ವರ್ತಮಾನ
maapala@gmail.com
ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಕಾಂಗ್ರೆಸ್ ಮೇಲೆ ಹೆಚ್ಚು ಪ್ರತೀಕೂಲ ಪರಿಣಾಮ ಬೀರದೇ ಇರದಬಹುದು.
ಆದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿ ಅದನ್ನು ಕೊಂಡೊಯ್ಯುತ್ತಿರುವ ರೀತಿ ಆತಂಕ ಉಂಟುಮಾಡಿರುವುದಂತೂ ಸತ್ಯ.
ಮುಂದಿನ ವಾರ ಈ ಅಂಕಣ ಬರೆಯುವ ವೇಳೆಗೆ ಮತದಾನ ಪ್ರಕ್ರಿಯೆ ಮುಗಿದು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಎಲೆಕ್ಟ್ರಾನಿಕ್ ಮತ ಯಂತ್ರದೊಳಗೆ ಗಟ್ಟಿಯಾಗಿ ಕುಳಿತಿರುತ್ತದೆ. ಫಲಿತಾಂಶ ಹೊರಬರಲು ಕ್ಷಣಗಣನೆ ಆರಂಭವಾಗಿರುತ್ತದೆ. ಸೋಲು-ಗೆಲುವಿಗೆ ಕಾರಣಗಳನ್ನು ನೀಡಲು ಪಕ್ಷಗಳು ಸಿದ್ಧತೆ ಮಾಡಿಕೊಂಡಿರುತ್ತವೆ. ಆದರೆ, ಮತದಾನಕ್ಕೆ ಕೆಲವೇ ದಿನಗಳಿರುವಾಗ ರಾಜಕೀಯ ಪಕ್ಷಗಳ ಮಧ್ಯೆ ಮತಗಳಿಕೆಗಾಗಿ ನಡೆಯು ತ್ತಿರುವ ಜಿದ್ದಾಜಿದ್ದಿ, ಬೈಗುಳಗಳು, ವೈಯಕ್ತಿಕ ನಿಂದನೆಗಳು, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ನೀಡಿರುವ ಎಚ್ಚರಿಕೆಗಳನ್ನು ಗಮನಿಸಿದಾಗ ನಮ್ಮ ಚುನಾವಣೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.
ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಂದರೆ ಸ್ವಾತಂತ್ರ್ಯಾನಂತರ ಗೆಲ್ಲುತ್ತಲೇ ಬಂದಿದ್ದ ಕಾಂಗ್ರೆಸ್ ಸೋಲಿನ ರುಚಿ ಕಂಡ ಬಳಿಕ ಆರಂಭವಾದ ಈ ರೀತಿಯ ಚುನಾವಣಾ ತಂತ್ರಗಳು ಇದೀಗ ಎಲ್ಲ ಪಕ್ಷಗಳಿಗೂ ವ್ಯಾಪಿಸಿದೆ. ಪರಸ್ಪರ ನಿಂದನೆಯೇ ಚುನಾವಣಾ ಸಮರ ಎಂಬಂತಾಗಿದ್ದು, ವಿಚಾರ, ಸಿದ್ಧಾಂತ, ನೀತಿ ಎನ್ನುವುದು ಗೌಣವಾಗುತ್ತಿದೆ. ತಾನೇ ಆರಂಭಿಸಿದ ಈ ರೀತಿಯ ಚುನಾವಣಾ ತಂತ್ರದಿಂದ ಆರಂಭದಿಂದಲೂ ನಷ್ಟವನ್ನೇ ಅನುಭವಿಸುತ್ತಾ ಬಂದಿರುವ ಕಾಂಗ್ರೆಸ್ ಅದರಿಂದ ಪಾಠ ಕಲಿಯುತ್ತಿಲ್ಲ, ಕಲಿಯುವ ಮನಸ್ಸೂ ಮಾಡುವುದಿಲ್ಲ ಎಂಬುದಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆ ಮತ್ತೊಂದು ಉದಾಹರಣೆ.
ಕಳೆದ ವಾರದ ಅಂಕಣದಲ್ಲಿ ಕಾಂಗ್ರೆಸ್ ಎಲ್ಲಿ ಎಡವುತ್ತಿದೆ ಎಂಬುದನ್ನು ಹೇಳಲಾಗಿತ್ತು. ಅಷ್ಟೇ ಅಲ್ಲ, ವೈಯಕ್ತಿಕ ನಿಂದನೆ ಗಳನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಬಿಜೆಪಿ ಯಾವ ರೀತಿ ಯಶಸ್ವಿಯಾಗುತ್ತದೆ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಆದರೂ ಕಾಂಗ್ರೆಸಿಗರು ತಮ್ಮ ಚಾಳಿ ಮುಂದುವರಿಸುತ್ತಿದ್ದಾರೆ. ಅದರಲ್ಲೂ ಪಕ್ಷದ ಹಿರಿಯ, ಅನುಭವಿ
ನಾಯಕರೇ ಈ ರೀತಿಯ ತಪ್ಪುಗಳನ್ನು ಪುನರಾವರ್ತಿಸುವುದು ನಿಜವಾಗಿಯೂ ಅಚ್ಚರಿಗೆ ಕಾರಣವಾಗಿದೆ.
ಅಧಿಕಾರದ ಹಪಹಪಿ, ಅಧಿಕಾರದಿಂದ ಹೊರಗಿರುವ ಚಡಪಡಿಕೆ, ಮತ್ತೆ ಅಧಿಕಾರಕ್ಕೆ ಬರುವ ಆತುರ… ಹೀಗೆ ಇದಕ್ಕೆ ಅನೇಕ
ಕಾರಣಗಳಿರಬಹುದು. ಆದರೆ, ಅಧಿಕಾರದ ಮುಂದೆ ಬೇರೇನೂ ಕಣ್ಣಿಗೆ ಕಾಣುವುದಿಲ್ಲ ಎಂಬುದನ್ನು ಕಾಂಗ್ರೆಸ್ ನಾಯಕರು ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ. ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಪ್ರಬುದ್ಧ ನಾಯಕರ ಅಪ್ರಬುದ್ಧ ಹೇಳಿಕೆಗಳೇ ಕಾಂಗ್ರೆಸ್ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ. ಜತೆಗೆ ಎಲ್ಲ ಬಣ್ಣವನ್ನು ಮಸಿ ನುಂಗಿತು ಎಂಬಂತೆ ಪ್ರಣಾಳಿಕೆಯ ಒಂದೆರಡು ವಿವಾದಾತ್ಮಕ ಅಂಶಗಳು ಅದರಲ್ಲಿರುವ ಎಲ್ಲಾ ಅಂಶಗಳನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ ಪಾಲಿಗೆ ವಿಲನ್ ಆಗುವ ಸಂಭವನೀಯತೆಯನ್ನು ಸೃಷ್ಟಿ ಮಾಡಿದೆ.
ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಕಾಂಗ್ರೆಸ್ ಪಾಲಿಗೆ ಎಲ್ಲವೂ ಚೆನ್ನಾಗಿತ್ತು. ಗೆದ್ದು ಗದ್ದುಗೆ ಏರುವ ಸಾಧ್ಯತೆಯೂ ನಿಚ್ಚಳವಾಗಿತ್ತು. ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಸರಕಾರ ಮೀಸಲು ಹೆಚ್ಚಳ, ಒಳಮೀಸಲಿನಂತಹ ತೀರ್ಮಾನ ಕೈಗೊಂಡಿದ್ದರೂ ಸರಕಾರದ ಭ್ರಷ್ಟಾಚಾರ, ೪೦ ಪಸೆಂಟ್ ಕಮಿಷನ್ ಕುರಿತಂತೆ ಮಾಡಿಕೊಂಡು ಬಂದಿದ್ದ ಅಭಿಯಾನಗಳು ಕಾಂಗ್ರೆಸ್ ಕೈಹಿಡಿಯುವ ಲಕ್ಷಣ ತೋರಿಸಿತ್ತು. ಆದರೆ, ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾದ ಕಾಂಗ್ರೆಸ್ ಕ್ರಮೇಣ ಬೇರೆ ಬೇರೆ ದಾರಿಗಳಿಂದ ಬಿಜೆಪಿ ಮೇಲೆ ದಾಳಿ ಮಾಡಿತು.
ಇದರ ಮಧ್ಯೆ ಕಾಂಗ್ರೆಸ್ ಸಂಪೂರ್ಣ ದಾರಿ ತಪ್ಪಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ದಾರಿ ಮಾಡಿಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಸರ್ಪ ಎನ್ನುವ ಮೂಲಕ ಬಿಜೆಪಿಗೆ ಚೇತರಿಸಿಕೊಳ್ಳಲು ದಿವ್ಯ ಔಷಧವನ್ನೇ ಒದಗಿಸಿದರು. ಇದಾದ ಬಳಿಕ ಪ್ರಧಾನಿಯವರನ್ನು ನಾಲಾಯಕ್ ಎಂಬ ಅರ್ಥದಲ್ಲಿ ಮಾತನಾಡಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಗಾಯದ ಮೇಲೆ ಬರೆ ಎಳೆದರು. ಇದರಿಂದಾಗಿಯೇ ಅಧಿಕಾರದ ಸನಿಹದಲ್ಲಿದ್ದ ಕಾಂಗ್ರೆಸ್ ಇದೀಗ ಮತ್ತೆ ಚಡಪಡಿಸು ವಂತಾಗಿದೆ. ಬಿಜೆಪಿಯ ಗ್ರಾಫ್ ಮೇಲೇರಿದಂತೆ ಕಾಣುತ್ತಿದೆ.
ಸಣ್ಣ ವಿಚಾರವನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರಿಣಿತರು ಎಂಬುದು ೨೦೧೪ರಿಂದಲೇ ಸಾಬೀತಾಗುತ್ತಿದೆ. ತಮ್ಮ ಕುರಿತಾಗಿ ಕಾಂಗ್ರೆಸಿಗರು ಬಳಸಿದ ಸಾವಿನ ವ್ಯಾಪಾರಿ, ಚಾಯ್ ವಾಲಾ ಮುಂತಾದ ಪದಗಳನ್ನು ಯಾವ ರೀತಿ ತಮಗೆ ಬೇಕಾದಂತೆ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸಿ ಗೆಲುವು ಸಾಽಸಿದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ವಷಾಂತ್ಯಕ್ಕೆ ನಡೆದ ಗುಜರಾತ್ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ೧೦೦ ತಲೆಯ ರಾವಣ ಎಂದು ಕರೆದಿದ್ದಕ್ಕೆ ಆ ರಾಜ್ಯದಲ್ಲಿ ಕಾಂಗ್ರೆಸ್ ಚೆನ್ನಾಗಿಯೇ ದಂಡಿಸಿಕೊಂಡಿತ್ತು.
ಆದರೆ, ಇದರಿಂದ ಪಾಠ ಕಲಿಯದ ಖರ್ಗೆ ಕರ್ನಾಟಕದಲ್ಲಿ ಅವರನ್ನು ಕುರಿತು ವಿಷ ಸರ್ಪ ಎಂದುಬಿಟ್ಟರು. ಇದು ವಿವಾದವಾಗಿ ಪಕ್ಷಕ್ಕೆ ನಷ್ಟವಾಗುತ್ತದೆ ಎಂಬುದು ಖಚಿತವಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ನಾನು ಮೋದಿ ಕುರಿತಾಗಿ ಈ ಮಾತು ಹೇಳಿಲ್ಲ, ಬಿಜೆಪಿ ಕುರಿತಾಗಿ ಹೇಳಿದ್ದೆ ಎಂದಿದ್ದರು. ಆದರೆ, ಅಷ್ಟರಲ್ಲಾಗಲೇ ಅದು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ
ಸುದ್ದಿಯಾಗಿತ್ತು.
ಖರ್ಗೆ ವಿಷಾದ ವ್ಯಕ್ತಪಡಿಸಿದ್ದರಿಂದ ರಾಜ್ಯಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿ ಆ ವಿಷಯ ಪ್ರಸ್ತಾಪಿಸಿ ಬಳಿಕ ಸುಮ್ಮನಾಗಿದ್ದರು. ಆದರೆ, ಯಾವಾಗ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಪ್ರಧಾನಿ ಕುರಿತು ನಾಲಾಯಕ್ ಎಂಬ ಪದ ಬಳಸಿದರೋ ನರೇಂದ್ರ ಮೋದಿ ತಂದೆ, ಮಗ ಇಬ್ಬರನ್ನೂ ಲಾಯಕ್ ಪಿತ, ಲಾಯಕ್ ಪುತ್ರ ಎನ್ನುವ ಮೂಲಕ
ಸರಿಯಾಗಿಯೇ ಟಾಂಗ್ ಕೊಟ್ಟಿದ್ದರು. ತಂದೆ-ಮಕ್ಕಳಿಬ್ಬರ ಹೇಳಿಕೆ ಪ್ರಧಾನಿಯನ್ನು ಎಷ್ಟು ರೊಚ್ಚಿಗೆಬ್ಬಿಸಿತ್ತು ಎಂದರೆ,
ಸಿಕ್ಕಿದ ಸಣ್ಣ ಸಂಗತಿಗಳನ್ನೂ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಸಮರಕ್ಕೆ ಸಿದ್ಧವಾಗಿದ್ದರು.
ಅದೇ ವೇಳೆಗೆ ಅವರಿಗೆ ಸಿಕ್ಕಿದ್ದು ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಯ ಅಂಶ. ಹನುಮಂತ ಎಂದು
ಹೆಸರಿಟ್ಟುಕೊಂಡವರೆಲ್ಲಾ ಶ್ರೀರಾಮನ ಭಕ್ತ ಹನುಮಂತ ಆಗುವುದಿಲ್ಲ ಎಂಬುದೇನೋ ನಿಜ. ಬಜರಂಗದಳದವರು
ಬಜರಂಗಿ ಯನ್ನು ಆರಾಧ್ಯ ದೈವವಾಗಿ ಪರಿಗಣಿಸಿದ್ದರೂ ಇತರೆ ಹಿಂದೂ ಸಂಘಟನೆಗಳಂತೆ ಅದೂ ಒಂದು ಸಂಘಟನೆ ಯಾಗಿದೆಯೇ ಹೊರತು ಆಂಜನೇಯನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಪ್ರಧಾನಿ ಆಂಜನೇಯನ ಜನ್ಮಸ್ಥಳ ಇರುವ ಹೊಸಪೇಟೆಗೆ ಹೋದ ದಿನವೇ ಬಜರಂಗದಶ ನಿಷೇಧಿಸುವ ಪ್ರಣಾಳಿಕೆ ಹೊರ ಬಂದಿದ್ದರಿಂದ ಅದನ್ನು ನೇರವಾಗಿ ಆಂಜನೇಯನಿಗೆ ಕನೆಕ್ಟ್ ಮಾಡಿ ರಾಜ್ಯಾದ್ಯಂತ ಹನುಮ ಭಕ್ತರು ಆಕ್ರೋಶಗೊಳ್ಳುವಂತೆ ಮಾಡಿದರು.
ಇದಕ್ಕೆ ಪೂರಕವಾಗಿ ಹಿಂದೂ ಸಂಘಟನೆಗಳು, ಹನುಮಾನ್ ಚಾಲೀಸಾ ಪಠಣ ಸೇರಿದಂತೆ ನಾನಾ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಸಂಕಟದ ಸ್ಥಿತಿ ತಂದೊಡ್ಡುತ್ತಿದ್ದಾರೆ. ಇದನ್ನು ಸಾಕಷ್ಟು ಮಂದಿ ಬಿಜೆಪಿ ಪರ, ಪ್ರಧಾನಿ ಮೋದಿ ಪರ ನಿಲುವು ಎಂದು ಹೇಳಬಹುದು. ಆದರೆ, ಅದು ವಾಸ್ತವವೂ ಹೌದು. ಬಹುಷಃ ಪ್ರಧಾನಿ ಮೋದಿ, ಅಮಿತ್ ಶಾ ತಂತ್ರಗಾರಿಕೆಗಿಂತ ಕಾಂಗ್ರೆಸ್ ಹೆಚ್ಚು ಹೆದರಿದ್ದು ಎಂದರೆ ಬಜರಂಗದಳ ನಿಷೇಧವನ್ನು ಬಜರಂಗಿಗೆ (ಆಂಜನೇಯ) ಥಳಕು ಹಾಕಿದ ಬಿಜೆಪಿಯ ತಂತ್ರಗಾರಿಕೆಗೆ. ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಅಂಜನಾದ್ರಿ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಹನುಮ ಜನ್ಮಸ್ಥಳ ಅಭಿವೃದ್ಧಿ ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ. ಈ ರೀತಿಯ ಸಾಕಷ್ಟು ಪ್ರಸಂಗಗಳು ನಡೆದಿವೆ.
ಅಷ್ಟಕ್ಕೂ ಪ್ರಧಾನಿ ಮೋದಿ ಮತ್ತು ಬಿಜೆಪಿ ಇಷ್ಟೊಂದು ಒದ್ದಾಟ ನಡೆಸುತ್ತಿರುವುದು ಶೇ. ೧೦ರಷ್ಟಿರುವ ತಟಸ್ಥ ಮತದಾರರನ್ನು ಒಲಿಸಿಕೊಳ್ಳಲು. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಒಂದು ಪಕ್ಷದ ಪರ ಮತಗಳು ಇರುತ್ತವೆ. ಅದು ಚುನಾವಣೆ ಘೋಷಣೆಗೆ ಮುನ್ನವೇ ರಾಜಕೀಯ ಪಕ್ಷಗಳ ಮಧ್ಯೆ ಹಂಚಿಕೆಯಾಗಿರುತ್ತವೆ. ಆದರೆ, ಶೇ. ೧೦ರಷ್ಟು ಮಂದಿ ಮತದಾನ ದಿನಾಂಕ ಹತ್ತಿರಬರುವವರೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಿಲ್ಲ.
ಕೊನೇ ಕ್ಷಣದಲ್ಲಿ ಪಕ್ಷಗಳ ಪ್ರಣಾಳಿಕೆ, ನಾಯಕರ ನಡವಳಿಕೆ, ಅಧಿಕಾರಕ್ಕೆ ಯಾರು ಹತ್ತಿರವಿದ್ದಾರೆ ಎಂಬುದನ್ನು ಗಮನಿಸಿ ಇವರು ಯಾವುದಾದರೂ ಒಂದು ಪಕ್ಷದ ಪರ ನಿರ್ಧಾರ ಕೈಗೊಳ್ಳುತ್ತಾರೆ. ಇವರ ನಿರ್ಧಾರ ಚುನಾವಣಾ ಫಲಿತಾಂಶವನ್ನು ಹೇಗೆ ಬೇಕಾದರೂ ಪರಿವರ್ತಿಸಬಹುದು. ಅವರನ್ನು ಯಾರು ಹೆಚ್ಚಾಗಿ ಒಲಿಸಿಕೊಳ್ಳುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಸಾಬೀತಾಗಿರುವ ಲೆಕ್ಕಾಚಾರ.
ಅದಕ್ಕಾಗಿಯೇ ಬಿಜೆಪಿ ಇಷ್ಟೊಂದು ತೀವ್ರವಾಗಿ ಹೋರಾಡುತ್ತಿದ್ದರೆ, ಕಾಂಗ್ರೆಸ್ ತಾನೇ ಅಸಗಳನ್ನು ಒದಗಿಸುತ್ತಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಮೇ ೧೩ರಂದು ಗೊತ್ತಾಗುತ್ತದೆ.
ಲಾಸ್ಟ್ ಸಿಪ್: ಚುನಾವಣೆ ವೇಳೆ ಮೈಯ್ಯೆಲ್ಲಾ ಕಣ್ಣಾಗಿರುವುದರ ಜತೆಗೆ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಗೆಲುವಿನ ಮೆಟ್ಟಿಲೇ ಸೋಲಿನ ಸೋಪಾನವಾಗಬಹುದು.