Sunday, 15th December 2024

ಸೈಬರ‍್ ವಂಚಕರ ಮುಖ್ಯ ಕೇಂದ್ರ ಮೇವಾಡ್

ವೀಕೆಂಡ್ ವಿತ್ ಮೋಹನ್

camohanbn@gmail.com

ನೋಟುಗಳ ಅಮಾನ್ಯೀಕರಣದ ನಂತರ ಭಾರತದಲ್ಲಿ ದೊಡ್ಡ ಡಿಜಿಟಲ್ ಕ್ರಾಂತಿ ನಡೆಯಿತು. ಕಳೆದ ೭ ವರ್ಷಗಳಿಂದ ಬಿಲಿಯನ್‌ಗಟ್ಟಲೆ ವ್ಯವಹಾರ ಮೊಬೈಲ್ ಮೂಲಕವೇ ನಡೆಯುತ್ತಿದೆ. ವಿಶ್ವದಲ್ಲೇ ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ಭಾರತ, ಕುಗ್ರಾಮಗಳಿಗೂ ಅದನ್ನು ವಿಸ್ತರಿಸಿದ ಪರಿಣಾಮ ಜಗತ್ತನ್ನೇ ಮುಷ್ಟಿಯಲ್ಲಿ ಹಿಡಿದುಕೊಳ್ಳಬಹುದಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆ ಬಾಗಿಲಲ್ಲೇ ಸೇವೆ ನೀಡಲು ಬ್ಯಾಂಕುಗಳು ತುದಿಗಾಲಲ್ಲಿ ನಿಂತಿವೆ, ಜೇಬಿನಲ್ಲಿ ಹಣವಿಡುವ ಅಭ್ಯಾಸವೇ ಕಡಿಮೆಯಾಗಿದೆ. ಡೆಬಿಟ್ ಕಾರ್ಡುಗಳು ಜೇಬಿ ನಲ್ಲಿಟ್ಟುಕೊಳ್ಳುವುದಕ್ಕಷ್ಟೇ ಸೀಮಿತವಾಗಿವೆ. ಇಂಟರ್ನೆಟ್ ಸೇವೆ ವಿಸ್ತರಿಸುತ್ತಿದ್ದಂತೆ ಇಂಟರ್ನೆಟ್/ ಸಾಮಾಜಿಕ ಜಾಲತಾಣದ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಅಂತೆಯೇ, ಅವರನ್ನು ವಂಚಿಸಿ ಹಣ ಮಾಡುವವರೂ ಹುಟ್ಟಿಕೊಂಡಿದ್ದಾರೆ. ಬ್ಯಾಂಕ್ ದಾಖಲೆಗಳ ಪರಿಶೀಲ ನೆಯ ಹೆಸರಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರ ಹೆಸರಲ್ಲಿ ಹಣಕೀಳುವ ವಂಚನೆ, ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ ಸೆಕ್ಸ್ ಧೋಕಾ ಮಾತ್ರವಲ್ಲದೆ, ಸಾಲ ನೀಡುವ ನೆಪದಲ್ಲಿ, ಜೀವವಿಮೆ ಹೆಸರಲ್ಲಿ, ಹಳೆಗಾಡಿಗಳನ್ನು ಮಾರುವ ಹೆಸರಲ್ಲಿ ವಂಚನೆಗಳು ಹೆಚ್ಚುತ್ತಿವೆ.

ಆದರೆ, ಈ ಪೈಕಿ ಇಂಟರ್ನೆಟ್ ಮೂಲಕ ನಡೆಸುವ ವಂಚನೆಗಳ ಜಾಡು ಹಿಡಿಯುವುದು ಪೊಲೀಸರಿಗೆ ಕಷ್ಟದ ಕೆಲಸ. ಏಕೆಂದರೆ, ವಂಚನೆಯ ಮೂಲಕ ಗಳಿಸಿದ ಹಣವನ್ನು ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯ ಮೂಲಕ ಹಿಂಪಡೆದು ಖಾತೆಯನ್ನೇ ಮುಚ್ಚಿಬಿಡುತ್ತಾರೆ. ಸೈಬರ್ ವಂಚಕರು ತಮ್ಮೂರಿನ ಅಮಾಯಕರ ಹೆಸರಲ್ಲಿ ಖಾತೆ ತೆರೆದು, ಅದಕ್ಕೆ ಹಣ ವರ್ಗಾವಣೆಯಾಗುವಂತೆ ಮಾಡಿ, ಅವರಿಗೂ ಕಮಿಷನ್ ನೀಡಿ ವಂಚನೆಯನ್ನು ಮುಂದುವರಿಸುತ್ತಾರೆ. ನೈಜ ಸೈಬರ್ ಕ್ರೈಂ ಘಟನೆಗಳನ್ನು ಆಧರಿಸಿದ ‘ಜಮ್ತಾರ’ ಎಂಬ ವೆಬ್‌ಸರಣಿ ಅಮೆಜಾನ್ ಪ್ರೈಮ್‌ನಲ್ಲಿ ಜನಪ್ರಿಯ ವಾಗಿತ್ತು. ಊರೊಂದರ ಯುವಕರು ದೇಶಾದ್ಯಂತದ ಅಮಾಯಕರನ್ನು ವಂಚಿಸಿ ಹಣ ಲಪಟಾಯಿಸುವುದನ್ನು ಇದರಲ್ಲಿ ತೋರಿಸಲಾಗಿತ್ತು. ಇಂಥ ಬಹುತೇಕ ಸೈಬರ್ ಕ್ರೈಂ ಗಳ ಮುಖ್ಯ ಕೇಂದ್ರ ಮೇವಾಡ್ (ನೂಹ್ ಹೊಸಹೆಸರು).

ಇದು ಹರಿಯಾಣ ರಾಜ್ಯದ ಹಿಂದುಳಿದ ಜಿಲ್ಲೆ. ಸುಮಾರು ಶೇ. ೭೬ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಈ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಗಡಿರೇಖೆಗೆ ಹೊಂದಿಕೊಂಡಿರುವುದರಿಂದ ಇಲ್ಲಿ ನಡೆಯುವ ಸೈಬರ್ ವಂಚನೆಗಳ ಹಿಂದಿರುವವರನ್ನು ಹಿಡಿಯುವುದು ಕಷ್ಟದ ಕೆಲಸ. ವಂಚಕರು ಈ ನಾಲ್ಕೂ ರಾಜ್ಯಗಳಿಂದ ಕಾರ್ಯಾಚರಿಸುತ್ತಾರೆ, ಉತ್ತರ ಪ್ರದೇಶದ ಮಥುರಾ ಮತ್ತು ರಾಜಸ್ಥಾನದ ಆಲ್ವಾರ್ ನಗರಗಳನ್ನು ತಮ್ಮ ಸುರಕ್ಷಿತ ನೆಲೆಗಳಾಗಿ ಬಳಸುತ್ತಾರೆ. ಅಂತಾರಾಜ್ಯಗಳ ವಂಚಕರನ್ನು ಚೇಸ್ ಮಾಡಲು ಪೊಲೀಸರಿಗೆ ಪಕ್ಕದ ರಾಜ್ಯದ ಪೊಲೀಸರ ಅನುಮತಿ ಬೇಕಾಗುತ್ತದೆ, ಕಾನೂನಿ ನಲ್ಲಿರುವ ಇಂಥ ನ್ಯೂನತೆಗಳನ್ನು ಬಳಸಿಕೊಂಡು ವಂಚಕರು ತಪ್ಪಿಸಿ ಕೊಳ್ಳುತ್ತಾರೆ.

ಮಥುರಾದಲ್ಲಿರುವ ಕೆಲ ಜನರು ಇಂಥ ವಂಚಕರಿಗೆ ತಂತ್ರಜ್ಞಾನದ ನೆರವು ಒದಗಿಸಿದರೆ, ವಂಚನೆಗೆ ಬೇಕಿರುವ ನಕಲಿ ದಾಖಲೆಗಳು ಮತ್ತು ಸಿಮ್ ಕಾರ್ಡ್‌ ಗಳನ್ನು ಸಂಗ್ರಹಿಸುವ ಜಾಲವು ರಾಜಸ್ಥಾನದ ಭರತ್‌ಪುರದಲ್ಲಿದೆ. ಹರಿಯಾಣ ಪೊಲೀಸರ ತನಿಖೆಯ ವೇಳೆ ಹೊರಹೊಮ್ಮಿದ ೧೪೦ ವಂಚನೆ ಪ್ರಕರಣದ ಯುಪಿಐ ಖಾತೆಗಳ ಜತೆಗೆ, ಭರತ್ ಪುರದ ಬ್ಯಾಂಕುಗಳಲ್ಲಿ ನೋಂದಾಯಿಸಲಾದ ೨೧೯ ನಕಲಿ ಖಾತೆಗಳು ಪತ್ತೆಯಾಗಿದ್ದವು.

ಈ ವಂಚಕರು ‘-ಸ್‌ಬುಕ್ ಬಜಾರ್’ ಮತ್ತು ‘ಒಎಲ್ ಎಕ್ಸ್’ನಲ್ಲಿ ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಮೂಲಕ ಬೈಕು, ಕಾರು, ಮೊಬೈಲ್ ಫೋನ್ ಗಳಂಥ ಉತ್ಪನ್ನಗಳ ಮಾರಾಟದ ಮೇಲೆ ಆಕರ್ಷಕ ಆಫರ್ ಗಳ ಆಮಿಷವೊಡ್ಡಿ ಅಮಾಯಕರನ್ನು ವಂಚಿಸುತ್ತಾರೆ. ಇಲ್ಲಿ ಸಿಕ್ಕಿಬಿದ್ದ ಕೆಲ ವಂಚಕರು ನಟರಾಜ್ ಪೆನ್ಸಿಲ್‌ಗಳ ಪ್ಯಾಕಿಂಗ್‌ಗೆ ಸಂಬಂಧಿಸಿ ಮನೆಯಲ್ಲೇ ಮಾಡಬಹುದಾದ ಕೆಲಸಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು
ನೀಡಿ, ತಿಂಗಳಿಗೆ ೩೦,೦೦೦ ರು. ಗಳಿಸಬಹುದು ಎಂಬ ಭರವಸೆ ನೀಡುತ್ತಿದ್ದರು ಹಾಗೂ ನೋಂದಣಿ ಶುಲ್ಕ, ಪ್ಯಾಕಿಂಗ್ ಸಾಮಗ್ರಿ, ಕೊರಿಯರ್ ಶುಲ್ಕಗಳ ನೆಪದಲ್ಲಿ ಜನರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದರು.

ಮತ್ತೆ ಕೆಲವು ಸೈಬರ್ ಕ್ರಿಮಿನಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಹುಡುಗಿಯರ ಫೋಟೋ ಬಳಸಿ ಪ್ರೊಫೈಲ್ ರಚಿಸಿ ವಿಡಿಯೋ ಚಾಟ್‌ಗೆ ಬರುವಂತೆ ಜನರಿಗೆ ಆಮಿಷವೊಡ್ಡುತ್ತಿದ್ದರು ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಕೈಗೊಳ್ಳಲು ರಾಜಸ್ಥಾನದಲ್ಲಿರುವವರನ್ನು ಬಳಸುತ್ತಿದ್ದರು. ನಂತರ ಸಂತ್ರಸ್ತರನ್ನು ಬ್ಲ್ಯಾಕ್‌ಮೇಲ್ ಮಾಡಿ ದೊಡ್ಡಮೊತ್ತದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಹೀಗೆ ದೇಶದ ಪೊಲೀಸರಿಗೆ ತಲೆನೋವಾಗಿದ್ದ ನೂಹ್ ಪ್ರದೇಶದ ಸೈಬರ್ ವಂಚಕರ ಹೆಡೆಮುರಿ ಕಟ್ಟಲು ನಿರ್ಧರಿಸಿದ ಹರಿಯಾಣ ಪೊಲೀಸರು, ಕಳೆದ ಕೆಲ ತಿಂಗಳಲ್ಲಿ ಸುಮಾರು ೧೦೦ ಕೋಟಿ ರು. ಮೊತ್ತದ ಪ್ಯಾನ್-ಇಂಡಿಯಾ ವಂಚನೆಗಳನ್ನು ಪತ್ತೆಹಚ್ಚಿದ್ದಾರೆ. ಈ ದಾಳಿಯ ನಂತರ ದೇಶಾದ್ಯಂತ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಸುಮಾರು ೨೮,೦೦೦ ಪ್ರಕರಣಗಳು ಪತ್ತೆಯಾಗಿವೆ.

ದಾಳಿಯ ವೇಳೆ ೧೬೬ ನಕಲಿ ಆಧಾರ್ ಕಾರ್ಡ್, ೫ ಪ್ಯಾನ್‌ಕಾರ್ಡ್, ೧೨೮ ಎಟಿಎಂ ಕಾರ್ಡ್, ೬೬ ಮೊಬೈಲ್ ಫೋನ್, ೯೯ ಸಿಮ್, ೫ ಪಿಒಎಸ್ ಯಂತ್ರ ಮತ್ತು ೩ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೈಬರ್ ಅಪರಾಧಿಗಳು ಮುಖ್ಯವಾಗಿ ಸಾಮಾನ್ಯ ಸೇವಾಕೇಂದ್ರ ಮತ್ತು ಗ್ರಾಮಗಳಲ್ಲಿನ ಎಟಿಎಂಗಳನ್ನು ಬಳಸಿದ್ದಾರೆ. ೫೦೦೦ ಪೊಲೀಸರ ತಂಡವು ನೂಹ್‌ನ ೧೪ ಹಳ್ಳಿಗಳ ಮೇಲೆ ಏಪ್ರಿಲ್ ೨೭-೨೮ರ ಮಧ್ಯರಾತ್ರಿ ನಡೆಸಿದ ದಾಳಿಯಲ್ಲಿ ೧೨೫ ಶಂಕಿತ ಹ್ಯಾಕರ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ಅಂತಿಮವಾಗಿ ೬೬ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿತ್ತು.

ಈ ಸೈಬರ್ ವಂಚಕರ ವಿರುದ್ಧ ದೇಶಾದ್ಯಂತ ಈಗಾಗಲೇ ೧,೩೪೬ ಎಫ್ ಐಆರ್‌ಗಳು ದಾಖಲಾಗಿದ್ದು, ಹರಿಯಾಣ, ಪಶ್ಚಿಮ ಬಂಗಾಳ, ಅಸ್ಸಾಂ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಮಧ್ಯಪ್ರದೇಶ, ದೆಹಲಿ, ತಮಿಳುನಾಡು, ಪಂಜಾಬ್, ಈಶಾನ್ಯ ಭಾರತ, ಆಂಧ್ರಪ್ರದೇಶ ಮತ್ತು ಕರ್ನಾಟಕ ವಲಯಗಳ ಟೆಲಿಕಾಂ ಕಂಪನಿಗಳ ೩೪೭ ಸಿಮ್ ಕಾರ್ಡ್‌ಗಳನ್ನು ಇದುವರೆಗೂ ಪೊಲೀಸರು ಪತ್ತೆಹಚ್ಚಿದ್ದಾರೆ. ನಕಲಿ ಸಿಮ್ ಮತ್ತು ಬ್ಯಾಂಕ್ ಖಾತೆಗಳ ಮೂಲವು ಮುಖ್ಯ
ವಾಗಿ ರಾಜಸ್ಥಾನದ ಭರತ್‌ಪುರ ಜಿಲ್ಲೆಗೆ ಸಂಬಂಧಿಸಿರುವುದು ತನಿಖೆಯ ವೇಳೆ ಗೊತ್ತಾಗಿದೆ.

ನೂಹ್ ಜಿಲ್ಲೆಯಲ್ಲಿ ದಾಖಲಾದ ೧೬ ಪ್ರಕರಣಗಳಲ್ಲಿ ಬಂಧಿತರಾದವರ ಸಹ-ಆರೋಪಿಗಳಾಗಿ ೨೫೦ ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ರಾಜಸ್ಥಾನದ ೨೦, ಉತ್ತರ ಪ್ರದೇಶದ ೧೯ ಮತ್ತು ಹರಿಯಾಣದ ೨೧೧ ಮಂದಿ ವಂಚಕರಿದ್ದರು. ೧೮-೩೫ರ ಹರೆಯದ ಇವರೆಲ್ಲ ೩-೪ ಜನರ ಗುಂಪಿನಲ್ಲಿ ಕೆಲಸ ಮಾಡುತ್ತಾರೆ. ನಕಲಿ ಬ್ಯಾಂಕ್ ಖಾತೆ, ನಕಲಿ ಸಿಮ್ ಕಾರ್ಡ್, ಮೊಬೈಲ್ ಫೋನ್‌ಗಳು, ನಗದು ಹಿಂಪಡೆಯುವಿಕೆ/ವಿತರಣೆ, ಸಾಮಾಜಿಕ ಜಾಲತಾಣಗಳಲ್ಲಿ
ಜಾಹೀರಾತು ಪೋಸ್ಟ್ ಮಾಡುವ ಕೆಲಸವನ್ನು ವಂಚಕರ ಹಳ್ಳಿಯ ಕೆಲ ವ್ಯಕ್ತಿಗಳು ಕಮಿಷನ್ ಆಸೆಗಾಗಿ ಮಾಡಿದ್ದಾರೆ. ವಂಚನೆಯ ಮೊತ್ತದ ಶೇ.೫ರಿಂದ ಶೇ.೫೦ರವರೆಗೂ ಕಮಿಷನ್ ಪ್ರಮಾಣವಿರುತ್ತದೆ.

ನೂಹ್ ಜಿಲ್ಲೆಯಲ್ಲಿ ಇತ್ತೀಚೆಗೆ ಭಜರಂಗದಳದ ಕಾರ್ಯ ಕರ್ತರ ಮೆರವಣಿಗೆ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಇದು ವಿಕೋಪಕ್ಕೆ ತಿರುಗಿ ಇಡೀ ಪಟ್ಟಣವೇ ಪ್ರಕ್ಷುಬ್ಧ ಪರಿಸ್ಥಿತಿಗೆ ತಿರುಗಿತ್ತು. ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಾದ ಪುಂಡರ ಗಲಭೆಯ ಮಾದರಿಯಲ್ಲೇ ಈ ಪಟ್ಟಣದಲ್ಲಿ ಗಲಭೆಯಾಗಿ ನೂರಾರು ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು. ಕಳೆದ ಕೆಲ ತಿಂಗಳಲ್ಲಿ ಹರಿಯಾಣ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಜಿಲ್ಲೆಯಲ್ಲಿ ದೊಡ್ಡಮಟ್ಟದ ಸೈಬರ್ ವಂಚಕರನ್ನು ಬಂಽಸಲಾಗಿತ್ತು.

ಇವರಿಗೆ ನೆರವಾಗುತ್ತಿದ್ದ ದೊಡ್ಡ ಗುಂಪೊಂದು ಈ ಕೃತ್ಯ ನಡೆಸಿರ ಬಹುದೆಂಬ ಅನುಮಾನ ಪೊಲೀಸರನ್ನು ಕಾಡತೊಡಗಿದೆ. ಏಕೆಂದರೆ ಈ ಜಿಲ್ಲೆಯ ಬಹುತೇಕ ಯುವಕರು ಸೈಬರ್ ವಂಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಲಭೆಯಲ್ಲಿ ಬಂಧಿತರಾದವರು ಮಾಧ್ಯಮಗಳ ಮುಂದೆ ತಮ್ಮ ಹಳೆಯ ನಾಟಕ ಪ್ರದರ್ಶಿಸಿ ತಾವು ಅಮಾಯಕರೆಂಬ ಹೇಳಿಕೆ ನೀಡುತ್ತಿದ್ದಾರೆ. ಕೆಲ ಮಾಧ್ಯಮಗಳಂತೂ ‘ನೂಹ್‌ನಲ್ಲಿ ನಡೆಯುತ್ತಿದ್ದ ಸೈಬರ್ ವಂಚನೆ ಪ್ರಕರಣಗಳಿಗೆ ಅಲ್ಲಿನ ಜನರ ಬಡತನವೇ
ಮೂಲಕಾರಣ’ ಎಂದು ವರದಿ ಮಾಡಿದ್ದವು.

ಬಡತನದ ಹೆಸರಿನಲ್ಲಿ ವಂಚಿಸಿದರೆ ದೇಶದ ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿಗೆ ಹೋಗಬೇಡ? ಬಡತನದ ಹೆಸರಲ್ಲಿ ಇದೇ ವಂಚಕರು ಬಡಕಾರ್ಮಿಕ ನೊಬ್ಬನ ಹಣಕ್ಕೆ ವಂಚಿಸಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ನೂಹ್‌ನಲ್ಲಿದ್ದ ಒಂದು ‘ತತ್ಲು ಗ್ಯಾಂಗ್’ ಅಸಹಾಯಕ ಹಳ್ಳಿಗರನ್ನು ಗುರಿಯಾಗಿಸಿಕೊಂಡು
ಕಡಿಮೆ ದರದಲ್ಲಿ ಅಕ್ಕಿಯನ್ನು ಮಾರುತ್ತೇವೆಂಬ ವಂಚನೆಯ ಜಾಲವನ್ನು ಹೆಣೆದಿತ್ತು. ಅವರು ಅಕ್ಕಿ ಪಡೆಯಲು ನಿಗದಿತ ಸ್ಥಳವನ್ನು ತಲುಪುತ್ತಿದ್ದಂತೆ ದರೋಡೆ ಮಾಡಿ ಈ ಗ್ಯಾಂಗ್ ಪರಾರಿಯಾಗುತ್ತಿತ್ತು. ಈಗ ಇದೇ ರೀತಿಯ ಕಾರ್ಯಾಚರಣೆಯನ್ನು ಡಿಜಿಟಲ್ ಸ್ವರೂಪದಲ್ಲಿ ಕಾರ್ಯಗತ ಗೊಳಿಸಲಾಗುತ್ತಿದೆ ಎನ್ನಲಾಗಿದೆಯಾದರೂ, ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಉದ್ಯೋಗವಿಲ್ಲದ ಕಾರಣ ಸೈಬರ್ ವಂಚನೆ ಮಾಡುತ್ತಿರುವುದಾಗಿ ಹೇಳುವ ಜಿಲ್ಲೆಯ ಮೈಗಳ್ಳರು ಲಕ್ಷಗಟ್ಟಲೆ ಸಂಪಾದನೆಯಲ್ಲಿ ತೊಡಗಿದ್ದಾರೆ. ಇವರನ್ನು ಪಾರು
ಮಾಡಲು ಅಲ್ಲಿನ ಹಿರಿಯರು ಬೆಂಗಾವಲಿನಂತೆ ನಿಂತಿದ್ದು, ಅಡ್ಡದಾರಿ ಹಿಡಿದಿರುವ ತಮ್ಮೂರಿನ ಯುವಕರಿಗೆ ಬುದ್ಧಿ ಹೇಳುವ ಬದಲು ಕಮಿಷನ್ ಆಸೆಗಾಗಿ ತಾವೂ ವಂಚನೆಯ ಭಾಗವಾಗಿದ್ದಾರೆ. ಇಲ್ಲಿನವರು ತಮ್ಮೂರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಯ ಕುರಿತು ಹೊರಗಿನಿಂದ ಬಂದವರ ಬಳಿ ಕಿಂಚಿತ್ತೂ  ಹೇಳುವು ದಿಲ್ಲ. ಈ ವಂಚನೆ ನಡೆಸುವ ಯುವಕರಿಗೆ ನಾಯಕನೆಂಬುವವನಿಲ್ಲ, ಆ ಯುವಕರೇ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಈ ಕುಕೃತ್ಯದಲ್ಲಿ ವ್ಯಸ್ತರಾಗಿ ದ್ದಾರೆ. ಅದರಿಂದ ಬಂದ ಹಣದ ಮಾಲೀಕರೂ ತಾವೇ ಆಗುತ್ತಾರೆ.

ಹೀಗಾಗಿ ಒಬ್ಬೊಬ್ಬರನ್ನೇ ಹಿಡಿದು ಸಾಕ್ಷಿಸಮೇತ ನ್ಯಾಯಾಲಯದಲ್ಲಿ ಅವರ ವಂಚನೆಯನ್ನು ಸಾಬೀತುಪಡಿಸುವುದು ಪೊಲೀಸರಿಗೆ ಸುಲಭವಲ್ಲ. ಒಂದೇ
ನಕಲಿ ಆಧಾರ್ ಕಾರ್ಡ್ ಬಳಸಿ ೧೦ ಮೊಬೈಲ್ ನಂಬರ್ ಪಡೆದಿರುವ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಮೊಬೈಲ್ ಕರೆಗಳ ಸೇವಾದಾತ ಕಂಪನಿ ಗಳು ಪ್ರತಿಯೊಂದು ಅರ್ಜಿಯನ್ನೂ ಕೂಲಂಕಷವಾಗಿ ಪರಿಶೀಲಿಸಿದರೆ ವಂಚಕರು ಅಲ್ಲೇ ಸಿಕ್ಕಿಬೀಳುತ್ತಾರೆ. ಒಟ್ಟಿನಲ್ಲಿ, ದೇಶದ ವಿವಿಧ ರಾಜ್ಯಗಳ ಜನರಿಗೆ ವಂಚಿಸಿದ್ದ ನೂಹ್ ಜಿಲ್ಲೆಯ ಅಪಾಯಕಾರಿ ಸೈಬರ್ ವಂಚಕರ ಬೃಹತ್ ಜಾಲವನ್ನು ಭೇದಿಸುವಲ್ಲಿ ಪೊಲೀಸರು ದೊಡ್ಡಮಟ್ಟದಲ್ಲೇ ಯಶಸ್ವಿಯಾಗಿದ್ದಾರೆ ಎನ್ನಬಹುದು.