Sunday, 15th December 2024

ಲಸಿಕೆ ನಿಶ್ಯಸ್ತ್ರಗೊಳಿಸಲು ಹೋಗಿ ವಿವಸ್ತ್ರರಾದವರು

ಅಭಿವ್ಯಕ್ತಿ

ಪ್ರಕಾಶ್ ಶೇಷರಾಘವಾಚಾರ್‌

ಕರೋನಾ ಗೆಲ್ಲಲು ಇರುವ ಏಕೈಕ ಅಸ್ತ್ರವು ಕೋವಿಡ್ ಲಸಿಕೆ ಮಾತ್ರ, ಅನ್ಯ ಮಾರ್ಗವೇ ಇಲ್ಲ. ಲಸಿಕೆ ಸಿದ್ಧವಾಗಿದ್ದರೂ ಪ್ರತಿಪಕ್ಷ ಗಳು ಲಸಿಕೆ ನೀಡಲು ಆರಂಭಿಸಿದಾಗ ಭೀತಿ ಹುಟ್ಟಿಸಿದರು.

ತದನಂತರ ಲಸಿಕೆ ಖರೀದಿಸಲು ಸ್ವಾತಂತ್ರ್ಯಕ್ಕಾಗಿ ದುಂಬಾಲು ಬಿದ್ದರು ಖರೀದಿಸಲು ಕೈಲಾಗದಾಗ ನೀವೆ ಖರೀದಿಸಿ ಎಂದರು. ಈಗ ಇವರ ಪರಿಸ್ಥಿತಿಯು ಹೇಗಾಗಿದೆಯೆಂದರೆ ಲಸಿಕೆಯನ್ನು ನಿಶ್ಯಸಗೊಳಿಸಲು ಹೋಗಿ ಇವರೆ ಈಗ ವಿವಸ್ತ್ರರಾಗಿ ನಿಂತಿದ್ದಾರೆ.
ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳು ವ್ಯಾಪಕವಾಗಿ ಲಸಿಕೆಯನ್ನು ನೀಡುವ ಮೂಲಕ ಮಾಸ್ಕ್‌ರಹಿತ ಜನಜೀವನದತ್ತ ದಾಪುಗಾಲು ಹಾಕಿದೆ.

ಕೆಲವೇ ತಿಂಗಳುಗಳ ಕೆಳಗೆ ಅಮೆರಿಕ ಕರೋನಾ ಪಿಡುಗಿನಿಂದ ತತ್ತರಿಸಿ ಹೋಗಿತ್ತು. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಲಭ್ಯ ವಿದ್ದರೂ 6 ಲಕ್ಷ ಜನರ ಸಾವನ್ನು ತಡೆಯಲು ಸಾಧ್ಯವಾಗಲಿಲ್ಲ. ಐರೋಪ್ಯ ರಾಷ್ಟ್ರಗಳಲ್ಲಿ ಕರೋನಾ ಸೋಂಕಿನ ಪರಿಸ್ಥಿತಿ ಯೇನು ಭಿನ್ನವಿರಲಿಲ್ಲ. ಆದರೆ ಭಿನ್ನತೆಯು ನಮಗೂ ಮತ್ತು ಅಲ್ಲಿನವರಿಗೂ ಇದ್ದಿದ್ದೂ ಅಲ್ಲಿ ಕರೋನಾ ವಿರುದ್ಧದ
ಹೋರಾಟವು ರಾಜಕೀಯಕರಣವಾಗಲಿಲ್ಲ.

ಸೋಂಕಿನ ಸಂಕಟ ಮತ್ತು ಸಾವುಗಳು ರಾಜಕೀಯ ಮೇಲಾಟದ ಕಳಪೆ ಸರಕಾಗಿರಲಿಲ್ಲ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಪ್ರವಾಹ, ಭೂಕಂಪ ಅಥವಾ ಕರೋನಾ ಸಂಕಟವಾಗಲೀ ಎಲ್ಲವನ್ನೂ ಕೇವಲ ರಾಜಕೀಯ ಮಾನದಂಡದಲ್ಲಿ ಮಾತ್ರ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ತತ್ಪರಿಣಾಮ ಭಾರತದಲ್ಲಿ ಕರೋನಾ ಲಸಿಕೆಯು ಕೂಡಾ ರಾಜಕೀಯ ಕಾಲ್ಚೆಂಡಾ ಗಿದೆ.

ಭಾರತದ ಲಸಿಕೆಯ ಇತಿಹಾಸವನ್ನು ಕೊಂಚ ಕೆದಕಿದರೆ ದೇಶದಲ್ಲಿ ಇಂದು ನಡೆಯುತ್ತಿರುವ ಲಸಿಕೆಯ ಹಾಹಾಕಾರದ ಪೊಳ್ಳುತನ ಅರ್ಥವಾಗುತ್ತದೆ. ರೋಟಾ ವೈರಸ್ ಲಸಿಕೆ ಪ್ರಪಂಚಕ್ಕೆ ಬಂದಿದ್ದು 1998, ಭಾರತಕ್ಕೆ ದೊರೆತಿದ್ದು2015.
ಹೆಪಟೈಟಿಸ್-ಬಿ ಲಸಿಕೆ ಬಂದಿದ್ದು 1982 ಭಾರತಕ್ಕೆ ದೊರೆತಿದ್ದು 2002. ಪೋಲಿಯೊ 1955ಲ್ಲಿ ಭಾರತ ತಲುಪಲು 1978 ರವರಗೆ ಕಾಯಬೇಕಾಯಿತು.

ಕೋವಿಡ್ ಲಸಿಕೆಯು ಪ್ರಪಂಚಕ್ಕೆ ಬಂದಿದ್ದು ಡಿಸಂಬರ್ 2020 ಭಾರತಕ್ಕೆ ಬಂದಿದ್ದು ಜನವರಿ 2021. ಈ ಹಿಂದೆ ಆಗದ ಕೆಲಸ ವನ್ನು ಮೋದಿ ಸರಕಾರವು ಜನರ ಆರೋಗ್ಯದ ಕಾಳಜಿಯಿಂದ ದೇಶದಲ್ಲಿ ಕರೋನಾ ಕಾಣಿಸಿಕೊಂಡ ಕೂಡಲೇ ದೇಶೀಯ
ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡು ಯಶಸ್ವಿಯಾಯಿತು. ಪ್ರಧಾನಿಯವರು ಹೇಳಿದ ಹಾಗೆ ‘ಇಂದು ನಮ್ಮ ಬಳಿ ದೇಶೀಯ ಲಸಿಕೆಯು ಲಭ್ಯವಿಲ್ಲದಿದ್ದರೆ ಎಂಥ ಅನಾಹುತವಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.’

ದೇಶೀಯ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಅದನ್ನು ಪ್ರಶಂಸಿಸುವ ಗುಣವನ್ನು ತೋರದ ಹಲವಾರು ವಿರೋಧ ಪಕ್ಷದ ನಾಯಕರುಗಳು ಮತ್ತು ಇವರ ಪ್ರಾಯೋಜಿತ ಬುದ್ಧಿಜೀವಿಗಳು ಭಾರತದ ಲಸಿಕೆಯ ಕುರಿತು ಜನರಲ್ಲಿ ಭೀತಿ ಹುಟ್ಟಿಸಿ ಲಸಿಕೆಯ
ಕಾರ್ಯಕ್ರಮ ವಿಫಲಗೊಳಿಸಲು ನಡೆಸಿದ ಎಲ್ಲ ರೀತಿಯ ಪ್ರಯತ್ನ ಇನ್ನೂ ಹಸಿರಾಗಿಯೇ ಇದೆ. ಛತ್ತೀಸ್‌ಗಢ ಆರೋಗ್ಯ ಸಚಿವ ಟಿ.ಎಸ್.ಸಿಂಗ್ ದೇವ್ ಕೋವ್ಯಾಕ್ಸಿನ್ ಸುರಕ್ಷತೆಯ ಮಾಹಿತಿ ಲಭ್ಯವಿಲ್ಲದ ಕಾರಣ ನಮ್ಮ ರಾಜ್ಯದಲ್ಲಿ ಅದನ್ನು ಉಪಯೋಗಿ ಸುವುದಿಲ್ಲ ಎಂದು ದೇಶೀಯ ಲಸಿಕೆಯ ವಿರುದ್ಧ ಕೂಗಿ ಕೆಲವೇ ದಿನಗಳ ತರುವಾಯ ಅದೇ ಕೋವ್ಯಾಕ್ಸಿನ್ ತೆಗೆದುಕೊಂಡರು.

ಜಾರ್ಖಂಡ್ ಆರೋಗ್ಯ ಸಚಿವ ಬನ್ನಾಗುಪ್ತಾ ದೇಶದ ಜನರನ್ನು ಪ್ರಯೋಗಶಾಲೆಯ ಇಲಿಗಳನ್ನಾಗಿ ಮಾಡಬೇಡಿ ಎನ್ನುವುದಾ?
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಮೊದಲು ಪ್ರಧಾನಿ ಮತ್ತು ಕೇಂದ್ರ ಸಚಿವರು ಲಸಿಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ರಾಜ್ಯಸಭೆಯ ವಿರೋಧಪಕ್ಷದ ಉಪನಾಯಕ ಆನಂದ ಶರ್ಮಾ, ಸಂಸದ ಮನೀಶ್
ತಿವಾರಿ, ಜೈರಾಂ ರಮೇಶ್, ಶಶಿತರೂರ್ ಮತ್ತು ಡಿ.ಕೆ. ಶಿವಕುಮಾರ್ ಅವರು ಲಸಿಕೆಯ ವಿರುದ್ಧ ಜನರಲ್ಲಿ ಭೀತಿ ಹುಟ್ಟಿಸಲು ವ್ಯವಸ್ಥಿತವಾದ ಪಿತೂರಿಯನ್ನು ಕೈಗೊಂಡರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕರೋನಾ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಕರೆದು ಈಗ ಸದ್ದಿಲ್ಲದೆ ಹೋಗಿ ಲಸಿಕೆ ಪಡೆದು ನಾನು ಭಾರತದ ಲಸಿಕೆ ಪಡೆದೆ ಎಂದು ಪೆದ್ದು ಪೆದ್ದಾದ ಸಮರ್ಥನೆ ಮಾಡಿಕೊಳ್ಳುತ್ತಾರೆ. ಅನೇಕ ಕಾಂಗ್ರೆಸ್ ಮತ್ತು ಎಡಪಂಥೀಯ ಪ್ರಾಯೋಜಿತ ಅಂಕಣಕಾರರು ಮತ್ತು ಬಜಾಜ್ ಕಂಪನಿಯ ಮಾಲೀಕ ರಾಜೀವ್
ಬಜಾಜ್‌ನಂಥ ವಿದ್ಯಾವಂತರೂ ಸಹ ಲಸಿಕೆಯ ಬಗ್ಗೆ ಅನುಮಾನದ ಹುತ್ತವನ್ನು ಕಟ್ಟಿ ಆರಂಭಿಕ ಹಂತದಲ್ಲಿ ಇದರ ಸಂಪೂರ್ಣ ಯಶಸ್ಸಿಗೆ ಅಡ್ಡಗಾಲು ಹಾಕಿದರು.

ದೇಶದಲ್ಲಿ ಕರೋನಾ ಸಂಖ್ಯೆಯು ಇಳಿಮುಖವಾಗುತ್ತಿತ್ತು. ಇದರ ನಡುವೆ ಲಸಿಕೆ ಅಭಿಯಾನ ಯಶಸ್ವಿಯಾದರೆ ಸಂಪೂರ್ಣ ಶ್ರೇಯಸ್ಸು ಮೋದಿ ಸರಕಾರಕ್ಕೆ ಲಭಿಸುತ್ತದೆ ಎಂಬ ದುರಾಲೋಚನೆಯಿಂದ ಮೋದಿ ವಿರೋಧಿಗಳು ಒಂದಾಗಿ ಲಸಿಕೆಯ
ವಿರುದ್ಧ ಜನರಲ್ಲಿ ಭಯವನ್ನು ಬಿತ್ತುವ ಕುತಂತ್ರ ನಡೆಸಿದರು.

ಲಸಿಕೆ ಪಡೆದ ನಾಗರಿಕರಿಗೆ ಮೋದಿಯವರ ಚಿತ್ರವಿರುವ ಪ್ರಮಾಣ ಪತ್ರ ನೀಡಲು ಆರಂಭಿಸಿದ್ದು, ಪಾಪ ವಿರೋಧ ಪಕ್ಷದ ಮುಖಂಡರುಗಳಿಗೆ ಹೊಟ್ಟೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಿತ್ತು. ಅದೂ ಅಲ್ಲದೆ ಲಸಿಕೆ ಖರೀದಿಯಲ್ಲಿ ತಮ್ಮ ಪಾತ್ರ ವಿಲ್ಲದೆ ಉಂಟಾಗುವ ಆರ್ಥಿಕ ನಷ್ಟದಿಂದ ಚಿಂತಿತರಾಗಿ ರಾಜ್ಯಗಳಿಗೆ ಲಸಿಕೆ ಖರೀದಿಸಲು ಸ್ವಾತಂತ್ರ್ಯ ನೀಡಬೇಕು ಎಂಬುದು ಇವರ ಒತ್ತಾಯದ ಹಿಂದಿನ ಮರ್ಮವಾಗಿತ್ತು.

ಏಪ್ರಿಲ್ 9ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಲಸಿಕೆ ಖರೀದಿ ಮತ್ತು ವಿತರಣೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತಾರೆ. ಆನಂದ ಶರ್ಮಾರವರು ಆರೋಗ್ಯ ರಾಜ್ಯದ ಜವಾಬ್ದಾರಿ ರಾಜ್ಯ ಸರಕಾರದ್ದು. ಆದ್ದರಿಂದ ಲಸಿಕೆ ಖರೀದಿಗೆ ಅವರಿಗೇ ಅವಕಾಶ ಕೊಡಬೇಕು ಎನ್ನುತ್ತಾರೆ.

ಫೆಬ್ರವರಿ 24 ಮತ್ತು ಏಪ್ರಿಲ್ 8 ರಂದು ಮಮತಾ ಬ್ಯಾನರ್ಜಿ ಕೇಂದ್ರ ಸರಕಾರಕ್ಕೆ ಪತ್ರ ಮುಖೇನ ರಾಜ್ಯದ ಸಂಪನ್ಮೂಲದಲ್ಲಿ ಲಸಿಕೆ ಖರೀದಿಗೆ ಅನುಮತಿ ಕೋರುತ್ತಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಮಾರ್ಚ್ 18ರಂದು ಲಸಿಕೆ ಖರೀದಿಗೆ ರಾಜ್ಯ ಸರಕಾರಕ್ಕೆ ಅನುಮತಿ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಒಂದು ಡೋಸ್ ಲಸಿಕೆ ಖರೀದಿ ಮಾಡುವ ಮುನ್ನವೇ ರಾಜ್ಯದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಘೋಷಿಸುತ್ತಾರೆ.

ಕೇಜ್ರಿವಾಲ್ ಮತ್ತು ಉದ್ದವ್ ಠಾಕ್ರೆಯವರು ಮೂರು ತಿಂಗಳಿನಲ್ಲಿ ಲಸಿಕೆ ನೀಡುವ ಆಶ್ವಾಸನೆ ನೀಡಿ ಮೇ ನಿಂದ ಜೂನ್ ವರೆಗೂ ಕೇವಲ ಲಸಿಕೆ ಕಂಪನಿಗಳೊಂದಿಗೆ ಪತ್ರ ವ್ಯವಹಾರದಲ್ಲಿ ಮುಳುಗಿರುತ್ತಾರೆ. ರಾಜ್ಯ ಸರಕಾರಗಳು ಲಸಿಕೆ ಖರೀದಿಸಲು ನಮಗೆ
ಸ್ವಾತಂತ್ರ್ಯ ನೀಡಿ ಎಂದು ಕೇಳುವುದು ತಪ್ಪಲ್ಲ. ಆದರೆ ಕರೋನಾ ಇಡೀ ವಿಶ್ವದಲ್ಲಿ ಹರಡಿ ಎಲ್ಲೆಡೆ ಲಸಿಕೆಗಾಗಿ ಬೇಡಿಕೆ ಇರುವ ಸಂದರ್ಭದಲ್ಲಿ ಏಕಾಂಗಿಯಾಗಿ ಅಗತ್ಯವಿರುವ ಲಸಿಕೆ ಖರೀದಿಸಲು ಸಾಧ್ಯವಾ ಎಂಬುದನ್ನು ವಿಚಾರ ಮಾಡದೇ ನಾವೇ
ಖರೀದಿಸುತ್ತೇವೆ ಎಂದು ಕೇಳಿದ್ದು ಸರಿಯಲ್ಲ.

ಪ್ರಪಂಚದಲ್ಲಿ ಲಸಿಕೆಯು ಲಭ್ಯವಿರುವುದು ಅಮೆರಿಕ, ರಷ್ಯ, ಇಂಗ್ಲೆಂಡ್ ಮತ್ತು ಭಾರತದಲ್ಲಿ ಮಾತ್ರ. ಇದು ತಿಳಿದೂ ರಾಜ್ಯ ಸರಕಾರಗಳು ಗ್ಲೋಬಲ್ ಟೆಂಡರ್ ಕರೆಯುತ್ತಾರೆ. ಸಾಧಕ ಬಾಧಕಗಳನ್ನು ಅಧ್ಯಯನ ಮಾಡದೆ ನಮ್ಮ ರಾಜ್ಯವೂ ತಾವೇಕೆ ಹಿಂದೆ ಬೀಳಬೇಕು ಎಂದು ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಘೋಷಿಸುತ್ತಾರೆ.

ಅಮೆರಿಕ ಮೂಲದ ಲಸಿಕೆ ಕಂಪನಿಗಳು ತಾವು ಕೇವಲ ಭಾರತ ಸರಕಾರದೊಂದಿಗೆ ಮಾತ್ರ ವ್ಯವಹರಿಸುವುದು ಎಂದು ರಾಜ್ಯ ಸರಕಾರಗಳಿಗೆ ಕಡ್ಡಿ ತುಂಡು ಮಾಡಿದಂತೆ ತಿಳಿಸಿ ತಮ್ಮ ಬಾಗಿಲು ಬಂದ್ ಮಾಡಿ ರಾಜ್ಯಸರಕಾರಗಳ ಇತಿ ಮಿತಿಗೆ ಕನ್ನಡಿ
ಹಿಡಿದರು. ಕರೋನಾ, ಭಾರತದಲ್ಲಿ ಎರಡನೆಯ ಅಲೆಯ ರೂಪದಲ್ಲಿ ತನ್ನ ರುದ್ರ ನರ್ತನವನ್ನು ಆರಂಭಿಸಿದಾಗ ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಪ್ರಯತ್ನಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕಿತ್ತು.

ಕೇಂದ್ರ ಸರಕಾರವೂ ಅಗತ್ಯದಷ್ಟು ಲಸಿಕೆಯನ್ನು ಪೂರೈಸಲು ಪರದಾಡುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಜನರ ಹಿತಾಸಕ್ತಿಗೆ ಆದ್ಯತೆ ನೀಡದೇ ಸ್ವಾರ್ಥ ರಾಜಕೀಯವನ್ನು ಮಾಡಲು ಹೋಗಿ ಮುಖಭಂಗಿತರಾಗಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಲಸಿಕೆ ಖರೀದಿಗೆ ಸ್ವಾತಂತ್ರ್ಯ ನೀಡಿ ಎಂದು ಬೊಬ್ಬೆ ಹೊಡೆಯುತ್ತಿದ್ದವರು ತಮ್ಮ ನಿಲುವಿನಿಂದ ಉಲ್ಟಾ ಹೊಡೆದು ತಮ್ಮ ಗೌರವವನ್ನು ಮಣ್ಣುಪಾಲು ಮಾಡಿಕೊಂಡಿದ್ದಾರೆ.

ಜೂನ್ ರಂದು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿ, ಜೂ 21ರಿಂದ 18ರಿಂದ 45 ವಯೋಮಾನ ದವರಿಗೂ ಕೇಂದ್ರ ಸರಕಾರ ಉಚಿತವಾಗಿ ಲಸಿಕೆಯನ್ನು ನೀಡುತ್ತದೆ ಎಂದು ಘೋಷಿಸಿದರು. ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಜಾಣ್ಮೆಯಿಂದ ಬಿಜೆಪಿಯೇತರ ರಾಜ್ಯ ಸರಕಾರಗಳು ಲಸಿಕೆ ಖರೀದಿಯಲ್ಲಿ ವಿಫಲವಾದ ಬಗ್ಗೆ ಸೂಚ್ಯವಾಗಿ ತಿಳಿಸಿ ಇವರ ಅದಕ್ಷತೆ ಮತ್ತು ದೂರದೃಷ್ಟಿಯ ಕೊರತೆಯನ್ನು ಚನ್ನಾಗಿಯೇ ಜನರ ಮುಂದೆ ತೆರದಿಟ್ಟರು.

ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲ್ಲವೇ? ಲಸಿಕೆ ಖರೀದಿಯಲ್ಲಿ ಇವರ ವೈಫಲ್ಯ ಬಯಲಾದರೂ ಸುಪ್ರೀಂಕೋರ್ಟ್ ಚಾಟಿ ಬೀಸಿದ ಕಾರಣ ಬದಲಾಗಿದ್ದು ಎಂದು ಒಂದು ವರ್ಗ ಹೇಳಿದರೆ ತಮ್ಮ ಒತ್ತಡಕ್ಕೆ ಕೇಂದ್ರದ ನಿಲುವು ಬದಲಾಯಿತು ಎಂದು
ವಿರೋಧಪಕ್ಷಗಳು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.

ಸುಪ್ರಿಂಕೋರ್ಟಿನಲ್ಲಿ ಜಸ್ಟೀಸ್ ಚಂದ್ರಚೂಡ್ ಅವರು ಕೇಂದ್ರ ಸರಕಾರದ ಮೂರು ಹಂತದ ಲಸಿಕೆ ನೀತಿಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಕೇಂದ್ರ ಸರಕಾರದ ನೀತಿಯನ್ನು ನಿರ್ಣಯಿಸುವ ವಿಚಾರ ಕೋರ್ಟ್ ವ್ಯಾಪ್ತಿಗೆ ಬಾರದಿರುವ ಕಾರಣ ಕೇವಲ
ಸ್ಪಷ್ಟನೆ ಕೋರಿ 15 ದಿನಗಳ ಕಾಲಾವಕಾಶವನ್ನು ನೀಡಿ ಪ್ರಕರಣವನ್ನು ಮುಂದೆ ಹಾಕಿದ್ದರು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹಲವಾರು ಪ್ರಶ್ನೆಗಳನ್ನು ಮತ್ತು ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿರುವರು ಆದರೆ ಅದ್ಯಾವುದೂ ತೀರ್ಪಲ್ಲ. ನರೇಂದ್ರ ಮೋದಿಯವರ ರಾಜಕೀಯ ಚಾಣಾಕ್ಷ ತನದ ಮುಂದೆ ತಮ್ಮ ಪಟ್ಟುಗಳು ಕೆಲಸಕ್ಕೆ  ಬರುವುದಿಲ್ಲ ಎಂದು ಪದೇ ಪದೆ ಸಾಬೀತಾಗಿದ್ದರೂ ವಿರೋಧ ಪಕ್ಷಗಳು ಮತ್ತೆ ಮತ್ತೆ ಅವರನ್ನು ಮುಜುಗರಕ್ಕೆ ಸಿಲುಕಿಸಲು ಪ್ರಯತ್ನಿಸಿ ತಮ್ಮ ವರ್ಚಸ್ಸಿಗೇ ಧಕ್ಕೆ ತಂದು ಕೊಳ್ಳುತ್ತಿದ್ದಾರೆ.