Sunday, 19th May 2024

ಜೀವ ವಿಸ್ಮಯ: ಗಮನ ಸೆಳೆಯುವ ಅಸಮರೂಪ ಜೀವಿಗಳು

ಶಿಶಿರ ಕಾಲ

shishirh@gmail.com

ಕರಾವಳಿ, ಮಲೆನಾಡಿನಲ್ಲಿ ಮಳೆ ಹಿಡಿಯಿತೆಂದರೆ ಶಂಕರ್ ಮಹಾದೇವನ್‌ರ ‘ಬ್ರೆಥ್ಲೆಸ್’ ಹಾಡಿನಂತೆ. ಉಸಿರು ಬಿಡದೆ ವಾರಗಟ್ಟಲೆ ಸುರಿಯುತ್ತಲೇ
ಇರುತ್ತದೆ. ಸೂರ್ಯ ಅಷ್ಟೂ ದಿನ ರಜೆಗೆ ಹೋಗಿಬಿಡುತ್ತಾನೆ. ಈ ಸಮಯದಲ್ಲಿ ಎಲ್ಲ ಕೃಷಿ ಕೆಲಸಗಳು ಸ್ಥಗಿತ. ಇವು ಮನೆಯೊಳಗೇ ಕೂತು, ಕರಿದ ತಿಂಡಿ ತಿನ್ನುತ್ತ, ವಿದ್ಯುತ್ ಕಡಿತ ಮಾಡಿದ ಡಿಪಾರ್ಟ್‌ಮೆಂಟಿಗೆ ಶಪಿಸುತ್ತ ಕಾಲ ಕಳೆಯುವ ದಿನಗಳು.

ಇಂಥ ಮಳೆಯ ಆರ್ಭಟ, ದಟ್ಟ ಕಾರ್ಮೋಡ, ಎಲ್ಲೆಡೆ ಕತ್ತಲಿರುವಾಗಲೇ ನಮ್ಮ ತೋಟಕ್ಕೆ ಕೃಷಿ ಕೆಲಸಕ್ಕೆ ಬರುವ ಮಾದೇವ, ಜಂಗ, ಹಮ್ಮು ಇವರೆಲ್ಲ ಕ್ರಿಯಾಶೀಲರಾಗುವುದು. ಬೇಸಿಗೆಯಲ್ಲಿ ಬೇಟೆ, ಶಿಕಾರಿ, ಮಳೆಗಾಲದಲ್ಲಿ ಮೀನು ಹಿಡಿಯುವುದು ಇವೆಲ್ಲವೂ ಆಹಾರಕ್ಕಿಂತ ಮನೋ ರಂಜನೆ. ಮಳೆಗಾಲದಲ್ಲಿ ಇವರೆಲ್ಲರಿಗೆ ಅತ್ಯಂತ ಖುಷಿ ಕೊಡುವ ಇನ್ನೊಂದು ಕೆಲಸವೆಂದರೆ ಏಡಿಗಳನ್ನು ಹಿಡಿಯುವುದು. ಪಶ್ಚಿಮ ಘಟ್ಟದಲ್ಲಿ ಬಿದ್ದ ಮಳೆನೀರು ಹರಿದು ಕೆಲವು ನದಿಗಳಾಗುತ್ತವೆ. ನದಿಗಳಾಗದ ಇನ್ನು ಕೆಲವು ಹಳ್ಳಗಳಾಗಿ ಹರಿಯುತ್ತವೆ. ಅಂಥ ಚಿಕ್ಕ ಪುಟ್ಟ ಹತ್ತೆಂಟು ನೀರಿನ ತೊರೆಗಳು ನಮ್ಮ ತೋಟದಲ್ಲಿ ಕೆಳಮುಖನಾಗಿ ಹರಿಯುತ್ತವೆ. ಇವುಗಳಲ್ಲಿ ಕೆಲವಕ್ಕೆ ಜೀವ ಬರುವುದು, ನೀರು ಹರಿಯುವುದು ಮಳೆಗಾಲದಲ್ಲಿ ಮಾತ್ರ.

ಅಲ್ಲಿ ಪ್ರತಿವರ್ಷ ನೀರು ಹರಿದು ಮಣ್ಣೆಲ್ಲ ಸವಕಳಿಯಾಗಿ ಈಗ ಬರೀ ದೊಡ್ಡ ದೊಡ್ಡ ಕಲ್ಲುಗಳೇ ಉಳಿದುಕೊಂಡಿವೆ. ಅಂಥ ಹಳ್ಳಗಳ ಕಲ್ಲುಗಳ ಮಧ್ಯದಲ್ಲಿ ಸಿಹಿನೀರಿನ ಏಡಿಗಳುವಾಸವಾಗಿರುತ್ತವೆ. ಮಳೆಗಾಲ ಶುರುವಾದ ಕೂಡಲೇ ಅವು ಲಕ್ಷಗಟ್ಟಲೆ ಮರಿಹಾಕುತ್ತವೆ. ಆ ಸಮಯದಲ್ಲಿ ಮನೆಯ
ಅಂಗಳದ ತುಂಬೆಲ್ಲ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಚಿಕ್ಕ ಚಿಕ್ಕ ಗಾತ್ರದ ಏಡಿ ಮರಿಗಳೇ ತುಂಬಿ ಹೋಗುತ್ತವೆ. ಅವು ಆಕಾಶದಿಂದ ಮಳೆಯ ಜತೆ ಬೀಳುತ್ತವೆ ಎಂಬ ಗಟ್ಟಿನಂಬಿಕೆ ನಮ್ಮೂರಲ್ಲಿ ಹಲವರಿಗೆ ಇದೆ. ಅವುಗಳನ್ನು ಮೆಟ್ಟದೆ ಆಚೀಚೆ ಓಡಾಡಲಿಕ್ಕೆ ಸಾಧ್ಯವಾಗುವುದೇ ಇಲ್ಲ. ಇದೆಲ್ಲದರ ಮಧ್ಯೆ ಆ ಚಿಕ್ಕ ಮರಿಗಳನ್ನು ಕೊಂದು ತಿನ್ನಲು ತುಂಬುವ ಇರುವೆಗಳು.

ಎಲ್ಲೆಂದರಲ್ಲಿ ಕಪ್ಪು ಇರುವೆಗಳು, ಕೆಂಪು ಏಡಿ ಮರಿಗಳು. ಅವುಗಳಲ್ಲಿ ಬದುಕುಳಿಯುವವು ಬಹುಶಃ ಕೆಲವೇ ಪ್ರತಿಶತ. ಏಕೆಂದರೆ ಲಕ್ಷಗಟ್ಟಲೆ ಮರಿಗಳಲ್ಲಿ ಎಲ್ಲವೂ ಬದುಕುಳಿದಿದ್ದರೆ ನಮ್ಮ ಊರಿಗೆ ಊರೇ ಏಡಿಯಿಂದ ತುಂಬಿಹೋಗಬಹುದಿತ್ತು. ಅವು ಬೆಳೆಯುವುದು, ಪೌಢಾವಸ್ಥೆಗೆ ಬರುವುದು ಈ ಹಳ್ಳದ ಕಲ್ಲಿನ ಪೊಟರೆಗಳಲ್ಲಿ. ನಮ್ಮ ತೋಟದ ಕೃಷಿ ಕಾರ್ಮಿಕರು ತಲೆಗೊಂದು ಹೆಡ್‌ಲೈಟ್ ಹಾಕಿ ರಾತ್ರಿ ಅವನ್ನು ಹಿಡಿಯಲಿಕ್ಕೆ ಹೊರಡುವುದು. ಇದು ವಾರ್ಷಿಕ ಹವ್ಯಾಸ. ಅವುಗಳ ಚಿಕ್ಕ ಕಣ್ಣುಗಳು ಹೆಡ್‌ಲೈಟ್‌ಗೆ ಪ್ರತಿಫಲಿಸುತ್ತವೆ.

Read E-Paper click here

ಹಾಗೆ ಅವನ್ನು ಹುಡುಕಿ ಹಿಡಿಯುವುದು. ಇದೇನು ಅಂದುಕೊಂಡಷ್ಟು ಸುಲಭದ ಹವ್ಯಾಸವಲ್ಲ. ಕಲ್ಲಿನ ಪೊಟರೆಯೊಳಗೆ ಹೇಗೆಹೇಗೋ ಕೈಹಾಕಿದರೆ ಈ ಏಡಿಗಳು ಕಚ್ಚಿಬಿಡುತ್ತವೆ. ಎಲ್ಲದಕ್ಕಿಂತ ಮೊದಲು ಏಡಿ ಎಡಗೈದೋ ಅಥವಾ ಬಲಗೈದೋ ಎಂದು ತಿಳಿಯಬೇಕು. ನಮ್ಮಲ್ಲಿನ ಈ ಕಲ್ಲು ಪೊಟರೆಯ ಏಡಿಗಳ ಒಂದು ಕೈ ಮಾತ್ರ ಬಲಿಷ್ಠ, ಗಾತ್ರದಲ್ಲಿ ದೊಡ್ಡದು. ಇನ್ನೊಂದು ಕೈ ತೀರಾ ಚಿಕ್ಕದು, ಸಣಕಲು. ಬಲಿಷ್ಠ ಕೈ ಗಟ್ಟಿಯಾಗಿ ಹಿಡಿದು ಕೊಳ್ಳಲು, ಕಚ್ಚಿಕೊಳ್ಳಲು ಬಳಸುವುದು. ಇನ್ನೊಂದು ಚಿಕ್ಕ ಕೈಯನ್ನು ಕಿತ್ತು, ಹರಿದು ತಿನ್ನಲು ಬಳಸುವುದು. ಅವನ್ನು ಹಿಡಿಯುವಾಗ ಅದರ ದೊಡ್ಡ ಕೈ ಇರುವ ಪಕ್ಕದಿಂದ ನಮ್ಮ ಕೈ ಹಾಕಿ ಹಿಂದಿನಿಂದ ಹಿಡಿಯಬೇಕು.

ಆಗ ಅವಕ್ಕೆ ಫಕ್ಕನೆ ತಿರುಗಲು, ಅದರ ಬಲಿಷ್ಠ ಕೈಯಿಂದ ಕಚ್ಚಲು (ದಾಳಿ ಮಾಡಲು) ಸಾಧ್ಯವಾಗುವುದಿಲ್ಲ. ಹೀಗೆ ಹಿಡಿಯುವಾಗ ಲೆಕ್ಕಾಚಾರ ತಪ್ಪಿ ಇನ್ನೊಂದು ಕಡೆಯಿಂದ ಕೈ ಹಾಕಿದರೆ ಆ ಏಡಿ ಕೈ ಬೆರಳನ್ನು ತುಂಡರಿಸುವುದು ಪಕ್ಕಾ. ಹಾಗೆ ಸರಿಯಾಗಿ ಹಿಡಿದಾಗ ಮಾತ್ರ ಏಡಿ ಅಸಹಾಯಕವಾಗಿ ಸಿಗುತ್ತವೆ. ಆಗ ಅದು ತನ್ನೆಲ್ಲ ಕೈಕಾಲುಗಳನ್ನು ಗಾಳಿಯಲ್ಲಿ ಕವಾಯತು ಮಾಡುತ್ತಿರುತ್ತದೆ. ಅದೇ ಹಳ್ಳಗಳಲ್ಲಿ ಇನ್ನೊಂದು ಜಾತಿಯ ಏಡಿಗಳಿರುತ್ತವೆ. ಅವು ಕೆಸರು ಏಡಿಗಳು. ಅವುಗಳ ಎರಡೂ ಕೈ ಒಂದೇ ಗಾತ್ರದ್ದು. ಆದರೆ ಪೊಟರೆಯ ಸಿಹಿನೀರಿನ ಏಡಿಯದು ಒಂದು ಕೈಗೆ ಬಾಕ್ಸಿಂಗ್ ಗ್ಲೋವ್ಸ್ ಹಾಕಿದಂತೆ, ಇಷ್ಟಗಲ.

ಈ ರೀತಿ ಅಸಮ ದೇಹರೂಪವನ್ನು ಹೊಂದುವ ಪ್ರಾಣಿಗಳು ವಿರಳ. ನಮ್ಮ ಸುತ್ತಲಿನ ಹೆಚ್ಚಿನ ಪ್ರಾಣಿಗಳದ್ದು ಸಮರೂಪದ ದೇಹರಚನೆ. ಹಾಗಾ ಗಿಯೇ ಅಸಮ ದೇಹದ ಪ್ರಾಣಿಗಳು ಜೀವವಿಜ್ಞಾನದ ಕೌತುಕವಾಗಿ ವಿಶೇಷವಾಗಿ ಆಕರ್ಷಿಸುತ್ತವೆ. ಡಾರ್ವಿನ್‌ನ ವಿಕಾಸವಾದವನ್ನು ಸಮೀಕರಿಸಿ ನೋಡುವಾಗ ಇಂಥ ಅಸಮರೂಪದ ದೇಹಗಳು ಕೆಲವು ವಿತಂಡ ವಾದಗಳಿಗೆ ಎಡೆಮಾಡಿಕೊಡುವುದಿದೆ. ಡಾರ್ವಿನ್‌ನ ವಾದದಲ್ಲಿ ಸಮರೂಪತೆಯ ವಿಕಸನ ಬಹಳ ಪ್ರಮುಖ ವಿಷಯ. ಏನಿದು ಸಮರೂಪತೆ? ನೀವು ಯಾವುದೇ ಪ್ರಾಣಿಯನ್ನು ನೋಡಿ, ಅವುಗಳಲ್ಲಿ ಎಡ ಮತ್ತು ಬಲ ಒಂದೇ ತೆರನಾಗಿ ಇರುತ್ತದೆಯಲ್ಲವೇ? ಬೆಕ್ಕು, ನಾಯಿ, ಆಕಳು, ಹುಲಿ, ಹೀಗೆ ಎಲ್ಲ ಪ್ರಾಣಿಗಳೂ ಎಡಗಡೆ ಇದ್ದಂತೆಯೇ ಬಲಕ್ಕಿರುತ್ತವೆ ಅಲ್ಲವೇ? ಮುಖದ ಎಡಕ್ಕೊಂದು ಬಲಕ್ಕೊಂದು ಕಣ್ಣು, ಕಿವಿ, ಮೂಗು, ಹಲ್ಲುಗಳು ಹೀಗೆ ಎರಡು ಕಡೆಯ ಸಮರೂಪತೆ.

ಇಂಥ ಸಮರೂಪತೆ ಸಾಮಾನ್ಯವಾಗಿ ಎಡ ಮತ್ತು ಬಲವೆಂದು ಎದುರಿಗೆ ನಿಂತಾಗ ಮಾತ್ರ. ದೇಹದ ಹಿಂದೆ ಇದ್ದಂತೆ ಮುಂದೆ ಇರುವುದಿಲ್ಲವಲ್ಲ. ಹಾಗಾಗಿ ಇದು bilateral symmetry. ಮನುಷ್ಯ ದೇಹ ಎಡಬಲ ಸಾಮ್ಯತೆಯುಳ್ಳ ದೇಹರಚನೆ. ಹಾಗಂತ ಮನುಷ್ಯನ ಎಡ-ಬಲ ದೇಹರಚನೆ ಕನ್ನಡಿ ಹಿಡಿದಷ್ಟು ಸಾಮ್ಯತೆಯುಳ್ಳದ್ದೇನಲ್ಲ. ಒಂದು ದೊಡ್ಡ, ಸಮತಟ್ಟಾದ ಬಯಲು. ಅದರಲ್ಲಿ ನಿಮ್ಮ ಕಣ್ಣು ಕಟ್ಟಲಾಗಿದೆ, ಒಂದು ಚೂರೂ ಹೊರಗೆ ಕಾಣಿಸದಂತೆ. ಕಣ್ಣೊಳಗೆ ಕಾರ್ಗತ್ತಲು. ಈಗ ನಿಮ್ಮನ್ನು ನೇರವಾಗಿ ನಡೆಯಲು ಬಿಟ್ಟರೆ ನೀವು ಒಂದು ಸುತ್ತು, ಒಂದು ದೊಡ್ಡ ವೃತ್ತದಲ್ಲಿ ಚಲಿಸಿ ಎಲ್ಲಿಂದ ಹೊರಟದ್ದೋ ಅಲ್ಲಿಗೇ ತಲುಪುತ್ತೀರಿ.

ಇದಕ್ಕೆ ಕಾರಣ ನಮ್ಮ ದೇಹದ ಎಡ ಮತ್ತು ಬಲ ಅಂಗ ರಚನೆ, ಅಳತೆ ಒಂದೇ ರೀತಿ ಇರದೇ ಇರುವುದು. ಇದು ಶಾರೀರಿಕ ಅಸಮತೋಲನ. ಇದು
ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಕಣ್ಣು ಬಿಟ್ಟು ನಡೆಯುವಾಗ ಈ ಅಸಮತೋಲನವನ್ನು ನಮ್ಮ ದೇಹದ ಇಂದ್ರಿಯಗಳು ಮತ್ತು ಪ್ರಜ್ಞೆ ಮೀರಿ ವ್ಯವಹರಿಸುವಂತೆ ನೋಡಿಕೊಳ್ಳುತ್ತದೆ. ಮನುಷ್ಯನ ಬಾಹ್ಯದೇಹ ಮೇಲ್ನೋಟಕ್ಕೆ ಎಡಭಾಗ ಬಲಭಾಗದ ಪ್ರತಿ-ಲನದಂತೆ ಕಂಡರೂ ನಮ್ಮ
ಎಡದೇಹದ ರಚನೆ ಮತ್ತು ಬಲದೇಹ ರಚನೆಯ ಅಳತೆಯಲ್ಲಿ ಚಿಕ್ಕ ವ್ಯತ್ಯಾಸವಿದೆ. ಒಂದು ಕೈನ ಅಗಲ ಮತ್ತು ಉದ್ದ ಇನ್ನೊಂದಕ್ಕಿಂತ ಭಿನ್ನವಾ ಗಿರುತ್ತದೆ. ಅಂತೆಯೇ ಕಾಲು, ಪಾದ ಇತ್ಯಾದಿ.

ಈ ಕಾರಣಕ್ಕೆ ಕಣ್ಣು ಕಟ್ಟಿದಾಗ ನೇರ ನಡೆಯುವುದರ ಬದಲಿಗೆ ಗ್ರೌಂಡ್‌ನಲ್ಲಿ ಒಂದು ಸುತ್ತು ಬರುವುದು. ಇನ್ನು ದೇಹದೊಳಕ್ಕೆ ನೋಡಿದರೆ, ಅಲ್ಲಿಯಂತೂ ಎಡಬಲ ಸಾಮ್ಯತೆಯಿಲ್ಲ. ಎರಡೂ ಬದಿ ಶ್ವಾಸಕೋಶವಿದ್ದರೂ ಅವುಗಳ ಗಾತ್ರ, ರಚನೆ ಬೇರೆ ಬೇರೆ. ಹೃದಯ ಎಡಭಾಗದಲ್ಲಿ, ಜಠರ
ಎಡಕ್ಕೆ, ಪಿತ್ತಕೋಶ ಬಲಕ್ಕೆ. ಹೀಗೆ ದೇಹದೊಳಕ್ಕೆ ಸಾಮ್ಯತೆ ಇಲ್ಲದ ಎಡ-ಬಲಗಳು. ನಮ್ಮೆಲ್ಲರ ದೇಹ ಬೆಳವಣಿಗೆಗೆ ಒಂದು ಲೆಕ್ಕಾಚಾರವಿದೆ.
ಯಾವುದೇ ಅಂಗ ಬೇಕಾಬಿಟ್ಟಿ ಬೆಳೆದುಬಿಡುವುದಿಲ್ಲವಲ್ಲ. ಪ್ರತಿಯೊಂದಕ್ಕೂ ಇಂತಿಷ್ಟೆಂದು ಬೆಳೆಯಲು ಇತಿಮಿತಿಯಿದೆ.

ಅದನ್ನು ದೇಹ ಮತ್ತು ಆನುವಂಶಿಕತೆ ನಿರ್ಧರಿಸುತ್ತವೆ. ಇದರಲ್ಲಿ ಯಾವುದೇ ಒಂದರ ಮಿತಿ ತಪ್ಪಿದಲ್ಲಿ ಅದು ಅಂಗವೈಕಲ್ಯವೆನ್ನಿಸಿಕೊಳ್ಳುವುದು. ಅಲ್ಲದೆ, ಪ್ರತಿ ಅಂಗವೂ ದೇಹದ ಪ್ರಮಾಣಕ್ಕೆ ತಕ್ಕಂತೆ ಬೆಳೆಯುತ್ತದೆ. ಉದಾಹರಣೆಗೆ ಎತ್ತರಕ್ಕೆ ಬೆಳೆದವರ ಕಾಲಿನ ಮೂಳೆ ಉದ್ದಕ್ಕೆ ಬೆಳೆದಿರುತ್ತದೆ.
ಎತ್ತರ ಹೆಚ್ಚಿದಂತೆ ಅಂಗೈ, ಮುಂಗೈ, ಉಗುರು ಇವೆಲ್ಲದರ ಗಾತ್ರವೂ ಅದಕ್ಕೆ ಅನುಗುಣವಾಗಿ ಹೆಚ್ಚಿರುತ್ತದೆ. ಇದು allometry development.

ಹಾಗಂತ ದೇಹದ ಈ ಲೆಕ್ಕಾಚಾರ ಪಕ್ಕಾ ಲೆಕ್ಕವಲ್ಲ. ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾಗುವುದಿದೆ. ಆ ವ್ಯತ್ಯಾಸವೇ ನಮ್ಮ ದೇಹದ ಬಾಹ್ಯ ಅಂಗ
ರಚನೆಯ ಸಮರೂಪತೆಯಲ್ಲಿ ಇರುವ ವ್ಯತ್ಯಾಸ. ಆ ಕಾರಣಕ್ಕೇ ನಮ್ಮ ಎಡಮುಖವಿದ್ದಂತೆ ಬಲಭಾಗದ ಮುಖ ವಿರುವುದಿಲ್ಲ, ಅಂಗಾಂಗಗಳ ಅಳತೆಯಲ್ಲಿ ವ್ಯತ್ಯಾಸವಿರುತ್ತದೆ. ಅದೇಕೋ ಸಮರೂಪತೆಯಲ್ಲಿ ಎಲ್ಲ ಪ್ರಾಣಿಗಳಿಗೆ, ಮನುಷ್ಯನಿಗೆ ಎಲ್ಲಿಲ್ಲದ ಆಕರ್ಷಣೆ. ಸೌಂದರ್ಯವೆಂದರೆ
ದೇಹದ ಎಡಕ್ಕೆ ಮತ್ತು ಬಲಕ್ಕೆ ಹೆಚ್ಚಿನ ಹೋಲಿಕೆಯಿರುವುದು. ನಮ್ಮ ಪೂಜೆಗಳಲ್ಲಿನ ಮಂಡಲದಿಂದ ಹಿಡಿದು ನಾವು ನಿತ್ಯ ಬಳಸುವ ಅದೆಷ್ಟೋ ವಸ್ತುಗಳು ನಮಗೆ ಸಮರೂಪದಲ್ಲಿರಬೇಕು.

ಅವುಗಳನ್ನು ಒಂದು ನೇರದಲ್ಲಿ ಕತ್ತರಿಸಿದರೆ, ಇಬ್ಭಾಗ ಸಮತೂಕ ಮತ್ತು ರೂಪ ಹೊಂದಿರುವಂತಿರಬೇಕು. ಸಮ್ಮಿತಿ (symmetry)
ಇರಬೇಕು. ನಾವು ಸೌಂದರ್ಯವೆಂದು ಗ್ರಹಿಸುವುದು ಈ ಸಮ್ಮಿತಿಯನ್ನು. ಮುಖದ ಎಡ-ಬಲ ಹೆಚ್ಚು ಹೊಂದಿದಷ್ಟು ಆ ವ್ಯಕ್ತಿ ಸುರದ್ರೂಪಿ. ಇದಕ್ಕೆ ವ್ಯತಿರಿಕ್ತವಾದದ್ದೆಲ್ಲ ಅವಲಕ್ಷಣ. ನಾವು ಕಟ್ಟುವ ಮನೆಯಿಂದ ಹಿಡಿದು ಬಳಸುವ ವಾಹನ, ನಾವು ರಚಿಸುವ ಬಹುತೇಕ ಆಕೃತಿಗಳು ಸಮ್ಮಿತಿಯಲ್ಲಿದ್ದರೆ
ಮಾತ್ರ ಅದನ್ನು ನಾವು ಒಪ್ಪುವುದು. ಕೆಲ ವರ್ಷಗಳ ಹಿಂದೆ ಎಡ-ಬಲ ಒಂದೇ ತೆರನಾಗಿರದ ವಿಮಾನವೊಂದನ್ನು ರೂಪಿಸಲಾಗಿತ್ತು. ಅದು ತಾಂತ್ರಿಕವಾಗಿ ಸರಿಯಾಗಿಯೇ ಇತ್ತು. ಆದರೆ ಜನರು ಅದನ್ನು ಏರಲು ಹೆದರುತ್ತಿದ್ದರು.

ಹೀಗೆ ನಮಗೆ ಎಲ್ಲೆಡೆ ಸಮ್ಮಿತಿ ಬೇಕು. ಸಮ್ಮಿತಿಯೆಂದರೆ ಅದು ಸರಿ, ಸುಂದರ, ಸುರಕ್ಷಿತವೆನ್ನುವ ಭಾವ. ವಿಕಸನದ ಓಟದಲ್ಲಿ ಕೆಲವು ವಿಚಿತ್ರ ಮಾರ್ಪಾಡು ಮಾಡಿಕೊಂಡು ಅಸಮ ದೇಹವನ್ನು ಹೊಂದುವ ಬಹಳಷ್ಟು ಪ್ರಾಣಿಗಳಿವೆ. ಉದಾಹರಣೆಗೆ ಮೇಲೆ ಹೇಳಿದ ನಮ್ಮೂರ ಸಿಹಿನೀರಿನ ಏಡಿ. ಅದಕ್ಕೆ ಒಂದು ಕೈ ಬಲಿಷ್ಠವೆಂದೆನಲ್ಲ. ಆ ಬಲಿಷ್ಠ ಕೈ ಎಡಗಡೆಯದ್ದಾಗಿರಲೂ ಬಹುದು, ಬಲಗಡೆಯದ್ದಾಗಿರಲೂಬಹುದು. ಹಿಡಿದು ತರುತ್ತಿದ್ದ ಏಡಿಗಳಲ್ಲಿ ಹತ್ತರಲ್ಲಿ ನಾಲ್ಕೈದು ಎಡಗೈ ಏಡಿಗಳಾಗಿರುತ್ತಿದ್ದವು, ಉಳಿದ ನಾಲ್ಕೈದು ಬಲಗೈನವು. ಎಂದರೆ ಏಡಿಗಳಲ್ಲಿ ಯಾವ ಕೈ ಬಲಿಷ್ಠ ಎಂದು ಆಯ್ಕೆಯಾಗಿ ಬೆಳೆಯುವುದು ೫೦-೫೦ ಚಾನ್ಸ್. ಇಲ್ಲಿ ಪ್ರಕೃತಿಯ ಆಯ್ಕೆಗೆ ಇಂಥದ್ದೇ ಎಂಬ ಕಾರಣ ಸಿಗುವುದಿಲ್ಲ.

ಕೆಲವೊಂದಕ್ಕೆ ಎಡಗೈ ಬಲಿಷ್ಠವಾದರೆ ಇನ್ನು ಕೆಲವಕ್ಕೆ ಬಲಗೈ. ಹಾಗಾದರೆ ಇದು ಬದುಕುವ ಸಾಮರ್ಥ್ಯವನ್ನೇನಾದರೂ ನಿರ್ಧರಿಸುತ್ತವೆಯೇ? ಲಕ್ಷಗಟ್ಟಲೆ ಮರಿ ಹಾಕುತ್ತವೆ ಎಂದೆನಲ್ಲ, ಅವುಗಳಲ್ಲಿ ಒಂದರ್ಧ ಎಡಗೈ, ಇನ್ನೊಂದರ್ಧ ಬಲಗೈನವು. ಅವು ಬದುಕುಳಿದು ಪ್ರೌಢಾವಸ್ಥೆಗೆ ಬರುವ ಸಂಖ್ಯೆಯೂ ಅದಕ್ಕೆ ತಕ್ಕ ಅನುಪಾತದಲ್ಲಿಯೇ ಇರುತ್ತದೆ. ಹಾಗಾಗಿ ಅವುಗಳ ಬದುಕುವ ಸಾಧ್ಯತೆ ಅಥವಾ ಇನ್ಯಾವುದೇ ಜೀವನಕ್ರಮಕ್ಕೆ ಎಡ ಅಥವಾ ಬಲ ಯಾವುದೇ ವ್ಯತ್ಯಾಸವನ್ನು ತರುವುದಿಲ್ಲವೆಂದಾಯಿತಲ್ಲ. ಅಂತೆಯೇ ಒಂದು ಕೈ ಮಾತ್ರ ಬಲಿಷ್ಠವಾಗುವಂತೆ ಅಸಮರೂಪತೆ
ಬೆಳೆಸಿಕೊಳ್ಳುವ ಬದಲಾವಣೆ ವಿಕಾಸ ವಾದದ ಇನ್ನೊಂದು ಮಗ್ಗುಲನ್ನು ನಮ್ಮೆದುರು ತೆರೆದಿಡುತ್ತದೆ.

Allometry development- ಸಮತೋಲನದ ದೇಹ ಬೆಳವಣಿಗೆ ಎಂದೆನಲ್ಲ, ಅದು ಮನುಷ್ಯ ಸೇರಿದಂತೆ ಬಹುತೇಕ ಪ್ರಾಣಿಗಳ ಬೆಳವಣಿಗೆಯ ರೀತಿ. ಆದರೆ ನಮ್ಮೂರ ಏಡಿಯದು hypo allometric development. ಎಂದರೆ ಯಾವುದೋ ಒಂದು ದೇಹದ ಭಾಗ ಲೆಕ್ಕ ಮೀರಿ ಬೆಳೆಯು ವಂತೆ ವಿಕಸನವಾಗುವುದು. ಇಂಥ ಅಸಮತೋಲಿತ ಬೆಳವಣಿಗೆ ಅವಶ್ಯಕತೆಗೆ ತಕ್ಕುದಾದ ವಿಕಾಸವಾಗಿದ್ದೇ ಆದರೂ, ಇದು ಅಸಹಜದಂತೆ ಪ್ರತ್ಯೇಕವಾಗಿ ನಮಗೆ ಕಾಣಿಸುತ್ತದೆ.

ಆನೆಯ ದಂತ ಹೊರಗೆ ಬರುವಷ್ಟು ಬೆಳೆಯುವುದು, ಆಕಳ ಕೋಡು, ಹುಲಿಯ ಉಗುರು, ಕುದುರೆಯ ಗೊರಸು ಇವೆಲ್ಲ ಅವಶ್ಯಕತೆಗೆ ಅನುಗುಣವಾದ ವಿಕಾಸ. ಇವೆಲ್ಲ ಒಂದು ಕಡೆಯಾಯಿತು. ಅವೆಲ್ಲವೂ ಸಮರೂಪದ ದೇಹ ರಚನೆಯ ವಿಕಸನ. ಇನ್ನು ಅಸಮರೂಪಕ್ಕೆ ಮಲೆನಾಡಿನ ಸಿಹಿನೀರಿನ ಏಡಿ, ಲಾಬ್‌ಸ್ಟರ್ (ನಳ್ಳಿ) ಮೊದಲಾದವು ಗಳಾದವು. ಇನ್ನೊಂದು ಬಗೆಹರಿಯದ ಜೀವಿಯಿದೆ. ಅದರ ಹೆಸರು ನಾರ್ವೇಲ್ ಅಂತ. ಇದು ತಿಮಿಂಗಿಲದ ಸಂಬಂಧಿ. ಇದರ ದೇಹದ ರಚನೆಯೆಲ್ಲ ಸರಿಯಿದೆ, ಆದರೆ ಇದರ ಎಡಗಡೆಯ ಕೋರೆಹಲ್ಲು ಮಾತ್ರ ಸುಮಾರು ಹತ್ತು ಅಡಿಯಷ್ಟು ಬೆಳೆಯುತ್ತದೆ. ಅವು ಆನೆಯಂತೆ ಹೊರಚಾಚಿರುವುದಿಲ್ಲ, ಬದಲಿಗೆ ಮುಖವನ್ನು ಸೀಳಿಕೊಂಡು ಬೆಳೆಯುತ್ತ ಹೋಗುತ್ತವೆ.

ಅವೇನು ಈ ಹಲ್ಲನ್ನು ಬೇಟೆಗೋ ಅಥವಾ ಇನ್ನೊಂದಕ್ಕೋ ಬಳಸುವುದೇನಿಲ್ಲ. ಇದು ಹೆಣ್ಣನ್ನು ಆಕರ್ಷಿಸಲು ಬಳಸಲ್ಪಡುತ್ತದೆ ಎಂಬುದು ವಿಜ್ಞಾನಿಗಳ ಊಹೆಯಷ್ಟೆ. ಇದುವರೆಗೆ ಈ ನಾರ್ವೇಲ್‌ಗೆ ಈ ಹಲ್ಲು ಏಕೆ ಹೀಗೆ ಮುಖ ಸೀಳಿಕೊಂಡು ದೇಹದ ಉದ್ದದಷ್ಟೇ ಬೆಳೆಯುತ್ತದೆ ಎಂಬುದರ ಬಗ್ಗೆ ಸರಿಯಾದ ಅರಿವಿಲ್ಲ. ಏಕೆಂದರೆ ಇವು ಇರುವುದು ಉತ್ತರ ಧ್ರುವದ ಸುತ್ತಮುತ್ತ. ಇವನ್ನು ಬಂಧಿಸಿ ಸಾಕಿದರೆ ಬದುಕುವುದಿಲ್ಲ. ಹಾಗಾಗಿ ಈ ನಾರ್ವೇಲ್ ಮೀನು ಇನ್ನಷ್ಟು ನಿಗೂಢ. ಹಾಗೆ ಉದ್ದಕ್ಕೆ ಬೆಳೆಯುವುದು ಈ ಮೀನಿನ ಎಡ ಕೋರೆಹಲ್ಲು ಮಾತ್ರ, ಅದರಲ್ಲಿಯೂ ಕೇವಲ ಗಂಡಿಗೆ ಮಾತ್ರ ಅಷ್ಟು ಉದ್ದ ಹಲ್ಲು ಬೆಳೆಯುವುದು. ಇದು ಯಾವ ಪುರುಷಾರ್ಥಕ್ಕೆ ಎಂಬುದು ಯಾರಿಗೂ ತಿಳಿದಿಲ್ಲ. ಇದು ಒಂದು ವೇಳೆ ರಕ್ಷಣೆಗೆಂದಾಗಿದ್ದರೆ ಹೆಣ್ಣು ನಾರ್ವೇಲ್ ಕೂಡ ಇದನ್ನು ಹೊಂದಿರುತ್ತಿತ್ತು. ಆದರೆ ಹಾಗಿಲ್ಲ.

ಈ ರೀತಿ ತೀರಾ ಅಸಮತೋಲಿತ, ವಿಚಿತ್ರವೆನ್ನುವ ದೇಹರಚನೆ ಸಾಮಾನ್ಯವಲ್ಲದಿದ್ದರೂ ಅಲ್ಲಲ್ಲಿ ಕಂಡಾಗ ಅವು ಡಾರ್ವಿನ್‌ನ ವಿಕಾಸವಾದವನ್ನು
ಪ್ರಶ್ನಿಸುತ್ತವೆ. ಏಕೆ ಉಳಿದ ಪ್ರಾಣಿಗಳಲ್ಲಿ ಇಂಥ ಅಸಮತೋಲಿತ ಬೆಳವಣಿಗೆಗಳಿಲ್ಲ, ಯಾವ ಕಾರಣಕ್ಕೆ ಇಂಥ ಅವ್ಯವಸ್ಥೆಯ ಬೆಳವಣಿಗೆ ಕೆಲವೇ ಜೀವಿ
ಗಳಲ್ಲಿ ಸಾಧ್ಯವಾಯಿತು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುತ್ತವೆ. ನಾರ್ವೇಲ್ ಮೀನಿನಲ್ಲಿ ಗಂಡಿಗೆ ಮಾತ್ರ ಎಡ ಕೋರೆಹಲ್ಲು ಬೆಳೆದು, ಮುಖ
ಸೀಳಿಕೊಂಡು ೮-೧೦ ಅಡಿ ಬೆಳೆಯುವುದು. ಇಲ್ಲಿ ಯಾವತ್ತೂ ಎಡ ಕೋರೆಹಲ್ಲೇ ಬೆಳೆಯುವುದು.

ಇನ್ನು ಏಡಿಯಂಥ ಪ್ರಾಣಿಯ ಅಸಮತೋಲಿತ ದೇಹರಚನೆಯ ಬೆಳವಣಿಗೆ, ಅಲ್ಲಿನ ಪ್ರಕೃತಿಯ ಎಡ-ಬಲದ ಆಯ್ಕೆಯಲ್ಲಿ ಸಾಧ್ಯತೆ ೫೦-೫೦. ಆದರೆ ಮನುಷ್ಯನಲ್ಲಿ ಹಾಗಲ್ಲ. ಬಹುತೇಕ ಮನುಷ್ಯನ ಬಲಗೈ ಪ್ರಧಾನ ಕೈ. ಎಡಗೈ ದುರ್ಬಲ, ನಾಜೂಕಿನ ಕೆಲಸಕ್ಕೆ ಬಳಸುವ ಪ್ರಮಾಣ ತೀರಾ ಕಡಿಮೆ.
ಸಂಖ್ಯೆ ಸರಾಸರಿ ಶೇ.೧೩ ಮಾತ್ರ. ಅದೇಕೆ ಕೆಲವರಷ್ಟೇ ಎಡಗೈ ಬಳಸುವವರಾಗುತ್ತಾರೆ ಎಂಬುದಕ್ಕೆ ವಿಕಸನ ಅಥವಾ ಯಾವುದೇ ವೈಜ್ಞಾನಿಕ ಕಾರಣ ಸಿಗುವುದೇ ಇಲ್ಲ. ವಟಕಿ ಎಂಬ ಹೆಸರಿನ ಮೀನು ಕರ್ನಾಟಕದ ಕರಾವಳಿಯಲ್ಲಿದೆ. ಇದು ಚಪ್ಪಟೆ ಮೀನು. ಇದು ಚಿಕ್ಕದಿರುವಾಗ ಎರಡು ಕಡೆ
ಒಂದೊಂದು ಕಣ್ಣಿರುತ್ತದೆ. ಕ್ರಮೇಣ ಬೆಳೆದಂತೆ ಒಂದು ಕಡೆಯ ಕಣ್ಣು ಇನ್ನೊಂದು ಕಡೆ ಸ್ಥಳಾಂತರಗೊಳ್ಳುತ್ತದೆ. ಈ ಮೀನುಗಳು ನೀರಿನಲ್ಲಿ ನೆಲದಮೇಲೆ ಮಲಗಿ ಬೇಟೆಯಾಡುತ್ತವೆ. ಆಗ ಎರಡೂ ಕಣ್ಣುಗಳು ಚಪ್ಪಟೆಯ ದೇಹದ ಮೇಲ್ಮುಖವಾಗಿ ನೋಡುತ್ತಿರುತ್ತವೆ.

ಎಡಗಣ್ಣು ಬಲಕ್ಕೆ ಸ್ಥಳಾಂತರವಾಗುವುದು ಅಥವಾ ಬಲಗಣ್ಣು ಎಡಕ್ಕೆ ಸರಿಯುವುದು, ಈ ಆಯ್ಕೆಗೆ ಇಂಥದ್ದೇ ಎಂಬ ಕಾರಣವಿಲ್ಲ. ಹೀಗೆ ದೇಹದ ಒಂದು ಭಾಗ ವಿಪರೀತವಾಗಿ ಬೆಳೆಯುವುದು, ಮಾರ್ಪಾಡಾಗುವುದು ಇವು ಬಹಳಷ್ಟು ಪ್ರಾಣಿಗಳಲ್ಲಿವೆ. ಸೂಕ್ಷ್ಮವಾಗಿ ಪ್ರಾಣಿಜಗತ್ತನ್ನು ಗ್ರಹಿಸುವಾಗ ಅದೆಷ್ಟೋ ಈ ರೀತಿಯ ಅಸಮತೋಲಿತ ಬೆಳವಣಿಗೆಗಳು ನಮಗೆ ಕಾಣಿಸುತ್ತವೆ. ಈ ಅಸಮಾನ ಬೆಳವಣಿಗೆ, ಅದರ ಹಿಂದಿನ ಜೀವ ಅವಶ್ಯಕತೆ, ಅದಕ್ಕೆ ಕಾರಣವಾಗುವ ಸೂಕ್ಷ್ಮ ಪರ್ಯಾ ವರಣ, ಆನುವಂಶಿಕತೆ ಮತ್ತು ಪ್ರಕೃತಿಯ ಆಯ್ಕೆ ಇವೆಲ್ಲವೂ ಯಾವತ್ತೂ ವಿಸ್ಮಯವೇ. ಪ್ರಕೃತಿಯದು ಒಂದೊಂದು ಕಡೆ ಒಂದೊಂದು ಲೆಕ್ಕಾಚಾರ, ಸಮಜಾಯಿಷಿ. ಅದಕ್ಕೇ ಹೇಳೋದು- ಪೃಕೃತಿ: mysterious – perfectly imperfect.

Leave a Reply

Your email address will not be published. Required fields are marked *

error: Content is protected !!