Saturday, 14th December 2024

ಕಾಲ್ಗಾ-ಪುಲ್ಗಾವನ್ನು ಕುಲಗೆಡಿಸುತ್ತಿರುವ ಕಪಲ್‌ ಫ್ರೆಂಡ್ಲಿಗಳು..

ಅಲೆಮಾರಿಯ ಡೈರಿ

ಸಂಗತೋಷಕುಮಾರ ಮೆಹೆಂದಳೆ

ನೀವು ಮೇಲಕ್ಕೆ ಹತ್ತುತ್ತಿರಿ ಎಂದರೆ ಮಸ್ತ್ ಊರಿಗ್ ಕರೆದೊಯ್ಯುತ್ತೇನೆ ಎಂದು ಆಸೆಪಡಿಸುತ್ತಾ ಬರಶೈಣಿಯಿಂದ ಮೇಲ್ಮುಖವಾಗಿ ಅರ್ಧ ದಿನ ಹತ್ತಿಸುವಾಗ, ಸೇಬಿನ ತೋಟದ ಮಧ್ಯದ ಕೊರಕಲಿನಲ್ಲಿ ಬೆನ್ನಿಗೇರಿದ್ದ ಭಾರ ಹೊತ್ತು ಕಾಲು ಹರಿಸಿದರೆ ದಕ್ಕಿದ್ದು ವಿದೇಶಿಗರೇ ಕಂಡು ಬರುತ್ತಿದ್ದ ಕಾಲ್ಗಾ ಪುಲ್ಗಾ.

ಮೊಬೈಲು ಸಿಗ್ನಲ್ಲು ಇಲ್ಲ. ಸರ ಹೊತ್ತಿಗೆ ಸ್ವಿಚ್ ಅದುಮಿದರೆ ಕರೆಂಟೂ ಇಲ್ಲ. ತಡವಾಗಿಬಿಟ್ಟಿದೆ ಊಟಕ್ಕೆ ಹೋಟೆಲಿದೆಯಾ
ಅದೂ ಇಲ್ಲ. ದೇಶದಲ್ಲೇನು ನಡೆಯುತ್ತಿದೆ ಎಂದರೆ ನೋಡಲು ಟಿ.ವಿ. ಮೊದಲೇ ಇಲ್ಲ. ಆಯ್ತು ಇದೆಲ್ಲಾ ಬೇಡಾ ಬಂದು
ಉಳಿಯುತ್ತೇನೆ ಜಾಗ ಕೊಡಿ ಎಂದರೆ ಅದೂ ಇಲ್ಲ ಮುಂದಿನ ತಿಂಗಳವರೆಗೆ ಬುಕಿಂಗ್ ಇದೆ ಎನ್ನುವ ಮಾತು ಬರುತ್ತದೆ. ಸರಿ
ಹಾಗಾದರೆ ಬೇರೆನಿದೆ ಇಲ್ಲಿ…? ಏನೂ ಇಲ್ಲ.

ತೀರ ಶಾಂತವಾದ ಅವಳಿ ಊರುಗಳು, ತಮ್ಮನ್ನು ಬಳಸಿ ನಿಂತಿರುವ ಪರ್ವತಗಳಿಂದ ಜಗತ್ತಿನ ಇತರ ರಗಳೆಗಳಿಂದ ಮರೆ ಮಾಚಿಕೊಂಡು ಉಳಿದುಬಿಟ್ಟಿವೆ. ಅದಕ್ಕಾಗೇ ಜನರು ಹೇಳದೆ ಕೇಳದೆ ಇಲ್ಲಿಗೆ ತಮ್ಮದೆ ಸಮಾನು ಸರಂಜಾಮು ಸಮೇತ ಹೊರಟು ಬಂದು ಬಿಡುತ್ತಿದ್ದಾರೆ. ಏನೂ ಇಲ್ಲದಿದ್ದರೆ ಕಡೆಗೆ ಕೈ ಕಾಲಿಗೆ ಅಡರುವ ಸೇಬಿನ ತೋಟದ ಅರೆಗೆ ತಮ್ಮದೊಂದು ಟೆಂಟು ಹಾಕಿಕೊಂಡು ಕಾಲು ಚಾಚಿ ಕೂತು ಬೀಡುತ್ತಿದ್ದಾರೆ.

ಉಳಿದೆಲ್ಲ ಪ್ರಚ್ಛನ್ನ ಮೌನ ಮತ್ತು ಅಪರಿಮಿತ ಏಕಾಂತ. ತಣ್ಣಗಿನ ಸುಳಿಗಾಳಿ, ರಾತ್ರಿಯ ಹೊತ್ತು ಮೂಳೆಗೆ ತಾಗುವ ಚಳಿ,
ಬಂದ ಅತಿಥಿಗಳನ್ನು ಆದರಿಸಿ ತಮ್ಮ ಬದುಕು ಹೊಟ್ಟೆ ಎರಡನ್ನೂ ತುಂಬಿಕೊಳ್ಳಲು ಸಜ್ಜಾಗಿ ನಿಲ್ಲುವ ಅತೀ ವಿನಮ್ರತೆಯ ಸ್ಥಳೀಯ ಹಳ್ಳಿಗರು.

ಇದು ಕಾಲ್ಗಾ-ಪುಲ್ಗಾ… : ದೇವಭೂಮಿ ಹಿಮಾಚಲದ ಅಗಾಧ ಪರ್ವತದ ಬೆಟ್ಟದ ಅಡಿಯಲ್ಲಿ ನಿರುಮ್ಮಳವಾಗಿ ಬಿದ್ದು ಕೊಂಡಿವೆ. ಶತಮಾನಗಳಿಂದ ಸುಲಭಕ್ಕೆ ಕಣ್ಣಿಗೇ ಬೀಳದಿದ್ದ ಈ ಅವಳಿ ಊರುಗಳು, ಕೀರಗಂಗಾ ಟ್ರೇಲ್‌ಗೆ ಬರುವ ಚಾರಣಿಗರ ಕಾರಣ ಗೂಗಲ್ ಸೇರಿ ಈಗ ಎಲ್ಲೆಡೆಯಿಂದ ಜನ ದಾಂಗುಡಿಯಿಡುತ್ತಿದ್ದಾರೆ. ಊರು ಬದಲಾಗುತ್ತಿದೆ. ಮನೆಗಳು ಬಣ್ಣ ಕಾಣುತ್ತಿವೆ, ಹಂತ ಹಂತವಾಗಿ ಎರಡೆರಡು ಮಹಡಿಯ ದೇವದಾರು ಮರದ ಮನೆಗಳು ಎದ್ದು ನಿಲ್ಲುತ್ತಿವೆ.

ಇರುವ ಮನೆಯ ಒಂದೇ ಕೋಣೆಯಲ್ಲಿ ಬೆಚ್ಚನೆಯ ದಿರಿಸು ಹಾಸಿಗೆ ಎರಡನ್ನೂ ಒದಗಿಸಿ ಚೆಂದನೆಯ ಕುಟುಂಬ ವಾತಾವರಣದ
ಅನುಭವ ನೀಡಲು ಪೆಯಿಂಗ್ ಗೆಸ್ಟ್‌ಗಳಿಗೆ ಕಾಯುತ್ತಾ ನಿಂತಿವೆ. ಯಾವತ್ತೂ ಪಕ್ಕಪಕ್ಕದಲ್ಲಿ ಮಲಗದ ಯಾತ್ರಿಕರೂ ಒಂದೇ
ಕೋಣೆಯಲ್ಲಿ ಆರೆಂಟು ಜನ ಮಲಗೆದ್ದು ಹೋಗುತ್ತಾರೆ. ದೇಶಿಯರಿಗಿಂತ ಇಂಥದ್ದನ್ನೆಲ್ಲಾ ಇದ್ದಂತೆ ಅನುಭವಿಸಿ ಅಷ್ಟೆ
ನಿರುಮ್ಮಳವಾಗಿ ಮಾತು ಕತೆಯಿಲ್ಲದೆ ಮೌನವಾಗೆ ಎದ್ದು ಹೋಗಿ ಬಿಡುವ ವಿದೇಶಿಯರು ಇದನ್ನು ಹೆಚ್ಚು ಇಷ್ಟಪಡ ತೊಡಗಿ ದ್ದಾರೆ.

ಕಾರಣ ಅವರ ಬೇಡಿಕೆಗಳು ಕಡಿಮೆ. ಲಗೇಜು ಇರುವುದೇ ಇಲ್ಲ. ಇದ್ದವರು ಅದನ್ನೆಲ್ಲ ಹೊತ್ತು ಬೆಟ್ಟ ಹತ್ತುವುದಾಗುವುದಿಲ್ಲ. ಅದಕ್ಕೆ ಭಾರತೀಯ ಪ್ರವಾಸಿಗರಿಗೆ ಪೋರ್ಟರು, ಹೆಲ್ಪರು ಇತ್ಯಾದಿ ಸೇರಿಕೊಳ್ಳುತ್ತಾ ದಾರಿ ಮತ್ತು ಅವಳಿ ಊರು ಎರಡೂ ಕೊಂಚ
ಕೊಂಚವಾಗಿ ನೆಮ್ಮದಿ ಕಳೆದುಕೊಳ್ಳತೊಡಗಿವೆ. ಜತೆಗೆ ಕಪಲ್ -ಂಡ್ಲಿ ಲೆಕ್ಕಕ್ಕೆ ಬಿದ್ದಿರುವ ವೀಕೆಂಡ್ ತೆವಲಿನ ಹೊಸ ತಲೆಮಾರಿನ
ಜೋಡಿಗಳು ಕ್ರಮೇಣ ದಾಂಗುಡಿ ಇಡುತ್ತಿದ್ದು ಎಲ್ಲ ತೋಪೆದ್ದು ಹೋಗುವ ಲಕ್ಷಣವೂ ಕಾಣುತ್ತಿದೆ. ಕಾರಣ ಇವರಿಗೆ ಬಾಗಿಲಿಕ್ಕಿ ಕೊಳ್ಳಲು ಜಾಗ ಕೊಟ್ಟು ಬಿಟ್ಟರೆ ಬೇರೇನೂ ಬೇಕಿರುವುದಿಲ್ಲ. ದುಡ್ಡು ಎಷ್ಟಾದರೂ ಚೆಲ್ಲುತ್ತಾರೆ.

ಆಗೀಗೊಮ್ಮೆ ಆಹಾರ ಇತ್ಯಾದಿ ಬೇಕಾದಾಗ ಕೊಟ್ಟರೆ ಆಯಿತು. ಮೂರ್ನಾಲ್ಕು ದಿನ ಕೂತೆದ್ದು ಎಲ್ಲ ಬಸಿದುಕೊಂಡು ಹೊರಡು ತ್ತಾರೆ. ಆದರೆ ಕ್ರಮೇಣ ಇಂಥ ಅಭ್ಯಾಸದಿಂದ ಪ್ರವಾಸ ಮತ್ತು ಆಪ್ತತೆ ಎನ್ನುವ ಬದಲಾಗಿ ತೆವಲಿನ ಮುಗ್ಗಲು ವಾಸನೆ ಅಡರ ತೊಡಗಿದೆ ಕಲ್ಗಾ ಪುಲ್ಗಾದಲ್ಲಿ. ಸದ್ಯಕ್ಕೆ ಕುಲ್ಗಾ ಪುಲ್ಗಾ ಅದೆಲ್ಲದರಿಂದ ಇನ್ನು ಪೂರ್ತಿ ಮಲಿನಗೊಂಡಿಲ್ಲ. ಇತ್ತಿಚೆಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಎದ್ದ ಹೋಮ್ ಸ್ಟೇ ಕಾನ್ಸೆಪ್ಟ್‌ನಲ್ಲಿ ಇಂಥ ವೀಕೆಂಡ್ ಕಪಲ್ ಫ್ರೆಂಡ್ಲಿಗಳ ಹಾವಳಿಗೆ ಅದ್ಯಾವ
ಪರಿಯಲ್ಲಿ ರೆಸಾರ್ಟುಗಳು ಬುಕ್ ಆಗಿರುತ್ತವೆ ಎಂದರೆ, ಪ್ರವಾಸದಲ್ಲಿದ್ದವರು ತಪ್ಪಿ ಗಾಡಿ ಒಯ್ದು ನಿಲ್ಲಿಸಿ ಒಂದಿನ ಸ್ಟೇ ಬೇಕೆಂದರೆ, ಸತ್ತರೂ ಅವರ ಕಟ್ಟೆ ಮೇಲೆ ದೇವರಿಗೂ ಜಾಗ ಕೊಡುವುದಿಲ್ಲ.

ಕಾರಣ ಈ ಫ್ರೆಂಡ್ಲಿಗಳು ಹೇಳಿದ ರೇಟು ಪೀಕುತ್ತಾರೆ. ಮಾತಾಡದೆ ಹೇಗಿದ್ದರೂ ಇದ್ದು ಹೋಗುತ್ತಾರೆ, ಮಸ್ತಿ ಮತ್ತು ಮಗ್ಗುಲು ತಿರುವಲು ಪ್ರೈವೆಸಿ ಇದ್ರಾಯ್ತು. ಇದೇ ಸಮಸ್ಯೆಯನ್ನೀಗ ಕಾಲ್ಗಾ ಪುಲ್ಗಾದ ಪ್ರವಾಸಿಗರು ಎದುರಿಸುತ್ತಿದ್ದಾರೆ. ಹಿಮಾಚಲ ಪ್ರದೇಶದದ ಮಂಡಿ ಜಿಲ್ಲೆಯ ಕೊನೆಯ ಪರ್ವತದ ತುದಿಯಿಂದ ಉರುಳಿ ಬೀಳಲಿರುವ ಊರಿನಂತಿರುವ ಬರಶೈಣಿ ಇಂಥದ್ದ ಕ್ಕೆಲ್ಲಾ ಹೇಳಿ ಮಾಡಿಸಿದ ಹೆಡ್‌ಕ್ವಾರ್ಟರು.

ದೊಡ್ಡ ಊರೇನಲ್ಲ. ಆದರೆ ಈ ಬರಶೈಣಿಗೆ ಬುಂತರ್ ಅಥವಾ ಮಂಡಿ ಜಿಲ್ಲೆಯ ಯಾವುದೇ ಪ್ರದೇಶದಿಂದ ವಾಹನ ಮೂಲಕ
ಸುಲಭವಾಗಿ ತಲುಪಬಹುದಾಗಿದೆ. ಬೇಕೆಂದರೆ ಒಂದೆರಡು ಔಷಧಿಗೆ ಅಂಗಡಿಗಳಿವೆ, ಚಹಕ್ಕೆ ಹೋಟೆಲಿವೆ, ಬಾಡಿಗೆ ಬೈಕಿನವರು
ಕಾದು ನಿಲ್ಲುತ್ತಾರೆ ಉಳಿದೆಲ್ಲಕ್ಕಿಂತ ಮಿಗಿಲು ಇಲ್ಲಿ ಮಾನವ ಶಕ್ತಿಯ ಅಗಾಧ ಲಭ್ಯತೆ ಅಗ್ಗವಾಗಿ ಮೈಚೆಲ್ಲಿಕೊಂಡು ಬಿದ್ದಿದೆ. ಸೇವೆ
ಎಂಬುವುದಕ್ಕೆ ಅನ್ವರ್ಥಕ.

ಹಾಗಾಗಿ ಇದು, ಉಳಿದ ಚಾರಣ ಪ್ರವಾಸಕ್ಕೆ ಬೇಸ್ ಕ್ಯಾಂಪು. ಇದಕ್ಕಿಂತ ದೊಡ್ಡ ಊರು ಬೇಕೆಂದರೆ ಇದಕ್ಕೂ ಹದಿನಾಲ್ಕು ಕಿ.
ಮೀ. ಮೊದಲೇ ಸಿಗುವ ಕಾಸೋಲ್ ಒಂಥರಾ ರಾಜಧಾನಿ ಇದ್ದಂತೆ. ಉಳಿದಂತೆ ಕಾಲ್ಗಾ ಬರಶೈಣಿಯಿಂದ ಕೇವಲ ನಾಲ್ಕೆ ದು
ಕಿ.ಮೀ.ನ ಎರಡು ಗಂಟೆ ದೂರದ ದಾರಿ. ಸೇಬು ಮತ್ತು ಫೈನ್ ವೃಕ್ಷಗಳ ಮಧ್ಯೆ ಹಾವು ಹೊಸೆದಂತೆ ಸಾಗುತ್ತ ಅಚಾನಕ್ ಆಗಿ
ತೆರೆದುಕೊಳ್ಳುವ ಕಣಿವೆಯ ಮೇಲ್ಭಾಗಕ್ಕೆ ಎದುರುಗೊಳ್ಳುವ ಕಾಲ್ಗಾ ಅಪ್ಪಟ ಸೇಬಿನ ತೋಟಗಳ ನಾಡು. ಚಿಕ್ಕಚಿಕ್ಕ ನಾಜೂಕು ಸೇಬಿನ ಮರಗಳ ಅಗಾಧ ತೋಟದ ಸುತ್ತ ಹಚ್ಚ ಹಸರು ಪರ್ವತ ಮತ್ತು ಅದರ ಅಡಿಗೆ ಹೊಂದಿಕೊಂಡ ಬಣ್ಣಬಣ್ಣದ ಮನೆಗಳು ಕಾಲ್ಗಾದ ಕಂಪಿಗೆ ಕಿಚ್ಚು ಹಚ್ಚುತ್ತವೆ.

ಬರಶೈಣಿಯಿಂದ ಹೊರಬಂದು ತೋಷ್(ಸಂತೋಷ ಅಲ್ಲ) ಎನ್ನುವ ಹಳ್ಳಿಯ ಬಲ ಮಗ್ಗುಲಿನಿಂದ ಹಾಯ್ದು ಹೋಗುವಾಗ
ಕಾಲ್ಗಾದ ಎತ್ತರದ ಅಂದಾಜು ಅರಿವಾಗುತ್ತದೆ. ಸರಿ ಸುಮಾರು ಐನೂರರಿಂದ ಒಂದು ಸಾವಿರ ರುಪಾಯಿವರೆಗಿನ ಹೋಮ್ ಸ್ಟೆ
ಮಾದರಿಯ ಆತಿಥ್ಯ ಲಭ್ಯ. ಇದು ಊಟ, ಉಪಾಹಾರ, ಲೀಟರುಗಟ್ಟಲೇ ಚಹ ಮತ್ತು ಬುಟ್ಟಿಗಟ್ಟಲೇ ರೊಟ್ಟಿಯ ಪ್ಯಾಕೇಜು. ಉಳಿದಂತೆ ಆಯಾ ವಸತಿಯ ಮನೆಗಳವರು ನೀಡುವ ಸೌಲಭ್ಯ, ನೀವು ಮಾತಾಡುವ ವ್ಯವಹರಿಸುವ ಕೌಶಲತೆಯಿಂದ ರೇಟು ನಿಗದಿಯಾಗುತ್ತದೆ.

ಎಲ್ಲಾ ಮನೆಗಳಲ್ಲೂ ಕಾಮನ್ ಬೆಡ್ ವ್ಯವಸ್ಥೆ ಇದ್ದು ಅಲ್ಲೊಂದಿಲ್ಲೊಂದು ಖಾಸಗಿ ರೂಮುಗಳೂ ಈಗೀಗ ಸಿದ್ಧವಾಗಿವೆ. ಆದರೆ ವೀಕೆಂಡ್ ಹೈಕ್ಸ್ ಎನ್ನುವ ಕಾನ್ಸೆಪ್ಟಿಗೆ ಇಂಥಾ ಕಡೆಯಲ್ಲಿ ಲೆಕ್ಕದ ಹೊರಗೆ ಜೋಡಿಗಳು ಜಮೆಯಾಗುತ್ತಿರುವುದರಿಂದ ಖಾಸಗಿ ರೂಮುಗಳು ದಕ್ಕುವುದು ಕಷ್ಟ ಕಷ್ಟ. ಗುಡ್ಡ ಹತ್ತಿಳಿಯಲು ದಾರಿಯ ಅವಶ್ಯಕತೆ ಎಲ್ಲಿದೆ..? ಯಾವ ಕಡೆಯಿಂದ ಊರು ಪ್ರವೇಶಿಸಿದರೂ ಮುಖ್ಯ ಬಂದು ನಿಲ್ಲುವುದು ತೋಟದೆದುರಿನ ಆಕಾಶದೆತ್ತರಕ್ಕೆ ಮುಖ ಮಾಡಿದ ಹಸಿರು ಪರ್ವತ ಮತ್ತು ಹುಲ್ಲುಗಾವಲಿಗೆ.

ಕಾಲ್ಗಾದಿಂದ ಮತ್ತೊಂದು ಗಂಟೆಯ ದಾರಿ ಪುಲ್ಗಾಕ್ಕೆ ಮುಟ್ಟಿಸುತ್ತದೆ. ಅಲ್ಲಿಂದಲೇ ಅಡ್ಡ ದಾರಿ ತುಳಿದು ನಾಲ್ಕೆ ದು ಅದು ಕಿ.ಮೀ. ಮೇಲಕ್ಕೆ ಏರುವುದಾರೆ ಇನ್ನಷ್ಟು ಚಳಿಗಾಳಿಯ ಟೊಲ್ಗಾ ಎಂಬ ಇನ್ನೊಂದು ಊರು ಕೂಡಾ ಸಿಕ್ಕುತ್ತದೆ. ಅದು ಏರುಮುಖ ದಾರಿಯಾಗಿದ್ದು ಕ್ರಮಿಸುವಿಕೆ ಸ್ವಲ್ಪ ಉತ್ಸಾಹವನ್ನು ಕುಂದಿಸುತ್ತದೆ. ಅವಳಿ ಊರಾದ ಕಾಲ್ಗಾ ಪಕ್ಕದ ಪುಲ್ಗಾ ಕೂಡಾ
ಇದಕಿಂತ ಭಿನ್ನವಾಗಿಲ್ಲ. ಮನೆ ಮತ್ತು ಜನಗಳು ಬದಲಾಗುತ್ತಾರೆ, ಮುಖ ಬದಲಾಗುತ್ತದಾದರೂ ಪರಿಸರ ಥೇಟ್ ಪಡಿಯಚ್ಚು.

ಅದೇ ಸೇಬಿನ ತೋಟ, ಬಣ್ಣದ ಕಟ್ಟಿಗೆಯ ಮನೆಗಳು, ಸಹಜ ವಾಸದ ವ್ಯವಸ್ಥೆ, ಅತ್ಯುತ್ತಮ ಪರಿಸರ ಜೊತೆಗೆ ಸುಲಭಕ್ಕೆ
ತಲುಪಲು ಸಾಧ್ಯವಾಗದ ಪರಿಸ್ಥಿತಿ ಕಾಲ್ಗ-ಪುಲ್ಗಾವನ್ನು ಇಲ್ಲಿಯವರೆಗೆ ಶುದ್ಧವಾಗಿರಿಸಿದೆ ಎಂದರೆ ತಪ್ಪಿಲ್ಲ. ಬರಶೈಣಿಗೆ
ಮುಕ್ತಾಯವಾಗುವ ರಸ್ತೆ ಸೌಲಭ್ಯ ನಂತರ ಕಾಲ್ಗದಿಂದ ಟೊಲ್ಗಾವರೆಗೂ ಕಾಲ್ದಾರಿಯೆ. ಯಾವ ಕಾರಣಕ್ಕೂ ಇದನ್ನು
ರಸ್ತೆಯನ್ನಾಗಿ ಪರಿವರ್ತಿಸುವ ಸಾಧ್ಯತೆಯೂ ಇಲ್ಲ ಎನ್ನಿಸುವಷ್ಟು ಪರ್ವತದ ಸೆರಗಿನ ಮತ್ತು ಕಣಿವೆ ಕೊರಕಲಿನಲ್ಲಿ ಹಾಯ್ದು
ಹೋಗುತ್ತದೆ.

ಈಗೀಗ ಚಾರಣ, ಪ್ರವಾಸ ಎಂದರೆ ರಾತ್ರಿಗೆ ಕಡ್ಡಾಯ ಇರಲೇ ಬೇಕೆನ್ನಿಸುವ ಯಾವ ಸಿಗರೇಟು, ಗುಟಕಾ, ಮದ್ಯವೂ ಇತ್ಯಾದಿ
ಇಲ್ಲಿ ಲಭ್ಯವಿಲ್ಲ. ಎಷ್ಟೆ ದುಡ್ಡು ಕೊಡುತ್ತೇನೆಂದರೂ ತಂದು ಕೊಡುವ ಸುಲಭದ ದಂಧೆಗಿಳಿದದ್ದೂ ಇಲ್ಲ ಇಲ್ಲಿಯವರೆಗೂ.
ಸ್ಥಳೀಯರೂ ನವಿರಾಗಿ ಈ ಬಗ್ಗೆ ಆಕ್ಷೇಪಣೆ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ಸ್ಥಳ ಮತ್ತು ಪರಿಸರ ಎರಡೂ ವಿಭಿನ್ನ ಎನ್ನಿಸುತ್ತದೆ.
ಆದರೆ ಪ್ಲಾಸ್ಟಿಕು, ತಾವೇ ಒಯ್ಯುವ ಮದ್ಯ, ಸಿಗರೇಟುಗಳಿಂದ ಕೆಲವರು ಗಲಿಬಿಲಿ ಉಂಟು ಮಾಡುತ್ತಿದ್ದು ಅಲ್ಲಲ್ಲಿ ಮನಸ್ತಾಪಕ್ಕೂ
ಕಾರಣವಾಗಿದ್ದಿದೆ. ಆದರೂ ವೀಕೆಂಡ್ ಮಸ್ತಿಗೆ ಎಲ್ಲವನ್ನು ಕದ್ದು ಹೊತ್ತೊಯ್ದು ಬೆಳಾಗುವ ಹೊತ್ತಿಗೆ ಬುಟ್ಟಿಗಟ್ಟಲೇ ವೇಸ್ಟು
ಜನರೇಟ್ ಮಾಡುತ್ತಿರುವ ಕಪಲ್ ಫ್ರೆಂಡ್ಲಿ ಗಳಿಗೆ ಈಗೀಗ ಕೆಳಗೇ ಮಿತಿ ವಿಧಿಸುತ್ತಿದ್ದಾರೆ.

ಸ್ಥಳೀಯ ಪೊಲೀಸೂ ಒಮ್ಮೊಮ್ಮೆ ಮೇಲೆ ಹತ್ತಿ ಬರುತ್ತಿದ್ದಾರೆ. ಪ್ರವಾಸಿಗರಾಗಿ ಭಾರತೀಯರಾಗಿ ಕೆಲವನ್ನು ನಾವಾಗೇ ರೂಢಿಸಿ ಕೊಳ್ಳದಿರುವ ನಮ್ಮ ಅಶಿಸ್ತು ನಮ್ಮದೆ ನಷ್ಟಕ್ಕೆ ಕಾರಣವಾಗುತ್ತಿರುವ ಉದಾ. ಇದು. ಕಾಲ್ಗಾ-ಪುಲ್ಗಾ ಎಂದಿನಂತೆ ಸ್ವಚ್ಛ ಮತ್ತು ಚೆಂದದ ಪರಿಸರವಾಗುಳಿಯಬೇಕೆಂದರೆ ಇದ್ದಂತೆ ಇರುವುದಕ್ಕೆ ಬಿಟ್ಟರೆ ಮಾತ್ರ ಸಾಧ್ಯ. ಆದರೆ ಭಾರತದೊಳಕ್ಕೆ ನುಗ್ಗಿ ಬಂದ ಬಿಂದಾಸ್ ಕಲ್ಚರ್ ಮತ್ತು ಲೆಕ್ಕದ ಹೊರಗೆ ಕೈಗೆ ಹತ್ತುವ ದುಡ್ಡು ಎಲ್ಲವನ್ನೂ ಬದಲಾಯಿಸಿಬಿಡುತ್ತಿದೆ. ಅಲೆಮಾರಿತನದ ವ್ಯಾಖ್ಯೆಯೇ ಬದಲಾದರೂ ಅಚ್ಚರಿಯೇನಿಲ್ಲ.