Sunday, 15th December 2024

ಪ್ರಧಾನಿ ಪಟ್ಟದಲ್ಲಿ ಕುಳಿತಾಗ ತಂದೆಯಾಗುವ ಯೋಗ ಯಾರಿಗಿದೆ ?

– ವಿಶ್ವೇಶ್ವರ ಭಟ್

ಇಡೀ ಬ್ರಿಟನ್ ಕರೋನಾವೈರಸ್ ನಿಂದ ತತ್ತರಿಸಿ, ಸುಮಾರು ಇಪ್ಪತ್ತೆಂಟು ಸಾವಿರ ಮಂದಿ ಸತ್ತು, ಸ್ವತಃ ಪ್ರಧಾನಿಗೆ ಸೋಂಕು ತಗುಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿ, ಅವರು ಕೊನೆಗೆ ಗುಣಮುಖರಾಗಿ ಹೊರ ಬಂದರಷ್ಟೇ. ಆಸ್ಪತ್ರೆಯಿಂದ ಹೊರ ಬಂದ ಹತ್ತು ದಿನಗಳಲ್ಲಿ ಪ್ರಧಾನಿ ಅವರಿಗೆ ಸಂತಸದ ಸುದ್ದಿ ಕಾದಿತ್ತು. ಪ್ರಧಾನಿ ಬೋರಿಸ್ ಜಾನ್ಸನ್ ಪತ್ನಿ ಕೇರಿ ಸಿಮಂಡ್ಸ್ ಗಂಡು ಮಗುವಿಗೆ ಜನ್ಮ ನೀಡಿದಳು. z

ಬ್ರಿಟನ್ ಪ್ರಧಾನಿಯಾಗಿದ್ದಾಗ ತಂದೆಯಾದವರಲ್ಲಿ ಜಾನ್ಸನ್ ಅವರೇ ಮೊದಲಿಗರೇನಲ್ಲ. ಇದಕ್ಕಿಂತ ಮೊದಲು ಡೇವಿಡ್ ಕೆಮರೂನ್, ಟೋನಿ ಬ್ಲೇರ್ ಮತ್ತು ಲಾರ್ಡ್ ಜಾನ್ ರಸ್ಸೆಲ್ ಸಹ ತಂದೆಯಾಗಿದ್ದರು.

ಪ್ರಧಾನಿ ಅಧಿಕಾರದಲ್ಲಿದ್ದಾಗ ಮಕ್ಕಳಾದರೆ, ಕನಿಷ್ಠ ಒಂದು ವಾರ ಅಥವಾ ಗರಿಷ್ಠ ಎರಡು ವಾರ ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕು. ನವಜಾತ ಶಿಶುವಿನ ಆರೈಕೆಯಲ್ಲಿ ಪತ್ನಿಗೆ ನೆರವಾಗಬೇಕು. ಮಗುವನ್ನು ಹುಟ್ಟಿಸಿ ಅದರ ಲಾಲನೆ – ಪಾಲನೆ ಕೆಲಸವನ್ನು ಹೆಂಡತಿಗೆ ವಹಿಸಿ ಗಂಡ ಸುಮ್ಮನಾಗುವಂತಿಲ್ಲ. ಅದರಲ್ಲೂ ದೇಶದ ಪ್ರಧಾನಿ ಕಡ್ಡಾಯವಾಗಿ Paternity Leave (ಪಿತೃತ್ವ ರಜಾ) ತೆಗೆದುಕೊಳ್ಳಲೇಬೇಕು.

ಇಂಥ ವಿಷಯಗಳಲ್ಲೂ ಪ್ರಧಾನಿಯಾದವರು ಉಳಿದವರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕು ಎಂದು ಬ್ರಿಟಿಷರು ಬಯಸುತ್ತಾರೆ. ಆದರೆ ದೇಶಾದ್ಯಂತ ಕರೋನಾವೈರಸ್ ಹರಡಿ, ದೇಶಾದ್ಯಂತ ಲಾಕ್ ಡೌನ್ ಇರುವುದರಿಂದ ಮುಂದಿನ ತಿಂಗಳು ಪಿತೃತ್ವ ರಜೆಯನ್ನು ತೆಗೆದುಕೊಳ್ಳುವುದಾಗಿ ಜಾನ್ಸನ್ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಪ್ರಧಾನಿಯಾಗುವವರು ಆ ಸ್ಥಾನಕ್ಕೆ ಬರುವ ಹೊತ್ತಿಗೆ, ತಂದೆಯಾಗುವ ಸಾಮರ್ಥ್ಯ ಮೀರಿರುತ್ತಾರೆ. ಆ ಪದವಿಯಲ್ಲಿದ್ದಾಗ, ಇಲ್ಲಿಯವರೆಗೆ ಯಾರೂ ತಂದೆಯಾಗಿಲ್ಲ. ಒಂದು ವೇಳೆ ಅವರು ತಂದೆಯಾದರೆ, ನಮ್ಮ ಜನರ ಪ್ರತಿಕ್ರಿಯೆ ಹೇಗಿರಬಹುದು ?

‘ನಮ್ಮ ಪ್ರಧಾನಿಗೆ ರೈತರ ಬಗ್ಗೆ, ಬಡವರ ಬಗ್ಗೆ ಯೋಚಿಸಲು ಸಮಯವಿಲ್ಲ. ಪ್ರಧಾನಿ ಸ್ಥಾನಕ್ಕೆ ಬಂದು ವೈಯಕ್ತಿಕ ಭೋಗದಲ್ಲಿ ನಿರತರಾಗಿದ್ದಾರೆ. ನಮ್ಮ ಪ್ರಧಾನಿಗೆ ಮಕ್ಕಳು ಮಾಡಲು ಸಮಯ ಸಿಗುತ್ತದೆ, ಬಡವರ ಬಗ್ಗೆ ಚಿಂತಿಸಲು ಸಮಯ ಸಿಗದಿರುವುದು ದುರ್ದೈವ. ಇಂಥ ಪ್ರಧಾನಿ ಅಧಿಕಾರದಲ್ಲಿ ಇರುವ ಬದಲು, ರಾಜೀನಾಮೆ ಕೊಟ್ಟು, ಅದೇ ಕೆಲಸ (ಮಕ್ಕಳು ಮಾಡುವ )ಮುಂದುವರಿಸಲಿ. ಸಾರ್ವಜನಿಕರ ತೆರಿಗೆ ಹಣದಲ್ಲಿ ಈ ರೀತಿ ಮಜಾ ಮಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂಥ ಬೇಜವಾಬ್ದಾರಿ ಪ್ರಧಾನಿ ರಾಜೀನಾಮೆ ನೀಡಲಿ’ ಎಂದು ಪ್ರತಿಪಕ್ಷದ ನಾಯಕರು ಆಗ್ರಹಿಸಬಹುದು.

ಅದೇ ದಿನ ರಾತ್ರಿ ದೇಶದ ಎಲ್ಲಾ ಟಿವಿ ಚಾನೆಲ್ಲುಗಳಲ್ಲಿ ಬಿಸಿಬಿಸಿ ಚರ್ಚೆ. ಪ್ರಧಾನಿ ತಂದೆಯಾದ ಬಗ್ಗೆ ಪರ-ವಿರೋಧ ಡಿಬೇಟ್. ಅರ್ನಾಬ್ ಗೋಸ್ವಾಮಿ, ‘ಪ್ರಧಾನಿಯವರು ಈ ರೀತಿ ಕರ್ತವ್ಯ ಮರೆತು ವೈಯಕ್ತಿಕ ವಾಂಛೆಯಲ್ಲಿ ನಿರತರಾಗಬಹುದಾ? ಪ್ರಧಾನಿಯವರ ಮುಂದೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಅವೆಲ್ಲವನ್ನೂ ಮರೆತು ಅವರು ತಮ್ಮ ಗಮನವನ್ನು ಬೇರೆಡೆ ಹರಿಸಿದ್ದು, ಮಕ್ಕಳು ಮಾಡುವುದರಲ್ಲಿ ತಲ್ಲೀನರಾಗಿದ್ದು ನಾಚಿಕೆಗೇಡು. Nation Wants To Know … ’ಎಂದು ಬೊಬ್ಬಿರಿಯಬಹುದು.

ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಪ್ರಧಾನಿಯವರೇನಾದರೂ ತಂದೆಯಾದರೆ, ಪ್ರತಿಪಕ್ಷಗಳ ಸದಸ್ಯರು ವಿಶೇಷ ಚರ್ಚೆಗೆ ಆಗ್ರಹಿಸಬಹುದು. ಪ್ರಧಾನಿಯವರು ಹೇಳಿಕೆ ನೀಡಬೇಕೆಂದು ಒತ್ತಾಯಿಸಬಹುದು. ಕೆಲವರು ಪೋಲಿ ಪೋಲಿ ಕಾಮೆಂಟ್ ಮಾಡಿ ಕಿಚಾಯಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಎರಡು ದಿನ ಇದೆ ಚರ್ಚೆ. ಇದೇ ಟ್ರೋಲ್. ಪ್ರಧಾನಿಗೆ ಯಾಕಾದರೂ ತಂದೆ ಆದೆ ಎಂದೆನಿಸಿಬಿಡಬೇಕು, ಆ ರೀತಿಯ ವಾತಾವರಣ ಸೃಷ್ಟಿಸುವುದು ಮಾತ್ರ ನಿಶ್ಚಿತ.

ಈ ಕಾರಣದಿಂದ ವಯಸ್ಸಾದ, ಗೃಹಸ್ಥಾಶ್ರಮದಿಂದ ದೂರವಾದ, ಒಳಗೊಳಗೆ ಆಸಕ್ತಿಯಿದ್ದರೂ ಕೈಲಾಗದವರನ್ನೇ ನಾವು ಪ್ರಧಾನಿ ಹುದ್ದೆಗೆ ಆರಿಸೋದು. ರಾಜೀವ ಗಾಂಧಿಯವರನ್ನು ಬಿಟ್ಟರೆ, ಉಳಿದವರೆಲ್ಲ ಅರವತ್ತೈದರ ನಂತರ ಪ್ರಧಾನಿಯಾದವರೇ. ಅದರಲ್ಲೂ ವಾಜಪೇಯಿ ಮತ್ತು ಮೋದಿ ಅವಿವಾಹಿತರು.

ನಲವತ್ತು – ಐವತ್ತು ವರ್ಷದವರು ಆ ಸ್ಥಾನಕ್ಕೆ ಬರುವುದು ಕಷ್ಟ. ಒಂದು ವೇಳೆ ರಾಹುಲ ಗಾಂಧಿಯವರು ಬಂದರೂ, ಅವರೂ ಅವಿವಾಹಿತರು. ಹೀಗಾಗಿ ಪ್ರಧಾನಿ ಪಟ್ಟದಲ್ಲಿದ್ದಾಗ ಸಂತಾನ ಭಾಗ್ಯ ಅಥವಾ ತಂದೆಯಾಗುವ ಭಾಗ್ಯ ಯಾರ ಹಣೆಯಲ್ಲೂ ಬರೆದಿಲ್ಲ ಎಂದೆನಿಸುತ್ತದೆ. ಪ್ರಧಾನಿಯಾದವರಿಗೆ ಈ ಭಾಗ್ಯ ಸದ್ಯದ ಭವಿಷ್ಯದಲ್ಲಿ ಸಾಧ್ಯವಿಲ್ಲ ಎಂದೆನಿಸಬಹುದು. ಹಾಗಾದರೆ ಮುಖ್ಯಮಂತ್ರಿಯವರಿಗಾದರೂ ಇದೆಯಾ ? ಅದೂ ಡೌಟು. ಅಧಿಕಾರದಲ್ಲಿದ್ದಾಗ ತಂದೆಯಾಗುವುದನ್ನು ಮಾತ್ರ ನಾವು ಸಹಿಸುವುದಿಲ್ಲ . ಹೀಗಾಗಿ ಈ ವಿಷಯದಲ್ಲಿ ಯಾರೂ ದುಸ್ಸಾಹಸಕ್ಕೆ ಮುಂದಾಗಿಲ್ಲ. ಈ ವಿಷಯದಲ್ಲಿ ನಾವು ಬ್ರಿಟಿಷರಿಂದ ಕಲಿತುಕೊಳ್ಳುವುದು ಸಾಕಷ್ಟು ಇದೆ ಎಂದು ಅನಿಸುವುದಿಲ್ಲವೇ ?