ಅಭಿವ್ಯಕ್ತಿ
ಡಾ.ದಯಾನಂದ ಲಿಂಗೇಗೌಡ
ನಾವು ಎಂಬಿಬಿಎಸ್‌ನಲ್ಲಿ ಓದುತ್ತಿದ್ದಾಗ ‘ಕ್ವಾರಂಟೈನ್’ ಎಂಬ ವಿಷಯದ ಬಗ್ಗೆ ಪಠ್ಯಪುಸ್ತಕದಲ್ಲಿ ವಿವರಣೆ ಇತ್ತು. ಆ ವಿಷಯವನ್ನು ಓದುವ ಸಮಯದಲ್ಲಿ ನಮಗೆ ‘ಕ್ವಾರಂಟೈನ್’ ಪುಸ್ತಕಕಕ್ಕೆ ಸೀಮಿತವಾದ ವಿಷಯವಷ್ಟೇ, ಕಾರ್ಯರೂಪದ ವಿಷಯವಲ್ಲ ಎಂಬ ಭಾವನೆ ಉಂಟಾಗಿತ್ತು. ಒಬ್ಬ ವ್ಯಕ್ತಿಯನ್ನು ವಾರಗಟ್ಟಲೆ ಎಲ್ಲಿಗೂ ಹೋಗದಂತೆ ನಿರ್ಬಂಧಿಸುವುದು ಕಷ್ಟವಾಗಿರುವಾಗ, ಇಡೀ ಊರು, ಇಡೀ ಜಿಲ್ಲೆ, ಇಡೀ
ರಾಜ್ಯ ಅಷ್ಟೇ ಅಲ್ಲ, ಇಡೀ ದೇಶ – ಇಡೀ ಪ್ರಪಂಚವನ್ನೇ ‘ಕ್ವಾರಂಟೈನ್’ನಲ್ಲಿ ಇರಿಸುವುದಕ್ಕೆ ಸಾಧ್ಯವಿಲ್ಲದ ವಿಷಯವಾಗಿತ್ತು. ಬೈರಪ್ಪನವರ ಕಾದಂಬರಿಗಳಲ್ಲಿ ಬರುವ ಪ್ಲೇಗ್ ಸಮಯದ ವಿವರಣೆಯನ್ನು ಓದುತ್ತಿರುವಾಗ ‘ಹೀಗೂ ಉಂಟೆ’ ಎಂದು ಆಶ್ಚರ್ಯ ಪಡುತ್ತಿದ್ದೆವು .
ಆದರೆ ಇಂತಹ ಅನುಭವಗಳನ್ನು ಕರೋನಾ ಸಮಯದಲ್ಲಿ ನಮಗೆ ನೋಡಲು ಸಿಕ್ಕಿದ್ದು ಒಂದು ಜೀವಮಾನ ದ ವಿಶೇಷ ಘಟನೆ ಎಂದು ಹೇಳಲು ಅಡ್ಡಿಯಿಲ್ಲ. ಯಾವುದೇ ಚಿಕ್ಕ ಭೂಪ್ರದೇಶಕ್ಕೆ ಸೀಮಿತವಾದ,
ಮರಣಾಂತಿಕ ವೈರಾಣು ಕಾಣಿಸಿಕೊಂಡರೆ ಮತ್ತು ಆ ರೋಗಿಗಳ ಬೆರಳೆಣಿಕೆಯಲ್ಲಿ ಇದ್ದರೆ , ‘ಕ್ವಾರಂಟೈನ್’ ಎಂಬುದು ಪ್ರಯೋಜನಕಾರಿ ಸಾಧನ. ಕೆಲವು ತಿಂಗಳುಗಳ ಹಿಂದೆ ಕರೋನಾ ರೋಗಿಗಳ ಸಂಖ್ಯೆ ಬೆರಳೆಣಿಕೆ ಯಲ್ಲಿದ್ದವು. ಅವು ವಿದೇಶದಿಂದ ಮರಳಿದವರ ಮೂಲಕ ಬಂದಿದ್ದರಿಂದ, ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿರುವ ಸಾಧ್ಯತೆ ಇತ್ತು. ಆ ಕಾಲಘಟ್ಟದಲ್ಲಿ ಲಾಕ್ ಡೌನ್ ಎಂಬುದು ಸರಿಯಾದ ನಿರ್ಧಾರ ವಾಗಿತ್ತು. ಅಂದಿಗೆ ಲಾಕ್ ಡೌನ್ ರೋಗವನ್ನು ದೇಶದಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಸಾಧ್ಯತೆಗಳು ಇತ್ತು. ಲಾಕ್ ಡೌನ್ ನಿಂದ ರೋಗವನ್ನು ಎದುರಿಸಲು ತಯಾರಿ ಮಾಡಿಕೊಳ್ಳಲು ಸರಕಾರ ಮತ್ತು ವೈದ್ಯರು ಗಳಿಗೆ ಸಮಯಾವಕಾಶ ಸಿಕ್ಕಿದ್ದು ಸುಳ್ಳಲ್ಲ.
ಆಡಳಿತ ವರ್ಗದವರಿಗೆ ಕರೋನಾ ರೋಗ ಹೆಚ್ಚಾಾಗುವ ಮೊದಲೇ ಬೇಕಾದ ಹಾಸಿಗೆಗಳ, ಉಪಕರಣ ಸಿದ್ಧತೆ ಗಳಿಗೆ ಅವಕಾಶ ಸಿಕ್ಕಿತ್ತು. ವೈದ್ಯರುಗಳಿಗೆ ಕರೋನಾ ರೋಗದ ಬಗ್ಗೆೆ ತಿಳಿದುಕೊಳ್ಳುವುದಕ್ಕೆ, ಅದರ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಮತ್ತು ರೋಗಿಗಳನ್ನು ಹೇಗೆ ನಿಭಾಯಿಸಬೇಕು, ರೋಗದ ಗುಣಲಕ್ಷಣಗಳೇನು, ಕರೋನಾ ರೋಗವನ್ನು ಇತರ ರೋಗಗಳಿಂದ ಬೇರ್ಪಡಿಸುವುದು ಹೇಗೆ, ಯಾವ ಪರೀಕ್ಷೆ ಮಾಡಬೇಕು, ನೆಗೆಟಿವ್ ಪರೀಕ್ಷೆ ಮತ್ತು ಪಾಸಿಟಿವ್ ಪರೀಕ್ಷೆಗಳ ನಿಜವಾದ ಅರ್ಥಗಳು ಏನು, ಒಮ್ಮೆ ವ್ಯಕ್ತಿ ಪಾಸಿಟಿವ್ ಬಂದ ನಂತರ ನೆಗೆಟಿವ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆೆ ಮಾಹಿತಿ ಕಲೆ ಹಾಕಲು ಲಾಕ್‌ಡೌನ್ ಸಮಯ ನೀಡಿತ್ತು. ಬಹುತೇಕ ವೈದ್ಯರುಗಳಿಗೆ ಪಿಪಿಇ ಕಿಟ್ ಧರಿಸುವುದು ಹೇಗೆ ಎಂಬ ಅನುಭವ ಇರಲಿಲ್ಲ. ಇಂದು ಪಿಪಿಇ ಧರಿಸುವುದು ಮತ್ತು ಸುರಕ್ಷಿತವಾಗಿ ತೆಗೆಯುವುದು ಹೇಗೆ ಎಂಬ ಅನುಭವ ಬಹುತೇಕ ವೈದ್ಯರಿಗೆ ಇದೆ.
ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಂದು ಕರೋನಾ ವೈರಸ್ ಎಲ್ಲರ ಕಲ್ಪನೆಗಳನ್ನು ಮೀರಿ ಹರಡಿ ಕೊಂಡಿದ್ದು, ಇಂದು ಈ ರೋಗವನ್ನು ಸಂಪೂರ್ಣ ದೇಶದಿಂದ ನಿರ್ಮೂಲನೆ ಮಾಡುವ ಸಾಧ್ಯತೆಗಳು ಅತ್ಯಂತ ಕಡಿಮೆ. ಕರೋನಾ ಇನ್ನೂ ಹಲವಾರು ದಶಕಗಳ ಮಟ್ಟಿಗೆ ನಮ್ಮೊಂದಿಗೆ ಇರುವ ಸಾಧ್ಯತೆ ಹೆಚ್ಚು. ಕರೋನಾ ರೋಗಿಗಳು ಇಡೀ ದೇಶವ್ಯಾಪಿ ಹರಡಿರುವ ಸಮಯದಲ್ಲಿ ಮತ್ತು ಕರೋನಾ ರೋಗಿಗಳ ಸಂಖ್ಯೆ ಕೋಟಿಗಳ ಸಂಖ್ಯೆೆಯಲ್ಲಿರುವುದರಿಂದ, ‘ಕ್ವಾರಂಟೈನ್’ ಎಂಬ ಪದ ಅರ್ಥ ಕಳೆದುಕೊಳ್ಳುತ್ತಿದೆ. ಈ
ಕಾಲಘಟ್ಟದಲ್ಲಿ ಇದನ್ನು ಇತರ ರೋಗಗಳಂತೆ ನಡೆಸಿಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ.
ಬಹುತೇಕ ರಾಜ್ಯಗಳಲ್ಲಿ ಕರೋನಾ ಪೀಡಿತರ ಸಂಖ್ಯೆ ಲಕ್ಷ – ಲಕ್ಷಗಳಲ್ಲಿ ಇರುವಾಗ, ನಾವು ಇನ್ನೂ ಕರೋನಾ ವಿರುದ್ಧ ರೂಪುರೇಷೆಗಳನ್ನು ಬದಲಿಸದೆ ಇರುವುದು ದುರಂತ. ಸರಕಾರಗಳು ಇನ್ನೂ ಹಳೆಯ ಹಾದಿಯಲ್ಲಿ ಸಾಗುತ್ತಿದೆ. ಕೆಲವು ರಾಜ್ಯಗಳು ಇನ್ನೂ ಲಾಕ್‌ಡೌನ್ ಎಂಬ ಗುಂಗಿನಿಂದ ಹೊರ ಬಂದಂತಿಲ್ಲ. ಪಕ್ಷಿಮ ಬಂಗಾಳದಲ್ಲಿ ವಾರಕ್ಕೆ ಒಂದೆರಡು ಬಾರಿ ಲಾಕ್ ಡೌನ್ ವಿಧಿಸಲಾಗುತ್ತಿದೆ. ಕೇರಳದ ಕಾಸರಗೋಡಿನ
ಭೂಪ್ರದೇಶದಲ್ಲಿ ಓಡಾಟಕ್ಕೆ ನಿರ್ಬಂಧಗಳು ಅತಿಯಾಗಿದೆ. ಈ ಕಾಲಘಟ್ಟದಲ್ಲಿ ಇಂತಹ ನಿರ್ಬಂಧಗಳು ಕರೋನಾ ಸಂಖ್ಯೆೆಗಳನ್ನು ಕಡಿಮೆ ಮಾಡುವುದಕ್ಕೆೆ ಸಾಧ್ಯವಿರುವುದಿಲ್ಲ.
ಅಷ್ಟೇ ಅಲ್ಲದೆ ಇದು ಹೆಚ್ಚಿನ ಆರ್ಥಿಕ ಸಂಕಟಕ್ಕೆ ದಾರಿ ಮಾಡಿಕೊಡುತ್ತದೆ. ಇನ್ನೂ ಕರೋನಾ ಪರೀಕ್ಷೆಗಳು ಕೂಡ ಇಂದಿನ ಕಾಲಘಟ್ಟದಲ್ಲಿ ಎಷ್ಟು ಪ್ರಸ್ತುತ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಹೆಚ್ಚು ಹೆಚ್ಚು ಕರೋನಾ ಪರೀಕ್ಷೆಗಳನ್ನು ಮಾಡಿದರೆ ಸರಕಾರಕ್ಕೆ ಕರೋನಾ ಸೋಂಕಿತರ ಪಟ್ಟಿ ಸಿಗುತ್ತದೆ. ಆದರೆ ಇಂದಿನ ಆರೋಗ್ಯ ವ್ಯವಸ್ಥೆೆ ಅಗಾಧ ಒತ್ತಡಗಳಿಂದ ನಲಗುತ್ತಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲದೆ ಕರೋನಾ
ಟೆಸ್‌ಟ್ ಮಾಡಿಸಿಕೊಂಡವರು, ಪರೀಕ್ಷೆ ಪಾಸಿಟಿವ್ ಆಗಿ ಬಂದರೆ ಅವರ ಬದುಕನ್ನು ಅಸನೀಯಗೊಳಿಸ ಲಾಗುತ್ತಿದೆ . ರೋಗಿಯ ಬಗ್ಗೆ ಯಾವುದೇ ನೇರ ಮಾಹಿತಿ ಇಲ್ಲದ ಸರಕಾರಿ ಅಧಿಕಾರಿಗಳು, ಪಾಸಿಟಿವ್ ಬಂದ ವ್ಯಕ್ತಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಾಗಲು ಆದೇಶ ನೀಡುತ್ತಿದ್ದಾರೆ. ನಮ್ಮ ಆರೋಗ್ಯ ವ್ಯವಸ್ಥೆಯ ಬಳಿ ಮಾನವ ಸಂಪನ್ಮೂಲ ಮತ್ತು ಆರ್ಥಿಕ ಸಂಪನ್ಮೂಲಗಳು ಸೀಮಿತವಾಗಿವೆ. ಈ ಸಂಪನ್ಮೂಲಗಳನ್ನು
ನಾವು ಸದುಪಯೋಗಪಡಿಸಿಕೊಳ್ಳಬೇಕು. ಇಂತಹ ಸೀಮಿತ ಸಂಪನ್ಮೂಲಗಳನ್ನು ಗಂಭೀರ ರೋಗಿಗಳ ಚಿಕಿತ್ಸೆಗೆ ಉಪಯೋಗಿಸಬೇಕು. ಅದನ್ನ ಬಿಟ್ಟು ಯಾವುದೇ ರೋಗ ಗುಣ ಲಕ್ಷಣಗಳಿಲ್ಲದ ವ್ಯಕ್ತಿಗಳ ಮೇಲೆ ನಮ್ಮ ಸಂಪನ್ಮೂಲಗಳನ್ನು ಪ್ರಯೋಗಿಸಿದರೆ ಸಾಗರದಷ್ಟು ಹಣವಿದ್ದರೂ ಸಾಲದು.
ಇದಕ್ಕೆ ಒಂದು ಸಣ್ಣ ಉದಾಹರಣೆ ತೆಗೆದುಕೊಳ್ಳೋಣ. ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕರೋನಾ ಆರೈಕೆ ಕೇಂದ್ರವನ್ನು ಕೋಟಿಗಟ್ಟಲೆ ಹಣ ಸುರಿದು ತೆರೆಯಲಾಗಿತ್ತು. ಹತ್ತು ಸಾವಿರ ಹಾಸಿಗೆಗಳ ಆರೈಕೆ ಕೇಂದ್ರದಲ್ಲಿ ಕರೋನಾ ಗುಣಲಕ್ಷಣಗಳು ಇಲ್ಲದಿರುವ ವ್ಯಕ್ತಿಗಳನ್ನು ಕೂಡಿ ಹಾಕಬಹುದೇ ಹೊರತು, ಯಾವುದೇ ರೀತಿಯ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಎಲ್ಲಾ ಕರೋನಾ ಸೋಂಕಿತರನ್ನು ಕೂಡಿ ಹಾಕಲು ಸರಕಾರ ನಿರ್ಧರಿಸಿದರೆ ಇಡೀ ರಾಷ್ಟ್ರವನ್ನು ಕೂಡಿ ಹಾಕಬೇಕಾಗುತ್ತದೆ ಎಂಬ ಕಾಲ ದೂರವಿಲ್ಲ. ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು, ಸರಕಾರ ಈ ಅಂತಾರಾಷ್ಟ್ರೀಯ ಕರೋನಾ ಆರೈಕೆ ಕೇಂದ್ರವನ್ನು ಮುಚ್ಚಿದೆ. ಆದರೆ ಈ ಕೇಂದ್ರಕ್ಕಾಗಿ ವ್ಯಯಿಸಿದ ಹಣ, ನೀರಿನಲ್ಲಿ ಹುಣಸೆಹಣ್ಣು ತೇದಂತೆ ಆಗಿದೆ. ಆದರೆ ತೆರಿಗೆದಾರರ ಹುಣಸೆಹಣ್ಣು, ಸರಕಾರಿ ಅಧಿಕಾರಿಗಳ ಕೈಯಿಂದ ವ್ಯರ್ಥವಾಗಿದೆ. ಹುಚ್ಚುಮುಂಡೆ ಮದುವೆಗೆ ಕಾಯುತ್ತಿದ್ದವರಿಗೆ ಮೃಷ್ಟಾನ್ನ ಭೋಜನ ಸಿಕ್ಕಿರುವುದು ಗ್ಯಾರಂಟಿ.
ಮನೆ, ಮಠ, ವಾಹನಗಳು, ಹಾದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಇಂತಹ ಅವೈಜ್ಞಾನಿಕ
ಕ್ರಮಗಳಿಂದ ಜನರಿಗೆ ಯಾವುದೇ ಲಾಭವಿಲ್ಲ. ಅಷ್ಟೇ ಅಲ್ಲ, ಪರಿಸರವೂ ವಿಷಮಯವಾಗುತ್ತಿದೆ. ಆದರೆ ಲೆಕ್ಕಕ್ಕೆ ಸಿಗದ ಇಂತಹ ಖರ್ಚು ಎಷ್ಟು ಮಾಡಿದ್ದರೋ ಏನೋ !
ಕಾರ್ಪೊರೇಟ್ ಆಸ್ಪತ್ರೆಗಳಿಗೆ ರೋಗಲಕ್ಷಣ ಇಲ್ಲದಿರುವ ರೋಗಿಗಳನ್ನು ಕಂಡರೆ ಬಹಳ ಪ್ರೀತಿ. ಏಕೆಂದರೆ ಯಾವುದೇ ಖರ್ಚಿಲ್ಲದೆ ಇವರಿಗೆ ಒಳರೋಗಿಗನ್ನಾಗಿ ಚಿಕಿತ್ಸೆೆ ನೀಡಿ, ಸರಕಾರದಿಂದ ಹಣವನ್ನು ಮರಳಿ ಪಡೆಯಬಹುದು. ಸರಕಾರದವರು ತೀವ್ರ ಗುಣಲಕ್ಷಣ ಇರುವ ರೋಗಿಗಳಿಗೂ ಕೂಡ ಇಂತಿಷ್ಟು ದರ ಎಂಬ ನಿಯಮ ವಿಧಿಸಿರುವುದರಿಂದ, ತೀವ್ರ ರೋಗಲಕ್ಷಣವಿರುವ ರೋಗಿಗಳಿಗೂ ಕೂಡ ಸರಿಯಾಗಿದ್ದ ಚಿಕಿತ್ಸೆ ಸಿಗುತ್ತಿಲ್ಲ. ಯಾರಿಗೆ ಯಾವ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಎಂಬುದನ್ನ ಆಸ್ಪತ್ರೆಯ ಆಡಳಿತ ಮಂಡಳಿಯವರು ನಿರ್ಧರಿಸುತ್ತಿದ್ದಾರೆ.
ಕಾಸಿಗೆ ತಕ್ಕ ಕಜ್ಜಾಯವೆಂಬಂತೆ 10 ಲೀಟರ್ ಆಕ್ಸಿಜನ್ ಅವಶ್ಯಕತೆ ಇರುವ ಕಡೆ 1-2 ಲೀಟರ್ ಆಕ್ಸಿಜನ್ ಕೊಟ್ಟು , ಖರ್ಚು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಅನಾವಶ್ಯಕವಾಗಿ ರೋಗಲಕ್ಷಣ ಇಲ್ಲದವರಿಗೆ ಹಣ ಖರ್ಚಾಗುತ್ತಿದೆ, ಮತ್ತೊಂದೆಡೆ ಅವಶ್ಯಕತೆ ಇರುವವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಎಲ್ಲೆಡೆ ಲಕ್ಷಾಂತರ ಕೇಸುಗಳು ಇರುವ ಸಂದರ್ಭದಲ್ಲಿ ಮತ್ತು ಸರಕಾರ ಆರ್ಥಿಕ ಸಂಕಟದಲ್ಲಿರುವ ಸಮಯದಲ್ಲಿ,
ಕರೋನಾ ಟೆಸ್ಟಿಂಗ್ ಬಗ್ಗೆೆಯೂ ಚಿಂತನೆ ನಡೆಸಬೇಕಿದೆ. ಸರಕಾರಕ್ಕೆೆ ಸಮುದಾಯದಲ್ಲಿ ಕರೋನಾ ಎಷ್ಟು ಹರಡಿದೆ ಎಂಬ ಮಾಹಿತಿ ಬೇಕಾದರೆ ದುಬಾರಿ ಪಿಸಿಆರ್ ಸ್ವಾಬ್ Test ನ ಬದಲು ಆಂಟಿಬಾಡಿ ಸ್ಯಾಂಪಲ್ ಗಳನ್ನು ಪರೀಕ್ಷಿಸಿ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಸರಕಾರ ಇನ್ನೂ ಪಿಸಿಆರ್‌ನಲ್ಲಿನಿರತ ವಾಗಿದೆ. ರೋಗಲಕ್ಷಣ ಇಲ್ಲದವರನ್ನು ಕಂಡು ಹಿಡಿಯುತ್ತಾ ಕುಳಿತರೆ ಈ ಹಂತದಲ್ಲಿ ಎಷ್ಟು ಪ್ರಯೋಜನವಾಗುತ್ತದೆ ಎಂಬುದನ್ನು ಸರಕಾರ ತಮ್ಮನ್ನ ತಾವು ಕೇಳಿಕೊಳ್ಳಬೇಕು. ಕರೋನಾ ಪರೀಕ್ಷೆ ನಡೆಸುವ ಟಾರ್ಗೆಟ್ ತಲುಪಲಾರದೆ ವೈದ್ಯರು ಆತ್ಮಹತ್ಯೆೆ ಮಾಡಿಕೊಂಡಿರುವ ಪ್ರಸಂಗ ಕಣ್ಣೆೆದುರಿಗೆ
ಇರುವಾಗ, ಸರಕಾರಕ್ಕೆ ಇನ್ನೂ ಮನ ಬದಲಾದಂತೆ ಕಾಣುತ್ತಿಲ್ಲ.
ಕರೋನಾ ಸಾಂಕ್ರಾಮಿಕದಿಂದ ನಷ್ಟ ಅನುಭವಿಸದೇ ಇರುವವರು ಯಾರೂ ಉಳಿದಿಲ್ಲ. ರಸ್ತೆಬದಿಯ ಬಿಕ್ಷುಕನಿಂದ ಹಿಡಿದು, ರತನ್ ಟಾಟಾವರೆಗೆ ಜನರು ತೊಂದರೆಗೀಡಾಗಿದ್ದಾರೆ. ಇಂತಹ ಸಮಯದಲ್ಲಿ ಸರಕಾರದ ನಿಯಮಗಳು ಜನರ ಬದುಕನ್ನು ಇನ್ನಷ್ಟು ಕಠೋರ ಗೊಳಿಸಬಾರದು. ಉದ್ದೇಶ ಒಳ್ಳೆಯದಿದ್ದರೆ ಮಾತ್ರ ಸಾಕಾಗುವುದಿಲ್ಲ. ಅದನ್ನು ಜಾರಿಗೆ ತರುವ ದಾರಿಯೂ ಸರಿಯಾಗಿರಬೇಕು. ಇದಕ್ಕೆ ಉತ್ತಮ ಉದಾ ಹರಣೆ ಇಂದಿರಾಗಾಂಧಿಯವರ ‘ಜನ ಸಂಖ್ಯಾ ನಿಯಂತ್ರಣ’ ಕಾರ್ಯಕ್ರಮ. ಬಹಳ ದೂರದೃಷ್ಟಿಯುಳ್ಳ ಜನಸಂಖ್ಯಾ ನಿಯಂತ್ರಣ ಚಿಂತನೆ, ಇಡೀ ಭಾರತ ದೇಶದ ನಸೀಬನ್ನೇ ಬದಲಾಯಿಸಲು ಶಕ್ತವಾಗಿದ್ದ
ಕಾರ್ಯಕ್ರಮ. ಆದರೆ ಕೆಟ್ಟದಾಗಿ ಜಾರಿಗೊಳಿಸಿದ್ದರಿಂದ ವಿಫಲವಾಯಿತು. ನಾಸ್ ಬಂದಿ ಎಂಬ ಕೆಟ್ಟ ಹೆಸರಿಂದ, ಕಾಂಗ್ರೆಸ್ ಸರಕಾರಕ್ಕೆೆ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿದು ಕೊಂಡಿತು.
ಅದೇ ರೀತಿ ಟಾರ್ಗೆಟ್ ಎಂಬ ಪ್ರತಿಷ್ಠೆಗೆ, ಕಿಕ್ ಬ್ಯಾಕ್ ಬೃಹತ್ ಭ್ರಷ್ಟಾಚಾರ ಎಂಬ ಮುಂತಾದ ಕಾರಣಗಳಿಂದ ದಾರಿ ತಪ್ಪುತ್ತಿದೆ ಎನಿಸುತ್ತಿದೆ. ಕರೋನಾ ನಿಯಂತ್ರಣ ಕಾರ್ಯಕ್ರಮವನ್ನು ಮರಳಿ ಹಳಿಯ ಮೇಲೆ ತರದಿದ್ದರೆ, ಸರಕಾರಕ್ಕೆ ತಿರುಗು ಬಾಣವಾಗುವುದರಲ್ಲಿ ಸಂದೇಹವಿಲ್ಲ.