ವಿಜ್ಞಾನ ತಂತ್ರಜ್ಞಾನದ ಬಳಕೆ ವರವೂ ಹೌದು ಶಾಪವೂ ಹೌದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವುದೇ ಸಾಕ್ಷಿ. ಈ ಸೈಬರ್ ಅಪರಾಧ ಪ್ರಕರಣಗಳು ಮಕ್ಕಳನ್ನೂ ಬಿಟ್ಟಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಮಾಣ ಶೇಕಡ 400 ಏರಿಕೆಯಾಗಿದೆ. ಈ ಪೈಕಿ ಬಹುತೇಕ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದವು ಎಂದು ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೋ ದ (ಘೆ ಇ ಆ) ಡೇಟಾ ಹೇಳಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ 2020ರಲ್ಲಿ ದಾಖಲಾಗಿರುವ 842 ಆನ್‌ಲೈನ್ ಅಪರಾಧ ಕೇಸ್‌ಗಳ ಪೈಕಿ 738 ಮಕ್ಕಳನ್ನು ಲೈಂಗಿಕ ಶೋಷಣೆಗೆ ಸಂಬಂಧಿಸಿವೆ.
2019ರಲ್ಲಿ ಮಕ್ಕಳ ವಿರುದ್ಧ ಆಗಿರುವ ಸೈಬರ್ ಅಪರಾಧಗಳ ಸಂಖ್ಯೆ 164, 2018ರಲ್ಲಿ ಇದು 117 ಮತ್ತು ಸಣ್ಣ ಪ್ರಮಾಣದ್ದೆಂಬಂತೆ ಭಾಸವಾದರೂ 2019ಕ್ಕೆ ಹೋಲಿಸಿದರೆ ಹೆಚ್ಚಾಗಿರುವ ಪ್ರಮಾಣ ಎಚ್ಚರಿಕೆ ನೀಡು ವಂಥದ್ದು. ಯುನಿಸೆಫ್ ನ 2020ರ ವರದಿ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 25 ವರ್ಷ ಮತ್ತು ಅದರೊಳಗಿನವರ ಪೈಕಿ ಶೇಕಡ 13 ಜನರಿಗೆ ಇಂಟರ್ನೆಟ್ ಸೌಲಭ್ಯ ಮನೆಯ ಸಿಕ್ಕಿದೆ. ಇದಕ್ಕೆ ಕೋವಿಡ್ ಪ್ರಯುಕ್ತ ಲಾಕ್‌ಡೌನ್ ಮತ್ತು ಆನ್‌ಲೈನ್ ತರಗತಿಗಳು ಕಾರಣ ಎಂದು ಹೇಳಲೇಬೇಕು. ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಶಾಲೆಗೆ ಹೋಗುವ ಮಕ್ಕಳ ಪೈಕಿ ಶೇಕಡ 14 ಮಕ್ಕಳಿಗೆ ಮನೆಯ ಇಂಟರ್ನೆಟ್ ಸೌಲಭ್ಯ ಲಭ್ಯವಿದೆ.ಈ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡು ಮಕ್ಕಳು ತಮಗರಿವಿಲ್ಲದೇ ಸೈಬರ್ ಅಪರಾದ ಪ್ರಕರಣ ಗಳಲ್ಲಿ ಸಿಲುಕಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಭಾರತದಲ್ಲಿ ಕಳೆದ ವರ್ಷ ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ 128531 ಇತ್ತು. 2019ರಲ್ಲಿ ಇದು 148185 ಇತ್ತು. ಪ್ರತಿನಿತ್ಯ 400ಕ್ಕೂ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ ನಡೆದಿದೆ. ಅಪರಾಧ ಪ್ರಕರಣದಲ್ಲಿ ಇಳಿಕೆಯಾದರೂ, ಆನ್ಲೈನ್ ಅಪರಾಧ ಏರಿಕೆಯಾಗಿದೆ. ಎಂದು ವರದಿ ಹೇಳಿದೆ.
ದೇಶದ ಒಟ್ಟಾರೆ ಇಂತಹ ಪ್ರಕರಣಗಳಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿಯೂ 144 ಪ್ರಕರಣಗಳು ದಾಖಲಾಗಿ ಎರಡನೇ ಸ್ಥಾನದಲ್ಲಿರುವುದು ನಮಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಲಾಕ್‌ಡೌನ್ ಮತ್ತು ಶಾಲೆಗಳು ಮುಚ್ಚಿದ ಪರಿಣಾಮ ಸಮಾಜದಲ್ಲಿ ಬೆರೆಯುವ ಅವಕಾಶ ಸಿಗದೆ ಮಕ್ಕಳ ಮಾನಸಿಕ, ಸಾಮಾಜಿಕ ಯೋಗಕ್ಷೇಮವು ಆತಂಕದಲ್ಲಿದೆ. ಇದು ಮಕ್ಕಳಲ್ಲಿ ಒಂಟಿತನ, ಭಾವನೆಗಳ ವೈಪರೀತ್ಯ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಇದರ ಪರಿಣಾಮ ಮಕ್ಕಳು ಅನಿವಾರ್ಯವಾಗಿ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಂಟರ್ನೆಟ್ ಬಳಕೆ ಹೆಚ್ಚಿಸಿದ್ದಾರೆ.
ಇದು ಮಕ್ಕಳನ್ನು ಗೊತ್ತಿಲ್ಲದೆಯೇ ಲೈಂಗಿಕ ಶೋಷಣೆಯ ಬಲೆಗೆ ಬೀಳುವಂತೆ ಮಾಡಿರಬಹುದು. ಹಾಗಾದರೆ ಇಂತಹ ವಿಷಮ ಸ್ಥಿತಿಯಲ್ಲಿ ನಮ್ಮ ಮಕ್ಕಳನ್ನು ಕಾಪಾಡುವುದಾದರೂ ಹೇಗೆ? ಎಂಬುದರ ಬಗ್ಗೆ ಎಲ್ಲರೂ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕಿದೆ. ಇಂಟರ್ನೆಟ್‌ನ ಸರಿಯಾದ ಮತ್ತು ಸುರಕ್ಷಿತ ಬಳಕೆ ವಿಚಾರ ದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಆದರೆ ಸಮಾಜದಲ್ಲಿ ಈ ತಿಳಿವಳಿಕೆ ನೀಡಬೇಕಾದವರಿಗೆ ಈ ಬಗ್ಗೆ ಅರಿವಿನ ಕೊರತೆ ಇದೆ. ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳು ಎದುರಿಸುತ್ತಿರುವ ಅಪಾಯಗಳನ್ನು ಮನೆಯಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ವಿವರಿಸಬೇಕು.
ಸೈಬರ್ ತಂತ್ರಜ್ಞಾನ ಮತ್ತು ಅದರಿಂದ ಆಗಬಹುದಾದ ಅಪರಾಧ ಪ್ರಕರಣಗಳ ಕುರಿತಾದ ಒಂದು ಸಾಮಾನ್ಯ ಕೈಪಿಡಿಯನ್ನು ತಜ್ಞರು ಸಿದ್ದಪಡಿಸಿ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಮಕ್ಕಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಸಾಧನಗಳನ್ನು ಬಳಸುವಾಗ ನಿಗಾ ಇಟ್ಟಿರಬೇಕು. ಸಾಧ್ಯವಾ ದಷ್ಟೂ ನಮ್ಮ ಡಿಜಿಟಲ್ ಸಾಧನಗಳಿಗೆ ಆಂಟಿವೈರಸ್ ಮುಂತಾದ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಮೇಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳನ್ನು ಸ್ವಲ್ಪಮಟ್ಟಿಗೆ ಕಡಿಮೆಮಾಡಬಹುದು.
ತಂತ್ರಜ್ಞಾನ ಎಂಬುದು ಎರಡು ಅಲಗಿನ ಕತ್ತಿ ಇದ್ದ ಹಾಗೆ ಈ ತಂತ್ರಜ್ಞಾನ ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು ಆಗ ಮಾತ್ರ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳು ಕಡಿಮೆಯಾಗಲು ಸಾದ್ಯ. ಇಲ್ಲವಾದರೆ ಇಂಟರ್ನೆಟ್ ಇರುವ ಮೊಬೈಲ್ ಎಂಬ ಟೈಂಬಾಂಬ್ ನ್ನು ಕೈಯ ಹಿಡಿದುಕೊಂಡು ಊರೆಲ್ಲ ಸುತ್ತುತ್ತೇವೆ.ಅಪಾಯ ನಮ್ಮ ಬೆನ್ನ ಹಿಂದೆಯೇ ಇದೆ ಎಂದು ನಮಗೆ ತಿಳಿಯುವುದೇ ಇಲ್ಲ.
– ಸಿಹಿಜೀವಿ