Thursday, 12th December 2024

ದೈಹಿಕ ಕಸರತ್ತುಗಳ ಜತೆ ಕರೋನಾ ಜಾಗ್ರತೆಗೂ ಆದ್ಯತೆ ಅಗತ್ಯ

ಅಭಿವ್ಯಕ್ತಿ
ಅನಿತಾ ಆರ್ ಪಾಟೀಲ್

ಕರೋನಾ ವೈರಸ್ ಕಳೆದ ಆರೇಳು ತಿಂಗಳಿಂದ ದೇಶದಲ್ಲಿ ಜನರನ್ನು ಬೆಂಬಿಡದೆ ಕಾಡುತ್ತಿದೆ. ಕರೋನಾ ವೈರಸ್ ತಡೆಗಟ್ಟಲು ಲಾಕ್ ಡೌನ್, ಸೀಲ್ ಡೌನ್, ಮಾಸ್ಕ್ ‌- ಕೈ ಶುಚಿ ಜಾಗೃತಿ ನಡೆದರೂ ದೇಶದಲ್ಲಿ ಕರೋನಾ ವೈರಸ್ ಮಾತ್ರ ಹತೋಟಿಗೆ ಬರುತ್ತಿಲ್ಲ. ಕರೋನಾ ವೈರಸ್ ಯಾವಾಗ ಹತೋಟಿಗೆ ಬರುತ್ತದೆ ಎನ್ನುವುದು ಎಲ್ಲರ ಪ್ರಶ್ನೆ. ಆದರೆ ಕರೋನಾದ ವಿರುದ್ಧ ಎಷ್ಟೇ
ಜಾಗೃತರಾದರೂ ಸಾಮಾನ್ಯವಾಗಿ ಕಂಡುಬರುವ ಕೆಮ್ಮು ಶೀತ ಜ್ವರದಂಥ ಲಕ್ಷಣ, ಲಕ್ಷಣ ಇಲ್ಲದವರೂ ಕೋವಿಡ್ ಪರೀಕ್ಷೆಗೊಳಗಾದರೇ ಕೋವಿಡ್ ಪಾಸಿಟಿವ್ ಕಂಡು ಬರುತ್ತಿದೆ.

ದಿನೇ ದಿನೇ ದೇಶದಲ್ಲಿ ಕರೋನಾ ಕೇಸ್ ಹೆಚ್ಚುತ್ತಿರುವ ಮಧ್ಯೆಯೂ ಅಕ್ಟೋಬರ್ ತಿಂಗಳಲ್ಲಿ ಮತ್ತಷ್ಟು ಕರೋನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು  ಮುಖ್ಯಮಂತ್ರಿ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಕರುನಾಡಿನಲ್ಲಿ ಕರೋನಾ ನಿಯಂತ್ರಣಕ್ಕೆ ಪಂಚ ಸೂತ್ರಗಳನ್ನು ಸೂಚಿಸಿದ್ದಾರೆ. ದೇಶದ ಜನರು ಅಗತ್ಯ ಮುಂಜಾಗ್ರತೆ ವಹಿಸಿ, ಮೈಕ್ರೋ ಲಾಕ್ ಡೌನ್‌ಗೆ ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ ಕರೋನಾ ವೈರಸ್‌ನಿಂದ ಕೇಂದ್ರ ಸಚಿವರು, ಶಾಸಕರುಗಳನ್ನು ಸೇರಿದಂತೆ ಜನ ಸಾಮಾನ್ಯರನ್ನು ಸಾವಿನ ದವಡೆಗೆ ತಂದು ನಿಲ್ಲಿಸಿದೆ. ಇದರಿಂದ ಜನ ಎಚ್ಚರಿಕೆಯಿಂದಿರುವುದು ಒಳಿತು ಎನ್ನುವ ಮಾತು ಸಾವಿನಷ್ಟೇ ಸತ್ಯ. ಅಲಕ್ಷ್ಯಿಸಿದರೆ ಕರೋನಾದಿಂದ ಬಚಾವ್ ಆಗುವುದಕ್ಕೆ ಸಾಧ್ಯವಿಲ್ಲ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಅವಶ್ಯಕ. ಜತೆಗೆ ಅನಾವಶ್ಯಕವಾಗಿ ಎಲ್ಲಂದರಲ್ಲಿ ತಿರುಗಾಡದೇ ಆರೋಗ್ಯದ ಕಡೆಗೆ ಗಮನ ಕೊಡುವುದು
ಮುಖ್ಯವಾಗಿದೆ. ಕರೋನಾ ವೈರಸ್ ಸಾಮಾನ್ಯ ಕಾಯಿಲೆ ಎಂದು ಭಾವಿಸಿ, ಜನಸಾಮಾನ್ಯರು ಓಡಾಡುವ ಮೂಲಕ ಕರೋನಾ ನಿಯಂತ್ರಣಕ್ಕೆೆ ನಿಯಮ ಪಾಲನೆ ಮಾಡದೇ ಅಲಕ್ಷ್ಯವಹಿಸುತ್ತಿದ್ದಾರೆ.

ವಯಸ್ಸಾದವರು, ಚಿಕ್ಕ ಮಕ್ಕಳ ಬಗ್ಗೆೆ ವಿಶೇಷ ಎಚ್ಚರಿಕೆ ಹೊಂದಿರಬೇಕಾದ್ದು ಬಹುಮುಖ್ಯ. ಕರೋನಾ ಕಾಲದಲ್ಲಿ ಆರೋಗ್ಯದ ಬಗ್ಗೆ ವೈಯಕ್ತಿಕವಾಗಿ ಗಮನಕೊಡುವುದು ಉತ್ತಮ. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯ ಸದೃಢ ಮಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ಭಾರತೀಯ ಆಯುರ್ವೇದ ಔಷಧಿ, ಬಳಕೆ, ಹೊಟೇಲ್ ನಲ್ಲಿ ಸಾಮಾನ್ಯವಾಗಿ ಚಹಾ, ಟೀ, ಬದಲಿಗೆ ಕಷಾಯ
ಕುಡಿಯಲಿಕ್ಕೆೆ ಜನ ಬಯಸುತ್ತಿದ್ದಾರೆ. ಇನ್ನು ಬಹುತೇಕರು ಇದೀಗ ಯೋಗದತ್ತವಾಲಿದ್ದಾರೆ. ನಿತ್ಯ ಬೆಳಗ್ಗೆೆ ಮಾನಸಿಕ
ನೆಮ್ಮದಿ, ದೈಹಿಕ ಆರೋಗ್ಯಕ್ಕಾಗಿ ಯೋಗವೊಂದರಿಂದಲೇ ಸಾಧ್ಯ ಎನ್ನುವುದನ್ನು ಜನ ಅರಿತುಕೊಂಡಿದ್ದಾರೆ. ನಗರ ಪಟ್ಟಣದ ಪ್ರದೇಶಗಳಲ್ಲಿ ಯೋಗ ಕಲಿಕೆಗೆ ಹೊರಟಿದ್ದಾರೆ.

ಇನ್ನು ಕೆಲ ಯೋಗ ಸಾಧಕರು, ಕರೋನಾ ಸಮಯದಲ್ಲಿ ಯೋಗವನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ಯೋಗದ
ಮಹತ್ವ ಸಾರಿ ಹೇಳುತ್ತಿದ್ದಾರೆ. ಇನ್ನು ಕೆಲವರು ವ್ಯಾಯಾಮ ಮಾಡಬೇಕೆಂಬ ಆಸೆ ಇದ್ದರೂ ಹೆಚ್ಚು ಕಷ್ಟಪಡದೇ ಉತ್ತಮ
ಆರೋಗ್ಯವನ್ನು ಗಳಿಸಬೇಕೆಂಬ ಆಸೆ ಹಾಗೂ ವಾಕಿಂಗ್ ಮೂಲಕ ಅದೆಲ್ಲವನ್ನೂ ಸಾಧಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ.

ಒಂದಿಷ್ಟು ದೈಹಿಕ ಕಸರತ್ತಿನ ಅವಶ್ಯಕತೆ ಇದೆ ಎಂದು ಬಹುತೇಕರಿಗೆ ಅನಿಸುವುದು ವಯಸ್ಸು ನಲ್ವತ್ತಾದ ನಂತರ. ಆದರೀಗ ಕರೋನಾದಿಂದ ಹದಿವಯಸ್ಸಿನವರು ಇದನ್ನು ಅರಿಯುವಂತೆ ಮಾಡಿದೆ ಕರೋನಾ. ಅಲ್ಲಿಯವರೆಗೆ ಮೈ – ಮನಸ್ಸುಗಳು ಸುಖದಲ್ಲಿರುತ್ತವೆ. ಇದ್ದಕ್ಕಿದ್ದಂತೆ ಕಠಿಣ ಕಸರತ್ತು ಮಾಡಲು ಅದು ಸಿದ್ಧವಿರುವುದಿಲ್ಲ. ಅಂಥವರು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಅತ್ಯಂತ ಸುಲಭ ವಿಧಾನವಾದ ವಾಕಿಂಗ್. ಬೆಳಗ್ಗೆ ಎದ್ದು ಕೂಡಲೇ ಒಂದು ಅಥವಾ ಎರಡು ಕಿಲೋ ಮೀಟರ್ ನಡೆದು ವಾಪಾಸಾದವರ ಮನಸ್ಸಿನಲ್ಲಿ ಎಂಥದೋ ಮಹತ್ವಕಾರ್ಯ ಮಾಡಿದ ಭಾವನೆ. ವಾಕಿಂಗ್ ಸಂಬಂಧಿಸಿದಂತೆ ಇಂಟರ್ನೆಟ್‌ನಲ್ಲಿ ಸಿಗುವ ಸಾಕಷ್ಟು ಕಸವೂ ಅವರ ಈ ಹುಸಿ ಭ್ರಮೆಯನ್ನು ಪೋಷಿಸುತ್ತಾ ಹೋಗುತ್ತದೆ. ಡಾಕ್ಟ್ರೇ ಹೇಳಿದ್ದಾರೆ, ವಾಕಿಂಗ್ ಒಂದು ಬೆಸ್ಟ್ ಎಕ್ಸಸೈಜ್ ಅಂದುಕೊಳ್ಳುತ್ತಾರೆ.

ದುರಂತವೆಂದರೆ, ಅವರ ದೈಹಿಕ ಕಸರತ್ತು ಅಷ್ಟಕ್ಕೇ ಸೀಮಿತವಾಗಿ ಬಿಡುತ್ತದೆ. ತೂಕ ಇಳಿಸುವ ಸಲುವಾಗಿಯೋ, ಫಿಟ್ನೇಸ್ ‌ಗಾಗಿಯೋ ಅಥವಾ ಯಾರನ್ನು ಮೆಚ್ಚಿಸಲು ವಾಕಿಂಗ್ ಮಾಡಲು ಹೋಗುತ್ತೇವೆ. ಆದರೆ ವಾಕಿಂಗ್ ಎನ್ನುವುದು ದೈಹಿಕ ಆರೋಗ್ಯ ಕಾಪಾಡುವ ಒಂದು ವಿಧಾನವಷ್ಟೇ. ದೇಹದ ಎಲ್ಲಾ ಅಂಗಾಂಗಗಳು ಕ್ರಿಯಾಶೀಲಗೊಳ್ಳುವಂತೆ ಮಾಡುವ ಶಕ್ತಿ ಯೋಗಕ್ಕೆ ಇದೆ. ಇನ್ನು ಸುದೀರ್ಘ ಕಾಲದ ವೇಗದ ನಡಿಗೆ ನಿಜಕ್ಕೂ ಅತ್ಯುತ್ತಮ. ಅದರಲ್ಲಿ ಯಾವುದೇ ತಕರಾರಿಲ್ಲ. ಆದರೆ,
ಎಷ್ಟು ಜನ ದೀರ್ಘ ಸಮಯದ ವಾಕಿಂಗ್ ಮಾಡುತ್ತಾರೆ? ಅದೂ ಸಾಧಾರಣ ವೇಗದಲ್ಲಿ ಮಾಡುತ್ತಾರೆ? ಅವರ ಜೀವನಶೈಲಿಯ ಇತರ ಅಭ್ಯಾಸಗಳಿಗೆ ಇಷ್ಟು ಕಡಿಮೆ ಅವಧಿಯ ಕಾಟಾಚಾರದ ವಾಕಿಂಗ್ ಸಾಕಾಗುವುದು ಕಷ್ಟ.

ಇನ್ನು ದೈಹಿಕ ವ್ಯಾಯಾಮದ ಚಟುವಟಿಕೆ ಶುರು ಮಾಡಲು ವಾಕಿಂಗ್ ನಿಜಕ್ಕೂ ಉಪಯುಕ್ತ. ಆದರೆ, ನೀವು ಅದರಾಚೆಗೆ
ನಿಮ್ಮ ಚಟುವಟಿಕೆ ವಿಸ್ತರಿಸಿಕೊಳ್ಳದಿದ್ದರೆ, ವಾಕಿಂಗ್‌ನಿಂದ ಸಿಗುವ ಲಾಭ ಕಡಿಮೆ. ನಿಯಮಿತವಾಗಿ ವಾಕಿಂಗ್ ಸಾವಿರಾರು ಜನ ಮಾಡುತ್ತಾರೆ. ಅದರಿಂದ ಅವರಲ್ಲಿ ಉಂಟಾಗಿರುವ ಆರೋಗ್ಯ ಬದಲಾವಣೆ ಬಹಳ ಕಡಿಮೆ. ನಿಯಮಿತವಾಗಿ ವಾಕಿಂಗ್ ಹೋಗುವ ಎಷ್ಟೋ ಜನರಿಗೆ, ಕುಳಿತರೆ ಮೇಲೇಳಲು ಆಗುವುದಿಲ್ಲ. ಇನ್ನು ಭಾರತೀಯ ಮಾದರಿಯ ಶೌಚಾಲಯ ಬಳಸುವುದು ಆ ಪೈಕಿ ಬಹುತೇಕ ಜನರಿಗೆ ತೀರಾ ಕಷ್ಟಕರ ಅಥವಾ ಅಸಾಧ್ಯ. ವಾಕಿಂಗ್ ಒಂದೇ ಉತ್ತಮ ದೈಹಿಕ ಕಸರತ್ತಾಗಿದ್ದರೆ ನಿತ್ಯದ ಈ
ಅನಿವಾರ್ಯ ಕೆಲಸಗಳು ಏಕೆ ಕಷ್ಟವಾಗುತ್ತವೆ? ಎಲ್ಲಕ್ಕಿಂತ ಮುಖ್ಯವಾಗಿ ಬಹುತೇಕರಿಗೆ ವಾಕಿಂಗ್ ಎಂಬುದು ಇನ್ನಷ್ಟು
ದೈಹಿಕ ಶ್ರಮದಿಂದ ತಪ್ಪಿಸಿಕೊಳ್ಳುವ ಉತ್ತಮ ನೆಪವಾಗಿ ಬಿಡುತ್ತದೆ. ದೈಹಿಕ ಕಸರತ್ತಿನಲ್ಲಿ ತೊಡಗಿಕೊಂಡಿದ್ದೇವೆ ಎಂಬ
ಹುಸಿ ಭ್ರಮೆಯನ್ನು ಅವರಲ್ಲಿ ಮೂಡಿಸುತ್ತದೆ.

ಇಷ್ಟು ವಾಕ್ ಮಾಡಿದರೆ ಸಾಕು ಎಂದು ತಮಗೇ ತಾವೇ ಮಿತಿ ಹಾಕಿಕೊಂಡು ಬಿಡುತ್ತಾರೆ. ನಿತ್ಯ ವಾಕ್ ಮಾಡುತ್ತೀನಲ್ಲ
ಎಂದು ತಿನ್ನುವಿಕೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದಿಲ್ಲ. ಚಟಗಳಿಗೆ ಮಿತಿ ಹಾಕಿಕೊಳ್ಳುವುದಿಲ್ಲ. ದಿನಪೂರ್ತಿ ಏನೇ ಮಾಡಲಿ, ಬೆಳಗ್ಗೆ ಮಾಡುವ ವಾಕಿಂಗ್‌ನಿಂದ ಅವೆಲ್ಲದರ ಕೆಟ್ಟ ಪರಿಣಾಮಗಳು ಕೊನೆಯಾಗುತ್ತವೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳುತ್ತಾರೆ. ಇನ್ನು ವಿಚಿತ್ರವೆಂದರೆ ತಕ್ಷಣ ಫಲಿತಾಂಶ ಬರಬೇಕೆಂದು ಬಯಸುತ್ತಾರೆ.

ಒಂದು ತಿಂಗಳಲ್ಲಿ ದೇಹದ ತೂಕ ಇಳಿಯದಿದ್ದರೆ ಅಥವಾ ಬದಲಾವಣೆ ಕಂಡು ಬರದಿದ್ದರೆ ವಾಕಿಂಗ್ ಹೋಗೋದನ್ನೆ ಬಿಟ್ಟು ಬಿಡುತ್ತಾರೆ. ಇದೇ  ನಿಜವಾದ ಅಪಾಯ. ಏನೋ ಮಾಡುತ್ತಿದ್ದೇವೆ ಎಂಬ ಹುಸಿ ಭ್ರಮೆ ನಮ್ಮನ್ನು ಇತರೆ ಉಪಯುಕ್ತ ಕಸರತ್ತುಗಳಿಗೆ ವಿಮುಖರನ್ನಾಗಿಸುತ್ತದೆ. ನಾನು ಆರೋಗ್ಯವಾಗಿಯೇ ಇದ್ದೇನೆ ಎಂದುಕೊಳ್ಳುತ್ತ ಹೋಗುತ್ತೇವೆ. ಸಾಧಾರಣ
ಪರಿಸ್ಥಿತಿಯಲ್ಲಿ ಇದೆಲ್ಲ ಸರಿ. ಆದರೆ, ಈಗ ಬಂದಿರುವ ಕರೋನಾದಂಥ ಅನಿರೀಕ್ಷಿತ ಸವಾಲಿನ ಎದುರು ಭ್ರಮೆಯ ವಾಕಿಂಗ್ ಸೋತು ಹೋಗುತ್ತದೆ. ಹಾಗೆ ಸೋತು, ಸದ್ದಿಲ್ಲದೇ ಎದ್ದು ಹೋದವರು ಸಾಕಷ್ಟು ಜನರಿದ್ದಾರೆ. ಯೋಗಾಸನ ಅಥವಾ ವ್ಯಾಯಾಮ ಮಾಡುವ ಮೂಲಕ ಕರೋನಾ ಓಡಿಸಿಬಿಡಬಹುದು ಎಂದಲ್ಲ. ಆದರೆ ಇಂತಹ ಸೋಂಕು ರೋಗಗಳನ್ನು ಎದುರಿಸುವ ಸಾಮರ್ಥ್ಯವನ್ನು ಅವು ನಮ್ಮಲ್ಲಿ ಹೆಚ್ಚಿಸುತ್ತವೆ ಎನ್ನಬಹುದು.

ಕಾಟಾಚಾರದ, ಭ್ರಮೆಯ ವಾಕಿಂಗ್‌ಗೆ ಅಂತಹ ಶಕ್ತಿಯಿಲ್ಲ. ಯೋಗಾಸನ ಅಥವಾ ವ್ಯಾಯಾಮದಲ್ಲಿ ಉಸಿರಾಟ ಪ್ರಕ್ರಿಯೆ ಅತ್ಯಂತ ತೀವ್ರವಾಗಿ ಏರಿಳಿಯುತ್ತಿರುತ್ತದೆ. ಒತ್ತಡದಲ್ಲಿ ಉಸಿರಾಡುವ ಧಾರಣ ಶಕ್ತಿಯನ್ನು ಅವು ಹೆಚ್ಚಿಸುತ್ತವೆ. ಶ್ವಾಸಕೋಶ,
ಹೃದಯ, ಬೆನ್ನು, ಹೊಟ್ಟೆೆ, ಜೀರ್ಣಾಂಗಗಳು – ಹೀಗೆ ಮಹತ್ವದ ಅಂಗಾಂಗಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಒತ್ತಡ ಬಿದ್ದಾಗೆಲ್ಲ ರಕ್ತ ಪರಿಚಲನೆ ಹೆಚ್ಚೆಚ್ಚು ನಡೆಯುವುದರಿಂದ ಅವೆಲ್ಲ ಅಂಗಾಂಗಗಳು ಬಲಗೊಳ್ಳುತ್ತವೆ. ಅವುಗಳ ಧಾರಣಶಕ್ತಿ ಹೆಚ್ಚುತ್ತದೆ. ಇಂತಹ ಪ್ರಕ್ರಿಯೆ ವಾಕಿಂಗ್‌ನಲ್ಲಿ ಬಲು ಕಡಿಮೆ. ವಾಕಿಂಗ್ ಉತ್ತಮ ವಾರ್ಮ್‌ಅಪ್ ಮಾತ್ರ. ಆದರೆ, ಇವತ್ತಿನ ಜೀವನಶೈಲಿಗೆ ಅದೊಂದೇ ಸಾಕಾಗದು. ವಾರ್ಮ್‌ಅಪ್ ನಂತರ ಮಾಡಬೇಕಾದ ದೈಹಿಕ ಕಸರತ್ತನ್ನು ಮಾಡದೇ ಕೇವಲ
ವಾಕಿಂಗ್‌ಗೆ ಮಾತ್ರ ನಮ್ಮನ್ನು ಸೀಮಿತಗೊಳಿಸಿಕೊಂಡರೆ, ನಮಗೆ ದಕ್ಕುವ ಲಾಭವೂ ಸೀಮಿತವಾಗುತ್ತದೆ. ಆ ಭ್ರಮೆಯನ್ನು ಹೋಗಲಾಡಿಸಿಕೊಳ್ಳಬೇಕು. ದೈಹಿಕ ಕಸರತ್ತಿನ ಪ್ರಕ್ರಿಯೆ ವಾಕಿಂಗ್‌ಗೆ ಮಾತ್ರ ಸೀಮಿತವಾಗದಿರಲಿ.

ಮುಂದಿನ ಹಂತಕ್ಕೆ ಅದು ವೇದಿಕೆಯಾಗಲಿ. ಕರೋನಾದಂಥ ಸಮಸ್ಯೆೆಗಳನ್ನು ನೀವು ಕೂಡಾ ಸಮರ್ಥವಾಗಿ ಎದುರಿಸಬಹುದು.