Saturday, 14th December 2024

ಕೊರೋನಾಕ್ಕಿಂತ ಡೇಂಜರ್ ವಿಚ್ಛೇದನವೆಂಬ ವೈರಸ್

ಪ್ರಸ್ತುತ

ಸರಸ್ವತಿ ವಿಶ್ವನಾಥ್ ಪಾಟೀಲ

ಮದುವೆಯಾಗಿ ಇನ್ನೂ ವರ್ಷ ಕಳೆದಿಲ್ಲವಂತೆ ಡಿವೋರ್ಸ್ ಅಂತೆ, ಹೊಂದಾಣಿಕೆ ಇಲ್ಲಂತೆ ಡಿವೋರ್ಸ್ ಅಂತೆ, ಜೀವನ ಶೈಲಿಯಲ್ಲಿ ವ್ಯತ್ಯಾಸವಂತೆ ಡಿವೋರ್ಸ್ ಅಂತೆ, ಹೀಗೆ ಅಕ್ಕಪಕ್ಕದ ಮನೆಯ ಮಾತು ಅಥವಾ ವಾಟ್ಸಾಪ್ ಗ್ರೂಪ್ ಚಾಟಿಂಗ್‌ನ ನೀವು ಈ ರಿಈತಿಯ ಮಾತುಗಳನ್ನು ಕೇಳಿರಬಹುದು.

ಇತ್ತೀಚೆಗೆ ಮದುವೆಯಾದ ಒಂದು ವರ್ಷದೊಳಗೇ ವಿಚ್ಛೇದನಕ್ಕೆ ಅರ್ಜಿ ಹಾಕುವುದು ಶುರುವಾಗಿದೆ. ಒಮ್ಮೆ ಸಪ್ತಪದಿ ತುಳಿದ್ರೆ ಇಡೀ ಜೀವನ ಜೊತೆಗಿರ ಬೇಕು ಎಂಬ ಬೇಲಿ ಇಲ್ಲ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬಂದರೂ ಕೋರ್ಟ್ ಮುಂದೆ ಹೋಗುತ್ತಾರೆ. ಹಿಂದೆ ವಿದೇಶಗಳಲ್ಲಿ ಸಾಮಾನ್ಯ ಎನ್ನುವಂತಿದ್ದ ವಿಚ್ಛೇದನ ಈಗ ಭಾರತದಲ್ಲೂ ಕಾಮನ್ ಆಗಿದೆ.

ಮದುವೆಯಾದ ಮೇಲೆ ಅನೇಕರಿಗೆ ತಮ್ಮ ಸಂಗಾತಿಗಿಂತ ತಾವೇ ಮೇಲು ಎನ್ನುವ ಅಹಂ ಬಂದುಬಿಡುತ್ತದೆ. ತನ್ನ ಒಳ್ಳೆಯತನಕ್ಕೆ, ತನ್ನ ಸೌಂದರ್ಯಕ್ಕೆ ಇವರಿಗಿಂತ ಉತ್ತಮರು ಬೇರೆಯವರು ಸಿಕ್ಕಿಬಿಡುತ್ತಿದ್ದರು. ನನಗೆ ಸರಿ ಹೊಂದಾಣಿಕೆಯಾಗದ ಇವರನ್ನು ನಾನು ಯಾಕೆ ಕಟ್ಟಿಕೊಂಡುಬಿಟ್ಟೆ, ನನ್ನ ಒಳ್ಳೆಯ ಗುಣಕ್ಕೆ ಇವರು ಸರಿಯಾದ ಜೋಡಿಯೇ ಅಲ್ಲ ಎನ್ನುವ ‘ಈಗೋ’ ಮನಸ್ಸಿನಲ್ಲಿಯೇ ಬಂದು ಇಬ್ಬರಲ್ಲೂ ಅಂತರ ಮೂಡಿಸಲು ಶುರುಮಾಡಿ ಬಿಡುತ್ತದೆ. ಸಮಯ ಕಳೆದಂತೆ ಸಂಗಾತಿ ಏನು ಒಳ್ಳೆಯ ಕೆಲಸ ಮಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದು, ಏನು ಮಾತಾಡಿದರೂ ತಪ್ಪು
ಎನ್ನುವುದು, ತಮ್ಮದೇ ತಪ್ಪು ಅಂತ ಗೊತ್ತಿದ್ದರೂ ತಮ್ಮದೇ ಸರಿ ಎನ್ನುವ ಹಾಗೆ ಆಡುವ ಬಿಗುಮಾನ ತೋರುವುದು. ಈ ರೀತಿಯ ಕಲಹಗಳೇ ಈ ವಿಚ್ಛೇದನ ಯೋಚನೆ ಬರಲು ಕಾರಣವಾಗುತ್ತೆ.

ಒಮ್ಮೆ ವಿಚ್ಛೇದನದ ಯೋಚನೆ ಬಂದರೆ ಸಾಕು ನಿಮ್ಮನ್ನು ಭಾವನಾತ್ಮಕವಾಗಿ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ಆ ಕ್ಷಣಕ್ಕೆ ಕಿರಿಕಿರಿ ಇಲ್ಲದ ಸ್ವತಂತ್ರ ಜೀವನನೇ ಲೇಸು ಅನ್ನಿಸೋದಕ್ಕೂ ಶುರು ಆಗುತ್ತೆ. ಆದರೆ ಈ ಮದುವೆ ಮತ್ತು ವಿಚ್ಛೇದನ ಅನ್ನೋದು ಬೇಕಾದಾಗ ಬರೋಕೆ, ಬೇಡದೇ ಇದ್ದಾಗ ಹೋಗೋಕೆ ಮಕ್ಕಳಾಟ ಅಲ್ಲ. ದಾಂಪತ್ಯ ಅನ್ನೋದು ಬರೀ ಎರಡು ಜೀವಗಳನ್ನಷ್ಟೇ ಬೆಸೆಯೋವಂತಹ ಸಂಬಂಧವಲ್ಲ, ಬದಲಿಗೆ ಅದು ಎರಡು
ಕುಟುಂಬಗಳ ಬೆಸುಗೇನೂ ಹೌದು ಅನ್ನೋದನ್ನ ನೆನಪಲ್ಲಿ ಇಟ್ಕೋಬೇಕು.

ಕಾನೂನು ಕಾಗದದಲ್ಲಿ ಬೇರೆ ಮಾಡಬಹುದು ಅಷ್ಟೇ ಆದರೆ ಸೂತಕ ಹರಿಯುವುದಿಲ್ಲ, ವಿಚ್ಛೇದನದಿಂದ ರಕ್ತ ಸಂಬಂಧದ ಬಂಧ ತೊಳೆಯುವುದಿಲ್ಲ, ಜೊತೆಗೆ ಕಂಡ ಕನಸು, ನಡೆದು ಬಂದ ದಾರಿ ಯಾವುದು ಸುಲಭಕ್ಕೆ ಮರೆಯುವಂತದಲ್ಲ. ಪತಿ ಪತ್ನಿಯ ನಡುವೆ ನಡೆಯೋ ಕಲಹಕ್ಕೆ ವಿಚ್ಛೇದನವೇ ಪರಿಹಾರವಾಗಿದ್ದರೆ, ಬಾಲ್ಯದಿಂದ ಇಲ್ಲಿಯವರೆಗೂ ಅಣ್ಣ ತಮ್ಮಂದಿರೊಂದಿಗೆ, ಅಕ್ಕತಂಗಿಯರೊಂದಿಗೆ, ಸಂಬಂಧಿಕರೊಂದಿಗೆ, ಸ್ನೇಹಿತರೊಂದಿಗೆ ಆದ ಜಗಳ, ಮನಸ್ತಾಪಗಳಿಗೆ ವಿಚ್ಛೇದನ ನೀಡಿಲ್ಲವೇ? ಇಲ್ವವಲ್ಲ ಆದ ಜಗಳಗಳೆನೆಲ್ಲ ಮರೆತು ಮತ್ತೆ ಒಂದಾಗಿದ್ದೆವು ಅಲ್ಲವೇ? ಅಂದಮೇಲೆ ಗಂಡ ಹೆಂಡತಿ ಜಗಳ ಕೂಡ ಸರಿ ಹೋಗುತ್ತೆ ಸ್ವಲ್ಪ ಕಾಲವಕಾಶ ಬೇಕು… ಕಾಲಕ್ಕೆ ಎಲ್ಲ ಮರೆಸುವ ಶಕ್ತಿ ಇದೆ.

ವಿಚ್ಛೇದನ ಸಾವಿಗೆ ಸಮಾನವಾದ ಅನುಭವ ನೀಡುತ್ತದೆ. ಸಾವು ಎಂದರೇ ಜೀವನದ ಕೊನೆ. ವಿಚ್ಛೇದನವೂ ಹೆಚ್ಚು ಕಡಿಮೆ ಇದೇ ಅನುಭವವನ್ನು ನೀಡುತ್ತದೆ. ಜೀವನದ ಎಲ್ಲ ಚಟುವಟಿಕೆಗಳು ಏಕಾಏಕಿ ಸ್ತಬ್ಧಗೊಳ್ಳುತ್ತವೆ. ಈಗ ಉಳಿದಿರುವುದು ಹಿಂದಿನ ಸುಂದರ ನೆನಪುಗಳು ಮಾತ್ರ. ವಿಚ್ಛೇದನದ ಬಳಿಕ ಹಿಂದಿನ ನೆನಪುಗಳನ್ನು ಕೆದಕುವ ಯಾವುದೇ ವಸ್ತು ಅಥವಾ ಪ್ರಸಂಗ ಎದುರಾದರೆ ಅದು ಭಾವನಾತ್ಮಕವಾಗಿ ಕುಗ್ಗಿಸುತ್ತೆ. ಚಿಕ್ಕ ಪುಟ್ಟ ಕಾರಣಗಳಿಗೆ ವಿಚ್ಛೇದನ ಬೇಕು ಎಂದು ಸುಲಭವಾಗಿ ಹೇಳುವವರಿಗೆ ಇದರ ಕಷ್ಟಗಳೇನೆಂದು ಆಗ ತಿಳಿದಿಲ್ಲ.

ಕೋರ್ಟ್ ಹೋದಾಗ ತಿಳಿಯುತ್ತದೆ. ವಕೀಲರ ಬೇಟಿ, ವಿಚ್ಛೇದನಕ್ಕೆ ಕಾರಣಗಳನ್ನು ವಿವರಿಸುವಾಗ ಎದುರಾಗುವ ಮುಜುಗರ, ಒಂದು ವೇಳೆ ಮಕ್ಕಳಾಗಿದ್ದರೆ ಅವರ ಯೋಗಕ್ಷೇಮದ ಮತ್ತು ಜವಾಬ್ದಾರಿಯ ಕುರಿತಾದ ಕಲಹ, ಹಣಕಾಸಿನ ಬಗ್ಗೆ ತಕರಾರು, ಮದುವೆ ಮತ್ತು ಆ ಬಳಿಕ ಆಗಿದ್ದ ಖರ್ಚುವೆಚ್ಚಗಳ ಬಗ್ಗೆ, ಆಸ್ತಿ, ಮನೆ, ಹಣಕಾಸಿನ ಕುರಿತು ಜಗಳ, ಒಬ್ಬರ ತಪ್ಪು, ಅವಗುಣಗಳನ್ನು ಇನ್ನೊಬ್ಬರು ಮಾಡುವುದು, ಒಬ್ಬರ ನ್ಯೂನ್ಯತೆ, ಕುಂದು ಕೊರತೆ, ವ್ಯಯಕ್ತಿಕ ದೌರ್ಬಲ್ಯಗಳನ್ನು ಇನ್ನೊಬ್ಬರು ಹೀಯಾಳಿಸಿ ಊರ ತುಂಬಾ ಹರಡುವುದು ಮೊದಲಾದವು ಜೀವನವನ್ನೇ ದುರ್ಭರವಾಗಿಸುತ್ತವೆ.

ಎಷ್ಟೋ ಸಲ ಈ ತೊಂದರೆಗಳೆಲ್ಲ ಎದುರಾಗುತ್ತಿದ್ದಂತೆಯೇ ಅಹಂಭಾವ ತೋರ್ಪಡಿಸಿದ್ದ ವ್ಯಕ್ತಿಗೆ ಜ್ಞಾನೋದಯವಾಗಿ ಕ್ಷಮಾಪಣೆ ಕೇಳಿ, ಕೂಡಲೇ ಇಬ್ಬರು ತಮ್ಮದೇ ತಪ್ಪು ಎಂದು ಕ್ಷಮಾಪಣೆ ಕೇಳಿ ಒಂದಾಗಿದ್ದೂ ಇದೆ. ವಿವಾಹದ ಬಳಿಕ ದಂಪತಿಗಳ ರೂಪದಲ್ಲಿ ನೋಡಿದ್ದ ಸಮಾಜ ವಿಚ್ಛೇದಿತರ ರೂಪದಲ್ಲಿ ನೋಡಿದಾಗ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಎದುರಿಗಿರುವವರು ಏನೂ ಹೇಳದೇ ಇದ್ದರೂ ಅವರು ಈ ಬಗ್ಗೆ ಏನೆಂದುಕೊಳ್ಳುತ್ತಿದ್ದಾರೋ ಎಂದು ಅಳುಕುವ ಮನ ಜೀವನವನ್ನೇ ದುರ್ಭರವಾಗಿಸುತ್ತದೆ.

ಭಾವನೆಗಳು ಋಣಾತ್ಮಕವಾಗಿದ್ದು ಸದಾ ಬೇಸರ, ದುಗುಡ, ಯಾವುದರಲ್ಲಿಯೂ ಆಸಕ್ತಿಯಿಲ್ಲದಿರುವಿಕೆ, ಎಲ್ಲವನ್ನೂ ತನ್ನ ವಿಚ್ಛೇದನಕ್ಕೆ ಸಂಬಂಧಿ ಸಿರುವಂತೆ ಕಲ್ಪಿಸಿಕೊಂಡು ಅಪಾರ್ಥ ಮಾಡಿಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇದು ಮಾನಸಿಕವಾಗಿ ವ್ಯಕ್ತಿಯನ್ನು ಬಲು ವಾಗಿ ಕುಗ್ಗಿಸುತ್ತದೆ. ಸಮಾಜದ ಗೊಡವೆಯೇ ಬೇಡ ಎಂದು ಮನೆಯಲ್ಲಿಯೇ ಕುಳಿತಿದ್ದರೂ ಮನೆಯ ಕಿಟಕಿಯಿಂದ ಬರುವ ಟೀಕಾಸಗಳೇ
ಮಾನಸಿಕ ವಾಗಿ ಕುಗ್ಗಿಸಲು ಸಮರ್ಥವಾಗಿವೆ.

ಆದರೆ ನೆನಪಿಡಿ ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರಲ್ಲ, ಎಲ್ಲರೂ ಕೆಟ್ಟವರಲ್ಲ. ಎಲ್ಲರಲ್ಲೂ ಒಂದು ರೀತಿಯ ಕಪ್ಪುಚುಕ್ಕೆ ಇದ್ದೇ ಇರುತ್ತದೆ. ಅದನ್ನು ಹುಡುಕುವ ಬದಲು, ಸಂಗಾತಿಯ ಒಳ್ಳೆಯ ಗುಣವನ್ನು ಪರಿಗಣಿಸಿ, ತಾವೇ ಒಳ್ಳೆಯವರು ಎನ್ನುವುದನ್ನು ಮನಸ್ಸಿನಿಂದ ತೆಗೆದುಹಾಕಿ. ಹೊಡಿಕೊಂಡು ಹೋಗುವುದೇ ಜೀವನ, ಇದು ನಮ್ಮ ಭಾರತೀಯ ಸಂಸ್ಕೃತಿಯು ಹೌದು. ವಿವಾಹ ಎಂಬ ಪದವೇ ಎಷ್ಟು ಸುಂದರ, ಎಷ್ಟು ರೋಮಾಂಚಕ. ಇಬ್ಬರು ವ್ಯಕ್ತಿಗಳು ತಮ್ಮ ಮುಂದಿನ ಇಡಿಯ ಜೀವನವನ್ನು ಒಬ್ಬರಿಗೊಬ್ಬರು ಸಂಗಾತಿಗಳಾಗಿ ಕಳೆಯಲು ಸಂಕಲ್ಪತೊಡುವ, ಗುರುಹಿರಿಯರ ಆಶೀರ್ವಾದ ಪಡೆದು ನಡೆಸುವ ಹೊಸ ಜೀವನದ ಪ್ರಾರಂಭ. ಭಾರತೀಯ ಸಂಸ್ಕೃತಿಯಲ್ಲಂತೂ ಮದುವೆ ಎಂದರೆ ಗಂಡು ಹೆಣ್ಣುಗಳ ನಡುವೆ ಆಗುವ ಸಂಬಂಧ ಕ್ಕಿಂತಲೂ ಎರಡು ಕುಟುಂಬಗಳ ನಡುವೆ ಆಗುವ ಸಂಬಂಧ. ಈ ಬಂಧ ಚಿಕ್ಕ ಪುಟ್ಟ ಕಾರಣದಿಂದ ಅಂತ್ಯ ಕಾಣದಿರಲಿ.

(ಲೇಖಕರು: ಹವ್ಯಾಸಿ ಬರಹಗಾರರು)