Saturday, 12th October 2024

ನ್ಯಾಯಾಲಯದಿಂದಲೇ ನಿಂದನೆ

ರಾವ್ – ಭಾಜಿ

journocate@gmail.com

ಕಾಂಗ್ರೆಸ್ಸಿಗರು ಗಂಟಲು ಕಿತ್ತು ಬರುವಂತೆ ಅದೆಷ್ಟೇ ಅರಚಾಡಿದರೂ, ಅಧಿಕಾರದಿಂದ ಹೊರಗುಳಿದಾಗಲೆಲ್ಲ ಅದೇನೇ ಬೀದಿರಂಪ ಮಾಡಿದರೂ, ಅವರು ಮರೆಮಾಚಲಾಗದ ಕಠೋರ ಸತ್ಯವೊಂದಿದೆ. ನಾವಿಂದು ಕಾಣುತ್ತಿರುವ ಅನೇಕ ಅನಿಷ್ಟಗಳಿಗೆ ಕಾಂಗ್ರೆಸ್ಸೇ ಕಾರಣ. ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳ ಸಗಟು ಅಪಹರಣ ಮಾಡಿದ್ದೇ ಅವರು.

ನಾಡಿನ ಇಂದಿನ ಕ್ಷೋಭೆಗೆ ಕಾರಣ ಅವರೇ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ಬಿರುಕುಮೂಡತೊಡಗಿದ್ದೇ ಸುದೀರ್ಘ ಕಾಲ ಅಧಿಕಾರದಲ್ಲಿ ವಕ್ಕರಿಸಿದ್ದ ಕಾಂಗ್ರೆಸ್‌ ನಿಂದ. ಅದು ಅಧಿಕಾರವನ್ನು ಉಳಿಸಿಕೊಂಡಿದ್ದೇ ತನ್ನ ಸ್ವಂತ ಅಭ್ಯುದಯಕ್ಕಾಗಿ ಆ ಆಧಾರ ಸ್ತಂಭಗಳನ್ನು ಮತ್ತಷ್ಟು ದುರ್ಬಲಗೊಳಿಸುವ ಮೂಲಕ.

ಅಂತಹ ಮಾರಣಾಂತಿಕ ಪೆಟ್ಟನ್ನು ನ್ಯಾಯಾಂಗಕ್ಕೆ ಮೊದಲು ಕೊಟ್ಟಿದ್ದು 1973ರಲ್ಲಿ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಕಾರ್ಯಾಂಗದ ವಿರುದ್ಧ ತೀರ್ಪು ನೀಡುವ ದಿಟ್ಟತನವನ್ನು ತೋರಿದ ಮೂವರು ಹಿರಿಯ ನ್ಯಾಯಾಧೀಶರನ್ನು ಸರ್ವೋಚ್ಚ ನ್ಯಾಯಾ ಲಯದ ಮುಖ್ಯ ನ್ಯಾಯಾಧೀಶ ಹುದ್ದೆಗೆ ಪರಿಗಣಿಸದೆ ಕಾಂಗ್ರೆಸ್ ನ್ಯಾಯಾಂಗದ ಅವನತಿಗೆ ಬುನಾದಿ ಹಾಕಿತು. ಬದ್ಧ ನ್ಯಾಯಾಧೀಶರನ್ನು ಉತ್ತೇಜಿ ಸುವ ತನ್ನ ಹೊಸ ಸಂಪ್ರದಾಯವನ್ನು ಪರಿಚಯಿಸುವಾಗ ಅದು ಹೇಳದೇ ಬಿಟ್ಟ ವಿಷಯವೆಂದರೆ, ಬದ್ಧತೆ ಇರಬೇಕಾದದ್ದು ನ್ಯಾಯವಿತರಣೆಗಲ್ಲ, ಆಡಳಿತ ಪಕ್ಷಕ್ಕೆ.

ಕಾರ್ಯಾಂಗದ ಜತೆ ಹೊಂದಿಕೊಳ್ಳುವ ಜಡ್ಜ್‌ಗಳಿಗೆ ಕಾಂಗ್ರೆಸ್ ಗಾಳ ಹಾಕಲಾರಂಭಿಸಿತು. ಈ ಮಾತನ್ನು ಹೇಳಿದ ವ್ಯಕ್ತಿ ವಿಖ್ಯಾತ ನ್ಯಾಯವಾದಿ ನಾನೀ ಪಾಲ್ಖೀವಾಲಾ. ಅವರ ಅಮೂಲ್ಯ ಪುಸ್ತಕಗಳಲ್ಲಿ ಎರಡು ನನ್ನ ಬಳಿ ಇವೆ: ವಿ ದ ಪೀಪಲ ಮತ್ತು ವಿ ದ ನೇಷನ್. ಮೊದಲ ಪುಸ್ತಕದಲ್ಲಿನ ಒಂದು ಲೇಖನ ನ್ಯಾಯಾಂಗದಲ್ಲಿ ಕುಸಿಯುತ್ತಿರುವ ಸಾರ್ವಜನಿಕರ ನಂಬಿಕೆ ಕುರಿತದ್ದು. ಅದು ಮೊದಲು ಪ್ರಕಟ ವಾಗಿದ್ದು ಮೂರು ದಶಕಗಳ ಹಿಂದೆ.

ಬಾಂಬೆಯ ವಕೀಲರ ಸಂಘಗಳು ಅಲ್ಲಿಯ ಕೆಲವು ಭ್ರಷ್ಟ ನ್ಯಾಯಾಧೀಶರುಗಳ ವಿರುದ್ಧ ದನಿ ಎತ್ತಿದ್ದವು. ಆ ನಿಟ್ಟಿನಲ್ಲಿ ನಿರ್ಣಯಗಳನ್ನು ಅಂಗೀಕರಿಸಿದ್ದು ಸ್ವತಂತ್ರ್ಯ ಭಾರತದಲ್ಲಿ ಮೊದಲು. ವಿಚಾರಣೆಯೇ ಇಲ್ಲದೆ ಅವರ ಮೇಲೆ ಆರೋಪ ಹೊರಿಸುವುದು ಕ್ರಮಬದ್ಧವಲ್ಲ ವಾದರೂ ಆ ಆರೋಪದ ಹಿಂದಿನ ಉದ್ದೇಶವನ್ನು ಪ್ರಶ್ನಿಸಲಿಕ್ಕಾಗುವುದಿಲ್ಲ ಎನ್ನುತ್ತಾರೆ ಪಾಲ್ಖೀವಾಲಾ. ನ್ಯಾಯಾಧೀಶರು ನೈತಿಕತೆಯ ಎಲ್ಲಾ ಮೀರದಿರುವುದು ವಕೀಲ, ಕಕ್ಷಿದಾರರ ಹಿತದೃಷ್ಟಿಯಿಂದಷ್ಟೇ ಅಲ್ಲದೆ, ದೇಶದ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದಲೂ ಅವಶ್ಯಕ.

ಪ್ರವಾದಿ ಮೊಹಮ್ಮದ್ ಕುರಿತು ತಾವು ಮಾತನಾಡಿದ್ದಕ್ಕೆ ದೇಶದ ವಿವಿದೆಡೆ ದಾಖಲಾಗಿರುವ ದೂರುಗಳನ್ನು ಒಂದೇ ಸ್ಥಳಕ್ಕೆ ವರ್ಗಾವಣೆ ಕೋರಿದ ನೂಪುರ್ ಶರ್ಮಾರಿಗೆ ಏಕಾಏಕಿ ಛೀಮಾರಿ ಹಾಕಿರುವ ಸರ್ವೋಚ್ಚ ನ್ಯಾಯಾಲಯದ ಕ್ರಮವನ್ನು ಅಖಿಲ ಭಾರತ ವಕೀಲರ ಸಂಘ ಅನುಮೋದಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ವಿಭಾಗೀಯ ಬೆಂಚ್ ನೂಪುರರನ್ನು ದಂಡಿಸಿದ್ದು ಸರಿಯಾಗಿದೆ ಎಂದು ಸಂಘದ ಅಧ್ಯಕ್ಷರಾದ ಆದೀಶ್ ಅಗ್ಗರ್ವಾಲ್ ಹೇಳಿಕೆ ನೀಡಿದ್ದಾರೆ.

ಇಸ್ಲಾಂ ರಾಷ್ಟ್ರಗಳ ಒತ್ತಡಕ್ಕೆ ಬಾಗಿದ ಬಿಜೆಪಿ ನೂಪುರರನ್ನು ಪಕ್ಷದಿಂದ ಹೊರಗಟ್ಟಿತು. ಪ್ರವಾದಿ ಮೊಹಮದ್ ಬಗ್ಗೆ ಅವರು ಹೇಳಿದ್ದು ಹೊಸದೂ ಅಲ್ಲ, ಮೊದಲ ವ್ಯಕ್ತಿಯೂ ಅಲ್ಲ. ಆದರೂ ಆಕೆಯ ವಿರುದ್ಧ ಕಾರ್ಕೋಟಕ ವಿಷ ಕಾರಲಾಯಿತು. ಅವಾಚ್ಯ ಶಬ್ದಗಳ ಸುನಾಮಿ ಉಕ್ಕಿತು. ತಲೆಕಡಿಯುವ ಬೆದರಿಕೆ ಒಡ್ಡಲಾಯಿತು. ಆಕೆಯನ್ನು ಬೆಂಬಲಿಸಿದವರ ಶಿರಚ್ಛೇದನವೂ ಆಯಿತು. ತತ್ತರಿಸಿದ್ದ ನೂಪುರ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದು ವಿವಿಧೆಡೆ ದಾಖಲಾಗಿರುವ ದೂರುಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸುವಂತೆ ಕೋರಿ. ಅದು ಆಕೆಯ ಹಕ್ಕು. ಆದರೆ, ನ್ಯಾಯಾಲಯ ಆಕೆಯನ್ನು ಛೇಡಿಸಿ ಮತ್ತಷ್ಟು ಜಜ್ಜರಿತರನ್ನಾಗಿ ಮಾಡಿದೆ.

ದೇಶಕ್ಕೆ ಬೆಂಕಿ ಹಚ್ಚಿದವಳು ನೀನೇ ಎಂದಿದೆ. ಕ್ಷೋಭೆಯನ್ನು ನಿವಾರಿಸಲು ಸಮಸ್ತ ದೇಶದ ಕ್ಷಮೆ ಕೋರಲು ಆದೇಶಿಸಿದೆ. ಆ ಆದೇಶ ವನ್ನು ಅನುಮೋದಿಸಿರುವ ಆದೀಶ್, ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶಂಸಿಸಿ ಪ್ರಕಟವಾದ ಪುಸ್ತಕದ ಜಂಟಿ ಲೇಖಕರು. ತನ್ನ
ಪಕ್ಷದವರಿಂದಲೇ ದೂರವಿಡಲ್ಪಟ್ಟ ನೂಪುರರಿಗೆ ತನ್ನ ಸಹೋದರ-ನ್ಯಾಯವಾದಿಯಿಂದಲೇ ಪರೋಕ್ಷ ಪ್ರಹಾರ. ಮುಖ್ಯವಾಹಿನಿ ಮಾಧ್ಯಮದಿಂದಲೂ ಬಹುತೇಕ ವರ್ಜ್ಯವಾದ ನೂಪುರ್‌ಗೆ ಬೆಂಬಲ ದೊರೆತಿರುವುದು ಶ್ರೀಸಾಮಾನ್ಯನಿಂದ.

ಕಾಂಗ್ರೆಸ್‌ನಿಂದ ದೊರೆಯುವ ಉದಾರ ಭಕ್ಷೀಸ್‌ನಿಂದಲೇ ಉದರ ಪೋಷಣೆ ಮಾಡಿಕೊಳ್ಳುವ ಬಹುತೇಕ ಮಾಧ್ಯಮಗಳಲ್ಲಿ ನೂಪುರ್ ಪರ ದನಿಗೆ ಸ್ಥಳಾ(ಸಮಯಾ)ವಕಾಶ ಇಲ್ಲ ಅಥವಾ ಇಲ್ಲವೇ ಇಲ್ಲವೆನ್ನು ವಷ್ಟು ವಿರಳ. ಬೆಂಬಲ ದೊರಕಿದ್ದರೆ ಅದು, ವಿಭಾಗೀಯ
ಬೆಂಚಿನ ನ್ಯಾಯಮೂರ್ತಿದ್ವಯರಬ್ಬರಾದ ಜೆ.ಬಿ.ಪರ್ದಿವಾಲಾ ನಿಯಂತ್ರಣದಲ್ಲಿಡಬೇಕೆಂದು ಬಯಸಿರುವ ಸಾಮಾಜಿಕ ಜಾಲತಾಣ ಗಳಲ್ಲಿ ಮಾತ್ರ.

ನಾನು ನನ್ನ ವಾದವನ್ನು ಮುಂದಿಡುವ ಮುನ್ನ ನನ್ನ ಹಿರಿಯ ಫೇಸ್ಬುಕ್ ಸ್ನೇಹಿತರೊಬ್ಬರ ಪ್ರತಿಕ್ರಿಯೆಯನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದೇನೆ. ‘ನೀವು ಕ್ಷಮೆ ಕೇಳಬೇಕು’ ಹಲವು ಹಂತಗಳಲ್ಲಿ ಮರಣದಂಡನೆ ದೃಡೀಕೃತವಾದ ಭಯೋತ್ಪಾದಕನಿಗೆ ಮಧ್ಯರಾತ್ರಿ ಎದ್ದುಕುಳಿತು ಆಲಿಸಿದ್ದಕ್ಕಾಗಿ, ಕಾಶ್ಮೀರದ ಹಿಂದೂಗಳ ಸಾಮೂಹಿಕ, ನಿರಾಶ್ರಿತರಾದವರ ದುಃಖದ ದೂರನ್ನು ದಶಕಗಳ ಕಾಲ ಅಳಿಸಲೂ ನಿರಾಕರಿಸಿದ್ದಕ್ಕಾಗಿ, ಜಾಗತಿಕ ನ್ಯಾಯಾಂಗದ ಇತಿಹಾಸಕ್ಕೆ ಅಪವಾದವಾಗುವಂತೆ ತಮ್ಮದೇ ಮುಖ್ಯನ್ಯಾಯಾಧೀಶರ ಕುರಿತು ಸುದ್ದಿ ಗೋಷ್ಠಿ ನಡೆಸಿದ್ದಕ್ಕಾಗಿ, ಸಾಧಿ ರೀತಾಂಬರ, ಸ್ವಾಮೀ ಅಸೀಮಾನಂದ ರಂತಹವರ ಮೇಲೆ ವರ್ಷಗಟ್ಟಲೆ ಆರೋಪ ಪಟ್ಟಿ ಸಲ್ಲಿಸದಿದ್ದರೂ ಜಾಮೀನು ನಿರಾಕರಿಸಿದ್ದಕ್ಕಾಗಿ, ಹತ್ತನ್ನೆರಡು ಕೋಟಿ ಬಹಳ ಏನಲ್ಲ ಎನ್ನುವ ನೆಪದಲ್ಲಿ ರಾಣಾ ಅಯುಬ್‌ಗೆ ಜಾಮೀನು ನೀಡಿದ್ದಕ್ಕಾಗಿ, ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಲಯ ಪೀಠದ ಸಮ್ಮುಖದಲ್ಲಿ ಆಗಿನ ಸಾಲಿಸಿ ಟರ್ ಜನರಲ್ ’ಆಪತ್ಕಾಲೀನ ಸ್ಥಿತಿ ಜಾರಿಯಲ್ಲಿದ್ದಾಗ ಪ್ರಜೆಯೊಬ್ಬನಿಗೆ ಕೊಂದರೆ ನ್ಯಾಯಾಲಯವೂ ಪ್ರಶ್ನಿಸುವಂತಿಲ್ಲ’ ಅಂದಾಗಲೂ ಕಿಮಕ್ ಅನ್ನದ ಅಸಮರ್ಥತೆಗಾಗಿ.

ಇದನ್ನು ನ್ಯಾಯಾಲಯ ನಿಂದನೆ ಅಂತ ಪರಿಗಣಿಸಿ ಶಿಕ್ಷೆ ನೀಡುವುದಾದರೆ ನಾನು ಶಿಕ್ಷೆ ಅನುಭವಿಸಲು ಸಿದ್ಧ. ಅವರ ಪ್ರತಿ ಶಬ್ದವನ್ನೂ ನಾನು ಅನುಮೋದಿಸುತ್ತಿದ್ದೇನೆ. ಅದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಪೂರ್ಣ ಚಲಾವಣೆ. ಇನ್ನು ನನ್ನದೇ ವಾದದ ಕೆಲವು ಪ್ರಮುಖ ಅಂಶಗಳು ಹೀಗಿವೆ.

ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣಮತಿಗಳಿಂದ ಇಂತಹ ಪ್ರಖರ ವಾದಗಳೂ ನಿತ್ಯ ಹೊರಹೊಮ್ಮುತ್ತವೆ. ಅವುಗಳಿಗೆ ಕಾರ್ಯಾಂಗವೂ, ಶಾಸಕಾಂಗವೂ, ನ್ಯಾಯಾಂಗವೂ ತೆರೆದುಕೊಳ್ಳಬೇಕು. ಜಾಲತಾಣಗಳನ್ನು ಹತ್ತಿಕ್ಕುವ ಮೂಲಕ ಅದಾಗದು. ನುರಿತ ಸಾರ್ವಜನಿಕ ರಿಂದ ಬರುವ ಇಂತಹ ಪ್ರಬುದ್ಧ ಅಭಿಪ್ರಾಯಗಳಿಗೆ ಬಹುತೇಕ ಮಾಧ್ಯಮಗಳ ಬಾಗಿಲು ಬಂದ್ ಆಗಿವೆ. ಪ್ರಜೆಗಳ ದನಿಯೇ ರಾರಾಜಿಸ ಬೇಕಾದ ವ್ಯವಸ್ಥೆಯಲ್ಲಿ ಅದನ್ನು ಹತ್ತಿಕ್ಕುವ ಯಾವುದೇ ಕ್ರಮ ಸಲ್ಲ.

ಪ್ರಜಾಸತ್ತಾತ್ಮಕ ಮನೋಸ್ಥಿತಿ ಭರತವರ್ಷದ ಜನರ ನರನಾಡಿಗಳಲ್ಲಿ ಅಂತರ್ಗತವಾಗಿರುವ ರಾಮಾಯಣದ ಕಾಲದಿಂದಲೂ ವ್ಯಕ್ತ ವಾಗಿದೆ. ಅಂತಹ ರಾಮಚಂದ್ರನೇ ತನ್ನ ಪತ್ನಿಯ ಪಾತಿವ್ರತ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದವನನ್ನು ಯಃಕಶ್ಚಿತ್ ಅಗಸನೆಂದು ತಿರಸ್ಕರಿಸಲಿಲ್ಲ, ಅವನ ತಲೆ ಕಡಿಯಲಿಲ್ಲ. ಕಡಿವಾಣ ಹಾಕಬೇಕಾದ್ದು ನೂಪುರರ ಮಾನ/ಪ್ರಾಣಹರಣಕ್ಕೆ ಪಣತೊಟ್ಟಿರುವ ನರ ರಾಕ್ಷಸರನ್ನು.

ಬೆಂಕಿ ಹಚ್ಚಲು ನೂಪುರ್ ಪ್ರೇರಣೆ ನೀಡಿದ್ದೇ ಆದರೆ, ಬೆಂಕಿಹಚ್ಚಿದವರನ್ನೂ ಬಲಿ ಹಾಕಬೇಕಲ್ಲ/ಖಂಡಿಸಬೇಕಲ್ಲ? ಮತಾಂಧ ಬೇಟೆಗಾರರು ಹಾದಿಬೀದಿಯಲ್ಲಿ ದಾಂಧಲೆ ಎಬ್ಬಿಸಿ ನೂಪುರರ ತಲೆದಂಡಕ್ಕಾಗಿ ಹಾತೊರೆಯುತ್ತಿರುವಾಗ ಆಕೆಯ ನಿಂದನೆ ಆಕೆಯನ್ನು ಆಹುತಿಯೋಗ್ಯ ಳನ್ನಾಗಿಸಬಹುದೆಂಬ ವಿವೇಚನೆ ನ್ಯಾಯಾಲಯಕ್ಕೆ ಕೈ ಕೊಡಬಾರದಿತ್ತು. ಮತೀಯ ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ ವಿದ್ಯುಕ್ತ
ವಾಗಿ ಪರವಾನಗಿ ನೀಡಿರುವಂಥ ಪಶ್ಚಿಮ ಬಂಗಾಳದಲ್ಲೂ ನೂಪುರ್ ಹಾಜರಾದಾಗ ಆಕೆಯ ರಕ್ಷಣೆ ವ್ಯವಸ್ಥೆ ಹೇಗಿರುತ್ತದೆಂಬುದನ್ನು ನ್ಯಾಯಾಲಯ ಕಲ್ಪಿಸಿಕೊಂಡಿದ್ದರೆ ಆಕೆಯ ಹಣೆಗೆ ಉದ್ದಗಲದ ಕುಂಕುಮ ಬಿದ್ದಂತೆ ನನ್ನ ಕಣ್ಣಿಗಂತೂ ಕಾಣುತ್ತಿರಲಿಲ್ಲ.

ನೂಪುರರನ್ನು ಬೆಂಬಲಿಸಿದ್ದಕ್ಕಾಗಿ ದರ್ಜಿಯ ತಲೆ ತೆಗೆದ ರಾಕ್ಷಸರು ತಮ್ಮ ಕುಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದನ್ನು ಗಮನದಲ್ಲಿರಿಸಿ, ಜಾಲತಾಣಿಗರ ಹಕ್ಕನ್ನು ಮೊಟಕುಗೊಳಿಸಬೇಕೆಂದು ಪರ್ದಿವಾಲಾರು ಹೇಳಿದ್ದರೆ ನನ್ನದೇನೂ ವಾದವಿಲ್ಲ. ಪರ್ದಿವಾಲಾರಲ್ಲಿ ನನ್ನದೊಂದು ಕೋರಿಕೆ: ಅಶ್ಲೀಲ ಹಾಗೂ ಹಿಂಸಾತ್ಮಕ ಪೋಸ್ಟ್‌ಗಳ ಮಾತು ಬಿಡಿ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣು ಇಂಗಿಸುವಷ್ಟಿವೆ. ಅದಾವುದನ್ನೂ ಮುಟ್ಟದ -ಸ್ಬುಕ್ ಮತ್ತು ಯೂ-ಟ್ಯೂಬ್ ಗಳು ಸಂತ್ರಸ್ತ ಹಿಂದೂಗಳ ಸಾತ್ವಿಕ ಕೋಪವನ್ನೂ ಹತ್ತಿಕ್ಕುವ ಧೋರಣೆ ಹೊಂದಿವೆ.

ಹಿಂದೂಗಳ ಒಡಲಿಗೆ ಬೆಂಕಿ ಹಚ್ಚುವಂಥ ಲೇಖನಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲೂ ಹೇರಳವಾಗಿ ಬಂದಾಗ ಆ ಸಂಸ್ಥೆಗಳನ್ನು ಮುಚ್ಚಿಬಿಡಿರೆಂದು ನ್ಯಾಯಾಲಯ ಆದೇಶಿಸಿದೆಯೇ? ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನೂಪುರರ ದೇಹಕ್ಕೂ ಶಿಕ್ಷೆ ಯಾಗಬೇಕು ಎಂಬ ವಿಕೃತ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಂದ ಮಂಗಳಾರತಿ
ಮಾಡಿಸಿಕೊಂಡಿದ್ದಾರೆ. ನಿಜ, ಹಲವಾರು ಬೇಜವಾಬ್ದಾರಿ ಪೋಸ್ಟ್‌ಗಳನ್ನೂ, ಪ್ರತಿಕ್ರಿಯೆಯನ್ನೂ ನಾನೂ ಓದಿದ್ದೇನೆ. ಅವುಗಳಿಗೆ ನನ್ನ ಸಮ್ಮತಿಯಿಲ್ಲ.

ನ್ಯಾಯಾಂಗಕ್ಕೆ ತಲೆಬಾಗುವ ಬಹುಸಂಖ್ಯಾತರಲ್ಲಿ ನಾನೂ ಒಬ್ಬ. ನ್ಯಾಯಾಲಯಕ್ಕೂ ವಂದಿಸಿಯೇ ಒಳಹೊಕ್ಕುತ್ತೇನೆ. ಕೊನೆಯದಾಗಿ, ಮುಕ್ತ ಮಾಧ್ಯಮ ಕುರಿತಂತೆ ನ್ಯಾಯಮೂರ್ತಿ ಪರ್ದಿವಾಲಾರ ಜನಾಂಗಕ್ಕೇ ಸೇರಿದ ನಾನೀ ಪಾಲ್ಖೀವಾಲಾರ ಅಭಿಪ್ರಾಯವನ್ನು ಇಲ್ಲಿ
ಉಖಿಸುತ್ತೇನೆ: ಜಗಳಗಂಟೀ ಪ್ರೆಸ್, ಸರ್ವವ್ಯಾಪೀ ಪ್ರೆಸ್, ಪ್ರತಿಷ್ಠೆ ತೋರುವ ಪ್ರೆಸ್ಸನ್ನು ಉನ್ನತ ಹುzಗಳನ್ನಲಂಕರಿಸಿದವರು ಅನುಭವಿ ಸಿಯೇ ತೀರಬೇಕು. ಏಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಮೌಲ್ಯ ಎಲ್ಲದಕ್ಕಿಂತಲೂ ಮುಖ್ಯ. ಅಷ್ಟೇ ಮುಖ್ಯ ಶ್ರೀಸಾಮಾನ್ಯನ ಮಾಹಿತಿ ಹಕ್ಕು.

ಆ ಹಕ್ಕಿನ ಪ್ರಾಬಲ್ಯವನ್ನು ಕಂಡುಕೊಂಡ ಕಾಂಗ್ರೆಸ್ ಪಕ್ಷ ಲಾಗಾಯ್ತಿನಿಂದಲೂ ಅದನ್ನು ಮೊಟಕುಗೊಳಿಸುವ ಹುನ್ನಾರ ನಡೆಸಿಕೊಂಡೇ ಬಂದಿದೆ. ಆ ಹುನ್ನಾರ ನಿರೀಕ್ಷಿತ ಫಲ ನೀಡದ ಸಂದರ್ಭಗಳಲ್ಲಿ ಮಾಧ್ಯಮವನ್ನು ವಶೀಕರಣಗೊಳಿಸಿಕೊಂಡದ್ದೂ ಉಂಟು. ಶಾಸಕಾಂಗ ವನ್ನು ಯಕ್ಹುಟ್ಟಿಸಿ, ಕಾರ್ಯಾಂಗವನ್ನು ಹದಗೆಡಿಸಿ, ನ್ಯಾಯಾಂಗವನ್ನು ದುರ್ಬಲಗೊಳಿಸಿ, ಮಾಧ್ಯಮವನ್ನು ನಿರ್ವೀರ್ಯಗೊಳಿಸಿದ ಸಾಧನೆ ಆ ಪಕ್ಷದ್ದು.

ಇದೆಲ್ಲದರಿಂದ ರೋಸಿಹೋದ ಪ್ರಜೆಗಳಿಗೆ ಸಾಮಾಜಿಕ ಜಾಲತಾಣದ ಸೀಮಿತ ಅವಕಾಶಗಳೂ ಬಂದಾಗಬೇಕೇ? ನ್ಯಾಯಾಲಯವೇ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವುದರ ಅನಪೇಕ್ಷತೆಯನ್ನು ಹಿಂದೊಮ್ಮೆ ಹೇಳಿದ್ದನ್ನು ಓದಿದ ನೆನಪು. ನ್ಯಾಯಮೂರ್ತಿಗಳ ತಂದೆ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದ ಕಾರಣಕ್ಕೆ ಜಾಲತಾಣಿಗರು ಇಂದು ಅದರ ಪ್ರಸ್ತಾಪ ಮಾಡುತ್ತಿರುವುದರ ಕುರಿತು ಒಂದು ಮಾತು: ಸ್ವನಿಯಂತ್ರಣ ಪ್ರಜಾಪ್ರಭುತ್ವದ ನಾಲ್ಕೂ ಸ್ಥಂಬಗಳಿಗೂ ಅಪೇಕ್ಷಿತ ಶ್ರೇಯ. ಇದೀಗ ಪ್ರಬಲಗೊಂಡಿರುವ ಸಾಮಾಜಿಕ ಮಾಧ್ಯಮಕ್ಕೂ ಅನ್ವಯ. ಮಾತಿನಲ್ಲಿ ಘನತೆ ಇದ್ದಷ್ಟೂ ನಮ್ಮ ಮಾತಿಗೆ ತೂಕ. ತೂಕವಿದ್ದಷ್ಟೂ, ಘನತೆ, ಗೌರವ.