Saturday, 14th December 2024

ಕರೋನಾ ನಮಗೆ ಕಲಿಸಿದ್ದು ಪಾಠನಾ? ತತ್ತ್ವಜ್ಞಾನನಾ ?

ಪ್ರಾಣೇಶ್ ಪ್ರಪಂಚ

ಗಂಗಾವತಿ 

ಫೆಬ್ರವರಿ ಅಂತ್ಯದಿಂದ ಶುರುವಾದ ಈ ಕೋವಿಡ್, ಕರೋನಾ, ಎಂಬ ಕಣ್ಣಿಗೆ ಕಾಣದ ವ್ಯಾಧಿ ವಿಜ್ಞಾನಿ, ಪಂಡಿತ, ಪಾಮರ ರನ್ನೆಲ್ಲ ದಿಕ್ಕುಗೆಡಿಸಿ ಬಿಟ್ಟಿತು. ದಷ್ಟಪುಷ್ಟ, ಗರಡಿ ಸಾಮಿನ ದೇಹ, ಆರೋಗ್ಯ ವುಳ್ಳವರು ನೋಡುತ್ತಿದ್ದಂತೆಯೇ, ಬೆಳಿಗ್ಗೆ ನೋಡಿ ದವರನ್ನು ರಾತ್ರಿ ಹೊತ್ತಿಗೆ, ರಾತ್ರಿ ನೋಡಿದವರನ್ನು ಬೆಳಗಿನ ಪತ್ರಿಕೆ, ಟಿ.ವಿ,ಗಳಲ್ಲಿ ನಿಧನ ಕಾಲಮ್ಮಿನಲ್ಲಿ ನೋಡಿಬಿಟ್ಟೆವು.

ಕಣ್ಮುಂದೆ ನೋಡಿದ್ದನ್ನು ನಂಬಲಾರದಂತಹ ಸ್ಥಿತಿಗೆ ತಲುಪಿದೆವು. ನಮ್ಮ ಗತಿಯೇನು? ಎಂದು ಒಳಗೊಳಗೇ ಭಯ ಶುರುವಾಯಿತು. ನಾವು ಸದಾ ಪ್ರವಾಸ, ದಿನಕ್ಕೊಂದು ಊರು, ಸಂಜೆ ಸಾವಿರಾರು ಜನರ ಸಭೆಗಳು, ರಾತ್ರಿ ರಸಿಕ ಮಿತ್ರರೊಂದಿಗೆ
ಪಾನಗೋಷ್ಠಿ, ರಸಿಕ ಮಾತುಗಳು, ಓಹ್! ಇನ್ನು ಹೀಗೆ ಐದು, ಹತ್ತು ವರ್ಷ ನಮ್ಮನ್ನು ಹಿಡಿಯುವವರಿಲ್ಲ, ನಾವೇ ಸಾಕಾಗಿ
ಬಿಡಬೇಕಾಗಲಿ, ಜನ ನಮ್ಮನ್ನು ಕೈಬಿಡುವದಿಲ್ಲ ಎನ್ನುವ ಊಹಾಲೋಕದಲ್ಲಿ ಹರಿಸಿದ್ದೇ ಹರಿಸುತ್ತಿರುವಾಗ ಮಾರ್ಚ್
ಹದಿಮೂರು, ಹದಿನಾಲ್ಕರ ಹೊತ್ತಿಗೆ, ಎದುರಿಗೆ ಯಾರಾದರು ಜನ ಬಂದರೆ ಭಯ, ಭಯ ಶುರುವಾಯಿತು. ಫಿಕ್ಸ್ ಆಗಿದ್ದ
ಕಾರ್ಯಕ್ರಮಗಳೆಲ್ಲ ರದ್ದಾಗತೊಡಗಿದವು.

ಫೋನು ಬಂದ ಕೂಡಲೇ ಮತ್ತೆ ಯಾವ ಊರೋ, ಯಾವ ಡೇಟ್ ಕೇಳುತ್ತಾರೋ ಎಂದು ಬೇಗುದಿ, ಒತ್ತಡಗಳಿಂದ ಫೋನು ರಿಸೀವ್ ಮಾಡುತ್ತಿದ್ದ ನಮಗೆ ಆ ಕಡೆಯಿಂದ ಪ್ರೋಗ್ರಾಂ ಕ್ಯಾನ್ಸಲ್ ಸರ್, ಅಧಿಕಾರಿಗಳು ಒಪ್ಪಿಗೆ ಕೊಡುತ್ತಿಲ್ಲ ಎಂಬ ಸಂಘಟಕರ ಧ್ವನಿಗಳು ಆಯ್ತು, ಆಯ್ತು ನೀವಾದರೂ ಏನ್ ಮಾಡ್ತಿರಾ? ಎಂದು ಸಮಾಧಾನ ಹೇಳುತ್ತಿದ್ದ ನಮಗೆ ಒಳಗೊಳಗೆ -ಒಂದು ತಿಂಗಳು ರೆಸ್ಟ್‌ ಮಾಡಿದರಾಯಿತು ಎಂಬ ಸಮಾಧಾನವಾಗುತ್ತಿತ್ತು. ಆದರೆ, ಬರುಬರುತ್ತಾ ಇದು ರೆಸ್ಟ್ ಅಲ್ಲ ‘ಯು ಆರ್ ಅಂಡರ್ ಅರೆಸ್ಟ್‌’ ಎಂಬ ಸತ್ಯದ ಅರಿವಾಯಿತು. ಕರೋನಾ ಆರಂಭವಾದ ಮಾರ್ಚ್ ತಿಂಗಳಲ್ಲಿ ನಾನು ಬೆಳಗಾವಿ, ಧಾರವಾಡ ಕಾರ್ಯಕ್ರಮದಲ್ಲಿದ್ದೆ.

ಅವು ಕ್ಯಾನ್ಸಲ್ ಆಗಿ ಊರು ಸೇರಿಸಿಕೊಳ್ಳಬೇಕೆಂದರೆ ಊರು ಊರುಗಳೇ ಬಂದ್, ರಸ್ತೆರಸ್ತೆಗಳೇ ಬಂದ್ ಎಂಬ ಸುದ್ದಿ, ಇದ್ದ
ಊರಿನ ಗಡಿದಾಟಲು ಪೊಲೀಸ್ ಒಪ್ಪಿಗೆ ಬೇಕು, ನನ್ನ ಊರು ನಾನು ಸೇರಿ ಕೊಳ್ಳಲು ದಾರಿಗುಂಟ ಪೊಲೀಸರ ವಿಚಾರಣೆ ಎದುರಿಸ ಬೇಕು ಎಂದು ತಿಳಿದಾಗ ಕರೋನಾದ ಭೀಕರತೆ ಅರಿವಾಯ್ತು.

ಅಂತೂ ಡಿವೈಎಸ್‌ಪಿ ಸಂದಿಗವಾಡರ ಪರ್ಮಿಿಶನ್ ಪಡೆದು ಧಾರವಾಡ ಬಿಟ್ಟೆ, ಹುಬ್ಬಳ್ಳಿ ಮಾರ್ಗ ಬರುವಾಗ ಕರುಳು ಹಿಂಡಿ ಹೋಯಿತು. ಕಾರಣ, ಗಿಜಿ ಗಿಜಿ ಗುಟ್ಟುತ್ತಿದ್ದ ಧಾರವಾಡ ಟು ಹುಬ್ಬಳ್ಳಿ ರಸ್ತೆಯಲ್ಲಿ ಒಂದು ನರಪ್ರಾಣಿಯೂ ಇಲ್ಲ, ಒಂದು ಅಂಗಡಿ ತೆರೆದಿಲ್ಲ, ಎದುರಿಗೆ ಒಬ್ಬರೂ ಬರುತ್ತಿಲ್ಲ. ಮರುಭೂಮಿಯಲ್ಲಿ ಹೊರಟ್ಟಿದ್ದೆನೆಯೇ? ಎಂಬ ಅನುಮಾನ, ಹೊರಗಿಂದ ಕಾರಿ ನೊಳಗೆ ಬರುತ್ತಿದ್ದ ಮಾರ್ಚ್ ತಿಂಗಳ ಬಿಸಿ ಗಾಳಿಯ ಶಾಖಕ್ಕಿಂತ ನಿರ್ಜನ ರಸ್ತೆಗಳು ನನ್ನನ್ನು ಬೆವರುವಂತೆ ಮಾಡಿದವು.

ಚೆನ್ನಮ್ಮ ಸರ್ಕಲ್‌ನಲ್ಲಿ ಚೆನ್ನಮ್ಮ ಒಬ್ಬಳೇ ನಿಂತಿದ್ದಾಳೆ, ಆಕೆಯ ಕುದುರೆಯೂ ಓಡುತ್ತಿಲ್ಲ ಅನಿಸಿಬಿಟ್ಟಿತು. ಸದಾ ಸುತ್ತ ಗಿಜಿ ಗಿಜಿ ಜನರ ಗದ್ದಲ, ವಾಹನಗಳ ಹಾರ್ನಿಗೆ ಬೆದರಿ ಚೆನ್ನಮ್ಮ ಕುದುರೆ ಹತ್ತಿ ಓಡುತ್ತಿದ್ದಾಳೆ ಎನಿಸುತ್ತಿದ್ದ ವಾತಾವರಣ ಹೋಗಿ, ‘ಅಯ್ಯೋ, ಯಾರೂ ಇಲ್ಲ, ನಾನು ಈ ಊರು ಒಲ್ಲೆ ಎಂದು ಚೆನ್ನಮ್ಮ ಓಡಿದರೆ ನನ್ನ ಈ ಹುಬ್ಬಳ್ಳಿಯ ಗತಿಯೇನು ಎನಿಸು ವಂತಾಗಿ ಬಿಟ್ಟಿತು, ನಮ್ಮದು, ನಿಮ್ಮದು ಅಂತ ಕೂಗುತ್ತಿದ್ದ ಈದಗಾ ಮೈದಾನ, ‘ಎಲ್ಲಿ ಹೋದಿರೋ ನನ್ನ ಬಿಸಿಲಿಗೆ ಅಂಗಾತ ಮಲಗಿಸಿ ಬರ್ರ್ಯೊ ನಾ ಯಾರಿಗೆ ಬೇಕು ಹೇಳ್ರೋ ಎಂದು ಕೂಗುತ್ತಿದೆ ಎನಿಸಿತು ಜೀವ ಇದ್ದರೆ ಜಾಗಕ್ಕೆ ಬಡಿದಾಡೋ ಜನ, ಜೀವ ಹೊಕೈತಿ ಅಂದರ ಈ ಜಾಗನೂ ಒಲ್ಲರು, ಈ ಜಗತ್ತೂ ಒಲ್ಲರು ಹಂಗ ಮನಿ ಸೇರ್ತಾರ ಅಂತ ಈದಗಾ ನಗಾಕ ಹತ್ತೈತಿ ಅನಿಸಿತು.

ಧಾರವಾಡದಿಂದ ಗಂಗಾವತಿಗೆ ಬರುವವರೆಗೂ ಪ್ರತಿ ಊರ ಪ್ರವೇಶಕ್ಕೂ ಪೊಲೀಸರ ತಪಾಸಣೆ, ಪೊಲೀಸರಿಂದ ತಪ್ಪಿಸಿಕೊಳ್ಳಲು
ಎಡಕ್ಕೊ, ಬಲಕ್ಕೋ ಕಾಣುವ ಹಳ್ಳಿಯ ದಾರಿಗೆ ಕಾರು ತಿರುಗಿಸಿ ಹಳ್ಳಿಯೊಳಗಿಂದ ಹೋಗಲು ಪ್ರಯತ್ನಿಸಿದರೆ, ಹಳ್ಳಿಯ ಅಗಸಿ
ಬಾಗಿಲಿಗೇ ಮುಳ್ಳಿನ ಗಿಡಗಳನ್ನೆ ಕಡಿ ಕಡಿದು ಯಾರನ್ನೂ ಊರಾಗ ಬಿಡಂಗಿಲ್ರಿ, ವಾಪಸ್ ಹೋಗ್ರಿ ಅಂತ ದೂರದಿಂದಲೇ ಕೂಗುವ ಹಳ್ಳಿಗರು, ಹುಬ್ಳಿ-ಧಾರವಾಡದಾಗ ಕರೋನಾ ಬಹಳ ಹಬ್ಚೈತಿ ಅದನ್ನ ಹಚಿಕೊಂಡು ಬಂದು ನಮ್ಮ ಹಳ್ಯಾಗ ಹಾದು ಹೋದಿರೆಂದ್ರ ನಮಗೂ ಅದು ಬರ್ತೈತಿ ಎಂದು ಮುಖಕ್ಕೇ ಹೊಡೆದಂತೆ ದೊಡ್ಡ ದೊಡ್ಡ ಬೋರ್ಡ, ಬಟ್ಟೆಗಳಲ್ಲಿ ಬರೆದು ದಾರಿ ಗಡ್ಡಟ್ಟ ಆ ಮುಳ್ಳು ಕಂಟಿಗಳಿಗೇ ಆ ಬ್ಯಾನರ್, ಬೋರ್ಡಗಳನ್ನು ಆಸರೆ ಕೊಟ್ಟು ನಿಲ್ಲಿಸಿ ಬಿಟ್ಟಿದ್ದರು, ಮತ್ತೆ ವಾಪಸ್ ಹೈವೇಗೆ ಬಂದು ಪೊಲೀಸರಿಗೆ ಕೈ ಮುಗಿದು ಊರು ಸೇರುವಲ್ಲಿ ಏರ್‌ಪೋರ್ಟ್ ಪ್ರವೇಶಿಸುತ್ತಿದ್ದ ವೀಸಾ, ಪಾಸ್ ಪೋರ್ಟ್, ಬೋರ್ಡಿಂಗ್ ಪಾಸ್‌ಗಳನ್ನು ತೋರಿಸಿ ತೋರಿಸಿ ವಿಮಾನ ಏರುತ್ತಿದ್ದುದೇ ನೆನಪಾಗುತ್ತಿತ್ತು.

ಆಯಿತು, ಮೂರು ತಾಸಿನ ದಾರಿಗೆ, ನಿಂತು ನಿಂತು ಎಂಟು ತಾಸಿಗೆ ಊರು, ಮನೆ ಸೇರಿ ಒಳ ಹೊಕ್ಕೆವು. ಅಂದು ಬಂದವರು ಇಂದಿಗೆ ಬರೋಬ್ಬರಿ ಎಂಟು ತಿಂಗಳಾಯಿತು, ಊರು, ಮನೆ ಬಿಡಲಾಗುತ್ತಿಲ್ಲ. ಬಿಟ್ಟರೂ ಅಂಗೈಯಲ್ಲಿ ಜೀವ ಹಿಡಿದುಕೊಂಡೆ ಬಿಡುತ್ತಿದ್ದೇವೆ, ಮಾಸ್ಕ್ ಕಟ್ಟಿಕೊಂಡು ನಮಗೆ ಬಾಯಿ, ಬಾಯಿಯ ಮೇಲೆ ಮೀಸೆ ಇರೋದೆ ಮರೆತು ಹೋಗುತ್ತಿದೆ, ಏಡ್ಸ್, ಕ್ಯಾನ್ಸರ್‌ಗಳನ್ನೆ ಮಟ್ಟ ಹಾಕಿದ ವೈದ್ಯರಿಗೇ ಕರೋನಾ ಕಣ್ಣು ಕಣ್ಣು ಬಿಡಿಸುತ್ತಿದೆ, ಆದರೆ, ಈ ಎಂಟು ತಿಂಗಳಲ್ಲಿ ಕೆಲವು ಚಾಲಾಕಿ ವೈದ್ಯರುಗಳು ಕಣ್ಣು ತೆರೆದುಕೊಂಡು ರೋಗದ ಔಷಧಿ ಹುಡುಕಿಲ್ಲ, ಈ ರೋಗದಿಂದ ಹಣ ಬರುವ ಹೆಗ್ಗಣಗಳಾಗಿ ಹೆಣದ ಮೇಲಿನ ಹಣವನ್ನು ಬಾಚಿಕೊಳ್ಳುವ ಭೀಕರ ಅವನತಿಗೆ ಇಳಿದಿದ್ದಾರೆ.

ಏಸು ಪ್ರಭು ನುಡಿದಂತೆ ದೇವರೇ ಇವರೇನು ಮಾಡುತ್ತಿದ್ದಾರೆಂಬುದೇ ಅವರಿಗೆ ಗೊತ್ತಿಲ್ಲ, ಅವರನ್ನು ಕ್ಷಮಿಸು’ ಎಂದು ಹೃದಯ ವುಳ್ಳ ಜನ ಹಲುಬುತ್ತಿದ್ದಾರೆ. ಮನೆಯನ್ನು ಸೇರಿದ ಮೇಲೆ ಎಂಟು ತಿಂಗಳಿಂದ ಎಷ್ಟಂತ ತಿಂದು ಮಲಗುವುದು, ಎಷ್ಟಂತ ಓದುವುದು, ಎಷ್ಟಂತ ಸಿನಿಮಾಗಳನ್ನು ನೋಡುವುದು, ಹಳೆಯ ಸಿನಿಮಾಗಳನ್ನು ನೋಡಿದರೆ ‘ಅಬ್ಬಾ ಆಗೆಲ್ಲ ಕರೋನಾ ಇರಲಿಲ್ಲ, ಜನ ಹೇಗೆ ಹೋಟೆಲ್‌ನಲ್ಲಿ ತಿನ್ನುತ್ತಿದ್ದಾರೆ, ಎಷ್ಟು ಸಂಭ್ರಮದಿಂದ ಜಾತ್ರೆಯ ತೇರನ್ನು ಎಳೆಯುತ್ತಿದ್ದಾರೆ, ಗುಂಪು ಗುಂಪಾಗಿ ನಡೆದಾಡುತ್ತಾ ಹರಟುತ್ತಿದ್ದಾರೆ. ಅಯ್ಯೋ ನೋಡಲ್ಲಿ ಹೀರೊ – ಹೀರೋಯಿನ್‌ಗಳು ಮುಖದ ಹತ್ತಿರ ಮುಖ ತಂದಿ ದ್ದಾರೆ.

ಅಯ್ಯೋ, ಹೀರೋ, ಹೀರೊಯಿನ್‌ಗೆ ಕಿಸ್ ಮಾಡಿ ಬಿಟ್ಟ, ಇಬ್ಬರಿಗೂ ಮಾಸ್ಕಿಲ್ಲ, ಚೆಕ್ ಮಾಡಿಸಿದರೆ ಖಂಡಿತ ಪಾಸಿಟಿವ್ ಬಂದಿ ರುತ್ತೆ, ಅಲ್ಲಿ ನೋಡು ಹೀರೋನ ತಂಗಿಯನ್ನ ಐದಾರು ಜನ ಎಳೆದಾಡಿ ರೇಪ್ ಮಾಡಿದರು, ಎಲ್ಲರಿಗೂ ನಾಳೆ ಪಾಸಿಟಿವ್ ರಿಪೋರ್ಟ್’ ಎಂದೆಲ್ಲ ಮರುಕ ಪಡುವಂತಾಯಿತು. ಹಡೆದ ತಾಯಿ, ಒಡ ಹುಟ್ಟಿದ ಅಣ್ಣ ತಮ್ಮಂದಿರು ಎದುರು ಬಂದರ ಸಾಕು ‘ಏನು ಮೈ ಮೇಲೆ ಬರ್ತಿಯೋ ಎಂದು ಗದರಿಸುವಂತಾಯಿತು. ಕೈ ತೊಳೆದು ತೊಳೆದು ಕೈ ಸೆಲೆತು ಹೋದುವು, ಶೇವಿಂಗ್ , ಕಟಿಂಗ್ ನಾವೇ ಮಾಡಿಕೊಂಡು ಕನ್ನಡಿ ನೋಡಿಕೊಂಡರೆ, ತಲೆ ಕೂದಲನ್ನು ಇಲಿಗಳು ಕಡಿದಂತೆ ಕಾಣಲಾರಂಭಿಸಿತು. ಬಟ್ಟೆಗೆ ಇಸ್ತ್ರಿಿ ಇರಲಿ ಮನೆಗೆ ಬಂದ ಪೇಪರ್‌ಗಳನ್ನೂ ಇಸ್ತ್ರೀ ಮಾಡಲಾರಂಭಿಸಿದೆವು ಪ್ರೀತಿಯಿಂದ ಯಾರೇನು ಕೊಟ್ಟರೂ ಮಕ್ಕಳು ಅದನ್ನು ನೇರ ಸತ್ತ ಇಲಿಯನ್ನು ಹಿಡಿದು ಎಸೆಯಲು ಹೋಗುವಂತೆ, ಅವರು ಕೊಟ್ಟ ಚಾಕಲೇಟ್, ಬಿಸ್ಕಿಟ್, ಪಾಕೆಟ್‌ಗಳನ್ನು
ಹಿಡಿದುಕೊಂಡು ನೇರ ವಾಷ್ ಬೇಸಿನ್‌ಗೆ ಒಯ್ದು ತೊಳೆಯಲಾರಂಭಿಸಿದರು.

ನಾವು ಶ್ರೇಷ್ಠ, ನಮ್ಮದು ದೊಡ್ಡ ಮನೆತನ, ನಾವು ಕಂಡಲ್ಲಿ ತಿರುಗುವವರಲ್ಲ, ಸಿಕ್ಕದ್ದು ತಿನ್ನುವವರಲ್ಲ. ಫಿನಾಯಿಲ್ ಹಾಕಿ ಕೊಂಡು ಬಾಯಿ ಮುಕ್ಕಳಿಸುವವರು ಎಂದು ಬೀಗುತ್ತಿದ್ದ ಮನೆಗಳ ಜನರಿಗೇ ಇದು ಹೆಚ್ಚು ಹೆಚ್ಚು ಬರಲಾರಂಭಿಸಿ, ಅವರ ಮನೆಗೆ ಬರುವ ಕೂಲಿ ಮಾಡುವವರು, ತರಕಾರಿ ಮಾರುವವರು ಕಡೆಗೆ ಭಿಕ್ಷಕರೂ ಕೂಡ ಆರೋಗ್ಯವಾಗಿ ಇವರ ಮನೆಗಳ ಮುಂದೆ ತಿರುಗಾಡುತ್ತಾ ಇವರೇ ಕರೆದರೂ ಇವರ ಮನೆಗೆ ಬರಲಾರದ ಸ್ಥಿತಿ ಕಂಡುಕೊಂಡರು. ಇದು ಭಗವಂತನೇ ತಾವೇ ಶ್ರೇಷ್ಠರು ಎಂದು ಕೊಂಡವರಿಗೆ ನೀಡಿದ ಶಿಕ್ಷೆ ಎನಿಸಿ ಹಣ, ಹೆಸರು, ಬಿಜಿನೆಸ್, ಬಿಜಿನೆಸ್ ಟೂರ್ ಎಂದು ಸುತ್ತುತ್ತಿದ್ದವರೆಲ್ಲ ಇಲಿ ನುಂಗಿದ ಹಾವಿ ನಂತೆ ಸುತ್ತಿಕೊಂಡು ಮಲಗಿದರು, ನಾವು ಸೂಟ್‌ಗಳನ್ನು ಮಾರುತ್ತೇವೆ, ನಮ್ಮಲ್ಲಿ ಕೇವಲ ದುಬಾರಿ ಶರ್ಟಿಂಗ್ ಆ್ಯಂಡ್
ಸೂಟಿಂಗ್ಸ್‌ ಮಾತ್ರ ಎನ್ನುತ್ತಿದ್ದ ಬಟ್ಟೆ ಅಂಗಡಿಗಳು, ಕಂಪನಿಗಳು ಇಪ್ಪತ್ತು ರುಪಾಯಿಯ ಮಾಸ್ಕ್‌‌ಗಳನ್ನು ಹೊಲಿದು ಅಂಗಡಿ
ಮುಂದೆ ತೂಗು ಹಾಕಿದರು, ನರಮಾನವರು ನಮ್ಮದೇನು ಬಿಡಿ ಮಹಾನ್ ಮಹಾನ್ ದೇವರುಗಳೇ ತಮ್ಮ ಗುಡಿಗಳ ಬಾಗಿಲ ಮುಚ್ಚಿಸಿಕೊಂಡರು, ದೇವರೂ ಹತ್ತಿರ ಬಿಟ್ಟುಕೊಳ್ಳಲಿಲ್ಲ, ಡಾಕ್ಟರುಗಳು ನಮ್ಮನ್ನು ಮುಟ್ಟಿಸಿಕೊಳ್ಳಲಿಲ್ಲ, ಮನೆ ಮನೆಗಳಲ್ಲೂ ಎಲ್ಲರೂ ಪ್ರತ್ಯೇಕ ಕೋಣೆಗಳಲ್ಲೇ ಇರಲಾರಂಭಿಸಿದರು.

ಎಷ್ಟು ದಿನ ಇಲ್ಲೇ ಇರುತಿ ನಿನ್ನ ಮನಿ ಬ್ಯಾರೆನ ಐತಿ ಎಂಬ ಹಾಡೇ ನಿಜ ಎನಿಸಲಾರಂಭಿಸಿತು. ಸಿಕ್ಕಲ್ಲಿ ತಿರುಗಿ, ಕಂಡದ್ದು ತಿಂದು, ಬಾಯಿಗೆ ಬಂದದ್ದು ಮಾತಾಡಿ ಮೆರೆದವರೆನ್ನೆಲ್ಲ ಕರೋನಾ ಮಗ್ಗಲು –  ಮುರಿದು ಒಗೆಯಿತು. ಇದ್ದಾಗ ಮೆರೆದದ್ದು ಸಾಕಾಗದೆ ಸತ್ತ ಮೇಲೂ ದಿನಗಟ್ಟಲೆ ಇಟ್ಟು, ಜೀವ ಇಲ್ಲದ ದೇಹವನ್ನು ಊರು ತುಂಬಾ ಮೆರೆಸು ಎಂದು ತಮ್ಮ ಹಿಂಬಾಲಕರಿಗೆ ಇರು ವಾಗಲೇ ತಾಕೀತು ಮಾಡಿದ್ದ ಕೆಲವರನ್ನು ಮುಖ – ಮೂತಿ ಕಾಣಿಸಿದಂತೆ (ಪಿ.ಪಿ.ಕಿಟ್) ವೇಷ ತೊಟ್ಟವರು ನಾಯಿ, ನರಿಗಳ ದೇಹಗಳನ್ನು ಎಸೆದಂತೆ, ಕುಣಿಗಳಲ್ಲಿ ಎಸೆದರು.

ಕರೋನಾವನ್ನು ಕೆಟ್ಟ ಹೆಮ್ಮಾರಿ ಎನ್ನಬೇಕೋ, ಈ ಜೀವನ, ಹಣ ಹೆಸರು, ಹಮ್ಮು, ಬಿಮ್ಮು ಶಾಶ್ವತ ಅಲ್ಲ ಎಂದು ಕಣ್ಣಾರೆ ತೋರಿಸಿದ ತತ್ತ್ವಜ್ಞಾನಿ ಎನ್ನಬೇಕೊ, ತಿಳಿಯದಂತಾಯಿತು, ಎಷ್ಟು ಗ್ರಂಥಗಳು, ಎಷ್ಟು ಶಾಸ್ತ್ರಗಳು, ಪುರಾಣಗಳು, ದಾರ್ಶನಿಕರು ಯುಗಯುಗಗಳಿಂದ ಹೇಳುತ್ತಿದ್ದರೂ ಕೇಳಿಸಿಕೊಳ್ಳದ, ಅರ್ಥಮಾಡಿಕೊಳ್ಳದ, ನಂಬದ ಲೇವಡಿ ಮಾಡುತ್ತಿದ್ದ (ಅ)ಚಾರವಂತ ರನ್ನ (ಕು) ಬುದ್ಧಿಜೀವಿಗಳನ್ನ ದಿಕ್ಕುಗೆಡಿಸಿತು, ಎಂಥ ನಾಸ್ತಿಕನಾದರೂ ಅರ್ಧ ರಾತ್ರಿ ಕತ್ತಲೆಯಲ್ಲಿ ನಡೆಯುವಾಗ ದೇವರನ್ನು ಅರ್ಧ ನಂಬುತ್ತಾನಂತೆ ಎನ್ನುವುದು ನಿಜವಾಯಿತು. ಇನ್ನೂ ಕರೋನಾ ಹೋಗಿಲ್ಲ, ಜಾನೆ ಕಹಾ ಗಯೆ ಓ ದಿನ್’ ಎಂಬ ಕರುಳು ಮಿಡಿಯುವ ಹಾಡನ್ನು ಬಾರಿ ಬಾರಿಗೆ ನೆನಪಿಸುತ್ತಿದೆ.

ಭೂಪತಿರಂಗ ಚಿತ್ರ ಪಿ.ಬಿ.ಎಸ್‌ರ ಹಾಡು ‘ಹಕ್ಕಿಯು ಹಾರುತಿದೆ ದೂರಕೆ ಹಕ್ಕಿಯು ಹಾರುತಿದೆ, ಹಗಲಿರುಳೆಂಬ ರೆಕ್ಕೆಗಳೊಡನೆ ಕಾಲದ ಹಕ್ಕಿಯು ಹಾರುತಿದೆ. ಹಾಡಿನ ಚರಣದಲ್ಲಿ ಇದಾದರೆ ಪಲ್ಲವಿಯಲ್ಲಿ ಈ ದಿನ ಇಲ್ಲೆ, ನಾಳೆ  ಅದೆಲ್ಲೋ ಅಂದಿನ ದಿನಗಳು ಇಂದೆಲ್ಲೋ, ನೆನಪನ್ನು ಮಾತ್ರ ನಮ್ಮಲಿ ಉಳಿಸಿ, ಸಾಗಿದ ಸಮಯವು ಈಗೆಲ್ಲೋ ಎಂಬ ಹಾಡು ಎಷ್ಟು ಸತ್ಯ ಎನಿಸುತ್ತಿದೆ. ಬರೆದ ಸಾಹಿತಿ ಗೀತಪ್ರಿಯ (1970)ರವರಿಗೆ ಎಂಥ ದೂರದರ್ಶಿತ್ವವಿತ್ತು, ಇಂಥ ಹೃದಯ ಮಿಡಿಯುವ ಹಾಡುಗಳನ್ನು ಬರೆಯುತ್ತಿದ್ದವರು ಇನ್ನೆೆಲ್ಲೊ, ಈಗೆಲ್ಲೋ ಎಂದು ಕೂಡಾ ಎನಿಸುತ್ತದೆ.

ಒಟ್ಟಿನಲ್ಲಿ ಕರೋನಾ ವ್ಯಾಧಿಯಾಗಿ ಬಂದಿದ್ದರೂ ಕಾಲನಂತೆ, ತತ್ತ್ವಜ್ಞಾನಿಯಂತೆ, ದಾರ್ಶನಿಕನಂತೆ ನಮ್ಮೊಳಗಿರುವ ಮಾನವೀ ಯತೆ ಯನ್ನು ಹೃದಯ ಸಂಪನ್ನತೆಯನ್ನು ಹೊರ ಹಾಕುತ್ತಿದೆ. ಇನ್ನು ಸೇನೆಯಲ್ಲಿ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಸೈನಿಕರು, ವ್ಯಾಪಾರಿಗಳು, ದಾನಿಗಳು, ಶಾಲಾ ಶಿಕ್ಷಕರು, ಸಂಘ ಸಂಸ್ಥೆಗಳು ಸಲ್ಲಿಸಿದ, ಸಲ್ಲಿಸು ತ್ತಿರುವ ಸೇವೆಗಳಿಗೆ , ನಾವು ಮತ್ತೆ ಋಣ ತೀರಿಸಲು ಹುಟ್ಟಿ ಬರಲೇ ಬೇಕೇನೋ ಎನಿಸುವಷ್ಟಿದೆ.

ಕರೋನಾಗೆ ಕರಜೋಡಿಸಿ ಹೇಳೋಣ ತಪ್ಪಾಗಿದೆ, ತಿದ್ದಿಕೊಂಡಿದ್ದೇವೆ. ನಿಲ್ಲಿಸು ನಿನ್ನ ರುದ್ರ ನರ್ತನ, ಒಂದು ಅವಕಾಶ ಕೊಡು,
ಕಣ್ಣೆದುರಿಗೇ ಬಿದ್ದು ಸತ್ತವರನ್ನು ಕಂಡರೂ ಇನ್ನು ಮುಂದೆ ನಾವು ಪಾಠ ಕಲಿಯದಿದ್ದರೇ, ಮತ್ತೊಮ್ಮೆ ಬೇಕಾದರೆ ಬಾ ಎಂದು ವಿನಂತಿಸಿ ಬಿಳ್ಕೊಡೋಣ ಎನಿಸುತ್ತಿದೆ. ಅಲ್ಲವೇ?…. ಏನೆನ್ನುತ್ತೀರಿ.