಮಾಡುತ್ತದೆ.

ಈಗ ಕರೋನಾ ಎಡೆಗಿನ ಭಯವೂ ಹಾಗೆಯೇ ಆಗಿದೆ. ಕರೋನಾ ಮೊದಲೆಲ್ಲ ಬಂದಾಗ – ನಮ್ಮ ಊರಿನಲ್ಲಿ, ಬೀದಿಯಲ್ಲಿ ಹರಡಿದ್ದು ಸುದ್ದಿಯಾದಾಗ ಎಲ್ಲರೂ ಹೆದರಿದರು. ಆದರೆ ಕ್ರಮೇಣ ಹೆದರಿಕೆ ಕ್ಷೀಣಿಸುತ್ತಾ ಹೋಯಿತು. ಕರೋನಾ ಎಲ್ಲೂ ಹೋಗಲಿಲ್ಲ, ಹರಡುವಿಕೆ, ಸಾವು ಹೆಚ್ಚುತ್ತಲೇ ಇದೆ. ಆದರೆ ಹೆದರಿಕೆ ಮಾತ್ರ ಕಡಿಮೆಯಾಗುತ್ತ ಹೋಗುತ್ತಿದೆ. ಇಲ್ಲಿ ಭಯ ದಿಂದಲೇ ಬದುಕಬೇಕಿತ್ತು ಎಂದು ಹೇಳುತ್ತಿಲ್ಲ. ಭಯ ಕ್ಷೀಣಿಸಿದಂತೆ ಒಂದಿಷ್ಟು ಅಸಡ್ಡೆ, ನನಗೇನೂ ಆಗುವುದಿಲ್ಲ – ಇದೆಲ್ಲ
ಮೀಡಿಯಾ ಹುಟ್ಟಿಸಿದ ಭೀತಿ ಎನ್ನುವ ಹಂತಕ್ಕೆ ನಾವೆ ತಲುಪುವಂತಾಯಿತು.

ಹೆದರಿಕೆ ಕಡಿಮೆಯಾಗಿದೆ ಎನ್ನುವುದು ಒಳ್ಳೆಯದೇ ಆದರೆ ಹೆದರಿಕೆ ಕಡಿಮೆಯಾದಂತೆ ಕರೋನಾದೆಡೆಗಿನ ಜಾಗ್ರತೆ ಕಡಿಮೆ ಯಾದರೆ ಅದು ಒಳ್ಳೆಯದಲ್ಲ. ಕರೋನಾ ಈಗ ಬದುಕಿರುವ ನಮ್ಮೆಲ್ಲರಲ್ಲಿ ಅಭೂತಪೂರ್ವ ಭಯಗಳನ್ನು ಹುಟ್ಟಿಸಿದ್ದು ನಿಜ. ಒಬ್ಬೊಬ್ಬರದ್ದು ಒಂದೊಂದು ಹೆದರಿಕೆ. ಕೆಲವರಿಗೆ ಕರೋನಾ ರೋಗದ, ಸಾವಿನ ಹೆದರಿಕೆ. ಇನ್ನು ಕೆಲವರಿಗೆ ಉಂಟಾಗಿರುವ ಪರಿಸ್ಥಿತಿಯಿಂದ ಕೆಲಸ ಕಳೆದುಕೊಳ್ಳುವ ಹೆದರಿಕೆ. ಕೆಲವರಿಗೆ ಬಿಸಿನೆಸ್ ಲಾಸ್ ಆಗಿ ದಿವಾಳಿಯಾಗುವ ಭಯ.

ಇನ್ನು ಕೆಲವರಿಗೆ ಅವರ ವಯೋವೃದ್ಧ ತಂದೆ ತಾಯಿಯನ್ನು ಕಳೆದುಕೊಂಡಿಬಿಡುತ್ತೇವೆಯೋ ಎಂಬ ಭಯ. ಭಯ ನಾನಾ ರೀತಿ ಯದ್ದು. ಎಲ್ಲರಿಗೂ ಹೆದರಿಕೊಳ್ಳಲು ಅವರವರಿಗೆ ಸಮಂಜಸವೆನಿಸುವ ಕಾರಣವಿದೆ. ಒಬ್ಬರ ಕಾರಣ ಇನ್ನೊಬ್ಬರಿಗೆ ಹಗುರವೆನಿಸ ಬಹುದು, ಹಾಸ್ಯವೆನಿಸಬಹುದು. ನಮಗೆ ಧೈರ್ಯ ತುಂಬುವ ವಿಚಾರ ಇನ್ನೊಬ್ಬರಿಗೆ ಲಾಗುವಾಗದೇ ಇರಬಹುದು. ಇಂದು ಈ ಕರೋನಾ ಸಮಯದಲ್ಲಿ ನಾವು ಇನ್ನೊಬ್ಬರ ಭಯವನ್ನು ತಗ್ಗಿಸಲು, ಸಾಂತ್ವನ ಹೇಳಲಾಗದಿದ್ದರೂ ಅದನ್ನು ಗೌರವಿಸಬೇಕು.

ಸಹಾಯ ಮಾಡಲಾಗದಿದ್ದರೂ ಅವರವರ ಕಾರಣ ಅವರವರಿಗೆ ಎಂದು ಕನಿಷ್ಠಪಕ್ಷ ಬಿಟ್ಟುಬಿಡಬೇಕು. ಬೇರೆಯವರ ಭಯವನ್ನು
ನಾಜೂಕಿನಿಂದ ನೋಡಬೇಕು. ಇದು ಈ ಕ್ಷಣದ ಸಮಾಜದ ಅವಶ್ಯಕತೆ ಕೂಡ ಹೌದು. ನಮ್ಮ ಅಸಡ್ಡೆಯ ಮಾತುಗಳು
ಇನ್ನೊಬ್ಬರು ಅತಾರ್ಕಿಕ ಕ್ರಿಯೆಯಲ್ಲಿ ತೊಡಗುವಂತಾಗಬಾರದು. ಇಂದು ಕರೋನಾ ಸಾವನ್ನು ಹತ್ತಿರದಿಂದ ಕಂಡವರಿಗೆ ಅದರ
ಭೀಕರತೆಯ ಅರಿವಿದೆ. ಕುಟುಂಬದಲ್ಲಿ ಸಾವೊಂದು ಕರೋನಾದಿಂದ ಸಂಭವಿಸಿದವರಿಗೆ ಮಾತ್ರ ಅದರ ರೌದ್ರತೆಯ ಅನುಭವ ವಿದೆ.

ಇನ್ನು ಕರೋನಾ ಬಂದು ಬಚಾವ್ ಆದವರಂತೂ ಈ ಸಾಂಕ್ರಾಮಿಕವೇ ಸುಳ್ಳು ಎಂದೆಲ್ಲ ಮಾತನಾಡುತ್ತಿದ್ದಾರೆ. ಇದರ
ಜೊತೆ ಯಾರು ಇಲ್ಲಿಯವರೆಗೆ ಕರೋನಾದಿಂದ ತಪ್ಪಿಸಿಕೊಂಡು ಇzರೋ ಅವರೆಲ್ಲರಿಗೆ ಅದರೆಡೆಗಿನ ಭಯ ಕ್ಷೀಣಿಸಿ ಒಂದು ಅಸಡ್ಡೆ ಒಳನುಸುಳಿತ್ತಿದೆ. ಸಾಂಕ್ರಾಮಿಕದ ಸಮಯದಲ್ಲಿ ಹೆದರಿಕೆ ಮತ್ತು ಅರಿವು ಇವೆರಡನ್ನೂ ಕಾಪಾಡಿಕೊಳ್ಳುವುದು
ಸಮಾಜದ ಮಟ್ಟಿಗೆ ತೀರಾ ಅವಶ್ಯಕ. ಔಷಧವಿಲ್ಲದ ಏಡ್ಸ್ ಹೇಗೆ ಮನುಷ್ಯನನ್ನು ಇವತ್ತಿಗೂ ಸುರಕ್ಷಿತ ದೈಹಿಕ ಸಂಪರ್ಕವನ್ನು
ಹೊಂದುವಂತೆ ಮಾಡಿದೆಯೋ ಅದೇ ರೀತಿ ಜಾಗ್ರತೆಯನ್ನು ಕರೋನದೆಡೆಗೆ ಕೂಡ, ಲಸಿಕೆ ಲಭ್ಯವಾಗುವವರೆಗೆ ಕಾಪಾಡಿ ಕೊಳ್ಳುವ ಒಂದು ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಲ್ಲಿಯವರೆಗೆ ನಾವೆಲ್ಲ ಹೆದರಿಕೆಯೊಂದಿಗೇ ಬದುಕಬೇಕು ಇಲ್ಲವೇ ಹೆದರಿಕೆಯನ್ನು ಮರೆತರೂ ಜಾಗ್ರತೆಯನ್ನು ಮರೆಯದಂತೆ ಬದುಕ ಬೇಕಾಗಿದೆ.

ಹೆದರಿಕೆಯನ್ನು ನೀವು ಅದೆಷ್ಟೇ ನೆಗೆಟಿವ್ ಎಂದು ಪರಿಗಣಿಸಿದರೂ ಸಮಾಜದಲ್ಲಿ ಅದರ ಅವಶ್ಯಕತೆ ಸದ್ಯ ಇದ್ದೇ ಇದೆ. ನೀವು ಅಜ್ಜಿ ಮೇಗನ್‌ನಂತೆ ಪೂರ್ಣ ಬದುಕನ್ನು ಬದುಕಿ ಆಗಿದೆ ಎಂದಾದರೆ ಮಾತ್ರ ಈ ಯಾವ ಜಾಗ್ರತೆಯ, ಭಯದ ಅವಶ್ಯಕತೆಯೂ ನಿಮಗೆ ಇರುವುದಿಲ್ಲ. ಆದರೆ ಸಮಾಜದಲ್ಲಿ ಬದುಕುವವ ರಾದದ್ದರಿಂದ ನಮಗೆ ಬೇಡವೆಂದರೂ ಅನ್ಯರ ಕ್ಷೇಮಕ್ಕೆ ಜಾಗ್ರತೆ ಅವಶ್ಯಕ. ಇದರ ಜೊತೆ ಅನ್ಯರ ಯಾವ ಭಯವನ್ನು ಹೋಗಲಾಡಿಸಲು ಸಾಧ್ಯ ವಾಗದಿದ್ದಲ್ಲಿ ಕೊನೆಯ ಪಕ್ಷ ಉಪೇಕ್ಷೆ , ಅಪಹಾಸ್ಯ ಮಾಡುವುದು ಬೇಡ. ಜೀವನದೆಡೆಗಿನ ಪ್ರತಿಯೊಬ್ಬರದೂ ದೃಷ್ಟಿಕೋನ ಬೇರೆ ಬೇರೆ. ಈ ಸಾಂಕ್ರಾಮಿಕ ಒಬ್ಬೊಬ್ಬ ರನ್ನು ಒಂದೊಂದು ರೀತಿ ತಟ್ಟಿದೆ ಎಂಬ ಅರಿವು ನಮ್ಮಲ್ಲಿರಲಿ. ಅನ್ಯರ ಜೀವನ, ಅವಶ್ಯಕತೆಯ, ಸ್ವಭಾವದ ಜೊತೆ ಜೊತೆ ಅವರ ಭಯವನ್ನು ಕೂಡ ಗೌರವಿಸೋಣ.