Saturday, 23rd November 2024

ನಮ್ಮ ಪರಿಸರದ ಹಿರಿಮೆ ಈ ಹಾರುವ ಜೀವಿಗಳು

ಶಶಾಂಕಣ

shashidhara.halady@gmail.com

ಮತ್ತೊಮ್ಮೆ ಬಂದಿರುವ ‘ಪರಿಸರ ದಿನ’ ನೆಪದಲ್ಲಿ ಈ ರೀತಿಯ ಕೆಲವು ಚಿಂತನೆಗಳು ಮನಃಪಟಲದಲ್ಲಿ ಹಾದುಹೋದವು. ನಮ್ಮ ಸುತ್ತಲಿನ ಪರಿಸರವನ್ನು ರಕ್ಷಿಸಿಕೊಂಡಾಗ ಮಾತ್ರ, ಮನುಷ್ಯ ನೆಮ್ಮದಿಯಿಂದ ಭೂಮಿಯ ಮೇಲೆ ವಾಸಿಸಲು ಸಾಧ್ಯ.

ಮತ್ತೊಂದು ಪರಿಸರ ದಿನ ಬಂದಿದೆ. ಪ್ರತಿವರ್ಷವೂ ಪರಿಸರದ ಕುರಿತು ಒಂದಿಷ್ಟು ಭಾಷಣಗಳು, ಬರಹಗಳು, ಚಿತ್ರಗಳು, ಸಾಕ್ಷ್ಯಚಿತ್ರಗಳು ಇವುಗಳಿಗೆ ಸೀಮಿತ ವಾದರೆ ಸಾಕೆ, ಪರಿಸರ ದಿನ? ಈ ದಿನದ ಪ್ರಮುಖ ಆಶಯ ವೆಂದರೆ, ಮಕ್ಕಳೂ ಸೇರಿದಂತೆ, ಎಲ್ಲರಲ್ಲೂ ನಮ್ಮ ಭೂಮಿಯ ಪರಿಸರದ ಕುರಿತು ಕಾಳಜಿ ಮೂಡಿಸಿ, ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸಿ, ನಮ್ಮ ಜೀವನವನ್ನು ಹಸುನುಗೊಳಿಸುವುದು.

ಮನುಷ್ಯನ ಸ್ವಾರ್ಥಕ್ಕಾಗಿಯಾದರೂ, ನಮ್ಮ ಸುತ್ತಲಿನ ಮತ್ತು ಒಟ್ಟೂ ಭೂಮಿಯ ಪರಿಸರವನ್ನು ರಕ್ಷಿಸಿಕೊಳ್ಳ ಬೇಕು. ಪರಿಸರ ನಾಶವಾದರೆ ಭೂಮಿಯ ಮೇಲೆ ಮನುಷ್ಯ ಸುಲಭವಾಗಿ ಬದುಕಿರಲಾರ; ಆದ್ದರಿಂದಲೇ ಇಂದು ಪರಿಸರ ಸಂರಕ್ಷಣೆ ಎಂಬುದು ಸ್ವಾರ್ಥಪರ ಚಟುವಟಿಕೆಯಾಗಬೇಕಾಗಿದೆ. ನಮ್ಮ ಹಳ್ಳಿಯಲ್ಲಿ, ಅಂದರೆ ಕರಾವಳಿ ಪ್ರದೇಶದ ತುಸು ಕಾಡುಪ್ರದೇಶ ಎನಿಸಿದ ಹಾಲಾಡಿಯಲ್ಲಿ, ಪರಿಸರ ದಿನಕ್ಕೂ ಮಳೆಗೂ ವಿಶೇಷ ನಂಟು. ಜೂನ್ ೫ರಂದು ಪರಿಸರ ದಿನ ಬಂದರೆ, ಜೂನ್ ಮೊದಲ ವಾರದಲ್ಲಿ ನಮ್ಮೂರಿನಲ್ಲಿ ಮಳೆಗಾಲ ಬರುತ್ತದೆ!

ಒಂದೊಂದು ವರ್ಷ ಜೂನ್ ಮೊದಲವಾರ ಜಡಿ ಮಳೆ ಆರಂಭವಾದರೆ, ಒಂದೆರಡು ವಾರ ಎಡೆಬಿಡದೇ ಮಳೆ ಸುರಿಯುವುದುಂಟು. ಈ ವರ್ಷವೂ ಜೂನ್ 1 ರಿಂದ ಪ್ರತಿದಿನ ಸ್ವಲ್ಪ ಮಳೆ ಬೀಳುತ್ತಿದೆ. ನಮ್ಮ ಹಳ್ಳಿಯ ವಾತಾವರಣವು ಅದಾಗಲೇ ಮಳೆಯ ಕಂಬಳಿಯನ್ನು ಹೊದ್ದುಕೊಂಡಿದೆ, ಸುತ್ತಲೂ ಹಸಿರು, ಗದ್ದೆ ತೋಡು ಗಳಲ್ಲಿ ನೀರು, ಗಿಡ ಮರ ಬಳ್ಳಿಗಳಲ್ಲಿ ಹೊಸಚಿಗುರು. ಇಂತಹ ಸಂಕ್ರಮಣ ಸಮಯದಲ್ಲಿ, ಈ ವರ್ಷ ಹಾಲಾಡಿಗೆ ಹೋದಾಗ ಹಲವು ಪರಿಸರ ಸಂಬಂಽಧಿ ಚಟುವಟಿಕೆಗಳು ಕಾಣಿಸಿದವು.

ಮಳೆಯ ಆಗಮನವು ನಮ್ಮೂರಿನ ಒಟ್ಟೂ ಸ್ವರೂಪವನ್ನೇ ಬದಲಿಸುತ್ತದೆ. ಸಂಜೆಯಾದ ತಕ್ಷಣ ನಮ್ಮ ಮನೆಯ ಸುತ್ತಲೂ ಕಪ್ಪೆಗಳ ಗಾಯನ! ಅದನ್ನು ವಟ ವಟ
ಎಂದು ಹೇಳಲು ನನ್ನಿಂದಾಗದು. ಅದು ನಿಜವಾಗಿಯೂ ಒಂದು ರೀತಿಯ ಸಂಗೀತವೇ ಸರಿ. ಕಿರುದನಿ ಯಲ್ಲಿ ಚಟ್‌ಪಟ್ ಎನ್ನುವ ಕಪ್ಪೆಗಳು ಒಂದೆಡೆಯಾದರೆ, ದೊಡ್ಡ ದನಿಯಲ್ಲಿ ಕೂಗುವ ಕಪ್ಪೆಗಳು ಇನ್ನೊಂದೆಡೆ. ಇವುಗಳ ನಡುವೆ ಸಣ್ಣಗೆ, ಶ್ರುತಿ ಹಿಡಿದು ಸಂಗೀತ ನುಡಿದಂತೆ ಧ್ವನಿ ಮಾಡುವ ಒಂದೊಂದು ಕಪ್ಪೆಗಳು! ಹಲವು ಪ್ರಭೇದದ ಕಪ್ಪೆಗಳು ಕತ್ತಲಿನ ರಾತ್ರಿಯಲ್ಲಿ ಒಟ್ಟಿಗೇ ಕೂಗುವಾಗ, ಅದೊಂದು ವಿವಿಧ ಶ್ರುತಿಯ ಸಂಗೀತ ಕಛೇರಿಯೇ ಸರಿ! ನೀರಿನ ಹತ್ತಿರ ಮಾತ್ರವಲ್ಲ,
ಹೂವಿನ ಗಿಡಗಳ ಸಂದಿಯಲ್ಲಿ, ತೆಂಗಿನ ಮರದ ಬುಡದಲ್ಲಿ, ಹುಲ್ಲುಗಿಡಗಳ ನಡುವೆ ಅಲ್ಲಲ್ಲಿ ಕುಳಿತು ಕೂಗುವ ನೂರಾರು ಕಪ್ಪೆಗಳು!

ಅವು ಕೂಗುವ ಪರಿ ಕಂಡರೆ, ಒಮ್ಮೊಮ್ಮೆ ಅನಿಸುತ್ತದೆ, ಏನಪ್ಪಾ ಈ ಕಪ್ಪೆಗಳಿಗೆ ಕೂಗಿ ಕೂಗಿ ಬೇಸರ ಮೂಡದೇ ಎಂದು. ಆದರೆ, ಅದೇ ತಾನೆ ಅವುಗಳ ಜೀವನ ಗಾಯನ! ಕಪ್ಪೆಗಳ ಕೂಗನ್ನು ಕೇಳುತ್ತಿರುವಾಗಲೇ, ಸುಮಾರು ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ, ಮನೆ ಎದುರಿಗನ ಪೋರ್ಟಿಕೋ ಬಳಿ ಒಂದು ಮರಗಪ್ಪೆ ನೆಗೆದು ಬಂತು! ವಿನ್ಯಾಸ ಭರಿತ ಹಸಿರು ದೇಹ, ದೊಡ್ಡ ಕಣ್ಣುಗಳು, ತೆಳುವಾದ ಮೈಕಟ್ಟು, ದೇಹಕ್ಕಿಂತ ಉದ್ದನೆಯ ಕಾಲುಗಳು, ಪಾದಗಳಲ್ಲಿ ಜಾಲಪಾದದ ಸ್ವರೂಪ, ಕಾಲು ಬೆರಳುಗಳ ನಡುವೆ ದಟ್ಟ ಕಿತ್ತಳೆ ಮತ್ತು ಕೆಂಪು ಬಣ್ಣದ ಚರ್ಮ!

ನೋಡಲು ತುಸು ವಿಚಿತ್ರ ನೋಟ. ಬಾವಿ ಕಟ್ಟೆಯನ್ನು ಹತ್ತಿ, ಪೋರ್ಟಿಕೋದ ಪ್ರಖರ ಬೆಳಕಿಗೆ ಕುಪ್ಪಳಿಸುತ್ತಾ ಬಂದ ಅದನ್ನು ಕಂಡು ಎಲ್ಲರಿಗೂ ಅಚ್ಚರಿ, ಖುಷಿ. ಫ್ಲ್ಯಾಷ್ ಬಳಸಿ, ಅದರ ಫೋಟೋ ತೆಗೆದ ತಕ್ಷಣ ತುಸು ಗಾಬರಿಗೊಂಡು, ಒಮ್ಮೆ ನೆಗೆದು, ಕಟ್ಟೆಯ ತುದಿಯಲ್ಲಿ ಕುಳಿತಿತು. ನಾವೆಲ್ಲಾ ಬಳಿಸಾರಿ, ಮೊಬೈಲ್‌ನಲ್ಲಿ ಕ್ಲಿಕ್ ಮಾಡಿದರೆ, ಆ ಮಂಡೂಕ ರಾಯನಿಗೆ ಕಿಂಚಿತ್ ಭಯವಿಲ್ಲ. ಕಿತ್ತಳೆ ಮಿಶ್ರಿತ ದಟ್ಟ ಕೆಂಪು ಬಣ್ಣದ ಜಾಲಪಾದಗಳನ್ನು ಭದ್ರವಾಗಿ, ಮೊಸಾಯಿಕ್ ಟೈಲ್ಸ್‌ನ ನುಣುಪಾದ ಗೋಡೆಗೆ ಅಂಟಿಸಿಕೊಂಡು ಕುಳಿತು ಸುತ್ತಲೂ ದಿಟ್ಟಿಸುತ್ತಿತ್ತು. ಬಣ್ಣ ಬಣ್ಣದ ದೇಹದ ಈ ಸೊಗಸುಗಾರ ಕಪ್ಪೆಯ ಹೆಸರೇನು? ಎಂದು ಫೇಸ್‌ಬುಕ್ ಗೆಳೆಯರಲ್ಲಿ ವಿಚಾರಿಸಿದಾಗ, ಮಲಬಾರ್ ಗ್ಲೈಡಿಂಗ್ -ಗ್ ಎಂದು ಗುರುತಿಸಿದರು. ತೀರಾ ಅಪೂರ್ವವೇನಲ್ಲ, ದಕ್ಷಿಣ ಭಾರತದ ಕಾಡುಪ್ರದೇಶಗಳಲ್ಲಿ,
ಸಾಮಾನ್ಯವಾಗಿ ಕಾಣಸಿಗುವ ಕಪ್ಪೆ ಅದು. ನಮ್ಮ ರಾಜ್ಯದ ಸಹ್ಯಾದ್ರಿ ಮತ್ತು ಕರಾವಳಿಯುದ್ದಕ್ಕೂ ಕಾಣಸಿಗುವ ಈ ಕಪ್ಪೆಗೆ ‘ಮಲಬಾರ್’ ವಿಶೇಷಣ ಅಂಟಿಸಿದವರು ಬ್ರಿಟಿಷರು.

ಇದು ಮರದಿಂದ ಮರಕ್ಕೆ ಹಾರುವಾಗ ಕೆಲವು ಮೀಟರ್‌ನಷ್ಟು ದೂರ ಗ್ಲೈಡ್ ಮಾಡಬಲ್ಲದು. ಮರುದಿನ ಮತ್ತೊಂದು ‘ಹಾರುವ ಜೀವಿ’ ಯನ್ನು ಕಾಣುವ ಅವಕಾಶ. ನಮ್ಮ ಹಳ್ಳಿ ಮನೆಯ ಹತ್ತಿರ ಸಾಕಷ್ಟು ಕುರುಚಲು ಕಾಡು, ಹಕ್ಕಲು, ಹಾಡಿ ಇವೆ. ಅಲ್ಲಿನ ಮರಗಳಲ್ಲಿ ಹಾರುತ್ತಿದ್ದ ಹಕ್ಕಿಯೊಂದನ್ನು ಗಮನಿಸುವಾಗ, ಒಂದು ಬೋಗಿ ಮರದಿಂದ ಇನ್ನೊಂದಕ್ಕೆ ಪುಟ್ಟ ಹಕ್ಕಿ ಹಾರಿದಂತೆ ಅನಿಸಿತು. ಆ ಎರಡೂ ಮರಗಳ ನಡುವೆ ಸುಮಾರು ೧೨ ಅಡಿ ಅಂತರ. ಆದರೆ ಅದು ಹಕ್ಕಿ
ಆಗಿರ ಲಿಲ್ಲ. ಹಾರಿ ಕುಳಿತ ಆ ಪುಟ್ಟ ಜೀವಿಯು ಬೋಗಿ ಮರದ ಕಾಂಡದ ಮೇಲೆ ಅಲ್ಲಾಡದೇ ಕುಳಿತಿತು. ಆಗಲೇ ಗೊತ್ತಾಗಿದ್ದು, ಅದು ಹಕ್ಕಿಯಲ್ಲ, ಅದೊಂದು ‘ಹಾರುವ ಓತಿ’ ಎಂದು. ನೆಲ ಮಟ್ಟದಿಂದ ಸುಮಾರು ೧೫ ಅಡಿ ಎತ್ತರದಲ್ಲಿ ಅಲ್ಲಾಡದೇ ಕುಳಿತ ಅದನ್ನೇ ಐದು ನಿಮಿಷ ಗಮನಿಸಿದೆ.

ಮೇಲ್ನೋಟಕ್ಕೆ ಮಾಮೂಲಿ ಓತಿಕ್ಯಾತದಂತೆ ಇದ್ದರೂ, ಸಾಕಷ್ಟು ತೆಳ್ಳನೆಯ ದೇಹ. ಅದು ತನ್ನ ಕುತ್ತಿಗೆಯ ಹೊರಭಾಗ ದಲ್ಲಿರುವ ಹಳದಿ ಬಣ್ಣದ ‘ನಾಲಗೆ’ಯನ್ನು
ನಿಧಾನವಾಗಿ ಎತ್ತಿ ಆಡಿಸಿತು. ಆ ಹಳದಿ ನಾಲಗೆಯ ಸ್ವರೂಪವನ್ನು ಕಂಡಾಗ ಖಚಿತವಾಯಿತು, ಇದು ಹಾರುವ ಓತಿ ಎಂದು. ನಮ್ಮೂರಿನಲ್ಲಿ ಹಾರುವ ಓತಿ ಬಹಳ ಅಪರೂಪವೇನಲ್ಲ. ಕಳೆದ ಹಲವು ವರ್ಷಗಳಲ್ಲಿ ಆಗಾಗ ಅದು ನನ್ನ ಕಣ್ಣಿಗೆ ಬಿದ್ದಿದೆ. ಅಷ್ಟೇಕೆ ಉಡುಪಿ ಜಿಲ್ಲೆಯ ಹಲವು ಕಡೆ, ಸಹ್ಯಾದ್ರಿ ಯುದ್ದಕ್ಕೂ ಹಲವು ಪ್ರದೇಶಗಳಲ್ಲಿ ಇವು ಕಾಣಿಸಿದ ದಾಖಲೆಗಳಿವೆ.

ಉಡುಪಿ ನಗರದ ಹತ್ತಿರದ ಕಾಡಿನಲ್ಲೂ ಇವು ಕಾಣಿಸಿದ ದಾಖಲೆ ಇದೆ. ನಮ್ಮ ಮನೆಯ ಸುತ್ತ ಮುತ್ತ ಹಾರುವ ಓತಿ ಮರದಿಂದ ಮರಕ್ಕೆ ಹಾರುವುದನ್ನು ಈ ಹಿಂದೆಯೂ ಕಂಡಿದ್ದ ನಾನು, ‘ಹಾಲಾಡಿಯಲ್ಲಿ ಹಾರುವ ಓತಿ’ ಎಂಬ ಬರಹವನ್ನೂ ಬರೆದದ್ದುಂಟು. ತನ್ನ ಪಕ್ಕೆಗಳ ಬಳಿಯಿರುವ ಚರ್ಮವನ್ನು ಅಗಲಿಸಿ ಈ ಜೀವಿ ಹತ್ತರಿಂದ ಇಪ್ಪತ್ತು ಅಡಿಗಳ ತನಕ ತೇಲುತ್ತಾ ಸಾಗಬಲ್ಲದು. ಒಂದು ಮರದಿಂದ ತುಸು ತಗ್ಗಿನ ಜಾಗದ ಇನ್ನೊಂದು ಮರಕ್ಕೆ ಹಾರುತ್ತದೆ. ಅಗತ್ಯ ಇದ್ದರೆ,
ಪುನಃ ಮೇಲೇರಿ, ಮತ್ತೊಂದು ಮರಕ್ಕೆ ಹಾರಬಲ್ಲದು. ನಮ್ಮೂರಿನಲ್ಲಿ ಇದನ್ನು ‘ಓಂತಿ’ ಎಂದು ಕರೆಯುತ್ತಾರೆ.

ಉಡುಪಿ ಜಿಲ್ಲೆಯ ಜನರು ಇದನ್ನು ಮೊದಲಿನಿಂದಲೂ ಗಮನಿಸಿದ್ದು, ಓಂತಿಮಾರು, ಓಂತಿಬೆಟ್ಟು ಎಂಬ ಊರುಗಳ ಹೆಸರಿನಿಂದಲೂ ಗುರುತಿಸಿದ್ದಾರೆ. ತೇಜಸ್ವಿ ಯವರ ‘ಕರ್ವಾಲೋ’ ಕಾದಂಬರಿಯಲ್ಲಿ ಈ ಜೀವಿ ಪಡೆದ ನಿಗೂಢ ಸ್ವರೂಪದಿಂದಾಗ, ಕನ್ನಡದ ಸಾಹಿತ್ಯಕ ವಲಯದಲ್ಲಿ ‘ಹಾರುವ ಓತಿ’ ಸಾಕಷ್ಟು ಚಿರಪರಿಚಿತ. ಈ ಬಾರಿ ಊರಿಗೆ ಬಂದಾಗ, ಅದರಲ್ಲೂ ಪರಿಸರ ದಿನದ ಆಸುಪಾಸಿನಲ್ಲಿ, ಹಾರುವ ಓತಿ ಯನ್ನು ಕಂಡು ಖುಷಿಯಾಯಿತು. ಆದರೆ, ಅದರ
ಹಾರಾಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ನನ್ನ ಆಸೆ ಇನ್ನೂ ಈಡೇರಿಲ್ಲ.

ಮೂರು ವರ್ಷಗಳ ಹಿಂದೆ ಒಂದನ್ನೊಂದು ಅಟ್ಟಿಸಿಕೊಂಡು ಒಂದು ತೆಂಗಿನ ಮರದಿಂದ ಇನ್ನೊಂದು ತೆಂಗಿನ ಮರಕ್ಕೆ ಹಾರುತ್ತಿದ್ದ ಹಾರುವ ಓತಿಗಳನ್ನು ಹಾಲಾಡಿ ಯಲ್ಲೇ ಕಂಡಿದ್ದೆ. ಈ ವಿಶಿಷ್ಟ ಜೀವಿಗಳು ನಮ್ಮ ಹಳ್ಳಿಯ ಪರಿಸರದಲ್ಲಿ ಇನ್ನೂ ವಾಸಿಸಿವೆ ಎಂಬುದೇ ನೆಮ್ಮದಿಯ ಸಂಗತಿ. ಅಷ್ಟರ ಮಟ್ಟಿಗೆ ನಮ್ಮೂರಿನ
ಪರಿಸರವು ತನ್ನ ಆರೋಗ್ಯವನ್ನು ಉಳಿಸಿಕೊಂಡಿದೆ. ಇದನ್ನು ಬರೆಯುತ್ತಿರುವಾಗಲೇ, ರಾತ್ರಿಯ ಹೊತ್ತು ನಮ್ಮ ಮನೆಯ ಸುತ್ತ ಮುತ್ತ ಹಾರುತ್ತಿರುವ ಇನ್ನೊಂದು ಜೀವಿ ಈ ಜಗತ್ತನ್ನೇ ಬೆಳಗಲು ಪ್ರಯತ್ನಿಸುತ್ತಿದೆ! ಅದುವೇ ಮಿಣುಕು ಹುಳ. ಮಳೆ ಬಿದ್ದ ನಂತರದ ದಿನಗಳಲ್ಲಿ ಮಿಣುಕು ಹುಳಗಳು ಬೆಳಕು ಮಾಡುವುದು ನಮ್ಮ ಹಳ್ಳಿಯಲ್ಲಿ ತೀರಾ ಸಾಮಾನ್ಯ.

ಇಂತಹ ರಾತ್ರಿಗಳಲ್ಲೇ ಇವು, ತಮ್ಮ ಹಿಂಭಾಗದಿಂದ ಬೆಳಕನ್ನು ಬೀರುತ್ತಾ ಅತ್ತಿಂದಿತ್ತ ಹಾರುತ್ತಿರುತ್ತವೆ. ನಾನು ಗಮನಿಸಿದಂತೆ ಇವು ಬೆಳಕು ಮಾಡುವ ಶೈಲಿಯಲ್ಲೂ ವೈಶಿಷ್ಟ್ಯವಿದೆ. ಕೆಲವು ಕ್ಷಣಗಳ ಕಾಲ ಒಂದು ಸೆಕೆಂಡಿಗೆ ಸುಮಾರು ನಾಲ್ಕು ಬಾರಿ ಬೆಳಕು ಮಾಡಿದರೆ, ತಕ್ಷಣ ಆ ಪ್ಯಾಟರ್ನ್ ಬದಲಿಸಿ,
ಒಂದು  ಸೆಕೆಂಡಿಗೆ ಸುಮಾರು ಎಂಟು ಬಾರಿ ಬೆಳಕು ಮಾಡುತ್ತವೆ. ಜೇನು ಹುಳಗಳಂತೆ ಇದೂ ಅವುಗಳ ಭಾಷೆ ಇರಬಹುದೆ? ಸಾಮಾನ್ಯವಾಗಿ ನಮ್ಮ ಹಳ್ಳಿ
ಯ ಗದ್ದೆಯಂಚಿನ ಮರಗಳು ಇವುಗಳ ‘ಬೆಳಕಿನ ಪರಿಭಾಷೆ’ಯ ತಾಣ. ಮಳೆ ಬೀಳುವ ರಾತ್ರಿಯಲ್ಲಿ ಇವು ಮರಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ
ಸೇರಿ, ಸೀರಿಯಲ್ ಸೆಟ್ ಬೆಳಕಿನಂತೆ ಮರವನ್ನೇ ಬೆಳಗುವುದುಂಟು.

ಒಮ್ಮೊಮ್ಮೆ ಒಂದೆರಡು ಹುಳಗಳು ಹಾರುತ್ತಾ ಮನೆಯ ಬಳಿ ಸುಳಿದಾಡುವುದುಂಟು. ಈ ಜಗತ್ತಿನ ಮಿಕ್ಕೆಲ್ಲಾ ಕೀಟಗಳು ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿರುವಾಗ, ಮಿಣುಕು ಹುಳಗಳಿಗೆ ಬೆಳಕನ್ನು ಬೀರುತ್ತಾ ಹಾರಾಡ ಬೇಕೆಂಬ ಸೂರ್ತಿ ಉಕ್ಕಿದ್ದಾದರೂ ಹೇಗೆ! ಬಾಲದ ಬಳಿ ಬೆಳಕನ್ನು ಉತ್ಪಾದಿಸುವ ಕಲೆಯನ್ನು ಅವುಗಳಿಗೆ ಕಲಿಸಿದವರಾರು!

ನಾಲ್ಕಾರು ಮಿಣುಕು ಹುಳಗಳು ಬೆಳಕು ಬೀರುತ್ತಾ ಹಾರಡುವಾಗ, ನೆಲದ ಮೇಲಿರುವ ಒಂದಷ್ಟು ಹುಳಗಳು ಸಹ ಬೆಳಕು ಬೀರುವುದುಂಟು! ಅವಿನ್ನೂ ನಮ್ಮ ಮನೆಯ ಸುತ್ತ ಪ್ರತ್ಯಕ್ಷವಾಗಿಲ್ಲ. ಚೆನ್ನಾಗಿ ಮಳೆ ಬಂದ ನಂತರ, ನೆಲದ ಮೇಲೆ ಚಲಿಸುವ ಮಿಣಕುಹುಳಗಳನ್ನು ನಾನು ಈ ಹಿಂದಿನ ವರ್ಷಗಳಲ್ಲಿ ಇಲ್ಲೇ ನೋಡಿದೆ. ಈಚಿನ ದಶಕಗಳಲ್ಲಿ ಮಿಣುಕು ಹುಳಗಳ ಸಂಖ್ಯೆ ಕಡಿಮೆ ಯಾಗಿದೆ ಎಂಬ ಅಭಿಪ್ರಾಯವಿದೆ. ಕೀಟ ನಾಶಕಗಳ ನಿರಂತರ ಬಳಕೆಯು ನಮ್ಮ ಪರಿಸರದ ಮೇಲೆ ಬೀರಿದ ದುಷ್ಪರಿಣಾಮದಿಂದ ಇಂತಹ ವಿದ್ಯಮಾನ ಸಂಭವಿಸಿರಬಹುದು.

ಇಷ್ಟೆಲ್ಲಾ ಹಾರುವ ಜೀವಿಗಳನ್ನು ಈ ಪರಿಸರ ದಿನದ ಆಸುಪಾಸಿನಲ್ಲಿ ನಮ್ಮ ಹಳ್ಳಿಯಲ್ಲಿ ನಾನು ಕಂಡಿದ್ದರೂ, ನಮ್ಮ ಹಾಲಾಡಿಯ ‘ಪರಿಸರ’ವು ವಿವಿಧ ರೀತಿಯ ಸಾಕಷ್ಟು ಬದಲಾವಣೆಗೆ ಪಕ್ಕಾಗಿದೆ ಎಂಬುದು ಸ್ಪಷ್ಟ. ಇಲ್ಲಿನ ಕಾಡುಪ್ರದೇಶಗಳಲ್ಲೂ ಬುಲ್‌ಡೋಜರ್ ಮತ್ತು ನೆಲ ಮಟ್ಟಸಮಾಡುವ ಯಂತ್ರಗಳು ಸಾಕಷ್ಟು ಕೆಲಸ ಮಾಡಿವೆ. ಕೆಲವು ದಶಕಗಳ ಹಿಂದೆ ನಿರ್ಜನ ಎನಿಸಿದ್ದ ಕಾಡು, ಗುಡ್ಡ, ಹಾಡಿ, ಹಕ್ಕಲುಗಳ ಅಂಚಿನಲ್ಲಿ ಇಂದು ಹಲವರು ಮನೆ ಕಟ್ಟಿಕೊಂಡು, ಕೃಷಿ ಚಟುವಟಿಕೆ ನಡೆಸಿದ್ದಾರೆ. ನೀರಾವರಿಯ ಚಾನೆಲ್‌ಗಳು ಕಾಡಿನ ನಡುವೆ ಅಡ್ಡಾ ದಿಡ್ಡಿಯಾಗಿ ಸಂಚರಿಸಿ, ಪ್ರಾಣಿಗಳ ಸಹಜ ಚಲನೆಗೆ ತಡೆಯೊಡ್ಡಿವೆ.

ಕಳೆದ ಶತಮಾನದಲ್ಲಿ ಬಹು ಅಪರೂಪವಾಗಿದ್ದ ನವಿಲುಗಳು ನಮ್ಮೂರಿನಲ್ಲಿ ಇಂದು ತೀರಾ ಸಾಮಾನ್ಯ. ಜತೆಗೆ, ಕೃಷಿಕರಿಗೆ ತೊಂದರೆ ಕೊಡುವ ಜೀವಿಗಳ ಸಾಲಿನಲ್ಲಿ ಸೇರಿಕೊಂಡಿವೆ! ನವಿಲು ಹೆಚ್ಚಳವಾಗುವುದು ಪರಿಸರದ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೆಲವು ಪರಿಸರ ತಜ್ಞರು ಹೇಳಿದ್ದುಂಟು. ಕೆಲವೇ ದಶಕಗಳ ಹಿಂದೆ ಇಲ್ಲದಿದ್ದ ಜಿಂಕೆಗಳು, ಇಂದು ನಮ್ಮ ಹಳ್ಳಿಯ ಪರಿಸರದಲ್ಲಿ ಹೇರಳವಾಗಿದ್ದು, ಕೃಷಿಕರ ಬೆಳೆಗಳನ್ನು ‘ಸ್ವಾಹಾ’ ಮಾಡುವಲ್ಲಿ ಮೊದಲ ಸ್ಥಾನ ಪಡೆದಿವೆ. ಕಳೆದ ಸುಮಾರು ಎಂಬತ್ತು ವರ್ಷಗಳಿಂದ ಕಾಣದೇ ಇದ್ದ ಹುಲಿ ಮತ್ತು ಚಿರತೆಗಳು ಸಹ ಈಗ ಒಮ್ಮೊಮ್ಮೆ ನಮ್ಮ
ಹಳ್ಳಿಯ ಸರಹದ್ದಿನಲ್ಲಿ ಕಾಣಿಸುವುದುಂಟು.

ಇದು ನಮ್ಮ ಹಳ್ಳಿಯ ‘ಪರಿಸರ’ದ ಬದಲಾದ ಸ್ಥಿತಿ. ಅಷ್ಟೇನೂ ದಟ್ಟ ಕಾಡು ಇಲ್ಲದ, ನಗರೀಕರಣದ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತಿರುವ ಹಾಲಾಡಿಯಂತಹ ಹಳ್ಳಿಯಲ್ಲಿ, ಈಚೆಗೆ ಕಾಣಸಿಗುತ್ತಿರುವ ಜಿಂಕೆ, ಹುಲಿಗಳು, ‘ಪರಿಸರ’ದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯೆ? ಖಂಡಿತಾ ಅಲ್ಲ. ಸಹ್ಯಾದ್ರಿಯಲ್ಲಿರುವ ದಟ್ಟ ಕಾಡಿನ ನಾಶ ದಿಂದಾಗಿಯೇ, ಆ ಘಟ್ಟಶ್ರೇಣಿಯ ತಪ್ಪಲಿನಲ್ಲಿರುವ ಇಂತಹ ಹಳ್ಳಗಳಲ್ಲಿ ಈ ಬೆಳವಣಿಗೆ ಆಗಿರಬಹುದೆ? ಇದನ್ನು ತಜ್ಞರು ಪರಿಶೀಲಿಸಿ ಹೇಳಬೇಕು.
ಮತ್ತೊಮ್ಮೆ ಬಂದಿರುವ ‘ಪರಿಸರ ದಿನ’ ನೆಪದಲ್ಲಿ ಈ ರೀತಿಯ ಕೆಲವು ಚಿಂತನೆಗಳು ಮನಃಪಟಲದಲ್ಲಿ ಹಾದುಹೋದವು.