Sunday, 13th October 2024

ಕರೋನಾ ಕಾಲದ ಸೃಜನಶೀಲತೆ ಮತ್ತು ದೇಸಿ ಜ್ಞಾನ

#corona

ಪ್ರಚಲಿತ

ಡಾ.ಪ್ರಕಾಶ ಗ.ಖಾಡೆ

ಒಂದು ವಿಚಿತ್ರ ಮನಸ್ಥಿತಿ ಸಂದರ್ಭ ಈಗ ಒದಗಿದೆ. ಇಂಥ ಕಾಲವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಇದ್ದು ಏನೂ ಇಲ್ಲದ ಮನಸ್ಸಿನ ತಾಕಲಾಟ. ಬದುಕು ನಿತ್ಯದ ಅವಘಡಗಳಲ್ಲಿ ಹೊಸತನದ ಹುಡುಕಾಟಕ್ಕೆ ಸಜ್ಜುಗೊಳ್ಳುವ ಕಾಲ.

ಇಂದು ಆತಂಕದ ನಡುವೆ ಬದುಕಿನ ರೀತಿಯನ್ನು ಬದಲಿಸಿಕೊಂಡು ಮುಖಾಮುಖಿಯಾಗುವ ಕಾಲ. ಮಕ್ಕಳು ಶಾಲೆಗಳಿಲ್ಲದೇ ಮನೆಯಲ್ಲಿದ್ದಾರೆ. ತಮ್ಮ ಶಿಕ್ಷಕರನ್ನು ಮರೆತವರಂತೆ ಆಂಟಿ, ಅಂಕಲ್ ಎಂದು ಕರೆಯುತ್ತಿದ್ದಾರೆ. ವಿದ್ಯಾಗಮದ ಮೂಲಕ ಕಲಿಕೆಯ ನಿರಂತರತೆ ಕಾಯ್ದುಕೊಳ್ಳುವ ಕೆಲಸವೂ ನಡೆಯಿತು.

ಪಾಠ ಪ್ರವಚನ, ಆಟೋಟ, ಸಾಂಸ್ಕೃತಿಕ ಸಂದರ್ಭಗಳು ಮಕ್ಕಳಿಂದ ದೂರಾಗುತ್ತಿವೆ. ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಮರು ಕಟ್ಟಲು ನಾವು ನಮ್ಮ ಮಕ್ಕಳನ್ನು ಸಜ್ಜುಗೊಳಿಸಲು ಬೇಕಾದ ನಮ್ಮ ಪ್ರಯತ್ನಗಳು ಜಾರಿಯಲ್ಲಿವೆ. ಏನಾಗುತ್ತಿದೆ ಎಂಬ ಆತಂಕದಲ್ಲಿಯೇ ಬದುಕುಕಟ್ಟಿಕೊಂಡು ಮುನ್ನಡೆಯಬೇಕಾಗಿದೆ. ಅಲ್ಲಲ್ಲಿ ಮನಸ್ಸುಗಳು ಒಡೆದು ಹತ್ತಿರವಿದ್ದೂ ದೂರಾಗುವ ಕಾಲ ಬಂದಿದೆ.

ಜಗಳ, ಬಡಿದಾಟಗಳೂ ನಮಗೆ ಕಾಣದಂತೆ ಓಣಿಗಳಲ್ಲಿ ಮನೆಗಳಲ್ಲಿ ನಡೆದಿವೆ. ಮಹಿಳೆ, ಮಕ್ಕಳು, ಯುವಕರು ಖಿನ್ನತೆಗೆ ಒಳಗಾಗಿದ್ದಾರೆ. ಇದೆಲ್ಲಕ್ಕೂ ಮದ್ದು ನಮ್ಮ ಸೃಜನಶೀಲತೆ. ಅದಕ್ಕಾಗಿಯೇ ಹೇಳುವುದು ಸೃಜನಶೀಲತೆಯ ಕೆಲಸಗಳು ಮಾತ್ರ ನಮ್ಮನ್ನು ಹೆಚ್ಚು ಕ್ರಿಯಾಶೀಲವಾಗಿಡುತ್ತವೆ. ಹಾಗಾಗಿ ಟಿ.ವಿ ನೋಡುವುದರಿಂದ, ಕಥೆ, ಕಾದಂಬರಿ ಓದುವುದರಿಂದ ನಮ್ಮ ಒಂಟಿತನವನ್ನು ಮೀರಲಾಗದು. ಒಂದಿಷ್ಟು ಸೃಜನಶೀಲತೆ ಬೇಕು, ಸೃಜನಶೀಲತೆಯೂ ನಮ್ಮಲ್ಲಿ ಹೊಸತನಕ್ಕೆ ಸಾಕ್ಷಿಯಾಗುತ್ತದೆ. ಹೊಸದನ್ನು ಹುಟ್ಟು ಹಾಕುವ ಯಾವ ಕೆಲಸವೂ ನಮ್ಮ ಮನಸ್ಸಿನ ತೃಪ್ತಿಗೆ ಕಾರಣವಾಗುತ್ತದೆ.

ಹಾಗಾಗಿ ನಾವು ಸೃಜನಶೀಲತೆ ಮತ್ತು ಸೃಷ್ಟಿ ಶೀಲತೆಯನ್ನು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸೃಜನಶೀಲತೆ ಯೊಂದಿಗೆ ಬದುಕಿನ ಮೌಲ್ಯಗಳನ್ನೂ ಕಲಿಸಿಕೊಡಬೇಕಾಗಿದೆ. ಸತ್ಯ, ಶಾಂತಿ, ಸಂಯಮ, ಪ್ರಾಣಿ ಪ್ರೀತಿ, ಪರಿಸರ ಪ್ರೇಮ, ಬಂಧುತ್ವ, ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ತುಂಬುವ ಮೂಲಕವೂ ಕರೋನಾ ಕಾಲವನ್ನು ಗೆಲ್ಲಬೇಕಾಗಿದೆ. ದೈಹಿಕ, ಮಾನಸಿಕ,
ಬೌದ್ಧಿಕ ಮತ್ತು ಸರ್ವಾಂಗೀಣ ಜ್ಞಾನಕ್ಷೇತ್ರವನ್ನು ಕಾಪಿಟ್ಟುಕೊಂಡು ಬಂದು ವಿಸ್ತರಿಸಬೇಕಾಗಿದೆ.

ಸೃಜನಶೀಲತೆಯು ನಮ್ಮ ಮನಸ್ಸು ಮತ್ತು ಭಾವನೆಗಳ ಮೊತ್ತ. ನಮ್ಮ ಮನಸ್ಸಿನಲ್ಲಿ ಮೂಡಿದ ಯೋಚನೆಗಳಿಗೆ ಬರವಣಿಗೆ ಮೂಲಕ ಒಂದು ರೂಪಕೊಡುವುದರಿಂದ ಒಟ್ಟಿಗೆ ಎರಡು ಕೆಲಸಗಳು ಸಾರ್ಥಕ ಪಡೆದುಕೊಳ್ಳುತ್ತವೆ. ನಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಕಥೆ, ಕವಿತೆ, ಹನಿಗವಿತೆಗಳ ಮೂಲಕ ಲಿಪಿಗೆ ಇಳಿಸುತ್ತಾ ಬರುವುದು. ಹೀಗೆ ಏಕಾಂತದಲ್ಲಿ ಹೊಳೆದ ಬೆಳಕಿನ ಕಿರಣಗಳು ನಮ್ಮ ಓದಿಗೆ ಅಷ್ಟೇಯಲ್ಲ, ಹಲವರ ಓದಿಗೂ ಹೊಸತನವನ್ನೂ ಕಟ್ಟಿಕೊಟ್ಟಂತಾಗುತ್ತದೆ.

ಇನ್ನು ಖಾಲಿ ಬಿಳಿಯ ಹಾಳೆಗಳ ಮೇಲೆ ತೋಚಿದ ಚಿತ್ರ ಬಿಡಿಸುತ್ತಾ ಚಿತ್ರಕಲೆಯ ಮೂಲಕವು ನಮ್ಮ ಸೃಜನಶೀಲತೆಯನ್ನು ಪ್ರಕಟಪಡಿಸಬಹುದು. ನಮ್ಮ ಹಳ್ಳಿಯ ತಾಯಂದಿರು ಯಾವಾಗಲೂ ಸುಮ್ಮನೆ ಕೂತವರಲ್ಲ, ಏನಾದರೊಂದು ಕಾಯಕ ಮಾಡುತ್ತಲೆ ಇರುತ್ತಾರೆ. ಕೌದಿ ಹೊಲಿಯುವುದು, ಕಸೂತಿ ಬಿಡಿಸುವುದು, ಬಗೆ ಬಗೆಯ ಹೂ ಕುಂಡಲಗಳನ್ನು ತಯಾರಿಸುವುದು
ಮಾಡುತ್ತಾರೆ. ಮದುವೆ, ಮುಂಜಿ ಬಂದರಂತೂ ಮುಗಿಯಿತು. ನಮ್ಮ ತಾಯಂದಿರ ಕೈ ಕೆಲಸಗಳಿಗೆ ಬಿಡುವೇ ಇರುವುದಿಲ್ಲ, ಎಲ್ಲವೂ ಮಾರ್ಕೆಟ್ಟಿನಲ್ಲಿ ಸಿಗುತ್ತವೆ, ತಂದರಾಯಿತು ಎಂದು ಹೇಳಿದರೂ ಕೇಳುವುವದಿಲ್ಲ. ಕಚ್ಚಾ ಸಾಮಗ್ರಿಗಳನ್ನು ತಂದು ತಾವೇ ಸಿದ್ದಪಡಿಸುತ್ತಾರೆ. ಈ ಮೂಲಕ ಒಂದು ಆರೋಗ್ಯಪೂರ್ಣ ಬದುಕಿಗೆ ಇವೆಲ್ಲ ಕಾರಣ ವಾಗುತ್ತವೆ.

ದೇಸಿ ಜ್ಞಾನ: ಮನೆಯಲ್ಲಿಯೇ ಉಳಿದುಕೊಂಡಿರುವ ನಮ್ಮ ಮಕ್ಕಳಿಗೆ ಸೃಜನಶೀಲತೆಯ ಅವಕಾಶಗಳನ್ನು ಸೃಜಿಸಬೇಕಾಗಿದೆ. ಕಲಿಕೆ ಕೇವಲ ನಾಲ್ಕು ಗೋಡೆಗಳ ಒಳಗಿನ ಶಾಲಾ ಪರಿಸರದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಪ್ರತಿ ಮನೆಯೂ ಇಂದು ಕಲಿಕಾ ಕೋಣೆಗಳಾಗಬೇಕಿದೆ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಇಂದು ಹೆಚ್ಚು ಪ್ರಸ್ತುತವಾಗಿದೆ.