ದುಡ್ಡು-ಕಾಸು
ಗೋಪಾಲಕೃಷ್ಣ ಭಟ್ ಬಿ.
ಮೊದಲ ಕ್ರಿಪ್ಟೋ ಕರೆನ್ಸಿ ಎನಿಸಿಕೊಂಡು ಇಂದಿಗೂ ಜನಪ್ರಿಯವಾಗಿರುವ ‘ಬಿಟ್‌ಕಾಯಿನ್’ ೨೦೦೯ರಲ್ಲಿ ಸ್ಥಾಪನೆಯಾಯಿತು. ೨೦೧೫ರಲ್ಲಿ ಅಭಿವೃದ್ಧಿ ಪಡಿಸಲಾದ ‘ಎಥೆರಿಯಮ್’ ಎರಡನೇ ಕ್ರಿಪ್ಟೋ ಕರೆನ್ಸಿಯಾಗಿದ್ದು, ಸಂಕೀರ್ಣ ವಹಿವಾಟುಗಳಿಗೆ ಇದನ್ನು ಬಳಸಬಹುದು. ಇತರ ಸಾಮಾನ್ಯ ಕ್ರಿಪ್ಟೋ ಕರೆನ್ಸಿಗಳಲ್ಲಿ ಕಾರ್ಡಾನೋ, ಸೋಲಾನಾ, ಡಾಜ್ ಕಾಯಿನ್ ಮತ್ತು ಎಕ್ಸ್‌ಆರ್‌ಪಿ ಸೇರಿವೆ.
ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಅಥವಾ ವಾಸ್ತವಿಕ ಕರೆನ್ಸಿಯ ಒಂದು ವಿಧವಾಗಿದ್ದು, ಇದು ಸುರಕ್ಷಿತ ವಹಿವಾಟುಗಳಿಗಾಗಿ ಕ್ರಿಪ್ಟೋಗ್ರಾಫಿಕ್
ತಂತ್ರಗಳನ್ನು ಬಳಸುತ್ತದೆ. ಇದು ಕೇಂದ್ರೀಯ ಬ್ಯಾಂಕ್‌ನಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಧರಿಸಿದೆ.
ಕ್ರಿಪ್ಟೋ ಕರೆನ್ಸಿಗಳು ವಹಿವಾಟುಗಳನ್ನು ದಾಖಲಿಸಲು ಮತ್ತು ಹೊಸ ಘಟಕಗಳನ್ನು ನೀಡಲು ವಿಕೇಂದ್ರೀಕೃತ ವ್ಯವಸ್ಥೆಯನ್ನು ಬಳಸುತ್ತವೆ ಹಾಗೂ ವಹಿವಾಟುಗಳನ್ನು ಪರಿಶೀಲಿಸಲು ಎನ್‌ಕ್ರಿಪ್ಷನ್ ಕಾರ್ಯವಿಧಾನವನ್ನು ಅನುಸರಿಸುತ್ತವೆ. ಇದರರ್ಥ, ಸುಧಾರಿತ ಕೋಡಿಂಗ್ ವ್ಯಾಲೆಟ್‌ಗಳು ಮತ್ತು ಸಾರ್ವಜನಿಕ ಲೆಡ್ಜರ್‌ಗಳ ನಡುವೆ ಕ್ರಿಪ್ಟೋ ಕರೆನ್ಸಿ ಡೆಟಾವನ್ನು ಸಂಗ್ರಹಿಸುವುದು ಹಾಗೂ ರವಾನಿಸುವುದು. ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸು ವುದು ಎನ್‌ಕ್ರಿಪಕ್ಷನ್‌ನ ಗುರಿ. ವಹಿವಾಟುಗಳನ್ನು ನಂತರ ಪರಿಶೀಲಿಸಲಾಗುತ್ತದೆ ಮತ್ತು ಬ್ಲಾಕ್‌ಚೈನ್‌ನಲ್ಲಿ ದಾಖಲಿಸಲಾಗುತ್ತದೆ. ಈ ಕ್ರಿಪ್ಟೋ ಕರೆನ್ಸಿ ಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನವನ್ನು ಬಳಸಿ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ.
ಬ್ಲಾಕ್‌ಗಳು ಮತ್ತು ಸಮಯವನ್ನು ಸ್ಟ್ಯಾಂಪ್‌ಗಳಾಗಿ ದಾಖಲಿಸುವ ವಿಧಾನವನ್ನು ಬ್ಲಾಕ್‌ಚೈನ್ ವಹಿವಾಟುಗಳು ವಿವರಿಸುತ್ತವೆ. ಇದು ಸಾಕಷ್ಟು ಸಂಕೀರ್ಣವಾದ ತಾಂತ್ರಿಕ ಪ್ರಕ್ರಿಯೆಯಾಗಿದೆ; ಆದರೆ ಫಲಿತಾಂಶವು ಕ್ರಿಪ್ಟೋ ಕರೆನ್ಸಿ ವಹಿವಾಟಿನ ಡಿಜಿಟಲ್ ಲೆಡ್ಜರ್ ಆಗಿದ್ದು, ಹ್ಯಾಕರ್‌ಗಳಿಗೆ
ಟ್ಯಾಂಪರ್ ಮಾಡಲು ಕಷ್ಟವಾಗುತ್ತದೆ. ಇದು ಬದಲಾಯಿಸಲಾಗದ ಲೆಡ್ಜರ್ ಆಗಿದ್ದು, ಸ್ವತ್ತುಗಳು ಮತ್ತು ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ದಾಖಲಿಸುತ್ತದೆ. ಡಿಜಿಟಲ್ ಹಣದ ರೂಪದಲ್ಲಿ ಧಾರಕನ ಖಾತೆಯಲ್ಲಿ ಇರುತ್ತದೆ.
‘ಮೈನಿಂಗ್’ ಎನ್ನುವುದು ಕ್ರಿಪ್ಟೋ ಕರೆನ್ಸಿಯ ಘಟಕಗಳನ್ನು ರಚಿಸುವ ಪ್ರಕ್ರಿಯೆಯನ್ನು ವಿವರಿಸಲು ಬಳಸುವ ಪದವಾಗಿದೆ. ಮೈನಿಂಗ್ ಪ್ರಕ್ರಿಯೆಯು ಕ್ರಿಪ್ಟೋ ವಹಿವಾಟುಗಳ ಮೌಲ್ಯೀಕರಣವನ್ನು ನಿರ್ವಹಿಸುತ್ತದೆ ಮತ್ತು ಹೊಸ ಕ್ರಿಪ್ಟೋ ಕರೆನ್ಸಿಯನ್ನು ರಚಿಸುತ್ತದೆ. ಬ್ಲಾಕ್‌ಚೈನ್‌ಗೆ ವಹಿವಾಟುಗಳನ್ನು ಸೇರಿಸಲು ಸದರಿ ಮೈನಿಂಗ್ ಪ್ರಕ್ರಿಯೆಯು ವಿಶೇಷವಾದ ಹಾರ್ಡ್‌ವೇರ್ ಮತ್ತು ಸಾಫ್ಟ್ ವೇರ್ ಅನ್ನು ಬಳಸುತ್ತದೆ. ಬಳಕೆದಾರರು ಕರೆನ್ಸಿಗಳನ್ನು
ಬ್ರೋಕರ್‌ಗಳಿಂದ ಖರೀದಿಸಬಹುದು, ನಂತರ ಕ್ರಿಪ್ಟೋಗ್ರಾಫಿಕ್ ವ್ಯಾಲೆಟ್‌ಗಳನ್ನು ಬಳಸಿ ಅವುಗಳನ್ನು ಸಂಗ್ರಹಿಸಬಹುದು ಮತ್ತು ಖರ್ಚು ಮಾಡಬ ಹುದು.
ಎಲ್ಲಾ ಕ್ರಿಪ್ಟೋ ಕರೆನ್ಸಿಗಳು ಮೈನಿಂಗ್‌ನಿಂದ ಬರುವುದಿಲ್ಲ. ಬದಲಾಗಿ ಡೆವಲಪರ್‌ಗಳು ಹೊಸ ಕರೆನ್ಸಿಯನ್ನು ಹಾರ್ಡ್ ಫೋರ್ಕ್ ಮೂಲಕ ರಚಿಸು ತ್ತಾರೆ. ಒಂದು ಹಾರ್ಡ್‌ಪೋರ್ಕ್ ಬ್ಲಾಕ್ ಚೈನ್‌ನಲ್ಲಿ ಹೊಸ ಸರಪಳಿಯನ್ನು ರಚಿಸುತ್ತದೆ. ಒಂದು ಫೋರ್ಕ್ ಹೊಸ ಮಾರ್ಗವನ್ನು, ಇನ್ನೊಂದು ಹಳೆಯ ಮಾರ್ಗವನ್ನು ಅನುಸರಿಸುತ್ತದೆ. ಕ್ರಿಪ್ಟೋ ಕರೆನ್ಸಿಯ ಅನುಕೂಲಗಳು ಮತ್ತು ಅನನುಕೂಲಗಳ ಕಡೆಗೆ ಒಮ್ಮೆ ಹಣ್ಣುಹಾಯಿಸೋಣ.
ಅನುಕೂಲಗಳು:
೧. ಭದ್ರತೆ: ಕ್ರಿಪ್ಟೋಗ್ರಫಿಯು ಸುರಕ್ಷಿತ ವಹಿವಾಟುಗಳನ್ನು ಖಚಿತಪಡಿಸುತ್ತದೆ ಮತ್ತು ವಂಚನೆಯಿಂದ ರಕ್ಷಿಸುತ್ತದೆ.
೨. ಗೌಪ್ಯತೆ: ನಾವು ಕ್ರಿಪ್ಟೋ ಕರೆನ್ಸಿಯೊಂದಿಗೆ ಖರೀದಿಯನ್ನು ಮಾಡಿದಾಗ, ಯಾವುದೇ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಅಗತ್ಯವಿಲ್ಲ.
೩. ಜಾಗತಿಕವಾಗಿದೆ: ಕೆಲವು ದೇಶಗಳಲ್ಲಿ ಕ್ರಿಪ್ಟೋ ಕರೆನ್ಸಿ ಕಾನೂನುಬದ್ಧವಾಗಿಲ್ಲದಿದ್ದರೂ, ವಿದೇಶಿ ವಿನಿಮಯ ದರಗಳನ್ನು ಲೆಕ್ಕಾಚಾರ ಮಾಡುವ ಅಥವಾ ಪಾವತಿಸುವ ಅಗತ್ಯವಿಲ್ಲ. ಕರೆನ್ಸಿ ಪರಿವರ್ತನೆಯ ಅಗತ್ಯವಿಲ್ಲದೆಯೇ ಕ್ರಿಪ್ಟೋ ಕರೆನ್ಸಿಯು ವೇಗದ ಮತ್ತು ಗಡಿಯಿಲ್ಲದ ವಹಿವಾಟುಗಳನ್ನು ಅನುಮತಿಸುತ್ತದೆ.
೪. ಪ್ರವೇಶಿಸುವಿಕೆ: ಇಂಟರ್‌ನೆಟ್ ಪ್ರವೇಶಲಭ್ಯತೆಯನ್ನು ಹೊಂದಿರುವ ಯಾರು ಬೇಕಾದರೂ ಕ್ರಿಪ್ಟೋ ಕರೆನ್ಸಿ ವಹಿವಾಟುಗಳಲ್ಲಿ ಭಾಗವಹಿಸ ಬಹುದು.
೫. ಬಳಕೆದಾರ-ಸ್ನೇಹಿ: ನಾವು ಕೆಲವು ಭೌತಿಕ ಖರೀದಿಗಳನ್ನು ಮಾಡಬಹುದು; ಹಲವಾರು ಕಂಪನಿಗಳು ಕ್ರಿಪ್ಟೋ ಕರೆನ್ಸಿಯನ್ನು ಮಾರಾಟ ಮಾಡುತ್ತವೆ.
೬. ಸುಲಲಿತ ಮಾರ್ಗ: ಇಬ್ಬರು ವ್ಯಕ್ತಿಗಳ ನಡುವೆ ಹಣಕಾಸು ವಹಿವಾಟು/ವರ್ಗಾವಣೆ ಸುಲಲಿತವಾಗಿ ನಡೆಯುವಂತಾಗಲು ಕ್ರಿಪ್ಟೋ ಕರೆನ್ಸಿ ಅತ್ಯುತ್ತಮ ಮಾರ್ಗ ಎಂದು ವಿಶ್ಲೇಷಿಸಲಾಗಿದೆ.
೭. ಮಿತವ್ಯಯಿ: ಕ್ರಿಪ್ಟೋ ಕರೆನ್ಸಿಯನ್ನು ಬಳಕೆದಾರರು ತಮ್ಮ ಪರ್ಸ್ ರೀತಿ ಬಳಸಬಹುದು. ಹಣ ವರ್ಗಾವಣೆ ಪ್ರಕ್ರಿಯೆಯು ಅತಿ ಕಡಿಮೆ ಮೊತ್ತಕ್ಕೆ ಮುಗಿಯುತ್ತದೆ. ಹಣಕಾಸು ವರ್ಗಾವಣೆ ವೇಳೆ ಬ್ಯಾಂಕುಗಳು ವಿಧಿಸುವ ದುಬಾರಿ ಸೇವಾಶುಲ್ಕವನ್ನು ಇಲ್ಲಿ ಉಳಿಸಬಹುದಾಗಿದೆ.
೮. ಖರೀದಿ ಸರಾಗ: ಕ್ರಿಪ್ಟೋ ಕರೆನ್ಸಿಯನ್ನು ಬಳಸಿ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವಿವಿಧ ರೀತಿಯ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿದೆ.
ಅನನುಕೂಲಗಳು: ೧. ಅನಿಶ್ಚಿತತೆ: ಕ್ರಿಪ್ಟೋ ಕರೆನ್ಸಿ ಬೆಲೆಗಳು ಹೆಚ್ಚು ಚಂಚಲ ಅಥವಾ ಅಸ್ಥಿರ. ಈ ಅಂಶವು ಹೂಡಿಕೆಯಲ್ಲಿನ ಅಪಾಯಗಳಿಗೆ ಕಾರಣವಾಗುತ್ತದೆ.
೨. ನಿಯಂತ್ರಣದ ಕೊರತೆ: ನಿಯಂತ್ರಣದ ಅನುಪಸ್ಥಿತಿಯು ಭದ್ರತೆ ಮತ್ತು ಕಾನೂನು ಸಂಬಂಧಿತ ಕಳವಳಗಳಿಗೆ ಕಾರಣವಾಗಬಹುದು.
೩. ನಷ್ಟದ ಅಪಾಯ: ಬಳಕೆದಾರರು ತಮ್ಮ ಖಾಸಗಿ ಕೀಲಿಯನ್ನು ಕಳೆದುಕೊಂಡರೆ, ತಮ್ಮ ಕ್ರಿಪ್ಟೋ ಕರೆನ್ಸಿ ಹಿಡುವಳಿಗಳಿಗೆ ಪ್ರವೇಶವನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು.
೪. ಸೀಮಿತ ಸ್ವೀಕಾರ: ಕ್ರಿಪ್ಟೋ ಕರೆನ್ಸಿಯ ಸ್ವೀಕಾರವು ಸಾರ್ವತ್ರಿಕವಲ್ಲ; ಈ ಅಂಶವು ದೈನಂದಿನ ವಹಿವಾಟುಗಳಲ್ಲಿ ಅದರ ಬಳಕೆಯನ್ನು
ಸೀಮಿತಗೊಳಿಸುತ್ತದೆ.
೫. ವಿಮೆಯಿಲ್ಲ: ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ ಹಣಕ್ಕೆ ನಷ್ಟವಾಗದಂತೆ ಬ್ಯಾಂಕುಗಳು ವಿಮಾರಕ್ಷಣೆ ಒದಗಿಸುತ್ತವೆ; ಆದರೆ ಕ್ರಿಪ್ಟೋ ಕರೆನ್ಸಿ ವಹಿವಾಟಿನಲ್ಲಿ ನಷ್ಟವಾದ ಸಂದರ್ಭದಲ್ಲಿ ಇಂಥ ಯಾವುದೇ ಸಹಾಯ ಸಿಗುವುದಿಲ್ಲ.
೬. ಭೀತಿಯಿದೆ: ಕ್ರಿಪ್ಟೋ ಕರೆನ್ಸಿಗೆ ಯಾವುದೇ ಸರಕಾರಿ ಮಾನ್ಯತೆ ಇಲ್ಲದ ಕಾರಣ, ಅಕ್ರಮ ಚಟುವಟಿಕೆಗಳು ನಡೆಯುವ ಭೀತಿ ಇರುತ್ತದೆ. ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಗೆ ಕ್ರಿಪ್ಟೋ ಕರೆನ್ಸಿಯ ಬಳಕೆಯಾಗಬಹುದು.
೭. ವಂಚನೆ: ದುರದೃಷ್ಟವಶಾತ್ ಕ್ರಿಪ್ಟೋ ಕರೆನ್ಸಿ ಸಂಬಂಧಿತ ವಂಚನೆ, ಹಗರಣ, ಅಪರಾಧಗಳು ಹೆಚ್ಚುತ್ತಿವೆ. ನಕಲಿ ವೆಬ್‌ಸೈಟ್‌ಗಳು ಮತ್ತು ವಿನಿಮಯ ಕೇಂದ್ರಗಳ ಹಾವಳಿಯೂ ಹೆಚ್ಚುತ್ತಿದೆ.
೮. ಹೆಚ್ಚು ತೆರಿಗೆ: ಕ್ರಿಪ್ಟೋ ಕರೆನ್ಸಿಗಳ ವ್ಯಾಪಾರ ಅಥವಾ ವಿನಿಮಯದಿಂದ ಬರುವ ಗಳಿಕೆಗಳಿಗೆ ಫ್ಲ್ಯಾಟ್ ಶೇ.೩೦ರಷ್ಟು ತೆರಿಗೆಯನ್ನು (ಜತೆಗೆ ಶೇ.೪ ಹೆಚ್ಚುವರಿ ಶುಲ್ಕವನ್ನು) ವಿಧಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ಕ್ರಿಪ್ಟೋ ಆಸ್ತಿಗಳ ಮಾರಾಟದ ಮೇಲೆ ಶೇ.೧ರಷ್ಟು ಟಿಡಿಎಸ್ ಸಹ ಅನ್ವಯ ವಾಗುತ್ತದೆ.
ಆನ್‌ಲೈನ್ ವೇದಿಕೆಯಲ್ಲಿ ನಾವು ಸುರಕ್ಷಿತವಾಗಿರಲು ಸಮಗ್ರ ಸ್ವರೂಪದ ಆಂಟಿ ವೈರಸ್ ಅನ್ನು ಬಳಸುವುದು ಉತ್ತಮ ಮಾರ್ಗವಾಗಿರುತ್ತದೆ. ಹೆಚ್ಚುವರಿ ಯಾಗಿ, ವಹಿವಾಟುಗಳಿಗೆ ಎರಡು ಅಂಶಗಳ/ಹಂತದ ದೃಢೀಕರಣ ಪ್ರಕ್ರಿಯೆಯ ಅಗತ್ಯವಿರುತ್ತದೆ. ವಹಿವಾಟನ್ನು ಪ್ರಾರಂಭಿಸಲು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಲು ಕೇಳಬಹುದು. ನಂತರ ನಮ್ಮ ಮೊಬೈಲ್ ಫೋನ್‌ಗೆ ಪಠ್ಯದ ಮೂಲಕ ಕಳುಹಿಸಲಾದ ದೃಢೀಕರಣದ
ಕೋಡ್ ಅನ್ನು ನಾವು ನಮೂದಿಸಬೇಕಾಗಬಹುದು.
ಮೊದಲ ಕ್ರಿಪ್ಟೋ ಕರೆನ್ಸಿ ಎನಿಸಿಕೊಂಡು ಇಂದಿಗೂ ಅತ್ಯಂತ ಜನಪ್ರಿಯವಾಗಿರುವ ‘ಬಿಟ್‌ಕಾಯಿನ್’ ೨೦೦೯ರಲ್ಲಿ ಸ್ಥಾಪನೆಯಾಯಿತು. ೨೦೧೫ರಲ್ಲಿ ಅಭಿವೃದ್ಧಿಪಡಿಸಲಾದ ‘ಎಥೆರಿಯಮ್’ ಎರಡನೇ ಕ್ರಿಪ್ಟೋ ಕರೆನ್ಸಿಯಾಗಿದ್ದು, ಸಂಕೀರ್ಣ ವಹಿವಾಟುಗಳಿಗೆ ಇದನ್ನು ಬಳಸಬಹುದು. ಇತರ ಸಾಮಾನ್ಯ ಕ್ರಿಪ್ಟೋ ಕರೆನ್ಸಿಗಳಲ್ಲಿ ಕಾರ್ಡಾನೋ, ಸೋಲಾನಾ, ಡಾಜ್ ಕಾಯಿನ್ ಮತ್ತು ಎಕ್ಸ್‌ಆರ್‌ಪಿ ಸೇರಿವೆ. ಇವನ್ನು ಹೊರತುಪಡಿಸಿ ಸಾವಿರಾರು ಬಗೆಯ ಕ್ರಿಪ್ಟೋ ಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಕರೆನ್ಸಿಗಳನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದರೆ, ಯಾವುದೇ ಸರಕಾರವಾಗಲೀ, ಸರಕಾರಿ ಸಂಸ್ಥೆಯಾಗಲೀ ಈ ವ್ಯವಹಾರ ನಡೆಸುವುದಿಲ್ಲ ಹಾಗೂ ಅದರಲ್ಲಿ ಭಾಗಿಯಾಗುವುದಿಲ್ಲ.
ಕ್ರಿಪ್ಟೋ ಕರೆನ್ಸಿ ಸಂಬಂಧವಾಗಿ ಯಾವುದೇ ಸೇವೆ ನೀಡದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ೨೦೧೮ರಲ್ಲಿ ಕ್ರಿಪ್ಟೋ ಕರೆನ್ಸಿ ವ್ಯವಹಾರಗಳನ್ನು ನಿಷೇಽಸಿತ್ತು. ಆದರೆ ಈ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ೨೦೨೧ರ ಜುಲೈ ೨೦ರಂದು ತೆರವುಗೊಳಿಸಿದೆ. ಆದರೂ, ಅನಿಶ್ಚಿತತೆ/ಅಸ್ಥಿರತೆ, ಭದ್ರತಾ ಕಳವಳಗಳು ಮತ್ತು ಹಣಕಾಸಿನ ಸಂಭಾವ್ಯ ನಷ್ಟಗಳು ಸೇರಿದಂತೆ ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಆರ್‌ಬಿಐ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.
ಕ್ರಿಪ್ಟೋ ಕರೆನ್ಸಿ ವ್ಯಾಪಾರ ಮತ್ತು ವಿನಿಮಯವನ್ನು ನಿಯಂತ್ರಿಸಲು ಭಾರತ ಸರಕಾರವು ವಿವಿಧ ನಿಯಮಗಳು ಮತ್ತು ಶಾಸಕಾಂಗ ಕ್ರಮಗಳನ್ನು ಪರಿಗಣಿಸುತ್ತಿದೆ; ಆದರೆ ಸದ್ಯಕ್ಕೆ ಭಾರತದಲ್ಲಿ, ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸುವ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ.
ಹಣಕಾಸು ತಜ್ಞರು ಕ್ರಿಪ್ಟೋ ಕರೆನ್ಸಿಯನ್ನು ನೀರ ಮೇಲಿನ ಗುಳ್ಳೆಗೆ ಹೋಲಿಸುತ್ತಾರೆ. ಕಾರಣ, ಇಲ್ಲಿ ಬೆಲೆಗಳಲ್ಲಿ ಕಾಣಬರುವ ನಾಟಕೀಯ/ಹಠಾತ್ ಬದಲಾವಣೆಗಳು. ಮಾರುಕಟ್ಟೆಯಲ್ಲಿ ಊಹಾಪೋಹಗಳನ್ನು ಸೃಷ್ಟಿಸುವವರು ಕ್ರಿಪ್ಟೋ ಕರೆನ್ಸಿಯ ಬೆಲೆಗಳನ್ನು ಕೆಲವೊಮ್ಮೆ ಗಗನಕ್ಕೇರಿಸುತ್ತಾರೆ.
ಹೊಸದರಲ್ಲಿ ಈ ವಲಯದಲ್ಲಿ ಹೂಡಿಕೆ ಮಾಡುವುದು ದೊಡ್ಡ ಸವಾಲು. ಆದ್ದರಿಂದ, ಸಾಕಷ್ಟು ಸಂಶೋಧನೆ/ಅಧ್ಯಯನ ಮಾಡಿ ಸಂಪ್ರದಾಯ ಬದ್ಧವಾಗಿ ಹೂಡಿಕೆ ಮಾಡಬೇಕು. ನಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಬೇಕು.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)