Thursday, 12th December 2024

ತಪ್ಪನ್ನು ಸರಿಪಡಿಸಿ

ಪ್ರತಿಸ್ಪಂದನ

ಶಂಕರನಾರಾಯಣ ಭಟ್

ಹಲವು ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕವಾಗಿರುವ ಸುದ್ದಿ ಪ್ರಕಟಗೊಂಡಿದೆ. ಇದರಲ್ಲಿ ಅತಿಹೆಚ್ಚು ಗಮನ ಸೆಳೆದಿದ್ದು ಯಕ್ಷಗಾನ ಅಕಾಡೆಮಿಗೆ ಆಗಿರುವ ಆಯ್ಕೆಗಳು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಈಗ ಪ್ರಕಟಗೊಂಡಿರುವ ವರದಿಯ ಪ್ರಕಾರ, ಅಕಾಡೆಮಿಯ ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರೂ ಉಡುಪಿ ಮತ್ತು ದಕ್ಷಿಣ ಕನ್ನಡವರೇ ಇರುವುದು. ಇದರರ್ಥ, ನಮ್ಮಂಥ ಉತ್ತರ ಕನ್ನಡವರಿಗೆ ಅಸೂಯೆಯೆಂದೋ ಅಥವಾ ಇನ್ನೇನೋ ಅಂತಲೋ ತಿಳಿಯುವ ಅವಶ್ಯಕತೆ ಇಲ್ಲ.

ನಿಕಟಪೂರ್ವ ಅಧ್ಯಕ್ಷರು ಉತ್ತರ ಕನ್ನಡದವರೇ ಆಗಿದ್ದರು, ಹೀಗಾಗಿ ಈ ಬಾರಿಯ ಅಧ್ಯಕ್ಷಗಿರಿ ದಕ್ಷಿಣ ಕನ್ನಡದ ತೆಕ್ಕೆಗೆ ಸೇರಿದೆ ಅಂದುಕೊಂಡರೂ, ಉತ್ತರ ಕನ್ನಡದ ಒಬ್ಬರಾದರೂ ಸದಸ್ಯರು ಇರಬೇಕಿತ್ತಲ್ಲವೇ? ಆದರೆ ಹಾಗಾಗಿಲ್ಲ. ಇದನ್ನು ದುರಂತ ಅನ್ನಬೇಕೋ ಅಥವಾ ಇಂಥ ಅಕಾಡೆಮಿಗಳೂ ಸರಕಾರದ ಹಿಡಿತದಲ್ಲೇ ಇದ್ದು ತಮಗೆ ಬೇಕು ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು ಅನ್ನಬೇಕೋ? ಅಲ್ಲ ಅಂದರೆ, ಉತ್ತರ ಕನ್ನಡದಲ್ಲಿ ಯಕ್ಷಗಾನ ಎಷ್ಟೊಂದು ಪ್ರಚಲಿತದಲ್ಲಿದೆ ಮತ್ತು ಅಷ್ಟೇ ಉತ್ತುಂಗ ಸ್ಥಿತಿಯಲ್ಲಿದೆ.

ಇಲ್ಲಿ ಹಲವಾರು ಯಕ್ಷಗಾನ ಕಲಾವಿದರು, ಹಿಮ್ಮೇಳದವರು, ತಜ್ಞರು, ವಿಮರ್ಶಕರು, ಪ್ರೋತ್ಸಾಹಕರು ಇದ್ದಾರೆ. ಉದಾಹರಣೆಗೆ, ಉತ್ತರ ಕನ್ನಡದ ಯಕ್ಷಗಾನದ ಮೇರು ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ‘ಪದ್ಮಶ್ರೀ’ ಪುರಸ್ಕೃತರು. ಇದೇ ಭಾಗದ ಶಿವರಾಮ ಹೆಗಡೆ, ಶಂಭು ಹೆಗಡೆ,
ದೇವರ ಹೆಗಡೆ, ರಾಮಚಂದ್ರ ಹೆಗಡೆ ಕೊಂಡದಕುಳಿ ಹೀಗೆ ನೂರಾರು ಕಲಾವಿದರ ನಾಡು ಈ ಉತ್ತರ ಕನ್ನಡ. ಅಷ್ಟೇ ಏಕೆ, ಕಡತೋಕಾ ಮಂಜುನಾಥ, ಕೃಷ್ಣ, ಜೋಗಿ, ಉಮೇಶ್ ಭಟ್ ಬಾಡ ಹೀಗೆ ಹಲವು ಸುಪ್ರಸಿದ್ಧ ಭಾಗವತರು, ಒಳ್ಳೊಳ್ಳೆಯ ಮೃದಂಗ/ ಚಂಡೆ ವಾದಕರು ಉತ್ತರ ಕನ್ನಡದಲ್ಲಿದ್ದಾರೆ.

ಯಕ್ಷಗಾನದ ಕುರಿತಾಗಿ ಮಹಾಪ್ರಬಂಧ ಬರೆದು ಡಾಕ್ಟರೇಟ್ ಪಡೆದ ಡಾ.ಜಿ.ಎಲ್.ಹೆಗಡೆ, ಡಾ.ಜಿ.ಕೆ.ಹೆಗಡೆಯವರಿದ್ದಾರೆ. ಇನ್ನು ಯಕ್ಷಗಾನದ ಪೋಷಕರ
ಸಂಖ್ಯೆಯಂತೂ ಎಣಿಸಲಾಗದಷ್ಟು ಇದೆ. ಚಿಕ್ಕಮಕ್ಕಳ, ಮಹಿಳೆಯರ ಯಕ್ಷಗಾನ ಮಂಡಳಿಗಳೂ ಒಳ್ಳೆಯ ಕೆಲಸ ಮಾಡುತ್ತಲೇ ಇವೆ. ಒಟ್ಟಾರೆ ಹೇಳುವು ದಾದರೆ, ಉತ್ತರ ಕನ್ನಡವು ಯಕ್ಷಗಾನದ ಬಹುದೊಡ್ಡ ವೇದಿಕೆ ಅಥವಾ ರಂಗಸ್ಥಳ! ಇಷ್ಟೆಲ್ಲ ಇದ್ದೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯಲ್ಲಿ ಅದಕ್ಕೆ ಒಬ್ಬ ಸದಸ್ಯರನ್ನೂ ಹೊಂದುವ ಯೋಗ್ಯತೆ ಇಲ್ಲದಾಯಿತೇ? ಇದನ್ನು ಕಲಾಕ್ಷೇತ್ರದ ಅಣಕು ಎನ್ನಬೇಕೋ ಅಥವಾ ಅನ್ಯಾಯ ಅನ್ನಬೇಕೋ? ಅಷ್ಟಕ್ಕೂ, ಈ ಆಯ್ಕೆಗೆ ಮಾನದಂಡವಾದರೂ ಏನಿದ್ದಿರಬಹುದು? ಇದೊಂಥರಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ, ಯಾರ‍್ಯಾರಿಗೆ
ಯಾರ‍್ಯಾರು ಇಷ್ಟವೋ ಅವರನ್ನೇ ಹೆಸರಿಸುವುದು!

ಯಕ್ಷಗಾನ ಒಂದು ಕಲೆ; ಇಲ್ಲಿ ಯಾವುದೇ ಭಾಷೆ, ಪ್ರಾಂತ, ಜಾತಿ, ಧರ್ಮ ಕೆಲಸಕ್ಕೆ ಬಾರದು ಮತ್ತು ಅವು ಅಂಥ ಮಾನದಂಡವೂ ಆಗಬಾರದು. ಈ  ಕಲೆಯಲ್ಲಿ ತೊಡಗಿಸಿಕೊಂಡವರಿಗೆ ನೀಡುವ ಗೌರವ, ಮಾನ್ಯತೆಯಿಂದಾಗಿ ಅವರು ಉತ್ತೇಜಿತರಾಗುವುದುಂಟು. ಕಲೆಯನ್ನು ಇನ್ನೂ ಹೆಚ್ಚು ಬೆಳೆಸು ವಲ್ಲಿ ಇಂಥವರ ಕೊಡುಗೆ ಇರಲೇ ಬೇಕು. ಇಲ್ಲವಾದಲ್ಲಿ ಯಕ್ಷಗಾನ ಕಲೆಯೇ ನಶಿಸಿಹೋದೀತು. ಸಂಬಂಧಪಟ್ಟವರು ಕೂಡಲೇ ಮಧ್ಯ ಪ್ರವೇಶಿಸಿ, ಈಗ ಆಗಿರುವ ತಪ್ಪನ್ನು ಸರಿಪಡಿಸುವಂತಾಗಲಿ. ಇಲ್ಲವಾದಲ್ಲಿ, ಉತ್ತರ ಕನ್ನಡದ ಯಕ್ಷಗಾನ ಬಳಗ ಇದರ ವಿರುದ್ಧ ಹೋರಾಟ ಮಾಡಬೇಕಾದ
ಅನಿವಾರ್ಯ ಎದುರಾದೀತು!

(ಲೇಖಕರು ಹವ್ಯಾಸಿ ಬರಹಗಾರರು)