Sunday, 15th December 2024

ಕೋವಿಡ್‌ನಿಂದ ಕಣ್ಣಿಗೆ ತೊಂದರೆಯೇ ?

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಇತ್ತೀಚೆಗೆ ನನ್ನ ಕಣ್ಣಿನ ಕ್ಲಿನಿಕ್‌ಗೆ ಬರುವ ಹದಿಹರೆಯದವರು, ಮಕ್ಕಳು ಮತ್ತು 20-35 ವರ್ಷದವರ ಸಂಖ್ಯೆ ವಿಪರೀತವಾಗಿ ಜಾಸ್ತಿಯಾಗಿದೆ. ಮೊನ್ನೆ 15 ವರ್ಷದ ಹುಡುಗನನ್ನು ಕಣ್ಣಿನ ಪರೀಕ್ಷೆಗೆ ಅವನ ಪಾಲಕರು ಕರೆದುಕೊಂಡು ಬಂದಿದ್ದರು. ಡಾಕ್ಟ್ರೇ ನಮ್ಮ ಹುಡುಗ ಒಂದು ವಾರದಿಂದ ಬಹಳ ಕಣ್ಣಿನ ನೋವು, ತಲೆನೋವು ಎಂದು ಹೇಳುತ್ತಾ ಇದ್ದಾನೆ.

ನಾನು ಅವರ ಮಗನ ಬಗ್ಗೆ ಗಮನಿಸುತ್ತಿರುವಾಗಲೇ ಆನ್ ಲೈನ್ ಕ್ಲಾಸ್ ನಡೀತಾ ಇದೆಯಲ್ಲ ಅದರ ಪ್ರಭಾವ ಬಿಡಿ ಎಂದು ತಮ್ಮ ಮಗನ ಸಮಸ್ಯೆಗೆ ಕಾರಣ ವನ್ನು ಅವರೇ ಹೇಳಿದರು. ನಾನು ಆ ಹುಡುಗನ ಕಣ್ಣು ಪರೀಕ್ಷೆ ವಿವರವಾಗಿ ಮಾಡಿದಾಗ ಆತನಲ್ಲಿ ಅಸಮದೃಷ್ಟಿ ದೋಷ (Astigmatism) ಇರುವುದು ಗೊತ್ತಾ ಯಿತು. ಸ್ವಲ್ಪ ವಿವರವಾಗಿ ಆ ಹುಡುಗನ ಬಗ್ಗೆ ವಿಚಾರಿಸಿದಾಗ ಅವನ ಈ ದೃಷ್ಟಿದೋಷ ಕೋವಿಡ್ ನಂತರ ಆರಂಭವಾದ ಆನ್ ಲೈನ್ ತರಗತಿಯಿಂದಲೇ ಉಂಟಾದ ದೃಷ್ಟಿದೋಷವಲ್ಲ. ಮೊದಲೇ ಇದ್ದ ದೃಷ್ಟಿದೋಷ ಈಗಿನ ಬದಲಾದ ಪರಿಸ್ಥಿತಿಯಲ್ಲಿ ಆತನಿಗೆ ತೀವ್ರ ಸ್ವರೂಪದ ಕಣ್ಣು ನೋವು, ತಲೆನೋವು ಆಗಾಗ ಬರಲು ಆರಂಭವಾಗಿದ್ದರಿಂದ ಆತನಿಗೆ ಹಾಗೂ ಆತನ ತಂದೆ ತಾಯಿಗಳಿಗೆ ಬಹಳಷ್ಟು ಗಮನ ಸೆಳೆದಿದ್ದರಿಂದ ಅವರು ನನ್ನ ಕ್ಲಿನಿಕ್‌ಗೆ ಬರುವ ಪ್ರಮೇಯ ಒದಗಿತು.

ಇದು ಒಂದು ರೀತಿಯ ಉದಾಹರಣೆಯಾದರೆ 20-35 ವರ್ಷದವರು ಈಗಾಗಲೇ ತಮ್ಮಲ್ಲಿರುವ ಕನ್ನಡಕ ಹಿಡಿದುಕೊಂಡು ಬರುತ್ತಾರೆ. ಇವರಲ್ಲಿ ಹೆಚ್ಚಿನವರು ಕಂಪ್ಯೂಟರ್/ ಲ್ಯಾಪ್ ಟಾಪ್ ಗಳನ್ನು ಉಪಯೋಗಿಸಿ ಕೆಲಸ ಮಾಡುವ ಸಾಫ್ಟ್‌ವೇರ್ ಉದ್ಯೋಗಿಗಳು. ಮತ್ತೆ ಕೆಲವರು ಲ್ಯಾಪ್ ಟಾಪ್/ ಮೊಬೈಲ್ ಫೋನ್‌ನಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ಅಥವಾ ಬೇರೆ ಬೇರೆ ಉದ್ಯೋಗ ದಲ್ಲಿರುವವರು. ಡಾಕ್ಟ್ರೆ ಈ ಕರೋನಾ ಆರಂಭವಾದಾಗಿನಿಂದ ನಾನು ಆಫೀಸಿಗೆ / ಕಾಲೇಜಿಗೆ ಹೋಗ್ತಾ ಇಲ್ಲ. ಮನೆಯಲ್ಲೇ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಬಹುಶಃ ನನ್ನ ಕನ್ನಡಕದ ಪಾಯಿಂಟ್ (ನಂಬರ್) ಜಾಸ್ತಿ ಆಗಿರಬೇಕು, ಪರೀಕ್ಷಿಸಿ ಎಂಬುದು ಅವರ ಅಂಬೋಣ. ಅವರಲ್ಲಿ ಕೆಲವರು ಯಾವ ಕಣ್ಣಿನ ವೈದ್ಯರಲ್ಲೂ ತಮ್ಮ ಕಣ್ಣನ್ನು ಪರೀಕ್ಷಿಸಿ ತಮ್ಮ ಕನ್ನಡಕ (Spectacle) ತೆಗೆದುಕೊಂಡವರಲ್ಲ.

ಇಂಟರ್ನೆಟ್ ಮಾಹಿತಿಯಂತೆ ಅಥವಾ ಮಿತ್ರರ ಸಲಹೆಯಂತೆ ಬರೀ ಏನೂ ನಂಬರ್ ಇಲ್ಲದ (Zero power) Anti glare glasses ಉಪಯೋಗಿಸುವವರು. ಪಾಯಿಂಟ್ ಇಲ್ಲದ ಬರೀ ಗ್ಲಾಸ್ ಹಾಕುವ ಹೆಚ್ಚಿನ ಈ ಗುಂಪಿ ನವರಿಗೆ ಸಣ್ಣ ನಂಬರ್ -0.25 ಅಥವಾ +0.25 ಅಥವಾ + ಅಥವಾ -0.50, 0.75 ನಂಬರಿನ spherical  ಅಥವಾ cylinder power ಇರುತ್ತದೆ. ಕಣ್ಣಿನ ವೈದ್ಯನಾದ ನಾನೋ ಅಥವಾ ನನ್ನಂತಹ ಬೇರೆ ಕಣ್ಣಿನ ತಜ್ಞರು ವಿವರವಾಗಿ ಪರೀಕ್ಷೆ ಮಾಡಿ ದಾಗ ಅವುಗಳು ಪತ್ತೆಯಾಗುತ್ತವೆ. ಆಗ ಸರಿಯಾದ ಗ್ಲಾಸ್ ಬಗ್ಗೆ ಸಲಹೆ ನೀಡುತ್ತೇವೆ. ಹಾಗೆಯೇ ಜೊತೆಯಲ್ಲಿರಬಹುದಾದ ಒಣಗಿದ ಕಣ್ಣಿನ ( Dry Eyes) ಬಗ್ಗೆಯೂ ಚಿಕಿತ್ಸೆಯನ್ನು ಸಲಹೆ ಮಾಡುತ್ತೇವೆ.(ಇದರ ಬಗ್ಗೆ ಮುಂದೆ ವಿವರ ವಾದ ಪ್ರಸ್ತಾಪವಿದೆ) ಎಲ್ಲರಲ್ಲಿ ಆಗ ಈ ಸಮಸ್ಯೆ ಪರಿಹಾರವಾಗುತ್ತದೆ.

ಕೋವಿಡ್ ಕಾಯಿಲೆಯು ದೇಹದ ವಿವಿಧ ಅಂಗಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ತನ್ನ ಪ್ರತಾಪ ಹಾಗೆಯೇ ಪರಿಣಾಮಗಳನ್ನು ಬೀರುವ ವಿಚಾರ ತಮಗೆಲ್ಲಾ ಗೊತ್ತಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಕೋವಿಡ್ ಕಾರಣದಿಂದ ಉಂಟಾದ ಲಾಕ್ ಡೌನ್ ಹಾಗೂ ಅದು ಉಂಟು ಮಾಡಿದ ಹಲವು ಪರಿಣಾಮಗಳು. ಅವುಗಳಲ್ಲಿ ಮುಖ್ಯವಾದವುಗಳೆಂದರೆ – ಮಕ್ಕಳಿಗೆ ಶಾಲೆಗಳು ಹಲವು ತಿಂಗಳು / ವರ್ಷಗಳವರೆಗೆ ಇಲ್ಲವಾಯಿತು. ಸಭೆ ಸಮಾರಂಭಗಳು ಮೊದಲಿನಂತೆ ನಡೆಯಲು ಸಾಧ್ಯವಾಗಲಿಲ್ಲ. ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಏರ್ಪಡುವ Social Mixing ಸಂಪೂರ್ಣವಾಗಿ ನಿಂತೇ ಹೋಯಿತು. ಈ ಎಲ್ಲದರ ಒಟ್ಟೂ ಪರಿಣಾಮ ಎಂದರೆ ಜನರು ಮನೆಯಲ್ಲೇ  ಜಾಸ್ತಿ ಇರತೊಡಗಿದರಿಂದ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟಿ ವಿ ಇವುಗಳ ಉಪಯೋಗ ಜಾಸ್ತಿಯಾಗ ತೊಡಗಿತು.

ಹಾಗಾಗಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಆಫೀಸ್‌ಗೆ ಹೋಗಲು ಸಾಧ್ಯವಾಗದಿರುವುದರಿಂದ ಆನ್ ಲೈನ್‌ನಲ್ಲೇ ದೀರ್ಘ ಕಾಲ ಕೆಲಸ ಮಾಡಬೇಕಾದ ಅನಿವಾರ್ಯತೆ ಒದಗಿತು. ಹಾಗೆಯೇ ಹೆಚ್ಚಿನವರ ಕಣ್ಣಿನ ಮೇಲೆ ಮೊದಲಿಗಿಂತ ಜಾಸ್ತಿ ಕೆಲಸ ಹಾಗೆಯೇ ಒತ್ತಡ ಬೀಳತೊಡಗಿದೆ. ಮಾನವನ ಕಣ್ಣು ಮೂಲಭೂತ ವಾಗಿ ದೂರದ ವಸ್ತುಗಳನ್ನು ನೋಡಲು ಅನುಕೂಲವಾಗುವಂತೆ ರೂಪಿತವಾಗಿದೆ. ನಾವು ದೂರದ ವಸ್ತುಗಳನ್ನು ನೋಡುವಾಗ ಕಣ್ಣಿನ ಸಣ್ಣ ಮಾಂಸಖಂಡಗಳ ವ್ಯವಸ್ಥೆ ಒಂದು ನಿರಾಳವಾದ ಸ್ಥಿತಿಯಲ್ಲಿರುತ್ತದೆ.

ಅನಿರ್ದಿಷ್ಟಾವಧಿಯವರೆಗೆ ಹತ್ತಿರದ ವಸ್ತುಗಳನ್ನು ನೋಡಿ ಕೆಲಸ ಮಾಡುವಾಗ ಈ ಮಾಂಸಖಂಡಗಳ ಮೇಲೆ ಒಂದು ವಿಶೇಷ ರೀತಿಯ ಒತ್ತಡ ಬೀಳುತ್ತದೆ.
ಹಾಗಾಗಿ ಕಣ್ಣು ತನ್ನ ಎಂದಿನ ಕಣ್ಣು ಮಿಟುಕಿಸುವ ಸಮಯ ಕಡಿಮೆಯಾಗುತ್ತದೆ. ಪರಿಣಾಮ ಕಣ್ಣೀರಿನ ಅಂಶ ಕಡಿಮೆಯಾಗಿ ಒಣಗಿದ ಕಣ್ಣು ಎಂಬ ಸ್ಥಿತಿ ಉಂಟಾಗುತ್ತದೆ. ಬಹಳ ಹೊತ್ತು ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟ್ಯಾಬ್ಲೆಟ್ ಇವುಗಳ ಜೊತೆಗೆ ಕೆಲಸ ಮಾಡುವುದರಿಂದ ಕಣ್ಣಿನಲ್ಲಿ ಈಗಾಗಲೇ ಇರಬಹುದಾದ ದೃಷ್ಟಿದೋಷಗಳು – ಸಮೀಪ ದೃಷ್ಟಿ (Myopia), ದೂರ ದೃಷ್ಟಿ (Hypermetropia ) , ಅಸಮನಿಟ್ಟು (Astigmatism) – ಇವು ಮೊದಲಿಗಿಂತ ಹೆಚ್ಚು ತೊಂದರೆ ಕೊಡಲು ಆರಂಭಿಸಿ ಕಣ್ಣು ಬಹಳ ಬೇಗ ಆಯಾಸಗೊಳ್ಳುತ್ತದೆ, ನೋವೂ ಬರಬಹುದು, ದೃಷ್ಟಿಯ ಸ್ಪಷ್ಟತೆ ಕಡಿಮೆಯಾಗುತ್ತದೆ.

ಹಾಗೆಯೇ ದೃಷ್ಟಿಯನ್ನು ಕೇಂದ್ರೀಕರಿಸುವ ಕಣ್ಣಿನ ಶಕ್ತಿ, ಕಣ್ಣಿನ ಸಮತೋಲನ ದೃಷ್ಟಿ, ಕಣ್ಣನ್ನು ವಿವಿಧ ದಿಕ್ಕಿನಲ್ಲಿ ತಿರುಗಿಸುವ ಕ್ರಿಯೆ – ಇವೆಲ್ಲವೂ ಏರುಪೇರಾ ಗುತ್ತವೆ. ಇದರ ಜೊತೆಗೆ ಒಂದೇ ಬಗೆಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಕುತ್ತಿಗೆಯ ಹಾಗೂ ಭುಜದ ಮಾಂಸಖಂಡಗಳಲ್ಲಿ ತೀವ್ರ ರೀತಿಯ ತೊಂದರೆ ಉಂಟಾಗಿ ಕುತ್ತಿಗೆ ನೋವು, ಭುಜನೋವು ಹಾಗೂ ತಲೆನೋವಿನ ಲಕ್ಷಣಗಳು ಕಾಣಿಸಿಕೊಳ್ಳಬಲ್ಲವು.

ಕಣ್ಣಿನ ತೊಂದರೆಯ ಲಕ್ಷಣಗಳು : ಕಣ್ಣಿನಲ್ಲಿ ಉಂಟಾಗುವ ಈ ತೊಂದರೆಯನ್ನು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಅಥವಾ ಡಿಜಿಟಲ್ ಕಣ್ಣಿನ ಆಯಾಸ (Digital Eye Strain) ಎಂದು ಕರೆಯಲಾಗುತ್ತದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಈ ರೀತಿಯ ಡಿಜಿಟಲ್ ಸ್ಕ್ರೀನ್ ಗಳನ್ನು ದೀರ್ಘಕಾಲ ನೋಡುವುದರಿಂದ ಕಣ್ಣಿನ ದೃಷ್ಟಿಯ ಹಲವು ಸಮಸ್ಯೆಗಳು ಉಂಟಾಗುತ್ತವೆ.

ಡಿಜಿಟಲ್ ಸ್ಕ್ರೀನ್ ಅನ್ನು ಎಷ್ಟು ಸಮಯ ಉಪಯೋಗಿಸಲಾಗುತ್ತದೆ ಅನ್ನುವುದರ ಮೇಲೆ ಈ ಸಮಸ್ಯೆಯ ವ್ಯಾಪ್ತಿ ಮತ್ತು ಆಳ ಸೂಚಿತವಾಗುತ್ತದೆ. ಆನ್ ಲೈನ್
ನಲ್ಲಿ ಅಥವಾ ಆಫೀಸಿನಲ್ಲಿ ಕಂಪ್ಯೂಟರ್ ಕೆಲಸ ಮಾಡುವವರು ದಿನಕ್ಕೆ ಕನಿಷ್ಟ ೭-೮ ಗಂಟೆಗಳ ಕಾಲ ಕಂಪ್ಯೂಟರ್ ಪರದೆಯನ್ನೇ ನೋಡುತ್ತಿರುತ್ತಾರೆ.

ಕಂಪ್ಯೂಟರ್ ಕಣ್ಣಿನ ಸಿಂಡ್ರೋಮ್‌ನ ಮುಖ್ಯ ಲಕ್ಷಣಗಳು : ಕಣ್ಣು ತೀವ್ರ ರೀತಿಯಲ್ಲಿ ಒಣಗುವುದು, ಕಣ್ಣಿಗೆ ಆಯಾಸವಾಗುವುದು, ತಲೆನೋವು, ಕಣ್ಣಿನ ದೃಷ್ಟಿ ಮಂಜಾಗುವುದು, ದೂರದ ವಸ್ತುಗಳಿಂದ ಹತ್ತಿರದ ವಸ್ತುಗಳಿಗೆ ದೃಷ್ಟಿಯನ್ನು ಕೇಂದ್ರೀಕರಿಸುವಾಗ ಕಣ್ಣು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮುದ್ರಣ ಮಾಡಿದ ಪೇಪರ್, ಮ್ಯಾಗಜೀನ್ ಗಳನ್ನು ಓದುವುದಕ್ಕಿಂತ ಡಿಜಿಟಲ್ ಸ್ಕ್ರೀನ್ ಜಾಸ್ತಿ ನೋಡಿದರೆ ಕಣ್ಣಿಗೆ ಹೆಚ್ಚು ಸ್ಟ್ರೇನ್ (ಆಯಾಸ) ಆಗುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ವ್ಯಕ್ತಿ ಸ್ಕ್ರೀನ್ ಮೇಲೆ ದೃಷ್ಟಿ ಕೇಂದ್ರೀಕರಿಸಿ ಕೆಲಸ ಮಾಡುವಾಗ ಆತನ ಕಣ್ಣು ಮಿಟುಕಿಸುವ ಕ್ರಿಯೆಯು (Blinking
reflex) ಸಹಜವಾಗಿ ಇರುವಾಗಿನ ಸಮಯಕ್ಕಿಂತ ತುಂಬಾ ಕಡಿಮೆಯಾಗುತ್ತದೆ.

ಹೀಗೆ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾದಾಗ ಕಣ್ಣಿನ ಹೊರಭಾಗ (ಕಪ್ಪು ಭಾಗ) ಕಾರ್ನಿಯಾದ ಮೇಲಿರುವ ಕಣ್ಣೀರಿನ ಪದರ ಬೇಗ ಒಣಗಿ ಹೋಗುತ್ತದೆ. ಇದು ಒಣಗಿದ ಕಣ್ಣು (Dry eyes) ಉಂಟಾಗಲು ಕಾರಣವಾಗುತ್ತದೆ. ವ್ಯಕ್ತಿ ಕೆಲಸ ಮಾಡುವ ಸ್ಥಳದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ (Air condition
system) ಅಥವಾ ಫೋನ್ ನೇರವಾಗಿ ವ್ಯಕ್ತಿಯ ಮೇಲೆ ಬಿದ್ದಾಗ ಕಣ್ಣೀರು ಮತ್ತಷ್ಟು ಒಣಗುತ್ತದೆ.

ಮಕ್ಕಳ ಕಣ್ಣಿನ ಮೇಲೆ ಬೀರುವ ಪ್ರಭಾವ: ಯುನೆಸ್ಕೋ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ 868 ಮಿಲಿಯನ್ ಮಕ್ಕಳು ಈ ಕೋವಿಡ್ ಸಾಂಕ್ರಾ ಮಿಕದಿಂದ ಹಾಗೂ ಕರೋನಾ ವೈರಸ್‌ನ ಹಾವಳಿ ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಈ ಕೋವಿಡ್ ನಿಬಂಧ, ಲಾಕ್ ಡೌನ್ – ಇವುಗಳು  ಮಕ್ಕಳ ಕಣ್ಣಿನ ಮೇಲೆ ಬೀರುವ ಪ್ರಭಾವಗಳ ಮೇಲೆ ಜಗತ್ತಿನ ಹಲವೆಡೆ ಅಧ್ಯಯನ ಮಾಡಲಾಗಿದೆ. ಹಾಂಗ್ಕಾಂಗ್‌ನಲ್ಲಿ ನಡೆದ ಅಧ್ಯಯನ ವೊಂದರ ಮೇಲೆ ಗಮನ ಹರಿಸೋಣ.

6 ರಿಂದ 8 ವರ್ಷದ ಮಕ್ಕಳ ಎರಡು ಗ್ರೂಪ್ ಗಳಲ್ಲಿ ಮಾಡಿದ ಅಧ್ಯಯನದಿಂದ ಕಣ್ಣಿನ ಮೇಲೆ ವಿಶೇಷ ತೊಂದರೆ ಈ ಸಾಂಕ್ರಾಮಿಕದಿಂದ ಉಂಟಾಗಿದೆ ಎಂದು
ತಿಳಿದು ಬಂದಿದೆ. ಈ ಅಧ್ಯಯನವನ್ನು ಹಾಂಗ್ ಕಾಂಗ್ ವಿಶ್ವವಿದ್ಯಾನಿಲಯದಲ್ಲಿ ಡಾ.ಯಾಮ್ ಮತ್ತು ಸಹೋದ್ಯೋಗಿಗಳು ಕೈಗೊಂಡಿದ್ದರು. ಹತ್ತಿರದ ಕೆಲಸ-
ಅಂದರೆ ಓದುವುದು, ಬರೆಯುವುದು ಅಥವಾ ಟಿವಿ ವೀಕ್ಷಿಸುವುದು, ಮೊಬೈಲ್, ಲ್ಯಾಪ್‌ಟಾಪ್‌ಗಳ ಅತೀ ಬಳಕೆ – ಇವು ಸಮೀಪ ದೃಷ್ಟಿ ಬರುವ ಸಾಧ್ಯತೆಯನ್ನು
ಹೆಚ್ಚಿಸುತ್ತದೆ. ಅದರ ಬದಲು ಹೊರಾಂಗಣದಲ್ಲಿ ಆಟ ಆಡುವುದರಿಂದ ಹೀಗೆ ಆಗುವ ಸಾಧ್ಯತೆ ಕಡಿಮೆ ಎಂಬುದು ಅವರ ಅಭಿಮತ.

ಬ್ರಿಟಿಷ್ ಜರ್ನಲ್ ಆಫ್ ಆಫ್ತಾಲ್ಮಾಲಜಿಯಲ್ಲಿ ಡಾ.ಯಾಮ್ ಮತ್ತು ಸಹೋದ್ಯೋಗಿಗಳು ಎರಡು ಬೇರೆ ಬೇರೆ ಅಧ್ಯಯನಗಳ ಬಗ್ಗೆ ಪ್ರಕಟಿಸಿದ್ದಾರೆ. ಕೋವಿಡ್
ಸಾಂಕ್ರಾಮಿಕದ ಸಂದರ್ಭದಲ್ಲಿ 709 ಮಕ್ಕಳಲ್ಲಿ ಹಾಗೂ ಕೋವಿಡ್ ಇಲ್ಲದ ಸಂದರ್ಭದಲ್ಲಿ (ಅಂದರೆ ಕೋವಿಡ್ ಪೂರ್ವದಲ್ಲಿ) 1084 ಮಕ್ಕಳಲ್ಲಿ ಇವರು ಅಧ್ಯಯನ ನಡೆಸಿದರು. ಕೋವಿಡ್ ಇಲ್ಲದ ಸಮಯದಲ್ಲಿನ ಮಕ್ಕಳಲ್ಲಿ 3 ಮಕ್ಕಳಲ್ಲಿ ಒಬ್ಬರಿಗೆ 3 ವರ್ಷದ ಅವಧಿಯಲ್ಲಿ ಸಮೀಪ ದೃಷ್ಟಿ ಕಂಡುಬಂದಿತು.
ಕೋವಿಡ್ ಸಮಯದಲ್ಲಿನ ಮಕ್ಕಳಲ್ಲಿ 5 ಮಕ್ಕಳಲ್ಲಿ ಒಬ್ಬರಲ್ಲಿ ಕೇವಲ 8 ತಿಂಗಳಿನಲ್ಲಿ ಸಮೀಪದೃಷ್ಡಿ ದೋಷವಿರುವುದು ಕಂಡು ಬಂದಿತು.

ಮೇಲಿನ ಅವಧಿಯನ್ನು ಗಣನೆಗೆ ತೆಗೆದುಕೊಂಡು ಒಂದು ವರ್ಷದಲ್ಲಿ ಸಮೀಪ ದೃಷ್ಟಿ ದೋಷ ಕೋವಿಡ್ ಅವಧಿಯಲ್ಲಿ ಶೇ.30 ಎಂದೂ ಕೋವಿಡ್ ಪೂರ್ವ
ಅವಽಯಲ್ಲಿ ಶೇ.12 ಕ್ಕಿಂತ ಕಡಿಮೆ ಎಂದು ಲೆಕ್ಕ ಹಾಕಲಾಗಿದೆ. ಹಾಗಾಗಿ ಈ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಸಮೀಪ ದೃಷ್ಟಿ ದೋಷವು 2.5 ಪಟ್ಟು
ಜಾಸ್ತಿಯಾಗಿದೆ ಎಂದು ಗಣಿಸಲಾಗಿದೆ. ಹಾಗಾಗಿ ಈ ಮೇಲಿನ ಅಧ್ಯಯನದ ಪ್ರಕಾರ ಮಕ್ಕಳು ಮನೆಯಿಂದ ಹೊರಗೆ ಕಳೆಯುವ ಅವಧಿ ಕಡಿಮೆಯಾದ ಹಾಗೆ ಮನೆಯಲ್ಲಿ ಹತ್ತಿರದ ವಸ್ತು ನೋಡುವುದರಿಂದ ಸ್ಕ್ರೀನ್ ವೀಕ್ಷಿಸುವ ಅವಧಿ ಜಾಸ್ತಿಯಾಗುತ್ತದೆ.

ಹಾಗಾಗಿ ಈ ಸಮೀಪ ದೃಷ್ಟಿ ಬಹಳ ಬೇಗ ಜಾಸ್ತಿಯಾಗುತ್ತಾ ಹೋಗುತ್ತದೆ. ಪರಿಣಾಮವಾಗಿ ಸಮೀಪ ದೃಷ್ಟಿಯಿಂದ ಬರುವ ಹಲವು ತೊಡಕುಗಳು
(Complications) – ತೆರದ ಕೋನದ ಗ್ಲೊಕೋಮಾ , ಅಕ್ಷಿಪಟಲ ಕಳಚುವಿಕೆ, ಇತ್ಯಾದಿ ಈ ಮಕ್ಕಳಿಗೆ ಬರಬಹುದು.

ಕಂಪ್ಯೂಟರ್ ಐ ಸಿಂಡ್ರೋಮ್ ನ ಲಕ್ಷಣಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು :
೧. 20-20-20 ನಿಯಮ : ಡಿಜಿಟಲ್ ಪರದೆ ಉಪಯೋಗಿಸುವಾಗ ಪ್ರತಿ 20 ನಿಮಿಷಕ್ಕೆ 20 ಸೆಕೆಂಡುಗಳ ವಿರಾಮ ತೆಗೆದುಕೊಂಡು 20 ಅಡಿ ದೂರದ ವಸ್ತುಗಳ ಎಡೆಗೆ ದೃಷ್ಟಿ ಹಾಯಿಸಬೇಕು.
೨. ಕಂಪ್ಯೂಟರ್ ಪರದೆಯ ಸ್ಥಳ : ಕಂಪ್ಯೂಟರ್ ಪರದೆಯು ಕಣ್ಣಿನ ಮಟ್ಟಕ್ಕಿಂತ 15-20 ಡಿಗ್ರಿಗಳಷ್ಟು ಕೆಳಗಿರಬೇಕು. ಹಾಗೂ 20 -28 ,(ಇಂಚು ) ಕಣ್ಣಿನಿಂದ
ದೂರವಿರಬೇಕು.

೩. ಕಣ್ಣು ರೆಪ್ಪೆ ಹೊಡೆದು ಕೊಳ್ಳುವುದು : ಒಣಗಿದ ಕಣ್ಣು ಉಂಟಾಗುವುದನ್ನು ತಪ್ಪಿಸಲು ಆಗಾಗ ಕಣ್ಣಿನ ರೆಪ್ಪೆ ಹೊಡುದುಕೊಳ್ಳುತಿರಬೇಕು. ಹಾಗೆಮಾಡುವು
ದರಿಂದ ಕಣ್ಣಿನ ಮುಂಭಾಗ ಯಾವಾಗಲೂ ತೇವಾಂಶ ಹೊಂದಿರುತ್ತದೆ.