ಇದೇ ಅಂತರಂಗ ಸುದ್ದಿ
vbhat@me.com
ಸಣ್ಣ ಸಣ್ಣ ಪ್ರಯತ್ನದ ಮೂಲಕ ದೊಡ್ಡದನ್ನು ಸಾಧಿಸುವುದು ಸಾಧ್ಯ. ಒಂದು ದೊಡ್ಡ ಕೆಲಸವನ್ನು ಹಲವು ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ನಂತರ ಸಣ್ಣ ಸಣ್ಣ ತುಣುಕುಗಳನ್ನಾಗಿ ಮಾಡಿ, ಪ್ರತಿ ತುಣುಕಿನ ಮಹತ್ವವನ್ನು ದೊಡ್ಡದನ್ನಾಗಿ ಮಾಡಿ, ಕೊನೆಗೆ ಇಡಿಯಾದು ದನ್ನು ಮತ್ತಷ್ಟು ಬೃಹತ್ ಆಗಿ ಮಾಡುವುದು. ಪ್ರತಿ ತುಣುಕಿನಲ್ಲೂ ಶೇ.ಒಂದರಷ್ಟು ಪ್ರಯೋಜನ ಪಡೆಯುವುದು. ಪ್ರತಿ ಸುಧಾರಿತ ಭಾಗವನ್ನೂ ಬೆಸೆಯುವುದರ ಮೂಲಕ ಕೊನೆಯಲ್ಲಿ ಅಸಾಮಾನ್ಯ ಫಲಿತಾಂಶ ಪಡೆಯುವುದು.
ನಾನು ಒಲಿಂಪಿಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಲು ಏನು ಮಾಡಬೇಕು?’ ಹಾಗೆಂದು ಬ್ರಿಟನ್ನ ಖ್ಯಾತ ಸೈಕ್ಲಿಂಗ್ ಕೋಚ್ ಡೇವ್ ಬ್ರೈಲ್ಸ್ ಫೋರ್ಡ್ಗೆ ಸೈಕ್ಲಿಂಗ್ ಉಮೇದುವಾರ ನೊಬ್ಬ ಕೇಳಿದ. ಅದಕ್ಕೆ ಡೇವ್, ‘ನೀನು ಮೊದಲು ನಿನ್ನ ತಲೆದಿಂಬನ್ನು ಬದಲಿಸಬೇಕು’ ಎಂದು ಹೇಳಿದ. ಆ ಉತ್ತರ ಕೇಳಿ ಸೈಕಲ್ ಸವಾರನಿಗೆ ತಲೆ ಕೆಟ್ಟು ಹೋಯಿತು. ನಾನು ಗಂಭೀರವಾದ ಪ್ರಶ್ನೆ ಕೇಳಿದರೆ ಜಗದ್ವಿಖ್ಯಾತ ಸೈಕ್ಲಿಂಗ್ ಕೋಚ್ ಡೇವ್ ಈ ರೀತಿಯ
ಹಾರಿಕೆಯ ಮತ್ತು ಬೇಜವಾಬ್ದಾರಿ ಉತ್ತರ ನೀಡುವುದೇ ಎಂದು ಆತ ಬೇಸರಿಸಿಕೊಂಡ. ಆದರೂ ಅಷ್ಟಕ್ಕೇ ಬಿಡಬಾರದು ಎಂದುಕೊಂಡು, ‘ಡೇವ್, ಇದೆಂಥ ಉತ್ತರ? ಒಲಿಂಪಿಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಒಂದನೇ ಸ್ಥಾನ ಗಳಿಸುವುದು ಹೇಗೆ ಎಂದು ಕೇಳಿದರೆ ನಿಮ್ಮ ತಲೆದಿಂಬನ್ನು ಬದಲಿಸಿ ಅಂತೀರಲ್ಲ? ನಾನು ಕೇಳಿದ್ದೇನು, ನೀವು ಹೇಳಿದ್ದೇನು’ ಎಂದು ಏರಿದ ದನಿಯಲ್ಲಿ ಕೇಳಿದ.
ಅದಕ್ಕೆ ಡೇವ್, ‘ನೀವು ಈ ಪ್ರಶ್ನೆ ಕೇಳುತ್ತೀರಿ ಅಂತ ಗೊತ್ತಿತ್ತು. ಅದಕ್ಕೆ ಹಾಗೆ ಹೇಳಿದೆ. ಹಾಂ.. ಗೊತ್ತಿರಲಿ… ಸೈಕ್ಲಿಂಗ್ನಲ್ಲಿ ಪದಕ ಗಳಿಸುವುದಕ್ಕೂ, ತಲೆದಿಂಬಿಗೂ ನೇರ ಸಂಬಂಧವಿದೆ’ ಎಂದ. ಅದು ಹೇಗೆ ಎಂಬುದನ್ನು ನಂತರ ಹೇಳುತ್ತೇನೆ. ಅದು ೨೦೦೨. ಬ್ರಿಟನ್ ಸಣ್ಣ ದೇಶವಾದರೂ ಅದು ಕ್ರೀಡೆಗೆ ಕೊಡುವ ಮಹತ್ವ ಅಷ್ಟಿಷ್ಟಲ್ಲ. ಬ್ರಿಟನ್ನ ಕ್ರೀಡಾಪಟುಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲ ಕ್ರೀಡಾ ಪ್ರಕಾರಗಳಲ್ಲೂ ಪದಕಗಳನ್ನು ಗಳಿಸಿದ್ದಾರೆ. ಆದರೆ ಸೈಕ್ಲಿಂಗ್ನಲ್ಲಿ ಮಾತ್ರ ಬ್ರಿಟನ್ ಸಾಧನೆ ಶೂನ್ಯವಾಗಿತ್ತು. ಎಂಬತ್ತು ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಒಮ್ಮೆ ಮಾತ್ರ ಬ್ರಿಟನ್ ಸೈಕ್ಲಿಂಗ್ನಲ್ಲಿ ಪದಕ ಗಳಿಸಿತ್ತು.
ಎಲ್ಲ ಕ್ರೀಡೆಗಳಲ್ಲಿ ಪದಕ ಗಳಿಸಿದ ಬ್ರಿಟಿಷ್ ಕ್ರೀಡಾಪಟುಗಳಿಗೆ ಸೈಕ್ಲಿಂಗ್ನಲ್ಲಿ ಪದಕ ಗಳಿಸಲು ಯಾಕೆ ಕಷ್ಟವಾಗುತ್ತಿದೆ, ಪದಕ ಗಳಿಸಲು ಏನು ಮಾಡ ಬೇಕು ಎಂಬ ಬಗ್ಗೆ ಕ್ರೀಡಾ ಅಧಿಕಾರಿಗಳು ಯೋಚನೆಯಲ್ಲಿ ಮುಳುಗಿದರು. ಈ ನಿಟ್ಟಿನಲ್ಲಿ ಏನಾದರೂ ಸಾಧಿಸಲೇಬೇಕು, ಸೈಕ್ಲಿಂಗ್ನಲ್ಲಿ ಬ್ರಿಟನ್ ಒಲಿಂಪಿಕ್ಸ್ ಪದಕ ಗಿಟ್ಟಿಸಲೇಬೇಕು, ಅದಕ್ಕೆ ಯಾವ ಕಟ್ಟುನಿಟ್ಟಿನ ಕ್ರಮವಾದರೂ ಸರಿಯೇ, ಎಷ್ಟು ಖರ್ಚಾದರೂ ಸರಿಯೇ, ಅದನ್ನು ಈಡೇರಿಸಿಯೇ ಸಿದ್ಧ ಎಂಬ ತೀರ್ಮಾನವನ್ನು ಅವರು ತೆಗೆದುಕೊಂಡರು. ಅದಕ್ಕಾಗಿ ಅವರು ಜಗದ್ವಿಖ್ಯಾತ ಸೈಕ್ಲಿಂಗ್ ಕೋಚ್ ಡೇವ್ ಬ್ರೈಲ್ಸ್ ಫೋರ್ಡ್ ಸಹಾಯ ಪಡೆಯಲು ನಿರ್ಧರಿಸಿದರು.
ಡೇವ್ಗೆ ಅವರು ಹೇಳಿದ್ದು ಇಷ್ಟೇ- ‘ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ನಿಮಗೆ ಬೇಕಾದ ಎಲ್ಲ ಸವಲತ್ತು-ಸೌಕರ್ಯಗಳನ್ನು ಒದಗಿಸುತ್ತೇವೆ. Create
champions, Win golds. ಬ್ರಿಟನ್ ಒಲಿಂಪಿಕ್ಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪದಕ ಗಳಿಸುವಂತಾಗಬೇಕು’. ಡೇವ್ಗೂ, ಸೈಕಲ್ಗೂ ಅವಿನಾಭಾವ ಸಂಬಂಧ. ‘ಆತ ಸೈಕಲ್ ಮೇಲೆ ಹುಟ್ಟಿರಬಹುದು, ಕಾರಣ ಆತ ಸೈಕಲ್ ಮೇಲೆಯೇ ಜೀವಿಸುತ್ತಾನೆ’ ಎಂದು ಜನ ತಮಾಷೆಗೆ ಮಾತಾಡಿ ಕೊಳ್ಳುತ್ತಿದ್ದರು. ಆತನನ್ನು ಹತ್ತಿರದಿಂದ ಬಲ್ಲವರು, ಆತನನ್ನು Oneper-cent-man ಎಂದು ಕರೆಯುತ್ತಿದ್ದರು.
ಆತನ ಫಿಲಾಸಫಿ ಬಹಳ ಸರಳ. ಸಣ್ಣ ಸಣ್ಣ ಪ್ರಯತ್ನದ ಮೂಲಕ ದೊಡ್ಡದನ್ನು ಸಾಧಿಸುವುದು ಸಾಧ್ಯ. ಒಂದು ದೊಡ್ಡ ಕೆಲಸವನ್ನು ಹಲವು ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ನಂತರ ಸಣ್ಣ ಸಣ್ಣ ತುಣುಕುಗಳನ್ನಾಗಿ ಮಾಡಿ, ಪ್ರತಿ ತುಣುಕಿನ ಮಹತ್ವವನ್ನು ದೊಡ್ಡದನ್ನಾಗಿ ಮಾಡಿ, ಕೊನೆಗೆ ಇಡಿಯಾದುದನ್ನು ಮತ್ತಷ್ಟು ಬೃಹತ್ ಆಗಿ ಮಾಡುವುದು. ಪ್ರತಿ ತುಣುಕಿನಲ್ಲೂ ಶೇ. ಒಂದರಷ್ಟು ಪ್ರಯೋಜನ ಪಡೆಯುವುದು. ಪ್ರತಿ ಸುಧಾರಿತ
ಭಾಗವನ್ನೂ ಬೆಸೆಯುವುದರ ಮೂಲಕ ಕೊನೆಯಲ್ಲಿ ಅಸಾಮಾನ್ಯ ಫಲಿತಾಂಶ ಪಡೆಯುವುದು.
ಪ್ರತಿ ದಿನ ಪರ್ವತದಿಂದ ಪರ್ವತಕ್ಕೆ ಜಿಗಿಯಲು ಆಗಲಿಕ್ಕಿಲ್ಲ. ಆದರೆ ಪ್ರತಿದಿನ ಜಿಗಿತದಲ್ಲಿ ಶೇ. ಒಂದರಷ್ಟು ಸುಧಾರಣೆ ಸಾಽಸಿದರೆ, ನಿರ್ದಿಷ್ಟ ಕಾಲಾವಧಿ ಯಲ್ಲಿ ಪರ್ವತದಿಂದ ಪರ್ವತಕ್ಕೆ ಜಿಗಿಯುವುದು ಅಸಾಧ್ಯವೇನಲ್ಲ. ಇದನ್ನು ಸೈಕ್ಲಿಂಗ್ಗೂ ಅನ್ವಯಿಸಲು ಡೇವ್ ನಿರ್ಧರಿಸಿದ. ಹಾಗಾದರೆ ಆತ ಮಾಡಿ ದ್ದಾದರೂ ಏನು? ಆತ ಮೊದಲ ದಿನ ಸೈಕಲ್ ಸೀಟಿನ ಗುಣಮಟ್ಟ ಬದಲಿಸಿದ. ಎರಡನೇ ದಿನ ಅದರ ಆಂಗಲ್ ಬದಲಿಸಿದ. ಅಷ್ಟು ದಿನ ಸೈಕಲ್ ಸವಾರರು ಬಳಸುತ್ತಿದ್ದ ಜೆರ್ಸಿ ಬಿಸಾಡಿ ಹೊಸ ಉಡುಪು ನೀಡಿದ. ಸೈಕಲ್ ತುಳಿಯುವಾಗ ಮೈ-ಕೈಗಳಿಂದ ಕಿತ್ತು ಬರುತ್ತಿದ್ದ ಬೆವರಿನ ಧಾರೆಯನ್ನು ಇದು
ತಕ್ಷಣ ಸುಲಭವಾಗಿ ಹೀರಿಕೊಳ್ಳುತ್ತಿತ್ತು. ಒಂದು ವಾರದ ಬಳಿಕ, ಆತ ಸೈಕಲ್ ಚೈನ್ ಅನ್ನು ಬದಲಿಸಿದ.
ನಂತರ ಪೆಡಲ್ ಮೇಲೆ ತೆಳ್ಳನೆಯ ರಬ್ಬರ್ ಇಟ್ಟ. ಸೈಕಲ್ ಹ್ಯಾಂಡಲ್ ಹಿಡಿಕೆಗೆ ಮೆತ್ತನೆಯ ವಸ್ತುವನ್ನು ಅಳವಡಿಸಿದ. ಸೈಕಲ್ ಸವಾರರಿಗೆ ಇದು
ನಿರಾಯಾಸದ ಭಾವವನ್ನು ನೀಡಲಾರಂಭಿಸಿತು. ಸೈಕಲ್ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ವೈದ್ಯಕೀಯ ಲಾಭವನ್ನು ಮನದಟ್ಟು ಮಾಡಿ ಕೊಳ್ಳಲು ಕ್ರೀಡಾ ವೈದ್ಯರನ್ನು ನೇಮಿಸಿದ. ಸ್ಪರ್ಧೆಯ ದಿನ ಕಾಯಿಲೆ ಸೋಂಕು, ಬಳಲಿಕೆಯಿಂದ ಪಾರಾಗುವುದರ ಮಹತ್ವವನ್ನು ವೈದ್ಯರಿಂದ ಪಾಠ ಮಾಡಿಸಿದ.
ಸೈಕಲ್ ಸ್ಪರ್ಧೆಯ ದಿನ ಉತ್ತಮ ಸಾಧನೆ, ಹಿಂದಿನ ರಾತ್ರಿಯ ನಿದ್ದೆಯನ್ನು ಅವಲಂಬಿಸಿರುತ್ತದೆ. ಅದಕ್ಕಾಗಿ ಅತ್ಯುತ್ತಮ ತಲೆದಿಂಬುಗಳನ್ನು ತರಿಸಿದ. ಯಾವ ಭಂಗಿಯಲ್ಲಿ ನಿದ್ದೆ ಮಾಡಬೇಕು ಎಂದು ಹೇಳಿದ. ನಿದ್ದೆಗೂ, ತಲೆದಿಂಬಿಗೂ ಇರುವ ಸಂಬಂಧವನ್ನು ಮನವರಿಕೆ ಮಾಡಿಕೊಟ್ಟ. ‘ನೀವು ಇನ್ನು ಮುಂದೆ ನಿಮ್ಮೊಂದಿಗೆ ಈ ತಲೆದಿಂಬನ್ನೂ ತೆಗೆದುಕೊಂಡು ಹೋಗಬೇಕು, ನೀವೊಂದೇ ಅಲ್ಲ, ನಿಮ್ಮ ತಲೆದಿಂಬು ನಿಮ್ಮೊಂದಿಗೆ ಜಗತ್ತನ್ನು ಸುತ್ತಬೇಕು’ ಎಂದು ಹೇಳಿದ.
‘ದಿನಕ್ಕೆ ನೂರು ಕಿಮೀ ಸೈಕಲ್ ತುಳಿಯಬೇಕಿಲ್ಲ, ಒಂದು ಕಿಮೀ ದೂರ ತುಳಿದರೂ ಸಾಕು. ನಾಳೆ ನಿಮ್ಮ ಸಾಧನೆಯನ್ನು ನೀವೇ ಮುರಿಯಬೇಕು. ಹೀಗೆ ಮುರಿಯುತ್ತಾ ಮುರಿಯುತಾ ಕಟ್ಟಬೇಕು. ನಾನು Think big ಎಂದು ಹೇಳುವುದಿಲ್ಲ. ಆದರೆ Think smal ಎಂದು ಹೇಳುತ್ತೇನೆ. ಪರಿಪೂರ್ಣತೆ ಸಾಧಿಸ
ಬೇಡಿ, ಆದರೆ ಸುಧಾರಣೆ ಬಿಡಬೇಡಿ’ ಎಂದು ಹೇಳಿದ. ಅದನ್ನು ಅವರ ಯೋಚನೆಯ ಭಾಗವನ್ನಾಗಿ ಮಾಡಲು ಯಶಸ್ವಿಯಾದ.
ಇವೆಲ್ಲವುಗಳ ಪರಿಣಾಮ ಏನಾಯಿತು? ಆ ಶೇ.ಒಂದು ಸುಧಾರಣೆ ಸೂತ್ರ ಫಲಿಸಿತು. ೨೦೦೮ರಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಹತ್ತು ಬಂಗಾರದ ಪದಕಗಳ ಪೈಕಿ, ಬ್ರಿಟನ್ ಏಳು ಬಂಗಾರದ ಪದಕಗಳನ್ನು ಬಾಚಿಕೊಂಡಿತು. ಕೇವಲ ಆರು ವರ್ಷ ಗಳಲ್ಲಿ ಬ್ರಿಟನ್ ಸೈಕ್ಲಿಂಗ್ನಲ್ಲಿ ಯಾರೂ ಊಹಿಸದ ಸಾಧನೆ ಮಾಡಿತು. ಈಗ ಆರಂಭದಲ್ಲಿ ಡೇವ್, ಸೈಕಲ್ ಸವಾರ ಕೇಳಿದ ಪ್ರಶ್ನೆಗೆ ಹೇಳಿದ ಉತ್ತರವನ್ನು (ಸೈಕಲ್ ಸವಾರನ ಪ್ರಶ್ನೆ- ನಾನು ಒಲಿಂ ಪಿಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಲು ಏನು ಮಾಡಬೇಕು? ಡೇವ್ ಉತ್ತರ- ನೀನು ಮೊದಲು ನಿನ್ನ ತಲೆದಿಂಬನ್ನು ಬದಲಿಸಬೇಕು) ನೆನಪಿಸಿಕೊಳ್ಳಿ.
ಬ್ರಿಟನ್ಗೆ ಅನ್ವಯಿಸಿದ್ದು, ಯಾವ ದೇಶಕ್ಕಾದರೂ ಅನ್ವಯಿಸುತ್ತದೆ. ಯಾವ ದೇಶಕ್ಕೆ ಅನ್ವಯಿಸಿದ್ದು, ಯಾವ ಸಂಸ್ಥೆಗಾದರೂ ಅನ್ವಯಿಸುತ್ತದೆ. ಯಾವ ಸಂಸ್ಥೆಗೆ ಅನ್ವಯಿಸಿದ್ದು, ನಮಗೂ ಅನ್ವಯಿಸುತ್ತದೆ. ನಾವು ಯಾವತ್ತೂ ದೊಡ್ಡದಾಗಿ ಯೋಚಿಸಬೇಕಿಲ್ಲ ಅಥವಾ ಐನ್ಸ್ಟೈನ್ ಥರಾ ಯೋಚಿಸಬೇಕಿಲ್ಲ. ಸಾಮಾನ್ಯ ವ್ಯಕ್ತಿಯಂತೆ, ಸಣ್ಣದಾಗಿಯೇ ಯೋಚಿಸಿ ಅಸಾಧಾರಣ ಫಲಿತಾಂಶ ಪಡೆಯಬಹುದು. ದಿನದಲ್ಲಿ ಶೇ.ಒಂದರಷ್ಟು ಸುಧಾರಣೆ ಸಾಧಿಸಿದರೂ ಸಾಕು. ನಾವು ಬಿಗ್ ಐಡಿಯಾಕ್ಕಾಗಿ ಯೋಚಿಸುತ್ತೇವೆ.
ಮ್ಯಾಜಿಕ್ ಬುಲೆಟ್ಗಾಗಿ ಕನವರಿಸುತ್ತೇವೆ. ಅಸಲಿಗೆ ಮ್ಯಾಜಿಕ್ ಬುಲೆಟ್ ಎಂಬುದು ಇಲ್ಲವೇ ಇಲ್ಲ. ಶೇ.ಒಂದರಷ್ಟು ಸುಧಾರಣೆ ಮಾಡಬಲ್ಲ ಐವತ್ತು ಕೆಲಸಗಳನ್ನು ಮಾಡಿದರೂ ನಮ್ಮ ಸಾಧನೆ ಮುಗಿಲೆತ್ತರಕ್ಕೆ ಚಾಚಿರುತ್ತದೆ. ಇದನ್ನೇ ವಸ್ತುವಾಗಿಟ್ಟುಕೊಂಡು ಜೇಮ್ಸ್ ಕ್ಲಿಯರ್ ‘ಅಟಾಮಿಕ್ ಹ್ಯಾಬಿಟ್ಸ್’ ಎಂಬ ಕೃತಿ ಬರೆದ. ಹಿಂದಿನ ದಿನಕ್ಕಿಂತ ಈ ದಿನ ಮಾಡುವ ಕೆಲಸದಲ್ಲಿ ಶೇ.ಒಂದರಷ್ಟು ಸುಧಾರಿಸಿದರೆ, ಒಂದು ವರ್ಷದ ಕೊನೆಯಲ್ಲಿ ಮೊದಲ ದಿನಕ್ಕಿಂತ ಇಂದು ನಿಮ್ಮಲ್ಲಿ ಮೂವತ್ತೇಳು ಪಟ್ಟು ಸುಧಾರಣೆ ಆಗಿರುತ್ತದೆ. ಅಂದ ಹಾಗೆ, ಸೈಕ್ಲಿಂಗ್ ಸ್ಪರ್ಧೆಗೂ, ತಲೆದಿಂಬಿಗೂ ಇರುವ ಸಂಬಂಧವನ್ನು
ನನಗೆ ಹೇಳಿದವರು ಪ್ರಕಾಶ ಅಯ್ಯರ್.
ಸುಧಾರಣೆ ಆಗಬೇಕಾದುದು ಎಲ್ಲಿ?
ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ತನ್ನ ಕೋರ್ ಟೀಮಿನ ಸದಸ್ಯರ ಮೀಟಿಂಗ್ ಕರೆದನಂತೆ. ‘ಇಂದು ನಮಗೆ ಏನೋ ಕಾದಿದೆ’ ಎಂದು ತಂಡದ ಸದಸ್ಯರೆಲ್ಲ ಅಂದುಕೊಂಡರಂತೆ. ಆದರೆ ಕುಕ್ ಏನನ್ನೂ ಹೇಳುತ್ತಲೇ ಇಲ್ಲವಂತೆ. ತನ್ನ ತಂಡದ ಸದಸ್ಯರ ಜತೆ ಹರಟೆ ಹೊಡೆದು ಕಳಿಸಿಬಿಟ್ಟನಂತೆ.
ಇದೇ ರೀತಿ ಮೂರ್ನಾಲ್ಕು ಮೀಟಿಂಗುಗಳು ಆದ ಬಳಿಕ, ತಂಡದ ಸದಸ್ಯರೆಲ್ಲ ಹೊರ ಬಂದು, ‘ಬಾಸ್ (ಕುಕ್) ಏನನ್ನೋ ಹೇಳಲು ಬಯಸುತ್ತಿದ್ದಾರೆ. ಆದರೆ ಹೇಳಲು ಆಗುತ್ತಿಲ್ಲ. ಇದು ಬಹಳ ಮುಖ್ಯ ಸಂಗತಿ. ನಾವು ಈ ಕುರಿತು ಚರ್ಚಿಸೋಣ’ ಎಂದು ಆ ದಿನ ಆಫೀಸ್ ಅವಧಿ ನಂತರ ಹೋಟೆಲಿನಲ್ಲಿ ಸಭೆ ಸೇರಲು ನಿರ್ಧರಿಸಿದರಂತೆ.
‘ನೋಡಿ, ಮಹತ್ವದ ವಿಷಯ ಚರ್ಚಿಸಲು ಸಭೆ ಸೇರೋಣ ಎಂದು ಬಾಸ್ ನಮ್ಮನ್ನು ಕರೆಯುತ್ತಾರೆ. ಆದರೆ ಸಭೆಯಲ್ಲಿ ಏನನ್ನೂ ಹೇಳದೇ, ಬರೀ ಹರಟೆ ಹೊಡೆದು ಕಳಿಸುತ್ತಿದ್ದಾರೆ. ಕುಕ್ ತಲೆಯಲ್ಲಿ something is cooking up ಅಂತ ಅನಿಸುತ್ತಿದೆ’ ಎಂದು ಒಬ್ಬ ಹೇಳಿದನಂತೆ. ಅದಕ್ಕೆ ಮತ್ತೊಬ್ಬ, ‘ಇದರರ್ಥ ನಾವು ಹೊಸತಾಗಿ ಏನನ್ನೂ ಯೋಚಿಸುತ್ತಿಲ್ಲ. ನಮ್ಮ ಜತೆ ಮಹತ್ವದ ವಿಷಯ ಚರ್ಚಿಸಲು ಕುಕ್ಗೆ ಮನಸ್ಸಿಲ್ಲ. ಅದಕ್ಕಾಗಿ ನಮ್ಮ ಜತೆ ಕೆಲಸಕ್ಕೆ ಬಾರದ ವಿಷಯ ಗಳನ್ನು ಹೇಳಿ, ಸಾಗಹಾಕುತ್ತಿದ್ದಾರೆ’ ಎಂದು ಹೇಳಿದನಂತೆ.
‘ನಾವು ಆಪಲ್ ಪ್ರಾಡಕ್ಟ್ಗಳಲ್ಲಿ ಯಾವ ಸುಧಾರಣೆ ಮಾಡಿ ದ್ದೇವೆ? ವಾವ್ ಎನ್ನುವ ಯಾವ ಹೊಸ ಫೀಚರ್ ಕೂಡ ಐಫೋನಿನಲ್ಲಿ ಇಲ್ಲ. ಐಪೋನ್ ೧೪ ಮತ್ತು ೧೫ಕ್ಕೆ ಹೆಚ್ಚಿನ ವ್ಯತ್ಯಾಸ ಇಲ್ಲ. ನಾವು ಗ್ರಾಹಕರ ನಿರೀಕ್ಷೆ ಮಟ್ಟಕ್ಕೆ ಸಂವೇದಿಯಾಗಿ ಸ್ಪಂದಿಸುತ್ತಿಲ್ಲ. ಇದನ್ನು ಕುಕ್ ಈ ರೀತಿಯಾಗಿ, ವ್ಯಂಗ್ಯವಾಗಿ ನಮಗೆ ಹೇಳುತ್ತಿದ್ದಾರೆ’ ಎಂದು ಇನ್ನೊಬ್ಬ ವ್ಯಾಖ್ಯಾನ ಮಾಡಿದನಂತೆ. ‘ನಮ್ಮ ಜತೆ ಕುಕ್ ಕೆಲಸಕ್ಕೆ ಬಾರದ ವಿಷಯ ಪ್ರಸ್ತಾಪಿಸಿ, ನೀವು ಅದಕ್ಕೇ ಯೋಗ್ಯರು, ಅರ್ಹರು ಎಂಬ ಸಂದೇಶ ರವಾನಿಸುತ್ತಿದ್ದಿರಬಹುದಾ?’ ಎಂದು ಕೇಳಿದನಂತೆ. ‘ಕುಕ್ ಮಹಾ ಬುದ್ಧಿವಂತ. ನಮ್ಮ ಜತೆ ಮುಖ್ಯವಲ್ಲದ ವಿಷಯ ಚರ್ಚಿಸಿ, ನಮ್ಮ ಸ್ಥಾನ ಯಾವುದು ಎಂಬುದನ್ನು ಸೂಚ್ಯವಾಗಿ ತೋರಿಸುತ್ತಿರಬಹುದಾ?’ ಎಂದು ಮತ್ತೊಬ್ಬ ಪ್ರಶ್ನೆ ಇಟ್ಟನಂತೆ.
ಹೀಗೆ ಒಬ್ಬೊಬ್ಬರು ತಮಗೆ ತೋಚಿದ ರೀತಿಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾ ಹೋದರಂತೆ. ತನ್ನ ತಂಡದ ಪ್ರಮುಖ ಸದಸ್ಯರು ನಿನ್ನೆ ಸಭೆ ಸೇರಿದ್ದು ಮರುದಿನ ಅದ್ಹೇಗೋ ಕುಕ್ಗೆ ಗೊತ್ತಾಯಿತು. ಅವರನ್ನೆಲ್ಲ ಕರೆದು ಕುಕ್ ಹೇಳಿದನಂತೆ- ‘ಬರಲಿರುವ ಹೊಸ ಐಫೋನ್ನಲ್ಲಿ ಭಾರಿ, ಚಮತ್ಕಾರಿಕ ಸುಧಾರಣೆ ಆಗಬೇಕು ಎಂದು ನಾನು ಹೇಳುವುದಿಲ್ಲ. ಆದರೆ ಅಂಥದ್ದು ನಿಮ್ಮಲ್ಲಾಗಿದೆಯಲ್ಲ, ಅಷ್ಟು ಸಾಕು’. ಬಾಸ್ ಮತ್ತು ಪರ್ವತಾ ರೋಹಿ ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರು ಪ್ರತಿದಿನ ಆಫೀಸಿನಲ್ಲಿ ಏನು ಮಾಡುತ್ತಾರೆ? ಈ ಪ್ರಶ್ನೆ ಪ್ರತಿ ಸಂಸ್ಥೆಯಲ್ಲೂ ಕೆಲಸ ಮಾಡುವ ಕೆಳಹಂತದ ಎಲ್ಲರ ಮನಸ್ಸಿನಲ್ಲೂ ಹಾದು ಹೋಗುತ್ತದೆ. ಸಾಮಾನ್ಯವಾಗಿ ಎಲ್ಲರೂ, ‘ಬಾಸ್ ಅಂದ್ರೆ ಕೇಳಬೇಕೆ? ಆತನಿಗೆ ಪುರುಸೊತ್ತಿರುವುದಿಲ್ಲ. ಕೈತುಂಬಾ ಕೆಲಸ…ದಿನವಿಡೀ ಮೀಟಿಂಗ್…. ಹತ್ತಾರು ಗಣ್ಯರ ಭೇಟಿ.. ಮಹತ್ವದ ನಿರ್ಣಯ ಸ್ವೀಕಾರ.. ಆತನ ತಲೆ ಸದಾ ಕುದಿಯುವ ಬಾಂಡಲಿ’ ಎಂದು ಎಲ್ಲರೂ ಯೋಚಿಸುತ್ತಾರಂತೆ.
ಆದರೆ ನಿಜಕ್ಕೂ ಬಾಸ್ ಹಾಗೆ ಇರುತ್ತಾನಾ? ಈ ಪ್ರಶ್ನೆಯನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ಗೆ ಯಾರೋ ಕೇಳಿದರಂತೆ. ಅದಕ್ಕೆ ಬಿಲ್ ಗೇಟ್ಸ್ ಹೇಳಿದನಂತೆ- ‘ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿಗೆ ಎರಡು ದಿನ ಅಲ್ಲೇ ಇರು ಅಂದ್ರೆ ಆತ ಇರಲಾರ. ಎವರೆಸ್ಟ್ ತುದಿಯಲ್ಲಿ ನಿಂತು ಏನು ಮಾಡಿದೆ ಎಂದು ಕೇಳಿದರೆ ಹೇಳಲಾರ. ದೊಡ್ಡ ಕಂಪನಿ ಮುಖ್ಯಸ್ಥನೂ ತುತ್ತ ತುದಿಯಲ್ಲಿ ಒಬ್ಬನೇ ಕುಳಿತಿರುತ್ತಾನೆ. ಆತನಿಗೆ ನೀನು ಅಲ್ಲಿ ಒಬ್ಬನೇ ಏನು ಮಾಡುತ್ತೀಯಾ ಎಂದು ಕೇಳಿದರೆ, ಆತ ಏನು ಹೇಳಬಹುದು? ಆತನೂ ಒಂದು ರೀತಿಯಲ್ಲಿ ಪರ್ವತಾರೋಹಿಯೇ’.
ಬೆನ್ನಟ್ಟುವುದು-ಆಕರ್ಷಿಸುವುದು ಇದನ್ನು ಮೊದಲು ಯಾರು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಇದು ನನ್ನದೇ ಮಾತು ಎಂದು ಅನೇಕ ಸಲ ನನಗನಿ ಸಿದೆ. ಕಾರಣ ನಾನು ಈ ಮಾತನ್ನು ಅನೇಕ ಸಲ ಹೇಳಿದ್ದುಂಟು. ಆಮ್ಲಜನಕವನ್ನು ಕಂಡುಹಿಡಿಯುವ ಮೊದಲು ಅದು ಇರಲಿಲ್ಲ ಎಂದಲ್ಲ. ಅದನ್ನು ಕಂಡು ಹಿಡಿಯುವ ಮುನ್ನ ಜನ ಹೇಗೆ ಉಸಿರಾಡುತ್ತಿದ್ದಿರಬಹುದು ಎಂಬ ಪ್ರಶ್ನೆಯೂ ಮೂಡಬಹುದು.
ನೀವು ಪಾತರಗಿತ್ತಿಗಳನ್ನು ಬೆನ್ನಟ್ಟಿ ಹೋಗುವುದರಲ್ಲಿಯೇ ಸಮಯವನ್ನು ಕಳೆದರೆ, ಅವನ್ನು ಬೆನ್ನಟ್ಟುತ್ತಲೇ ಇರುತ್ತೀರಿ. ಅವುಗಳ ಹಿಂದೆ ಹಿಂದೆ ಹೋಗುತ್ತೀರಿ. ಅವು ಕೈಗೆ ಸಿಗದೇ ಹಾರಿ ಹೋಗುತ್ತಲೇ ಇರುತ್ತವೆ. ಆದರೆ ನೀವು ಸುಂದರವಾದ ಉದ್ಯಾನ ವನವನ್ನು ನಿರ್ಮಿಸಿದರೆ, ಎಲ್ಲ ಪಾತರಗಿತ್ತಿಗಳೂ
ಅಲ್ಲಿಗೇ ಆಗಮಿಸುತ್ತವೆ. ಒಂದು ಪಾತರಗಿತ್ತಿಯನ್ನು ಹಿಡಿಯುವ ಬದಲು, ಎಲ್ಲ ಪಾತರಗಿತ್ತಿಗಳೂ ನಿಮ್ಮ ಬಳಿ ಬರುವಂತೆ ಮಾಡುವುದು ಬುದ್ಧಿವಂತಿಕೆ.
ನೀವು ನಿಮ್ಮನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಿದರೆ, ನೀವು ಬಯಸಿದ್ದೆಲ್ಲವೂ ನಿಮ್ಮ ಕಡೆಗೇ ಬರುತ್ತವೆ.
ನಮಗೇನು ಬೇಕು ಎಂಬುದಕ್ಕಿಂತ, ನಾವು ಯಾರು ಎಂಬುದನ್ನು ಬೇರೆಯವರಿಗೆ ತೋರಿಸಿಕೊಟ್ಟರೆ ಬೇರೆಯವರು ನಮ್ಮ ಕಡೆ ಆಕರ್ಷಿತರಾಗುತ್ತಾರೆ. ಯಾವತ್ತೂ ನಾವು ಬೇರೆಯವರನ್ನು ಬೆನ್ನಟ್ಟಿ ಹೋಗಬಾರದು. ಬೇರೆಯವರನ್ನೇ ನಮ್ಮ ಕಡೆ ಬರುವಂತೆ ಆಕರ್ಷಿಸಬೇಕು.