ಅವಲೋಕನ
ಡಾ.ಕರವೀರಪ್ರಭು ಕ್ಯಾಲಕೊಂಡ
ಕರೋನಾ ವೈರಸ್ ಸೋಂಕು ಏರು ಮುಖದ ಲಂಗುಲಗಾಮು ಇಲ್ಲದೆ ಸಾಗುತ್ತಿದೆ. ಜಗದಲ್ಲಿ ಯುದ್ಧ ನಡೆಯಲಿಲ್ಲ. ಮದ್ದು ಗುಂಡುಗಳು ಸಿಡಿಯಲಿಲ್ಲ. ಬಾಂಬುಗಳು ಸೋಟಗೊಳ್ಳಲಿಲ್ಲ ನಿಜ.
ಯುದ್ಧವನ್ನೂ ಮೀರಿಸುವಷ್ಟು ಹೆಣಗಳು ಈ ನೆಲದಲ್ಲಿ ಬಿದ್ದದ್ದಂತೂ ಸತ್ಯ. ಎಚ್ಚರಿಕೆ ಇರಲಿ ಎಂದು ಒತ್ತಿ ಹೇಳುತ್ತಿದ್ದರೂ, ಜನರಲ್ಲಿ ಭಯ, ಭೀತಿ ಬಿಟ್ಟಿಲ್ಲ. ಅಪ್ಪಿಕೊಂಡ ಆತಂಕ ದೂರವಾಗಿಲ್ಲ. ಹೆಸರೇ ಬೆಚ್ಚಿ ಬೀಳಿಸುವಂತಿದೆ. ಸಾಂಕ್ರಾಮಿಕವಾಗಿರುವ ‘ಕೋವಿಡ್ 19 ಪಿಡುಗಿನ ಹೋರಾಟದಲ್ಲಿ ಲಾಕ್ ಡೌನ್ ಕ್ರಮ ಅಂತಿಮ ಅಸ್ತ್ರವಲ್ಲ. ಅದು ಈ ರೋಗದ ವಿರುದ್ಧದ ಹೋರಾಟಕ್ಕೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲು ಒಂದು ಅವಕಾಶ ಅಷ್ಟೇ’ ಎನ್ನುವ ಮಾತನ್ನು ದೇಶದ ನೀತಿ ನಿರೂಪಕರು ಹಲವು ಬಾರಿ ಹೇಳಿದ್ದಾರೆ.
ಆ ಮಾತು ನಿಜ ಕೂಡ. ಆಸ್ಪತ್ರೆಗಳು ಎಲ್ಲರಿಗೂ ಮುಕ್ತವಾಗಿರಬೇಕು. ಎಲ್ಲ ರೋಗಿಗಳನ್ನು ನೋಡಲು ಅನುವು ಮಾಡಿ ಕೊಡಬೇಕು. ಕರೊನಾ ಸೋಂಕು ಬೆಂಬಿಡದ ಭೂತದಂತೆ ಕಾಡುತ್ತಿರುವುದರಿಂದ, ಇಡೀ ಜಗತ್ತೇ ಅದರ ಮುಂದೆ ಮಂಡಿಯೂರಿ ತಲೆತಗ್ಗಿಸಿ ನಿಂತಾಗಲೂ, ಇತರ ರೋಗಿಗಳ ನಿರ್ಲಕ್ಷ ಖಂಡಿತ ಸಲ್ಲದು. ಆರೋಗ್ಯ ಸೇವೆ ಪಡೆಯುವ ಹಕ್ಕು, ಜೀವಿಸುವ ಹಕ್ಕಿನ ವ್ಯಾಪ್ತಿಯ ಬರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿರುವ ಮಾತುಗಳನ್ನು ಸರಕಾರಗಳು ನೆನಪಿಸಿಕೊಳ್ಳಬೇಕು. ಯಾವುದೇ ಸಾಂಕ್ರಾಮಿಕಗಳು ಸೋಟಗೊಂಡಾಗ ಅದಕ್ಕೆ ಆದ್ಯತೆ ನೀಡಬೇಕು. ನಿಜ. ಆದರೆ, ಅದರ ಕರಾಳ ನೆರಳಲ್ಲಿ ಉಳಿದ ರೋಗಗಳು ನಲುಗಿ ಹೋಗಬಾರದು. ಜನರ ಆರೋಗ್ಯ ಹಾಳಾಗಬಾರದು. ಸಾವು ನೋವಿಗೆ ಸಂಚಕಾರವಾಗಬಾರದು.
ಮನ ಕಲುಕುವ ಘಟನೆ: ನೊಯಿಡಾದಲ್ಲಿ ಗರ್ಭಿಣಿಯೊಬ್ಬಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಳು. ಅವಳಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದವು. ಸತತ 13 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿದರು. ಕರೋನಾ ಹಾವಳಿ ಇದ್ದ ಕಾರಣ ಕೋವಿಡ್ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು, ವರದಿ ಪಡೆದುಕೊಂಡು ಬಂದ ಮೇಲೆ ನೋಡುವುದಾಗಿ ಕಡ್ಡಿ ಮುರಿದು ಎರಡು ತುಂಡು ಮಾಡಿದಂತೆ ಹೇಳಿದರು. ಎಲ್ಲ ಆಸ್ಪತ್ರೆಯವರೂ ಇದೇ ಸಬೂಬು ಹೇಳಿ ಸಾಗು ಹಾಕಿದರು. ಕೊನೆಗೆ ಆಂಬ್ಯುಲೆನ್ ನ ಮೃತಪಟ್ಟ ದಾರುಣ ಘಟನೆ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಯಾರ ಮನವನ್ನು
ಕಲುಕದೇ ಇರದು.
ಗರ್ಭಿಣಿಯರು ಆರೋಗ್ಯ ತಪಾಸಣೆಗೆ ಬಂದರೆ, ಟಿ.ಟಿ.ಚುಚ್ಚುಮದ್ದು ತಗೆದುಕೊಳ್ಳಬೇಕಿದೆ ಎಂದು ಹೇಳಿದರೆ, ಮಕ್ಕಳನ್ನು ಲಸಿಕೆಗಾಗಿ ಸರಕಾರಿ ಆಸ್ಪತ್ರೆಗೆ ಕರೆತಂದರೆ ಅವರ ಆರೋಗ್ಯ ತಪಾಸಣೆಯನ್ನು ಮಾಡದೇ, ಲಸಿಕೆಯನ್ನು ನೀಡದೇ, ಈಗ ಕರೋನಾ ಇರುವುದರಿಂದ ಆಸ್ಪತ್ರೆ ಸಮೀಪ ಗರ್ಭಿಣಿಯರನ್ನು, ಮಕ್ಕಳನ್ನು ತರಬೇಡಿ ಎಂಬ ಭಯ ಭೀತಿಯ ಸಂದೇಶ ನೀಡಿ ಸಾಗು ಹಾಕಿದ್ದಾರೆ.
ಹೀಗಾಗಿ ಕರೋನಾ ಕರಿನೆರಳಿನಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ನಲುಗಿ ಹೋಗಿದೆ. ಜತೆಗೆ ಎಲ್ಲ ರಾಷ್ಟ್ರೀಯ ಕಾರ್ಯ ಕ್ರಮಗಳೂ ಮುಗ್ಗರಿಸಿವೆ. ಇದು ನಮ್ಮ ದೇಶದಲ್ಲಿ ಮಾತ್ರ ನಡೆದಿಲ್ಲ. ಪ್ರಪಂಚದ ಎಡೆ ಆಗಿದೆ… ಅಂಗನವಾಡಿಯಲ್ಲಿ ಅಶಕ್ತ ಮಕ್ಕಳ ಆರೋಗ್ಯ ತಪಾಸಣೆ, ಲಸಿಕೆ ವಿತರಣೆ ಕಾರ್ಯಕ್ರಮ ಜರುಗಿಲ್ಲ. ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಸಾಂಕ್ರಾಮಿಕ ಕಾಯಿಲೆಗಳ ಪತ್ತೆ ಹಚ್ಚುವ, ಚಿಕಿತ್ಸೆ ನೀಡುವ ಯೋಜನೆಗೂ ಎಳ್ಳು ನೀರು ಬಿಟ್ಟಿದೆ.
ನಿರ್ಲಕ್ಷ್ಯ ಸರಿಯಲ್ಲ: ಕರೋನಾದ ಈ ಆರ್ಭಟದ ಮಧ್ಯೆ ಇತರ ರೋಗಗಳಿಂದ ತೊಂದರೆಗೆ ಒಳಗಾದವರನ್ನು ಕಡೆಗಣಿಸುವುದು, ನಿರ್ಲಕ್ಷಿಸುವುದು ಎಳ್ಳಷ್ಟೂ ಸರಿಯಲ್ಲ. ಈಗ ಯಾರಿಗಾದರೂ ಜ್ವರ, ನೆಗಡಿ, ಕೆಮ್ಮು ಬಂತೆಂದರೆ ಹೆದರಿ ನಡಗುವ ಪರಿಸ್ಥಿತಿ ಇದೆ. ಏಕೆಂದರೆ ಜ್ವರ ಎಂದರೆ ಕರೋನಾ ಎಂದು ತಪ್ಪಾಗಿ ಭಾವಿಸುವ ಪರಿಪಾಟ ಹೆಚ್ಚುತ್ತಿದೆ. ಜ್ವರ ಅನೇಕ ರೋಗಗಳಲ್ಲಿ ಪ್ರಕಟ ಗೊಳ್ಳುವ ಒಂದು ಲಕ್ಷಣ. ಜ್ವರದಿಂದ ಬಳಲುವವರು ಆಸ್ಪತ್ರೆಗೆ ಬಂದರೆ, ಅವರನ್ನು ಒಳರೋಗಿಯಾಗಿ ಸೇರಿಸಿಕೊಳ್ಳುವುದು ಒತ್ತಟ್ಟಿಗಿರಲಿ, ಅವರ ತಪಾಸಣೆ ಮಾಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.
ಇಂಥ ರೋಗಿಗಳು ಮೊದಲು ಕರೋನಾ ಸೋಂಕು ತಪಾಸಣಾ ಆಸ್ಪತ್ರೆಗಳಿಗೆ ಹೋಗಿ, ‘ಸ್ವಾಬ್ ಟೆಸ್ಟ್’ ಮಾಡಿಸಿಕೊಂಡು,
ಅದು ಕರೋನಾ ಸೋಂಕಿನ ಜ್ವರ ಅಲ್ಲ ಎಂಬುದನ್ನು ಸಾಬೀತು ನಡೆಸಿಕೊಂಡು ಬರುವ ಕಾಲಘಟ್ಟದಲ್ಲಿ ನಾವಿಂದು
ನಿಂತಿದ್ದೇವೆ. ಅನಾರೋಗ್ಯಕ್ಕೆ ಒಳಗಾದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆಗಳು ಅಷ್ಟಿಷ್ಟಲ್ಲ. ಸಣ್ಣ ಪುಟ್ಟ
ಕಾಯಿಲೆಗಳಿಗೆ ಚಿಕಿತ್ಸೆ ಸಿಗದೇ ಜನರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವತ್ತ ಸರಕಾರ ತಕ್ಷಣ ಗಮನಹರಿಸಬೇಕು. ಅಗತ್ಯ ಬಿದ್ದರೆ, ಈಗಿರುವ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಬೇಕು. ಕೋವಿಡ್ ಬಾಧಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯ ಸಿಬ್ಬಂದಿಯನ್ನು ‘ಕೋವಿಡ್ ಹೋರಾಟಗಾರರು ’(Covid wariers ) ಎಂದು ಗೌರವಿಸಿ ಇಡೀ ದೇಶ ಕೊಂಡಾಡುತ್ತಿದೆ. ವೈದ್ಯ
ಸಮುದಾಯದ ಬಗ್ಗೆ ಈಗ ಎಡೆ ಕೈತಜ್ಞತಾ ಭಾವವೂ ಇದೆ.
ವೈದ್ಯೊ ನಾರಾಯಣೋ ಹರಿ: ಎಂಬ ಅಭಿಪ್ರಾಯ ಜನರಲ್ಲಿ ಗಟ್ಟಿಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯರು ಇತರ
ರೋಗಗಳತ್ತ ಗಮನ ಹರಿಸುವುದನ್ನು ಮರೆಯಬಾರದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕರೋನಾ ಪೂರ್ವದ ಎಷ್ಟೋ ವಿಷಯಗಳು ಈಗ ನಿರ್ಲಕ್ಷಿತವಾಗಿವೆ. ಇಂಥ ಅನಾರೋಗ್ಯಕರ ಬದಲಾವಣೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಗಮನಿಸಿದೆ. ಇಂದು ಜಗತ್ತಿನಾದ್ಯಂತ ವೈದ್ಯರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಆದ್ಯತೆ ಗಮನಾರ್ಹವಾಗಿ ಬದಲಾಗಿದೆ. ಈ ಕರೋನಾ ದೆಸೆಯಿಂದ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ನ ವರದಿಯು 2021ರ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳ ಅಂಕಿಅಂಶಗಳನ್ನು ಬಿಡುಗಡೆ
ಮಾಡಿದೆ. ಈ ಅಂಕಿಸಂಖ್ಯೆಗಳನ್ನು ಒಂದು ವರ್ಷದ ಹಿಂದಿನ ಸ್ಥಿತಿಗೆ, ಅಂದರೆ 2020೦ರ ಜನವರಿ, ಫೆಬ್ರವರಿ, ಮಾರ್ಚ್
ತಿಂಗಳಿಗೆ ಹೋಲಿಸಿದರೆ, ಈ ಬಾರಿ ಅದಕ್ಕಿಂತ ಒಂದು ಲಕ್ಷ ಕಡಿಮೆ ಕ್ಯಾನ್ಸರ್ ರೋಗಿಗಳು ದಾಖಲಾಗಿದ್ದಾರಂತೆ, ಕ್ಷಯ ರೋಗಿಗಳ ವಿಷಯದಲ್ಲೂ ಹೀಗೆ ಆಗಿದ್ದು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಕ್ಷಯ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.
ಭಾರತದಲ್ಲಿ ವ್ಯಕ್ತಿಯೊಬ್ಬನಲ್ಲಿ ಕ್ಷಯ ರೋಗ ಪತ್ತೆಯಾದರೆ, ಆ ವ್ಯಕ್ತಿಯ ಹೆಸರನ್ನು National Tuberculosis
Elimination ಕಾರ್ಯಕ್ರಮದಡಿ ದಾಖಲಿಸಿಕೊಳ್ಳಲಾಗುತ್ತದೆ. ಈ ರೋಗಿಗಳಿಗೆ ಸರಿಯಾಗಿ ಔಷಧ ಪೂರೈಕೆಯಾಗುವುದನ್ನು
ಖಾತ್ರಿ ಪಡಿಸುವ ಜವಾಬ್ದಾರಿಯನ್ನು ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ವಹಿಸಲಾಗುತ್ತದೆ. ಇದಷ್ಟೇ ಅಲ್ಲದೇ
ರೋಗಿಯ ಓಡಾಟ, ಆತನ ಸಂಪರ್ಕಕ್ಕೆ ಬಂದವರ ವಿವರಗಳನ್ನು ದಾಖಲಿಸುವುದು ಕೂಡ ಆರೋಗ್ಯ ಕಾರ್ಯಕರ್ತರ ಜವಾಬ್ದಾರಿಯಾಗಿರುತ್ತದೆ. ಆದರೆ, ಭಾರತದಲ್ಲೀಗ ಬಹುತೇಕ ಆರೋಗ್ಯ ಕಾರ್ಯಕರ್ತರು, ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ತೊಡಗಿರುವುದರಿಂದಾಗಿ ಟಿ.ಬಿ.ರೋಗಿಗಳಿಗೆ ವಿಪರೀತ ತೊಂದರೆಯಾಗುತ್ತಿದೆ.
ಲಾಕ್ ಡೌನ್ ಸಮಯದಲ್ಲಂತೂ ಸಕಾಲಕ್ಕೆ ಔಷಧ ಸಿಗದೇ ಪರದಾಡಿದ್ದಾರೆ. ಈಗ ಕ್ಷಯ ರೋಗಿಗಳ ಮೇಲೆ ನಿಗಾ ಇಡುವ ವ್ಯವಸ್ಥೆಯೇ ದುರ್ಬಲವಾಗಿರುವುದರಿಂದಾಗಿ, ಕ್ಷಯದಿಂದ ಸಾಯುತ್ತಿರುವವರ ಸಂಖ್ಯೆಯೂ ನಿಖರವಾಗಿ ತಿಳಿಯುತ್ತಿಲ್ಲ.
ಮಾರ್ಚ್ 2021 ತಿಂಗಳಲ್ಲಿ ಮರಣ ಪ್ರಮಾಣ ಎಷ್ಟಿದೆ ಎಂದರೆ ಕೋವಿಡ್ 4098, ಹೃದ್ರೋಗ 24476, ಮಧುಮೇಹ 4191, ಕ್ಷಯ 3129, ನ್ಯೂಮೋನಿಯಾ 1678, ಅಸ್ತಮಾ 809, ಮಲೇರಿಯಾ 445. ಈ ಮಾಹಿತಿ ಕೋವಿಡ್ ಬಿಟ್ಟು ಉಳಿದ ರೋಗಿಗಳ ಮರಣ ಪ್ರಮಾಣದ ಸರಾಸರಿ 2015-2020 ರ ವರೆಗಿನ ಅಂಕಿಸಂಖ್ಯೆಗಳನ್ನು ಆಧರಿಸಿದೆ.
ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಕರೋನಾ ಪೀಡಿತ ಬೃಹತ್ ಹರವಿನಿಂದಾಗಿ ಅಪರಿಮಿತ ಒತ್ತಡ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿಯೇ ಅನ್ಯ ರೋಗಿಗಳಿಗೆ ಪ್ರವೇಶ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಕಾರಣಕ್ಕಾಗಿಯೇ “Noncovid-19’’ ರೋಗಿಗಳನ್ನು ಕಡೆಗಣಿಸಬೇಡಿ ಎಂಬ ಕೂಗು ಹೆಚ್ಚಾಗುತ್ತಿದೆ. ಮಹಾನಗರ ಗಳಲ್ಲಂತೂ ಕರೋನಾ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಜಾಗ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಲಾರಂಭಿಸಿದೆ. ಹೀಗಿರುವಾಗ ಅನ್ಯ ರೋಗಿಗಳನ್ನು ಕೇಳುವವರೇ ಇಲ್ಲವಾಗಿದೆ.
ಹೃದ್ರೋಗ, ಕ್ಷಯ ಹಾಗೂ ಕ್ಯಾನ್ಸರ್ ರೋಗಿಗಳ ಪಡಿಪಾಟಲನ್ನು ನೋಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕರೋನಾ
‘ಪೀಕ್’ ತಲುಪಲಿದೆ ಎಂದು ತಜ್ಞರು ಹೇಳುತ್ತಿzರೆ. ಈ ಸಂದರ್ಭದಲ್ಲಿ ಆರೋಗ್ಯ ಸೇವೆಗಳ ಸ್ಥಿತಿ ಎಷ್ಟು ಹದಗೆಡಲಿದೆಯೋ ಎಂದು ಆತಂಕವಾಗುತ್ತದೆ ಎನ್ನುವ ಮುಂಬೈನ ಖ್ಯಾತ ಪತ್ರಕರ್ತರ ಮಾತು ಅರ್ಥಪೂರ್ಣವಾಗಿದೆ. ಹೊಟ್ಟೆ ಮತ್ತು ಕರುಳಿನ ಕಾಯಿಲೆ, ಮಲೇರಿಯಾ, ಎಚ್.ಐ.ವಿ.,ಟಿಬಿ, ಚಿಕನ್ ಗುನ್ಯಾ, ಡೆಂಗ್ಯೂ ಇವೆಲ್ಲವೂ ಸೇರಿ ಜಗತ್ತಿನಲ್ಲಿ ಕಳೆದ ವರ್ಷ 250 ಮಿಲಿಯನ್ಗೂ ಹೆಚ್ಚು ಜನರಿಗೆ ಮುತ್ತಿಗೆ ಹಾಕಿ, 2.5 ಮಿಲಿಯನ್ಗೂ ಹೆಚ್ಚು ಜನರ ಪ್ರಾಣ ಪಕ್ಷಿಗಳನ್ನು ಹೆಕ್ಕಿವೆ.