Thursday, 21st November 2024

ಸೃಜನಶೀಲ ಬೋಧನೆಯ ಅಗತ್ಯ

ದಾಸ್ ಕ್ಯಾಪಿಟಲ್

dascapital1205@gmail.com

ಶಿಕ್ಷಕರು ಸೃಜನಶೀಲರಾಗಿದ್ದಾಗ ಮಾತ್ರ ಬೋಧನೆಯ ನಿರ್ವಹಣೆಯಲ್ಲಿ ಸೃಜನಶೀಲತೆ ಸಾಧ್ಯವಿದೆ. ತರಗತಿ ನಿರ್ವಹಣೆಯ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ. ಶಿಕ್ಷಕ ಬೋಧಿಸುತ್ತಾನೆ. ವಿದ್ಯಾರ್ಥಿ ಕೇಳುತ್ತಾ, ಕಲಿಯುತ್ತಾ ಹೋಗುತ್ತಾನೆ. ವಿದ್ಯಾರ್ಥಿ ಏನು ಕೇಳಿದ್ದಾನೆ, ಕಲಿತಿದ್ದಾನೆ ಎಂಬುದನ್ನು ಪರೀಕ್ಷೆಯ ಮೂಲಕವೇ ಕಂಡುಹಿಡಿದು ಕಲಿಕೆಯ ಗುಣ ಮಟ್ಟವನ್ನು ಅಳೆಯಲಾಗುತ್ತದೆ. ಮೊದಲಿಂದಲೂ ನಡೆದು ಬಂದ ವಿಧಾನವಾಗಿರುವ ಇದು ಜನಪ್ರಸಿದ್ಧವೂ ಆದ ಶಿಕ್ಷಣದ ಆಕೃತಿಗಳಲ್ಲಿ ಒಂದು. ವಿದ್ಯಾರ್ಥಿಗಳು ಪಡೆದ ಅಂಕ ಗಳ ಆಧಾರದ ಮೇಲೆ ಈ ವಿಧಾನದ ಮೂಲಕ ಶಿಕ್ಷಕನ ಬೋಧನಾ ಸಾಮರ್ಥ್ಯ ವನ್ನು ಒಂದು ಮಟ್ಟಿಗೆ ಅಳೆಯ ಬಹುದು.

ಆದರೆ, ಇದು ನೂರಕ್ಕೆ ನೂರು ನಂಬಲರ್ಹವಲ್ಲ, ಪ್ರಾಮಾಣ್ಯವೂ ಅಲ್ಲ. ಯಾಕೆಂದರೆ, ಕೇವಲ ಸಿಲೆಬಸ್ಸಿನ ಮಾಹಿತಿಯನ್ನು ಅಥವಾ ಕಲಿಕಾಂಶಗಳನ್ನು ವಿದ್ಯಾರ್ಥಿಗಳ ಮಿದುಳಿಗೆ ರವಾನಿಸುವುದು ಮುಖ್ಯ ಉದ್ದಿಶ್ಯವಾ ದರೂ ರವಾನಿಸುವವನಿಗೆ ಅಂಥ ಕೌಶಲವಿರಬೇಕು. ಅಂಥ ಕೌಶಲ ವಿರುವ ಶಿಕ್ಷಕ ಎಂಥ ಪಾಠಾಂಶಗಳನ್ನೂ ವಿದ್ಯಾರ್ಥಿಗಳ ಮಿದುಳಿಗೆ ರವಾನಿಸಿ ಅವರಿಂದ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆಸಿಯಾನು ಎಂಬುದು ಎಲ್ಲರೂ ಒಪ್ಪುವಂಥದ್ದು. ಆದರೆ, ಶಿಕ್ಷಕನ ಬೋಧನಾಶಕ್ತಿ ಗೊತ್ತಾಗುವುದೇ ವಿದ್ಯಾರ್ಥಿಗಳು ಪಡೆದ ಜ್ಞಾನ ಮತ್ತು ಅಂಕಗಳ ಮೇಲೆಯೇ ಆಗಿರುವುದರಿಂದ ಈ ಉಪನ್ಯಾಸ ವಿಧಾನ ಹೆಚ್ಚು ಪ್ರಸಿದ್ಧಿಯಾಗಿದೆ.

ಹಾಗಂತ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಸಂಪೂರ್ಣ ಅಳೆಯಲು ಈ ವಿಧಾನದಲ್ಲಿ ಸಾಧ್ಯವಾಗು ವುದಿಲ್ಲ ಎಂಬುದು ಇದರ ದೊಡ್ಡ ನ್ಯೂನತೆಯಾಗಿದೆ. ಯಾಕೆಂದರೆ, ಕೇವಲ ಮಾಹಿತಿ ಕೊಡುವ ಕಾರ್ಯ ಶಿಕ್ಷಕನದ್ದಲ್ಲ. ಅಥವಾ ಶಿಕ್ಷಕನೇ ಮಾಹಿತಿಯಲ್ಲ. ಮಾಹಿತಿಯೇ ಜ್ಞಾನವಲ್ಲ. ಬೋಧನೆಯಲ್ಲಿ ಸೃಜನಶೀಲತೆ ಯಿದ್ದರೆ ವಿದ್ಯಾರ್ಥಿಗಳ ನೇರ ಪಾಲ್ಗೊಳ್ಳು ವಿಕೆಯ ಮೂಲಕ ಕಲಿಕಾಂಶಗಳು ಸುಲಭದಲ್ಲಿ ಅವರಿಗೆ ರವಾನೆಯಾಗುತ್ತದೆ. ಶಿಕ್ಷಕರು ಸೃಜನಶೀಲತೆಯನ್ನು ಬೆಳೆಸಿ ಕೊಳ್ಳಬಹುದು ಎನ್ನುವುದಕ್ಕಿಂತ ಆ ದಿಸೆಯಲ್ಲಿ ಸತತ ಯತ್ನಿಸುತ್ತಾ ಹೋದರೆ ತಾನಾಗಿಯೇ ಸೃಜನಶೀಲತೆ ಬೆಳೆಯ ತೊಡಗುತ್ತದೆ.

ಅದು ಹೇಗೆ ಸಾಧ್ಯ ಎಂಬುದಕ್ಕಿಂತ ಮೊದಲು ಸೃಜನ ಶೀಲತೆಯ ಬಗ್ಗೆ ತಿಳಿದುಕೊಳ್ಳಬೇಕು (ಪ್ರತಿಕ್ಷಣ ಪ್ರತಿಯೊಂದ ರಲ್ಲೂ ನಾವೀನ್ಯದ ಚಿಂತನೆ, ಕಲ್ಪನಾಶಕ್ತಿ, ಕುತೂಹಲ ಪ್ರವೃತ್ತಿ, ಆವಿಷ್ಕಾರ ಪ್ರವೃತ್ತಿ, ಪ್ರಯೋಗಶೀಲತೆ, ಬಹುಮುಖ ಚಿಂತನಾ ಸಾಮರ್ಥ್ಯ, ವಿಷಯ ವಿಸ್ತರಣಾ ಸಾಮರ್ಥ್ಯ, ಪ್ರಶ್ನಿಸುವ ಮನೋಭಾವ, ಅಂತಃಪ್ರೇರಣೆ, ಸವಾಲನ್ನು ಸ್ವೀಕರಿಸುವ ಮನೋಭಾವ, ಸ್ವಂತಿಕೆಯ ಹಂಬಲ, ಸಮರ್ಥಿಸುವಿಕೆ, ಮಾನಸಿಕ ಸಂಘರ್ಷಕ್ಕೆ ಎದುರಾಗುವುದು, ಬದುಕಿನ
ಬಗೆಗೆ ತಾದಾತ್ಮ್ಯ, ಸೃಜನಶೀಲತೆಗೆ ಪ್ರೋತ್ಸಾಹ, ಮುಕ್ತತೆ, ಸಂವಾದಗಳಲ್ಲಿ ತೊಡಗಿಸಿಕೊಳ್ಳುವುದು, ಸೃಜನಶೀಲ ವ್ಯಕ್ತಿತ್ವದ ಗುರುತಿಸುವಿಕೆ, ಬೌದ್ಧಿಕವಾಗಿ ವೈಚಾರಿಕವಾಗಿ ಮಾನಸಿಕವಾಗಿ ಚಟುವಟಿಕೆಯಿಂದಿರುವುದು, ಸೃಜನ ಶೀಲತೆಯ ಮಾದರಿಗಳನ್ನು ಸೃಷ್ಟಿಸುವುದು, ಸೃಜನಶೀಲ ಒತ್ತಡಗಳ ನಿರ್ವಹಣೆ, ಸ್ವಾವಲಂಬಿ ಪ್ರವೃತ್ತಿ, ನಕಲು ಪ್ರವೃತ್ತಿಗೆ ಒಪ್ಪದ ಮನಸ್ಥಿತಿ, ತೌಲನಿಕ ಚಿಂತನೆ, ಓದುವ ಹವ್ಯಾಸ ಹೀಗೆ ಸೃಜನಶೀಲತೆಯ ಗುಣಗಳನ್ನು ಪಟ್ಟಿಮಾಡಬಹುದು).

ನಂತರ ಬುದ್ಧಿ ಮತ್ತು ಮನಸ್ಸು ಸೃಜನಶೀಲತೆಯ ಬಗೆಗೆ ತೊಡಗಿಕೊಳ್ಳುವುದಕ್ಕೆ ಸಿದ್ಧಗೊಳ್ಳುತ್ತದೆ. ಹೊಸತನದ ಸಾಕಾರಕ್ಕೆ ತೊಡಗಿಸಿಕೊಳ್ಳುವ ಕ್ರಿಯೆಯೇ ಸೃಜನಶೀಲತೆಯ ಸ್ಥೂಲ ಅರ್ಥ. ಹಾಗಂತ ಹೊಸತು ಸಂಪೂರ್ಣ ಹೊಸತಾಗಿ ರುವುದಿಲ್ಲ. ಹಳೆಯದರ ಆಶ್ರಯದಲ್ಲೇ ಹೊಸತು ಸೃಜಿಸಿರುತ್ತದೆ. ಹೊಸತು ಹಳೆಯದರ ಅವಲಂಬಿ. ಹೊಸತಾಗಿ ತೋರಿದರೂ ಅದು ಹೊಸತಲ್ಲ. ಹೊಸತೂ ಎಲ್ಲೂ ಇರಬಾರ ದೆಂದೇನಿಲ್ಲ. ಒಂದು ಕೃತಿಯ ಪಾತ್ರಕ್ಕೂ ಇನ್ನೊಂದು ಕೃತಿಯ ಪಾತ್ರಕ್ಕೂ ಸಾಮ್ಯತೆಯಿದೆ ಎಂದ ಮಾತ್ರಕ್ಕೆ ಅದು ನಕಲಿ ಯಂತಲ್ಲ. ಎರಡೂ ಸೃಜನಶೀಲತೆಯೇ ಆಗಿರುತ್ತವೆ. ಹಾಗೆ ಶಿಕ್ಷಣದ ಸಂದರ್ಭದಲ್ಲಿ ಬುದ್ಧಿವಂತರನ್ನು ಸೃಜನಶೀಲರೆಂದು ಪರಿಭಾವಿಸುವ ಒಂದು ಕ್ರಮವಿದೆ. ಇದು ತಪ್ಪು. ಬುದ್ಧಿವಂತ ರಲ್ಲಿ ನಿರೂಪಣಾ ಶಕ್ತಿಯಿದ್ದರೆ, ಸೃಜನಶೀಲರಲ್ಲಿ
ವಿಮರ್ಶೆಯ ಶಕ್ತಿಯಿರುತ್ತದೆ.

ಬುದ್ದಿವಂತರದು ಶಿಸ್ತಿನ ಕಲಿಕೆಯಾದರೆ, ಸೃಜನಶೀಲರಲ್ಲಿ ಶಿಸ್ತು ಅಶಿಸ್ತಾಗಿರುತ್ತದೆ. ಇದು ಅವರು ಕಲಿಕಾಂಶಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಗೊತ್ತಾಗುತ್ತದೆ. ಅಶಿಸ್ತು ಕುತೂಹಲದ ಪ್ರವೃತ್ತಿಯನ್ನು ಸೃಜನಶೀಲರಲ್ಲಿ ಜೀವಂತವಾಗಿಡುತ್ತದೆ. ಆದ್ದರಿಂದ ಸೃಜನಶೀಲರೆಲ್ಲ ತಕ್ಕಮಟ್ಟಿಗೆ ಬುದ್ಧಿವಂತರೇ
ಆಗಿರುತ್ತಾರೆ. ಆದರೆ, ಬುದ್ಧಿವಂತರೆಲ್ಲರೂ ಸೃಜನಶೀಲ ರಾಗಬೇಕಿಲ್ಲ. ಗ್ರಹಿಸಿನೋಡಿ: ಬುದ್ಧಿವಂತರ ಕಲಿಕಾಂಶವನ್ನು ಸ್ವೀಕರಿಸುವ ಶಕ್ತಿ ಚೆನ್ನಾಗಿರುತ್ತದೆ. ಮಾತ್ರವಲ್ಲ ತಕ್ಷಣವೇ ಮರುನಿರೂಪಿಸಬಲ್ಲರು. ಆದರೆ, ಸೃಜನಶೀಲರು ಕಲಿಕಾಂಶವನ್ನು ಅರ್ಥೈಸಿಕೊಳ್ಳುವ ದೃಷ್ಟಿಕೋನದಲ್ಲಿ ವಿಭಿನ್ನತೆಯಿರುತ್ತದೆ, ಮರುನಿರೂಪಣೆಯಲ್ಲಿ ಆ ವಿಭಿನ್ನತೆ ಪ್ರಕಟಗೊಳ್ಳುತ್ತದೆ.

ಶಿಕ್ಷಕ ಬುದ್ದಿವಂತನಾಗಿದ್ದರೆ ಮಾಹಿತಿಯನ್ನಷ್ಟೇ ವಿದ್ಯಾರ್ಥಿ ಗಳಿಗೆ ನೀಡಬಲ್ಲ. ಆದರೆ, ಬುದ್ಧಿವಂತಿಕೆಯ ಜತೆಗೆ ಸೃಜನ ಶೀಲತೆಯೂ ಇದ್ದರೆ ಬೋಧನೆಯ ಮೂಲಕ ವಿದ್ಯಾರ್ಥಿ ಗಳಿಗೆ ಎರಡೂ ಸಿಗುವ ಅವಕಾಶವಿರುತ್ತದೆ. ಕೇವಲ ಕಲಿಕಾಂಶಗಳ ಬೋಧನೆಗೆ ಬುದ್ಧಿವಂತಿಕೆ ಮಾತ್ರ ಸಾಕಾಗುತ್ತದೆ. ಇಂಥ ಬೋಧನೆಗೆ ಕಲಿಕಾಂಶಗಳ ಸಮಗ್ರ ಜ್ಞಾನವಷ್ಟೇ ಸಾಕಾಗುತ್ತದೆ. ಆದರೆ, ಬೋಧಕನಲ್ಲಿ ಕಲಿಕಾಂಶಗಳ ಜ್ಞಾನ ಸಂಗ್ರಹ ಪರಿಪೂರ್ಣವಷ್ಟೇ ಅಲ್ಲ, ಸರಿಹೊತ್ತಿನದ್ದಾಗಿರಬೇಕು.
ಅಂದರೆ ‘ಅಪ್ ಟು ಡೇಟ್’ ಆಗಿರದ ಜ್ಞಾನಸಂಗ್ರಹದಿಂದ ಬೋಧನೆಯೂ, ಕಲಿಕೆಯೂ ಅಪೂರ್ಣ. ಆದ್ದರಿಂದ ಸೃಜನಶೀಲ ಬೋಧನೆಯ ಅಗತ್ಯ ಮತ್ತು ಅನಿವಾರ್ಯ ಬುದ್ಧಿವಂತರಿಗೂ ಬೇಕು, ಪ್ರತಿಭಾವಂತರಿಗೂ ಬೇಕು.

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದಲ್ಲಿ ಅಂದರೆ ಬುದ್ಧಿಶಕ್ತಿ ಮತ್ತು ಸೃಜನಶೀಲ ಶಕ್ತಿಯಲ್ಲಿ ಪ್ರಮಾಣಾತ್ಮಕ ವ್ಯತ್ಯಾಸಗಳು ಇದ್ದೇ ಇರುತ್ತವೆ. ಬೋಧನೆಯಲ್ಲಿ ಇವೆರಡೂ ಇಲ್ಲದೆ ಹೋದರೆ ಇವೆರಡೂ ಶಕ್ತಿಗಳೂ ವಿದ್ಯಾರ್ಥಿಗಳಲ್ಲಿ ವಿಕಾಸ ವಾಗದೆ ಹೋಗಬಹುದು. ಆದ್ದರಿಂದ ಸೃಜನಶೀಲ ಬೋಧನೆಯ ಅಗತ್ಯವಿದೆ. ಯಾಂತ್ರಿಕ ಬೋಧನೆಯಲ್ಲಿ ಕಲಿಕೆಯೂ ಯಾಂತ್ರಿಕವಾಗುತ್ತದೆ. ವಿದ್ಯಾರ್ಥಿಗಳ ಅನ್ವಯಿಕ ಸಾಮರ್ಥ್ಯಕ್ಕೆ ಸೃಜನಶೀಲ ಬೋಧನೆ ಹೆಚ್ಚು ಪರಿಣಾಮಕಾರಿ.
ಕಲಿಕಾ ಸಾಮರ್ಥ್ಯದ ಕುಸಿತದಲ್ಲಿ ಸೃಜನಶೀಲ ಬೋಧನೆಯ ಪಾತ್ರವಿರುವುದರಿಂದ ಬೋಧನೆಯಲ್ಲಿ ಸೃಜನಶೀಲತೆ ಇದ್ದರೆ ಕಲಿಕೆ ಚೇತೋಹಾರಿಯಾಗುತ್ತದೆ
ತರಗತಿ ಪ್ರವೇಶಕ್ಕಿಂತ ಮುನ್ನ ಶಿಕ್ಷಕರು ಮಾನಸಿಕವಾಗಿ ಸಿದ್ದಗೊಳ್ಳಬೇಕಾದ ಸಂಗತಿಗಳಿವು: ೧. ಬೋಧನೆಯಲ್ಲಿ ಕುತೂಹಲ ಉಳಿಸಿಕೊಳ್ಳುವುದು ೨. ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುವುದು ೩. ಸಮುದಾಯಪ್ರಜ್ಞೆ ಬೆಳೆಸುವುದು. ನಿರ್ದಿಷ್ಟ ಅವಽಯ ಬೋಧನೆ ಮುಗಿಸಿ ತರಗತಿಯಿಂದ ಹೊರಬರುತ್ತಿದ್ದಂತೆ, ತನ್ನ ತರಗತಿಯಲ್ಲಿ ಈ ಅಂಶ ಗಳು ಜೀವಂತವಾಗಿದ್ದವೇ ಎಂಬುದರ ಬಗ್ಗೆ ಸ್ವಯಂಪರೀಕ್ಷೆ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಶಿಕ್ಷಕರು ಪ್ರಾಮಾಣಿಕ ರಾಗಿರಬೇಕು. ಯಾಕೆಂದರೆ, ಬೋಧನೆ ಕೇವಲ ಹಾರಿಕೆ ಮಾತ್ರದ ಕಾಯಕವಲ್ಲವೇ ಅಲ್ಲ.

ಕಲಿಕಾರ್ಥಿಯ ಕಲಿಕಾ ಪರಿಣಾಮವನ್ನು ಹೆಚ್ಚಿಸುವ ದೃಷ್ಟಿಯಿಂದ ಸೃಷ್ಟಿಶೀಲ ಪಾಠ ಬೋಧನೆಯು ಸಹಾಯಕವಾಗುತ್ತದೆ. ಕಲಿಕೆ ಯಾಂತ್ರಿಕವಾಗುವುದು ಬೋಧನಾ ಪದ್ಧತಿಯಿಂದಲೇ! ಬದುಕು ಬರಡಾಗಬಾರದು; ಕಲಿಕೆ ಯಾಂತ್ರಿಕವಾಗಬಾರದು. ಬೋಧನಾತಂತ್ರಗಳಿಗೆ ಒಗ್ಗಿಕೊಂಡಂತೆ ಶಿಕ್ಷಕರಲ್ಲೂ ಸೃಜನ
ಶೀಲತೆ ಹೆಚ್ಚುತ್ತದೆ. ಆಗ ಅವರ ಪೂರ್ಣ ಸಾಮರ್ಥ್ಯ ಬಳಕೆಯಾಗಲು ಸಾಧ್ಯವಿದೆ. ಬೋಧನೆ ಸವಾಲಾದಾಗಲೇ ಸೃಜನಶೀಲ ಬೋಧನೆ ಸಾಧ್ಯವಾಗುತ್ತದೆ. ಬೋಧನೆ ಸೃಜನಶೀಲವಾದರೆ ತರಗತಿಯ ಪರಿಸರ ಕಲಿಕೆಗೆ ಅನುಕೂಲಕರವಾಗಿ ಒದಗುತ್ತದೆ. ಆಗ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ಬೆಳೆಸಲು ಸಾಧ್ಯವಿದೆ.

ಯಾಕೆಂದರೆ, ಸೃಜನಶೀಲತೆಯನ್ನು ಯಾರೂ ಯಾರಲ್ಲಿಯೂ ಹುಟ್ಟಿಸಲಾರರು. ಕೇವಲ ಮಾಡಿ ಕಲಿಯುವುದರ ಮೂಲಕವೇ, ಚಿಂತನೆಯಲ್ಲಿ ಹೊಸ ದೃಷ್ಟಿಕೋನವನ್ನು ಹೊಂದಿಯೇ ವ್ಯಕ್ತಿ ಸ್ವತಃ ಹುಟ್ಟಿಸಿಕೊಳ್ಳಬೇಕು. ಜನ್ಮತಃ ಸೃಜನಶೀಲತೆ ಎಲ್ಲರಲ್ಲೂ ಇರುತ್ತದೆ. ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಸಹಜ
ವಾದದ್ದೇ ಆಗಿದೆ. ಈ ಕೆಲ ಅಂಶಗಳನ್ನು ಬೋಧನೆಯಲ್ಲಿ ಅಳವಡಿಸಿಕೊಂಡರೆ ಸೃಜನಶೀಲತೆಯನ್ನು ಸಾಧಿಸಬಹುದು. ೧. ಕಲಿಕಾಂಶಗಳನ್ನು ನಿತ್ಯ ಬದುಕಿನ ಆಗುಹೋಗುಗಳಿಗೆ ಅನ್ವಯಿಸುವುದು. ೨. ಕಲಿಕಾಂಶಗಳ ವಿಶ್ಲೇಷಣೆಯ ವೇಳೆ ತರಗತಿ ಸನ್ನಿವೇಶದಲ್ಲೇ ಕಲ್ಪನೆಯ ಜಗತ್ತನ್ನು ಸೃಷ್ಟಿಸುವುದು. ೩. ಕಲಿಕಾಂಶಗಳನ್ನು ಆಧರಿಸಿದ ಪ್ರಶ್ನೆಗಳಿಗೆ ಬಹು ಉತ್ತರಗಳನ್ನು ನಿರೀಕ್ಷಿಸುವುದು. ಅಂದರೆ ಬಹು ಪ್ರಶ್ನೆಗಳನ್ನು ನಿರೀಕ್ಷಿಸುವುದು. ೪. ಕಲಿಕಾಂಶಗಳನ್ನು ಬೇರೆ ಬೇರೆ ಸಂದರ್ಭಗಳಿಗೆ ಹೋಲಿಸುವುದು. ಅಂದರೆ ಬೇರೆ ಬೇರೆ ವಿಷಯಗಳ ಕಲಿಕಾಂಶಗಳಿಗೂ, ನಿತ್ಯಬದುಕಿಗೂ ಹೋಲಿಸುವುದು. ೫. ಪಠ್ಯದ ನಿರ್ದಿಷ್ಟ
ಉದ್ದಿಶ್ಯವನ್ನು ವಿದ್ಯಾರ್ಥಿಗಳ ಅರಿವಿನ ಮೂಲಕವೇ ಸಾಧಿಸುವುದು. ೬. ಆಯಾ ಪ್ರಾದೇಶಿಕ ಅಂಶಗಳನ್ನು ಬಳಸಿಕೊಳ್ಳುವುದು. ೭. ಕಲಿಕಾಂಶಗಳ ಮೇಲಿನ ಕುತೂಹಲ ಹೆಚ್ಚಿಸುವುದು. ೮. ವಿದ್ಯಾರ್ಥಿಗಳಿಗೆ ಸ್ಥೂಲವಾಗಿ ಕಲಿಕಾಂಶಗಳನ್ನು ವಿಶ್ಲೇಷಿಸಿ ಅವರ ಮುಖೇನ ಪಠ್ಯ ವಿವರಣೆಯನ್ನು ಸಾಧಿಸುವುದು.

ಇವು ಒಂದು ದಿನದಲ್ಲಿ ಆಗುವಂಥವಲ್ಲ. ಇದಕ್ಕೆ ಪೂರಕವಾಗಿ ಪಾಠಯೋಜನೆ, ವಾರ್ಷಿಕ ಯೋಜನೆಗಳು ಸಿದ್ಧಗೊಳ್ಳಬೇಕಾಗುತ್ತವೆ. ನಿಯಂತ್ರಣದ ಹಳಿ ತಪ್ಪಿದರೆ
ತರಗತಿ ಸಂತೆಯಾದೀತು!