ಶಶಾಂಕಣ
shashidhara.halady@gmail.com
ಕ್ಯೂಬಾದ ಅಧ್ಯಕ್ಷರಾಗಿದ್ದ ಫೀಡೆಲ್ ಕಾಸ್ಟ್ರೋ ಪ್ರಖ್ಯಾತರು. ಅಮೆರಿಕವನ್ನು ಎದುರು ಹಾಕಿಕೊಂಡು, ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ದೇಶ ವನ್ನು ಮುನ್ನಡೆಸಿದವರು. ಪಕ್ಕದ ದೇಶದ ಬಡಜನರ ಅಪೌಷ್ಟಿಕತೆಯನ್ನು ದೂರ ಮಾಡಲು, ನಮ್ಮ ದೇಶದಿಂದ ೧೦೦ ಟನ್ ನುಗ್ಗೆ ಕಾಯಿ ಬೀಜಗಳನ್ನು ತರಿಸಿ, ಅಲ್ಲಿ ನುಗ್ಗೆ ಕೃಷಿ ಮಾಡಿದರು. ನುಗ್ಗೆಯ ಬೆಲೆಯನ್ನು ಜನರಿಗೆ ತಿಳಿಸಿದರು.
ಕ್ಯೂಬಾದಂತಹ ಸಣ್ಣ ದ್ವೀಪ ರಾಷ್ಟ್ರವನ್ನು ನಾಲ್ಕೈದು ದಶಕಗಳ ಕಾಲ ಮುನ್ನಡೆಸಿದ, ಅಮೆರಿಕದಂತಹ ದೈತ್ಯ ರಾಷ್ಟ್ರವನ್ನು ಬಗಲಲ್ಲೇ ಕಟ್ಟಿಕೊಂಡು ಎದುರು ಹಾಕಿಕೊಂಡ ಫೀಡೆಲ್ ಕಾಸ್ಟ್ರೋ ಎಂದರೆ ಹಲವರಿಗೆ ಏನೋ ಒಂದು ರೀತಿಯ ರೋಮಾಂಚನ. ಪ್ರತಿ ದಿನ ಹೋರಾಟ ನಡೆಸುವ ಅನಿವಾರ್ಯತೆ; ದೇಶದಲ್ಲಿ ಸಮಾಜವಾದವನ್ನು ಅಕ್ಷರಶಃ ಜಾರಿಗೆ ತರುವ ದಿಟ್ಟತನ; ವ್ಯವಹಾರ, ಕೃಷಿಯನ್ನು ರಾಷ್ಟ್ರೀಕರಣಗೊಳಿಸುವ ಧೈರ್ಯ; ಕಮ್ಯುನಿಸ್ಟ್ ತತ್ವಗಳ ಅನುಷ್ಠಾನ; ಎಂತಹ ಹೋರಾಟಕ್ಕಾದರೂ ಸದಾ ಸಿದ್ಧ – ಇದು ಫೀಡೆಲ್ ಕ್ಯಾಸ್ಟ್ರೋ ಅವರ ಕಾಲದ ಕ್ಯೂಬಾ.
ಹಲವು ದಶಕಗಳ ಕಾಲ ಕ್ಯೂಬಾದಲ್ಲಿ ಆಡಳಿತ ನಡೆಸಿದ ಕಮ್ಯುನಿಸ್ಟ್ (ಎಂ ಎಲ್) ಪಕ್ಷಕ್ಕೆ ಇವರದ್ದೇ ನಾಯಕತ್ವ. 1959ರಿಂದ 1976ರ ತನಕ ಕ್ಯೂಬಾದ ಪ್ರಧಾನಿಯಾಗಿ, 1976ರಿಂದ 2008ರ ತನಕ ಕ್ಯೂಬಾದ ಅಧ್ಯಕ್ಷರಾಗಿ, 1965ರಿಂದ 2011ರ ತನಕ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದ ಕಾಸ್ಟ್ರೋ, 2011ರಿಂದ ನಿವೃತ್ತರಾದರು. ಆ ಸಮಯದಲ್ಲಿ, ಅಂದರೆ 2010 ರಲ್ಲಿ ಪಕ್ಕದ ದೇಶ ಹೈಟಿಯಲ್ಲಿ ಭೂಕಂಪವಾಗಿತ್ತು; ನಂತರ ನೆರೆ ಹಾವಳಿ, ಜತೆಗೆ ಕಾಲರಾ.
ಜನರು ಅನಾರೋಗ್ಯದಿಂದ ಕಂಗೆಟ್ಟರು; ಅವರ ಕಷ್ಟ ನೋಡಲಾಗದೇ, ನಿವೃತ್ತ ಜೀವನದಲ್ಲಿದ್ದ ಕಾಸ್ಟ್ರೋ ಅವರು ಅಲ್ಲಿನ ಬಡಜನರ ಆರೋಗ್ಯ ಉತ್ತಮ ಪಡಿಸಲು ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಕ್ಯೂಬಾದ ಫಿನ್ಲೆ ಇನ್‌ಸ್ಟ್ಟ್ಯೂಟ್‌ನ ಕಾಂಪಾ ಹ್ಯೂರ್ಗೊ ಎಂಬ ಮಹಿಳೆಗೆ ಫೋನ್ ಮಾಡಿ, ಜನರ ಅಪೌಷ್ಠಿಕತೆಗೆ ಒಂದು ಪರಿಹಾರ ಹುಡುಕಲು ಹೇಳಿದಾಗ ‘ನಮ್ಮ ನಾಡಿನಲ್ಲಿ ವ್ಯಾಪಕವಾಗಿರುವ,
ಜನರ ನಿರಂತರ ಹಸಿವು ಮತ್ತು ಅಪೌಷ್ಟಿಕತೆಗೆ ನುಗ್ಗೆ ಕಾಯಿ ಉತ್ತಮ ಪರಿಹಾರ’ ಎಂದರು.
ನುಗ್ಗೆಕಾಯಿ! ಅದೆಲ್ಲಿದೆ? ಭಾರತದಲ್ಲಿ! ಪೌಷ್ಟಿಕಾಂಶಗಳ ಆಗರ ನುಗ್ಗೆಕಾಯಿ, ನುಗ್ಗೆ ಸೊಪ್ಪು, ನುಗ್ಗೆ ಬೀಜಗಳ ಮೂಲ ಭಾರತ ಮತ್ತು
ಸುತ್ತಮುತ್ತಲಿನ ದೇಶಗಳು. ನುಗ್ಗೆಕಾಯಿಯ ವಿಚಾರ ತಿಳಿದ ಕೂಡಲೇ, ಕಾಸ್ಟ್ರೋ ಅವರು ಅದರ ಕುರಿತು ಎಲ್ಲಾ ಮಾಹಿತಿಯನ್ನು ಕಲೆ ಹಾಕಿದರು. ಇದು ಬಡವರ ಆಹಾರ ಎಂದು ನಿರ್ಧರಿಸಿ, ಹ್ಯೂರ್ಗೊ ಅವರೊಂದಿಗೆ ಚರ್ಚಿಸಿ, ‘ಈ ಗಿಡವನ್ನು ನಮ್ಮ ದ್ವೀಪಗಳಲ್ಲಿ ಬೆಳೆಯ ಬೇಕಲ್ಲ, ಏನು ಮಾಡುವುದು? ಯಾರಾದರೂ ಭಾರತಕ್ಕೆ ಹೋಗಿ ನುಗ್ಗೆ ಕೃಷಿಯನ್ನು ಅಧ್ಯಯನ ಮಾಡಿ, ಅದರ ಬೀಜಗಳನ್ನು ಕ್ಯೂಬಾಕ್ಕೆ ತರಬೇಕು.
ಯಾರು ಹೋಗುತ್ತಾರೆ?’ ಎಂದರು. ಕಾಸ್ಟ್ರೊ ಅವರ ಅಪಾರ ಆಸಕ್ತಿಯನ್ನು ಕಂಡು, ಕಾಂಪಾ ಹ್ಯೂರ್ಗೊ ಎಂಬ ಆ ವಿಜ್ಞಾನಿ ಮಹಿಳೆ
‘ಇನ್ನಾರು, ನಾನು ಹೋಗಿ ನೋಡಿಕೊಂಡು ಬರುತ್ತೇನೆ’ ಎಂದರು. ಫಿನ್ಲೆ ಇನ್ಸ್‌ಟ್ಯೂಟ್‌ನ ನಿರ್ದೇಶಕರಾಗಿ 31 ವರ್ಷ ದುಡಿದ್ದ ಅನುಭವ ಹೊಂದಿದ್ದ ಹ್ಯೂರ್ಗೊ ಅವರು, ವ್ಯಾಕ್ಸೀನ್ ಕ್ಷೇತ್ರದಲ್ಲಿ ತಜ್ಞರು. ರಾಜಕೀಯದಿಂದ ನಿವೃತ್ತರಾಗಿದ್ದರೂ, ಕಾಸ್ಟ್ರೋ ವ್ಯಕ್ತಪಡಿಸುತ್ತಿದ್ದ ಉತ್ಸಾಹ ಕಂಡು, ತಮ್ಮ ದೇಶದ ಬಡ ಜನರಿಗೆ ಅನುಕೂಲವಾಗುವಾದರೆ ತಾನೇ ಭಾರತಕ್ಕೆ ಹೋಗಿ ನುಗ್ಗೆಕಾಯಿ ಕೃಷಿಯ ಮಾಹಿತಿ ಯನ್ನು ತರುತ್ತೇನೆ ಎಂದು ಹೊರಟರು.
ಇದು ನಡೆದದ್ದು 2011ರಲ್ಲಿ. ನಮ್ಮ ದೇಶದ ನುಗ್ಗೆಕಾಯಿಯ ಔಷಽಯ ಗುಣಗಳು, ಲಾಭಗಳು ನಮಗೆಲ್ಲಾ ತಿಳಿದಿದ್ದರೂ, ಅದು ಅದರ
ಪಾಡಿಗೆ ಒಂದು ತರಕಾರಿ ಎಂದೇ ಗುರುತಿಸುವವರು ಬಹಳ. ನುಗ್ಗೆ ಸೊಪ್ಪು, ಬೀಜಗಳು ಸಹ ಔಷಧಿಯ ಗುಣ ಹೊಂದಿವೆ, ನಾಟಿ ವೈದ್ಯದಲ್ಲಿ, ಹಳ್ಳಿ ಮದ್ದಿನಲ್ಲಿ, ಆಯುರ್ವೇದದಲ್ಲಿ ಮೊದಲಿನಿಂದಲೂ ಬಳಕೆಯಲ್ಲಿದೆ. ಇದರ ವಿಚಾರ ತಿಳಿದು ಕ್ಯೂಬಾದಿಂದ ತಜ್ಞರು ನಮ್ಮ ದೇಶಕ್ಕೆ ಬಂದು, ನುಗ್ಗೆಕಾಯಿಯ ಅಧ್ಯಯನ ಮಾಡಿದ್ದರು ಎಂಬ ವಿಚಾರವೇ ಅಚ್ಚರಿ ಮೂಡಿಸುತ್ತದೆ.
ಕಾಂಪಾ ಹ್ಯೂರ್ಗೊ ಅವರು ಆಂಧ್ರಪ್ರದೇಶ, ತಮಿಳು ನಾಡು ಮತ್ತು ಕೇರಳಗಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆಗಿಡದ ಕೃಷಿಯನ್ನು ಅಧ್ಯಯನ ಮಾಡಿದರು. ಬೇರೆ ಬೇರೆ ಪ್ರದೇಶಗಳಲ್ಲಿರುವ ನುಗ್ಗೆಯ ಸ್ಥಳೀಯ ತಳಿಯನ್ನು ಪರಿಶೀಲಿಸಿ, ಕ್ಯೂಬಾಕ್ಕೆ ಯಾವ ತಳಿ ಉತ್ತಮ ಎಂಬುದನ್ನು ಗುರುತಿಸಲು ಪ್ರಯತ್ನಿಸಿದರು. ಸ್ಥಳೀಯ ಅಡುಗೆಯವರನ್ನು ಕೂರಿಸಿಕೊಂಡು, ನುಗ್ಗೆಯನ್ನು ಯಾವ ರೀತಿಯಲ್ಲಿ ಆಹಾರವಾಗಿ ಸೇವಿಸ ಬಹುದು ಎಂಬುದನ್ನು ಗುರುತಿಸಿದರು. ನುಗ್ಗೆ ಕಾಯಿಯ ಸಾಂಬಾರು, ಪಲ್ಯಗಳ ಜತೆ ನುಗ್ಗೆ ಸೊಪ್ಪಿನ ಹುಡಿಯನ್ನು ಪ್ರತಿದಿನ ಆಹಾರ ದೊಂದಿಗೆ ಸೇವಿಸುವ ಪದ್ಧತಿಯ ಲಾಭವನ್ನು ಕಂಡುಕೊಂಡರು.
ಡಿಸೆಂಬರ್ 2011. ಇವರ ಅಧ್ಯಯನದ ವಿವರಗಳು ಕ್ಯೂಬಾ ಸರಕಾರವನ್ನು ತಲುಪಿತ್ತು. ಕಾಸ್ಟ್ರೊ ಅವರ ಶಿಫಾರಸಿನ ಮೇಲೆ, ಅಲ್ಲಿನ ಸರಕಾರವು 100 ಟನ್ ನುಗ್ಗೆ ಬೀಜವನ್ನು ಕ್ಯೂಬಾಕ್ಕೆ ತರಿಸಲು ಅನುಮೋದನೆ ನೀಡಿತು. ಕ್ಯೂಬಾದಿಂದ ಬಂದ ಮಹಿಳೆ ಕಾಂಪಾ ಹ್ಯೂರ್ಗೊ ನಮ್ಮ ದೇಶದಿಂದ 100 ಟನ್ ನುಗ್ಗೆ ಬೀಜಗಳನ್ನು ಹಡಗಿನಲ್ಲಿ ತುಂಬಿಸಿಕೊಂಡು ತಮ್ಮ ದೇಶಕ್ಕೆ ಪಯಣಿಸಿದರು!
ಫೀಡೆಲ್ ಕಾಸ್ಟ್ರೊ ಅವರಂತೂ ನುಗ್ಗೆ ಬೀಜ, ನುಗ್ಗೆ ಕೃಷಿಯ ಕುರಿತು ಬಹಳ ಉತ್ಸಾಹ ತಳೆದಿದ್ದರು. ಅವರ ದೇಶದ ಬಡಜನರ ಆರೋಗ್ಯ ಸುಧಾರಿಸಲು ನುಗ್ಗೆಕಾಯಿಯೇ ರಾಮಬಾಣ ಎಂದು ನಿರ್ಧರಿಸಿದ್ದರು. ಭಾರತದ ಈ ಸಸ್ಯವು ತಮ್ಮ ಜನರಲ್ಲಿ ಶಕ್ತಿ ತುಂಬುತ್ತದೆ ಎಂಬುದು
ಅವರ ವಿಶ್ವಾಸ. ಕ್ಯೂಬಾದಲ್ಲಿ ಎಲ್ಲೆಡೆ ನುಗ್ಗೆ ಕೃಷಿಯನ್ನು ಆರಂಭಿಸಲಾಯಿತು. ನುಗ್ಗೆ ಸೊಪ್ಪಿನ ಬಳಕೆಯನ್ನು ಪ್ರಚುರ ಪಡಿಸುವ ಮೂಲಕ, ಜನರ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಂಡ ಅಲ್ಲಿನವರು, ಸೊಪ್ಪಿನ ಪುಡಿಯನ್ನು ತಯಾರಿಸಿ, ಆಹಾರದ ಜತೆ ಬಳಸುವುದನ್ನು ಕಲಿತರು. ಸೂಪ್‌ಗಳಲ್ಲಿ, ಕರಿಗಳಲ್ಲಿ ನುಗ್ಗೆ ಸೊಪ್ಪಿನ ಪುಡಿಯನ್ನು ನಿರಂತರವಾಗಿ ಉಪಯೋಗಿಸುವುದನ್ನು ರೂಢಿ ಮಾಡಿಕೊಂಡರು.
ನುಗ್ಗೆಯನ್ನು ಅಲ್ಲಿ ಜನಪ್ರಿಯಗೊಳಿಸಲು ಸ್ವತಃ ಕಾಸ್ಟ್ರೊ, ಹಲವು ಲೇಖನಗಳನ್ನು ಬರೆದರು! ‘ಭಾರತ ಮೂಲದ ನುಗ್ಗೆಯು ಎಲ್ಲಾ ಅಮೈನೋ ಆಸಿಡ್ ಹೊಂದಿರುವ ಏಕೈಕ ಸಸ್ಯ. ನುಗ್ಗೆಗಿಡಗಳ ಕೃಷಿಯನ್ನು ಕೈಗೊಳ್ಳುವ ಮೂಲಕ, ಒಂದು ಹೆಕ್ಟೇರಿಗೆ ಪ್ರತಿ ವರ್ಷ 300 ಟನ್ ನುಗ್ಗೆ ಸೊಪ್ಪನ್ನು ತಯಾರಿಸಬಹುದು. ಅದರಲ್ಲಿ ನಾನಾ ರೀತಿಯ ಔಷಧಿಯ ಗುಣಗಳಿವೆ’ ಎಂಬ ಲೇಖನವನ್ನು ಕಾಸ್ಟ್ರೋ
ಬರೆದಾಗ ಅವರಿಗೆ 90 ವರ್ಷ!
2016ರಲ್ಲಿ ಫಿಡೆಲ್ ಕಾಸ್ಟ್ರೊ ನಿಧನವಾದಾಗ, ಅವರ ಕ್ರಾಂತಿಕಾರಿ ಜೀವನ, ಕಮ್ಯುನಿಸ್ಟ್ (ಎಂಎಲ್) ಪಕ್ಷದ ಒಡನಾಟ, ಅಮೆರಿಕಕ್ಕೆ ಸೆಡ್ಡು ಹೊಡೆದದ್ದು ಮೊದಲಾದವುಗಳನ್ನು ನೆನಪಿಸಿಕೊಳ್ಳುವುದರ ಜತೆಯಲ್ಲೇ, ಭಾರತದಿಂದ 100 ಟನ್ ನುಗ್ಗೆಕಾಯಿ ಬೀಜಗಳನ್ನು
ತರಿಸಿದ್ದನ್ನು ಸಹ ಜನರು ನೆನಪಿಸಿಕೊಂಡರು. ಕ್ಯೂಬಾದ ಮಾಜಿ ಅಧ್ಯಕ್ಷನ ಮೂಲಕ ಅಲ್ಲಿ ಜನಪ್ರಿಯಗೊಂಡು, ಅಲ್ಲಿನ ಬಡಜನರ ಆರೋಗ್ಯವನ್ನು ಉತ್ತಮಪಡಿಸಿದ ನುಗ್ಗೆಕಾಯಿ ನಮ್ಮ ದೇಶದವರಿಗೆ ಹೊಸತೇನಲ್ಲ. ನಮ್ಮ ಹಳ್ಳಿಗಳಲ್ಲಿ ಅನಾದಿ ಕಾಲದಿಂದಲೂ ತರಕಾರಿಯಾಗಿ ಇದರ ಕಾಯಿ ಉಪಯೋಗವಾಗುತ್ತಿದೆ; ನುಗ್ಗೆ ಸೊಪ್ಪಿನ ರಸವನ್ನು ಔಷಧವಾಗಿ ಬಳಸಲಾಗುತ್ತಿದೆ; ನುಗ್ಗೆ ಸೊಪ್ಪಿನಿಂದ
ವಿವಿಧ ರೀತಿಯ ವ್ಯಂಜ್ಯನಗಳನ್ನು ತಯಾರಿಸಿ ಸೇವಿಸಲಾಗುತ್ತಿದೆ.
ಆದರೂ, ನುಗ್ಗೆಕಾಯಿಯ ಅಪಾರ ಶಕ್ತಿಯನ್ನು, ಪೌಷ್ಟಿಕಾಂಶಗಳನ್ನು ನಾವು ಸರಿಯಾಗಿ ಗುರುತಿಸಿದ್ದೇವೆಯೆ? ನಗರೀಕರಣದ ಭರದಲ್ಲಿ, ಹಳೆಯದೆಲ್ಲವನ್ನೂ ಹಳ್ಳಿಯವರೂ ಕ್ರಮೇಣ ಮರೆಯುತ್ತಿರುವ ಭರಾಟೆಯಲ್ಲಿ, ನುಗ್ಗೆಕಾಯಿಯ ಅಪಾರ ಶಕ್ತಿಯನ್ನು ಕಡೆಗಣಿಸುತ್ತಿದ್ದೇವೆಯೆ? ನುಗ್ಗೆಕಾಯಿಯು ನಮ್ಮ ನಾಡಿನ ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಗಳಿಸಿದ್ದು, ಅದು ಮುಂದುವರಿಯುತ್ತಿದೆ; ಆದರೆ ನುಗ್ಗೆ ಸೊಪ್ಪಿನ ಬಳಕೆಯನ್ನು ನಾವು ಏಕೆ ಗರಿಷ್ಠ ಪ್ರಮಾಣದಲ್ಲಿ ಮಾಡುತ್ತಿಲ್ಲ? ಆ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿಲ್ಲ? ನುಗ್ಗೆಕಾಯಿ ಮತ್ತು ಸೊಪ್ಪಿನಲ್ಲಿರುವ ಪೌಷ್ಟಿಕಾಂಶಗಳು ಹೇರಳ. ಸಮಾನ ತೂಕದ ನುಗ್ಗೆಕಾಯಿಯನ್ನು ಮತ್ತು ಇತರ ಹಲವು ತರಕಾರಿಗಳನ್ನು
ಹೋಲಿಸಿದರೆ, ನುಗ್ಗೆಯಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿಯೆಂಟ್ಸ್ ಇವೆ.
ನುಗ್ಗೆಕಾಯಿಯಲ್ಲಿ- ? ಕಿತ್ತಲೆ ಹಣ್ಣಿನಲ್ಲಿರುವ ವಿಟಮಿನ್ ಸಿ ಗಿಂತ ಏಳು ಪಟ್ಟು ಹೆಚ್ಚು ಇದೆ.
? ಬಸಳೆಗಿಂತ ಮೂರುಪಟ್ಟು ಕಬ್ಬಿಣದ ಅಂಶವಿದೆ
?ಕ್ಯಾರಟ್‌ನಲ್ಲಿರುವುದಕ್ಕಿಂದ ನಾಲ್ಕು ಪಟ್ಟು ವಿಟಮಿನ್ ಎ ಇದೆ
?ಒಂದು ಲೋಟ ಹಾಲಿನಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಕ್ಯಾಲ್ಷಿಯಂ ಇದೆ
?ಬಾಳೆ ಹಣ್ಣಿನಲ್ಲಿರುವ ಪೊಟೇಸಿಯಂನ ಮೂರು ಪಟ್ಟು ಇದೆ
?ಮಜ್ಜಿಗೆಯಲ್ಲಿರುವ ಎರಡರಷ್ಟು ಪ್ರೊಟೀನ್ ಇವೆ ಈ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ.
ನಾನಾ ರೀತಿಯ ಪೌಷ್ಟಿಕಾಂಶಗಳ ಜತೆಯಲ್ಲೇ, ಹಲವು ಔಷಧಿಯ ಗುಣಗಳೂ ಇದರಲ್ಲಿವೆ. ಕ್ಯೂಬಾದ ಉದಾಹರಣೆಯನ್ನೇ ತೆಗೆದುಕೊಂಡರೆ, ಪೌಷ್ಟಿಕಾಂಶಗಳ ಕೊರತೆ ಮತ್ತು ಜನರನ್ನು ಬಾಧಿಸುತ್ತಿರುವ ಲವಣಾಂಶಗಳ ಕೊರತೆ ಎಂಬ ಸಂಕೀರ್ಣ ಸಮಸ್ಯೆಗೆ
ಒಂದೇ ಪರಿಹಾರ ನುಗ್ಗೆಕಾಯಿ! ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ಬಿಯ, ವಿಟಮಿನ್ ಸಿ, ರಿಬೋ-ವಿನ್ ಮತ್ತು ಕಬ್ಬಿಣದ ಅಂಶ ಇರುವ ನುಗ್ಗೆಯು, ನಮ್ಮ ಜನರ ಪ್ರತಿದಿನದ ಆಹಾರವಾಗುವ ಅವಶ್ಯಕತೆ ಇದೆ.
ಅನಾದಿ ಕಾಲದಿಂದ ನುಗ್ಗೆಯನ್ನು ಬಳಸುತ್ತಾ ಬಂದಿರುವ ನಮ್ಮ ನಾಡಿನ ಜನರಿಗೆ ಅದು ಅಪರಿಚಿತವಲ್ಲ. ನುಗ್ಗೆ ರಸವನ್ನು ಮೂಗಿಗೆ, ಕಿವಿಗೆ ಹಾಕಿ ಹಲವು ರೋಗಗಳನ್ನು ನಮ್ಮ ನಾಟಿ ವೈದ್ಯ ಪದ್ಧತಿ ಗುಣಪಡಿಸಬಲ್ಲದು. ಅರಶಿನ ಮುಂಡಿಗೆ ಕಾಯಿಲಿಗೆ ಇಂದಿಗೂ ನುಗ್ಗೆಸೊಪ್ಪಿನ ರಸವನ್ನು ಔಷಧವಾಗಿ ನೀಡಲಾಗುತ್ತಿದೆ.
ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ ಇವೆ. ನಮ್ಮ ದೇಹದ ವಯಸ್ಸಾಗುವ ಪ್ರಕ್ರಿಯೆಯನ್ನು ಈ ಆಂಟಿ ಆಕ್ಸಿಡೆಂಟ್ ಗಳು ಕಡಿಮೆ ಮಾಡುತ್ತವೆ. ಚ್ಯವನ ಮಹರ್ಷಿಗಳು ಚ್ಯವನ ಪ್ರಾಶವನ್ನು ಉಪಯೋಗಿಸಿ, ತಮ್ಮ ಯೌವನವನ್ನು ಮರಳಿ ಪಡೆದರು ಎಂಬ ಕಥೆ ಇಲ್ಲಿ ನೆನಪಾಗುತ್ತದೆ. ನುಗ್ಗೆಕಾಯಿ ಸೇವನೆಯಿಂದ ಒತ್ತಡ, ಖಿನ್ನತೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೆಲವು ಆಯುರ್ವೇದ ತಜ್ಞರು.
ಸಂದಿವಾತ, ಆರ್ಥೈಟಿಸ್‌ನಲ್ಲಿ ಕಂಡುಬರುವ ಕೀಲುಗಳ ನೋವನ್ನು ನುಗ್ಗೆ ಉಪಶಮನಗೊಳಿಸಬಲ್ಲದು. ನುಗ್ಗೆಯ ಎಲೆ ಮತ್ತು ಬೀಜಗಳಲ್ಲಿ ಆಂಟಿ ಇನ್ಲೇಮೇಟರಿ ಸಂಯುಕ್ತಗಳಿವೆ. ಆಯುರ್ವೇದದ ಪ್ರಕಾರ, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣ ದಲ್ಲಿಡಲು ಸಹ ಇದು ಸಹಕಾರಿ. ಇದರಲ್ಲಿ ನಿಯಾಜಿಮೈಸಿನ್ ಕ್ಯಾನ್ಸರ್ ಬಾರದಂತೆ ತಡೆಯಬಲ್ಲದು ಎನ್ನುತ್ತದೆ ಇನ್ನೊಂದು ಅಧ್ಯಯನ. ಇಂತಹ ಔಷಽಯ ಗುಣಗಳ ಪಟ್ಟಿ ಇನ್ನೂ ಉದ್ದವಿದೆ.
ನುಗ್ಗೆಗಿಡವನ್ನು ನಮ್ಮ ದೇಶದಲ್ಲಿ ವ್ಯಾಪಕವಾಗಿ ಬೆಳೆಯಲು ಅನುಕೂಲವಾಗುವ ಒಂದು ಪ್ರಮುಖ ಪಾರಸರಿಕ ಅಂಶವಿದೆ. ನುಗ್ಗೆಯು ಅತಿ ಕಡಿಮೆ ನೀರಿನ ಪ್ರದೇಶದಲ್ಲಿ, ಒಣ ಪ್ರದೇಶಗಳಲ್ಲಿ ಸುಲಭವಾಗಿ ಎಳೆಯಬಲ್ಲದು. ಇದರ ಬೇರುಗಳು ನೆಲದಾಳಕ್ಕೆ ಹೋಗುವ ಗುಣ ಹೊಂದಿರುವುದರಿಂದ, ಕಡಿಮೆ ನೀರಿನಂಶ ಇರುವ ಪ್ರದೇಶಗಳಲ್ಲೂ ನುಗ್ಗೆ ಬೆಳೆಯಬಲ್ಲದು, ಸಾಕಷ್ಟು ಇಳುವರಿ ನೀಡಬಲ್ಲದು. ಇತರ ಹಲವು ಬೆಳೆಗಳಿಗೆ ಹೋಲಿಸಿದರೆ, ನುಗ್ಗೆಗೆ ಅತಿ ಕಡಿಮೆ ನೀರು ಸಾಕು.
ಕ್ಯೂಬಾದ ಅಧ್ಯಕ್ಷ ಕಾಸ್ಟ್ರೋ ನಮ್ಮ ದೇಶದಿಂದ 100 ಟನ್ ನುಗ್ಗೆ ಬೀಜ ತರಿಸಿಕೊಂಡು, ಕ್ಯೂಬಾ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ನುಗ್ಗೆ ಗಿಡ ಬೆಳೆಸಿ, ಅಲ್ಲಿನ ಬಡ ಜನರಿಗೆ ಅದನ್ನು ತಿನ್ನಿಸಿ, ಅವರ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರಲ್ಲಿ ನಮಗೆ ಒಂದು ಪಾಠವಿದೆ. ಮೂಲತಃ ನಮ್ಮ ನಾಡಿನ ನುಗ್ಗೆಗೆ ಸಸ್ಯಗಳಿಗೆ ನಾವು ಇನ್ನಷ್ಟು ಪ್ರಚಾರ ಕೊಡಬೇಕು. ಇದರ ಸೊಪ್ಪನ್ನು, ಬೀಜಗಳನ್ನು ಹೆಚ್ಚು ಹೆಚ್ಚು ಸೇವಿಸುವ ವಿಧಾನವನ್ನು ಪ್ರಚುರಗೊಳಿಸಬೇಕು. ಕೇವಲ ಮೇಲುಮಾತಿನ ಪ್ರಚಾರವಲ್ಲ, ಬದಲಿಗೆ ಜನಸಾಮಾನ್ಯರ ಆರೋಗ್ಯ ಉತ್ತಮ ಪಡಿಸುವ ಅಪೂರ್ವ ಸಸ್ಯವಿದು ಎಂದು ಒತ್ತಿ ಹೇಳಬೇಕು.
ನಮ್ಮ ದೇಶದಲ್ಲೂ ಇಂದಿಗೂ ಬಡತನವಿದೆ, ಜತೆಗೆ ನಗರೀಕರಣದ ಪ್ರಭಾವದಿಂದಾಗಿ ಹಳೆಯ ಉತ್ತಮ ವಸ್ತುಗಳ ಕುರಿತು ಅನಾದರ ವಿದೆ. ಜಂಕ್ ಫುಡ್, ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿದ ಆಹಾರವೇ ಶ್ರೇಷ್ಠ ಎಂಬ ಭ್ರಮೆ ಹೆಚ್ಚಿನವರನ್ನು ಆವರಿಸಿದೆ. ಥಳುಕಿನ ಆಹಾರ ಪದಾರ್ಥಗಳ ಮಧ್ಯೆ ನುಗ್ಗೆಯಂತಹ ಅಪೂರ್ವ ತರಕಾರಿ, ಸೊಪ್ಪಿನ ಪ್ರಾಮುಖ್ಯತೆ ಕಳೆದುಹೋಗುತ್ತಾ ಇದೆ. ದುಬಾರಿ ಆಹಾರ ಪದಾರ್ಥಗಳನ್ನು ಖರೀದಿಸಲು ಅವಕಾಶವಿಲ್ಲದವರು, ನುಗ್ಗೆಯನ್ನು ಚೆನ್ನಾಗಿ ತಿನ್ನಿ, ನುಗ್ಗೆ ಸೊಪ್ಪನ್ನು ಪುಡಿ ಮಾಡಿ ಪ್ರತಿದಿನ ಸೂಪ್
ಜತೆ, ತಿಳಿಸಾರಿನ ಜತೆ ಸೇವಿಸಿ ಎಂದು ಪ್ರಚಾರ ಮಾಡಬೇಕಾಗಿದೆ. ಕ್ಯೂಬಾ ದೇಶ ಮೆಚ್ಚಿದ ನುಗ್ಗೆಕಾಯಿ ನಮ್ಮ ಪ್ರೀತಿಯ ಆಹಾರವಾಗ ಬೇಕು, ಆಗ ದೇಶಕ್ಕೆ, ದೇಹಕ್ಕೆ ಶಕ್ತಿ ಕೂಡಿ ಬರುತ್ತದೆ.