Saturday, 14th December 2024

ಬಿಟ್ಟಿ ಕೊಟ್ಟರೂ ಬಿಟಿ ತಳಿಗಳು ಭಾರತಕ್ಕೆ ಬೇಡ

ಸುಪ್ತ ಸಾಗರ

rkbhadti@gmail.com

ಪರೀಕ್ಷೆಗೊಳಪಡಿಸದೇ ಕುಲಾಂತರಿ ತಳಿಗಳನ್ನು ಬಿತ್ತನೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಊಹಿಸುವುದು ಕಷ್ಟ. ಏಕೆಂದರೆ ಮಾತ್ರೆಗಳಂತೆ ರೈತರ ಜಮೀನುಗಳಿಂದ ತಳಿಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಅವು ಜಮೀನಿನಿಂದ ಜಮೀನಿಗೆ ಹಬ್ಬುತ್ತಲೇ ಸಾಗುತ್ತದೆ. ನೆನಪಿಡಿ, ನಮ್ಮಲ್ಲಿ ಆಯುರ್ವೇದ ಔಷಧಗಳ ಉತ್ಪಾದನೆಗೂ ಸಾಸಿವೆ ಮತ್ತು ಬದನೆ ಬಳಕೆಯಾಗುತ್ತಿದೆ.

Leave nature alone, Don’t introduce bad science anymore to damage nature’ -ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಸರಿ ಸುಮಾರು ಎರಡು-ಎರಡೂವರೆ ದಶಕಗಳ ಹಿಂದಿನ ಮಾತು. ದಿಲ್ಲಿಯಲ್ಲಿ ನಡೆಯಬಾರದ್ದು ನಡೆದು ಹೋಯಿತು. ಹತ್ತಾರು ಮುಗ್ಧ ಜೀವಗಳು ತಮ್ಮದಲ್ಲದ ತಪ್ಪಿಗೆ ಉಸಿರಾಟ ನಿಲ್ಲಿಸಿದ್ದವು. ಇಷ್ಟಕ್ಕೆಲ್ಲ ಕಾರಣ ಅವರು ಆಹಾರದಲ್ಲಿ ಬಳಸಿದ್ದ ಸಾಸಿವೆ ಎಣ್ಣೆಯೇ ಕಾರಣ ಎಂಬ ತನಿಖಾ(?)ವರದಿ ಘನ ಸರಕಾರ ನೇಮಿಸಿದ್ದ ಸಮಿತಿಯಿಂದ ಹೊರಬಿದ್ದಿತ್ತು.

ಒಂದೆರಡು ವಾರ ದೇಶಾದ್ಯಂತ ಭಾರೀ ಚರ್ಚೆ ನಡೆದು ಎಲ್ಲವೂ ತಣ್ಣಗಾಯಿತು. ಜನ ತಮ್ಮ ಪಾಡಿಗೆ ತಾವು ಏನೂ ಆಗಿಲ್ಲ ವೆಂಬಂತೆ ಎಲ್ಲವನ್ನೂ ಮರೆತು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಇಂಥ ಘೋರ ದುರಂತದ ಹಿಂದೆ ಒಂದು ಬಹುಕೋಟಿ ಮೌಲ್ಯದ ಖಾದ್ಯ ತೈಲ ಕಂಪನಿಯ ಲಾಬಿ ಇತ್ತು ಎಂಬುದು ಬಹುತೇಕರ ಗಮನಕ್ಕೆ ಬರಲೇ ಇಲ್ಲ. ಉತ್ತರ ಭಾರತದಲ್ಲಿ ಅದರಲ್ಲೂ ಉತ್ತರಪ್ರದೇಶ, ಬಿಹಾರ ಗಳಂಥ ರಾಜ್ಯಗಳಲ್ಲಿ ಅಡುಗೆಗೆ ಸಾಸಿವೆ ಎಣ್ಣೆ ಬಳಸುವುದು ವಾಡಿಕೆ.

ತಲೆತಲಾಂತರದಿಂದಲೂ ಸಾಸಿವೆಯನ್ನು ಅಲ್ಲಿ ಬೆಳೆಯುತ್ತ ಬರಲಾಗುತ್ತಿದೆ. ಹೀಗಾಗಿ ಸಹಜವಾಗಿ ಅಡುಗೆಗೆ ಸಾಸಿವೆಯ ಎಣ್ಣೆ ಯನ್ನೇ ಬಳಸುವುದು ಪದ್ಧತಿ. ತೀವ್ರ ಚಳಿಯ ವಾತಾವರಣ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಸಾಸಿವೆ ಎಣ್ಣೆ ಬಳಕೆ ಹೇಳಿ ಮಾಡಿಸಿದ್ದು. ಹೀಗಾಗಿ ಉತ್ತರ ಭಾರತವನ್ನು ಸಾಸಿವೆ ಎಣ್ಣೆಯಿಂದ ದೂರಮಾಡುವುದು ಕಷ್ಟಕರ. ಭಾರತದಲ್ಲಿ ಬೃಹತ್
ಮಾರುಕಟ್ಟೆಯನ್ನು ಗುರುತಿಸಿ ಬಂಡವಾಳ ಹೂಡಿದ್ದ ಖಾದ್ಯ ತೈಲ ಕಂಪನಿಯ ಕಣ್ಣು ಬಿದ್ದದ್ದು ಇಂಥ ಸಾಸಿವೆ ಎಣ್ಣೆ ಬಳಕೆ ದಾರರ ಮೇಲೆ. ಇದಕ್ಕಾಗಿ ಆ ಕಂಪನಿ ಕಾಳಜಾಲವೊಂದನ್ನು ಸೃಷ್ಟಿಸಿ ಕಳುಹಿಸಿಕೊಟ್ಟಿತು.

ಈ ಜಾಲ ಎಣ್ಣೆ ಮಿಲ್‌ಗಳಿಗೆ ಹೋಗಬೇಕಿದ್ದ ಸಾಸಿವೆಯ ಜತೆ ಆರ್ಜಿಮೋನ(Argemone) ಎಂಬ ಸಸ್ಯದ ಬೀಜಗಳನ್ನು ಬೆರೆಸಿ ಬಿಟ್ಟಿತು. ಇದರ ಬೀಜಗಳು ನೋಡಲು ಸಾಸಿವೆ ಕಾಳಿನಂತೆಯೇ ಇರುತ್ತದಾದರೂ ಘೋರಾತಿ ಘೋರ ವಿಷ. ಪರಿಣಾಮ ನಿರೀಕ್ಷಿ ದಂತೆಯೇ ಆಯಿತು. ದೆಹಲಿಯಲ್ಲಿ ಜೀವಗಳ ಆಹುತಿಯೇ ನಡೆದು ಹೋಯಿತು. ಸರಕಾರ ಸಾಸಿವೆ ಎಣ್ಣೆ ಮಾರಾಟದ ಮೇಲೆ ಒಂದಷ್ಟು ಕಾಲ ನಿರ್ಬಂಧ ಹೇರಿತು. ಇದೇ ಅವಕಾಶವನ್ನು ಬಳಸಿಕೊಂಡ ಖಾದ್ಯ ತೈಲ ಕಂಪನಿ ತನ್ನ ರೀಫೈನ್ಡ್ ಹೆಸರಿನ
ಉತ್ಪನ್ನವನ್ನು ಸುಲಭವಾಗಿ ಭಾರತೀಯರ ಮೇಲೆ ಹೇರಿತು. ಇವತ್ತಿಗೂ ದುಭಾರಿ ಬೆಲೆ ತೆತ್ತು ನಾವು ರೀಪೈನ್ಡ್ ಖಾದ್ಯ ತೈಲವನ್ನು ಆರೋಗ್ಯದ ಹೆಸರಿನಲ್ಲಿ ಸೇವಿಸುತ್ತ ಮೋಸ ಹೋಗುತ್ತಿದ್ದೇವೆ.

ಕೆಲವೊಂದು ಲಾಬಿಗಳು ನಮ್ಮನ್ನು ಅದೆಷ್ಟು ಸುಂದರವಾಗಿ, ನಮಗರಿವಿಲ್ಲದಂತೆಯೇ ನಮ್ಮನ್ನು ಮೂರ್ಖನ್ನಾಗಿಸುತ್ತವೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಷ್ಟೆ. ಆಹಾರದ ವಿಚಾರದಲ್ಲಿ ಬಲುಬೇಗ ನಾವು ಇಂಥ ಲಾಬಿಗೆ ಒಳಗಾಗುತ್ತೇವೆ. ಭಾರತದ ಆಹಾರ ಸ್ವಾವಲಂಬನೆಯನ್ನು ಮುರಿಯುವ ಹುನ್ನಾರ ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ಇಲ್ಲಿನ ಬೆಳೆ ವೈವಿಧ್ಯ, ಇಲ್ಲಿನ ಆಹಾರ ಪದ್ಧತಿ. ನಮ್ಮ ಕೃಷಿ ಪರಂಪರೆಯ ಮೇಲೆ ಒಂದಲ್ಲ ಒಂದು ರೀತಿಯ ಪ್ರಹಾರ ನಡೆಯುತ್ತಲೇ
ಬರುತ್ತಿದೆ.

ಅಮೆರಿಕದ ಗೋಧಿ ಇದಕ್ಕೊಂದು ಸ್ಪಷ್ಟ ಉದಾಹರಣೆ. ಬಡ ರಾಷ್ಟ್ರಗಳಿಗೆ ನೆರವು ನೀಡುವ ನೆಪದಲ್ಲಿ ಮುಗ್ಗಲು ಗೋಧಿಯನ್ನು ಭಿಕ್ಷೆಯ ರೂಪದಲ್ಲಿ ಭಾರತಕ್ಕೆ ತಂದು ಸುರಿಯಲಾಯಿತು. ಅದಕ್ಕೊಂದು ಪೌಷ್ಟಿಕತೆಯ ಬಣ್ಣ ಹಚ್ಚಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಗೋಧಿ ನೀಡುವುದರಿಂದ ಉತ್ತಮ ಪೋಷಕಾಂಶಗಳು ದೊರಕಿ ಅವರು ಸದೃಢರಾಗುತ್ತಾರೆಂದು ಬಿಂಬಿಸಲಾಯಿತು. ಶಾಲೆಗಳಲ್ಲಿ ಮಧ್ಯಾಹ್ನದ ವೇಳೆ ಉಚಿತ ಗೋಧಿ ತಿನಿಸುಗಳ ಪೂರೈಕೆ ಆರಂಭವಾಯಿತು.

ದೇಶದ ಒಂದಷ್ಟು ವೈದ್ಯರುಗಳಿಗೆ ಎಂಜಲು ಕಾಸು ಹಾಕಿ ಗೋಧಿ ಅತ್ಯುತ್ತಮ ಪೌಷ್ಟಿಕ ಆಹಾರವೆಂದು ಹೇಳಿಸಲಾಯಿತು. ಮಾತ್ರವಲ್ಲ ಅಕ್ಕಿ ಬಳಕೆಯಿಂದ ಮಧುಮೇಹ ಸಾಧ್ಯತೆ ಹೆಚ್ಚೆಂಬ ಭೀತಿಯನ್ನೂ ಬಿತ್ತಿ, ಅಕ್ಕಿಯ ಬದಲಾಗಿ ಊಟದಲ್ಲಿ ಚಪಾತಿ ಬಳಕೆಯನ್ನು ಜಾರಿಗೊಳಿಸಲಾಯಿತು. ಮಧುಮೇಹದಿಂದ ಬಳಲುವವರಲ್ಲಿ ಹೆಚ್ಚಿನವರು ಮೈಮುರಿದು ದುಡಿಯದ ಮೇಲ್ವರ್ಗದ ಶ್ರೀಮಂತರೇ ಇದ್ದುದರಿಂದ ಸಹಜವಾಗಿ ಚಪಾತಿ ಸೇವನೆ ಶ್ರೀಮಂತಿಕೆಯ ದ್ಯೋತಕ, ಫ್ಯಾಷನ್ ಆಗಿ ಬದಲಾ ಯಿತು. ಇವತ್ತು ಹೋಟೆಲ್‌ಗಳಲ್ಲಿ ನಮ್ಮ ರಾಗಿ ಮುzಯೋ, ಜೋಳದ ಭಕ್ರಿಯೋ, ಕುಚ್ಚಲಕ್ಕಿ ಗಂಜಿಯೋ ಇರಲಿಕ್ಕಿಲ್ಲ. ಆದರೆ ಚಪಾತಿ ಸಾರ್ವತ್ರಿಕ ಆಹಾರ.

ನಮ್ಮ ಎಳನೀರು, ಮಜ್ಜಿಗೆ, ಪಾನಕಗಳ ಜಾಗವನ್ನು ಕೋಕಾಕೋಲ ಆಕ್ರಮಿಸಿಕೊಂಡು ಇಲ್ಲಿನ ಮಾರುಕಟ್ಟೆ ವಿಸ್ತರಿಸಿಕೊಂಡ ದ್ದಲ್ಲದೇ ಭಾರತೀಯರ ಆರೋಗ್ಯವನ್ನು ಹದಗೆಡಿಸುತ್ತಿರುವುದೂ ಇದೇ ರೀತಿಯ ಲಾಬಿಯಿಂದ. ದೇಶದಲ್ಲಿ ನಡೆದ ಹಸುರು ಕ್ರಾಂತಿ, ಶ್ವೇತ ಕ್ರಾಂತಿ ಸಹ ಒಂದು ರೀತಿಯಲ್ಲಿ ಆಹಾರ ಸಾರ್ವಭೌಮತ್ವ ಸ್ಥಾಪನೆಯ ಹುನ್ನಾರವೇ. ಒಂದೆಡೆ ರಾಸಾಯನಿಕ, ಕೀಟ ನಾಶಕಗಳ ವಿಷವನ್ನು ಸುರಿದು ನಮ್ಮ ಭೂಮಿಯನ್ನು ಬರಡಾಗಿಸಲಾಯಿತು.

ಇನ್ನೊಂದೆಡೆ ಕೃಷಿ ಭೂಮಿ ಹೆಚ್ಚಳದಿಂದ ನಮ್ಮ ಕಾಡು ಕಣ್ಮರೆಯಾಗಿದೆ. ಮತ್ತೊಂದೆಡೆ ನಮ್ಮ ನೆಲ ಜಲ, ವಾತಾವರಣವನ್ನು ಸದ್ದಿಲ್ಲದೇ ಕುಲಗೆಡಿಸಲಾಯಿತು. ಇವತ್ತು ನಮ್ಮ ರಾಯಚೂರು, ಸಿಂಧನೂರು, ಗಂಗಾವತಿಗಳಲ್ಲಿ ಒಮ್ಮೆ ಸುತ್ತಾಡಿ ಬಂದರೆ ಗಂಟಲು ಕೆರೆತ, ಉಸಿರಾಟದ ತೊಂದರೆ ಕಟ್ಟಿಟ್ಟದ್ದು. ಅಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ದ್ವಿಗುಣಗೊಂಡಿದೆ. ಕೃಷಿ ಉತ್ಪನ್ನ
ಹೆಚ್ಚಳದ ದುರಾಸೆಗೆ ಬಿದ್ದು ಬೆಳೆಗಳಿಗೆ ಅತಿ ಹೆಚ್ಚು ರಾಸಾಯನಿಕ ಸುರಿಯುತ್ತಿರುವುದರ ಫಲವಿದು.

ಗೋವನ್ನು ಕೊಬ್ಬಿಸುವ ಪದ್ಧತಿ, ಸಂಸ್ಕೃತಿ ನಮ್ಮದಲ್ಲವೇ ಅಲ್ಲ. ಅದು ಮಾಂಸಕ್ಕಾಗಿ ಹಸುಗಳನ್ನು ಸಾಕುವ ದೇಶಗಳ ಗೀಳು. ಶ್ವೇತ ಕ್ರಾಂತಿಯ ಹೆಸರಿನಲ್ಲಿ ತಳಿಸಂಕರದ ಹುಚ್ಚು ಇಡೀ ದೇಶವನ್ನು ಆಕ್ರಮಿಸಿಕೊಂಡು ಇವತ್ತು ನಮ್ಮ ಹತ್ತಾರು ದೇಸಿ ತಳಿಗಳೇ ನಾಶವಾಗಿವೆ. ಅಳಿದುಳಿದವು ವಿನಾಶದಂಚಿನಲ್ಲಿವೆ. ದೆರ್ಸಿ ಎಚ್‌ಎಫ್ ಗಳೆಂಬ ವಿಚಿತ್ರ ಪ್ರಾಣಿ (ನನ್ನ ಪ್ರಕಾರ ಅವು ಗೋವುಗಳಲ್ಲ) ಭಾರತದ ಪೂಜನೀಯ ಗೋ ಸಾಮ್ರಾಜ್ಯವನ್ನು ಸರ್ವನಾಶಗೈದಿದೆ. ತಳಿಸಂಕರದ ಇನ್ನೊಂದು ಇತ್ತೀಚಿನ ಅಪಸವ್ಯ ನಾಯಿಗಳದ್ದು.

ಯಾವ್ಯಾವುದೋ ಪ್ರಾಣಿಗಳ ವೀರ್ಯವನ್ನು ನಾಯಿಗಳ ಅಂಡಾಣುವಿಗೆ ಬೆರೆಸಿ, ಸಿದ್ಧಪಡಿಸಲಾದ ಶ್ವಾನ ತಳಿಗಳು ಇಂದು ಫ್ಯಾಷನ್ ಆಗಿದೆ. ಮನೆ ಬಾಗಿಲು ಕಾಯುತ್ತಿದ್ದ ನಾಯಿಗಳು ಚಿಂಪಾಜಿ, ಹಂದಿ, ತೋಳ, ಸಿಂಗಳೀಕದ ಮುಖ(ವಾಡ)ವನ್ನು ಹೊತ್ತು ನಮ್ಮ ಬೆಡ್ ರೂಮ, ಅಡುಗೆಕೋಣೆಗಳಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿವೆ!

ದೇಶಾದ್ಯಂತ ಆಗಾಗ ಚರ್ಚೆಯ ಮುನ್ನೆಲೆಗೆ ಬಂದು ಹೋಗುತ್ತಿರುವ, ಈಗ ಪುನಃ ಗದ್ದಲ ಎಬ್ಬಿಸುತ್ತಿರುವ ಬಿ ಟಿ ಸಾಸಿವೆಯ ಕುರಿತೂ ಇಂಥದೇ ಅಭಿಪ್ರಾಯ ವ್ಯಕ್ತಪಡಿಸದೇ ಅನ್ಯ ದಾರಿಯಿಲ್ಲ. ಕುಲಾಂತರಿ ಬದನೆ, ಹತ್ತಿ, ಜೋಳದ ವಿಚಾರದಲ್ಲೂ ನಮ್ಮಲ್ಲಿ ಸಾಕಷ್ಟು ವಿವಾದ ಆಗಿತ್ತು. ಜಿ ಎಂ ಬದನೆ ನಿಷೇಧಿಸಿ 5 ವರ್ಷಗಳಾಗಿವೆ. ಈ ಅವಧಿಯಲ್ಲಿ ಬದನೆ ಆಹಾರವಾಗಿ ಸೇವಿಸಲು ಅಡ್ಡಿಯಿಲ್ಲ ಎಂದು ನಿರೂಪಿಸಲು ಸಂಬಂಧಪಟ್ಟ ಕಂಪನಿಗೆ ಸಾಧ್ಯವಾಗಿಲ್ಲ.

ಈವರೆಗೆ ಒಮ್ಮೆಯೂ ಕುಲಾಂತರಿ ತಳಿಗಳ ಬಿಡುಗಡೆಯ ಮುನ್ನ ಪರಿಣಾಮ ಕುರಿತು ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಬರಿದೆ ಜಿ ಎಂ ಬೀಜಗಳ ಪರ ನಡೆಯುತ್ತಿರುವ ಲಾಬಿ ಅನಗತ್ಯ ಗೊಂದಲವನ್ನು ದೇಶದಲ್ಲಿ ಸೃಷ್ಟಿಸುತ್ತಿದೆ. ಮುಂದಿನ ಅಪಾಯಗಳನ್ನು
ಗ್ರಹಿಸುವ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ವ್ಯವಧಾನವನ್ನೇ ನಾವು ತೋರುತ್ತಿಲ್ಲ.

ಇಂಗ್ಲಿಷ್‌ನಲ್ಲಿ ಜಿ.ಎಂ.ಒ – ‘ಜೆನೆಟಿಕಲಿ ಮಾಡಿಫೈಡ್ ಆರ್ಗಾನಿಸಮ್ಸ್’ ಅಂದರೆ ಬೇರೆ ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮಾಣು ವೊಂದರ ವಂಶವಾಹಿಗಳನ್ನು ಕೃತಕವಾಗಿ ಒಳಸೇರಿಸಿ ರೂಪಾಂತರಿಸಿದ ಬೆಳೆ ತಳಿಗಳು. ಈಗಾಗಲೇ ಹೀಗೆ ಕುಲಾಂತರಗೊಂಡ ಹತ್ತಿ, ಬದನೆ, ಜೋಳ ಸಿದ್ಧಗೊಂಡಿದೆ. ಟೊಮೇಟೊ, ಮೆಕ್ಕೆಜೋಳ, ಬೆಂಡೆಕಾಯಿ, ಪಪಾಯ ಸೇರಿದಂತೆ ಐವತ್ತಾರು ಪ್ರಯೋಗ ನಿರತ ಬೆಳೆಗಳು ದಾಳಿಗೆ ಸಿದ್ಧಗೊಂಡಿವೆ.

ಇದು ಆಹಾರ ಸೇವಿಸುವವರ ಹಾಗೂ ಬೆಳೆದ ರೈತರ ಜೀವನದ ಪ್ರಶ್ನೆ. ಇದರಲ್ಲಿ ಹುಡುಗಾಟ ಸಲ್ಲ. ಕುಲಾಂತರಿ ತಳಿಗಳ ವಿರುದ್ಧ ಕಾನೂನು ಸಮರ ಸಾರಿರುವ ಅರುಣಾ ರೋಡ್ರಿಗಸ್, ಇದಕ್ಕೊಂದು ಚೆಂದದ ಉದಾಹರಣೆಯನ್ನೂ ನೀಡಿದ್ದಾರೆ. ಆರು ದಶಕಗಳ ಹಿಂದೆ ಅರ್ಧಂಬರ್ಧ ಪರೀಕ್ಷೆಗೊಳಪಟ್ಟಿದ್ದ ಥೆಲಿಡೋಮೈಡ್ ಮಾತ್ರೆಗಳನ್ನು ಬೇರೆ ಬೇರೆ ದೇಶಗಳಲ್ಲಿ ಸೇವಿಸಿದ ಸಾವಿರಾರು ಗರ್ಭಿಣಿಯರು ಅಂಗವಿಕಲ ಮಕ್ಕಳಿಗೆ ಜನ್ಮ ಕೊಟ್ಟ ಜ್ವಲಂತ ಘಟನೆ ನಮ್ಮ ಕಣ್ಣೆದುರೇ ಇದೆ.

ಮಾತ್ರೆಗಳಾದರೂ ಸಾರ್ವತ್ರಿಕ ಪರಿಣಾಮವನ್ನು ಉಂಟುಮಾಡದಿರಬಹುದು ಆದರೆ ಆಹಾರದ ವಿಷಯ ಹಾಗಲ್ಲ. ಪರೀಕ್ಷೆ ಗೊಳಪಡಿಸದೇ ಕುಲಾಂತರಿ ತಳಿಗಳನ್ನು ಬಿತ್ತನೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಊಹಿಸುವುದು ಕಷ್ಟ. ಏಕೆಂದರೆ ಮಾತ್ರೆಗಳಂತೆ ರೈತರ ಜಮೀನುಗಳಿಂದ ತಳಿಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಅವು ಜಮೀನಿನಿಂದ ಜಮೀನಿಗೆ ಹಬ್ಬುತ್ತಲೇ ಸಾಗುತ್ತದೆ. ಆಯುರ್ವೇದ ಔಷಧಗಳ ಉತ್ಪಾದನೆಗೂ ಸಾಸಿವೆ ಮತ್ತು ಬದನೆ ಬಳಕೆ ಯಾಗುತ್ತಿದೆ. ಕುಲಾಂತರಿ ಸಾಸಿವೆ ಹಾಗೂ ಬದನೆ ಮಾರುಕಟ್ಟೆಗೆ ಬಂದು ಅವನ್ನೂ ಔಷಧಗಳ ತಯಾರಿಕೆಗೆ ಉಪಯೋಗ ಮಾಡಿದರೆ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಅಧ್ಯಯನಗಳು ನಡೆದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮದೇ ದೇಸೀ ತಳಿಯನ್ನು ನಾವು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಕರ್ನಾಟಕದಲ್ಲಿ ಪರಂಪ ರಾನುಗತವಾಗಿ ಇದ್ದಿದ್ದ ಅದೆಷ್ಟೋ ಭತ್ತದ ದೇಸಿ ತಳಿಗಳು ಕಣ್ಮರೆಯಾಗಿವೆ. ಭಾಸುಮತಿಯಂತಹ ಭಾರತದ್ದೇ ತಳಿಗಳನ್ನು ತಮ್ಮದೆಂದು ಹೇಳಿ ವಿದೇಶಿಗರು ಪೇಟೆಂಟ್ ಪಡಕೊಂಡಿದ್ದಾರೆ.

ಬದನೆಯಲ್ಲಿ ಭಾರತದ ಎರಡು ಸಾವಿರಕ್ಕೂ ಅಧಿಕ ತಳಿಗಳಿವೆ. ಕರ್ನಾಟಕದ ಉಡುಪಿಗುಳ್ಳ, ಮಟ್ಟಗುಳ್ಳ, ಬಿಳಿಗುಂಡು ಬದನೆ, ಚೋಳ ಬದನೆ, ಕೊತ್ತಿತಲೆ ಬದನೆ, ಹೊಳೆಚಿಪ್ಲಿ, ನೆ ಬದನೆ, ಪುಟ್ಟ ಬದನೆ ಹೀಗೆ ಹತ್ತಾರು ತಳಿಗಳಿವೆ. ಇವೆಂದೂ ನಮ್ಮ ಆರೋಗ್ಯಕ್ಕೆ ಮಾರಕವಾಗಿದ್ದಿಲ್ಲ. ಕುಲಾಂತರಿಗಳು ಇಂಥ ಅಪರೂಪದ ತಳಿಗಳನ್ನು ವಿನಾಶಕ್ಕೆ ತಳ್ಳಿವೆ.

ಆಘಾತಕಾರಿ ಸಂಗತಿಯೆಂದರೆ ಇಡೀ ದೇಶದಲ್ಲಿ ಕುಲಾಂತರಿ ತಳಿಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳೇ ಇಲ್ಲ. ೨೦೦೨ರ ಬಾಯೆರ್ ಎಂಬ ಕಂಪನಿ ಜಿ.ಎಂ. ಸಾಸಿವೆಗೆ ಅನುಮತಿ ಪಡೆಯಲು ವಿಫಲವಾಗಿತ್ತು. ಈವರೆಗೆ ಕುಲಾಂತರಿ ಸಾಸಿವೆ ಸೇವನೆಗೆ ಯೋಗ್ಯವೆಂದು ದೃಢೀಕರಣಗೊಂಡಿಲ್ಲ. ಇದು ಆಡಳಿತಾರೂಢರು, ಅಧಿಕಾರಿಗಳು ಸೇರಿದಂತೆ ಬಹುತೇಕ ವಿಜ್ಞಾನಿಗಳಿಗೂ
ಗೊತ್ತಿರುವ ಸಂಗತಿ.

ಕೇವಲ ಆಯಾ ಕಂಪನಿಗಳು ಹೇಳಿದ್ದನ್ನೇ ಆಧರಿಸಿ ಇಂಥ ತಳಿಗಳಿಗೆ ಅನುಮತಿ ನೀಡುವುದು ನಿಜಕ್ಕೂ ಅಪಾಯಕಾರಿ. ಏಕೆಂದರೆ ಕಂಪನಿಗಳು ತಮ್ಮ ಸ್ವಾರ್ಥಕ್ಕಾಗಿ ತಂತಮ್ಮ ಮೂಗಿನ ನೇರಕ್ಕೆ ವರದಿ ನೀಡುವುದು ಸಹಜ. ಆದರೆ, ಅವು ಎಂದೂ ಪರಿಣಾಮಗಳ
ಹೊಣೆ ಹೊರುವುದಿಲ್ಲ. ಈಗಾಗಲೇ ಬಿ.ಟಿ. ಹತ್ತಿ ಬಿಡುಗಡೆ ಮಾಡಿ, ಅದನ್ನೇ ಬೆಳೆಯಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣವಾಗಿದೆ. ಬಿಹಾರದಲ್ಲಿ 2010ರಲ್ಲಿ ಖಾಸಗಿ ಕಂಪನಿಗಳ ಹೈಬ್ರಿಡ್ ಜೋಳದ ಬೀಜದಿಂದ 61 ಸಾವಿರ ಹೆಕ್ಟೇರ್‌ನಲ್ಲಿ ತೆನೆ ಬಾರದೆ ಸರಕಾರ ಒಟ್ಟು 61 ಕೋಟಿ ರು. ಪರಿಹಾರ ಕೊಟ್ಟು ಕೈಸುಟ್ಟುಕೊಂಡಿದೆ. ಆ ಕಂಪನಿ ಮಾತ್ರ ಕೈತೊಳೆದುಕೊಂಡು ಹೊರಟುಹೋಗಿದೆ.

ಇನ್ನೂ ಪ್ರಮುಖ ಸಂಗತಿಯೆಂದರೆ ಕುಲಾಂತರಿ ಬೆಳೆಗಳಿಗೆ ಅಗತ್ಯ NEONICOTINOIDS ಕ್ರಿಮಿನಾಶಕ ಬಳಕೆಯಿಂದ ಜೇನು ನೊಣಗಳ ಸಂತತಿ ನಾಶವಾಗುತ್ತಿದೆ ಎಂಬ ಅಂಶವನ್ನು ಪರಿಸರ ತಜ್ಞರು ಸಾರಿದ್ದಾರೆ. ಇದರಿಂದ ದೇಶದ ಜೇನು ಸಂಪತ್ತೇ ಕಳೆದು ಹೋಗುವುದರ ಜತೆಗೆ ಪರಿಸರದಲ್ಲಿನ ಪರಾಗಸ್ಪರ್ಶ ಕ್ರಿಯೆಯೇ ನಿಂತು ಹೋಗಿ ಎಷ್ಟೋ ಸಸ್ಯ ಸಂಕುಲ ವಿನಾಶವಾಗ ಬಹುದು.

ಅನುಮಾನವೇ ಇಲ್ಲ ಕುಲಾಂತರಿ ಆಹಾರ ಪದಾರ್ಥಗಳನ್ನು ಪ್ರೋತ್ಸಾಹಿಸುತ್ತಿರುವುದರ ಹಿಂದೆ ಕೋಕಾಕೋಲ ಕಂಪನಿ, ಗೋಽ ಪೂರೈಕೆ, ಜೆರ್ಸಿ, ನಾಯಿ ತಳಿಗಳ ವಿಚಾರದಲ್ಲಿದ್ದಂಥದ್ದೇ ಪ್ರಬಲ ಲಾಬಿ ಇದೆ. ಇವು ಎಂದಿಗೂ ಜನರ ಆರೋಗ್ಯದ ಬಗ್ಗೆ
ತಲೆಕೆಡಿಸಿಕೊಳ್ಳುವುದಿಲ್ಲ. ಲಾಭವೇ ಅವರ ಅಂತಿಮ ಗುರಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮದನ್ನು ಕಳಕೊಂಡು, ಸಹಜ ಸೃಷ್ಟಿ ಯನ್ನು ಬಲಿಗೊಟ್ಟು ‘ವಿಶ್ವಾಮಿತ್ರ ಸೃಷ್ಟಿ’ ಯನ್ನು ಅಪ್ಪಿಕೊಳ್ಳುವುದು ಖಂಡಿತಾ ಮೂರ್ಖತನ.

ಇದು ಹಿತಾಸಕ್ತಿಯ ಸಂಘರ್ಷವೇ ಹೊರತೂ ಮತ್ತಿನ್ನೇನೂ ಅಲ್ಲ. ಇದಕ್ಕೆ ಪೂರಕವಾಗಿ ಒಂದಷ್ಟು ಬಾಡಿಗೆ ವಿಜ್ಞಾನಿಗಳು ಕೆಲಸ
ಮಾಡುತ್ತಾರೆ. ಕುಲಾಂತರಿ ತಳಿಗಳ ಕ್ಷೇತ್ರ ಪ್ರಯೋಗಕ್ಕೆ ರಾಜ್ಯ ಸರಕಾರಗಳ ಅನುಮತಿ ಅಗತ್ಯ ಎಂದು ಕೇಂದ್ರ ಸರಕಾರ ಹೇಳಿರು ವುದು ಇಂಥ ಲಾಬೀದಾರರಿಗೆ ತೊಡಕಾಗಿದೆ. ಹೀಗಾಗಿ ಇನ್ನೂ ಈ ಬಗ್ಗೆ ಸ್ಪಷ್ಟ ನಿಲುವು ತಾಳದ ಕರ್ನಾಟಕದಂಥ ರಾಜ್ಯಗಳು ಯಾವುದೇ ಮುಲಾಜಿಗೆ ಒಳಗಾಗದೇ ಶೀಘ್ರ ನಿರ್ಧಾರ ಕೈಗೊಳ್ಳಬೇಕು.

ಅದಿಲ್ಲದಿದ್ದರೆ ದೇಸಿ ಬೀಜಗಳು ರೈತರಿಗೆ ಸಿಗದಂತೆ ಇಂಥ ಕಂಪನಿಗಳು ತಂತ್ರ ರೂಪಿಸುತ್ತವೆ. ಇದನ್ನೇ ನೋಡಿ. ಬೀಜ ಸಂರಕ್ಷಣೆ ನಮ್ಮ ಪರಂಪರೆಯ ಪದ್ಧತಿ. ಆದರೆ ಪ್ರಯೋಗಾಲಯದಲ್ಲಿ ಸಿದ್ಧಗೊಳ್ಳುವ ಕುಲಾಂತರಿಗಳ ಬೀಜವನ್ನು ಸಂಗ್ರಹಿಸುವಂತಿಲ್ಲ.
ಸಂಗ್ರಹಿಸಿದರೂ ಪ್ರಯೋಜನವಿಲ್ಲ ಏಕೆಂದರೆ ಅವು ಮೊಳಕೆಯೊಡೆವ ಸಾಮರ್ಥ್ಯ ಅತ್ಯಂತ ಕಡಿಮೆ. ಸಹಜ ಬೀಜಗಳಿಗಿಂತ ಅರ್ಧದಷ್ಟು ಮೊಳಕೆಯೊಡೆಯುವ ಸಾಮರ್ಥ್ಯವನ್ನು ಇವು ಹೊಂದಿರುತ್ತವೆ.

ಅದರಿಂದ ಬರುವ ಸಸಿಯಲ್ಲಿನ ಬೀಜಕ್ಕೆ ಮೊಳಕೆ ಸಾಮರ್ಥ್ಯ ಇನ್ನೂ ಕಡಿಮೆ. ಹೀಗಾಗಿ ಕಂಪನಿಯ ಮುಂದೆಯೇ ಪ್ರತಿ ಬಾರಿ
ಕೈಯೊಡ್ಡಬೇಕು. ನಮ್ಮ ರೈತ ತನ್ನ ಸ್ವಾವಲಂಬನೆಯನ್ನು ಕಳಕೊಳ್ಳುತ್ತಾನೆ. ಅನಂತರ ಬೀಜಗಳ ಏಕಸ್ವಾಮ್ಯ ಪಡೆದು ಮನಬಂದ ಬೆಲೆಗೆ ಮಾರಲಾಗುತ್ತದೆ. ಅಂಥ ಅನಿವಾರ್ಯ ಸ್ಥಿತಿಯ ಮೊದಲ ಬಲಿಪಶು ರೈತ. ವಿಜ್ಞಾನ ಎನ್ನುವುದು ಪರಿಸರಕ್ಕೆ ಪೂರಕವಾಗಿ ಕೆಲಸಮಾಡಿ, ನಮ್ಮತನವನ್ನು ಉಳಿಸಲು ಸಹಾಯಕವಾಗಬೇಕೇ ವಿನಃ ಅತಿ ಬುದ್ಧಿವಂತಿಕೆಯಿಂದ ಅನೈತಿಕ ಮಾರ್ಗದಲ್ಲಿ ಅದು ವಿನಾಶವನ್ನು ತಂದೊಡ್ಡಿಕೊಳ್ಳುವುದಕ್ಕಲ್ಲ.