Friday, 25th October 2024

ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದಲ್ಲ, ಏಕಾಗ್ರತೆಯದು

ತಿಳಿರು ತೋರಣ

srivathsajoshi@yahoo.com

ಕ್ರಿಕೆಟ್ ಆಟಗಾರರು ಚ್ಯೂಯಿಂಗ್ ಗಮ್ ಜಗಿಯುತ್ತಾ ಇರುವುದು, ಬಸ್/ಲಾರಿ ಚಾಲಕರು ಗುಟ್ಕಾವನ್ನೋ ಜರ್ದಾ ಪಾನ್‌ಅನ್ನೋ ಅಗಿಯುತ್ತಾ ಇರುವುದು ಯಾಕೆ ಗೊತ್ತೇ? ನಾಲಿಗೆಗೆ ಒಂದು ನಿರ್ದಿಷ್ಟ ಕೆಲಸವನ್ನು ವಹಿಸಿ, ಕೈಕರಣ ದಲ್ಲಿ ಅದು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಕಾನ್ಸಂಟ್ರೇಶನ್ ಹೆಚ್ಚಿಸುವುದಕ್ಕೆ! ನಮ್ಮ ಮೆದುಳು ಕಂಡು ಕೊಂಡಿರುವ ಭಲೇ ಉಪಾಯ ಅದು.

ಅವುಡುಗಚ್ಚುವುದು ಎನ್ನುತ್ತೇವೆ- ನೋವನ್ನೋ ದುಃಖವನ್ನೋ ಸಿಟ್ಟನ್ನೋ ಕಾತರತೆ ಯನ್ನೋ ಅಸಮಾಧಾನವನ್ನೋ ಅತ್ಯಂತ ತಾಳ್ಮೆಯಿಂದ ಸಹಿಸಿಕೊಳ್ಳುವುದಕ್ಕೆ. ಉದಾ ಹರಣೆಗೆ ‘ಕಣ್ಣೆವೆಯ ಹನಿಯಡಗಿಸಿ ಅವುಡುಗಚ್ಚಿ ನಾ ಮೌನವಾಗಿದ್ದೆ…’ ಎಂದು ಭಾವ ನಾತ್ಮಕ ಕವಿತೆಯಲ್ಲಿ ಬರೆಯಬಹುದು. ಅಥವಾ ‘ದ್ರೌಪದೀ ವಸ್ತ್ರಾಪಹರಣದಲ್ಲಿ ದುಶ್ಶಾಸನ ನನ್ನು ಸುಟ್ಟು ಬಿಡುವಂತೆ ಭೀಮನು ಅವುಡುಗಚ್ಚಿ ನೋಡಿದನು’ ಎಂದು ಪೌರಾಣಿಕ ಕಥಾನಕದಲ್ಲಿ ವಿವರಿಸಬಹುದು.

ಅಥವಾ, ‘ಈ ಸಲವಾದರೂ ಆರ್‌ಸಿಬಿ ಗೆಲ್ಲುವುದೇ ಕಪ್ ನಮ್ದೇ ಆಗುವುದೇ ಎಂದು ಅವುಡುಗಚ್ಚಿ ಮ್ಯಾಚ್ ನೋಡುತ್ತಿದ್ದೇನೆ’ ಅಂತ ಕನ್ನಡಿಗರ ಮನದಾಳದ ಆಸೆಯನ್ನು ಮಂಡಿಸಬಹುದು. ಮತ್ತೆ ಈ ನುಡಿಗಟ್ಟು ಕೇವಲ ಸಾಹಿತ್ಯಾಲಂಕಾರ ಮಾತ್ರವಲ್ಲ, ಅವುಡುಗಚ್ಚುವಾಗ ನಾವು ನಿಜವಾಗಿಯೂ ನಮಗರಿವಿಲ್ಲದಂತೆಯೇ ಕೆಳದುಟಿಯನ್ನು ಮೇಲಿನ ದಂತಪಂಕ್ತಿಯಿಂದ ಕಚ್ಚಿ ಹಿಡಿದಿರುತ್ತೇವೆ.

ನಿಘಂಟು ತೆರೆದು ನೋಡಿ: ಅವುಡು ಅಂದರೇನೇ ಕೆಳ ತುಟಿ ಅಥವಾ ದವಡೆ ಎಂದರ್ಥ. ಅದನ್ನು ಕಚ್ಚುವುದೇ ಅವುಡುಗಚ್ಚು ವುದು. ಒಂಥರದಲ್ಲಿ ಬಾಯ್ಮುಚ್ಚಿಕೊಂಡು ಇರುವುದು ಎನ್ನಬಹುದಾದರೂ ಅವುಡುಗಚ್ಚುವುದು ಎಂದು ಹೇಳಿದರೇನೇ ಸರಿಯಾದ ಚಿತ್ರಣ ಮೂಡುವುದು. ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಸನ್ನಿವೇಶದಲ್ಲಿ ಒಂದಲ್ಲ ಒಂದು ಕಾರಣದಿಂದ ಒಂದೊಮ್ಮೆ ಅವುಡುಗಚ್ಚಿ ಮುನ್ನಡೆವವರೇ.

ಇನ್ನು, ಅವುಡುಗಚ್ಚುವುದಕ್ಕೆ ವ್ಯತಿರಿಕ್ತವಾದ ಒಂದು ಕ್ರಿಯೆ ಇದೆ. ಇದೂ ಮುಖದಲ್ಲೇ ವ್ಯಕ್ತವಾಗುವುದು, ಆದರೆ ಇದರ ಹಿಂದೆ ನೋವಿಲ್ಲ ಸಿಟ್ಟಿಲ್ಲ ದುಃಖವಿಲ್ಲ ದುಮ್ಮಾನವಿಲ್ಲ. ಬದಲಿಗೆ, ಕೈಗಳಿಂದ ಮಾಡುತ್ತಿರುವ ಕೆಲಸದ ಮೇಲೆ ಸಂಪೂರ್ಣ ಏಕಾಗ್ರತೆ, ಅಂದರೆ ಕಾರ್ಯತತ್ಪರತೆ. ಹಾಗೆ ಮಾಡುವಾಗ ನಮಗರಿವಿಲ್ಲದಂತೆಯೇ ನಮ್ಮ ನಾಲಿಗೆ ಸ್ವಲ್ಪವಷ್ಟೇ ಹೊರ ಚಾಚಿಕೊಂಡಿರು ವುದು.

ಕೆಲವೊಮ್ಮೆ ಅದು ತುಸು ಎಡಕ್ಕೆ ಅಥವಾ ಬಲಕ್ಕೆ ವಾಲಿಕೊಂಡಿರುವುದು. ಇದನ್ನು ನೀವು ಕೆಲವರಲ್ಲಾದರೂ ಗಮನಿಸಿರ ಬಹುದು, ಅಥವಾ ನಿಮಗೇ ಆ ಅಭ್ಯಾಸವಿರಲೂಬಹುದು. ಅಮೆರಿಕದ ಅತಿ ಜನಪ್ರಿಯ ಕಾಮಿಕ್ ಸರಣಿ, ಚಾರ್ಲ್ಸ್ ಸ್ಕಲ್ಜ್‌ನ ‘ಪೀನಟ್ಸ್’ ನೀವು ನೋಡಿದ್ದೀರಾದರೆ ಅದರಲ್ಲೊಬ್ಬ ಚಾರ್ಲಿ ಬ್ರೌನ್ ಎಂಬ ಪುಟ್ಟ ಹುಡುಗ ಬೋಳುಮಂಡೆಯವ ಇರುತ್ತಾನೆ. ಅವನಿಗೆ ಆ ಅಭ್ಯಾಸವಿದೆ. ಅಭ್ಯಾಸ ಎನ್ನುವುದಕ್ಕಿಂತಲೂ ಅದನ್ನೊಂದು ಪರಾವರ್ತಿತ ಪ್ರತಿಕ್ರಿಯೆ ಎನ್ನೋಣ.

ಬೇಸ್‌ಬಾಲ್ ಆಟದಲ್ಲಿ ಬ್ಯಾಟ್ ಬೀಸುವಾಗಾಗಲೀ, ಮನೆಯಲ್ಲಿ ಕುಳಿತು ಏನನ್ನಾದರೂ ಬರೆಯುತ್ತಿರುವಾಗಾಗಲೀ ಚಾರ್ಲಿ ಬ್ರೌನ್‌ನ ನಾಲಿಗೆ ತುದಿಯು ಬಾಯಿಯಿಂದ ತುಸುವೇ ಹೊರಚಾಚಿದ್ದಿರುತ್ತದೆ. ಅವನು ಅಗ್ದೀ ಏಕಾಗ್ರತೆಯಿಂದ ಏನೋ ಮಾಡುತ್ತಿದ್ದಾನೆ ಎಂಬುದರ ಸಂಕೇತವದು. ಪೀನಟ್ಸ್ ಕಾಮಿಕ್‌ನಲ್ಲಿ ಚಾರ್ಲಿ ಬ್ರೌನ್‌ನನ್ನು ಥಟ್ಟನೆ ಗುರುತಿಸುವ ಸುಲಭ ರೀತಿಯೂ ಹೌದು.

ಈಗ ನೆನಪಿಸಿಕೊಂಡರೆ, ನನ್ನ ತಂದೆಯವರಿಗೆ ಈ ಅಭ್ಯಾಸವಿತ್ತೆಂದು ಗೊತ್ತಾಗುತ್ತದೆ. ಅವರು ಕೈಕರಣದ ಯಾವುದೇ ಕೆಲಸದಲ್ಲಿ ತಲ್ಲೀನರಾಗಿದ್ದಾಗ- ಅಂದರೆ ಮನೆಹಿತ್ತಲಿನಲ್ಲಿ ಕಳೆಗಿಡಗಳನ್ನು ಕೀಳುವುದು, ತೋಟದಲ್ಲಿ ಹುಲ್ಲು ತೆಗೆಯುವುದು, ಬೆತ್ತದ ಬುಟ್ಟಿ ಅಥವಾ ತೆಂಗಿನ ಮಡಲಿನ ಚಾಪೆ ಹೆಣೆಯುವುದು, ಒಣಗಿದ ಅಡಕೆ ಸುಲಿಯುವುದು ಇತ್ಯಾದಿಯಲ್ಲಿ ತೊಡಗಿಕೊಂಡಿದ್ದಾಗ- ಅವರಿಗರಿವಿಲ್ಲದಂತೆಯೇ ನಾಲಿಗೆ ಬಾಯಿಂದ ಸ್ವಲ್ಪವಷ್ಟೇ ಹೊರಚಾಚಿದ್ದಿರುತ್ತಿತ್ತು.

ತದೇಕಚಿತ್ತರಾಗಿ ಆ ಕೆಲಸವನ್ನು ಮಾಡುತ್ತಿದ್ದಾರೆನ್ನುವುದರ ಸೂಚಕವಾಗಿರುತ್ತಿತ್ತು. ಇದೇ ಅಭ್ಯಾಸ ಇಂಗ್ಲೆಂಡ್‌ನಲ್ಲಿರುವ ನನ್ನಣ್ಣನಿಗೂ ಇದೆ. ಕೈಬರಹದಿಂದ ಡೈರಿ ಯನ್ನೋ ಪತ್ರವನ್ನೋ ಬರೆಯುತ್ತಿರಬೇಕಾದರೆ ಬಾಯಿಂದ ಹೊರ ಚಾಚಿದ ನಾಲಿಗೆ ಯ ತುದಿ ಬರವಣಿಗೆಯ ಸಾಲಿನ ದಿಕ್ಕಿನಲ್ಲೇ ಎಡದಿಂದ ಬಲಕ್ಕೆ ನಿಧಾನಕ್ಕೆ ಹೊರಳುತ್ತಿರುತ್ತದೆ. ಪ್ರತಿ ಸಾಲಿನಲ್ಲಿ ಅಕ್ಷರಗಳು ಎಡದಿಂದ ಬಲಕ್ಕೆ ತುಂಬಿದಂತೆಲ್ಲ ನಾಲಿಗೆಯೂ ಎಡದಿಂದ ಬಲಕ್ಕೆ ಒಂದು ಆವರ್ತನ ಮುಗಿಸಿರುತ್ತದೆ!

ಕಾರ್ಯತತ್ಪರತೆಯ ಕುರುಹಾಗಿ ಹೀಗೆ ನಾಲಿಗೆ ಚಾಚುವುದು ಒಂದು ಸರ್ವೇಸಾಮಾನ್ಯ ಸಂಗತಿಯೇ. ಚಿಕ್ಕ ಮಕ್ಕಳಲ್ಲಂತೂ ಹೆಚ್ಚಾಗಿ ಕಂಡುಬರುತ್ತದೆ. ಮಗು ಆಟಿಗೆಯ ಬ್ಲಾಕ್‌ಗಳನ್ನು ಜೋಡಿಸುವಾಗ, ಬಿಗಿಯಾದ ಮುಚ್ಚಳವನ್ನು ಎರಡೂ ಕೈಗಳಿಂದ
ತೆಗೆಯುವ ಪ್ರಯತ್ನ ಮಾಡುವಾಗ ಅಥವಾ ಇನ್ನಾವುದೇ ತಲ್ಲೀನ ಚಟುವಟಿಕೆಯ ಸಂದರ್ಭದಲ್ಲೂ ಮಗುವಿನ ನಾಲಿಗೆ ಚಾಚಿ ಕೊಂಡಿದ್ದಿರುತ್ತದೆ. ಚಿಕ್ಕ ಮಕ್ಕಳಲ್ಲಿರುವಷ್ಟು ವ್ಯಾಪಕವಲ್ಲದಿದ್ದರೂ ವಯಸ್ಕರಲ್ಲೂ ಈ ಕ್ರಿಯೆ ಇರುತ್ತದೆ. ಕತ್ತರಿಯಿಂದ ಬಟ್ಟೆ ಕತ್ತರಿಸುತ್ತಿರುವ ದರ್ಜಿ, ಉಳಿಯಿಂದ ಕೆತ್ತನೆ ಮಾಡುತ್ತಿರುವ ಬಡಗಿ ಮುಂತಾದವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರೆಲ್ಲ ಬಹುತೇಕವಾಗಿ ನಾಲಿಗೆ ಹೊರಚಾಚಿರುವವರ ಗುಂಪಿಗೆ ಸೇರಿದವರೇ ಆಗಿರುತ್ತಾರೆ.

ಅಮೆರಿಕದ ಪ್ರಖ್ಯಾತ ಬಾಸ್ಕೆಟ್‌ಬಾಲ್ ಆಟಗಾರ (ಈಗ ನಿವೃತ್ತ) ಮೈಕೇಲ್ ಜಾರ್ಡನ್ ಆಟದಲ್ಲಿ ತನ್ಮಯನಾಗಿ ಬಾಸ್ಕೆಟ್‌ಗೆ ಚೆಂಡು ಹಾಕುವ ಕ್ಷಣದಲ್ಲಿ ಅವನ ನಾಲಿಗೆ ಹೊರಚಾಚಿದ್ದಿರುತ್ತಿತ್ತು. ಅಂದರೆ ಅದು ಆಟದಲ್ಲಿನ ಅವನ ಕಾನ್ಸಂಟ್ರೇಶನ್‌ನ ಪ್ರತೀಕವೇಂದೇ ಆಯ್ತು. ನಾನು ಗಮನಿಸಿರುವಂತೆ ಕರ್ನಾಟಕದ ಕಲಾಪ್ರತಿಭೆ ರಿದಂ ಪ್ಯಾಡ್ಸ್/ ಡ್ರಮ್ಸ್ ಕಲಾವಿದ ಬೆಂಗಳೂರಿನ ಅರುಣ್ ಕುಮಾರ್ ಡ್ರಮ್ಸ್ ಬಾರಿಸುವಾಗ ತಲ್ಲೀನತೆ ಹೆಚ್ಚಿದಂತೆಲ್ಲ ಅವರ ನಾಲಿಗೆಯ ತುದಿ ಹೊರಚಾಚಿದ್ದಿರುತ್ತದೆ! ಹೀಗೆ ಎಷ್ಟೋ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು.

ಆದರೆ ಒಂದು ಸೂಕ್ಷ್ಮ ಸಂಗತಿಯನ್ನೂ ನಾವಿಲ್ಲಿ ಗಮನಿಸಬೇಕು. ಯಾವುದೇ ವಿಚಾರ/ವಸ್ತು/ವ್ಯಕ್ತಿಯ ಬಗ್ಗೆ ತಾತ್ಸಾರ
ಭಾವದಿಂದ, ಅಸಹ್ಯ ಭಾವನೆ ವ್ಯಕ್ತಪಡಿಸುವಾಗಲೂ ಕೆಲವರು ನಾಲಿಗೆಯನ್ನು ಹೊರಚಾಚುವುದಿದೆ. ಅಲ್ಲಿ ಇಡೀ ನಾಲಿಗೆ ಯನ್ನು ಬಾಯಿಯಿಂದ ಹೊರ ಚಾಚುವುದಾಗುತ್ತದೆ ಮತ್ತು ಕ್ಷಣಿಕವಾಗಿ ಒಂದೆರಡು ಸೆಕೆಂಡುಗಳ ಅವಧಿಗೆ ಮಾತ್ರ
ಹೊರಗಿರುತ್ತದೆ.

ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್‌ನ ಪ್ರಖ್ಯಾತ ಭಾವಚಿತ್ರವೊಂದರಲ್ಲಿ ಆ ರೀತಿ ನಾಲಿಗೆ ಹೊರಚಾಚಿದ್ದಿದೆ. ಬಹುಶಃ ಅದು ರಾಜಕೀಯದ ಬಗ್ಗೆ, ರಾಜಕಾರಣಿಗಳ ಬಗ್ಗೆ ನಿಮ್ಮ ನಿಲುವು ಏನು ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಐನ್‌ಸ್ಟೈನ್ ಜುಗುಪ್ಸೆ ವ್ಯಕ್ತಪಡಿಸುತ್ತ ಉತ್ತರಿಸಿದ ರೀತಿ. ಇನ್ನೊಂದು, ಯಾವುದೋ ತಿಂಡಿಯ ಚಿತ್ರ ನೋಡಿದಾಗ ಅಥವಾ ಇಷ್ಟದ ತಿಂಡಿಯನ್ನು ನೆನಪಿಸಿಕೊಂಡಾಗ ನಾಲಿಗೆಯನ್ನೊಮ್ಮೆ ಎರಡೂ ತುಟಿಗಳಿಗೆ ಸವರಿಕೊಳ್ಳುವುದನ್ನೂ ನಾವೆಲ್ಲ ಮಾಡುತ್ತೇವೆ.

ಅದನ್ನು ಪ್ರತಿಬಿಂಬಿಸುವ ಇಮೋಜಿಗಳೂ ನಮ್ಮ ಸ್ಮಾರ್ಟ್‌ಫೋನ್ ಪರದೆಯಲ್ಲಿ ಕಾಣಿಸುತ್ತವೆ. ಅದೂ ಒಂಥರದ ನಾಲಿಗೆ ಹೊರಚಾಚುವಿಕೆಯೇ. ಆದರೆ ಇಲ್ಲಿ ಈವತ್ತಿನ ಲೇಖನದಲ್ಲಿ ವಿವರಿಸಹೊರಟಿರುವ ನಾಲಿಗೆಯ ಹೊರಚಾಚುವಿಕೆ ಆಥರದ್ದಲ್ಲ. ಇದು ಏಕಾಗ್ರತೆಗೆ ಸಂಬಂಧಪಟ್ಟದ್ದು. ಕುತೂಹಲದ ಪ್ರಶ್ನೆಯೇನೆಂದರೆ, ಕೈಕರಣದ ಕೆಲಸದಲ್ಲಿನ ಕಾನ್ಸಂಟ್ರೇಶನ್‌ಗೂ ನಾಲಿಗೆ ಹೊರಚಾಚಿಕೊಳ್ಳುವುದಕ್ಕೂ ಏನು ಸಂಬಂಧ? ಇದು ಎಲ್ಲರಲ್ಲೂ ಇಲ್ಲದೆ ಕೆಲವರಲ್ಲಿ ಮಾತ್ರ ಕಂಡುಬರುವುದಕ್ಕೆ ಏನು ಕಾರಣ? ಇದೊಂದು ದೈಹಿಕ ನ್ಯೂನತೆಯೇ? ಮಾನಸಿಕ ಕಾಯಿಲೆಯೇ? ಅಥವಾ ಆರೋಗ್ಯವಂತ ಸ್ಥಿತಿಯ ಒಳ್ಳೆಯ ಲಕ್ಷಣವೇ?
ಅಮೆರಿಕದ ನಾರ್ತ್‌ಕೆರೊಲಿನಾದಲ್ಲಿನ ವೈದ್ಯರಾದ ಡಾ.ಇವಾನ್ ಬಾಲರ್ಡ್ ಮತ್ತು ಡಾ. ವಿಲ್ಸನ್ ಗ್ರಿಫಿನ್‌ರ ಮಾರ್ಗದರ್ಶನದಲ್ಲಿ ನಾವೊಮ್ಮೆ ಮನುಷ್ಯನ ಮೆದುಳಿನ ‘ಗೈಡೆಡ್ ಟೂರ್’ ಮಾಡಿದರೆ ಈ ಪ್ರಶ್ನೆಗಳಿಗೆಲ್ಲ ಉತ್ತರ ಸಿಗುತ್ತದೆ.

ಮನುಷ್ಯನ ಮೆದುಳಿನಲ್ಲಿ ‘ಸೆರೆಬ್ರಲ್ ಕಾರ್ಟೆಕ್ಸ್’ ಎಂಬ ಒಂದು ಭಾಗವಿದೆ. ಸಂಕೀರ್ಣವಾದ ಕೆಲಸಗಳು ಮತ್ತು ಆಲೋಚನೆಗಳ
ಸಂಘಟನೆಯಾಗುವುದು ಅಲ್ಲಿಯೇ. ಕಾಲು, ಮಂಡಿ, ಸೊಂಟ, ಬೆನ್ನು, ಅಂಗೈ, ಕಿವಿ… ಹೀಗೆ ಮಾನವದೇಹದ ಪ್ರತಿಯೊಂದು
ಅಂಗಾಂಗಕ್ಕೆ ಸಂಬಂಧಿಸಿದಂತೆ ಸೆರೆಬ್ರಲ್ ಕಾರ್ಟೆಕ್ಸ್‌ನಲ್ಲಿ ನಿರ್ದಿಷ್ಟವಾದ ಮತ್ತು ಪ್ರತ್ಯೇಕವಾದ ವಿಭಾಗಗಳಿರುತ್ತವೆ. ಒಂದು
ರೀತಿಯಲ್ಲಿ ಅವು ಆಯಾ ಅಂಗಗಳ ಕಂಟ್ರೋಲ್ ಸೆಂಟರ್ ಇದ್ದಂತೆ, ಅಥವಾ ‘ಕೈ-ಕಮಾಂಡ್’ ಎಂದರೂ ಸಮಂಜಸವಾ
ದೀತು.

ಅದರ ಪೈಕಿ, ಕೈಗಳಿಗೆ ಸಂಬಂಽಸಿದ ನಿಯಂತ್ರಣ ಕೇಂದ್ರ ಮತ್ತು ನಾಲಿಗೆಗೆ ಸಂಬಂಧಿಸಿದ ನಿಯಂತ್ರಣ ಕೇಂದ್ರಗಳು ಸೆರೆಬ್ರಲ್ ಕಾರ್ಟೆಕ್ಸ್‌ನಲ್ಲಿ ಒಂದಕ್ಕೊಂದು ತಾಗಿಕೊಂಡು ಇವೆ. ಇದೇನೂ ಕಾಕತಾಳೀಯವಾಗಿ ಆಗಿರುವುದಲ್ಲ; ಅಥವಾ ಅಕ್ಕಪಕ್ಕದ ಬಿಡಿಎ ಸೈಟ್‌ಗಳನ್ನು ಲಂಚ ಕೊಟ್ಟು ಎಲಾಟ್‌ಮೆಂಟ್ ಮಾಡಿಸಿಕೊಂಡಂತೆಯೂ ಅಲ್ಲ. ಈ ಭಾಗಗಳು ಅಕ್ಕಪಕ್ಕದಲ್ಲಿರುವುದಕ್ಕೆ ಜೀವವಿಕಾಸದ ದೃಷ್ಟಿಯಿಂದ ಬಲವಾದ ಕಾರಣವಿದೆ.

ಡಾರ್ವಿನ್ ಪ್ರತಿಪಾದಿಸಿದ ಜೀವವಿಕಾಸದ ಕೈಮ್‌ಲೈನ್‌ನಲ್ಲಿ ಮನುಷ್ಯನಿಗೆ ಕೈಚಳಕ (ಕೈಗಳನ್ನು ಉಪಯೋಗಿಸಿ ಕೆಲಸ ಮಾಡುವ ಸಾಮರ್ಥ್ಯ) ಮತ್ತು ಮಾತನಾಡುವ ಸಾಮರ್ಥ್ಯಗಳು ಬಹುಮಟ್ಟಿಗೆ ಒಟ್ಟೊಟ್ಟಿಗೇ ಬೆಳವಣಿಗೆಯಾದವು. ಮಿಕ್ಕ ಪ್ರಾಣಿಗಳಿಗೂ ಮನುಷ್ಯನಿಗೂ ಸ್ಪಷ್ಟವಾದ ವ್ಯತ್ಯಾಸ ಅಥವಾ ಮುನ್ನಡೆ ಕಂಡುಬರುವುದೂ ಈ ಎರಡು ಚಟುವಟಿಕೆಗಳಲ್ಲೇ. ಆದ್ದರಿಂದಲೇ ಈ ಚಟುವಟಿಕೆಗಳ ಅಂಗಗಳನ್ನು (ಅನುಕ್ರಮವಾಗಿ ಕೈಗಳು ಮತ್ತು ನಾಲಿಗೆಯನ್ನು) ನಿಯಂತ್ರಿಸುವ ಕೇಂದ್ರಗಳು ಮನುಷ್ಯನ ಮೆದುಳಿನಲ್ಲಿ ರೂಪುಗೊಂಡದ್ದೂ ಸರಿಸುಮಾರಾಗಿ ಒಂದೇ ಕಾಲಘಟ್ಟದಲ್ಲಿ ಎನ್ನಬಹುದು. ಅವು ಅಕ್ಕಪಕ್ಕದಲ್ಲಿರುವುದು ಮತ್ತು ಜೊತೆಜೊತೆಯಾಗಿ ಬೆಳವಣಿಗೆ ಕಂಡಿರುವುದಾದ್ದರಿಂದ ಸಹಜವಾಗಿಯೇ ಅವುಗಳಿಂದ ಹೊರಡುವ ನರನಾಡಿಗಳ ಪೈಕಿ
ಕೆಲವೊಂದು ಕೆಲವೊಮ್ಮೆ ತಳುಕು ಹಾಕಿಕೊಳ್ಳುತ್ತವೆ.

ಪರಿಣಾಮವಾಗಿ, ಕೈಗಳಿಗೆಂದು ಕೊಡುವ ಆರ್ಡರ್ ನಾಲಿಗೆಗೂ, ನಾಲಿಗೆಗೆಂದು ಕೊಟ್ಟದ್ದು ಕೈಗಳಿಗೂ ತಪ್ಪಾಗಿ ತಲುಪುವುದಿದೆ. ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲಿ ಕೆಲವೊಮ್ಮೆ ರಾಂಗ್‌ನಂಬರ್‌ಗೆ ಕನೆಕ್ಟ್ ಆಗುತ್ತಿತ್ತಲ್ಲ, ಹಾಗೆ! ನಾಲಿಗೆ ಮತ್ತು ಕೈಗಳ ಚಟುವಟಿಕೆ ಗಳು ಪರಸ್ಪರ ಬೆಸೆದುಕೊಂಡಿರುವುದರಿಂದಲೇ, ಕೆಲವರು ಮಾತನಾಡುವಾಗ ಅಥವಾ ಭಾಷಣ ಮಾಡುವಾಗ ಕೈಗಳಿಂದ ವಿವಿಧ ಸಂಜ್ಞೆಗಳನ್ನು ಮಾಡುತ್ತಿರುತ್ತಾರೆ.

ದೂರವಾಣಿಯಲ್ಲಿ ಮಾತನಾಡುವಾಗ ಬಲಗೈಯಿಂದ ವಿನ್ಯಾಸಗಳನ್ನು ಮಾಡುತ್ತ ವಿವರಿಸುವವರು ಎಷ್ಟೋ ಜನ ಇದ್ದಾರೆ. ವೇದಿಕೆಯ ಮೇಲೆ ಮಾತನಾಡುವಾಗಂತೂ ಒಂದು ವಿಷಯವನ್ನು ಒತ್ತಿಹೇಳುವಾಗ ಮೇಜು ಗುದ್ದುವುದು, ರೋಷ ಉಕ್ಕುವ ಮಾತನಾಡುವಾಗ ಮುಷ್ಟಿಯನ್ನು ಗಾಳಿಯಲ್ಲಿ ಬಲವಾಗಿ ತೂರುವುದು ಇವೇ ಮೊದಲಾದ ಕರಚಳಕವನ್ನು ಪರಿಣಾಮ ಕಾರಿಯಾಗಿ ಮಾಡುವವರಿರುತ್ತಾರೆ. ಅವರಲ್ಲಿ ನಾಲಿಗೆ ಮತ್ತು ಕೈಗಳ ನಿಯಂತ್ರಣ ಕೇಂದ್ರಗಳು ಅಸಾಮಾನ್ಯ ಜುಗಲ್ ಬಂದಿ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮತ್ತೆ, ಟಿವಿಯಲ್ಲಿ ವಿಡಿಯೊ ಜಾಕಿಗಳು ಮಾತಾಡೋದಕ್ಕೂ ಅವರ ಕೈಕರಣಕ್ಕೂ ಏನೊಂದೂ ಸಂಬಂಧವಿರುವುದಿಲ್ಲ ಅದ್ಯಾಕೆ ಅಂತೀರಾ? ಅವರೆಲ್ಲ ‘ಅತಿ’ಮಾನವರು, ವಿಚಿತ್ರಜೀವಿಗಳು ಅವರ ಸಂಗತಿ ಬಿಟ್ಟುಬಿಡಿ. ಅಂದಹಾಗೆ ಪ್ರಪಂಚದ ಬೇರೆಬೇರೆ ಭಾಷೆಗಳ ಪೈಕಿ ಇಟಾಲಿಯನ್ ಭಾಷೆಯಲ್ಲಿ ಮಾತಿನ ಜೊತೆಗೇ ಕೈ ಸನ್ನೆಗಳ (ಹ್ಯಾಂಡ್ ಜೆಸ್ಚರ್ಸ್) ಬಳಕೆ ಸಂದರ್ಭಗಳು ಅತಿ ಹೆಚ್ಚು ಇರುವುದಂತೆ.

ಕೈಸನ್ನೆ ಇಲ್ಲದೆ ಮಾತಲ್ಲಷ್ಟೇ ಹೇಳಿದರೆ ಎದುರಿಗಿದ್ದವರಿಗೆ ಅರ್ಥವೇ ಆಗದೇನೋ ಎನ್ನುವಷ್ಟರ ಮಟ್ಟಿಗೆ ಇಟಾಲಿಯನ್ನರ
ಮಾತು-ಕೈಸನ್ನೆ ತಳುಕುಹಾಕಿಕೊಂಡಿರುತ್ತವಂತೆ. ನಾಲಿಗೆ ಮತ್ತು ಕೈಗಳ ನಿಯಂತ್ರಣ ಕೇಂದ್ರಗಳು ಅಕ್ಕಪಕ್ಕದಲ್ಲಿರುತ್ತವೆ ಯೆಂದೂ, ಅವೆರಡರ ಸಂಪರ್ಕ ಜಾಲದಲ್ಲಿ ಒಂಚೂರು ಓವರ್‌ಲ್ಯಾಪಿಂಗ್ ಇರುತ್ತದೆಯೆಂದೂ ತಿಳಿದುಕೊಂಡೆವಷ್ಟೆ. ಆದರೆ ಕಾರ್ಯ ತತ್ಪರತೆಯ ವೇಳೆಯಲ್ಲಿ ನಾಲಿಗೆ ಹೊರಚಾಚಿ ಕೊಂಡಿರುವುದು ಏಕೆ? ಇದರ ರಹಸ್ಯವೂ ಈಗ ಪತ್ತೆಯಾಗಿದೆ.

ಕೈಗಳಿಂದಾಗುತ್ತಿರುವ ಕೆಲಸದ ಮೇಲೆಯೇ ಸಂಪೂರ್ಣವಾದ ಮಗ್ನತೆ ಬರಬೇಕೆಂದು ಮೆದುಳಿನಲ್ಲಿನ ‘ಕೈ ನಿಯಂತ್ರಣ ಕೇಂದ್ರ’ವು ಪ್ರಧಾನ ನಿಯಂತ್ರಣ ಕಕ್ಷೆ (ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ)ಗೆ ಕೋರಿಕೆ ಸಲ್ಲಿಸುತ್ತದೆ. ಹೈಕಮಾಂಡ್‌ನ ಆeಯನ್ನು ಪಾಲಿಸಲೇಬೇಕಾಗಿ ಬರುವ ‘ನಾಲಿಗೆ ನಿಯಂತ್ರಣ ಕೇಂದ್ರ’ವು ನಾಲಿಗೆಯನ್ನು ತುಟಿಗಳ ಮಧ್ಯದಲ್ಲಿ ಕಟ್ಟಿ ಹಾಕಿದಂತೆ ಇಡುತ್ತದೆ. ಇದರಿಂದಾಗಿ ಮೆದುಳಿನಿಂದ ಹೊರಟ ಸಂಕೇತಗಳೆಲ್ಲ ಕೈಗಳನ್ನು ಮಾತ್ರ ತಲುಪುತ್ತವೆ, ಮಾಡುತ್ತಿರುವ ಕೆಲಸದಲ್ಲಿ ಅಸ್ಖಲಿತ ಅನೂಚಾನ ಏಕಾಗ್ರತೆ ದೊರಕಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಕಾನ್ಸಂಟ್ರೇಶನ್ ಅಥವಾ ಮನಸ್ಸಿನ ಕೇಂದ್ರೀ ಕರಣ ಎಂದರೆ ಅದೇ. ಕ್ರಿಕೆಟ್ ಆಟಗಾರರು ಚ್ಯೂಯಿಂಗ್ ಗಮ್ ಜಗಿಯುತ್ತಾ
ಇರುವುದು, ಬಸ್/ಲಾರಿ ಚಾಲಕರು ಗುಟ್ಕಾವನ್ನೋ ಜರ್ದಾಪಾನ್‌ಅನ್ನೋ ಅಗಿಯುತ್ತಾ ಇರುವುದು ಯಾಕೆ ಗೊತ್ತೇ? ನಾಲಿಗೆಗೆ ಒಂದು ನಿರ್ದಿಷ್ಟ ಕೆಲಸವನ್ನು ವಹಿಸಿ, ಕೈಕರಣದಲ್ಲಿ ಅದು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಕಾನ್ಸಂಟ್ರೇಶನ್ ಹೆಚ್ಚಿಸುವುದಕ್ಕೆ! ನಮ್ಮ ಮೆದುಳು ಕಂಡುಕೊಂಡಿರುವ ಭಲೇ ಉಪಾಯ ಅದು. ಅಂತೆಯೇ ಮಹಿಳಾಮಣಿಗಳು ತಮ್ಮ
ಸಹಜಸುಂದರ ಮುಖಾರವಿಂದಕ್ಕೆ ಮೇಕಪ್ ಮೆತ್ತಿಕೊಳ್ಳುವಾಗ, ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಳ್ಳುವಾಗ, ತಮಗರಿವಿಲ್ಲದಂತೆಯೇ
ಬಾಯ್ತೆರೆದುಕೊಳ್ಳುತ್ತಾರಲ್ಲ, ಅದೂ ಸಹ ನಾಲಿಗೆ ನಿಯಂತ್ರಣದ, ತನ್ಮೂಲಕ ಕಾನ್ಸಂಟ್ರೇಶನ್‌ನ ಒಂದು ವಿಧಾನ.

ಲಂಡನ್ ವಿಶ್ವವಿದ್ಯಾಲಯದ ಬರ್ಬೆಕ್ ಕಾಲೇಜ್‌ನಲ್ಲಿ ಮನಃ ಶಾಸ್ತ್ರಜ್ಞೆಯಾಗಿರುವ ಡಾ. ಗಿಲ್ಲಿಯನ್ ಫಾರೆಸ್ಟರ್ ೨೦೧೫ರಲ್ಲಿ ಈ
ಬಗ್ಗೆ ಸಂಶೋಧನೆ ನಡೆಸಿ ‘ಸ್ಲಿಪ್ ಆಫ್ ದ ಟಂಗ್: ಇಂಪ್ಲಿಕೇಷನ್ಸ್ ಫಾರ್ ಇವೊಲ್ಯುಷನ್ ಏಂಡ್ ಲಾಂಗ್ವೇಜ್ ಡೆವೆಲಪ್‌ಮೆಂಟ್’
ಎಂಬ ಪ್ರೌಢಪ್ರಬಂಧ ಮಂಡಿಸಿದ್ದಾರೆ. ಸಮೀಕ್ಷಾರ್ಥಿಗಳಿಗೆ ಕೈಕರಣದ ವಿವಿಧ ಚಟುವಟಿಕೆಗಳನ್ನು, ಕಥೆ ಕೇಳುವುದು ಸಂಗೀತ
ಕೇಳುವುದು ಮುಂತಾಗಿ ಕೈಗಳಿಗೆ ಕೆಲಸವಿಲ್ಲದ ಚಟುವಟಿಕೆಗಳನ್ನೂ, ನೀಡಿ ಯಾರಲ್ಲಿ ಯಾವಾಗ ಹೇಗೆ ನಾಲಿಗೆ ಹೊರಚಾಚಿ
ದ್ದಿರುತ್ತದೆಯೆಂದು ಅಧ್ಯಯನ ಮಾಡಿದ್ದಾರೆ.

ನಾಲಿಗೆಯ ನಿಯಂತ್ರಣ ಕೇಂದ್ರ ಮತ್ತು ಕೈಗಳ ನಿಯಂತ್ರಣ ಕೇಂದ್ರ ಒಂದರ ಪಕ್ಕ ಇನ್ನೊಂದು ಇರುವುದು ಮಾತ್ರವಲ್ಲ ಎಡ ಮಸ್ತಿಷ್ಕದಲ್ಲಿ ಇರುವುದು, ಕೈಕರಣದ ವೇಳೆ ಹೊರಚಾಚುವ ನಾಲಿಗೆ ಸಾಮಾನ್ಯವಾಗಿ ಬಲಕ್ಕೆ ವಾಲಿಕೊಂಡಿರುವುದಕ್ಕೆ ಕಾರಣವಿರಬಹುದೇನೋ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೊನೆಯದಾಗಿ, ಈ ಒಂದು ಅಂಶದ ಬಗ್ಗೆಯೂ ಯೋಚಿಸಿ: ಕಠಿಣ ದುಡಿಮೆ ಮಾತು ಕಡಿಮೆ ಎಂಬ ನಾಣ್ಣುಡಿ ಹುಟ್ಟಿದ್ದಾದರೂ
ಯಾಕಿರಬಹುದು ಅಂತೀರಿ? ಮೂರ‍್ನಾಲ್ಕು ಮಂದಿ ಕಾರಲ್ಲಿ ಒಟ್ಟಿಗೇ ಪ್ರಯಾಣ ಮಾಡುತ್ತಿರುವಾಗ, ಡ್ರೈವರನಾಗಿರುವವನೂ
ವಾಚಾಳಿಯಾಗಿ ಹರಟೆಯಲ್ಲಿ ಸೇರಿಕೊಂಡರೆ ಮಾತಿನ ಭರದಲ್ಲಿ ದಾರಿ ತಪ್ಪಿ ಹೋಗುವ, ಮತ್ತಷ್ಟು ಬಿಗಡಾಯಿಸಿದರೆ ಅಪಘಾತವೇ ಸಂಭವಿಸುವ ಪ್ರಸಂಗಗಳಾಗುವುದಿದೆ. ಆಗ ಅರಿವಾಗುತ್ತದೆ ನಾಲಿಗೆ ನಿಯಂತ್ರಣದ ಮಹತ್ವ. ಮಾತು ಕಡಿಮೆಯಾಗಬೇಕಾದರೆ ಬಾಯ್ಮುಚ್ಚಿಕೊಂಡು ಇರಬಹುದಾದರೂ ಜಿಹ್ವಾಚಾಪಲ್ಯ ಎಷ್ಟೆಂದರೂ ಇದ್ದೇ ಇರುತ್ತದಲ್ಲ, ಅದಕ್ಕಾಗಿ ನಾಲಿಗೆಯನ್ನು ಹೊರಚಾಚಿಟ್ಟು ಒಂದುರೀತಿಯಲ್ಲಿ ಕಟ್ಟಿಹಾಕಿಬಿಡುವುದು.

ಆಗ ಕಾನ್ಸಂಟ್ರೆಶನ್ನೂ ಸಿಗುತ್ತದೆ, ಕೆಲಸವೂ ಸುಗಮವಾಗಿ ಸಾಗುತ್ತದೆ. ಮೆದುಳಿನ ಬಗ್ಗೆ ಈ ರೀತಿಯ ಮಾಹಿತಿಗಳನ್ನೆಲ್ಲ ವಿವರಿಸುವ ಒಬ್ಬ ವೈದ್ಯರಿಗೇ ಕಾರ್ಯಮಗ್ನತೆಯ ವೇಳೆ ನಾಲಿಗೆ ಹೊರಚಾಚುವ ಅಭ್ಯಾಸವಿತ್ತಂತೆ. ಒಮ್ಮೆ ಯಾರೋ ಅವರನ್ನು ಕೇಳಿದರು: ‘ನೀವು ಮನಸ್ಸನ್ನು ಕೇಂದ್ರೀಕರಿಸಿ ಕೆಲಸ ಮಾಡುವಾಗೆಲ್ಲ ನಾಲಿಗೆ ಹೊರಚಾಚಿರುತ್ತೀರಲ್ಲ? ರೋಗಿಯ ತಪಾಸಣೆ ಮಾಡುವಾಗ ಅಥವಾ ಅದಕ್ಕಿಂತಲೂ ಹೆಚ್ಚಿನ ಕಾನ್ಸಂಟ್ರೇಶನ್ ಅಪೇಕ್ಷಿಸುವ ಆಪರೇಷನ್ ಥಿಯೇಟರ್‌ನ ಸನ್ನಿವೇಶದಲ್ಲಿ ಇದರಿಂದ ನಿಮಗಾಗಲೀ ನಿಮ್ಮ ರೋಗಿಗಳಿಗಾಗಲೀ ತೊಂದರೆಯಾಗುವುದಿಲ್ಲವೇ?’ ಎಂದು.

ಆಗ ಆ ವೈದ್ಯರು ನಾಲಿಗೆಯನ್ನು ಬಾಯಿಂದ ಹೊರಚಾಚದೆ ಗಲ್ಲದೊಳಕ್ಕೆ ತೂರಿ ‘ಮತ್ತೆ ನಾವೆಲ್ಲ ವೈದ್ಯರು ಆಪರೇಷನ್ ಮಾಡುವಾಗ ಬಾಯಿಗೆ ಮಾಸ್ಕ್ ಹಾಕಿಕೊಳ್ಳುವುದು ಇನ್ನೇತಕ್ಕೆ ಅಂದುಕೊಂಡ್ರಿ?’ ಎಂದು ನಕ್ಕರಂತೆ! ಹಾಗಾಗಿ, ಇನ್ನುಮೇಲೆ ಯಾರಾದರೂ ಕೆಲಸ ಮಾಡುತ್ತ ಇರುವಾಗ ಅವರ ನಾಲಿಗೆ ಹೊರಚಾಚಿದ್ದಿದ್ದರೆ ಅದು ಆಚಾರವಿಲ್ಲದ್ದೆಂದಾಗಲೀ, ಆಸೆಬುರುಕತನದ್ದೆಂದಾಗಲೀ, ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವಂಥದ್ದೆಂದಾಗಲೀ ಅಂದುಕೊಳ್ಳ ಬೇಡಿ; ಬದಲಿಗೆ ಆ ವ್ಯಕ್ತಿ ಕೆಲಸ ಮಾಡುವಾಗಿನ ತಲ್ಲೀನತೆ, ತಾದಾತ್ಮ್ಯ, ಏಕಾಗ್ರತೆ, ಕಾರ್ಯತತ್ಪರತೆಗಳನ್ನು ಮನಸಾರೆ ಮೆಚ್ಚಿಕೊಳ್ಳಿ!