Friday, 13th December 2024

ಭಾರತಕ್ಕಂಟಿ ಹಬ್ಬಿರುವ ದುರಾಚಾರ-ಭ್ರಷ್ಟಾಚಾರ

ಅಭಿವ್ಯಕ್ತಿ

ಹೃತಿಕ್ ಕುಲಕರ್ಣಿ

hritikulkrni@gmail.com

ಒಂದು ರಾಷ್ಟ್ರದ ಔನ್ನತ್ಯ ಸಾಧನೆಗೆ ಅನೇಕ ಅಡ್ಡಿಗಳುಂಟು. ಅವುಗಳಲ್ಲಿ ಪ್ರಧಾನವಾದ ಹಲವನ್ನು ಹೀಗೆ ಹೆಸರಿಸಬಹುದು: ಅಸ್ಥಿರ ಶಿಕ್ಷಣ ವ್ಯವಸ್ಥೆ, ರಾಜಕೀಯ ಅತಂತ್ರತೆ, ನೆಲದ ಸಂಸ್ಕೃತಿಯ ನಿರ್ಲಕ್ಷ್ಯತೆ, ಉದ್ಯೋಗ ಉತ್ಪಾದನೆಯ ಇಳಿತ, ಹೆಚ್ಚಿದ ಅಪರಾಧ, ಕಡೆಗಣಿಸಲ್ಪಟ್ಟ ಕೃಷಿ ಕ್ಷೇತ್ರ, ಹಿಂದುಳಿದ ತಂತ್ರಜ್ಞಾನ, ಸೇನಾ ದೌರ್ಬಲ್ಯ.

ಬರೆಯುತ್ತಾ ಹೋದರೆ ಇನ್ನೂ ಇವೆ. ವಿಚಾರ ವಿಮರ್ಶೆಗೆ ಮನಸ್ಸು ಮುಂದಾದರೆ ರಾಷ್ಟ್ರ ಸಾಧನೆಗೆ ಆತಂಕವಾಗಿರುವ ಈ ಸಮಸ್ಯೆಗಳ ಮೂಲಕಾರಣ ಗೋಚರವಾಗುತ್ತದೆ. ಅದೇ ‘ಭ್ರಷ್ಟಾಚಾರ’. ಉದಾಹರಣೆಗೆ ಒಂದು ಮರವನ್ನು ತೆಗೆದು ಕೊಳ್ಳೊಣ. ಆ ಮರಕ್ಕೆ ರೋಗ ತಗುಲಿದೆ. ಎಷ್ಟೇ ಉಪಚಾರಗಳ ಪರ್ಯಂತು ಅದು ಪುನಃ ಚೇತರಿಸಿಕೊಳ್ಳಲೇ ಇಲ್ಲ. ರೆಂಬೆ ಕೊಂಬೆಗಳ ಕಟಾವು ಮಾಡಿದರೆ ಮರ ಚೇತರಿಸಿಕೊಳ್ಳುತ್ತದೆ ಎಂಬ ಸಲಹೆ ಮೇರೆಗೆ ಹಾಗೇ ಮಾಡಿಸಿದ ತೋಟದ ಯಜಮಾನ. ಪ್ರಯೋಜನ ವಾಗಲಿಲ್ಲ.

ಕ್ರಮೇಣ ರೋಗ ಹತ್ತಿರದ ಎಲ್ಲ ಮರಗಿಡಗಳಿಗೂ ಹಬ್ಬಿ ಅವೂ ರುಗ್ಣಾವಸ್ಥವಾದವು. ಆಗ ಯಜಮಾನ ಅಲ್ಲಲ್ಲಿ ವಿಚಾರಿಸಿ ಅಷ್ಟಿಷ್ಟು ಅಧ್ಯಯನ ಮಾಡಿ ಎಲ್ಲ ರೋಗಪೀಡಿತ ಮರಗಿಡಗಳನ್ನು ಆಗ್ಗಿಂದಾಗ್ಗೇ ಬೇರು ಸಹಿತ ಕಿತ್ತು ತೋಟವನ್ನು ಉಳಿಸಿ ಕೊಂಡ. ಆ ತೋಟವೇ ರಾಷ್ಟ್ರ. ರೋಗ ರೆಂಬೆಕೊಂಬೆಗಳಲ್ಲಿದೆ ಎಂಬ ಭ್ರಾಂತೇ ಈಗ ನಮಗಿರುವ ಭ್ರಾಂತು- ರಾಷ್ಟ್ರದ
ಉದ್ಧಾರ ಪ್ರಾರಂಭದಲ್ಲಿ ಹೆಸರಿಸಿದ ಪ್ರಮುಖ ಸಮಸ್ಯೆಗಳ ಮೂಲೋತ್ಪಾಟನೆಯಲ್ಲಿದೆ ಎಂಬುದು.

ಆದರೆ ತೋಟದ ಯಜಮಾನ ಅಧ್ಯಯನ ಅಲೋಚನೆಯಿಂದ ಕಂಡುಕೊಂಡ ಸತ್ಯವೆಂದರೆ ರೋಗ ಬೇರಿನಲ್ಲಿದೆ ಎಂದು.
ಹಾಗೇನೇ ರಾಷ್ಟ್ರ ವೃಕ್ಷಕ್ಕಂಟಿರುವ ರೋಗಕ್ಕೂ ಪರಿಹಾರ ಭ್ರಷ್ಟಾಚಾರವೆಂಬ ಬೇರಿನ ಉತ್ಪಾಟನೆಯಲ್ಲಿದೆ. ಸಮಕಾಲಿನ ಭಾರತೀಯ ಸಮಾಜದಲ್ಲಿ ಭ್ರಷ್ಟಚಾರವನ್ನು ಸೀಮಿತ ಅರ್ಥದ ಮಿತಿಗೆ ಒಳಪಡಿಸಿದಂತೆ ಕಾಣುತ್ತಿದ್ದೆ. ಯಾರನ್ನೇ ಕೇಳಿದ ರೂನ ‘ಲಂಚಗುಳಿತನವಷ್ಟೇ’ ಭ್ರಷ್ಟಾಚಾರ ಎನ್ನುತ್ತಾರೆ. ಇದನ್ನು ಮೀರಿದ ಉತ್ತರ ಏನಾದರೂ ಹೇಳುತ್ತಿರೋ ಎಂದರೆ ತಡವರಿಸುತ್ತಾರೆ. ಇನ್ನು ಭ್ರಷ್ಟ ಯಾರು ಎಂಬ ಪ್ರಶ್ನೆಗೆ ಸಾಮಾನ್ಯ ಜನವರ್ಗ ಹೇಳುತ್ತದೆ ‘ಲಂಚಹೊಡೆಯುವವನೇ’ ಭ್ರಷ್ಟ ಎಂದು. ಭ್ರಷ್ಟಾಚಾರ ಕುರಿತು ಬಹುಜನರ ಇಂತಹ ಗ್ರಹಿಕೆಗಳು ತಪ್ಪು ಎನ್ನುವುದಲ್ಲ ನನ್ನ ವಾದ. ಆದರೆ ಲಂಚಗುಳಿತನವಷ್ಟೇ ಭ್ರಷ್ಟಾಚಾರವಲ್ಲ, ಲಂಚತಿನ್ನುವವನಷ್ಟೇ ಭ್ರಷ್ಟನಲ್ಲ.

ಅದಕ್ಕೆ ಇನ್ನೂ ಹೆಚ್ಚಿನ ಅರ್ಥವ್ಯಾಖ್ಯೆ ಇದೆ. ಅದಕ್ಕೆ ಇನ್ನೂ ಹೆಚ್ಚಿನ ಗಾಂಭೀರ್ಯತೆ ಇದೆ ಎನ್ನುವವರ ಮತಕ್ಕೆ ಸೇರಿದವ ನಾನು. ಕನ್ನಡ ಸಾಹಿತ್ಯ ಪರಿಷತ್ತು ಸಂಕಲಿಸಿರುವ ಸಂಕ್ಷಿಪ್ತ ಕನ್ನಡ ನಿಘಂಟಿನಲ್ಲಿ ಅತ್ಯಂತ ಸುಲಭಗ್ರಾಹಿ ಅರ್ಥವನ್ನು ಭ್ರಷ್ಟ
ಮತ್ತು ಭ್ರಷ್ಟಾಚಾರದ ಕುರಿತಾಗಿ ಕೊಟ್ಟಿದ್ದಾರೆ. ಪ್ರಥಮದಲ್ಲಿ ‘ಭ್ರಷ್ಟ’ ಎಂಬ ಶಬ್ದಕ್ಕೆ ಕೆಲವು ಐದಾರು ಅರ್ಥಗಳು ಈ ನಿಘಂಟುವಿ ನಲ್ಲಿವೆ.

ಅವು: ೧.(ಗೌರವ, ಅಧಿಕಾರ, ಜಾತಿ, ಧರ್ಮ) ಮೊದಲಾದವುಗಳಿಂದ ಹೊರಗೆ ಹಾಕಲ್ಪಟ್ಟವನು,- ಬಹಿಷ್ಕರಿಸಿದವನು.
೨.ನಾಶ; ಹಾಳು. ೩.ಧರ್ಮಹೀನನಾದವನು. ೪.ಕೆಳಗೆ ಬಿದ್ದ. ೫. ದಾರಿ ತಪ್ಪಿದ, ಪತಿತ. ೬. ಧರ್ಮಬಿಟ್ಟ, ಧರ್ಮಹೀನವಾದ.
ಎರಡನೇಯದಾಗಿ ‘ಭ್ರಷ್ಟಾಚಾ’ರದ ಶಬ್ಧಾರ್ಥವನ್ನು ಈ ನಿಘಂಟು ಕೆಳಗಿನಂತೆ ಉಲ್ಲೇಖಿಸಿದೆ: ೧.ಧರ್ಮ ವಿರುದ್ಧವಾದ ಕೆಲಸ ವನ್ನು ಮಾಡುವಿಕೆ; ದುರಾಚಾರ.

೨. ಲಂಚ ತಿನ್ನುವುದು; ಲಂಚಗುಳಿತನ. ಇದರಿಂದ ತಿಳಿಯುವುದೆನೆಂದರೆ ಭಾರತಕ್ಕಂಟಿರುವ ಈ ಭ್ರಷ್ಟಾಚಾರವೆಂಬ ಜಾಡ್ಯಕ್ಕೆ(ರೋಗ) ಕೇವಲ ಲಂಚಗುಳಿತನವಷ್ಟೇ ಕಾರಣವಾಗದೆ ಇನ್ನೂ ಹಲವು ದುರಾಚಾರಗಳು ಕಾರಣವಾಗಿವೆ ಎಂಬುದು. ವಿಷಯವನ್ನು ಸರಳ ಮತ್ತು ಕ್ರಮಬದ್ಧವಾಗಿಸಲು ಭಾರತೀಯ ಸಮಾಜದಲ್ಲಿ ಇರಬಹುದಾದಂತಹ ಭ್ರಷ್ಟರನ್ನು ಎರಡು ವರ್ಗದಲ್ಲಿ ವಿಂಗಡಿಸುತ್ತೇನೆ.

೧.ಧರ್ಮಭ್ರಷ್ಟ ೨.ರಾಜ್ಯಭ್ರಷ್ಟ. ಧರ್ಮಭ್ರಷ್ಟ:
ಭಾರತೀಯ ಜೀವನಸೌಧ ನಿಂತಿರುವುದು ಧರ್ಮ ತಳಪಾಯದ ಮೇಲೆ. ಸ್ವಾಮಿ ವಿವೇಕಾನಂದರು ಭಾರತವನ್ನು ಧರ್ಮದ ತೌರೂರು ಎಂದಿದ್ದಾರೆ. ಈ ನೆಲದ ಸಂಸ್ಕೃತಿ ಎಂದೆಂದಿನಿಂದಲೂ ಇಲ್ಲಿನ ಜನಗಳ ಬಾಳಿಗೆ ಮೂಲಭೂತ ಆವಶ್ಯಕತೆ ಯಾಗಿದೆ. ಒಂದು ಹೊತ್ತು ಊಟವನ್ನಾದರೂ ಭಾರತೀಯ ಮನುಷ್ಯ ಕಾರ್ಯೋತ್ತಡದಲ್ಲಿ ಬಿಟ್ಟಾನು ಆದರೆ ದೇವರಿಗೆ ಕೈ ಮುಗಿಯದೆ ಇರಲಾರನು.

ಇದು ಭಾರತೀಯ ಸಂಸ್ಕಾರ ಕಲಿಸುವ ಪಾಠ. ಪ್ರತಿಯೊಬ್ಬ ಭಾರತೀಯ ಸಂಸ್ಕೃತಿ ಆರಾಧಕನ ಲಕ್ಷ್ಯ ‘ಮುಕ್ತಿ’. ಅದಕ್ಕೇ
ಸನಾತನ ಧರ್ಮ ತನ್ನ ಅನುಯಾಯಿಗಳಿಗೆ ಆತ್ಮ ಸಾಕ್ಷಾತ್ಕಾರಕ್ಕೆ ಬೇಕಾದ ಎಲ್ಲ ಸ್ವಾತಂತ್ರ್ಯವನ್ನೂ ಕೊಡುತ್ತದೆ. ಅಷ್ಟೇ ಆಗದೆ ಆತ್ಮ ಜ್ಞಾನ ಪ್ರಾಪ್ತಿಗೆ ಅನಿವಾರ್ಯವಾದ ಕೆಲವು ಕಟ್ಟುಪಾಡುಗಳನ್ನು ನಿಯಮ ನಿಬಂಧನೆಗಳನ್ನು ಅನುಷ್ಠಾನ ಮಾಡಬೇಕೆಂದು ಹೇಳುತ್ತದೆ. ಲೌಕಿಕ ಜೀವನವೂ ಅಷ್ಟೇ ಮುಖ್ಯವೆಂದರಿತಿದ್ದ ನಮ್ಮ ಪೂರ್ವಜರು ಮನುಷ್ಯನ ಪ್ರಾಪಂಚಿಕ ಜೀವನದ ಏಳ್ಗೆಗೂ ಸಾಕಷ್ಟು ದಾರಿ ತೋರಿ ಅಲ್ಲೂ ಹಲವು ನೀತಿ ನಿಯಮಗಳ ರಚನೆ ಮಾಡಿದ್ದಾರೆ.

ಯಾವಾತನು ಇಂದ್ರೀಯ ಸೆಳೆತಗಳಿಗೆ ವಶವಾಗಿ ಧರ್ಮ ಮಾರ್ಗದಿಂದ ವಿಮುಖನಾಗುತ್ತಾನೋ ಅವನು ಧರ್ಮಭ್ರಷ್ಟ ನಾಗುತ್ತಾನೆ. ಅಂದರೆ ಮಾನವ ಉದ್ಧಾರಕ್ಕಾಗಿ ಧರ್ಮ ವಿಧಿಸುವ ನೀತಿ ನಿಯಮ, ಕಟ್ಟುಪಾಡುಗಳನ್ನು ಮುರಿದು ಅವನು ಭ್ರಷ್ಟನಾಗುತ್ತಾನೆ. ಧರ್ಮಮಾರ್ಗ ಬಿಟ್ಟವನಾಗುತ್ತಾನೆ.

ಅವನ ಚಂಚಲ ಬುದ್ಧಿ ಅವನನ್ನು ಅಧಃ ಪಾತಾಳಕ್ಕೆಳೆಯುತ್ತದೆ. ಆದ್ದರಿಂದ ಗೀತೆಯಲ್ಲಿ ಭಗವಂತ ಹೇಳಿದ: ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|

ನ ಚಾಭಾವಯುತಃ ಶಾಂತಿರಶಾಂತಸ್ಯ ಕುತಃ ಸುಖಮ್||
ಮನಸ್ಸು ಮತ್ತು ಇಂದ್ರಿಯಗಳನ್ನು ಗೆಲ್ಲದಿರುವ ಪುರುಷನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರುವುದಿಲ್ಲ ಮತ್ತು ಇಂತಹ ಅಯುಕ್ತ ಪುರುಷನ ಅಂತಃಕರಣದಲ್ಲಿ ಆಸ್ತಿಕ ಭಾವವೂ ಇರುವುದಿಲ್ಲ.(2.66)

ತಸ್ಮಾದಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ|
ಇಂದ್ರಿಯಾಣೀಂದ್ರಿಯಾರ್ಥೇಭ್ಯ ತಸ್ಯ ಪ್ರಜ್ಞೆ ಪ್ರತಿಷ್ಠಿತಾ||
..ಯಾರ ಇಂದ್ರಿಯಗಳು ಇಂದ್ರಿಯಗಳ ವಿಷಯಗಳಿಂದ ಎಲ್ಲ ರೀತಿಯಿಂದ ನಿಗ್ರಹಿತವಾಗಿವೆಯೋ ಅವನ ಬುದ್ಧಿಯು ಸ್ಥಿರ ವಾಗಿರುತ್ತದೆ.(2.68) ಚಂಚಲ ಬುದ್ಧಿ ಇಂದ್ರಿಯಗಳನ್ನೂ ಚಂಚಲವಾಗಿಸುತ್ತದೆ.

ಇಂದ್ರಿಯಗಳ ಚಂಚಲತೆ ಒಬ್ಬನನ್ನು ಧರ್ಮದಿಂದ ದೂರಮಾಡುತ್ತದೆ. ಇವತ್ತು ಯಾವ್ಯಾವ ಕೃತ್ಯಗಳನ್ನು ನವಕಾನೂನು ವ್ಯವಸ್ಥೆ ದಂಡಾರ್ಹ ಅಪರಾಧವೆನ್ನುತ್ತದೋ ಅವುಗಳ ಎಸಗುವಿಕೆಯನ್ನೇ ಸನಾತನ ಧರ್ಮ ‘ಧರ್ಮಭ್ರಷ್ಟತೆ’ ಎನ್ನುತ್ತದೆ. ಯಾವ ರೀತಿ ಕಾನೂನುಗಳೋ ಅದೇ ರೀತಿ ಧರ್ಮ ನಿಯಮಗಳು.

ಕಾನೂನು ಮುರಿದವನು ಅಪರಾಧಿ. ಧರ್ಮನಿಯಮಗಳನ್ನು ಮುರಿದವನು ಧರ್ಮಭ್ರಷ್ಟ. ಆದರೆ ಪಶ್ಚಾತ್ತಾಪದ ಪಾಠದಿಂದ ಅವನು ಮುಂದೆ ಶಿಷ್ಟನೂ ಆಗಬಹುದು, ಶ್ರೇಷ್ಠನೂ ಆಗಬಹುದು. ಅದನ್ನೇ ಇಂದಿನ ಕಾನೂನು Reformative Theory ಎನ್ನುತ್ತದೆ.

ಧರ್ಮ ಕಡೆಗಣನೆಯ ದುರಾಚಾರ ಈಗಾಗಲೇ ಭಾರತಕ್ಕೆ ಅಂಟಿಯಾಗಿದೆ. ಈ ಬೆಳವಣಿಗೆಯಿಂದ ಭಾರತದ ಉದ್ಧಾರ ವಾಗದು. ಏಕೆಂದರೆ ನಮ್ಮ ಕಡೆಗಣನೆಗೆ ಒಳಗಾಗುತ್ತಿರುವುದು ನಮ್ಮ ಜೀವನಸೌಧದ ತಳಪಾಯ. ಎಚ್ಚರಾಗೋಣ.

ರಾಜ್ಯಭ್ರಷ್ಟ: ರಾಜ್ಯಭ್ರಷ್ಟರೆಂದರೆ ರಾಜ್ಯಾಂಗದ(ಆಡಳಿತ ವ್ಯವಸ್ಥೆ) ಕಟ್ಟುಪಾಡುಗಳನ್ನು ಮತ್ತು ನಿಯಮ ನಿರ್ಬಂಧಗಳನ್ನು
ಉಲ್ಲಂಸಿ ಕಾರ್ಯಮಾಡುವವರು. ಇವರಲ್ಲಿ ರಾಜಕಾರಣಿಗಳು, ಅಽಕಾರಿಗಳು ಸೇರುತ್ತಾರೆ.

ರಾಜಕೀಯದ ಮೂಲೋದ್ದೇಶವೇ ನಿಸ್ವಾರ್ಥ ಜನಸೇವೆ ಮತ್ತು ಸಮಾಜ ರಕ್ಷಣೆ. ಆದರೆ ರಾಜಕಾರಣಿಗಳು ಇಂತಹ ರಾಜಕೀಯ ನೀತಿಗಳನ್ನು ಸಿದ್ಧಾಂತಗಳನ್ನು ಅನುಸರಿಸದೆ ಸ್ವಾರ್ಥಿಗಳಾದರೆ ಅವರು ಭ್ರಷ್ಟರಾಗುತ್ತಾರೆ. ಅದೇ ರೀತಿ ಅಽಕಾರಿಗಳೂ ಭ್ರಷ್ಟರಾಗುತ್ತಾರೆ. ಪ್ರಮುಖವಾಗಿ ಇಲ್ಲಿ ಲಂಚಗುಳಿತನ ಭ್ರಷ್ಟಾಚಾರವೆಂದೆನಿಸುತ್ತದೆ ಮತ್ತು ಸೇವೆಯನ್ನು
ಮರೆತ ಎಲ್ಲ ರಾಜಕಾರಣಿಗಳು, ಅಽಕಾರಿಗಳು ಭಷ್ಟರೇ.

ಈ ಭ್ರಷ್ಟಾಚಾರ ಇಡೀಯ ರಾಜಕೀಯ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ. ಲೇಖನದ ಪ್ರಾರಂಭದಲ್ಲಿ ಹೆಸರಿಸಿರುವ ಹಲವು ಪ್ರಧಾನ ಸಮಸ್ಯೆಗಳಿಗೆ(ಸಂಸ್ಕೃತಿ ನಿರ್ಲಕ್ಷತೆ ಬಿಟ್ಟು. ಅದು ಧರ್ಮಭ್ರಷ್ಟತೆಯಲ್ಲಿ ಬರುತ್ತದೆ ಎನ್ನುವುದನ್ನು ಮೇಲೆ ನೋಡಿ ಯಾಗಿದೆ.) ರಾಜಕಾರಣಿಗಳ ಮತ್ತು ಅಽಕಾರಿಗಳ ನೀತಿಭ್ರಷ್ಟತೆಯೇ ಕಾರಣ. ಇಂತಹ ವ್ಯಕ್ತಿಗಳು ರಾಜಕಾರಣ ವನ್ನು ಹೊಲಸು ಮಾಡುವುದಷ್ಟೇ ಅಲ್ಲ ಜನರ ದೌರ್ಬಲ್ಯವನ್ನು, ಪರಿಸ್ಥಿತಿಯನ್ನು ಬಂಡವಾಳವಾಗಿಟ್ಟುಕೊಂಡು ಇಡೀ ಮಾನವ ಕುಲವನ್ನೇ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಭ್ರಷ್ಟರನ್ನಾಗಿಸುತ್ತಾರೆ.

ಅನ್ಯಾಯದ ವಿರುದ್ಧ ಬಂಡೇಳದ ನಾವು ಲಂಚಕ್ಕೆ ಕೈಚಾಚುವವರ ಕೈಗೆ ಪಠಾರ್ ಎಂದು ಹೊಡೆಯುವ ಬದಲು ಪಿಟಿಕ್ ಎನ್ನದೆ ಭ್ರಷ್ಟರ ಕೈ ಬಿಸಿ ಮಾಡುತ್ತೇವೆ. ಆ ಮೂಲಕ ನಾವೂ ಭ್ರಷ್ಟರಾಗುತ್ತೇವೆ. ಭ್ರಷ್ಟಾಚಾರ ಇಂದಿನ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಬಿಟ್ಟಿದೆ. ಮಕ್ಕಳ ಶಾಲೆಗಳಿಂದ ಹಿಡಿದು ಘನ ಅಽಕಾರ ಪೀಠದ ತನಕ ಎಲ್ಲೂ ಲಂಚಾವತಾರಿ ಗಳು ಕೈಎತ್ತಿ ಕುಣಿಯುತ್ತಿದ್ದಾರೆ.

ಪರಿಸ್ಥಿತಿಗಳ ಒತ್ತಡಕ್ಕೆ ಮಣಿದು, ದುರಾಸೆಯ ಬಲೆಗೆ ಬಿದ್ದು ಬರುವ ಸಾಮಾನ್ಯರನ್ನು ತುಳಿಯುತ್ತಿದ್ದಾರೆ. ದುರ್ಬಲ ಭಾರತೀಯರು ತಮ್ಮ ನಿತ್ರಾಣ ಸ್ಥಿತಿಗೆ ವ್ಯವಸ್ಥೆಯನ್ನು ದೂಷಿಸುವ ಆತುರದಲ್ಲಿ ತಾವೂ ವ್ಯವಸ್ಥೆಯ ಪ್ರಧಾನಾಂಗವೇ ಎಂಬುದನ್ನು ಮರೆಯುತ್ತಿದ್ದಾರೆ. ಹೀಗಾದರೆ ಭಾರತದ ರಾಜಕೀಯ ವ್ಯಕ್ತಿಗಳನ್ನು ಅಽಕಾರಿಗಳನ್ನು ಅಂಟಿಕೊಂಡಿರುವ
ಭ್ರಷ್ಟಾಚಾರವೆಂಬ ದುರಾಚಾರ ದೂರಾಗುವುದಾದರೂ ಹೇಗೆ!

ಧರ್ಮಭ್ರಷ್ಟರು ಮತ್ತು ರಾಜ್ಯಭ್ರಷ್ಟರು ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮಹಾಗೋಡೆಯಾಗಿ ನಿಂತಿದ್ದಾರೆ. ಚುನಾವಣೆ ಗಳು ಭ್ರಷ್ಟಾಚಾರವನ್ನು ಹುಟ್ಟಿಸತಕ್ಕಂತಹ ಮಾತೃಭೂಮಿಗಳಾಗಿವೆ ಎಂಬ ಜೆ.ಎಚ್ ಪಟೇಲರ ಸತ್ಯ ಮಾತನ್ನು ಭಾರತೀಯ ಪ್ರಜೆಗಳು ಸುಳ್ಳಾಗಿಸಿದ್ದೇ ಆದಲ್ಲಿ ಅರ್ಧ ಸಮಸ್ಯೆ ಬಗೆಹರಿದಂತೆ ಎಂಬುದು ನನ್ನ ಅಭಿಮತ. ಹಾಗೆಯೇ ದುರ್ಬಲ ಭಾರತೀಯ ಸಮಾಜ ತನ್ನ ನೈಜ ಸಾಮರ್ಥ್ಯವನ್ನರಿತು ಅದಕ್ಕನುಗುಣವಾಗಿ ಶ್ರಮಿಸಿ, ದುಡಿದು, ಹೊರಾಡಿ ತನಗೆ ಬೇಕಾದ್ದನ್ನು ಪಡೆಯಲು ಎಲ್ಲಿಯವರೆಗೆ ಮನಸ್ಸು ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರ ಈ ದೇಶವನ್ನು ಕಾಡುತ್ತದೆ.