ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
ಈ ಕೋವಿಡ್ ಕಾಯಿಲೆ ಮಾನವ ದೇಹದಲ್ಲಿ ಯಾವ ರೀತಿ ತನ್ನ ಪ್ರತಾಪ ತೋರುತ್ತದೆ ಎಂಬುದು ನಿಧಾನವಾಗಿ ಅನಾವರಣ
ಗೊಳ್ಳುತ್ತಿದೆ. ಈಗಾಗಲೇ ಕೋವಿಡ್ ಉಂಟುಮಾಡುತ್ತಿರುವ ಹಲವು ರೀತಿಯ ತೊಡಕು ಗಳನ್ನು ಹಾಗೂ ಕಾಯಿಲೆಯ
ನಂತರದ ಪರಿಣಾಮಗಳ ಬಗೆಗೆ ಇದೇ ಅಂಕಣದಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದೇನೆ.
ಇತ್ತೀಚಿನ ಒಂದು ವೃತ್ತ ಪತ್ರಿಕೆಯ ವರದಿ ನನ್ನ ಗಮನ ಸೆಳೆಯಿತು. ಕರ್ನಾಟಕದ ಮಲೆನಾಡಿನಲ್ಲಿ ಅದರಲ್ಲಿಯೂ ನನ್ನ ಜಿಲ್ಲೆ
ಶಿವಮೊಗ್ಗ ಕೇಂದ್ರವಾಗಿ 8 ಮಕ್ಕಳಲ್ಲಿ ಕವಾಸಾಕಿ ರೋಗದ ಲಕ್ಷಣಗಳು ಕಂಡುಬಂದಿದ್ದು 4 ಮಕ್ಕಳು ಮರಣ ಹೊಂದಿದ್ದಾರೆ. ಕರೋನಾ ಸೋಂಕಿತ ಮಕ್ಕಳಲ್ಲಿ ಇದೀಗ ಕವಾಸಾಕಿ ಕಾಯಿಲೆಯ ಆರೋಗ್ಯ ಕಾರ್ಯಕರ್ತರ ಚಿಂತೆಗೆ ಕಾರಣವಾಗಿದೆ.
ನಂತರ ನಾನು ಸ್ವಲ್ಪ ವಿವರಗಳನ್ನು ಜಾಲಾಡಿಸಿದಾಗ ರಾಯಚೂರು ಜಿಲ್ಲೆಯ ಸಿಂಧನೂರು ಭಾಗದಲ್ಲಿ 6 ಮಕ್ಕಳಲ್ಲಿ ಇದೇ ಕಾಯಿಲೆ ಕಾಣಿಸಿಕೊಂಡದ್ದು ಇತ್ತೀಚೆಗೆ ವರದಿಯಾಗಿದೆ. ಹಾಗೆಯೇ ಭಾರತದ ಹಲವೆಡೆ ಮಕ್ಕಳಲ್ಲಿ ಈ ತರಹದ ಲಕ್ಷಣಗಳು ಹಲವರಲ್ಲಿ ಕಾಣಿಸಿಕೊಂಡಿವೆ. ಬಹಳ ಗಮನಿಸ ಬೇಕಾದ ವಿಚಾರ ಎಂದರೆ ಕವಾಸಾಕಿ ಕಾಯಿಲೆ ಸಾಮಾನ್ಯವಾಗಿ 5 ವರ್ಷಗಳ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಕರೋನಾ ಸಂದರ್ಭದಲ್ಲಿ ಮೇಲಿನ ಲಕ್ಷಣಗಳು 8 ರಿಂದ 14 ವರ್ಷ – ಈ
ವಯಸ್ಸಿನವರಲ್ಲಿ ಕಂಡುಬಂದಿದ್ದು ತೀರಾ ವಿಶೇಷ ಗಮನಾರ್ಹ ಸಂಗತಿ ಎಂದು ಮಕ್ಕಳ ತಜ್ಞರ ಅಭಿಮತ.
ಹಾಗೆಯೇ ಮತ್ತೆ ಅಂತರ್ಜಾಲದಲ್ಲಿ ಜಾಲಾಡಿಸಿದಾಗ ಅಮೆರಿಕ, ಯುರೋಪಿನ ಹಲವೆಡೆ ಈ ಕೋವಿಡ್ ಸಂದರ್ಭದಲ್ಲಿ ಹಲವಾರು ಮಕ್ಕಳಲ್ಲಿ ಕಂಡುಬಂದಿವೆ. ನಿಖರವಾದ ಅಂಕಿ ಸಂಖ್ಯೆಗಳು ಲಭ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಈ ಲಕ್ಷಣಗಳ ಕಾಯಿಲೆಯನ್ನು ಗುರುತಿಸಿದ್ದು, ಅದು Multi System Inflammatory Disorder ಎಂದು ಹೆಸರು ಕೊಟ್ಟಿದೆ. ದೇಹದ ಹಲವು ಅಂಗಗಳಲ್ಲಿ ಕಂಡು ಬರುವ ಉರಿಯೂತದ (inflammation) ಕಾಯಿಲೆ ಎಂದು ಇದರರ್ಥ.
ಇದು ಸಾಮಾನ್ಯವಾಗಿ ಕೋವಿಡ್ ಕಾಯಿಲೆ ಕಂಡು ಬಂದು 2-3 ವಾರಗಳ ನಂತರ ಈ ಕಾಯಿಲೆಯ ಲಕ್ಷಣಗಳು ಕಂಡು ಬರುತ್ತವೆ ಎನ್ನಲಾಗಿದೆ. ಈ ರೀತಿಯ ಮಕ್ಕಳಲ್ಲಿ ಕೋವಿಡ್ ಕಾಯಿಲೆಯ ಲಕ್ಷಣಗಳು ತೀವ್ರವಾಗೇನೂ ಇರುವುದಿಲ್ಲ.
ಕವಾಸಾಕಿ ಕಾಯಿಲೆ: ಈಗ ನಾವು ಕವಾಸಾಕಿ ಕಾಯಿಲೆಯ ಬಗ್ಗೆ ಗಮನಹರಿಸೋಣ. ಮೇಲೆ ತಿಳಿಸಿದಂತೆ ಇದು ಸಾಮಾನ್ಯವಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದರ ಆರಂಭಿಕ ಲಕ್ಷಣವೆಂದರೆ ತುಂಬಾ ತೀವ್ರ ಪ್ರಮಾಣದ ಜ್ವರ. ಸಾಮಾನ್ಯವಾದ ಜ್ವರ ಎಲ್ಲರಿಗೆ ಗೊತ್ತಿರುವಂತೆ ಪ್ಯಾರಾಸಿಟಮಾಲ್ ಅಥವಾ ಅಸಿಟಮೈನೋಫೆನ್ ಮಾತ್ರೆಗಳಿಂದ ಕಡಿಮೆ ಯಾಗುತ್ತದೆ.
ಆದರೆ ಈ ಜ್ವರ ಆ ಮಾತ್ರೆಗಳಿಗೆ ಬಗ್ಗುವುದಿಲ್ಲ. (ಕಡಿಮೆಯಾಗುವು ದಿಲ್ಲ) ಈ ತರಹದ ವಿಪರೀತ ಜ್ವರ ಹಲವು ದಿನಗಳವರೆಗೆ ಇರಬಹುದು. ಇದು ಕಾಯಿಲೆಯ ಅಕ್ಯೂಟ್ ಫೇಸ್ ಎಂಬ ಹಂತ. ಕೆಲವರಲ್ಲಿ ಇದು ತೀವ್ರವಾದ ಕೆರಳಿಕೆ (Irritability) ಉಂಟು ಮಾಡುತ್ತದೆ. ಈ ಕಾಯಿಲೆ 2-3 ವಾರ ಅಥವಾ 4 ವಾರಗಳವರೆಗೂ ವಿಸ್ತರಿಸಬಹುದು. ಮಗುವಿನಲ್ಲಿ ಜ್ವರವು ದೀರ್ಘ ಕಾಲ ಕಾಣಿಸಿಕೊಂಡರೆ ಅಂಥ ಮಗುವಿನ ಹೃದಯಕ್ಕೆ ತೊಂದರೆಯಾಗುವ ಸಾಧ್ಯತೆ ಜಾಸ್ತಿ. ಯಾವುದೇ ರೀತಿಯ ಜ್ವರ ಕಡಿಮೆ ಮಾಡುವ ಔಷಧ ಅಥವಾ ಆಂಟಿಬಯೋಟಿಕ್‌ಗಳಿಂದ ಈ ಕಾಯಿಲೆಯ ಜ್ವರವನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಜ್ವರದ ನಂತರ ಎರಡೂ ಕಣ್ಣುಗಳಲ್ಲಿ ಕಪ್ಪು ಗುಡ್ಡೆಯ (Cornea) ಪಕ್ಕದ ಕಂಜಂಕ್ಟೆ ವದಲ್ಲಿ ಉರಿಯೂತ ಕಾಣಿಸಿಕೊಳ್ಳು ತ್ತದೆ.
ಇದು ನೋವನ್ನೇ ಉಂಟುಮಾಡುವುದಿಲ್ಲ ಎಂಬುದು ವಿಶೇಷ. ಅಲ್ಲದೆ ಕಣ್ಣಿನ ಮುಂಭಾಗದ ಸೋಂಕು Anterior
Uveitis ಎಂಬುದು ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಹಾಗೆಯೇ ಬಾಯಿಯಲ್ಲಿ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾಲಿಗೆಯು ಒಂದು ರೀತಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ, ತುಟಿಗಳು ದಪ್ಪಗಾಗುತ್ತವೆ ಮತ್ತು ತುಟಿಗಳಲ್ಲಿ ಉದ್ದವಾಗಿ ಒಡಕು ಕಾಣಿಸಿಕೊಳ್ಳುತ್ತದೆ. ಹಾಗೆಯೇ ರಕ್ತಸ್ರಾವ ಆಗಾಗ ಆಗುತ್ತಿರುತ್ತದೆ. ಬಾಯಿ ಗಂಟಲಿನ ಭಾಗಗಳು ಕೆಂಪಾಗಿ ಕಾಣುತ್ತವೆ. ಬಾಯಿಯ ಈ ಲಕ್ಷಣಗಳು Necrotizing microvasculitis ಮತ್ತು Fibrinoid necrosis ಗಳಿಂದ ಕಾಣಿಸಿಕೊಳ್ಳುತ್ತವೆ.
ಕುತ್ತಿಗೆಯ ಭಾಗದಲ್ಲಿ ಗಂಟುಗಳು (Cervical Lymphadenopathy) ಶೇ.50-75ರಷ್ಟು ಮಕ್ಕಳಲ್ಲಿ ಕಂಡು ಬರುತ್ತವೆ. ಈ ಲಿಂಫ್ ಗಂಟುಗಳಲ್ಲಿ ನೋವಿರುವುದಿಲ್ಲ. ಕೆಲವು ಮಕ್ಕಳಲ್ಲಿ ಬೇಧಿ, ಎದೆನೋವು, ಹೊಟ್ಟೆನೋವು, ವಾಂತಿ ಕಾಣಿಸಿಕೊಳ್ಳಬಹುದು. ಕೈ ಕಾಲುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಂಗೈ ಮತ್ತು ಅಂಗಾಲುಗಳಲ್ಲಿ ಎರಿಥೀಮಾ ಅನ್ನುವ ರೀತಿಯ ಲಕ್ಷಣ ಕಾಣಿಸಿಕೊಳ್ಳುತ್ತದೆ.
ಚರ್ಮದಲ್ಲಿ ಮ್ಯಾಕ್ಯುಲೋಪ್ಯಾಪುಲಾರ್ ಎರಿತೋಮ್ಯಾಟಸ್ ದದ್ದುಗಳು ( Rashes) ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಸೊಂಟದ ಭಾಗದಲ್ಲಿ ಕಾಣಿಸಿಕೊಂಡು ನಂತರ ಮುಖ, ಕೈಕಾಲುಗಳು ಮತ್ತು ಜನನಾಂಗದ ಬದಿಯ ಭಾಗದಲ್ಲಿ ಕಾಣಿಸಿಕೊಳ್ಳ
ಬಹುದು. ಇದಲ್ಲದೆ ಹಲವು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಕಾಯಿಲೆಯ ಆರಂಭದ ಹಂತದಲ್ಲಿ ದೇಹದ ವಿವಿಧ
ಅಂಗಗಳಲ್ಲಿ ಉರಿಯೂತದ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ದೇಹದ ವಿವಿಧ ಸಂದುಗಳಲ್ಲಿ (Joints) ನೋವು, ಬಾವು ಅಥವಾ ಊದಿಕೊಳ್ಳುವುದು, ಹಾಗೆಯೇ ಮಯೋಕಾರ್ಡೈಟಿಸ್, ಪೆರಿಕಾರ್ಡೈಟಿಸ್ (ಅಂದರೆ ಹೃದಯದ ತೊಂದರೆಗಳು), ನ್ಯುಮೋನೈಟಿಸ್ (ಶ್ವಾಸಕೋಶದ ತೊಂದರೆ), ಹೆಪಟೈಟಿಸ್‌ಗಳು ಕಾಣಿಸಿಕೊಳ್ಳಬಹುದು. ಮೊದಲು ತಿಳಿಸಿದಂತೆ ಈ ಕಾಯಿಲೆಯಲ್ಲಿ ಕಾಣಿಸಿಕೊಳ್ಳುವ ಮುಖ್ಯ ಹೃದಯದ ತೊಂದರೆ ಎಂದರೆ
ಕಾರೊನರಿ ಆರ್ಟರಿ ಅನ್ಯೂರಿಸಂ. ಅಂದರೆ ಹೃದಯಕ್ಕೆ ರಕ್ತ ಪೂರೈಸುವ ಶುದ್ಧ ರಕ್ತನಾಳದಲ್ಲಿ ಒಂದು ರೀತಿಯ ಅನಿಯಮಿತ ಊತ ಅಥವಾ ಬಾವು ಕಂಡು ಬರುತ್ತದೆ.
ಅದೇ ಮುಂದುವರಿದು ಹೃದಯಾಘಾತ (Myocardial Infarction) ಬರಬಹುದು. ಹಾಗೆಯೇ ಮರಣವೂ ಸಂಭವಿಸಬಹುದು. ಈ ಹಂತದ ಆರಂಭದ ಚಿಕಿತ್ಸೆ ಮಾಡಿದರೆ ಮುಂದಿನ ತೊಡಕುಗಳನ್ನು ತಪ್ಪಿಸಬಹುದು, ಹಾಗೆಯೇ ಕಾಯಿಲೆ ಒಂದು ಹಂತದಲ್ಲಿ ವಾಸಿಯೂ ಆಗುತ್ತದೆ. ಈ ಕಾಯಿಲೆ ಉಂಟುಮಾಡುವ ತೊಡಕುಗಳ (Complications) ಬಗ್ಗೆ ಗಮನಹರಿಸುವ ಮೊದಲು ಈ ಕಾಯಿಲೆಯ ಸ್ವಾರಸ್ಯಕರ ಇತಿಹಾಸದ ಬಗ್ಗೆ ಒಂದು ನೋಟ ಹರಿಸೋಣ.
1961ರಲ್ಲಿ ಟೊಮಿಸಾಕು ಕವಾಸಾಕಿ ಎಂಬ ಜಪಾನಿನ ವೈದ್ಯರು 4 ವರ್ಷದ ಮಗುವಿನಲ್ಲಿರುವ ಜ್ವರ ಮತ್ತು ಚರ್ಮದ ದದ್ದು ಗಳನ್ನು ( Rashes) ಗಮನಿಸಿ ಈ ಕಾಯಿಲೆಯನ್ನು ಮೊಟ್ಟಮೊದಲ ಬಾರಿಗೆ ವರದಿ ಮಾಡಿದರು. ಆ ನಂತರ ಅವರು ಇದೇ ರೀತಿಯ ರೋಗ ಲಕ್ಷಣ ಹೊಂದಿದ್ದ 50 ಮಕ್ಕಳ ಬಗ್ಗೆ ವರದಿ ಸಲ್ಲಿಸಿದರು. ಆನಂತರ ಅವರು ಮತ್ತು ಅವರ ಸಹೋದ್ಯೋಗಿಗಳು ಈ ಕಾಯಿಲೆಯಿಂದ ಹೃದಯಕ್ಕೆ ತೊಂದರೆ ಉಂಟುಮಾಡಿದ 23 ರೋಗಿಗಳ ವಿವರಗಳನ್ನು ಅಧ್ಯಯನ ಮಾಡಿ ವರದಿ
ಮಾಡಿದರು.
ಅದರಲ್ಲಿ 11 ರೋಗಿಗಳಲ್ಲಿ (ಶೇ.48) ಇಸಿಜಿ ವೈಪರೀತ್ಯಗಳಿದ್ದವು. ೧೯೭೪ರಲ್ಲಿ ಮೊದಲ ಬಾರಿಗೆ ಈ ಕಾಯಿಲೆಯ ವಿವರಗಳು ಇಂಗ್ಲಿಷ್‌ನಲ್ಲಿ ಪ್ರಕಟವಾದವು. 1976ರಲ್ಲಿ ಮೆಲಿಷ್ ಮತ್ತು ಸಹೋದ್ಯೋಗಿಗಳು ಹವಾಯಿನಲ್ಲಿ 16 ಮಕ್ಕಳಲ್ಲಿ ಇದೇ ರೀತಿಯ ರೋಗ ಲಕ್ಷಣಗಳನ್ನು ವರದಿ ಮಾಡಿದರು. ಕವಾಸಾಕಿ ಮತ್ತು ಮೆಲಿಷ್ ಅವರುಗಳು ಈ ಕಾಯಿಲೆಯನ್ನು ಪತ್ತೆ ಹಚ್ಚಲು ಏಕ ರೀತಿಯ ಲಕ್ಷಣಗಳನ್ನು ವರದಿ ಮಾಡಿದ್ದು ಕಾಕತಾಳೀಯ. ಈಗಲೂ ಜಗತ್ತಿನಾದ್ಯಂತ ಎಲ್ಲಾ ತಜ್ಞ ವೈದ್ಯರುಗಳೂ ಇದೇ ಕಾಯಿಲೆ ಪತ್ತೆ ಹಚ್ಚುವ ಕ್ರಮವನ್ನು ಅನುಸರಿಸುತ್ತಿದ್ದಾರೆ.
ಕವಾಸಾಕಿಯವರು 2020ರ ಜೂನ್ ನಲ್ಲಿ ತಮ್ಮ 95ನೆಯ ವಯಸ್ಸಿನಲ್ಲಿ ಮೃತರಾದರು. ಈ ಕಾಯಿಲೆ 1960 ಮತ್ತು 1970ರ ದಶಕಗಳಲ್ಲಿ ಮಾತ್ರ ಕಂಡುಬಂದುದೇ ಹೌದೇ? ಹಾಗಾದರೆ ಅದಕ್ಕಿಂತ ಮೊದಲು ಈ ಕಾಯಿಲೆ ಇರಲಿಲ್ಲವೇ? ಎನ್ನುವ ಸಂದೇಹ ಹೊರಬಂದಿತು. 1970ರಲ್ಲಿ ಮೃತಪಟ್ಟ 7 ವರ್ಷದ ಹುಡುಗನಲ್ಲಿ ಕಾರೊನರಿ ರಕ್ತ ನಾಳಗಳಲ್ಲಿ 3 ಅನ್ಯೂರಿಸಂಗಳು
ಮತ್ತು ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದ್ದವು. ಹಾಗಾಗಿ ಈ ಕಾಯಿಲೆ ಸ್ಕಾರ್ಲೆಟ್ ಕಾಯಿಲೆ ಮತ್ತು ಪಾಲಿಆರ್ಟರೈಟಿಸ್
ನೋಡೋಸ ಕಾಯಿಲೆಗಳೆಂದು ತಪ್ಪು ತಿಳಿದು ವೈದ್ಯರು ಇದರ ಬಗ್ಗೆ ಗಮನಹರಿಸದಂತೆ ಆಗಿತ್ತು ಎಂದು ಈಗಿನ ತಿಳಿವಳಿಕೆ. ಅಮೆರಿಕ, ಜಪಾನ್ ಮತ್ತು ಇತರ ಮುಂದುವರಿದ ದೇಶಗಳಲ್ಲಿ ಚಿಕ್ಕ ಮಕ್ಕಳಲ್ಲಿ ಈವರೆಗೆ ಕಾಣಿಸಿಕೊಳ್ಳುತ್ತಿದ್ದ ರುಮ್ಯಾಟಿಕ್ ಜ್ವರದ ಕಾಯಿಲೆಗಳಿಗಿಂತ ಕವಾಸಾಕಿ ಕಾಯಿಲೆಯೇ ಆ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ಹೃದಯದ ಮುಖ್ಯ ಕಾಯಿಲೆ ಎನ್ನಲಾಗಿದೆ.
ಕವಾಸಾಕಿ ಹೆಚ್ಚು ತೊಡಕನ್ನುಂಟುಮಾಡುವ (Complications) ಅಂಗ ಎಂದರೆ ಹೃದಯ. ಕಾಯಿಲೆಯನ್ನು ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಶೇ.25ರಷ್ಟು ಮಕ್ಕಳಲ್ಲಿ ಹೃದಯದ ರಕ್ತ ನಾಳಗಳು ವ್ಯಾಸ್ಕುಲೈಟಿಸ್ ಎಂಬ ಉರಿಯೂತಕ್ಕೆ ಒಳಗಾಗುತ್ತವೆ. ಕಾಯಿಲೆಯ 10 ದಿನಗಳ ನಂತರ ಕೆಲವರಲ್ಲಿ ಕಾಣಿಸಿಕೊಂಡು 4 ವಾರಗಳವರೆಗೆ ಉಳಿದವರಲ್ಲಿ ಕಾಣಿಸಿಕೊಳ್ಳುತ್ತದೆ.
ಕಾಯಿಲೆ ಆರಂಭವಾಗಿ 18 ರಿಂದ 25 ದಿನಗಳ ನಂತರ ಕೆಲವು ಮಕ್ಕಳಲ್ಲಿ ಸ್ಯಾಕ್ಯುಲಾರ್ ಮತ್ತು ಫ್ಯೂಸಿಫಾರಂ ಅನ್ಯೂರಿಸಂ ಗಳು ಕಂಡುಬರುತ್ತವೆ. ಸರಿಯಾಗಿ ಚಿಕಿತ್ಸೆ ಮಾಡಿದ ಮಕ್ಕಳಲ್ಲಿ ಸಹಿತ ಶೇ.5ರಷ್ಟು ಮಕ್ಕಳಲ್ಲಿ ಸಣ್ಣ ಪ್ರಮಾಣದ ಅನ್ಯೂರಿಸಂ ಮತ್ತು ಶೇ.1 ಮಕ್ಕಳಲ್ಲಿ ತೀರಾ ದೊಡ್ಡ ಗಾತ್ರದ ಜೈಂಟ್ ಅನ್ಯೂರಿಸಂಗಳು ಕಂಡುಬರುತ್ತವೆ. ಈ ಅನ್ಯೂರಿಸಂ ಗಳು ಕೆಲವೊಮ್ಮೆ ಛಿದ್ರಗೊಂಡು ಮರಣ ಸಂಭವಿಸಬಹುದು. ಇನ್ನು ಕೆಲವು ಮಕ್ಕಳಲ್ಲಿ ಈ ಅನ್ಯೂರಿಸಂಗಳು ರಕ್ತ ಹೆಪ್ಪುಗಟ್ಟುವಿಕೆಗೆ ಎಡೆಮಾಡಿ
ಹೃದಯಾಘಾತಕ್ಕೆ ತಿರುಗಿ ನಂತರ ಮರಣ ಬರಬಹುದು.
ಹೆಚ್ಚಿನ ಮಕ್ಕಳಲ್ಲಿ ಕಾಯಿಲೆ ಆರಂಭವಾಗಿ 2 ರಿಂದ 12 ವಾರಗಳ ಒಳಗೆ ಮರಣ ಬರುತ್ತದೆ. ಕವಾಸಾಕಿ ಕಾಯಿಲೆಯಿಂದ ಬರುವ ಕರೋನರಿ ರಕ್ತನಾಳದ ಕಾಯಿಲೆ ಸಮಯ ಹೋದ ಹಾಗೆ ಬದಲಾಗುತ್ತಾ ಹೋಗುತ್ತದೆ. ಕಾಯಿಲೆ ಬಂದ ಶೇ.50ರಷ್ಟು ಮಕ್ಕಳಲ್ಲಿ ತನ್ನಿಂದ ತಾನೇ ಕಾಯಿಲೆ ವಾಸಿಯಾಗುವುದು ಕಂಡು ಬಂದಿದೆ. ಕಾಯಿಲೆ ವಾಸಿಯಾಗುತ್ತಾ ಬಂದ ಹಾಗೆ ಕೆಲವು ಮಕ್ಕಳಲ್ಲಿ ರಕ್ತನಾಳಗಳು ಕಿರಿದಾಗುತ್ತಾ ಬರುತ್ತವೆ. ಪರಿಣಾಮ ಎಂದರೆ ಹೃದಯಕ್ಕೆ ಪೂರೈಕೆಯಾಗುವ ರಕ್ತವು ಗಮನಾರ್ಹವಾಗಿ ಕುಂಠಿತ ಗೊಳ್ಳುತ್ತದೆ. ಪರಿಣಾಮ ಎಂದರೆ ಹೃದಯದ ಮಾಂಸಖಂಡಗಳು ಸಾಯುತ್ತವೆ. ಹಾಗಾಗಿ ಹೃದಯಾಘಾತದಲ್ಲಿ ಕೊನೆಗೊಳ್ಳುತ್ತದೆ.
ಹಾಗಾಗಿ ಕವಾಸಾಕಿ ಕಾಯಿಲೆಯಿಂದ ಮರಣ ಬರುವ ಮುಖ್ಯ ಕಾರಣ ಎಂದರೆ ರಕ್ತನಾಳದ ಅನ್ಯೂರಿಸಂ ಕಿರಿದುಗೊಂಡು ಅಥವಾ ಥ್ರಾಂಬೋಸಿಸ್‌ಗೆ ಒಳಗಾಗಿ ಹೃದಯಾಘಾತ ಬರುವುದೇ ಆಗಿದೆ. ಈ ಹೃದಯಾಘಾತ ಬರುವ ಸಾಧ್ಯತೆ ಕಾಯಿಲೆ ಕಾಣಿಸಿಕೊಂಡ ಮೊದಲ ಒಂದು ವರ್ಷದಲ್ಲಿಯೇ ಕಂಡುಬರುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮಕ್ಕಳಲ್ಲಿ
ಮತ್ತು ವಯಸ್ಕರಲ್ಲಿ ಕಂಡುಬರುವ ಹೃದಯಾಘಾತಗಳ ರೋಗ ಲಕ್ಷಣಗಳಲ್ಲಿ ವ್ಯತ್ಯಾಸವಿದೆ. ಮಕ್ಕಳಲ್ಲಿ ಮುಖ್ಯ ಲಕ್ಷಣಗಳೆಂದರೆ ಒಮ್ಮೆಲೇ ಅಸಹನೀಯತೆ ಕಾಣಿಸಿಕೊಂಡು ವಾಂತಿ ಬಂದು, ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ರೀತಿಯ ಶಾಕ್ ಕಾಣಿಸಿ ಕೊಳ್ಳುತ್ತದೆ.
ಸ್ವಲ್ಪ ವಯಸ್ಸಾದ ಮಕ್ಕಳಲ್ಲಿ ಎದೆನೋವು, ಹೊಟ್ಟೆ ನೋವು ಮುಖ್ಯ ಲಕ್ಷಣವಾಗಿರುತ್ತದೆ. ಹೆಚ್ಚಿನ ಮಕ್ಕಳಲ್ಲಿ ಹೃದಯಾಘಾತ
ಅವರು ನಿದ್ರೆಯಲ್ಲಿರುವಾಗ ಬರುತ್ತದೆ. ಇದರಲ್ಲಿ ಶೇ.33ರಷ್ಟು ಮಕ್ಕಳಲ್ಲಿ ಯಾವ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುವು ದಿಲ್ಲ ಎಂಬುದು ವಿಶೇಷ. ಕೆಲವು ಮಕ್ಕಳಲ್ಲಿ ಹೃದಯದ ವಾಲ್ವಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ದೇಹದ ಇನ್ನಿತರ ಭಾಗದ ರಕ್ತನಾಳಗಳಲ್ಲೂ ಸಹಿತ ಈ ಕಾಯಿಲೆಯ ಅನ್ಯೂರಿಸಂ ತೊಡಕು ಕಾಣಿಸಬಹುದು.
ಅವೆಂದರೆ – ಅಯೋರ್ಟಿಕ್ ರಕ್ತ ನಾಳ, ಆಕ್ಸಿಲರಿ ರಕ್ತನಾಳ, ಬ್ರೇಕಿಯೋಸೆಫಾಲಿಕ್ ರಕ್ತನಾಳ, ಈಲಿಯಾಕ್ಸ್, ಫೆಮೊರಲ್, ರೀನಲ್ ರಕ್ತನಾಳಗಳು. ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಮುಖ್ಯ ಲಕ್ಷಣ ಎಂದರೆ ತೀವ್ರವಾದ ಹೊಟ್ಟೆನೋವು – ಮುಖ್ಯ ವಾದ ಕಾರಣಗಳೆಂದರೆ ಕರುಳಿನ ಭಾಗದಲ್ಲಿ ಕಾಣಿಸಿಕೊಳ್ಳುವ ಊತ, ಕರುಳಿನಲ್ಲಿನ ಅಡಚಣೆ.
ಕಾಯಿಲೆ ಲಕ್ಷಣ ತೋರಿಸುವ ಮತ್ತೊಂದು ಮುಖ್ಯ ಅಂಗ ಎಂದರೆ ಕಣ್ಣು. ಕಣ್ಣಿನಲ್ಲಿ ಕಾಣಿಸಿಕೊಳ್ಳುವ ತೊಡಕುಗಳೆಂದರೆ – ಯೂವಿಯೈಟಿಸ್, ಕಪ್ಪು ಗುಡ್ಡೆಯ ಹೊರಭಾಗದಲ್ಲಿ (ಕಂಜಂಕ್ಟೆ ವ ) ಕಾಣಿಸಿಕೊಳ್ಳುವ ರಕ್ತಸ್ರಾವ, ಆಪ್ಟಿಕ್ ನರದ ಸೋಂಕು ಇತ್ಯಾದಿ. ನರಗಳಲ್ಲಿನ ನರದ ತೊಡಕುಗಳೆಂದರೆ – ಮೆನಿಂಗೋಎನ್ಸಫಲೈಟಿಸ್ (ಮೆದುಳಿನ ಹೊರಪದರದಲ್ಲಿ ಸೋಂಕು) ಸಬ್ ಡ್ಯೂರಲ್ ಎಫ್ಯೂಷನ್, ಸೆರೆಬ್ರಲ್ ಇಸ್ಕೀಮಿಯ (ಮೆದುಳಿನ ಮುಖ್ಯ ಭಾಗಕ್ಕೆ ರಕ್ತದ ಕೊರತೆ) ಮತ್ತು ರಕ್ತನಾಳಗಳಲ್ಲಿ ರಕ್ತ
ಹೆಪ್ಪುಗಟ್ಟುವಿಕೆ.
ಪರಿಣಾಮ ಎಂದರೆ – ತೀವ್ರ ರೀತಿಯ ನಡುಕ, ಕೊರಿಯಾ, ಪಾರ್ಶ್ವವಾಯು, ಮನಸ್ಸಿನಲ್ಲಿ ತೀವ್ರ ರೀತಿಯ ಗೊಂದಲ, ಕೆಲವೊಮ್ಮೆ ಕೋಮಾಕ್ಕೆ ತಿರುಗಬಹುದು.
ಚಿಕಿತ್ಸೆ: ಆಸ್ಪತ್ರೆಗೆ ಸೇರಿಸಿ ನುರಿತ ವೈದ್ಯರು – ಅಂದರೆ ಮಕ್ಕಳ ಕಾರ್ಡಿಯಾಲಜಿಸ್ಟ್ ಮತ್ತು ಮಕ್ಕಳ ರುಮ್ಯಟಾಲಜಿಸ್ಟ್’ಗಳ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮಾಡಬೇಕು. ರಕ್ತನಾಳಕ್ಕೆ ನೇರವಾಗಿ ಕೊಡುವ ಇಮ್ಯುನೊಗ್ಲಾಬ್ಯುಲಿನ್ ಕೊಡುವುದು ಮುಖ್ಯ ಚಿಕಿತ್ಸೆ. ಕೆಲವು ಬಾರಿ ಅದರ ಜತೆಗೆ ಸಾಲಿಸಿಲೇಟ್ ಗಳು ಮತ್ತು ಕಾರ್ಟಿಕೋಸ್ಟೀರಾಯ್ಡ್‌ಗಳನ್ನು ಜತೆಯಲ್ಲಿ ಉಪಯೋಗಿಸುತ್ತಾರೆ.